ದೇವಮಾನವ ಶ್ರೀರಾಮಕೃಷ್ಣರ ಸಂದೇಶ ಸಂಜೀವಿನಿ

Paramahamsa 3 Jan 20
Published on

ದೇವಮಾನವ ರಾಮಕೃಷ್ಣರ ದಿವ್ಯಸಂದೇಶ ಸಂಜೀವಿನಿಯಂತಿದೆ. ಅವುಗಳ ಅಧ್ಯಯನ ನಮ್ಮ ಬದುಕನ್ನು ಅರ್ಥಪೂರ್ಣ, ಸಾರ್ಥಕ ಹಾಗೂ ಆದರ್ಶಮಯವಾಗಿಸುವುದರಲ್ಲಿ ಸಂಶಯವಿಲ್ಲ. ‘ಜೀವನ ಹಳೆಯದಾದರೂ ಹಳಸಾಗದಂತೆ ನೋಡಿಕೊ, ಅದು ಚಿರನೂತನವಾಗಿರಬೇಕು’ ಎಂದಿದ್ದಾರೆ ದಾರ್ಶನಿಕ ಕವಿ ಡಿವಿಜಿ.

ಭಗವಾನ್ ರಾಮಕೃಷ್ಣರನ್ನು ‘ಆಚಾರ್ಯರಲ್ಲಿ ಮಹಾಚಾರ್ಯರೆಂದೂ, ಅವತಾರಗಳಲ್ಲಿ ವರಿಷ್ಠ’ರೆಂದೂ ಜಗತ್ತು ಗುರ್ತಿಸಿ ಗೌರವಿಸಿದೆ. ಜಗತ್ತಿನ ಎಲ್ಲ ಮತ, ಧರ್ವನುಯಾಯಿಗಳ ನಡುವೆ ಅವರು ಸುಖ್ಯಾತರಾಗಿದ್ದಾರೆ. ಅವರ ಜೀವನ ಹಾಗೂ ಸಂದೇಶಗಳು ವೈಶಾಲ್ಯತೆ ಮತ್ತು ಸಾರ್ವಕಾಲಿಕತೆಗೆ ಅನ್ವರ್ಥವೋ ಎಂಬಂತಿದೆ. ‘ಕಣ್ಣು ಮುಚ್ಚಿ ದೇವರನ್ನು ಕಾಣುವುದಕ್ಕಿಂತ ಕಣ್ಣು ತೆರೆದು ದೇವರನ್ನು ಕಂಡು ಆರಾಧಿಸು’ ಎಂಬ ಅವರ ದಿವ್ಯಸಂದೇಶ ಆಧ್ಯಾತ್ಮಿಕ ಸಾಧನಾ ಜಗತ್ತಿನಲ್ಲೊಂದು ಅದ್ಭುತ ಆವಿಷ್ಕಾರ. ಕಣ್ಣು ತೆರೆದು ಜಗತ್ತನ್ನು ಪೂರ್ವಗ್ರಹವಿಲ್ಲದೆ ನೋಡುತ್ತ ಹೋದಂತೆ ಜಗತ್ತನ್ನು ಪ್ರೀತಿಸುವ ಹಾಗೂ ಇದರ ಹಿನ್ನಲೆಯಲ್ಲಿರುವ ಜಗದೀಶ್ವರನನ್ನು ಗೌರವಿಸುವ ಸಂಸ್ಕೃತಿಸಂಪನ್ನರಾಗಿ ನಾವು ವಿಕಸನಗೊಳ್ಳುತ್ತೇವೆ. ಮಾನವ ಸಂಕುಲ ಕ್ರಮಿಸುತ್ತ ಬಂದ ಕಾಲಘಟ್ಟಗಳಲ್ಲಿ ಅಂದಂದಿನ ಅವಶ್ಯಕತೆಗೆ ತಕ್ಕಂತೆ ಅವತರಿಸಿ ಜೀವರ ಉದ್ಧಾರಕ್ಕೆ ಶ್ರಮಿಸಿದ ಅವತಾರ ಪುರುಷರ ಹಾಗೂ ವಿಭೂತಿ ಚೇತನರ ಧರ್ವನುಷ್ಠಾನದ ಕಾರ್ಯವನ್ನು ಒಂದಿನಿತಾದರೂ ಅರಿಯಲು ಸಾಧ್ಯವಾದೀತು.

ಶ್ರೀರಾಮಕೃಷ್ಣರು ಸಕಲ ಧರ್ಮಗಳ ತತ್ತ್ವ ಸಾಕ್ಷಾತ್ಕಾರ ಮಾಡಿಕೊಳ್ಳುವ ಸತ್ಸಂಕಲ್ಪದೊಂದಿಗೆ ಸಾಧನಾನಿರತರಾದರು. ಜಗನ್ಮಾತೆಯ ಕೃಪೆಯಿಂದ ವಿವಿಧ ಧರ್ಮಗಳ ಮಾರ್ಗದರ್ಶಕರು ತಾವಾಗಿಯೇ ರಾಮಕೃಷ್ಣರಿಗೆ ಒದಗಿ ಬಂದದ್ದು ಅದ್ಭುತ ವಿಚಾರವೇ ಸರಿ. ತಮ್ಮ ಸಾಧನೆ ಅನುಭವದಿಂದ ಸಕಲ ಮತಧರ್ಮಗಳೂ ಒಬ್ಬ ಭಗವಂತನನ್ನೇ ವಿವಿಧ ರೂಪಗಳಿಂದ ದರ್ಶಿಸಲು ಲಭ್ಯವಿರುವ ಮಾರ್ಗಗಳೆಂದು ಅನುಭವಜನ್ಯವಾಗಿಸಿಕೊಂಡರು. ‘ಎಷ್ಟು ಮತಗಳೋ ಅಷ್ಟು ಪಥಗಳು’ ಎಂಬ ರಾಮಕೃಷ್ಣರ ದಿವ್ಯ ಸಂದೇಶ ಈ ಯುಗದ ಅಪರೂಪ ಹಾಗೂ ಅಪೂರ್ವ ಸಂದೇಶವೆಂದು ಗುರ್ತಿಸಲ್ಪಟ್ಟಿತು.

ತಂತ್ರ ಸಾಧನೆಗೆ ಮಾರ್ಗದರ್ಶಕಳಾಗಿ ಬಂದ ಭೈರವಿ ಬ್ರಾಹ್ಮಣಿ ಎಂಬ ಸಾಧಕಿ ತದನಂತರ ರಾಮಕೃಷ್ಣರೇ ತಮ್ಮ ‘ಇಷ್ಟದೇವ’ ಎಂದರಿತಳು. ರಾಮಕೃಷ್ಣರಿಗೆ ಅದ್ವೈತವನ್ನು ಬೋಧಿಸಿದ ಪರಮಹಂಸ ಸಂನ್ಯಾಸಿ ತೋತಾಪುರಿ ಕಡೆಗೆ ರಾಮಕೃಷ್ಣರಿಂದಲೇ ಭಕ್ತಿಯ ಮಹಿಮೆ-ಮಾಧುರ್ಯಗಳನ್ನು, ದ್ವೈತದ ಅಮೂಲ್ಯ ಪಾಠವನ್ನು ತಿಳಿದುಕೊಂಡದ್ದು ಇತಿಹಾಸ. ಅಧ್ಯಾತ್ಮದ ಸಕಲ ಮಜಲುಗಳನ್ನು ಸ್ವಾನುಭವವಾಗಿಸಿಕೊಂಡಿದ್ದ ರಾಮಕೃಷ್ಣರಿಗೆ ಹೊಸ ವಿಚಾರಗಳನ್ನು ತಿಳಿಹೇಳಿದವರು ಒಂದೆಡೆ ‘ಗುರು’ ಎಂದೆನಿಸಿದರೆ ಅವರೂ ರಾಮಕೃಷ್ಣರಿಂದ ಕಲಿತು ಕೃತಕೃತ್ಯರಾದರೆಂಬ ವಿಚಾರವೂ ಗಮನೀಯವಾದದ್ದು.

ಬಂಗಾಳದ ಕ್ರಾಂತಿಕವಿ ನಜರುತ್ ಇಸ್ಲಾಂ ರಾಮಕೃಷ್ಣರನ್ನು ಕುರಿತು ಹೇಳುತ್ತಾನೆ-‘ದೇವರನ್ನು ನೀವು ದೇವಾಲಯದಲ್ಲಿ ಪೂಜಿಸಿದಷ್ಟೇ ಪ್ರೇಮಭಾವದಿಂದ ರ್ಚಚಿನಲ್ಲೂ ಪೂಜಿಸಿದಿರಿ, ಮಸೀದಿಯಲ್ಲೂ ಪೂಜಿಸಿದಿರಿ. ಆ ಕಾರಣದಿಂದಲೇ ಇಡೀ ಜಗತ್ತು ನೀವು ಯಾವ ಪ್ರೇಮದ ಸ್ವರೂಪರಾಗಿದ್ದೀರೋ ಅದರಿಂದ ತುಂಬಿ ತುಳುಕುತ್ತಿದೆ. ನವಭಾರತಕ್ಕೆ ನವವೇದವನ್ನು ತಂದಿರಿ, ಮಾನವನಲ್ಲಿ ಅಂತರ್ಗತವಾಗಿರುವ ದೈವತ್ವವನ್ನು ಸಾರಿದಿರಿ. ಜಾತಿಧರ್ಮ ಭೇದಗಳಿಂದ ಬಂದಿದ್ದ ಕಳಂಕವನ್ನು ತೊಡೆದು ಹಾಕಿದಿರಿ’ ಎಂದು.

ನೊಬೆಲ್ ಪುರಸ್ಕೃತ ರೋಮಾರೋಲಾ ತನ್ನ ‘ಲೈಫ್ ಆಫ್ ರಾಮಕೃಷ್ಣ’ ಗ್ರಂಥದಲ್ಲಿ, ‘ನಾನು ಯುರೋಪಿಗೆ ಅದು ಇಲ್ಲಿಯವರೆಗೆ ಕಂಡರಿಯದ ರಾಮಕೃಷ್ಣ ಎಂಬ ಹೊಸ ಸುಗ್ಗಿಯ ಫಲವನ್ನು, ಒಂದು ಆತ್ಮಸಂದೇಶವನ್ನು ಮತ್ತು ಭಾರತದ ಸ್ವರಮೇಳವನ್ನು ಪರಿಚಯಿಸುತ್ತಿದ್ದೇನೆ. ನಾನು ಚಿತ್ರಿಸಲು ಅಪೇಕ್ಷಿಸುತ್ತಿರುವ ರಾಮಕೃಷ್ಣ ಎಂಬ ಅದ್ಭುತ ಸಂತನು ಮೂವತ್ತಮೂರು ಕೋಟಿ ಜನರ ಎರಡು ಸಹಸ್ರ ವರ್ಷಗಳ ಆಧ್ಯಾತ್ಮಿಕ ಜೀವನದ ಫಲಸ್ವರೂಪನಾಗಿದ್ದಾನೆ’.

ಕ್ರಿಸ್ಟೋಫರ್ ಈಷರ್​ವುಡ್, ‘ರಾಮಕೃಷ್ಣರು ಪ್ರತ್ಯಕ್ಷವಾಗಿ ಆಡಿದ ನುಡಿಗಳು ಹಾಗೂ ನಡೆದ ಹೆಜ್ಜೆಗಳಿವು’ ಎಂದು ವಿವರಿಸಿದ್ದಾನೆ. ಸಾರಾಂಶವೆಂದರೆ, ಭಗವಾನ್ ರಾಮಕೃಷ್ಣರನ್ನು ಪೂರ್ವ ಹಾಗೂ ಪಾಶ್ಚಾತ್ಯ ಜಗತ್ತಿನವರು ‘ಆಧುನಿಕ ಯುಗದ ಪ್ರವಾದಿ’ ಎಂದು ಸ್ವೀಕರಿಸಿ ಗೌರವಿಸುತ್ತ ಸಾಗಿದ್ದಾರೆ. ಜಗತ್ತಿನ ಪ್ರಾಜ್ಞರು ಈ ಅಚಲ ನಿರ್ಧಾರಕ್ಕೆ ಬರಲು ಕಾರಣಗಳೆಂದರೆ 1) ರಾಮಕೃಷ್ಣರ ಜೀವನಲೀಲಾ ಕಥನ ಕಾಲ್ಪನಿಕವಲ್ಲ, 2) ಅದು ಪೌರಾಣಿಕವೂ ಅಲ್ಲ ಮತ್ತು 3) ಯಾರದ್ದೋ ಹೇಳಿಕೆಗಳನ್ನು ಸಾಕ್ಷಾತ್ ಆಧಾರವಾಗಿಸಿಕೊಂಡದ್ದೂ ಅಲ್ಲ. ರಾಮಕೃಷ್ಣರೊಬ್ಬ ಕರುಣಾಸಾಗರ, ಕೃಪಾವಾರಿಧಿ ಹಾಗೂ ಕಲ್ಪತರುವೆಂದು ಸಾಬೀತಾಗಿದೆ.

‘ನಾಗರಿಕತೆಗಳು ಕ್ರಮವಾಗಿ ಆರಂಭಗೊಂಡು, ನಿರಂಕುಶವಾಗಿ ಇಷ್ಟ ಬಂದಂತೆ ಬೆಳೆದು ಅವ್ಯವಸ್ಥೆಯಲ್ಲಿ ಪರ್ಯವಸಾನಗೊಳ್ಳುತ್ತವೆ’ ಎಂದಿದ್ದಾನೆ ಇತಿಹಾಸಜ್ಞ ವಿಲ್​ಡ್ಯುರೆಂಟ್. ನಾಗರಿಕತೆ ಬದಲಾದರೂ ಮಾನವನು ತನ್ನ ಬದುಕಿನ ಸಾರ್ಥಕತೆಗೆ ಅವಲಂಬಿಸಿ ಅನುಸರಿಸಲೇಬೇಕಾದ ಶಾಶ್ವತ ಮೌಲ್ಯಗಳಿಗೆ ಮೊರೆಹೋಗಿ ಶ್ರದ್ಧೆ, ಭರವಸೆಗಳಿಂದ ಮುಂದೆ ಸಾಗುವುದೇ ಅತಿಮುಖ್ಯ ಸಂಗತಿ. ಜಗತ್ತನ್ನು ಕಾಡುವ, ಅತ್ಯಂತ ಗಹನವಾದ ವಿಚಾರಗಳ ಬಗ್ಗೆ ರಾಮಕೃಷ್ಣರಿತ್ತ ಬೆಳಕು ನಿಜಕ್ಕೂ ಬತ್ತಲಾರದ ಆತ್ಮನ ಬೆಳಕು ಅದು. ಅವುಗಳಲ್ಲಿ ಕೆಲವನ್ನು ಅವಲೋಕಿಸಬೇಕಾದ ಸಂದರ್ಭವಿದು.

1) ಮಾನವ ಜೀವನಾದರ್ಶ: ಮಾನವ ಜೀವನದ ಚರಮಧ್ಯೇಯ ಭಗವತ್ಸಾಕ್ಷಾತ್ಕಾರ. ನಿರ್ಜೀವವಾದ ದೇವರ ಕಲ್ಲಿನ ಮೂರ್ತಿಯಲ್ಲಿ ಪ್ರಾಣಪ್ರತಿಷ್ಠೆಗೈದು, ಅದನ್ನು ಶ್ರದ್ಧಾಭಕ್ತಿಯಿಂದ ಪೂಜಿಸಿ ಅದರಲ್ಲಿ ಸಾಕ್ಷಾತ್ ದೈವವನ್ನೇ ನೋಡಲು ಸಾಧ್ಯವಾದರೆ ‘ಮಾನವ’ ಸಾಮಾನ್ಯನೇನು?

ಭಗವಂತ ಎಲ್ಲರಲ್ಲಿಯೂ ಇದ್ದಾನೆ. ಸೂರ್ಯನ ಕಿರಣ, ಮಣ್ಣು, ನೀರು, ಗಿಡಗಳ ಮೇಲೆ ಬೀಳುತ್ತದೆ. ಆದರೆ ಕನ್ನಡಿಯಲ್ಲಿ ಹೆಚ್ಚು ಪ್ರತಿಫಲನಗೊಳ್ಳುತ್ತದೆ. ಅಂತೆಯೇ ಭಗವಂತ ಮನುಷ್ಯನಲ್ಲಿ ಅಧಿಕವಾಗಿ ವ್ಯಕ್ತನಾಗಿದ್ದಾನೆ. ಕುಂಬಾರನ ಜೀವನಶೈಲಿ ವಿಶ್ವದಲ್ಲಿ ಮಾನವ ವಿಕಾಸದ ಪ್ರಕ್ರಿಯೆಯನ್ನು ಅತ್ಯುತ್ತಮವಾಗಿ ಸೂಚಿಸುತ್ತದೆ. ಅವನು ಮಡಕೆ ತಯಾರಿಸುವ ಮೊದಲು ಮಣ್ಣನ್ನು ಹದ ಮಾಡುತ್ತಾನೆ. ಮಣ್ಣು ಹದವಾಗದೆ ಒಳಗೆ ಹುಲ್ಲು, ಕಲ್ಲು, ಮರಳು, ಕಡ್ಡಿಗಳಿದ್ದರೆ ಮಡಕೆ ಉತ್ತಮ ರೀತಿಯಲ್ಲಿ ಮೂಡಲು ಸಾಧ್ಯವೇ ಇಲ್ಲ. ನಿರ್ಲಕ್ಷಿಸಿ ತಯಾರಿಸಿದ್ದೇ ಆದರೆ ಮಡಕೆ ಬಿರುಕು ಬಿಡುವುದೂ ನಿಶ್ಚಿತ. ಅಂತೆಯೇ ಸೃಷ್ಟಿಕರ್ತನಾದ ಭಗವಂತನೇ ಜೀವಿಗಳಾದ ನಮ್ಮನ್ನು ಹತ್ತಾರು ಬಗೆಗಳಿಂದ ಶುದ್ಧೀಕರಣಗೊಳಿಸಿ ತದನಂತರ ಮುಕ್ತಿ ನೀಡುತ್ತಾನೆ.

2) ಜೀವನದಲ್ಲಿ ಹೇಗಿರಬೇಕು?: ಜೀವನದಲ್ಲಿ ಕೇವಲ ಚತುರತೆ ಇದ್ದರೆ ಸಾಲದು. ಕಾಗೆ ಅತ್ಯಂತ ಚತುರ ಪಕ್ಷಿ. ಆದರೆ ಅದು ಹೇಸಿಗೆಯನ್ನು ತಿನ್ನುತ್ತದೆ! ಜೀವನವೆಂಬುದು ಪಗಡೆ ಆಟದಂತೆ. ಅಲ್ಲಿ ಪ್ರತಿಯೊಂದು ಕಾಯಿಯೂ ಪ್ರತಿಯೊಂದು ಮನೆಯ ಮೂಲಕ ಹಾದು ಹೋಗಿಯೇ ಹಣ್ಣಾಗಬೇಕು. ಭಗವಂತನಲ್ಲಿ ಮನಸ್ಸಿಟ್ಟು ಸಂಸಾರದ ಎಲ್ಲ ಕೆಲಸ ಕಾರ್ಯಗಳನ್ನು ನಿರ್ವಹಿಸು. ಅದು ಕಠಿಣವೆನಿಸಿದರೂ ದುಃಸ್ಸಾಧ್ಯವಲ್ಲ. ಕೆಸರು ಮೀನು ಕೆಸರಿನಲ್ಲೇ ವಾಸವಾಗಿದ್ದರೂ ತನ್ನ ಶರೀರಕ್ಕೆ ಕೆಸರನ್ನು ಅಂಟಿಸಿಕೊಳ್ಳುವುದಿಲ್ಲ. ಹಾಗೆಯೇ ಸಾಂಸಾರಿಕ ಕರ್ತವ್ಯಗಳನ್ನು ಸಾಕ್ಷಾತ್ ಭಗವಂತನೇ ನಿರ್ದೇಶಿಸಿದ್ದು ಎಂದರಿತು ಮಾಡಬೇಕು. ನಿನ್ನ ಬುದ್ಧಿ ಹಾಗೂ ಹೃದಯಗಳ ನಡುವೆ ತಿಕ್ಕಾಟವಾದರೆ ಮೊದಲು ಹೃದಯದ ಮಾತು ಕೇಳು. ಮನಸ್ಸಿನಂತೆ ಮಹಾದೇವ. ಕೇವಲ ಚತುರತೆ ಪ್ರಯೋಜನಕ್ಕೆ ಬಾರದು. ಬಾಯಿಯಲ್ಲಿರುವ ತುತ್ತಿನಲ್ಲಿ ಕಲ್ಲು ಅಥವಾ ಕೂದಲು ಸಿಕ್ಕಿಕೊಂಡರೆ ಇಡೀ ತುತ್ತನ್ನೇ ಉಗುಳಬೇಕಾಗುತ್ತದೆ. ಎಲ್ಲವೂ ಭಗವದಿಚ್ಛೆಗೆ ಅನುಸಾರವಾಗಿ ನಡೆಯುತ್ತದೆ ಎಂಬ ಮಾತು ಸತ್ಯವಾದರೂ ಮನುಷ್ಯನು ಸಹಕರಿಸಬೆಕು ಮತ್ತು ಸ್ವಪ್ರಯತ್ನವನ್ನು ಮಾಡಲೇಬೇಕು. ಏಕೆಂದರೆ ಭಗವಂತನ ಇಚ್ಛೆ ವ್ಯಕ್ತವಾಗುವುದು ಮನುಷ್ಯನ ಪ್ರಯತ್ನದ ಮೂಲಕ.

3) ಜೀವನದಲ್ಲಿ ಹಣದ ಪಾತ್ರ: ಹಣವೆಂಬುದು ಜೀವನದ ಚರಮೋದ್ದೇಶವಾಗ ಲಾರದು. ಅರ್ಥದಿಂದ ಅನರ್ಥವೇ ಅಧಿಕ! ಸೋದರರು ಆನಂದದಿಂದಲೇ ಜೀವಿಸುತ್ತ ಇರುತ್ತಾರೆ, ಆದರೆ ಆಸ್ತಿ ಹಂಚಿಕೆಯ ವಿಷಯ ಬಂದಾಗ ಇನ್ನಿಲ್ಲದ ತೊಂದರೆ ಎದುರಾಗುತ್ತದೆ. ಬಡಾವಣೆಯ ನಾಯಿಗಳು ಒಂದೊಮ್ಮೆ ಪರಸ್ಪರ ಒಂದರ ಮೈಯನ್ನು ಮತ್ತೊಂದು ನೆಕ್ಕುತ್ತ ಸ್ನೇಹದಿಂದ ವರ್ತಿಸುತ್ತಿರುತ್ತವೆ. ಆದರೆ ಎಂಜಲೆಲೆ ಬಿದ್ದ ಕ್ಷಣವೇ ಪರಸ್ಪರ ಕಚ್ಚಾಡಲು ಪ್ರಾರಂಭಿಸುತ್ತವೆ.

ನಾವು ವಾಸಿಸುವ ಈ ಜಗತ್ತು ಭಗವಂತನ ಐಶ್ವರ್ಯವೇ ಆಗಿದೆ. ಜನರು ಆತನ ಐಶ್ವರ್ಯಕ್ಕೆ ಮರಳಾಗಿ ಆತನನ್ನೇ ಮರೆತುಬಿಡುತ್ತಾರೆ. ಕಾಮಕಾಂಚನದ ಸುಖಕ್ಕಾಗಿ ಎಲ್ಲರೂ ಹಾತೊರೆಯುತ್ತಾರೆ. ಆದರೆ ಅದರಲ್ಲಿ ದುಃಖ ಅಶಾಂತಿಗಳೇ ಅಧಿಕ.

ಸನ್ಮಾರ್ಗದಲ್ಲಿ ಧನಾರ್ಜನೆ ಮಾಡುವುದು ಶ್ರೇಯಸ್ಕರ. ಆದರೆ ಜೀವನದ ಉದ್ದೇಶ ಧನಾರ್ಜನೆಯಲ್ಲ, ಭಗವಂತನ ಸೇವೆ. ನೆನಪಿಡು, ಧನಾರ್ಜನೆಯಿಂದ ಭಗವಂತನ ಸೇವೆ ನಡೆಯುವುದಾದರೆ ಅದು ದೋಷವಾದುದೇನಲ್ಲ.

4) ಹೆತ್ತ ತಾಯಿ ಬಗ್ಗೆ ಕರ್ತವ್ಯವೇನು?: ಮನುಷ್ಯನಿಗೆ ಅನೇಕ ಋಣಗಳಿವೆ. ಮಾತೃಋಣ, ಪಿತೃಋಣ, ಗುರುಋಣ, ಪತ್ನಿಋಣ ಮೊದಲಾದ ಋಣಗಳಿದ್ದು ಇವುಗಳಲ್ಲಿ ಮಾತೃಋಣ ಪ್ರಮುಖ. ತಂದೆತಾಯಿಗಳು ಸುಪ್ರೀತರಾಗದೆ ನಮ್ಮ ಸಾಧನಾಕರ್ಮಗಳು ಫಲಪ್ರದವಾಗಲಾರವು. ಭಗವಂತ ವಿವಿಧ ರೂಪಗಳಲ್ಲಿ ವ್ಯಕ್ತವಾಗಬಲ್ಲವನಾಗಿದ್ದು, ಅವುಗಳಲ್ಲಿ ತಾಯಿ ರೂಪ ಪ್ರಮುಖ. ಹೆತ್ತ ತಾಯಿ ಬಗ್ಗೆ ಪೂಜ್ಯತೆ ಇರಲಿ. ನಮ್ಮ ಜೀವನೋತ್ಥಾನದಲ್ಲಿ ಅವಳೆಷ್ಟು ಪ್ರಮುಖಳೆಂದರೆ ಹೆತ್ತ ತಾಯಿಯ ಮೇಲೆ ಧ್ಯಾನ ಮಾಡಬಹುದು. ಅವಳು ಗುರು, ಅವಳು ಬ್ರಹ್ಮಮಯಿ.

5) ಅಸ್ಪಶ್ಯತೆ ನಿಮೂಲನ ಸಾಧ್ಯವೇ?: ಜಾತಿ ವ್ಯವಸ್ಥೆ ಎಂಬುದೊಂದು ಸಾಮಾಜಿಕ ಆಚರಣೆ. ಆದರೆ ಜಾತಿಭೇದವನ್ನು ಒಂದು ವಿಧದಲ್ಲಿ ತೆಗೆದು ಹಾಕಿಬಿಡಬಹುದು, ಆ ಮಾರ್ಗವೇ ಭಕ್ತಿ. ಭಕ್ತರಿಗೆ ಜಾತಿ ಎಂಬುದೇ ಇಲ್ಲ. ಭಕ್ತಿ ದೊರೆಯಿತೆಂದರೆ ದೇಹ, ಮನಸ್ಸು, ಆತ್ಮ ಎಲ್ಲವೂ ಶುದ್ಧವಾಗಿಬಿಡುತ್ತದೆ. ಹೃದಯದಲ್ಲಿ ಭಕ್ತಿ ಇಲ್ಲದೇ ಇತ್ತು ಎಂದರೆ ಬ್ರಾಹ್ಮಣ ಬ್ರಾಹ್ಮಣನಲ್ಲ! ಹೃದಯದಲ್ಲಿ ಭಕ್ತಿ ಇತ್ತೆಂದರೆ ಚಂಡಾಲ ಚಂಡಾಲನಲ್ಲ! ಭಕ್ತಿಯೊಂದು ಇತ್ತೆಂದರೆ ಅಲ್ಲಿ ಸರ್ವರೀತಿಯ ಶುದ್ಧೀಕರಣವನ್ನು ಸಾಧಿಸಿದಂತೆ. ಆಗ ಅಲ್ಲಿ ಅಸ್ಪಶ್ಯ, ಜಾತಿ ಇವೇ ಮೊದಲಾದವುಗಳಿಗೆ ಆಸ್ಪದವೇ ಇಲ್ಲ.

6) ಜನರೊಂದಿಗೆ ಹೇಗೆ ವ್ಯವಹರಿಸಬೇಕು?: ಭಗವಂತ ಸರ್ವಭೂತಗಳಲ್ಲಿಯೂ ಇದ್ದಾನೆ. ಸಾಧು, ಅಸಾಧು, ಭಕ್ತ, ಅಭಕ್ತ ಎಲ್ಲರಲ್ಲಿಯೂ ಭಗವಂತನ ಆವಿರ್ಭಾವ ವಿದೆ. ಆದರೆ ನಾನು ಅಸಾಧು, ಅಭಕ್ತ, ದುಷ್ಟರೊಂದಿಗೆ ವ್ಯವಹರಿಸಕೂಡದು. ಕೆಟ್ಟವರೊಂದಿಗೆ ಸ್ನೇಹ ಬೆಳೆಸಲೂ ಕೂಡದು. ಕೆಲವರೊಡನೆ ಕೇವಲ ಒಂದೆರಡು ಮಾತುಕತೆ ಆಡಬಹುದು, ಆದರೆ ಇನ್ನು ಕೆಲವರೊಡನೆ ಮಾತನಾಡುವುದೂ ಒಳ್ಳೆಯದಲ್ಲ. ಕೆಟ್ಟವರೊಂದಿಗೆ ಬೆರೆಯುವುದಿರಲಿ, ಮಾನವ ತಾನು ಪಾಪಕಾರ್ಯ ಮಾಡಬಾರದು ಹಾಗೂ ಪಾಪಿಯಂತೆ ನಟಿಸಲೂಬಾರದು. ಆದರೆ ದುಷ್ಟರನ್ನು ದ್ವೇಷಿಸುವಂತಿಲ್ಲ. ಏಕೆಂದರೆ ತುಳಸಿದಳ ಒಣಗಿ ಹೋಗಲಿ ಅಥವಾ ಪುಟ್ಟದಾಗಿದ್ದರೂ ಪೂಜೆಗೆ ಉಪಯೋಗಾರ್ಹ.

7) ಕಾಮಕಾಂಚಾಣದ ದುಷ್ಪರಿಣಾಮ?: ಭಗವಂತ ನಮ್ಮ ಅಂತರ್ಯಾಮಿ ಎಂಬುದನ್ನು ಮರೆಯಬಾರದು. ಭಗವಂತನನ್ನು ಮರೆಯಬಾರದು ಹಾಗೂ ಅವನು ನಮ್ಮ ಅಂತರ್ಯಾಮಿ ಎಂಬ ಸತ್ಯವನ್ನು ಉಪೇಕ್ಷಿಸಬಾರದು. ಜಾಡಮಾಲಿ ಮಲವನ್ನು ಹೊರುತ್ತ ಹೊರುತ್ತ ಅದೇ ಅಭ್ಯಾಸವಾಗಿ ಅವನಿಗೆ ಅಸಹ್ಯವೇ ಹೋಗಿಬಿಡುತ್ತದೆ. ಹಾವಿನ ಹೆಡೆಯಲ್ಲಿ ರತ್ನವೇ ಇದ್ದರೂ ಕೊಳೆತ ಕಪ್ಪೆಗಾಗಿ ಚಡಪಡಿಸುತ್ತದೆ. ನೆಗ್ಗಲ ಮುಳ್ಳು ತಿಂದು ಬಾಯಲ್ಲಿ ರಕ್ತ ಸ್ರವಿಸಿದರೂ ಒಂಟೆ ಅದನ್ನು ತಿನ್ನುವುದನ್ನು ಬಿಡುವುದಿಲ್ಲ. ಕೇವಲ ಲೌಕಿಕ ಕಾರ್ಯಗಳಿಗೆ ವಿಪರೀತ ಖರ್ಚುಮಾಡಿ ಮನುಷ್ಯರು ದಿವಾಳಿಗಳಾಗುತ್ತಾರೆ. ಅವರ ಸ್ಥಿತಿ ಹೆಗ್ಗಣವನ್ನು ನುಂಗಲು ಹೋದ ಹಾವಿನಂತಾಗುತ್ತದೆ. ಕಾಮ-ಕಾಂಚಾಣದ ಆಸೆ ಮಾನವನ ಸ್ವಾತಂತ್ರ್ಯವನ್ನು ಕಸಿದು ಅವನನ್ನು ದಾಸ್ಯಕ್ಕೆ ತಳ್ಳುತ್ತದೆ. ದೇವಮಾನವ ರಾಮಕೃಷ್ಣರ ದಿವ್ಯಸಂದೇಶ ಸಂಜೀವಿನಿಯಂತಿದೆ. ಅವುಗಳ ಅಧ್ಯಯನ ನಮ್ಮ ಬದುಕನ್ನು ಅರ್ಥಪೂರ್ಣ, ಸಾರ್ಥಕ ಹಾಗೂ ಆದರ್ಶಮಯವಾಗಿಸುವುದರಲ್ಲಿ ಸಂಶಯವಿಲ್ಲ. ‘ಜೀವನ ಹಳೆಯದಾದರೂ ಹಳಸಾಗದಂತೆ ನೋಡಿಕೊ, ಅದು ಚಿರನೂತನವಾಗಿರಬೇಕು’ ಎಂದಿದ್ದಾರೆ ದಾರ್ಶನಿಕ ಕವಿ ಡಿವಿಜಿ. ‘ಜೀವನವೆಂಬುದೊಂದು ಸುಂದರ ರಂಗೋಲಿ. ಇದರಲ್ಲಿ ಒಂದು ಚುಕ್ಕೆ ಕ್ರಮ ತಪ್ಪಿದರೂ ರಂಗೋಲಿಯ ಅಂದ ಕೆಡುತ್ತದೆ’ ಎಂಬುದು ಲೋಕಾರೂಢಿ. ಅನುಭಾವಿಗಳ ಮಾತು ನಮ್ಮ ಮನಸ್ಸು, ಹೃದಯವನ್ನು ತಟ್ಟಬೇಕು. ಅವತಾರವರಿಷ್ಠ ಶ್ರೀರಾಮಕೃಷ್ಣರಿಂದ ಪ್ರಭಾವಿತರಾದ ರಾಷ್ಟ್ರಕವಿ ಕುವೆಂಪು ಹೀಗೆ ಹೇಳುತ್ತಾರೆ-‘ರಾಮಕೃಷ್ಣರಷ್ಟು ಸರ್ವಜನ ಸಾಮಾನ್ಯ ರೂಪದಲ್ಲಿ, ಇಷ್ಟು ಸರ್ವಸುಲಭ ರೂಪದಲ್ಲಿ ಭಗವಂತ ಎಂದೂ ಅವತರಿಸಿರಲಿಲ್ಲ, ಭಗವದ್ವಾಣಿ ತಾನೆಂದೂ ಕೃತಿಗೊಂಡಿರಲಿಲ್ಲ’. ದೇವಮಾನವ ಶ್ರೀರಾಮಕೃಷ್ಣರ ದಿವ್ಯನುಡಿಗಳ ಶ್ರದ್ಧಾಪೂರ್ಣ ಅಧ್ಯಯನ ನಮಗೆ ಬದುಕಿನ ಆದರ್ಶ ಪಥದಲ್ಲಿ ನೂರ್ಮಡಿ ಶಕ್ತಿ ಶ್ರದ್ಧೆಯನ್ನು ನೀಡಬಲ್ಲವು, ಅಲ್ಲವೇ?

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net