

ಬೀಜಿಂಗ್/ನವದೆಹಲಿ: ಸುಂಕ ಸಮರ ಸಾರಿ ವ್ಯಾಪಕ ಆಕ್ರೋಶಕ್ಕೆ ಒಳಗಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಸೆಣಸಲು ಒಂದು ಕೂಟ ರಚಿಸಲು ಮುಂದಾಗಿರುವ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್, ಭಾರತ ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅಲ್ಲದೆ ಜಗತ್ತಿನ ಅನೇಕ ದೇಶಗಳ ಮುಖಂಡರ ಸಭೆ ನಡೆಸಲು ಸಜ್ಜಾಗಿದ್ದಾರೆ. ಹೊಸ ವಿಶ್ವ ವ್ಯವಸ್ಥೆಯೊಂದು ಉದಯಿಸುತ್ತಿದೆ ಎಂಬುದನ್ನು ಅಮೆರಿಕದ ಮುಖಕ್ಕೆ ರಾಚುವಂತೆ ತೋರಿಸುವುದು ಇದರ ಉದ್ದೇಶವಾಗಿದೆ.
ದಕ್ಷಿಣಾರ್ಧ ಗೋಳ ಹೇಗೆ ಸೆಟೆದು ನಿಲ್ಲಲಿದೆ ಎಂದು ಈ ಸಭೆ ‘ದೊಡ್ಡಣ್ಣ’ನಿಗೆ ತೋರಿಸಲಿದೆ. ಮಧ್ಯ ಏಷ್ಯಾ, ಮಧ್ಯ ಪ್ರಾಚ್ಯ, ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾದ ಹಲವು ಮುಖಂಡರು ಶಾಂಘೈ ಸಹಕಾರ ಸಂಸ್ಥೆಯ (ಎಸ್ಸಿಒ) ಶೃಂಗಸಭೆಯಲ್ಲಿ ಭಾಗವಹಿಸಲು ಆಗಮಿಸಲಿದ್ದು ಶೖಂಗಕ್ಕೂ ಮುನ್ನ ಷಿ ಜಿನ್ಪಿಂಗ್ ಈ ನೇತಾರರ ಸಭೆಯೊಂದನ್ನು ಆಯೋಜಿಸಲಿದ್ದಾರೆ.
ಪ್ರಾದೇಶಿಕ ಭದ್ರತಾ ಸಂಸ್ಥೆ ಎಸ್ಸಿಒ ಶೃಂಗಸಭೆಯಲ್ಲಿ 20ಕ್ಕೂ ಅಧಿಕ ಜಾಗತಿಕ ನಾಯಕರು ಪಾಲ್ಗೊಳ್ಳಲಿದ್ದಾರೆ. ಅಮೆರಿಕ ನೇತೃತ್ವದ ಜಾಗತಿಕ ವ್ಯವಸ್ಥೆಯ ನಂತರದ ವ್ಯವಸ್ಥೆ ಹೇಗಿರಲಿದೆ ಎಂದು ತೋರಿಸುವುದು ಷಿ ಅವರ ಉದ್ದೇಶವಾಗಿದೆ. ಚೀನಾ, ಇರಾನ್, ರಷ್ಯಾ ಮತ್ತು ಭಾರತವನ್ನು ಬಗ್ಗುಬಡಿಯಲು ಜನವರಿಯಿಂದೀಚೆಗೆ ಶ್ವೇತ ಭವನ ನಡೆಸುತ್ತಿರುವ ಪ್ರಯತ್ನಗಳಿಂದ ಉದ್ದೇಶಿತ ಪರಿಣಾಮ ಆಗಿಲ್ಲ ಎಂದು ಸಾರುವುದೂ ಅವರ ಗುರಿಯಾಗಿದೆ ಎಂದು ಸಂಶೋಧನಾ ಸಂಸ್ಥೆ ಚೀನಾ ಗ್ಲೋಬಲ್ ಸೌತ್ ಪ್ರಾಜೆಕ್ಟ್ನ ಪ್ರಧಾನ ಸಂಪಾದಕ ಎರಿಕ್ ಒಲಾಂಡರ್ ಅಭಿಪ್ರಾಯ ಪಟ್ಟಿದ್ದಾರೆ.
ಶೃಂಗಸಭೆಯಲ್ಲಿ ಮೋದಿ ಭಾಗವಹಿಸಲಿದ್ದು ಏಳು ವರ್ಷದ ನಂತರ ಚೀನಾಕ್ಕೆ ಅವರ ಮೊದಲ ಭೇಟಿ ಇದಾಗಲಿದೆ. 2019ರಲ್ಲಿ ಕೊನೆಯ ಬಾರಿಗೆ ಅವರು ಚೀನಾ ಪ್ರವಾಸ ಕೈಗೊಂಡಿದ್ದರು. ಈ ಬಾರಿಯ ಅವರ ಭೇಟಿ, ಭಾರತ ಮತ್ತು ಚೀನಾ ನಡುವೆ ಹದಗೆಟ್ಟಿರುವ ಬಾಂಧವ್ಯವನ್ನು ಸುಧಾರಿಸಲು ಅಮೂಲ್ಯ ಅವಕಾಶವಾಗಲಿದೆ ಎಂದು ವಿಶ್ಲೇಷಿಸಲಾಗಿದೆ. 2020ರ ಗಾಲ್ವನ್ ಕಣಿವೆ ಘರ್ಷಣೆಯಿಂದ ಉದ್ಭವಿಸಿದ ಬಿಕ್ಕಟ್ಟನ್ನು ಬಗೆಹರಿಸಲು ಉಭಯ ದೇಶಗಳು ಪ್ರಯತ್ನಿಸುತ್ತಿರುವ ಹೊತ್ತಲ್ಲೇ ಮೋದಿ-ಜಿನ್ಪಿಂಗ್ ಮುಖಾಮುಖಿ ಭೇಟಿ ನಡೆಯಲಿದೆ. ಯೂಕ್ರೇನ್ ಮೇಲಿನ ಯುದ್ಧದಿಂದಾಗಿ ನಿಷೇಧಗಳನ್ನು ಎದುರಿಸುತ್ತಿರುವ ರಷ್ಯಾಕ್ಕೆ, ಅಮೆರಿಕ ವಿರುದ್ಧ ರಾಜತಾಂತ್ರಿಕ ಮೇಲುಗೈ ಪಡೆಯಲು ಕೂಡ ಇದೊಂದು ಸುಸಮಯವಾಗಲಿದೆ.
ಚೀನಾದಲ್ಲಿ ಮುಂದಿನ ವಾರ ನಡೆಯಲಿರುವ ಎಸ್ಸಿಒ ಶೃಂಗಸಭೆ ಹೊರಡಿಸುವ ಜಂಟಿ ಘೋಷಣೆಯು ಗಡಿಯಾಚೆಗಿನ ಭಯೋತ್ಪಾದನೆ ಸಹಿತ ಎಲ್ಲ ಬಗೆಯ ಭಯೋತ್ಪಾದನೆ ಕೃತ್ಯಗಳನ್ನು ಉಗ್ರವಾಗಿ ಖಂಡಿಸುವುದಕ್ಕೆ ಆದ್ಯತೆ ನೀಡಬೇಕೆಂದು ಭಾರತ ಮಂಗಳವಾರ ಪ್ರತಿಪಾದಿಸಿದೆ. ತಿಯಾನ್ಜಿನ್ ಘೋಷಣೆಯ ಕರಡಿನಲ್ಲಿ ಭಯೋತ್ಪಾದನೆಯನ್ನು ಖಂಡಿಸುವ ಅಂಶವಿರುವುದನ್ನು ಖಾತರಿಪಡಿಸಲು ಇತರ ಸದಸ್ಯರೊಂದಿಗೆ ಭಾರತ ಕೆಲಸ
ಮಾಡುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ತನ್ಮಯ್ ಲಾಲ್ ತಿಳಿಸಿದ್ದಾರೆ. ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಮತ್ತು ಸಚಿವಾಲಯ ವಕ್ತಾರ ರಣಧೀರ್ ಜೈಸ್ವಾಲ್ರೊಂದಿಗೆ ನಡೆದ ಜಂಟಿ ಮಾಧ್ಯಮ ಗೋಷ್ಠಿಯಲ್ಲಿ ಲಾಲ್ ಈ ವಿವರಣೆ ನೀಡಿದರು. ಪಾಕಿಸ್ತಾನ ಕೂಡ ಎಸ್ಸಿಒ ಸದಸ್ಯ ದೇಶವಾಗಿದ್ದು ತಿಯಾನ್ಜಿನ್ನಲ್ಲಿ ನಡೆಯುವ ಶೖಂಗಸಭೆಯಲ್ಲಿ ಭಾಗವಹಿಸಲಿದೆ.