ಬಂದಿದೆ ಶ್ರಾವಣ, ಹಬ್ಬಗಳ ತೋರಣ...

Shravana Lalitha
Published on

| ಸಂಧ್ಯಾ ಹೊನಗುಂಟಿಕರ್

ಭಾರತೀಯ ಪರಂಪರೆಯಲ್ಲಿ ಪ್ರತಿ ಸಂವತ್ಸರಕ್ಕೂ, ಪ್ರತಿ ಋತುವಿಗೂ, ಮಾಸಕ್ಕೂ ಬಹಳ ಮಹತ್ವವಿದೆ. ಇವುಗಳನ್ನು ಪ್ರಕೃತಿಯ ಬದಲಾವಣೆಯೊಂದಿಗೆ ಗುರುತಿಸುತ್ತಾ ವೈಭವದಿಂದ ಆಚರಿಸಲಾಗುತ್ತದೆ. ನಿಸರ್ಗದ ಪರಿವರ್ತನೆಗೆ ಅನುಗುಣವಾಗಿ ಮನುಷ್ಯ ಜೀವಿಗಳ ಬದುಕಿನ ಆಚರಣೆಗಳಿಗೆ ವಿಶಿಷ್ಟವಾದ ಸಂಬಂಧವಿದೆ.

ಪ್ರತಿ ಸಂವತ್ಸರದ ನಾಲ್ಕನೇ ಮಾಸವಾದ ಶ್ರಾವಣವು ವಿಶಿಷ್ಟವಾದದ್ದು. ಇಡೀ ತಿಂಗಳು ವೈವಿಧ್ಯಮಯವಾದ ಹಬ್ಬ, ಪೂಜೆ ಸಡಗರದಿಂದ ಕೂಡಿರುತ್ತದೆ. ಬೇಸಿಗೆ ಕಳೆದು ಸುರಿದ ಮಳೆಗೆ ಇಳೆಯು ತನ್ನ ಮೈ ಅರಳಿಸಿ ಹಲವಾರು ಬಣ್ಣಗಳಿಂದ ಚಿತ್ತಾರಗೊಳ್ಳುತ್ತದೆ. ಇದನ್ನು ಜನ ಸಂಭ್ರಮಿಸಲೆಂದೆ ಶ್ರಾವಣ ಬರುತ್ತದೆಯೇ ಎಂದು ಅನ್ನಿಸುತ್ತದೆ.

ಶ್ರಾವಣಕ್ಕೂ ಮಹಿಳೆಯರಿಗೂ ಅವಿನಾಭಾವ ಸಂಬಂಧ. ಭೂಮಿಯಂತೆ ಪ್ರತಿ ಹೆಣ್ಣು ಮಗಳು ಈ ಸಡಗರಕ್ಕೆ ತನ್ನನ್ನು ಸಜ್ಜುಗೊಳಿಸುತ್ತಾಳೆ. ಈ ತಿಂಗಳ ಸಾಲು ಸಾಲು ಹಬ್ಬಗಳಿಗೆ ಉಲ್ಲಾಸದ ತಯ್ಯಾರಿಗೆ ಆಷಾಢದಿಂದಲೆ ಪ್ರಾರಂಭಿಸುತ್ತಾಳೆ. ಶ್ರಾವಣದ ಮುಂಬಾಗಿಲಲ್ಲಿಯೇ ಬರುವ ನಾಗರ ಪಂಚಮಿಯಲ್ಲಿ ಹೆಣ್ಣುಮಕ್ಕಳಿಗೇ ಪ್ರಾಧಾನ್ಯತೆ. ಹೊಸ ಬಟ್ಟೆ, ಬಳೆ, ಅಲಂಕಾರ, ಬಗೆಬಗೆಯ ತಿಂಡಿ, ಪರಸ್ಪರ ವಿನಿಮಯ ಇದೆಲ್ಲವೂ ಪ್ರತಿ ವರುಷವೂ ನಡೆಯುತ್ತದೆ. ಅಣ್ಣತಮ್ಮಂದಿರು ಮದುವೆಯಾದ ಅಕ್ಕ ತಂಗಿಯರನ್ನು ಕರೆತಂದು ಆದರಿಸಿದರೆ, ಅತ್ತಿಗೆಯರು ಮನೆಯ ಮಗಳೆಂದು ಮಡಿಲು ತುಂಬಿ ತವರಿನ ನಂಟನ್ನು ಶಾಶ್ವತಗೊಳಿಸುತ್ತಾರೆ. ಆ ಸಹೋದರಿಯು ತನ್ನ ಸಹೋದರರನ್ನು ಸುಖವಾಗಿ ಇರಿಸೆಂದು ನಾಗ ದೇವತೆಯನ್ನು ಬೇಡಿಕೊಳ್ಳುತ್ತಾಳೆ. ತನ್ನ ತವರು ಯಾವತ್ತಿಗೂ ತಣ್ಣಗಿರಲಿ ಎಂದು ಹಾರೈಸುತ್ತಾಳೆ. ಇವೆಲ್ಲವೂ ಪರಸ್ಪರ ಸಂಬಂಧಗಳು ಗಟ್ಟಿಗೊಳಿಸುವಂತಹ ಆಚರಣೆಗಳಾಗಿವೆ. ಅಂತೆಯೇ ಜನಪದರು "ಹೆಣ್ಣಿನ ಜನುಮಕ್ಕೆ ಅಣ್ಣ ತಮ್ಮರು ಬೇಕು। ಹೊನ್ನು ಕಟ್ಟುವರು ಸಭೆಯೊಳಗೆ।" ಎಂದು ಹಾಡಿದ್ದಾರೆ.

ಶ್ರಾವಣ ಸೋಮವಾರ ಬಹು ರುದ್ರದೇವರನ್ನು ಆರಾಧಿಸುವ ದಿನವಾಗಿದ್ದು ಭಕುತರಿಗೆ ಬೇಗ ಒಲಿದು ವರವನ್ನು ನೀಡುವಂತಹ ಶಂಕರನನ್ನು ಪೂಜಿಸಲಾಗುತ್ತದೆ. ಅಭಿಷೇಕ ಪ್ರಿಯನಾದ ಶಿವನಿಗೆ ನಾನಾ ತರಹದ ಅಭಿಷೇಕಗಳನ್ನು ಮಾಡಿ ಆತನ ಕೃಪೆಗೆ ಪಾತ್ರರಾಗುತ್ತಾರೆ. ಈ ಮಾಸದ ಐದು ಸೋಮವಾರ ಮಹಿಳೆಯರು ತಾವು ಉಪವಾಸವಿದ್ದು ಶಿವನಿಗೆ ತರತರಹದ ಭಕ್ಷ್ಯಗಳನ್ನು ಮಾಡಿ ನೈವೇದ್ಯ ಅರ್ಪಿಸುತ್ತಾರೆ.

ನಮ್ಮಲ್ಲಿ ಕುಟುಂಬದ ಯಜಮಾನನ ಆರೋಗ್ಯ ಆಯುಸ್ಸಿಗೆ ಅನೇಕ ವ್ರತಗಳ ಆಚರಣೆ ಈ ಮಾಸದಲ್ಲಿಯೇ ನಡೆಯುತ್ತದೆ. ಮಂಗಳಗೌರಿ ಪೂಜೆ, ವರಮಹಾಲಕ್ಷ್ಮಿ ಪೂಜೆ, ಶ್ರಾವಣದ ಐದು ಶುಕ್ರವಾರದ ಮತ್ತು ಶನಿವಾರದ ಲಕ್ಷ್ಮೀ ಪೂಜೆ ಇವೆಲ್ಲವೂ ನಮ್ಮ ಹೆಣ್ಣುಮಕ್ಕಳ ನಂಬಿಕೆಯಾಗಿರುವ ಮುತ್ತೈದೆತನವನ್ನು ಹೆಚ್ಚಿಸುವಂತಹ ಪೂಜೆಗಳು. ಸಮುದ್ರ ಮಥನವು ನಡೆದು ಶ್ರೀ ಲಕ್ಷ್ಮಿಯು ಉದಯಿಸಿದ್ದು ಈ ಶ್ರಾವಣ ಮಾಸದಲ್ಲಿಯೇ ಎಂದು ಪುರಾಣಗಳು ಹೇಳುತ್ತವೆ.ಆದ್ದರಿಂದ ಪ್ರತಿ ಹೆಣ್ಣು ಮಗಳು ತನ್ನ ಕುಟುಂಬದ ಶ್ರೇಯಸ್ಸು ಸಂಪತ್ತು, ಆರೋಗ್ಯ, ಅಭಿವೃದ್ದಿಗೆ ಮಹಾಲಕ್ಷ್ಮಿಯನ್ನು ಪೂಜಿಸಿ ಪರಿಪರಿಯಿಂದ ಆರಾಧಿಸಿ ವರ ನೀಡೆಂದು ಪ್ರಾರ್ಥಿಸುತ್ತಾಳೆ. ಪೂಜೆ, ಪ್ರಾರ್ಥನೆ, ಹಾಡುಹಸೆ ಈ ತರಹದ ಆಚರಣೆಗಳಿಂದ ಧನಾತ್ಮಕ ಶಕ್ತಿಯನ್ನು ಪ್ರವಹಿಸುವಂತೆ ಮಾಡುತ್ತಾಳೆ. ಮನೆಯಲ್ಲಿ ಶ ಶುದ್ಧತೆ, ಅಲಂಕಾರ, ಸಂಭ್ರಮ, ಸಡಗರದಿಂದ ಬಂಧು ಬಳಗದೊಂದಿಗೆ ಚೈತನ್ಯದಾಯಕ, ಮಂಗಲಕಾರಕ ವಾತಾವರಣವನ್ನು ಸೃಷ್ಟಿಸುತ್ತಾಳೆ. "ಗೃಹಿಣಿ ಗೃಹಮುಚ್ಚತೆ" ಎಂಬಂತೆ ಹೆಣ್ಣು ಮಕ್ಕಳಿದ್ದರೆ ಮಾತ್ರ ಮನೆ ಎಂಬ ವಾಸಸ್ಥಾನವು ನೆಮ್ಮದಿಯ ತಾಣವಾಗುತ್ತದೆ. ಗೃಹಿಣಿಯರು ಹಬ್ಬಗಳಲ್ಲಿ ಮನೆಯ ಮಕ್ಕಳನ್ನು, ಗಂಡನನ್ನು ಪೂಜೆಗೆ ಉಪವಾಸಕ್ಕೆ ಒತ್ತಾಯಿಸಿ, ಅವುಗಳ ಮಹತ್ವವನ್ನು ತಿಳಿಸಿ ಅವರೂ ಆ ಸಂಭ್ರಮದಲ್ಲಿ ಭಾಗವಹಿಸಲು ಉತ್ತೇಜಿಸುತ್ತ ನಮ್ಮ ಸಂಪ್ರದಾಯಗಳನ್ನು ಕಾಪಿಟ್ಟಿದ್ದಾಳೆ.

ಕಲಿಯುಗಕ್ಕೆ ಅತ್ಯಂತ ಹತ್ತಿರವಾದ ತ್ರೇತಾಯುಗದ ಶ್ರೀ ಕೃಷ್ಣ ಹುಟ್ಟಿದ್ದು ಇದೇ ಮಾಸದಲ್ಲಿ. ಗೋಕುಲಾಷ್ಟಮಿಗೆ ಮಣ್ಣಿನಿಂದ ಗೋಕುಲ ನಿರ್ಮಿಸಿ ಬಾಲ ಕೃಷ್ಣ, ಬಲರಾಮರನ್ನು ಬಗೆಬಗೆಯ ಪುಷ್ಪಗಳಿಂದ ಅಲಂಕರಿಸುತ್ತಾರೆ. ಮಕ್ಕಳಿದ್ದ ಮನೆ ಗೋಕುಲಕ್ಕೆ ಸಮಾನ. ಮಕ್ಕಳಿಗಾಗಿ ಹಂಬಲಿಸುವವರು ಮತ್ತು ಪುಟ್ಟ ಮಕ್ಕಳಿದ್ದವರು ಶ್ರೀಕೃಷ್ಣನನ್ನು ಸಡಗರದಿಂದ ಪೂಜಿಸಿ ಅಂಟಿನ ಉಂಡಿ, ಚಕ್ಕುಲಿ, ಕೋಡುಬಳೆಗಳನ್ನು ನೇವೇದ್ಯ ಮಾಡಿ ಸಂಭ್ರಮಿಸುವ ಪರಿ ಅತ್ಯಂತ ದೈವಿಕವಾದದ್ದು.

ರಕ್ಷಾ ಬಂಧನವು ಹೆಣ್ಣುಮಕ್ಕಳ ರಕ್ಷಣೆಗಾಗಿ ಮತ್ತು ಸೋದರ ಸೋದರಿಯರೇ ಬಂಧುತ್ವದ ನಂಬಿಕೆಯ ದ್ಯೋತಕವಾಗಿ ಆಚರಿಸುವ ಹಬ್ಬ. ಇಂಥ ಹಬ್ಬಗಳ ಆಚರಣೆಯಿಂದ ಸಂಬಂಧ ಗಟ್ಟಿಯಾಗುವುದಲ್ಲದೆ ಬಿರುಕುಬಿಟ್ಟ ಅನುಬಂಧಗಳು ಈ ಹಬ್ಬಗಳ ಕಾರಣಕ್ಕಾಗಿ ಮತ್ತೆ ಬೆಸೆಯುತ್ತವೆ. ಕಾರಣಾಂತರದಿಂದ ತವರಿನಿಂದ ದೂರವಾದ ಹೆಣ್ಣುಮಕ್ಕಳು ಈ ಸಂದರ್ಭದಲ್ಲಿ ಸೋದರರ ಪುಟ್ಟ ಉಡುಗೊರೆಗಳ ವಿನಿಮಯದಿಂದ ವೈಮನಸ್ಸು ದೂರವಾಗಿ ಆತ್ಮೀಯ ಸಿಂಚನದಿಂದ ಮುದಗೊಳ್ಳುತ್ತಾರೆ.

ಶ್ರಾವಣ ಮಾಸದಲ್ಲಿ ಪ್ರಕೃತಿಯು ಬಗೆಬಗೆಯ ಹೂಗಳನ್ನು ಅರಳಿಸುತ್ತದೆ ದೇವರ ಪೂಜೆಗೂ, ಮನೆಯ ಸಿಂಗಾರಕ್ಕೂ, ಮಹಿಳೆಯರ ಅಲಂಕಾರಕ್ಕೂ ಎಷ್ಟು ಬಗೆಯ ಹೂಗಳಿದ್ದರೂ ಸಾಲದು. ಮಾವಿನ ಎಲೆ, ವೀಳ್ಯದೆಲೆ, ತೆಂಗಿನ ಗರಿ, ಹೂವು, ಬಾಳೆ ಗೊನೆ ಮುಂತಾದ ಪರಿಕರಗಳನ್ನು ಅಲಂಕಾರಿಕವಾಗಿ ಬಳಕೆ ಮಾಡುವುದರಲ್ಲಿ ಹೆಂಗಳೆಯರು ಪ್ರವೀಣರು. ಪ್ರತಿವರುಷವೂ ಹಬ್ಬಕ್ಕೆಂದೇ ಹೊಸಹೊಸ ಅಲಂಕಾರಿಕ ವಸ್ತುಗಳನ್ನು ತಯಾರಿಸುವವರು. ಪ್ರತಿ ದಿನವೂ ಮನೆಯ ಅಂಗಳವು ಹೆಣ್ಣುಮಕ್ಕಳ ಸೃಜನಶೀಲತೆಯಿಂದ ಚಿತ್ತಾರಗೊಳ್ಳುವ ಸುಂದರವಾದ ದೊಡ್ಡ ದೊಡ್ಡ ರಂಗೋಲಿಗಳಿಂದ ತನ್ನ ಅಂದ ಹೆಚ್ಚಿಸಿಕೊಳ್ಳುವುದು. ಪೂಜೆಗೆಂದು ಬಗೆ ಬಗೆಯ ಹಾಡು, ಭಜನೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂಧುಮಿತ್ರರನ್ನು ಆಮಂತ್ರಿಸಿ ಸಾಮೂಹಿಕತೆಗೆ ಪ್ರಾಮುಖ್ಯ ನೀಡುತ್ತಾರೆ. ಹೀಗೆ ಹಾಡು ಹಸೆ, ಪೂಜೆ, ದಾನಗಳಿಂದ ಶ್ರಾವಣವೂ ಅತ್ಯಂತ ಹರ್ಷದಾಯಕವೂ, ಮಂಗಲಮಯವೂ ಆಗಿರುತ್ತದೆ.

ಶ್ರಾವಣ ತಿಂಗಳ ಪೂರ್ತಿ ಅಡುಗೆಮನೆಯಲ್ಲಿ ತರತರಹದ ತಿಂಡಿಗಳ ಗಮ್ಮೆನಿಸುವ ಸೊಗಡು. ನಾಗರ ಪಂಚಮಿಗೆ ಅರಳು, ತಂಬಿಟ್ಟು, ಚಿಗಳಿಉಂಡಿಗಳ ದರಬಾರು. ವರಮಹಾಲಕ್ಷ್ಮಿ ಪೂಜೆಗೆ ನಾಲ್ಕಾರು ಬಗೆಯ ಭಕ್ಷ್ಯಗಳು ಖಾದ್ಯಗಳು. ಬಡತನವಿರಲಿ ಶ್ರೀಮಂತಿಕೆಯಿರಲಿ ಬಗೆಬಗೆ ತಿಂಡಿಗಳನ್ನು ಮಾಡಿ ಎಲ್ಲರಿಗೂ ಹಂಚಿ ಸಂಭ್ರಮಪಡುವ ಗೃಹಿಣಿಯರಿಂದಲೇ ಇಂದು ಹಬ್ಬಗಳಲ್ಲಿ ಸಂಭ್ರಮ ಇನ್ನೂ ಉಳಿದುಬಂದಿದೆ. ದಾನದ ರೂಪದಲ್ಲಿ ಬಾಗಿನ, ಮಕ್ಕಳಿಗೆ ಉಡುಗೊರೆ ಕೊಡುವ ಮೂಲಕ, ಹಂಚಿ ತಿನ್ನುವ, ಬದುಕುವ ರೀತಿಯಿಂದ ಹಬ್ಬಗಳು ಅರ್ಥಪೂರ್ಣವಾಗಿವೆ.

ಇಂದಿನ ಧಾವಂತದ, ಯಾಂತ್ರಿಕ ಬದುಕಿನಲ್ಲೂ ಉದ್ಯೋಗಸ್ಥ ಮಹಿಳೆಯರೂ ಪುರುಸೊತ್ತು ಮಾಡಿಕೊಂಡು ಹಬ್ಬಗಳನ್ನು ಆಚರಿಸುತ್ತಾರೆ. ಮಕ್ಕಳಿಗೂ ನಮ್ಮ ನೆಲದ ಸಂಸ್ಕೃತಿ ಕಲಿಸುತ್ತಾರೆ.

ಹೀಗೆ ಶ್ರಾವಣ ತಿಂಗಳಲ್ಲಿ ನಮ್ಮ ಮಹಿಳೆಯರು ಸಂಭ್ರಮದ ಲೋಕಕ್ಕೆ ಸೇರಿದವರಾಗಿರುತ್ತಾರೆ. ಆ ಇಡೀ ತಿಂಗಳು ಪುರುಸೊತ್ತೂ ಇರುವುದಿಲ್ಲ. ದಣಿವೂ ಇರುವುದಿಲ್ಲ. ನಮ್ಮ ನಾಡಿನಲ್ಲಿ, ದೇಶದಲ್ಲಿ ಶ್ರಾವಣ ಮಾಸದ ಸಂಪ್ರದಾಯ ಆಚರಣೆಯಲ್ಲಿ ಪ್ರಾದೇಶಿಕ ಭಿನ್ನತೆಗಳಿದ್ದರೂ ಎಲ್ಲ ಚಟುವಟಿಕೆಯಲ್ಲಿ ಮಹಿಳೆಯರದೆ ಮಹತ್ವದ ಪಾತ್ರವಾಗಿರುತ್ತದೆ. ಈ ಮೂಲಕ ಕುಟುಂಬದ ಶ್ರೇಯೋಭಿವೃದ್ಧಿಗೆ ಆಕೆ ತನ್ನನ್ನು ಅರ್ಪಿಸಿಕೊಂಡಿರುತ್ತಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net