ಹಂಚಿ ತಿನ್ನುವ ಬುದ್ಧಿ…: ಮನೋಲ್ಲಾಸ

Ladies
Published on
| ರೇಖಾ ಗಜಾನನ ಭಟ್

ರಾಘವ ಹಾಗೂ ವಿಶ್ರುತ ಎಂಬ ಸ್ನೇಹಿತರು ಸೇರಿ ಚಿಕ್ಕ ಹೊಟೇಲ್ ನಡೆಸುತ್ತಿದ್ದರು. ರಾತ್ರಿ ಗ್ರಾಹಕರೆಲ್ಲರ ಊಟ, ಉಪಾಹಾರದ ನಂತರ ಹೆಚ್ಚಿರುವ ಅಡುಗೆಯನ್ನು ಇಬ್ಬರೂ ಸಮಪಾಲು ಮಾಡಿ ತೆಗೆದುಕೊಂಡು ಹೋಗುತ್ತಿದ್ದರು. ಇಬ್ಬರದೂ ಅವಿಭಕ್ತ ಕುಟುಂಬವಾದ್ದರಿಂದ ಖರ್ಚುವೆಚ್ಚಗಳು ಸಾಕಷ್ಟಿತ್ತು. ಹೀಗಿರುವಾಗ ರಾಘವ ತನ್ನ ಮನೆಯ ಹಿರಿಯರ ಅಪೇಕ್ಷೆಯಂತೆ ಕುಟುಂಬಸಮೇತ ತೀರ್ಥಯಾತ್ರೆಗೆ ಹೋಗಬೇಕಾಗಿ ಬಂದಿತು. ಒಂದು ತಿಂಗಳ ಕಾಲ ಹೊಟೇಲ್ ಜವಾಬ್ದಾರಿಯನ್ನು ಸ್ನೇಹಿತನಿಗೆ ನಿಭಾಯಿಸಲು ಕೋರಿಕೊಂಡು ತೀರ್ಥಯಾತ್ರೆಗೆ ತೆರಳಿದ. ಯಾತ್ರೆ ಮುಗಿಸಿ ನಿಗದಿತ ಸಮಯಕ್ಕಿಂತ ಎರಡು ದಿನ ಮೊದಲೇ ಬಂದ ರಾಘವ ನೇರವಾಗಿ ಹೊಟೇಲಿಗೆ ತೆರಳಿದ. ಆಗ ರಾತ್ರಿ ಸಮಯ. ವಿಶ್ರುತ ಎಂದಿನಂತೆ ಉಳಿದ ಆಹಾರವನ್ನು ಸಮಪಾಲು ಮಾಡಿ ಎರಡು ಡಬ್ಬದಲ್ಲಿ ಹಾಕುತ್ತಿದ್ದ.

ರಾಘವ ಬಂದಿದ್ದನ್ನು ಗಮನಿಸಿದ ವಿಶ್ರುತ, ಗೆಳೆಯನ ಕುಶಲೋಪರಿ ವಿಚಾರಿಸುತ್ತ... ‘ನೋಡು ಇವತ್ತು ಉಳಿದ ಆಹಾರದಲ್ಲಿ ಭಾಗ ಮಾಡಿ ಇಟ್ಟಿದ್ದೇನೆ. ಇಷ್ಟು ದಿನ ನಿನ್ನ ಮನೆಯಲ್ಲಿ ನೀವ್ಯಾರೂ ಇರದ ಕಾರಣ ನಿಮ್ಮ ಪಾಲನ್ನು ಹೊರಗಡೆ ಬಿಡಾರ ಹಾಕಿಕೊಂಡಿರುವ ರಸ್ತೆ ಕೆಲಸದ ಕಾರ್ವಿುಕರಿಗೆ ನೀಡುತ್ತಿದ್ದೆ. ಇವತ್ತು ನೀವು ಬರುವುದು ತಿಳಿದಿಲ್ಲವಾದ್ದರಿಂದ ಅವರಿಗೇ ಕೊಡುತ್ತೇನೆಂದು ಹೇಳಿಬಿಟ್ಟಿದ್ದೇನೆ. ಆಗಬಹುದಾ..?’ ಎಂದು ಕೇಳಿದ.

‘ನಿಮ್ಮ ಮನೆಯಲ್ಲಿ ಬಹಳ ಜನರಿದ್ದೀರಿ. ನನ್ನ ಪಾಲನ್ನು ನೀನೇ ಒಯ್ದಿದ್ದರೆ ಅನುಕೂಲವಾಗುತ್ತಿತ್ತಲ್ಲವೇ..!?’ ಎಂದು ರಾಘವ ಕೇಳಿದಾಗ, ವಿಶ್ರುತ, ‘ಗೆಳೆಯಾ ನಿನ್ನ ಪಾಲನ್ನು ನಾನೇ ಒಯ್ದಾಗ ಮೊದಮೊದಲು ಅದು ನಿನ್ನ ಪಾಲು ಎನ್ನಿಸಬಹುದು. ನಂತರದ ದಿನಗಳಲ್ಲಿ ಅದು ಅಭ್ಯಾಸವಾಗಿ, ಕೊನೆಗೆ ನೀನು ಬಂದಾಗ ನಿನಗೆ ಕೊಡದೆ ಅದನ್ನು ನಾವೇ ಬಳಸಬೇಕು ಎನ್ನುವ ಸ್ವಾರ್ಥ ನಮ್ಮಲ್ಲಿ ಮೂಡಬಹುದು. ಮುಂದೆ ಈ ಹೊಟೇಲ್ ಕೂಡ ಪೂರ್ತಿ ನನಗೆ ಸೇರಬೇಕು ಎಂಬ ಅತಿಲೋಭ ನನ್ನಲ್ಲಿ ಉಂಟಾಗಬಹುದು. ಅದಕ್ಕಾಗಿ ನಾನು ನಿನ್ನ ಪಾಲನ್ನು ಮನೆಗೆ ಒಯ್ಯಲಿಲ್ಲ’ ಎಂದನು. ವಿಶ್ರುತನ ವಿಶಾಲ ಹೃದಯವಂತಿಕೆ ಮತ್ತು ಪ್ರಾಮಾಣಿಕತೆಯನ್ನು ಕಂಡ ರಾಘವ ‘ಇಂತಹ ಸ್ನೇಹಿತನ ಪಡೆದ ನಾನೇ ಧನ್ಯ’ ಎಂದು ಗೆಳೆಯನನ್ನು ಬಿಗಿದಪ್ಪಿದನು.

‘ಪಾಲಿಗೆ ಬಂದದ್ದು ಪಂಚಾಮೃತ’ ಎನ್ನುವುದು ಹಿರಿಯರ ಅನುಭವದ ಮಾತು. ನಮ್ಮ ಪಾಲಿಗೆ ಬಂದದ್ದನ್ನು ಮಾತ್ರ ತೃಪ್ತಿಯಿಂದ ಬಳಸುವುದನ್ನು ನಾವು ಕಲಿಯಬೇಕು. ಬೇರೆಯವರ ಸ್ವತ್ತನ್ನು ಬಳಸುತ್ತಿದ್ದರೂ ಅದು ನಮ್ಮದಲ್ಲ ಎನ್ನುವ ಸಂಗತಿ ಸದಾ ನೆನಪಿಡಬೇಕು. ಹೊರತಾಗಿ ಬೇರೆಯವರ ಸ್ವತ್ತನ್ನು ಸ್ವಂತ ಮಾಡಿಕೊಳ್ಳುವ ಆಸೆ ಮನಸ್ಸನ್ನು ಹೊಕ್ಕರೆ ಮುಂದೊಂದಿನ ನಮ್ಮ ಅವರ ಸಂಬಂಧವೇ ಹಾಳಾಗುತ್ತದೆ. ವಂಚಿಸಿ ಪಡೆದದ್ದು ಕ್ಷಣಿಕ ಗೆಲುವು ನೀಡಿದರೂ, ಆತ್ಮೋನ್ನತಿಗೆ ಕಾರಣವಾಗದು.

ಹಂಚಿ ತಿನ್ನಬೇಕು ನಾವು ನಮ್ಮವರೊಡನೆ ವಂಚಿಸಿ ಬದುಕಿದರೆ ನೆಮ್ಮದಿಯು ಎಲ್ಲಿ ಅಂಚಿಗೆ ತಳ್ಳುವಂತೆ ಪರವಸ್ತುಗಳನು ಕಡಲು ಮುಂಚೆ ನೀ ನೀಡಿಬಿಡು ಸೌಖ್ಯವಿದು ಮನಕೆ

(ಲೇಖಕರು ಶಿಕ್ಷಕರು, ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net