ರೋಗಗ್ರಸ್ತ ಸಮಾಜ ಹಾಗೂ ಮನೋವಿಜ್ಞಾನ

Psycology 26 Jan 20
Published on
‘ಮನೋವಿಜ್ಞಾನ ಭವಿಷ್ಯದ ವಿಜ್ಞಾನವಾಗಿದೆ. ಕ್ಷಾಮ, ಭೂಕಂಪ, ಮಾರಕ ರೋಗಾಣುಗಳು ಹಾಗೂ ಕ್ಯಾನ್ಸರ್​ನಂತಹ ವ್ಯಾಧಿಗಳಿಗಿಂತಲೂ, ಮನುಷ್ಯ ಎದುರಿಸುತ್ತಿರುವ ದೊಡ್ಡ ಅಪಾಯವೆಂದರೆ, ಅವನು ಸಹಜೀವಿಗಳೊಂದಿಗೆ ಸಂತೋಷದಿಂದ ಸಹಬಾಳ್ವೆ ನಡೆಸುತ್ತಿದ್ದಾನೆಯೇ ಎಂಬುದು. ಮನೋರೋಗ ದೈಹಿಕ ರೋಗಗಳಿಗಿಂತಲೂ ದುಷ್ಪರಿಣಾಮ ಬೀರುತ್ತಿದೆ. ತಲೆಕೆಟ್ಟ ಮನುಷ್ಯನೊಬ್ಬ ಹೈಡ್ರೊಜನ್ ಬಾಂಬ್ ಸ್ಪೋಟಿಸಿಬಿಡಬಹುದಾದ ದಿನಗಳಲ್ಲಿ ನಾವು ಬದುಕುತ್ತಿದ್ದೇವೆ’. ಇದು ಪ್ರಖ್ಯಾತ ಮನೋವಿಜ್ಞಾನಿ ಕಾರ್ಲ್ ಯೂಂಗ್ (1875-1961) ಮನೋವಿಜ್ಞಾನದ ಮಹತ್ವವನ್ನು ಕುರಿತು ಆಡಿದ ಮಾತು. ಇದನ್ನು ಉಲ್ಲೇಖಿಸುತ್ತ ನಮ್ಮ ಪ್ರಗತಿಪರ ಚಿಂತಕ ಜಿ. ರಾಜಶೇಖರ್, ‘ಈಗ ನಮ್ಮ ಕಾಲದಲ್ಲಿ ತಲೆಕೆಟ್ಟ ಮನುಷ್ಯರು ಜಗತ್ತಿನ ಎಲ್ಲೆಡೆ ಅಧಿಕಾರ ಸ್ಥಾನಗಳನ್ನು ಹಿಡಿದುಕೊಂಡಿದ್ದಾರೆ. ಹೀಗಾಗಿ ಮನೋವಿಜ್ಞಾನ ಮನುಕುಲದ ಉಳಿವಿಗೆ ಅನಿವಾರ್ಯವಾಗಿದೆ’ ಎನ್ನುತ್ತಾರೆ. ಮನೋವಿಜ್ಞಾನದ ಮಹತ್ವ ಎಷ್ಟೆಂಬುದನ್ನು ಇದಕ್ಕಿಂತ ಸಮರ್ಪಕವಾಗಿ ವಿವರಿಸುವುದು ಕಷ್ಟ.

ಅಮೆರಿಕದ ಪ್ರಸಿದ್ಧ ಭೌತವಿಜ್ಞಾನಿ ಓಪನ್​ಹೀಮರ್(1904-1967) ‘ಜಗತ್ತಿನ ಅಳಿವು ಉಳಿವುಗಳನ್ನು ನಿರ್ಧರಿಸುವುದು ಭೌತವಿಜ್ಞಾನವಲ್ಲ, ಮನೋವಿಜ್ಞಾನ’ ಎಂದಿದ್ದಾನೆ. ಇದು ಔಪಚಾರಿಕ ಮಾತುಗಳಲ್ಲ ಎಂಬುದನ್ನು ಅನೇಕರು ಸಮರ್ಥಿಸಿದ್ದಾರೆ. ಹಾರ್ವರ್ಡ್ ವಿಶ್ವವಿದ್ಯಾಲಯದ ಸಮಾಜಶಾಸ್ತ್ರಜ್ಞ ಸೊರೊಕಿನ್(1889-1968) ‘ವಿಜ್ಞಾನ ನಮ್ಮ ಬದುಕಿಗೆ ಅನೇಕ ಸವಲತ್ತುಗಳನ್ನು ಕಲ್ಪಿಸುವುದರ ಮೂಲಕ ‘ಸುಂದರ’ವಾಗಿಸಿದೆ. ಆದರೆ ‘ನೆಮ್ಮದಿ’ ದೊರಕಿಸುವಲ್ಲಿ ಸೋತಿದೆ’ ಎಂದಿದ್ದಾನೆ. ಪ್ರಖ್ಯಾತ ಮನೋವಿಜ್ಞಾನಿ ಎರಿಕ್ ಫ್ರಾಮ್ (1900-1980) ‘ಇಂದು ನಾವು ಒಂದು ರೋಗಿಷ್ಟ ಸಮಾಜದಲ್ಲಿ ಬದುಕುತ್ತಿದ್ದೇವೆ. ನೈತಿಕ ಅನಾಯಕ ಸ್ಥಿತಿಯನ್ನು ಅನುಭವಿಸುತ್ತಿದ್ದೇವೆ; ಚುಕ್ಕಾಣಿಯಿಲ್ಲದ ನಾವೆಯಲ್ಲಿ ಚಲಿಸುತ್ತಿದ್ದೇವೆ. ಅಧಿಕವಾಗಿ ಉತ್ಪಾದಿಸುವುದು, ಮೇರೆ ಮೀರಿ ಅನುಭವಿಸುವುದು ಇವುಗಳಲ್ಲಿಯೇ ನಿರತರಾಗಿದ್ದೇವೆ. ಭೋಗಸಂಸ್ಕೃತಿಯಲ್ಲಿ ಮುಳುಗಿ ಹೋಗಿರುವ ನಾವು ಅದರಿಂದ ಹೊರಬರುವ ಬಗ್ಗೆ ಯೋಚಿಸಬೇಕಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯಕರ ಸಮಾಜ ನಿರ್ವಣದಲ್ಲಿ ಮನೋವಿಜ್ಞಾನದ ಪಾತ್ರ ಅತ್ಯಂತ ಮಹತ್ವದ್ದು’ ಎನ್ನುತ್ತಾನೆ.

ಆದರೆ ಸರ್ಕಾರವಾಗಲೀ, ವಿಶ್ವವಿದ್ಯಾಲಯಗಳಾಗಲೀ, ಸಾರ್ವಜನಿಕ ಸಂಘ ಸಂಸ್ಥೆಗಳಾಗಲೀ ಈ ಬಗ್ಗೆ ಗಂಭೀರವಾಗಿ ಚಿಂತಿಸಿದಂತಿಲ್ಲ. ಇಂದು ನಮ್ಮ ಆಸಕ್ತಿಯೆಲ್ಲ ವಾಣಿಜ್ಯ ಹಾಗೂ ತಂತ್ರಜ್ಞಾನದ ಕಡೆಗೆ. ಮಾನವಿಕ ವಿಜ್ಞಾನವನ್ನು ನಾವು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದೇವೆ. ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ನಿಧನಿಧಾನವಾಗಿ ಮಾನವಿಕ ವಿಭಾಗಗಳನ್ನು ಮುಚ್ಚಲಾಗುತ್ತಿದೆ. ಇದರ ಪರಿಣಾಮ ನೈತಿಕ ನೆಲೆಗಟ್ಟಿಲ್ಲದ ರೋಗಗ್ರಸ್ತ ಭೋಗ ಸಂಸ್ಕೃತಿಯ ಸಮಾಜದ ಸೃಷ್ಟಿ. ಆಧುನಿಕ ಮನೋವಿಜ್ಞಾನ ಈ ದಿಸೆಯಲ್ಲಿ ಸಾಕಷ್ಟು ಅಧ್ಯಯನ ನಡೆಸಿದೆ. ಮನುಷ್ಯ ತನ್ನ ವೈಯಕ್ತಿಕ ಹಾಗೂ ಸಾಮಾಜಿಕ ಜೀವನವನ್ನು ಸಹನೀಯಗೊಳಿಸಿಕೊಳ್ಳಬಹುದಾದ ಅನೇಕ ಮಾಗೋಪಾಯಗಳನ್ನು ಸೂಚಿಸಿದೆ. ಇದನ್ನು ಕೇಳಿಸಿಕೊಳ್ಳುವ ವ್ಯವಧಾನವೂ ಆಧುನಿಕ ಸಮಾಜಕ್ಕಿಲ್ಲದಂತಾಗಿರುವುದು ದುರಂತ.

ಈ ಎಲ್ಲ ಚಿಂತನೆ ನನ್ನ ಮನಸ್ಸಿನಲ್ಲಿ ಮೂಡಿದ್ದು ಇತ್ತೀಚೆಗೆ ‘ವಿ ಕೃ ಗೋಕಾಕ್ ಪ್ರಶಸ್ತಿ’ ಪಡೆದ ಮನೋವಿಜ್ಞಾನಿ ಎಂ ಬಸವಣ್ಣನವರ ವಿಚಾರಧಾರೆಗಳನ್ನು ಗಮನಿಸಿದಾಗ. ಮನೋವಿಜ್ಞಾನ ಕುರಿತ ಸಾಹಿತ್ಯ ಜಗತ್ತಿನಲ್ಲಿ ಇಂದು ವಿಪುಲವಾಗಿ ಬೆಳೆದಿದೆ. ಆದರೆ ಅದೇ ಮಟ್ಟದಲ್ಲಿ ಭಾರತೀಯ ಭಾಷೆಗಳಲ್ಲಿ ಈ ಬೆಳವಣಿಗೆಯಾಗಿಲ್ಲ. ಕನ್ನಡದಲ್ಲಂತೂ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ನಮ್ಮ ಕಲಿಕೆಯಲ್ಲಿನ ದೋಷವೆಂದರೆ ಅಧ್ಯಯನಕ್ಕೆ ಬೇಕಾದ ಪಠ್ಯ ಸಾಮಗ್ರಿ ನಮ್ಮ ಭಾಷೆಯಲ್ಲಿಯೇ ದೊರಕದಿರುವುದು. ಇಂದು ನಾವು ಮನೋವಿಜ್ಞಾನದ ಹೆಸರಿನಲ್ಲಿ ಕಲಿಯುತ್ತಿರುವುದೆಲ್ಲ ಅನ್ಯ ಭಾಷೆಯಲ್ಲಿ ಪಾಶ್ಚಿಮಾತ್ಯ ಪರಿಕಲ್ಪನೆಗಳನ್ನೇ! ಮೈಸೂರು ವಿಶ್ವವಿದ್ಯಾಲಯ ಒಂದು ಕಾಲದಲ್ಲಿ ಈ ಬಗ್ಗೆ ಚಿಂತಿಸಿ ಕಾರ್ಯೋನ್ಮುಖವಾಗಿತ್ತು. ಅದು ಹಳೆಯ ಕತೆ. ಕನ್ನಡ ವಿಶ್ವವಿದ್ಯಾಲಯವೂ ಆರಂಭದಲ್ಲಿ ಈ ಬಗ್ಗೆ ಕನಸು ಕಂಡಿತ್ತು. ಆದರೆ ಈಗ ನಮ್ಮ ಶೈಕ್ಷಣಿಕ ವ್ಯವಸ್ಥೆಯೇ ವಾಣಿಜ್ಯೀಕರಣಗೊಂಡಿರುವುದರಿಂದ ಮಾನವಾಭಿವೃದ್ಧಿಯ ‘ಸಮಗ್ರ ಕಲ್ಪನೆ’ ಕನಸಿನ ಮಾತೇ ಆಗಿದೆ.

ಎಂ ಬಸವಣ್ಣ ತಮ್ಮ ಪುಸ್ತಕದ ಅರಿಕೆಯೊಂದರಲ್ಲಿ ಹೇಳುತ್ತಾರೆ: ‘ಬಹಳ ಕಾಲದಿಂದಲೂ ನನ್ನನ್ನು ಒಂದು ಅಪರಾಧ ಪ್ರಜ್ಞೆ ಕಾಡುತ್ತಿತ್ತು. 35 ವರ್ಷಗಳ ಕಾಲ ಹೊರನಾಡಿನಲ್ಲಿ ಕಾರ್ಯನಿರತನಾಗಿದ್ದ ಕಾರಣ ನಾನು, ನನ್ನನ್ನು ಹೆತ್ತು ಹೊತ್ತು ಬೆಳೆಸಿದ ಕನ್ನಡ ನಾಡು ನುಡಿಗೆ ಏನೂ ಮಾಡಲಿಲ್ಲವೆಂದು. ಕಳೆದ ದಶಕದಲ್ಲಿ ಮನೋವಿಜ್ಞಾನದ ಬಗ್ಗೆ ಬರೆದ ಐದಾರು ಪುಸ್ತಕಗಳು ಕನ್ನಡ ತಾಯಿಗೆ ನೀಡಿದ ಕಿರು ಕಾಣಿಕೆ ಎನ್ನುವ ಭಾವನೆಯುಂಟಾಗಿ ಕೊಂಚ ಸಮಾಧಾನವಾಗಿದೆ’. ಇದು ಮೇಲ್ನೋಟಕ್ಕೆ ಭಾವನಾತ್ಮಕವಾಗಿ ತೋರಿದರೂ ಬೇರೆ ಬೇರೆ ಕ್ಷೇತ್ರದ ಪರಿಣತರು ಗಂಭೀರವಾಗಿ ಚಿಂತಿಸಬೇಕಾದ ಸಂಗತಿ ಅನ್ನಿಸುತ್ತದೆ. ನಮ್ಮಲ್ಲಿ ಪ್ರತಿಭಾವಂತರಿಗೇನೂ ಕೊರತೆಯಿಲ್ಲ; ಆದರೆ ಅವರೆಲ್ಲರೂ ಪರಿಣತಿಯನ್ನು ಇಂಗ್ಲಿಷಿನಲ್ಲಿ ಪ್ರಕಟಿಸುತ್ತಾರೆ. ಇಂಗ್ಲಿಷಿನಲ್ಲಿ ಪಡೆದ ಶಿಕ್ಷಣವೂ ಅದಕ್ಕೆ ಕಾರಣವಿರಬಹುದು. ಆದರೆ ಅವರೆಲ್ಲರೂ ಕನ್ನಡದಲ್ಲಿ ಅಥವಾ ತಮ್ಮ ದೇಶಭಾಷೆಗಳಲ್ಲಿ ಬರೆದರೆ ಅವರ ಜ್ಞಾನಸಂಪತ್ತು ಹೆಚ್ಚು ಜನರಿಗೆ ತಲುಪುತ್ತದೆ. ಇದು ಅವರು ತಮ್ಮ ಸಮುದಾಯಗಳಿಗೆ ಸಲ್ಲಿಸಬಹುದಾದ ಋಣಸಂದಾಯವೂ ಹೌದು. ಬಸವಣ್ಣನವರಿಗೆ ಕಾಡಿದ ‘ಪಾಪಪ್ರಜ್ಞೆ’ ನಮ್ಮ ಇತರ ಜ್ಞಾನ ಕ್ಷೇತ್ರಗಳ ಪರಿಣತರಿಗೂ ಕಾಡಿದರೆ ಕನ್ನಡ ಭಾಷೆ ಸಮೃದ್ಧವಾಗುತ್ತದೆ; ಕನ್ನಡಿಗರಿಗೆ ಉಪಕಾರವಾಗುತ್ತದೆ. ಈ ನೆಲದಿಂದ ಎಲ್ಲವನ್ನೂ ಪಡೆದ ನಮ್ಮ ಪ್ರತಿಭಾವಂತರು ಈ ಸಮಾಜಕ್ಕೆ ಪರಿಣತಿಯ ಫಲವನ್ನು ಜನರಿಗೆ ತಿಳಿಯುವ ಭಾಷೆಯಲ್ಲಿ ಹಂಚಿಕೊಳ್ಳದಿದ್ದರೆ ಹೇಗೆ? ಈ ‘ಋಣ’ದ ಪರಿಕಲ್ಪನೆ ನಿಜಕ್ಕೂ ಅವರನ್ನು ಕಾಡಬೇಕು.

ಚಾಮರಾಜನಗರ ಜಿಲ್ಲೆಯ ಮಂಗಲ ಗ್ರಾಮದಲ್ಲಿ 1933ರಲ್ಲಿ ಜನಿಸಿದ ಬಸವಣ್ಣ ಮೈಸೂರು ವಿಶ್ವವಿದ್ಯಾಲಯದಿಂದ ಪ್ರಾಯೋಗಿಕ ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ನಂತರ ಬೆಂಗಳೂರಿನ ನಿಮ್ಹಾನ್ಸ್​ನಿಂದ ಕ್ಲಿನಿಕಲ್ ಮನಃಶಾಸ್ತ್ರದಲ್ಲಿ ಡಿಪ್ಲೊಮಾ ಗಳಿಸಿದರು. ತಿರುಪತಿಯ ವೆಂಕಟೇಶ್ವರ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದು ಅದೇ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಈಗ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಗುಲ್ಬರ್ಗಾ, ಕರ್ನಾಟಕ ಹಾಗೂ ಬೆಂಗಳೂರು ವಿಶ್ವವಿದ್ಯಾಲಯಗಳಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿದ್ದ ಇವರು ಈಗಲೂ ಅನೇಕ ಸಂಘಸಂಸ್ಥೆಗಳಿಗೆ ಮಾರ್ಗದರ್ಶಕರಾಗಿದ್ದಾರೆ. ಆಂಧ್ರಪ್ರದೇಶ ರಾಜ್ಯದಲ್ಲಿಯೇ ಮೊದಲ ಬಾರಿಗೆ ಮನಃಶಾಸ್ತ್ರ ವಿಭಾಗವನ್ನು ಆರಂಭಿಸಿ, ಅದನ್ನು ಕಟ್ಟಿ ಬೆಳೆಸಿದ ಕೀರ್ತಿ ಬಸವಣ್ಣನವರದು.

ಈಡಿಪಸ್ ಕಾಂಪ್ಲೆಕ್ಸ್, ಕಾರ್ಲ್ ಯೂಂಗ್, ಕನಸಿನ ಕತೆ, ಅರ್ಧನಾರೀಶ್ವರ, ಲೂಸಿಫರ್ ಎಫೆಕ್ಟ್, ಸೈಕಲಾಜಿಕಲ್ ಕಾಂಪ್ಲೆಕ್ಸ್​ಗಳು, ಸಿಗ್ಮಂಡ್ ಫ್ರಾಯ್್ಡ ಮೊದಲಾದ ಕೃತಿಗಳನ್ನು ಅವರು ಪ್ರಕಟಿಸಿದ್ದಾರೆ. ಇಂಗ್ಲಿಷಿನಲ್ಲಿಯೂ ಹಲವಾರು ಲೇಖನಗಳು, ಪುಸ್ತಕಗಳು ಪ್ರಕಟವಾಗಿವೆ. ಕನ್ನಡದಲ್ಲಿ ಮನಃಶಾಸ್ತ್ರ ಸಾಹಿತ್ಯವನ್ನು ಸದ್ದುಗದ್ದಲವಿಲ್ಲದೆ ಶ್ರದ್ಧೆಯಿಂದ ಬೆಳೆಸುತ್ತಿರುವ ಸುಸಂಸ್ಕೃತ ವ್ಯಕ್ತಿ ಬಸವಣ್ಣನವರು. ಇವರ ಕೆಲವು ಪುಸ್ತಕಗಳು ಮೂರು, ನಾಲ್ಕು ಮರುಮುದ್ರಣಗಳನ್ನು ಕಂಡಿವೆ. ಇದು ವಿಜ್ಞಾನ ಸಾಹಿತ್ಯ ಕನ್ನಡಿಗರಿಗೆ ಬೇಕಾಗಿದೆ ಎಂಬುದನ್ನು ಸೂಚಿಸುತ್ತದೆ. ಆದರೆ ಕೊಡುವವರಿಲ್ಲ. ಈ ಎಲ್ಲ ಪುಸ್ತಕಗಳನ್ನು ಅಭಿನವ ಪ್ರಕಾಶನ ಪ್ರಕಟಿಸಿದೆ. ಒಂದು ವಿಶ್ವವಿದ್ಯಾಲಯ ಮಾಡಬಹುದಾದ ಕೆಲಸವನ್ನು ಅಭಿನವ ಮಾಡುತ್ತಿದೆ. ಬೇರೆ ಬೇರೆ ಜ್ಞಾನಶಿಸ್ತುಗಳ ಸಾಹಿತ್ಯದ ಮೂಲಕ ಕನ್ನಡವನ್ನು ಶ್ರೀಮಂತಗೊಳಿಸುವುದು, ಸಮಕಾಲೀನಗೊಳಿಸುವುದು ಇಂದಿನ ತುರ್ತು ಅಗತ್ಯವಾಗಿದೆ.

ಮನೋವಿಜ್ಞಾನ ಮೂಲತಃ ತತ್ತ್ವಶಾಸ್ತ್ರದ ಒಂದು ಭಾಗವಾಗಿತ್ತು. ಆಗ ಮನೋವಿಜ್ಞಾನವನ್ನು ಆತ್ಮಾನುಸಂಧಾನವೆಂದು ವ್ಯಾಖ್ಯಾನಿಸಿದ್ದರು. ಸೈಕಿ ಎಂದರೆ ಆತ್ಮ, ಆಲಜಿ ಎಂದರೆ ಅಧ್ಯಯನ; ಹೀಗೆ ಸೈಕಾಲಜಿ ರೂಪ ತಾಳಿತು. ನಂತರದಲ್ಲಿ ಆತ್ಮದ ಬದಲಿಗೆ ಮನಸ್ಸಿನ ಅಧ್ಯಯನ ಎಂದಾಗಿ, ನಂತರದಲ್ಲಿ ಪ್ರಜ್ಞೆಯ ಅಧ್ಯಯನವಾಗಿ, ಬೆಳವಣಿಗೆಯ ಹಂತದಲ್ಲಿ ಮನುಷ್ಯನ ವರ್ತನೆಯ ಅಧ್ಯಯನ ಎಂಬಂತೆ ವ್ಯಾಖ್ಯಾನಿಸಲಾಯಿತು. ಹಾಗೆ ನೋಡಿದರೆ ಇದು ಒಂದು ವೈಜ್ಞಾನಿಕ ಅಧ್ಯಯನವಾಗಿ ರೂಪುಗೊಂಡದ್ದು ಇತ್ತೀಚೆಗೆ. 1879ರಲ್ಲಿ ಜರ್ಮನಿಯ ಲೈಪ್​ಜಿಗ್ ಎಂಬ ನಗರದಲ್ಲಿ ವಿಲ್​ಹೆಲ್ಮ್ ವುಂಟ್ ಎನ್ನುವ ದಾರ್ಶನಿಕ ಮನೋವಿಜ್ಞಾನದ ಮೊಟ್ಟಮೊದಲ ಪ್ರಯೋಗಶಾಲೆ ಆರಂಭಿಸಿ ವೈಜ್ಞಾನಿಕ ಅಧ್ಯಯನಕ್ಕೆ ನಾಂದಿ ಹಾಡಿದ. ಅಂದಿನಿಂದ ಮನೋವಿಜ್ಞಾನ ವೇಗವಾಗಿ ಬೆಳೆಯುತ್ತಿರುವ ಒಂದು ಜ್ಞಾನಶಿಸ್ತಾಗಿದೆ. ಮನೋವಿಜ್ಞಾನ ಹುಟ್ಟಿದ್ದು ಜರ್ಮನಿಯಲ್ಲಾದರೂ ಬೆಳೆಯುತ್ತಿರುವುದು ಅಮೆರಿಕ, ಇಂಗ್ಲೆಂಡ್​ಗಳಲ್ಲಿ. ಅಮೆರಿಕದ ‘ಅಮೆರಿಕನ್ ಸೈಕಲಾಜಿಕಲ್ ಅಸೋಸಿಯೇಷನ್’ ಜಗತ್ತಿನಲ್ಲೇ ಪ್ರಸಿದ್ಧವಾದ ಸಂಸ್ಥೆ. ಇಲ್ಲಿ ಮನೋವಿಜ್ಞಾನವನ್ನು ಅನೇಕ ನೆಲೆಗಳಲ್ಲಿ ಅಧ್ಯಯನ ಮಾಡಲಾಗುತ್ತಿದೆ. ಸಾಮಾಜಿಕ ಮನೋವಿಜ್ಞಾನ, ಶೈಕ್ಷಣಿಕ ಮನೋವಿಜ್ಞಾನ, ವಿಕಾಸ ಮನೋವಿಜ್ಞಾನ, ಔದ್ಯೋಗಿಕ ಮನೋವಿಜ್ಞಾನ, ಚಿಕಿತ್ಸಾ ಮನೋವಿಜ್ಞಾನ, ಮೊದಲಾಗಿ 56 ಬಗೆಯ ಮನೋವಿಜ್ಞಾನಗಳ ಅಧ್ಯಯನ ವಿಭಾಗಗಳು ಇಲ್ಲಿವೆ. ಈ ಸಂಸ್ಥೆ ಪ್ರಕಟಿಸಿರುವ 8 ಸಂಪುಟಗಳ ಮನೋವಿಜ್ಞಾನದ ವಿಶ್ವಕೋಶ ಅತ್ಯಂತ ಪ್ರಮುಖ ಆಕರಗ್ರಂಥ. ಇವೆಲ್ಲ ಕನ್ನಡ ಮನಸ್ಸಿಗೆ ಕನ್ನಡದಲ್ಲಿಯೇ ತಲುಪುವಂತಾದರೆ?

ಎಂ ಬಸವಣ್ಣನವರು ವಿಜ್ಞಾನದ ವಿದ್ಯಾರ್ಥಿ; ಆದರೆ ಅದರ ಅಪಾಯಗಳನ್ನೂ ಬಲ್ಲವರು. ಅವರ ಪ್ರಕಾರ ಇಂದು ವೈಜ್ಞಾನಿಕ ಆವಿಷ್ಕಾರಗಳು ರಾಜಕಾರಣಿಗಳ ನಿಯಂತ್ರಣಕ್ಕೊಳಪಟ್ಟಿವೆ. ವಿಜ್ಞಾನಿಗಳು ಅಣುವಿಭಜನೆ ಮಾಡಿದ್ದು ಅಣುಬಾಂಬು ಮಾಡಲಿಕ್ಕಲ್ಲ, ಅದನ್ನು ಮಾಡಿಸಿದ್ದು ರಾಜಕಾರಣಿಗಳು. ಅದರಿಂದಾಗಬಹುದಾದ ಅನಾಹುತ ಎಷ್ಟೆಂಬುದನ್ನು ವಿವರಿಸಬೇಕಾಗಿಲ್ಲ. ಹಲವಾರು ದೇಶಗಳಲ್ಲಿ ಲೆಕ್ಕವಿಲ್ಲದಷ್ಟು ಅಣುಬಾಂಬುಗಳ ದಾಸ್ತಾನಿದೆ. ಇನ್ನು ಕೆಲವು ವೈಜ್ಞಾನಿಕ ಆವಿಷ್ಕಾರಗಳು ಲಾಭಕೋರ ಕೈಗಾರಿಕೋದ್ಯಮಿಗಳ, ವ್ಯಾಪಾರಿಗಳ ಕೈಗೆ ಸಿಕ್ಕಿ ಜನರ ಶೋಷಣೆಯಾಗುತ್ತಿದೆ. ಕಾಡುಗಳು ನಾಶವಾಗುತ್ತಿವೆ; ನೀರು ಕೊಳಕಾಗುತ್ತಿದೆ; ಪರಿಸರ ಕಲುಷಿತವಾಗಿ ವಾಯುಮಾಲಿನ್ಯದಿಂದ ಉಸಿರಾಡುವುದೂ ಕಷ್ಟವಾಗುತ್ತಿದೆ. ಮಾನವೀಯ ಮೌಲ್ಯಗಳು ಮರೆಯಾಗಿ ರೋಗಗ್ರಸ್ತ ಸಮಾಜವೊಂದು ರೂಪುಗೊಳ್ಳುತ್ತಿದೆ. ಇಂತಹ ಹೊತ್ತಿನಲ್ಲಿ ಇವೆಲ್ಲವುಗಳ ಹಿಂದಿನ ಮನಸ್ಥಿತಿಯ ಅಧ್ಯಯನ ಅತ್ಯಗತ್ಯವೆಂದು ಬಸವಣ್ಣ ಅಭಿಪ್ರಾಯ ಪಡುತ್ತಾರೆ. ಆರೋಗ್ಯಕರ ಸಮಾಜ ನಿರ್ವಣದಲ್ಲಿ ಮನಃಶಾಸ್ತ್ರದ ಪಾತ್ರ ಅತ್ಯಂತ ಮಹತ್ವದ್ದೆಂದು ಅವರು ಪ್ರತಿಪಾದಿಸುತ್ತಾರೆ.

‘ನಮ್ಮ ಸಾಮಾಜಿಕ ರೋಗಗಳಿಗೆಲ್ಲ ಮದ್ದು ಪ್ರೀತಿ. ಮಾನವನ ಔನ್ನತ್ಯಕ್ಕೆ, ನೈತಿಕ ವಿಕಾಸಕ್ಕೆ ಪ್ರೀತಿ ಮೂಲಶಕ್ತಿ. ನಮ್ಮನ್ನು ಕಾಡುತ್ತಿರುವ ದ್ವೇಷಾಸೂಯೆಗಳಿಗೆ, ಭಯ ಭೀತಿಗಳಿಗೆ, ಮನೋವಿಕಾರಗಳಿಗೆ ಪ್ರೀತಿಯೇ ಏಕಮೇವ ಔಷಧ. ಆದರೆ ಇಂದು ನಮ್ಮ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ವ್ಯವಸ್ಥೆಗಳು ನಮಗೆ ಸಹಜೀವಿಗಳನ್ನು ಪ್ರೀತಿಸುವುದನ್ನು ಕಲಿಸುತ್ತಿಲ್ಲ; ಏನಾದರೊಂದು ಮಹತ್ತಾದುದನ್ನು ಸಾಧಿಸಲು ಪ್ರೇರೇಪಿಸುತ್ತಿಲ್ಲ; ನಮ್ಮ ಆಸಕ್ತಿ ಇರುವುದೆಲ್ಲ ಭೌತಿಕ ಸುಖ ಪಡೆಯುವುದರಲ್ಲಿ. ಹೀಗಾಗಿ ನಾವು ಒಂದು ರೀತಿಯ ರೋಗಿಷ್ಠ ಸಮಾಜದಲ್ಲಿ ಬದುಕುತ್ತಿದ್ದೇವೆ. ಒಂದು ಬಗೆಯ ಅಸಹಾಯಕ ಸ್ಥಿತಿಯಲ್ಲಿದ್ದೇವೆ. ಇದರಿಂದ ಪಾರಾಗದಿದ್ದರೆ ಸರ್ವನಾಶ ಖಂಡಿತ’ ಇದು ಪ್ರಸಿದ್ಧ ಮನೋವಿಜ್ಞಾನಿ ಎರಿಕ್ ಫ್ರಾಮ್ 1900-1980)ನ ಅಭಿಮತ. ಪ್ರೀತಿಸುವ ಶಕ್ತಿಯನ್ನೇ ನಮ್ಮ ಸಮಾಜ ಕಳೆದುಕೊಳ್ಳುತ್ತಿದೆ. ಲೋಹಿಯಾ ಹೇಳುವಂತೆ ಸೃಜನಶೀಲತೆ ನಮ್ಮ ಸಮಾಜದಿಂದ ಮರೆಯಾಗುತ್ತಿದೆ. ಭೋಗಸಂಸ್ಕೃತಿ ನಮ್ಮನ್ನಿಂದು ಆಳುತ್ತಿದೆ. ಇದಕ್ಕೆಲ್ಲ ಮೂಲಕಾರಣ ಮಾನವಿಕ ಅಧ್ಯಯನ ನಮ್ಮ ಶಿಕ್ಷಣ ವ್ಯವಸ್ಥೆಯಿಂದ ಕಾಣೆಯಾಗುತ್ತಿರುವುದು ಎಂದು ಬಸವಣ್ಣ ಪ್ರತಿಪಾದಿಸುತ್ತಾರೆ.

ಕಾರ್ಲ್ ಯೂಂಗ್ ನಮ್ಮಲ್ಲಿರುವ ದುರ್ಗಣಗಳನ್ನು ‘ನೆರಳು’ ಎಂದು ಕರೆದು, ಅದು ನಮ್ಮನ್ನು ಸದಾ ಹಿಂಬಾಲಿಸುತ್ತಿರುತ್ತದೆ; ಅದರಿಂದ ನಮಗೆ ಬಿಡುಗಡೆ ಇಲ್ಲ. ಆದರೆ ಮಾನವನಿಗೆ ಇದರ ಅರಿವು ಮಾಡಿಕೊಟ್ಟರೆ, ಅದನ್ನು ಹತೋಟಿಯಲ್ಲಿಡುವ ಮಾಗೋಪಾಯಗಳನ್ನು ತಿಳಿಸಿಕೊಟ್ಟರೆ ಆತ ಸನ್ಮಾರ್ಗದಲ್ಲಿ ನಡೆಯುತ್ತಾನೆ ಎನ್ನುತ್ತಾನೆ. ಇಂತಹ ಪ್ರಯತ್ನವನ್ನು ನಾವು ಮಾಡಬೇಕಾಗಿದೆ. ಮತ್ತೊಬ್ಬ ಮನೋವಿಜ್ಞಾನಿ ಆಲ್ಪರೆಡ್ ಆಡ್ಲರ್ (1870-1937) ಮನುಷ್ಯನಲ್ಲಿ ಸಾಮಾಜಿಕ ಹಿತಾಸಕ್ತಿ ಸಹಜವಾಗಿ ಇರುತ್ತದೆ. ಅದನ್ನು ಉದ್ದೀಪಿಸುವ ಶಿಕ್ಷಣ ಬೇಕು ಎನ್ನುತ್ತಾನೆ. ಮನುಷ್ಯನಲ್ಲಿ ಸಹಜವಾಗಿ ಹುದುಗಿರುವ ಇತ್ಯಾತ್ಮಕ ಶಕ್ತಿಯನ್ನು ಗುರ್ತಿಸಿ ಪ್ರೋತ್ಸಾಹಿಸಿದಾಗ ಮಾತ್ರ ಆರೋಗ್ಯಕರ ಸಹಬಾಳ್ವೆ ಸಾಧ್ಯ ಎಂಬುದು ಎಲ್ಲ ಮನೋವಿಜ್ಞಾನಿಗಳು ಸೂಚಿಸುವ ಸಲಹೆ. ಮಾನವನ ವರ್ತನೆ ಅತ್ಯಂತ ಸಂಕೀರ್ಣವಾದುದು; ಎಲ್ಲ ಅಧ್ಯಯನಗಳಾಚೆ ಅದರ ಅಸ್ತಿತ್ವವಿದೆ ಎಂಬುದನ್ನೂ ಮನೋವಿಜ್ಞಾನಿಗಳು ಒಪ್ಪುತ್ತಾರೆ. ಅದನ್ನು ಅರಿಯುವುದು ಸುಲಭವಲ್ಲವೆಂಬುದೂ ನಿಜ. ಆದರೆ ಇಂತಹ ಅಧ್ಯಯನ ಸಮಾಜದಲ್ಲಿ ಇತ್ಯಾತ್ಮಕ ಚಲನೆಗೆ ಕಾರಣವಾಗುತ್ತದೆನ್ನುವುದೂ ಅಷ್ಟೇ ಸತ್ಯ. ಬಸವಣ್ಣನವರು ಪುಸ್ತಕಗಳಲ್ಲಿ ಸುದೀರ್ಘ ಕಾಲದ ಅಧ್ಯಯನದ ಸಾರವನ್ನು ಕನ್ನಡ ಮನಸ್ಸುಗಳಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ತನ್ಮೂಲಕ ನಮ್ಮನ್ನು ನಾವು ಅರ್ಥಮಾಡಿಕೊಳ್ಳಲು ಒತ್ತಾಯಿಸುತ್ತಿದ್ದಾರೆ. ಅವರ ಈ ಪ್ರಯತ್ನ ಸಾಮಾಜಿಕವಾಗಿ ಅತ್ಯಂತ ಮಹತ್ವದ್ದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net