

‘ಅಮೆರಿಕ ಮೊದಲು’ ಎಂಬ ನೀತಿಯಡಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಂದರ ಹಿಂದೊಂದರಂತೆ ಉದ್ಧಟತನದ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ಇದಕ್ಕೆ ಹೊಸ ಸೇರ್ಪಡೆ ಎಚ್-1ಬಿ ವೀಸಾ ಶುಲ್ಕವನ್ನು 1 ಲಕ್ಷ ಡಾಲರ್ಗೆ ಅಂದರೆ ಸುಮಾರು -ಠಿ;88 ಲಕ್ಷಕ್ಕೆ ಹೆಚ್ಚಿಸಿರುವುದು. ಟ್ರಂಪ್ ಅಡಳಿತದ ಈ ನಿರ್ಧಾರ ಭಾರತ ಅದರಲ್ಲೂ ಮಾಹಿತಿ-ತಂತ್ರಜ್ಞಾನ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ.
2 ಸಾವಿರ ಡಾಲರ್ನಿಂದ 5 ಸಾವಿರ್ ಡಾಲರ್ವರೆಗೆ ಇದ್ದ ಎಚ್-1ಬಿ ಶುಲ್ಕವನ್ನು ದಿಢೀರನೆ 1 ಲಕ್ಷ ಡಾಲರ್ಗೆ ಹೆಚ್ಚಿಸಿರುವುದರಿಂದ ಅಮೆರಿಕಕ್ಕೆ ಹೋಗಿ ಭವಿಷ್ಯ ಕಟ್ಟಿಕೊಳ್ಳುವ ನಿರೀಕ್ಷೆಯಲ್ಲಿದ್ದ ಭಾರತೀಯ ಯುವಕ-ಯುವತಿಯರಿಗೆ ಆಘಾತವಾದಂತಾಗಿದೆ. ಈ ವೀಸಾ ಯೋಜನೆಯ ಅತಿ ಹೆಚ್ಚು ಫಲಾನುಭವಿಗಳು ಭಾರತೀಯ ಯುವಜನರೇ ಎಂಬುದು ಗಮನಾರ್ಹ. ಎಚ್-1ಬಿ ವೀಸಾ ಪಡೆದು, ಅಮೆರಿಕಕ್ಕೆ ತೆರಳಿ ಒಂದಿಷ್ಟು ವರ್ಷ ಕೆಲಸ ಮಾಡಿದ ಬಳಿಕ ಅಲ್ಲಿಯ ಪೌರತ್ವ ಪಡೆದು ನೆಲೆಸಿರುವವರ ಸಂಖ್ಯೆ ದೊಡ್ಡದಿದೆ. ಹೊಸದಾಗಿ ಎಚ್-1ಬಿ ವೀಸಾಗೆ ಅರ್ಜಿ ಸಲ್ಲಿಸುವವರಿಗೆ ಹೊಸ ಶುಲ್ಕ ಅನ್ವಯವಾಗಲಿದೆ. ಈ ವೀಸಾದಡಿ ಈಗ ಕೆಲಸ ಮಾಡುತ್ತಿರುವವರು ಹೊಸ ಶುಲ್ಕ ಪಾವತಿಸಬೇಕಿಲ್ಲ.
ಪ್ರತಿ ಆರ್ಥಿಕ ವರ್ಷದಲ್ಲಿ ಅಮೆರಿಕ ಸರಾಸರಿ 65 ಸಾವಿರದಷ್ಟು ಹೊಸ ಎಚ್-1ಬಿ ವೀಸಾಗಳನ್ನು ವಿತರಿಸುತ್ತಿದೆ (ವೀಸಾ ನವೀಕರಣದ ಹೊರತಾಗಿ). ಅಮೆರಿಕದಲ್ಲಿನ ಐಟಿ ಕಂಪನಿಗಳೇ ಟ್ರಂಪ್ರ ಈ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿವೆ. ಸುಂಕ ಸಮರದ ಬೆನ್ನಲ್ಲೇ ಟ್ರಂಪ್ ತಳೆದಿರುವ ನಿರ್ಧಾರ ಅಮೆರಿಕಕ್ಕೇ ಹೆಚ್ಚು ನಷ್ಟ ಉಂಟುಮಾಡಲಿದೆ. ಹೊರದೇಶಗಳ ಕೌಶಲಯುಕ್ತ ವೃತ್ತಿಪರರನ್ನು ನೇಮಿಸಿಕೊಳ್ಳುವ ಕಂಪನಿಗಳು ಎಚ್-1ಬಿ ವೀಸಾಗಾಗಿ ಅರ್ಜಿ ಸಲ್ಲಿಸುತ್ತವೆ.
ಶುಲ್ಕವನ್ನು ಆಯಾ ಕಂಪನಿಗಳೇ ಭರಿಸುತ್ತವೆ. 2023ರಲ್ಲಿ ಎಚ್-1ಬಿ ವೀಸಾಗಳಲ್ಲಿ ಶೇಕಡ 73ರಷ್ಟನ್ನು ಭಾರತೀಯರೇ ಪಡೆದಿದ್ದರು. ಚೀನಾ ನಾಗರಿಕರ ಪಾಲು ಶೇ.12. ಕಳೆದ ವರ್ಷದ ಏಪ್ರಿಲ್ನಿಂದ ಸೆಪ್ಟೆಂಬರ್ವರೆಗಿನ ಅವಧಿಯಲ್ಲಿ ಅಮೆರಿಕ ನೀಡಿರುವ ಎಚ್1ಬಿ ವೀಸಾಗಳ ಪೈಕಿ ಶೇಕಡ 20ರಷ್ಟು ವೀಸಾಗಳು ಭಾರತದ ಮಾಹಿತಿ ತಂತ್ರಜ್ಞಾನ ಕಂಪನಿಗಳಿಗೇ ದೊರೆತಿವೆ. ಒಟ್ಟು 1.3 ಲಕ್ಷ ವೀಸಾ ನೀಡಲಾಗಿದ್ದು, ಅದರಲ್ಲಿ 24,766 ವೀಸಾಗಳನ್ನು ಭಾರತದ ಕಂಪನಿಗಳು ಪಡೆದಿವೆ.
ಈಗ ಶುಲ್ಕ ಹೆಚ್ಚಳದಿಂದ ಕಂಪನಿಗಳಿಗೆ ಹೊರೆಯಾಗಲಿದ್ದು, ಅವು ಪರಿಣತಿ ಇರುವ ವ್ಯಕ್ತಿಗಳ ನೇಮಕವನ್ನೇ ಕಡಿಮೆ ಮಾಡಬಹುದು. ಹೊರದೇಶಗಳಿಂದಲೇ ಸಿಬ್ಬಂದಿಯ ಕಾರ್ಯಾಚರಣೆ ಹೆಚ್ಚಿಸಬಹುದು. ಹೀಗಾಗಿ ಪರಿಣತಿ ಹೊಂದಿದ ಸಿಬ್ಬಂದಿ ಇಲ್ಲದಿರುವುದರಿಂದ ಅಮೆರಿಕದ ಕಂಪನಿಗಳಿಗೆ, ಆ ಮೂಲಕ ಅಲ್ಲಿನ ಸರ್ಕಾರಕ್ಕೇ ನಷ್ಟ ಎಂಬ ಸರಳ ವಾಸ್ತವವನ್ನು ಶ್ವೇತಭವನದ ಅಧಿಕಾರಿಗಳು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎನ್ನುತ್ತಾರೆ ಮಾಹಿತಿ-ತಂತ್ರಜ್ಞಾನ ರಂಗದ ತಜ್ಞರು.
ಅಮೆರಿಕ ಸೃಷ್ಟಿಸಿರುವ ಈ ಸವಾಲನ್ನು ಭಾರತ ಅವಕಾಶವಾಗಿ ಮಾರ್ಪಡಿಸಿಕೊಳ್ಳಲು ಕೂಡ ಸಾಧ್ಯವಿದೆ. ಪ್ರತಿಭಾ ಪಲಾಯನದ ಪ್ರಮಾಣ ತಗ್ಗಲಿದ್ದು, ಮಾಹಿತಿ-ತಂತ್ರಜ್ಞಾನ ಮತ್ತು ಇತರ ರಂಗಗಳ ಪರಿಣತರಿಗೆ, ಯುವ ಪ್ರತಿಭೆಗಳಿಗೆ ಭಾರತದಲ್ಲೇ ಉತ್ತಮ ಅವಕಾಶ ಕಲ್ಪಿಸಿದರೆ ಹಲವು ಕ್ಷೇತ್ರಗಳಿಗೆ ಉತ್ತೇಜನ ದೊರಕಿದಂತಾಗುತ್ತದೆ. ಈ ನಡುವೆ, ಚೀನಾ ಕೂಡ ಪ್ರತಿಭೆಗಳನ್ನು ಸೆಳೆಯಲು ಹೊಸ ವೀಸಾ ನೀತಿ ಪ್ರಕಟಿಸಿದ್ದು, ಅದರ ಪರಿಣಾಮ ಮುಂದಿನ ದಿನಗಳಲ್ಲಿ ಸ್ಪಷ್ಟಗೊಳ್ಳಲಿದೆ. ಒಟ್ಟಾರೆ, ಅಮೆರಿಕ ತನ್ನದೇ ಪ್ರಮಾದ ಮತ್ತು ತಪು್ಪ ನಿರ್ಧಾರಗಳಿಂದ ಹಿಂದಡಿ ಇಡುತ್ತಿರುವುದು ದುರಂತ.