ಪುಟಾಣಿ ಕತೆ; ಸಾಧನೆಗೆ ಯಾವುದೂ ಅಡ್ಡಿಯಲ್ಲ

KATE F
Published on
ಕಮಲಾಪುರ ಎಂಬ ಊರಿನಲ್ಲಿ ರಾಮಯ್ಯ ಎಂಬ ರೈತನಿದ್ದ. ಆತ ತನ್ನ ಪೂರ್ವಿಕರಿಂದ ಬಂದ ಜಮೀನಿನಲ್ಲಿ ಉತ್ತಿ ಬಿತ್ತಿ ಬೆಳೆ ಬೆಳೆದು ಸುಖವಾಗಿ ಜೀವನ ಸಾಗಿಸುತ್ತಿದ್ದ. ಯಾವುದೇ ಆಮಿಷಕ್ಕೆ, ಅತಿಯಾದ ಆಸೆೆಗೆ ಒಳಗಾಗದೇ ಕಷ್ಟಪಟ್ಟು ದುಡಿಯುವುದೇ ಅವನ ನಿತ್ಯ ಕಾಯಕವಾಗಿತ್ತು.

ತನ್ನ ದಿನದ ಬಹುತೇಕ ಭಾಗವನ್ನು ಹೊಲ ಗದ್ದೆಗಳಲ್ಲಿ ಕಳೆಯುತ್ತಿದ್ದ. ಕೆಲವು ಜನರು ಅವನನ್ನು ಆಸೆಬುರುಕ ಎಂತಲೂ, ಲೋಭಿ ಎಂತಲೂ, ಮತಿಹೀನ ಎಂತಲೂ ಕರೆಯುತ್ತಿದ್ದರು. ಆದರೂ ಯಾರ ಮಾತಿಗೂ ಗಮನ ಕೊಡದೆ ತನ್ನ ಕಾಯಕವನ್ನು ತಪ್ಪದೇ ಮಾಡುತ್ತಿದ್ದ.

ರಾಮಯ್ಯನಿಗೆ ಕಮಲಾಕರ ಒಬ್ಬ ಮಗನಿದ್ದ. ಅವನು ಅಪ್ಪನ ವಿರುದ್ಧದ ಗುಣಗಳನ್ನು ಹೊಂದಿದ್ದ. ಹೊಲದಲ್ಲಿ ದುಡಿಯುವುದರಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ತಾನೊಬ್ಬ ದೊಡ್ಡ ವಿದ್ವಾಂಸನಾಗಿ ಮಾಹಾರಾಜರಿಂದ ಸನ್ಮಾನಿತನಾಗಬೇಕು ಎಂಬ ಬಯಕೆ ಅವನಲ್ಲಿ ಮೂಡಿತ್ತು . ಇದಕ್ಕಾಗಿ ಅಪ್ಪನೊಂದಿಗೆ ವಾಗ್ವಾದ ಮಾಡುತ್ತಿದ್ದ, ಹಣಕ್ಕಾಗಿ ತಂದೆಯನ್ನು ಪೀಡಿಸುತ್ತಿದ್ದ.

ಒಂದಿಷ್ಟು ವಿದ್ಯೆ ಕಲಿತು ದೊಡ್ಡ ದೊಡ್ಡ ವಿದ್ವಾಂಸರೆದುರು ಸೋತು ಮನೆಗೆ ಬರುತ್ತಿದ್ದ. ಆದರೂ ತನ್ನ ತಂದೆ ರಾಮಯ್ಯನಿಗೆ, ‘ನೋಡುತ್ತಿರು, ನಾನು ಒಂದಲ್ಲಾ ಒಂದು ದಿನ ಮಹಾರಾಜರಿಂದ ಸನ್ಮಾನಿತನಾಗುತ್ತೇನೆ. ಅದು ನಿನ್ನಿಂದ ಸಾಧ್ಯವಿಲ್ಲ. ನೀನೋ ಅನಕ್ಷರಸ್ಥ ರೈತ’ ಎಂದು ಹೀಯಾಳಿಸುತ್ತಿದ್ದ. ಹೀಗೆಲ್ಲಾ ಮಾತಬಾರದು ಎಂದು ರಾಮಯ್ಯ ಹೇಳುತ್ತಿದ್ದರೂ ಮಗ ಕೇಳುತ್ತಿರಲಿಲ್ಲ. ಆದ್ದರಿಂದ ರಾಮಯ್ಯ, ಮಗನ ಮಾತುಗಳನ್ನು ಮನಸ್ಸಿಗೆ ತೆಗೆದುಕೊಳ್ಳದೆ ತನ್ನ ಕಾಯಕದಲ್ಲಿ ಮಗ್ನನಾಗಿರುತ್ತಿದ್ದ.

ಒಂದು ದಿನ ಮಹಾರಾಜ ಮಾರುವೇಷದಲ್ಲಿ ರಾಜ್ಯದಲ್ಲಿ ಪ್ರವಾಸ ಮಾಡುವಾಗ ರಾಮಯ್ಯನ ಹೊಲದ ಬಳಿ ಬಂದ. ಸಮೃದ್ಧ ಫಸಲನ್ನು ಕಂಡು ಮಹಾರಾಜನಿಗೆ ಬಹಳ ಖುಷಿಯಾಯಿತು. ದೂರದಲ್ಲಿ ಕೆಲಸ ಮಾಡುತ್ತಿದ್ದ ರಾಮಯ್ಯನನ್ನು ಕರೆದು ಆತನ ಕಾಯಕದ ಬಗ್ಗೆ ವಿಚಾರಿಸಿದ ರಾಜ. ಆತ ರಾಜ ಎನ್ನುವುದನ್ನು ಅರಿಯದ ರಾಮಯ್ಯ ತನ್ನ ಕೆಲಸದ ಬಗ್ಗೆ ವಿವರಿಸಿದ. ಇದು ಮಹಾರಾಜನನ್ನು ತುಂಬಾ ಸೆಳೆಯಿತು.

ಮಾರುವೇಷದಲ್ಲಿದ್ದ ಮಹಾರಾಜ ರಾಮಯ್ಯನಿಗೆ, ‘ರಾಮಯ್ಯ , ನಿನ್ನ ಕರ್ತವ್ಯ, ಶ್ರಮ ಕಂಡು ನನಗೆ ತುಂಬಾ ಸಂತಸವಾಗಿದೆ. ನಾಳೆ ಅರಮನೆಗೆ ಬಾ. ನನ್ನ ಮಕ್ಕಳಿಗೂ ನಿನ್ನ ಶ್ರಮದ ಪರಿಚಯ ಮಾಡಿಕೊಡುವಂತೆ’ ಎಂದಾಗ ರಾಮಯ್ಯ, ‘ಬುದ್ದೀ... ನೀವು ಯಾರು ಅಂತ ಅರಮನೆಯಲ್ಲಿ ಕೇಳಲಿ?’ ಎಂದಾಗ, ಮಹಾರಾಜ ‘ಅರಮನೆಗೆ ಬಂದು, ನಾನೊಬ್ಬ ರೈತ. ರೈತರ ಮಹಾಸೇವಕನ್ನು ನೋಡಬೇಕಿದೆ ಎಂದು ಹೇಳಿದರೆ ಸಾಕು. ನನ್ನ ಬಳಿ ಕರೆದು ತರುತ್ತಾರೆ’ ಎಂದಾಗ ರಾಮಯ್ಯ ಆಗಲಿ ಎಂದು ಒಪ್ಪಿಕೊಂಡ.

ಮರುದಿನ ರಾಮಯ್ಯ ತಾನು ಮಹಾರಾಜರ ಅರಮನೆಗೆ ಹೋಗಬೇಕು ಎಂದು ಮಗನಿಗೆ ಹೇಳಿದಾಗ, ಮಗ ಕಮಲಾಕರ ಜೋರಾಗಿ ನಕ್ಕು, ‘ಯಾರೋ ನಿನಗೆ ಸುಳ್ಳು ಹೇಳಿರಬೇಕು. ನೀನೊಬ್ಬ ಬಡ ರೈತ. ಅಲ್ಲಿ ನಿನ್ನಿಂದಾಗುವ ಕೆಲಸವಾದರೂ ಏನಿದೆ?’ ಎಂದಾಗ ರಾಮಯ್ಯ ಮಗನ ಮಾತನ್ನು ಲೆಕ್ಕಿಸದೇ ನೇರವಾಗಿ ಅರಮನೆಗೆ ಹೋದ. ಭಟರು ರಾಮಯ್ಯನನ್ನು ವಿಚಾರಿಸಿ ಆತನನ್ನು ಮಹಾರಾಜರ ಬಳಿ ಕರೆದುಕೊಂಡು ಹೋದರು. ರಾಮಯ್ಯನಿಗೆ ಮಹಾರಾಜನನ್ನು ನೋಡಿ ನಿನ್ನೆ ಬಂದವ ಈತನೇ ಎಂದು ಅರಿತು ಮಾತೇ ಹೊರಡುವುದಿಲ್ಲ.

ಮಹಾರಾಜ, ರಾಮಯ್ಯನ ಕೃಷಿ ಸಾಧನೆಯನ್ನು ಸಭಿಕರಿಗೆಲ್ಲಾ ತಿಳಿಸಿ ಆತನನ್ನು ಸನ್ಮಾನಿಸುತ್ತಾನೆೆ. ಅಪ್ಪನಿಗೆ ಸನ್ಮಾನ ಮಾಡಿದ ವಿಷಯ ತಿಳಿದ ಕಮಲಾಕರನ ಅಹಂಕಾರವೆಲ್ಲಾ ಕರಗಿಹೋಗಿ ನಾಚಿಕೆಯಿಂದ ತಲೆತಗ್ಗಿಸುತ್ತಾನೆ. ‘ಸಾಧನೆಗೆ ವಿದ್ವಾಂಸನೇ ಆಗಬೇಕೆಂದಿಲ್ಲ. ಒಬ್ಬ ಸಾಮಾನ್ಯನಲ್ಲಿಯೂ ಸಾಧನೆಯ ಗುಣವಿದೆ. ಯಾರೂ ಮೇಲಲ್ಲ, ಯಾರೂ ಕೀಳಲ್ಲ’ ಎಂದಾಗ ಅಂದಿನಿಂದ ಕಮಲಾಕರನೂ ತಂದೆಯ ಸಾಧನೆಯ ಹಾದಿಯನ್ನು ಹಿಡಿಯುತ್ತಾನೆ.

| ವೆಂಕಟೇಶ ಚಾಗಿ ಈಚನಾಳ 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net