

ಅಪಘಾತಗಳು ದೈಹಿಕ ಗಾಯಗಳನ್ನಷ್ಟೇ ಮಾಡುವುದಿಲ್ಲ. ಮನಸ್ಸಿನ ಮೇಲೆ ಅಳಿಸಲಾಗದಂಥ ಗಾಯಗಳನ್ನು ಸೃಷ್ಟಿಸುತ್ತವೆ. ಆ ಕಹಿಘಟನೆ, ನೋವು, ಸೃಷ್ಟಿಸಿದ ತಲ್ಲಣವನ್ನು ಮರೆಯಬೇಕೆಂದರೂ ಮರೆಯಲು ಆಗುವುದಿಲ್ಲ. ಇದು ಆಘಾತವಾಗಿ ಕಾಡಿದಾಗ ಮಾನಸಿಕ ಸಮಸ್ಯೆಗಳು ಕಾಣಿಸಿಕೊಂಡು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ. ಇಂಥ ಸಂದರ್ಭದಲ್ಲಿ ಭಾವನತ್ಮಾಕ ಬೆಂಬಲದ ಜತೆಗೆ ಸೂಕ್ತ ಚಿಕಿತ್ಸೆಯನ್ನೂ ನೀಡಬೇಕಾಗುತ್ತದೆ. ಅಪಘಾತ ಅಥವಾ ಇತರ ಘಟನೆಗಳಿಂದ ಆಘಾತಗೊಂಡವರಿಗೆ ಮಾನಸಿಕ ಸ್ಥೈರ್ಯ ತುಂಬುವುದು ಅಗತ್ಯ.
ಅಂದು ಆತನನ್ನು ಮಾಧ್ಯಮದವರೆಲ್ಲ ‘ಮೃತ್ಯುಂಜಯ’ ಎಂದು ಕರೆದರು. ‘ಅದೃಷ್ಟವಂತ’ ಅಂತ ಹೊಗಳಿದರು. ಏಕೆಂದರೆ, 2025ರ ಜೂನ್ 12ರಂದು ಅಹಮದಾಬಾದ್ನಿಂದ ಲಂಡನ್ಗೆ ತೆರಳುತ್ತಿದ್ದ ಏರ್ ಇಂಡಿಯಾದ ಎಐ 171 ವಿಮಾನ ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ಪತನಗೊಂಡು 241 ಜನರು ದುರ್ಮರಣ ಹೊಂದಿದರೆ, ಪ್ರಯಾಣಿಕರ ಪೈಕಿ ಬದುಕುಳಿದ ಏಕೈಕ ವ್ಯಕ್ತಿ ವಿಶ್ವಾಸಕುಮಾರ್ ರಮೇಶ್ ಆಗಿದ್ದರು. ಅಪಘಾತ ನಡೆದ ಮರುದಿನ ಅಂದರೆ ಜೂನ್ 13ರಂದು ಪ್ರಧಾನಿ ನರೇಂದ್ರ ಮೋದಿ ಅಹಮದಾಬಾದ್ಗೆ ಭೇಟಿ ನೀಡಿ, ವಿಶ್ವಾಸಕುಮಾರ್ರನ್ನು ಮಾತನಾಡಿಸಿ, ಯೋಗಕ್ಷೇಮ ವಿಚಾರಿಸಿದ್ದರು.
ಭೀಕರ ವಿಮಾನ ದುರಂತದಲ್ಲಿ ವಿಶ್ವಾಸಕುಮಾರ್ ಪ್ರಾಣವೇನೋ ಉಳಿಯಿತು, ಆದರೆ ಬದುಕು! ಘಟನೆಯ ಆಘಾತದಿಂದ ಹೊರಬರಲಾಗದೆ ಜರ್ಜರಿತರಾಗಿದ್ದಾರೆ. ದೈಹಿಕ, ಮಾನಸಿಕ ಆಘಾತದಿಂದ ಹೊರಬರಲಾಗದೆ ಕೋಣೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಇದನ್ನು ಅಪಘಾತದ ನಂತರ ಉಂಟಾಗುವ ಮಾನಸಿಕ ಆಘಾತ ಅಂದರೆ ಪೋಸ್ಟ್ ಟ್ರ್ಯಮಾಟಿಕ್ ಸ್ಟ್ರೆಸ್ ಡಿಸಾರ್ಡರ್ (ಪಿಟಿಎಸ್ಡಿ) ಎಂದು ಕರೆಯುತ್ತಾರೆ. ಇತ್ತ ಬದುಕಲೂ ಆಗದೆ, ಅತ್ತ ಸಾಯಲೂ ಆಗದೆ ವ್ಯಕ್ತಿಯನ್ನು ತಲ್ಲಣಗೊಳಿಸುವ ಪಿಟಿಎಸ್ಡಿ ಅನೇಕ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಅಪಘಾತ ಮಾತ್ರವಲ್ಲ ಕೌಟುಂಬಿಕ ಹಿಂಸಾಚಾರ, ಲೈಂಗಿಕ ದೌರ್ಜನ್ಯ, ಕುಟುಂಬ ಸದಸ್ಯರ ಅನಿರೀಕ್ಷಿತ ಸಾವು ಇಂಥ ಸಂದರ್ಭಗಳಲ್ಲೂ ಈ ಬಗೆಯ ಮಾನಸಿಕ ವ್ಯಥೆ ಆವರಿಸಿಕೊಳ್ಳುತ್ತದೆ.
ಭಾರತ ಮೂಲದ ಬ್ರಿಟಿಷ್ ಪ್ರಜೆಯಾಗಿರುವ 39 ವರ್ಷದ ವಿಶ್ವಾಸ್ ವಿಮಾನ ಅಪಘಾತದಲ್ಲಿ ಸಹೋದರ ಅಜಯ್ನನ್ನೂ ಕಳೆದುಕೊಂಡಿದ್ದಾರೆ. ಪ್ರಸ್ತುತ ದೈಹಿಕ ಮತ್ತು ಮಾನಸಿಕ ಆಘಾತದಿಂದ ಬಳಲುತ್ತಿದ್ದು, ಕುಟುಂಬದ ದೈನಂದಿನ ಅಗತ್ಯಗಳನ್ನು ಪೂರೈಸಲು ಹೆಣಗಾಡುತ್ತಿರುವುದಾಗಿ ಅಳಲು ತೋಡಿಕೊಂಡಿದ್ದಾರೆ. ವಿಶ್ವಾಸ್ ಅವರಿಗೆ ಪತ್ನಿ ಮತ್ತು ನಾಲ್ಕು ವರ್ಷದ ಮಗುವಿದೆ.
ಭೀಕರ ವಿಮಾನ ದುರಂತದಲ್ಲಿ ಪ್ರಾಣಾಪಾಯದಿಂದ ಪಾರಾದರೂ, ಹಲವು ಗಾಯಗಳನ್ನು ಅನುಭವಿಸಿದ ವಿಶ್ವಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕಳೆದು ತಿಂಗಳಷ್ಟೇ ಇಂಗ್ಲೆಂಡ್ನ ಈಸ್ಟ್ ಮಿಡ್ಲ್ಯಾಂಡ್ಸ್ ಪ್ರದೇಶದ ಲೀಸೆಸ್ಟರ್ನಲ್ಲಿರುವ ತಮ್ಮ ಮನೆಗೆ ಮರಳಿದ್ದಾರೆ. ಆದರೆ, ಯಾವುದೂ ಮೊದಲಿನಂತಿಲ್ಲ. ದುರಂತದ ಕಹಿನೆನಪುಗಳು, ಸಹೋದರ ಸೇರಿ ಸಹಪ್ರಯಾಣಿಕರೆಲ್ಲ ಪ್ರಾಣ ಕಳೆದುಕೊಂಡಿದ್ದು, ಹಾಸ್ಟೇಲ್ಗೆ ನುಗ್ಗಿದ ವಿಮಾನ ಅಲ್ಲಿನ ವೈದ್ಯಕೀಯ ವಿದ್ಯಾರ್ಥಿಗಳನ್ನು ಬಲಿ ಪಡೆದಿದ್ದು, ಕುಟುಂಬದವರ ನೋವು, ದೈಹಿಕ ಆಯಾಸ, ಆರ್ಥಿಕ ನಷ್ಟ... ಹೀಗೆ ಎಲ್ಲವೂ ಮತ್ತೆ ಮತ್ತೆ ಕಾಡುತ್ತ ನರಳುವಂತೆ ಮಾಡಿವೆ. ‘ಪೋಸ್ಟ್ ಟ್ರ್ಯಮಾಟಿಕ್ ಸ್ಟ್ರೆಸ್ ಡಿಸಾರ್ಡರ್ (ಪಿಟಿಎಸ್ಡಿ)ನಿಂದ ಬಳಲುತ್ತಿದ್ದು, ಸೂಕ್ತ ಚಿಕಿತ್ಸೆ ಪಡೆಯಲು ಹೆಣಗಾಡುತ್ತಿದ್ದೇನೆ’ ಎಂದು ವಿಶ್ವಾಸ್ ಹೇಳಿಕೊಂಡಿದ್ದಾರೆ. ವಿಶ್ವಾಸ್ ಅವರ ಪರಿಸ್ಥಿತಿಯ ಬಗ್ಗೆ ಮತ್ತು ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಂಬಧಿತ ಸಂಸ್ಥೆಗಳ ಗಮನ ಸೆಳೆಯುವ ನಿಟ್ಟಿನಲ್ಲಿ ಲೀಸೆಸ್ಟರ್ ಕಮ್ಯೂನಿಟಿ ಗ್ರೂಪ್ ಇತ್ತೀಚೆಗೆ ಮಾಧ್ಯಮ ಸಂದರ್ಶನವನ್ನು ಏರ್ಪಡಿಸಿತ್ತು. ‘ಮಾನಸಿಕವಾಗಿ ನಾನು ಸಂಪೂರ್ಣ ಛಿದ್ರನಾಗಿದ್ದೇನೆ. ಇದು ತುಂಬ ನೋವಿನ ಸಂಗತಿ. ನನ್ನ ಪತ್ನಿ ಮನೆಯನ್ನು ನಿಭಾಯಿಸುತ್ತಿದ್ದು, ಇಡೀ ದಿನ ಕೋಣೆಯಲ್ಲಿ ಕಳೆಯುತ್ತಿದ್ದೇನೆ’ ಎಂದು ವಿಶ್ವಾಸ್ ಸಂಕಷ್ಟ ತೋಡಿಕೊಂಡಿದ್ದಾರೆ.
ಅಂದು ಜೂನ್ 12ರ ಮಧ್ಯಾಹ್ನ. ಅಹಮದಾಬಾದ್ನಿಂದ ಲಂಡನ್ಗೆ ತೆರಳುತ್ತಿದ್ದ ಬೋಯಿಂಗ್ನ 787-8 ಡ್ರೀಮ್ೈನರ್ ವಿಮಾನವು ಟೇಕಾಫ್ ಆದ ಕೆಲ ಕ್ಷಣಗಳಲ್ಲೇ ಪತನವಾಗಿತ್ತು. ಭೀಕರ ವಿಮಾನಪತನ ಪ್ರಕರಣದಲ್ಲಿ 242 ಮಂದಿ ಪೈಕಿ ಅಚ್ಚರಿಯ ರೀತಿಯಲ್ಲಿ ವಿಶ್ವಾಸಕುಮಾರ್ ರಮೇಶ್ ಬದುಕುಳಿದರು. ಇವರು ದುರಂತಕ್ಕೀಡಾದ ವಿಮಾನದಲ್ಲಿನ 11ಎ ಸೀಟ್ನ ಪ್ರಯಾಣಿಕರಾಗಿದ್ದರು. ಇವರೊಂದಿಗೆ ಪ್ರಯಾಣಿಸಿದ್ದ ಸಹೋದರ 11ಜೆ ಸೀಟ್ನಲ್ಲಿದ್ದು, ದುರದೃಷ್ಟವಶಾತ್ ಸಾವಿಗೀಡಾದರು. ‘ಪ್ರಧಾನಿಯವರು ಬಂದು ಏನಾಯಿತು ಎಂದು ಕೇಳಿದರು. ನಾನು ಹೇಗೆ ಬದುಕಿದೆ ಎಂದು ನನಗೇ ಗೊತ್ತಿಲ್ಲ, ಎಲ್ಲವೂ ಅಷ್ಟೊಂದು ವೇಗವಾಗಿ ನಡೆದುಹೋದವು ಎಂದೆ’ ಎಂದು ವಿಶ್ವಾಸ್ ಪ್ರತಿಕ್ರಿಯಿಸಿದ್ದರು.
ಶೀಘ್ರದಲ್ಲೇ ವಿಶ್ವಾಸ್ ಅವರನ್ನು ಮತ್ತು ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ, ಅಗತ್ಯ ಸಹಾಯ ನೀಡುವುದಾಗಿ ಏರ್ ಇಂಡಿಯಾ ಸಂಸ್ಥೆ ಭರವಸೆ ನೀಡಿದೆ.
ಆರೋಗ್ಯ ಕೊಂಚ ಸುಧಾರಿಸಿದ ಮೇಲೆ ವಿಶ್ವಾಸ್ ಕುಟುಂಬಸಮೇತ ತಮ್ಮ ತವರು ದೀವ್ಗೆ ಬಂದು ನೆಲೆಸಲು ನಿರ್ಧರಿಸಿದ್ದಾರೆ.
ತಜ್ಞರು ನೀಡಿದ ಸಲಹೆಗಳು...
1.ಪೋಸ್ಟ್ ಟ್ರ್ಯಮಾಟಿಕ್ ಸ್ಟ್ರೆಸ್ ಡಿಸಾರ್ಡರ್ನಿಂದ (ಪಿಟಿಎಸ್ಡಿ) ಬಳಲುತ್ತಿರುವವರಿಗೆ ಆಧಾರ ಬೇಕು. ಕೆಲವರು ಕುಟುಂಬದವರ ಬೆಂಬಲ ಮತ್ತು ಸೂಕ್ತ ಚಿಕಿತ್ಸೆಯಿಂದ ಬೇಗ ಚೇತರಿಸಿಕೊಳ್ಳುತ್ತಾರೆ. ಆದರೆ, ಮನಸ್ಸಿಗೆ ಆಳವಾದ ಆಘಾತವಾಗಿದ್ದರೆ ಗುಣಮುಖರಾಗಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ.
2.ಪಿಟಿಎಸ್ಡಿಯಿಂದ ಬಳಲುತ್ತಿರುವವರು ಸಾಧ್ಯವಾದಷ್ಟು ಒಂಟಿಯಾಗಿ ಇರಬಾರದು. ಕುಟುಂಬದ ಸದಸ್ಯರೊಂದಿಗೆ, ಆಪ್ತರೊಂದಿಗೆ, ಸ್ನೇಹಿತರೊಂದಿಗೆ ಹೆಚ್ಚಿನ ಸಮಯ ಕಳೆಯಬೇಕು. ಒಂಟಿತನ ಆಲೋಚನೆಗಳನ್ನು ಹೆಚ್ಚಿಸುವುದಲ್ಲದೆ, ಹಳೆಯ ಕಹಿ ನೆನಪುಗಳನ್ನು ಮರುಕಳಿಸುವಂತೆ ಮಾಡುತ್ತದೆ.
3.ವಾಸ್ತವವನ್ನು ನಿಧಾನವಾಗಿಯಾದರೂ ಒಪ್ಪಿಕೊಳ್ಳಬೇಕು. ಆಗಿ ಹೋಗಿರುವುದನ್ನು ಬದಲಾಯಿಸಲು ಸಾಧ್ಯವಿಲ್ಲ ಎಂಬ ವಾಸ್ತವ ಸಂಗತಿಯನ್ನು ಮನಸ್ಸಿಗೆ ಅರ್ಥ ಮಾಡಿಸಲು ಯತ್ನಿಸಬೇಕು.
4.ಮಾನಸಿಕ ತಜ್ಞರನ್ನು, ಆಪ್ತಸಮಾಲೋಚಕರನ್ನು ಕೂಡಲೇ ಭೇಟಿ ಮಾಡಿ, ಅವರು ಸೂಚಿಸಿದ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು.
5.ಇಂಥ ವ್ಯಕ್ತಿಗಳು ಬೇಗ ಗುಣಮುಖರಾಗಬೇಕಾದರೆ ಅವರ ಕುಟುಂಬ ಸದಸ್ಯರ ಸಹಕಾರವೂ ಅಷ್ಟೇ ಮುಖ್ಯವಾಗಿರುತ್ತದೆ. ಯಾವಾಗಲೂ ದುಃಖ ಅಥವಾ ಬೇಜಾರಿನಲ್ಲಿ ಇರುತ್ತಾನೆ/ಳೆ ಎಂದ ಮಾತ್ರಕ್ಕೆ ಒಂಟಿಯಾಗಿ ಬಿಡಬಾರದು, ಅವರ ಬಗ್ಗೆ ಅಸಡ್ಡೆ ತೋರಬಾರದು.
ವಿಶ್ವಾಸ್ ಪರಿಸ್ಥಿತಿಯನ್ನು ಅರಿತು ಹಲವರು ಅವರ ಬೆಂಬಲಕ್ಕೆ ಬಂದಿದ್ದಾರೆ. ಬ್ರಿಟನ್ ಮೂಲದ ನಿವೃತ್ತ ವಕೀಲ ರಾಡ್ ಸಿಗರ್ ಅವರು ವಿಶ್ವಾಸ್ಗೆ ಬೆಂಬಲಕ್ಕೆ ನಿಂತಿದ್ದು, ಅವರ ಕುಟಂಬವನ್ನು ಭೇಟಿ ಮಾಡಿ ಪರಿಸ್ಥಿತಿಯ ಗಂಭೀರತೆ ಅರಿಯುವಂತೆ ಏರ್ ಇಂಡಿಯಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಕ್ಯಾಂಪ್ಬೆಲ್ ವಿಲ್ಸನ್ ಅವರಿಗೆ ಮನವಿ ಮಾಡಿದ್ದಾರೆ. ‘ನಿಮ್ಮ ಸಂಸ್ಥೆ (ಏರ್ ಇಂಡಿಯಾ) ನೀಡುವ ಮಧ್ಯಂತರ ಪರಿಹಾರವು ಅವರ ಕುಟುಂಬದ ದೈನಂದಿನ ಅಗತ್ಯಗಳನ್ನು ಪೂರೈಸಲು ಸಾಕಾಗುವುದಿಲ್ಲ’ ಎಂದು ತಿಳಿಸಿದ್ದಾರೆ.
ರಾತ್ರಿ ನಿದ್ದೆ ಮಾಡಲು ಆಗುವುದಿಲ್ಲ. ಭಯಭೀತನಾಗಿ ಹಲವು ಬಾರಿ ಎಚ್ಚರಗೊಳ್ಳುತ್ತೇನೆ. ನಾನು ಪೋಸ್ಟ್ ಟ್ರ್ಯಮಾಟಿಕ್ ಸ್ಟ್ರೆಸ್ ಡಿಸಾರ್ಡರ್ನಿಂದ (ಪಿಟಿಎಸ್ಡಿ) ಬಳಲುತ್ತಿದ್ದೇನೆ. ಅಪಘಾತ ನಂತರದ ಸಮಯ ನನಗೆ ಮತ್ತು ಕುಟುಂಬದ ಪಾಲಿಗೆ ಯಾತನಾಮಯವಾಗಿದೆ. ನಡೆಯಲು ಕಷ್ಟವಾಗುತ್ತಿದೆ. ಕಾಲು, ಕೈ, ಬೆನ್ನು, ಭುಜ ನೋವಿನ ಕಾರಣ ಕೆಲಸ ಮಾಡಲು ಆಗುತ್ತಿಲ್ಲ. ವಾಹನ ಓಡಿಸಲು ಸಾಧ್ಯವಾಗುತ್ತಿಲ್ಲ. ಈಗಿನ ಸ್ಥಿತಿ ನೋಡಿದರೆ ಮುಂದಿನ ಕೆಲ ವರ್ಷ ನನ್ನಿಂದ ಕೆಲಸ ಮಾಡಲು ಸಾಧ್ಯವೇ ಇಲ್ಲ. ನನ್ನ ಸಹೋದರ ನನಗೆ ಎಲ್ಲ ರೀತಿಯಿಂದಲೂ ಬೆಂಬಲ ನೀಡಿದ್ದ. ಅವನ ಅಗಲುವಿಕೆ ದೊಡ್ಡ ಶೂನ್ಯವನ್ನೇ ಸೃಷ್ಟಿಸಿದೆ. ಅಮ್ಮ ಅಂತೂ ಕಳೆದ ನಾಲ್ಕು ತಿಂಗಳಿಂದ ಬಾಗಿಲಿನ ಹೊರಗಡೆ ಒಬ್ಬಳೇ ಕುಳಿತಿರುತ್ತಾರೆ. ಯಾರೊಡನೆಯೂ ಆಕೆ ಮಾತನಾಡುತ್ತಿಲ್ಲ.| ವಿಶ್ವಾಸಕುಮಾರ್ ರಮೇಶ್ ವಿಮಾನ ದುರಂತದಲ್ಲಿ ಬದುಕುಳಿದ ವ್ಯಕ್ತಿವಿಶ್ವಾಸ್ ಅವರನ್ನು ಬಿಟ್ಟು ವಿಮಾನದಲ್ಲಿದ್ದ ಪ್ರಯಾಣಿಕರು, ವಿಮಾನ ಸಿಬ್ಬಂದಿ ಸೇರಿ ಎಲ್ಲರೂ ಮೃತಪಟ್ಟರು. ವಿಶ್ವಾಸ್ ಮಾನಸಿಕವಾಗಿ ಏನನ್ನು ಎದುರಿಸುತ್ತಿದ್ದಾರೆಂದು ನಾವು ಅರ್ಥಮಾಡಿಕೊಳ್ಳುವುದು ಅಸಾಧ್ಯ. ಅವರಿಗೆ ಮಾನಸಿಕ ತಜ್ಞರ ಸಹಾಯದ ಅಗತ್ಯವಿದೆ. ದಿಯುವಿನಲ್ಲಿ ವಿಶ್ವಾಸ್ ಅವರ ಕುಟುಂಬ ನಡೆಸುತ್ತಿದ್ದ ಮೀನುಗಾರಿಕೆ ವ್ಯವಹಾರವು ಜೂನ್ ದುರಂತದ ನಂತರ ನಷ್ಟದ ಹಾದಿ ಹಿಡಿದಿದೆ. ಮಾನಸಿಕವಾಗಿ ಅವರು ಕುಗ್ಗಿ ಹೋಗಿದ್ದಾರೆ.| ರಾಡ್ ಸಿಗರ್ ಬ್ರಿಟನ್ ಮೂಲದ ನಿವೃತ್ತ ವಕೀಲ