ವಿವೇಚನೆಯಿಂದಲೇ ಬಂಡವಾಳ ಸುಭದ್ರ; ಷೇರು ಮಾರುಕಟ್ಟೆಯಲ್ಲಿ ಲಾಭಾಂಶವೊಂದೇ ಗುರಿಯಾಗಲಿ..: ಷೇರುಪೇಟೆ ತಜ್ಞ ಕೆ.ಜಿ.ಕೃಪಾಲ್

Clubhouse Share 1
Published on
ಅನೇಕ ವರ್ಷಗಳಿಂದ ಆರ್ಥಿಕತೆಯ ಭಾಗವೇ ಆಗಿದ್ದರೂ ಅತಿ ಹೆಚ್ಚು ಪ್ರಮಾಣದ ಕುತೂಹಲ ಕಾಯ್ದುಕೊಂಡಿರುವುದು ಷೇರುಪೇಟೆ. ಎಷ್ಟೇ ತಿಳಿದರೂ ಮತ್ತಷ್ಟು ವ್ಯಾಪ್ತಿ ಹೆಚ್ಚುತ್ತಿರುವ ಹಾಗೂ ಅಷ್ಟೇ ವೇಗದಲ್ಲಿ ತಂತ್ರಜ್ಞಾನದ ಬೆಳವಣಿಗೆ, ಎಲ್ಲಕ್ಕೂ ಮಿಗಿಲಾಗಿ ಅಲ್ಲಿ ಆಗಿಂದಾಗ್ಗೆ ನಡೆಯುವ ವಂಚನೆಗಳೂ ಇದಕ್ಕೆ ಕಾರಣ. ಈಗಷ್ಟೇ ಷೇರುಪೇಟೆಗೆ ಹೆಜ್ಜೆ ಇಡುತ್ತಿರುವವರಿಂದ, ಅದಾಗಲೇ ಹೂಡಿಕೆ ಮಾಡಿ ನಡುವೆ ಸಿಲುಕಿಕೊಂಡಿರುವವರೆಗೂ ಅನೇಕರಲ್ಲಿ ಪ್ರಶ್ನೆಗಳಿದ್ದೇ ಇರುತ್ತವೆ. ಸದ್ಯ ಷೇರುಪೇಟೆ 60 ಸಾವಿರದ ಆಸುಪಾಸಿನಲ್ಲಿ ಸಾರ್ವಕಾಲಿಕ ಹಂತ ತಲುಪಿದ್ದು, ಷೇರುಪೇಟೆ ಕುರಿತು ಅನೇಕ ಅನುಮಾನ, ಪ್ರಶ್ನೆಗಳಿಗೆ ಷೇರುಪೇಟೆ ತಜ್ಞ ಕೆ.ಜಿ.ಕೃಪಾಲ್ ಅವರು ‘ವಿಜಯವಾಣಿ’ ಮತ್ತು ‘ದಿಗ್ವಿಜಯ 24*7 ನ್ಯೂಸ್’ ಕ್ಲಬ್​ಹೌಸ್ ಸಂವಾದದಲ್ಲಿ ಉತ್ತರ ನೀಡಿದ್ದಾರೆ.

ಸಮಾನ ಲಾಭ ಗಳಿಕೆ

ಷೇರುಪೇಟೆ ಪ್ರವೇಶ, ಹೂಡಿಕೆ ವಿಧದಲ್ಲಿ ಕಾಲಾಂತರದಲ್ಲಿ ಯಾವುದೇ ಬದಲಾವಣೆ ಬಂದರೂ, ಹೂಡಿಕೆ ಸುಭದ್ರವಾಗಿ ಬೆಳೆದು ಆದಾಯ ಗಳಿಸಬೇಕೆಂಬ ಉದ್ದೇಶ ಎಲ್ಲ ಸಮಯಕ್ಕೂ ಸಮಾನವಾದದ್ದು. ಅಷ್ಟು ಶೀಘ್ರವಾಗಿ ಏರಿಳಿತ ಕಾಣುವ ಸೂಚ್ಯಂಕ ಇದೀಗ 60 ಸಾವಿರ ದಾಟಿದೆ. ಮುಂದೆ ಹೀಗಾಗುತ್ತದೆ, ಹಾಗಾಗುತ್ತದೆ ಎಂದುಕೊಂಡು ನಾವು ಹೂಡಿಕೆ ಮಾಡುತ್ತೇವೆ. ಆದರೆ ಮಾರುಕಟ್ಟೆಯೇ ರಾಜ, ನಾವು ಅದಕ್ಕೆ ಅನುಗುಣವಾಗಿ ನಡೆಯಬೇಕು ಎಂಬುದನ್ನು ತಿಳಿಯಬೇಕು. ನಾವೇ ನಿಯಂತ್ರಿಸುತ್ತೇವೆ ಎಂದರೆ ಸಾಧ್ಯವಿಲ್ಲ. ಹೂಡಿಕೆಯನ್ನು ಸಂರಕ್ಷಿಸಿಕೊಳ್ಳಲು ಸರ್ಕಾರ, ನಿಯಂತ್ರಕರು ಏನೇ ಕ್ರಮ ಕೈಗೊಂಡರೂ ಹೆಚ್ಚಿನ ಹೊಣೆ ಹೂಡಿಕೆದಾರರ ಮೇಲೆಯೇ ಇರುತ್ತದೆ. ಹೂಡಿಕೆ ಸಲಹೆಗಾರರಿಂದ ಸೂಕ್ತ ಮಾರ್ಗದರ್ಶನ ಹಾಗೂ ಹಾಸಿಗೆ ಇದ್ದಷ್ಟು ಮಾತ್ರ ಕಾಲುಚಾಚು ಎಂಬ ಸೂತ್ರವನ್ನು ಅನುಸರಿಸಬೇಕು. ಉತ್ತಮ ಗುಣಮಟ್ಟದ ಕಂಪನಿಗಳ ಮೇಲೆ ಹೂಡಿಕೆ ಮಾಡುವುದರಿಂದ ನಿಮ್ಮ ಆರ್ಥಿಕ ಹಾಗೂ ದೈಹಿಕ, ಮಾನಸಿಕ ಆರೋಗ್ಯವೂ ಚೆನ್ನಾಗಿರುತ್ತದೆ. ನಾವು ‘ಮನಿ’ ವಿಕಾಸಕ್ಕೆ ಆದ್ಯತೆ ನೀಡುತ್ತಿದ್ದೇವೆ. ಅಷ್ಟೇ ಪ್ರಮಾಣದಲ್ಲಿ ಮನೋವಿಕಾಸಕ್ಕೆ ಆದ್ಯತೆ ನೀಡಿದರೆ ಮನಿ ವಿಕಾಸವೂ ಜತೆಗೇ ಆಗುತ್ತದೆ.

ಈ ಪ್ರಮಾಣದ ಜಿಗಿತಕ್ಕೆ ಕಾರಣ ಏನು?

ಕರೊನಾ ಮೊದಲ ಅಲೆ ಸಮಯದಲ್ಲಿ ಬಹಳಷ್ಟು ಜನ ಹೆದರಿದ್ದರೂ ಷೇರುಪೇಟೆ ವಹಿವಾಟು ನಡೆಯುತ್ತಲೇ ಇತ್ತು. 2020ರ ಜುಲೈನಲ್ಲಿ ಷೇರುಪೇಟೆಯಲ್ಲಿ 5.2 ಕೋಟಿ ನೋಂದಾಯಿತ ಗ್ರಾಹಕರಿದ್ದರು. ಈಗ ಅದು 8.18 ಕೋಟಿಯಷ್ಟಾಗಿದೆ. ಸರ್ಕಾರಿ ಯೋಜನೆಗಳ ಮೂಲಕ ಪೇಟೆಯಲ್ಲಿ ಹರಿಯುವ ಹಣವು ಹೆಚ್ಚಿರುವ ಕಾರಣ ಷೇರು ಬೇಡಿಕೆ ಹೆಚ್ಚಾಗಿದೆ. ಕಾಪೋರೇಟ್ ಚಟುವಟಿಕೆ, ವಿದೇಶಿ ವಿತ್ತೀಯ ಸಂಸ್ಥೆಯ ಒಳಹರಿವು ಹೆಚ್ಚಾಗಿರುವುದು ಷೇರು ಬೆಲೆ ಹೆಚ್ಚಲು ಕಾರಣ. ಇದೆಲ್ಲಕ್ಕಿಂತ ಮುಖ್ಯವಾಗಿ, ಹೊಸ ಸಂಸ್ಥೆಗಳು ತಮ್ಮನ್ನು ಷೇರು ಮಾರುಕಟ್ಟೆಯಲ್ಲಿ ನೋಂದಣಿ ಮಾಡಿಕೊಂಡು ಐಪಿಒ ಬಿಡುಗಡೆ ಮಾಡಿದ್ದರಿಂದ ಸಾಕಷ್ಟು ಚಟುವಟಿಕೆ, ಗಾತ್ರ ಹೆಚ್ಚಿದೆ. ಇದೆಲ್ಲದರಿಂದಾಗಿ ಷೇರುಪೇಟೆಯ ಮಾರುಕಟ್ಟೆ ಪಾಲು 2020ರ ಜುಲೈನಲ್ಲಿ 147 ಲಕ್ಷ ಕೋಟಿ ರೂ. ಇದ್ದದ್ದು ಈಗ 264 ಲಕ್ಷ ಕೋಟಿ ರೂ. ಆಗಿದೆ.

30 ಕಂಪನಿಗಳ ಮೇಲೆ ಕಣ್ಣಿರಲಿ

ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ನೋಂದಣಿಯಾಗಿರುವ 4700ಕ್ಕೂ ಹೆಚ್ಚು ಕಂಪನಿಗಳಲ್ಲಿ 30 ಸುಭದ್ರ ಕಂಪನಿಗಳು ಮಾತ್ರ ಸೆನ್ಸೆಕ್ಸ್​ನಲ್ಲಿ ಏರಿಳಿತಕ್ಕೆ ಪ್ರಮುಖ ಕಾರಣವಾಗಿವೆ. ದೊಡ್ಡ ಕಂಪನಿಗಳ ಷೇರುಗಳು ಗರಿಷ್ಠ ಮಟ್ಟ ಮುಟ್ಟಿರುವುದೂ ಈಗಿನ ಸೂಚ್ಯಂಕ ಏರಿಕೆಗೆ ಒಂದು ಕಾರಣ. ಇವುಗಳ ಜತೆಗೆ ಇತ್ತೀಚೆಗೆ ಮಧ್ಯಮ ಮತ್ತು ಕೆಳ ಮಧ್ಯಮ ಕಂಪನಿಗಳು ಚಟುವಟಿಕೆ ಹೆಚ್ಚಿಸಿಕೊಂಡಿರುವುದು ಏರಿಕೆಗೆ ಕಾರಣವಾಗಿದೆ. ಮಧ್ಯಮ ಮತ್ತು ಕೆಳ ಮಧ್ಯಮ ಕಂಪನಿಗಳಲ್ಲಿ ಹೂಡಿಕೆ ಮಾಡುವಾಗ ಎಚ್ಚರಿಕೆ ವಹಿಸಬೇಕು. 2000ನೇ ಇಸವಿಯಲ್ಲಿ ಡಾಟ್ ಕಾಂ ಕಂಪನಿಗಳು ಗರಿಷ್ಠ ಮಟ್ಟ ತಲುಪಿದವು. ಆದರೆ ಅಂದು 3 ಸಾವಿರ ರೂ.ನಷ್ಟಿದ್ದ ಅನೇಕ ಕಂಪನಿಗಳು ಈಗ ವಹಿವಾಟಿನಿಂದಲೇ ಹೊರ ನಡೆದಿವೆ. ಬದಲಾದ ಸಮಯದಲ್ಲಿ ಯಾವ ರೀತಿ ಏರಿಳಿತ ಆಗಬಹುದು ಎಂಬುದಕ್ಕೆ ಇದು ಉದಾಹರಣೆ. ಈ ಕಂಪನಿಗಳ ಷೇರು ಮೌಲ್ಯಗಳು ಅವುಗಳ ತೂಕಕ್ಕಿಂತ ಹೆಚ್ಚಿಗೆ ಇದ್ದರೆ ಹೊರಬರುವುದು ಉತ್ತಮ.

ಐಪಿಒನಲ್ಲಿ ಹೂಡಿದರೆ ಉತ್ತಮ ಲಾಭ?

ಕೆನರಾ ಬ್ಯಾಂಕ್ 35 ರೂ.ಗೆ ಐಪಿಒ ನೀಡಿದರೂ 900 ರೂ.ವರೆಗೆ ಏರಿಕೆ ಕಂಡು 65-70ಕ್ಕೆ ಇಳಿದು ಈಗ 170-180 ರೂ.ನಲ್ಲಿ ಇದೆ. ಈಗ ಇಳಿಕೆಯಲ್ಲಿದ್ದರೂ, ಪ್ರಾರಂಭದಲ್ಲಿ ಹೂಡಿಕೆ ಮಾಡಿದವರಿಗೆ ಲಾಭವೇ ಆಗುತ್ತದೆ. ಕೋಲ್ಗೇಟ್ 70ರ ದಶಕದಿಂದ ಈಗ್ಗೆ 50 ಪಟ್ಟು ಲಾಭಾಂಶ ನೀಡಿದೆ. ಈ ಹಿಂದೆ ಕಂಪನಿಗಳು ಐಪಿಒ ಬಿಡುಗಡೆ ಮಾಡಿ, ಅದರಿಂದ ಬಂದ ಬಂಡವಾಳವನ್ನು ಹೂಡಿಕೆ ಮಾಡಿ ಉದ್ದಿಮೆ ವಿಸ್ತಾರ ಮಾಡಿಕೊಳ್ಳುವ ಚಿಂತನೆ ಇರುತ್ತಿತ್ತು. ಆದರೆ ಇದೀಗ ಪ್ರೊಮೋಟರ್ ಷೇರುಗಳನ್ನು ಮಾರಾಟ ಮಾಡಿ, ಮಾರುಕಟ್ಟೆ ಏರಿಕೆಯಲ್ಲಿದ್ದಾಗ ಹಣ ಮಾಡಿಕೊಳ್ಳುವ ಚಿಂತನೆಯಲ್ಲಿ ಅನೇಕರಿರುತ್ತಾರೆ. ಇಂತಹ ಸಮಯದಲ್ಲಿ ಹೂಡಿಕೆ ಮಾಡಿ ಕಂಪನಿಯವರನ್ನು ಉದ್ಧಾರ ಮಾಡುತ್ತಿದ್ದೇವೆ ಎಂದು ಹೂಡಿಕೆ ಮಾಡಬೇಕು. ಲಾಭ ಬಂದರೆ ಅದೃಷ್ಟ ಅಷ್ಟೇ. ಇಂತಹ ಚಿಂತನೆಗಳಿರುವ ಕಂಪನಿಗಳಲ್ಲಿ ಹೂಡಿಕೆ ಮಾಡಿದರೆ ನಮ್ಮ ಬಂಡವಾಳ ಹೇಗೆ ಸುರಕ್ಷಿತ ಎಂಬುದನ್ನು ನಾವೇ ಅರ್ಥ ಮಾಡಿಕೊಳ್ಳಬೇಕು. ಎಚ್​ಡಿಎಫ್​ಸಿ 1 ರೂ. ಮೌಲ್ಯದ ಷೇರು 1600, ಕೋಟಕ್​ನ 2 ರೂ. ಮೌಲ್ಯದ ಷೇರು 1900 ರೂ. ಆಜುಬಾಜಿನಲ್ಲಿದೆ. ಇದರಿಂದ ಯಾವ ರೀತಿ ಲಾಭ ಬರುತ್ತದೆ ಎಂಬುದನ್ನು ಲೆಕ್ಕ ಮಾಡಬೇಕು. ಕೋಟಕ್​ನವರು ಪ್ರತಿ ಷೇರಿಗೆ 80 ಪೈಸೆ ಡಿವಿಡೆಂಡ್ ನೀಡಿದ್ದರೆ, ಅದು ಷೇರು ಮೌಲ್ಯಕ್ಕೆ ಯಾವುದೇ ಹೋಲಿಕೆ ಅಲ್ಲ. ರಿಲಯನ್ಸ್ ಅತ್ಯಂತ ದೊಡ್ಡ ಕಂಪನಿ. ಆದರೆ ಈಗ 25 ರೂ. ಡಿವಿಡೆಂಡ್ ನೀಡಿದ್ದಾರೆ. 2,500 ರೂ. ಹೂಡಿಕೆಗೆ 25 ರೂ. ಡಿವಿಡೆಂಡ್ ನೀಡಿದರೆ ಯಾವ ಪ್ರಮಾಣದ ಲಾಭವಾಗುತ್ತದೆ ಎಂಬುದನ್ನು ನೋಡಬೇಕು.

ಉತ್ತಮ ಕಂಪನಿಗಳನ್ನು ಗುರುತಿಸಿ

ಪ್ರಮುಖ ಭಾರತೀಯ ಆಟೋಮೊಬೈಲ್ ಕಂಪನಿ ಟಾಟಾ ಮೋಟಾರ್ಸ್​ಗೆ ಬೇಕಾದ ಚಿಪ್ ಪೂರೈಕೆ ಕಡಿಮೆ ಇದೆ ಎಂಬ ಸುದ್ದಿ ಇತ್ತೀಚೆಗೆ ಬಂದಿತು. 350 ರೂ. ಆಸುಪಾಸಿನಲ್ಲಿದ್ದ ಮೌಲ್ಯ 290 ರೂ.ಗೆ ಕುಸಿಯಿತು. ಇತ್ತೀಚೆಗೆ ದಿಢೀರನೆ 40 ರೂ. ಏರಿಕೆ ಕಂಡಿದೆ. ಆಗ ಇದ್ದ ಚಿಪ್ ಸಮಸ್ಯೆ ಪರಿಹಾರವಾಗಿಲ್ಲ. ಆದರೆ ಪ್ರಮುಖ ಅಂತಾರಾಷ್ಟ್ರೀಯ ಸಂಸ್ಥೆ ಈ ಕಂಪನಿಗೆ ಉತ್ತಮ ರೇಟಿಂಗ್ ನೀಡಿದ್ದರಿಂದ ಈ ಏರಿಕೆ ಕಂಡಿದೆ. ನಮ್ಮಲ್ಲಿರುವ ಉತ್ತಮ ಕಂಪನಿಗಳ ಮೇಲೆ ಹೂಡಿಕೆ ಮಾಡಲು ವಿದೇಶಿ ಕಂಪನಿಗಳ ಶಿಫಾರಸಿಗೆ ಕಾಯುತ್ತಿರುವುದು ನಮ್ಮ ಜ್ಞಾನದ ಕೊರತೆ ಸೂಚಿಸುತ್ತದೆ. ಉತ್ತಮ ಕಂಪನಿಗಳು ಕುಸಿತ ಕಂಡಾಗ ವ್ಯಾಲ್ಯೂ ಪಿಕ್ ಎಂದುಕೊಂಡು ಹೂಡಿಕೆ ಮಾಡಬೇಕು.

ಸಣ್ಣ ಹೂಡಿಕೆದಾರರಿಗೆ ಕಿವಿಮಾತು

ದೀರ್ಘಕಾಲಿಕವಾಗಿ ಆದಾಯಕ್ಕೆ ಈಗ ಹೂಡಿಕೆ ಮಾಡಬಹುದೇ ಎಂದು ಅನೇಕರು ಕೇಳುತ್ತಾರೆ. ಈ ಹಿಂದೆ ಷೇರು ಪ್ರಮಾಣಪತ್ರಗಳ ಮೂಲಕ ವಹಿವಾಟು ನಡೆಯುತ್ತಿತ್ತು. ಅನೇಕ ಕಾರಣಗಳಿಂದಾಗಿ ಇವುಗಳ ಖರೀದಿ, ಮಾರಾಟ ವಿಳಂಬವಾಗುತ್ತಿತ್ತು. ಕೆಲವೊಮ್ಮೆ ಒಂದು ವರ್ಷವೂ ಆಗುತ್ತಿತ್ತು. ಈ ಕಾಲದಲ್ಲಿ ದೀರ್ಘಕಾಲೀನ ಹೂಡಿಕೆ ಚಿಂತನೆ ನಡೆಯುತ್ತಿತ್ತು. ಇದೀಗ ಡಿಮ್ಯಾಟ್ ರೂಪಕ್ಕೆ ಬಂದ ನಂತರ ವಹಿವಾಟು ಎರಡು-ಮೂರು ದಿನಕ್ಕೆ ಬಂದಿದೆ. ಇಷ್ಟು ಶೀಘ್ರವಾಗಿ ಆದಾಯ ಗಳಿಸುವ ಮೂಲ ಇನ್ಯಾವುದೂ ಈಗ ಇಲ್ಲ. ಕಳೆದ ವರ್ಷದ ಮಾರ್ಚ್​ನಲ್ಲಿ ಪೇಟೆ ಕುಸಿತ ಕಂಡಂತಹ ಸಮಯವು ದೀರ್ಘಕಾಲೀನ ಹೂಡಿಕೆಗೆ ಸೂಕ್ತ. ಆದರೆ ಗರಿಷ್ಠ ಮಟ್ಟದಲ್ಲಿದ್ದಾಗ ಬಂಡವಾಳವನ್ನು ಸುರಕ್ಷಿತಗೊಳಿಸಿಕೊಳ್ಳಲು ಆದಷ್ಟೂ ಶೀಘ್ರದಲ್ಲಿ ನಗದೀಕರಿಸಿಕೊಳ್ಳಬೇಕು. ಪ್ರಾರಂಭದಲ್ಲಿ ದೀರ್ಘಕಾಲೀನ ಹೂಡಿಕೆದಾರರಾಗಿ. ನಡುವೆ ಅಲ್ಪಕಾಲೀನ ಹೂಡಿಕೆದಾರರಾಗುವ ಮೂಲಕ ಸ್ವಲ್ಪ ಹಣ ಗಳಿಸಬಹುದು.

ಬೋನಸ್ ಗಮನಿಸಿ

ಐಒಸಿಎಲ್ ಕಳೆದ ಒಂದು ವರ್ಷದಲ್ಲಿ ಪ್ರತಿ ಷೇರಿಗೆ 12 ರೂ. ಡಿವಿಡೆಂಡ್ ನೀಡಿದೆ. ಐಟಿಸಿ ಹಿಂದಿನ ವರ್ಷ ಸುಮಾರು 20 ರೂ. ಡಿವಿಡೆಂಡ್ ನೀಡಿದೆ. ಪೇಟೆ ಕುಸಿತ ಕಂಡಾಗ ದೀರ್ಘಕಾಲೀನ ಹೂಡಿಕೆ ಎಂದು ಇಂತಹವುಗಳಿಂದ ಖರೀದಿಸಬಹುದು. ಕೆಲವು ಸಮಯದಲ್ಲಿ ಅನೇಕ ಕಂಪನಿಗಳು ಬೋನಸ್ ಷೇರ್ ಎಂದು ಘೋಷಣೆ ಮಾಡುತ್ತವೆ. ಅದು 1:2, 1:3 ಯಾವುದೇ ಪ್ರಮಾಣದಲ್ಲೇ ಇರಬಹುದು. ಇತ್ತೀಚಿನ ದಿನಗಳಲ್ಲಿ ಇರ್ಕಾನ್ ಇಂಟರ್​ನ್ಯಾಷನಲ್ ಬೋನಸ್ ಷೇರು ಘೋಷಿಸಿದ ನಂತರ ಮೌಲ್ಯ ಕಡಿಮೆ ಆಯಿತು. ಆದರೆ ಷೇರುದಾರರಿಗೆ ಇದರಿಂದ ಲಾಭವೇ ಆಗುತ್ತದೆ.

ಆರ್ಥಿಕ ಸಾಕ್ಷರತೆಯ ಅವಶ್ಯಕತೆ ಇದೆ

ಈಗ ಎಲ್ಲರಲ್ಲೂ ಅಕ್ಷರ ಜ್ಞಾನ ಇದೆಯಾದರೂ ಆರ್ಥಿಕ ಸಾಕ್ಷರತೆ ಕೊರತೆ ಇದೆ. 2012ರಲ್ಲಿ ಭಾರತದಲ್ಲಿ ಸಂಸ್ಥೆಯೊಂದು ನಡೆಸಿದ ಸಮೀಕ್ಷೆ ಪ್ರಕಾರ, ಶೇ.35 ಜನರಲ್ಲಿ ಆರ್ಥಿಕ ಸಾಕ್ಷರತೆ ಇತ್ತು. 2016ರಲ್ಲಿ ಇದು ಶೇ.25ಕ್ಕೆ ಕುಸಿತ ಕಂಡಿತು. ನಾವು ಕೇವಲ ಡಿಸ್ಕೌಂಟ್ ಹಿಂದೆ ಬಿದ್ದಿದ್ದೇವೆ. ಇಎಂಐ ಕಡಿಮೆ ಆದಷ್ಟೂ ನಮ್ಮ ಸಂತೋಷ ಹೆಚ್ಚುತ್ತದೆ ಎಂಬುದನ್ನು ನಂಬಿದ್ದೇವೆ. ಆದರೆ ಇಎಂಐ ಹಾಗೂ ಸಂತೋಷಗಳು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತವೆ ಎಂಬ ಮಾತಿದೆ. ತಿಳುವಳಿಕೆಯಿಂದಲೇ ಸುರಕ್ಷತೆ ಎಂಬುದನ್ನು ಅರಿಯಬೇಕು.

ರಕ್ಷಣಾತ್ಮಕ ವಿಧಾನದಲ್ಲಿ ಹೂಡಿಕೆ

ಹೆಚ್ಚು ಸಂಸ್ಥೆಗಳಲ್ಲಿ ಹಾಗೂ ವಲಯಗಳಲ್ಲಿ ಹೂಡಿಕೆ ಮಾಡಬೇಕು. ಕಂಪನಿಯ ಗಾತ್ರ ಹಾಗೂ ಬೆಲೆಯನ್ನಾಧರಿಸಿ ಅನೇಕ ಸಂಸ್ಥೆಗಳಲ್ಲಿ ಹೂಡಿಕೆ ಮಾಡುವುದರಿಂದಾಗಿ, ಅವುಗಳಲ್ಲಿ ಒಂದಲ್ಲ ಒಂದು ಕಂಪನಿ ಲಾಭ ಕಂಡೇ ಕಾಣುತ್ತವೆ. ಒಂದೆರಡು ಕಂಪನಿಗಳು ಕುಸಿತ ಕಂಡರೂ ಒಟ್ಟಾರೆ ನಿಮ್ಮ ಬಂಡವಾಳಕ್ಕೆ ಧಕ್ಕೆ ಆಗುವುದಿಲ್ಲ. ಶಾಕ್ ಅಬ್ಸಾರ್ಬರ್ ರೀತಿ ಇದು ಕೆಲಸ ಮಾಡುತ್ತದೆ. ನಿಮ್ಮ ಹಣಕ್ಕೆ ಸಂಪೂರ್ಣ ಗ್ಯಾರಂಟಿ ಅಲ್ಲವಾದರೂ ಸ್ವಲ್ಪಮಟ್ಟಿಗಿನ ಸುರಕ್ಷತೆ ಕಾಣಬಹುದು.

ಬ್ರೋಕರ್ ಏಕೆ ಅವಶ್ಯಕ?

ಒಮ್ಮೆ ಹೂಡಿಕೆ ಮಾಡಿದರೆ ನಿರಂತರ ಲಾಭಾಂಶ ನೀಡುತ್ತೇವೆ ಎನ್ನುವವರು ಅನೇಕರಿದ್ದು, ಅವರಿಗೆ ಕಿವಿಗೊಡಬೇಡಿ. ಸೆಬಿ ನೋಂದಾಯಿತ ಸಂಸ್ಥೆಗಳಲ್ಲಿ ಚಟುವಟಿಕೆ ನಡೆಸಿದರೆ, ಸಂಕಷ್ಟದಲ್ಲಿ ಹಣ ವಾಪಸಾಗುವ ಸಾಧ್ಯತೆ ಇದೆ. ಸೆಬಿಗೂ ಮುನ್ನ ಸ್ವನಿಯಂತ್ರಣ ವ್ಯವಸ್ಥೆ ಇತ್ತು. ಇಂದು ಸುತ್ತಲೂ ನಿಯಂತ್ರಕರಿದ್ದಾರೆ, ಆದರೆ ನಮ್ಮ ಚಿಂತನೆಗಳ ಮೇಲೆ ನಿಯಂತ್ರಣವನ್ನು ಕಳೆದುಕೊಂಡಿದ್ದೇವೆ. ಬ್ರೋಕರ್ ಸಂಸ್ಥೆ ನಿಮಗೆ ಬೇಕಾದ ಮಾರ್ಗದರ್ಶನ ನೀಡಲು ವೇದಿಕೆ ಒದಗಿಸುತ್ತದೆ. ಆದರೆ ಅನೇಕ ಸಂಸ್ಥೆಗಳು ಬ್ರೋಕರೇಜ್ ಇಲ್ಲದೆ ವಹಿವಾಟು ನಡೆಸುವ ಆಫರ್ ನೀಡಿದವು. ತಮ್ಮ ಲಾಭಕ್ಕಾಗಿ ದಾರಿ ತಪ್ಪಿದ ಕ್ರಮಗಳನ್ನು ಅನುಸರಿಸಿದವು. ಇದರಿಂದ ಹೂಡಿಕೆದಾರರಿಗೆ ನಷ್ಟವಾಗಿದೆ. ಕಾಪೋರೇಟ್ ವಲಯದ ಕಂಪನಿಗಳು ತಮ್ಮ ಮೂಲ ಕ್ಷೇತ್ರಕ್ಕೇ ಸೀಮಿತಗೊಂಡರೆ ಉತ್ತಮ. ಮಲ್ಯ, ಡೆಕನ್ ಕ್ರೋನಿಕಲ್, ಶ್ರೀನಿವಾಸನ್ ಅವರು ಕ್ರಿಕೆಟ್​ನಂತಹ ಅನೇಕ ಕ್ಷೇತ್ರಗಳ ಕಡೆ ಗಮನ ಹರಿಸಿದ್ದರಿಂದ ತಮ್ಮ ಮೂಲ ಉದ್ಯಮದಲ್ಲಿ ತೊಂದರೆ ಆಯಿತು. ಕಾರ್ವಿ ಸಂಸ್ಥೆ ತನ್ನ ಷೇರು ಬ್ರೋಕರೇಜ್ ಬಿಟ್ಟು ರಿಯಲ್ ಎಸ್ಟೇಟ್​ಗೆ ಹೋಗಿದ್ದರಿಂದ ಮುಖ್ಯ ಕೆಲಸಕ್ಕೆ ತೊಂದರೆ ಆಯಿತು. ಬ್ರೋಕರ್ ಇಲ್ಲದೆ ಆನ್​ಲೈನ್ ಟ್ರೇಡಿಂಗ್​ನಿಂದ ಬ್ರೋಕರೇಜ್ ಉಳಿಯುತ್ತದೆ ಎಂಬುದು ಸತ್ಯವಾದರೂ, ಷೇರು ಮಾರುಕಟ್ಟೆಯ ಆಗುಹೋಗುಗಳ ಅರಿವಿದ್ದರೆ ಮಾತ್ರ ಉತ್ತಮವಾಗಿ ಮಾಡಬಹುದು. ಬ್ರೋಕಿಂಗ್ ಚಟುವಟಿಕೆ ನಡೆಸುವ ಸಂಸ್ಥೆಗಳು ಹಾಗೂ ಅದಕ್ಕೆ ಬೇಕಾದ ವೇದಿಕೆಗಳನ್ನು ಒದಗಿಸುವ ಬ್ಯಾಂಕಿಂಗ್ ಸಂಸ್ಥೆಗಳಲ್ಲಿ ವ್ಯತ್ಯಾಸ ಗುರುತಿಸಬೇಕು. ಕೆಲವರು ವೈಯಕ್ತೀಕರಿಸಿದ ಸೇವೆಗಳನ್ನು ನೀಡುತ್ತಾರೆ, ಅವುಗಳನ್ನು ಪಡೆಯಬಹುದು.

ಸಾವಿರಾರು ಕಂಪನಿಗಳಲ್ಲಿ ಒಳ್ಳೆಯದರ ಹುಡುಕಾಟ

ಮೂಲ ಕಲ್ಪನೆಗಳನ್ನು (ಫಂಡಮೆಂಟಲ್ಸ್) ತಿಳಿಯುವುದರಲ್ಲಿ ಅನೇಕರಿಗೆ ಆಸಕ್ತಿ ಇಲ್ಲ. ಸ್ವಲ್ಪ ಅಧ್ಯಯನ ಹಾಗೂ ಸ್ವಲ್ಪ ಮಾರ್ಗದರ್ಶನವೂ ಇದಕ್ಕೆ ಬೇಕು. ಯಾರೋ ಹೇಳಿದರು ಎಂದು ಸೂತ್ರಗಳನ್ನು ಅಳವಡಿಸಿಕೊಂಡರೆ ನಮ್ಮ ಹೂಡಿಕೆ ಸುರಕ್ಷಿತ ವಾಗಿರುವುದಿಲ್ಲ. ಕಂಪನಿಯ ಹಿನ್ನೆಲೆ, ಅಲ್ಲಿನ ಆಡಳಿತ ಮಂಡಳಿಯ ಆಧಾರದಲ್ಲಿ ನಿರ್ಧಾರ ಮಾಡಬೇಕು. ಕಳೆದೊಂದು ತಿಂಗಳಲ್ಲಿ ಕಂಡಿರುವ ಏರಿಳಿಕೆ, ಅದರಿಂದಾಗುವ ಕಾಪೋರೇಟ್ ಫಲಗಳೇನು? ಅಂತರ್ಗತವಾಗಿರುವ ಸಾಧನೆಯ ಅಂಶಗಳೇನು? ಹಿಂದಿನ ವರ್ಷಗಳಲ್ಲಿ ನೀಡಿರುವ ಡಿವಿಡೆಂಡ್ ಅಂಶಗಳು ಪ್ರಮುಖ ಪಾತ್ರ ವಹಿಸುತ್ತವೆ.

ದೊಡ್ಡ ಕಂಪನಿಗಳ ಮೇಲಿರಲಿ ಹೂಡಿಕೆ

ಈಗ ಮಾರುಕಟ್ಟೆ ಸಾರ್ವಕಾಲಿಕ ಗರಿಷ್ಠದಲ್ಲಿದೆ. ಹೀಗಾಗಿ ಅಗ್ರಮಾನ್ಯ, ಮಧ್ಯಮ ಗಾತ್ರದ ಕಂಪನಿಗಳೂ ಉತ್ತುಂಗದಲ್ಲಿವೆ. ಇಂತಹ ಸ್ಥಿತಿಯಲ್ಲಿ, ನಮ್ಮ ಚಟುವಟಿಕೆಗಳು ಅಗ್ರಮಾನ್ಯ ಕಂಪನಿಗಳ ಮೇಲೆ ಸೀಮಿತವಾಗಿರಬೇಕು. ಅವುಗಳಿಗೆ ಆಘಾತಗಳನ್ನು ತಡೆದುಕೊಳ್ಳುವ ಚೈತನ್ಯ ಇರುತ್ತದೆ. 2010ರಲ್ಲಿ ಟಾಟಾ ಸ್ಟೀಲ್ 610ಕ್ಕೆ ವಿತರಣೆ ಮಾಡಿದರು. 2013ರಲ್ಲಿ 195ಕ್ಕೆ ಕುಸಿಯಿತು, 2018ರಲ್ಲಿ 780ಕ್ಕೆ ಏರಿತು. 2020ರಲ್ಲಿ 250ಕ್ಕೆ ಕುಸಿದರೂ ನಂತರ 1,500ಕ್ಕೆ ಜಿಗಿತ ಕಂಡಿತು. ಆಡಳಿತ ಮಂಡಳಿಯ ದೃಢನಿರ್ಧಾರ ಹಾಗೂ ಕಾರ್ಯತತ್ಪರತೆ ಒಳಗೊಂಡಿ ರುವುದರಿಂದ ಹೀಗೆ ಆಗುತ್ತದೆ.

ಕಂಪನಿಯ ಆಧಾರದಲ್ಲಿ ಹೂಡಿಕೆ ಮಾಡಿ

ಹೂಡಿಕೆ ಮಾಡುವಾಗ ಇಡೀ ಕ್ಷೇತ್ರದ ಆಲೋಚನೆ ಮಾಡುವುದಕ್ಕಿಂತಲೂ ಯಾವ ಕಂಪನಿ ಎಂಬುದರ ಆದಾರದಲ್ಲಿ ಮಾತನಾಡಬೇಕು. ಪ್ರತಿ ಸಂಸ್ಥೆ ಈ ಹಿಂದೆ ಏರಿಕೆ ಕಂಡು ಬಂದ ಇತಿಹಾಸದ ಆಧಾರದಲ್ಲಿ ಹೂಡಿಕೆಗೆ ನಿರ್ಧರಿಸಬೇಕು. 2 ರೂ. ಮುಖಬೆಲೆಯ ಒಂದು ಷೇರು ಈಗಾ ಗಲೆ 13 ರೂ. ದರ ಇದ್ದಾಗ, ಅದರಿಂದ ಮತ್ತೆ ಎಷ್ಟು ನಿರೀಕ್ಷೆ ಮಾಡಬಹುದು?

ಏರಿಳಿತವನ್ನು ಅನುಕೂಲಕ್ಕೆ ಬದಲಿಸಿಕೊಳ್ಳಿ

ಬ್ಯಾಂಕ್​ಗಳು ರೆಪೊ ದರ ಕಡಿಮೆ ಮಾಡಿವೆ, ಈ ಕಾರಣಕ್ಕೆ ಷೇರುಪೇಟೆ ಏರಿಕೆ ಹಂತದಲ್ಲಿವೆ. ನವೆಂಬರ್ ನಂತರದಲ್ಲಿ ಬಡ್ಡಿದರ ಹೆಚ್ಚಳ ಮಾಡಬಹುದು ಎಂಬ ಮುನ್ಸೂಚನೆ ಇದ್ದು, ಇದಕ್ಕೆ ಷೇರು ಮಾರುಕಟ್ಟೆ ಯಾವ ರೀತಿ ಪ್ರತಿಕ್ರಿಯಿಸಬಹುದು ಎಂಬ ಪ್ರಶ್ನೆ ಇದೆ. ಭವಿಷ್ಯದ ಘಟನೆಗಳನ್ನು ವರ್ತಮಾನಕ್ಕೆ ಭಟ್ಟಿ ಇಳಿಸಿ ಮೌಲ್ಯೀಕರಣ ಮಾಡುವ ತಾಣವೇ ಷೇರು ಮಾರುಕಟ್ಟೆ. ಭವಿಷ್ಯದ ನಿರೀಕ್ಷೆಗೆ ತಕ್ಕಂತೆ ಮಾರುಕಟ್ಟೆ ಏರಿಳಿಕೆ ಆಗುತ್ತದೆ. ಅದನ್ನು ನಮ್ಮ ಅನುಕೂಲಕ್ಕೆ, ಸುರಕ್ಷತೆಗೆ ತಕ್ಕಂತೆ ಪರಿವರ್ತನೆ ಮಾಡಿಕೊಳ್ಳುವುದೇ ಜಾಣತನ. ಇದ್ದಕ್ಕಿದ್ದಂತೆ ಇಳಿಕೆ ಕಂಡರೆ, ಉತ್ತಮ ಕಂಪನಿಗಳಲ್ಲಿ ಹೂಡಿಕೆಗೆ ಅತ್ಯುತ್ತಮ ಅವಕಾಶ.

ಮ್ಯೂಚುವಲ್ ಫಂಡ್ ರೀತಿ ಎಸ್​ಐಪಿ

ಎಸ್​ಐಪಿ ರೀತಿಯ ಹೂಡಿಕೆಯನ್ನು ಈಕ್ವಿಟಿಯಲ್ಲೂ ಮಾಡಲು ಅವಕಾಶ ಇದೆ. ಇದು ಸ್ವಯಂನಿಯಂತ್ರಿತ ವ್ಯವಸ್ಥೆಯಾಗಿದೆ. ಉದಾಹರ ಣೆಗೆ, ಮಾಸಿಕ 10 ಸಾವಿರ ರೂ. ಹೂಡಿಕೆ ಎಂದು ನಿರ್ಧರಿಸಿದರೆ, ಆ ದಿನಗಳಲ್ಲಿ ಯಾವುದನ್ನು ವ್ಯಾಲ್ಯೂ ಪಿಕ್ ಎಂದು ಪರಿಗಣಿಸುತ್ತೀರೊ ಅದಕ್ಕೆ ಹೂಡಿಕೆ ಮಾಡಬಹುದು. ಹೀಗೆ ಐದಾರು ಅಥವಾ ಹತ್ತು ಕಂಪನಿಗಳ ಮೇಲೆ ಹೂಡಿಕೆ ಮಾಡಬಹುದು. ಆಗ, ಸಮಯ ಕಳೆದಂತೆ ನಿಮ್ಮ ಕಂಪನಿಗಳಲ್ಲಿ ಉತ್ತಮ ಹೂಡಿಕೆ ಗುಚ್ಛ ನಿರ್ವಿುಸಲು ಅವಕಾಶವಿದೆ. ಮಾರುಕಟ್ಟೆಯಲ್ಲಿ ಏರಿಳಿಕೆ ಬಂದರೂ ವ್ಯಾಲ್ಯೂ ಪಿಕ್ ವಿಧಾನ ಅನುಸರಿಸಬೇಕು.

ಸ್ನೇಹಿತರ ಮೂಲಕ ವ್ಯವಹಾರ ಬೇಡ

ಅನೇಕರು ತಮಗೆ ಮಾರುಕಟ್ಟೆ ವ್ಯವಹಾರ ತಿಳಿಯುವುದಿಲ್ಲ ಎಂಬ ಕಾರಣಕ್ಕೆ ಸ್ನೇಹಿತರಿಗೆ ಐಡಿ, ಪಾಸ್​ವರ್ಡ್ ನೀಡಿ ಅವರ ಮೂಲಕವೇ ನಡೆಸುತ್ತಿರುತ್ತಾರೆ. ಷೇರು ಮಾರುಕಟ್ಟೆ ಎಂತಹ ಕ್ಷೇತ್ರವೆಂದರೆ, ಸ್ವಂತ ನಿರ್ಧಾರದ ಮೇಲೆ ಕೈಗೊಂಡ ನಿರ್ಣಯಗಳೇ ಅನೇಕ ಬಾರಿ ಕೈಕೊಡುತ್ತವೆ. ಅಂತಹದ್ದರಲ್ಲಿ ಸ್ನೇಹಿತನಿಗೆ ಕೊಟ್ಟಿದ್ದು ಹೇಗೆ ಗ್ಯಾರಂಟಿ ನೀಡುವುದು? ಎಲ್ಲವೂ ಚೆನ್ನಾಗಿ ನಡೆಯುತ್ತಿದ್ದರೆ ಸರಿ. ನಕಾರಾತ್ಮಕ ಫಲಿತಾಂಶ ಬಂದರೆ ಇಬ್ಬರ ನಡುವಿನ ಸಂಬಂಧ ಹಾಳಾಗುತ್ತದೆ.

ಲಿಕ್ವಿಡ್​ನಲ್ಲಿ ಅಪಾಯ ಕಡಿಮೆ

ಲಿಕ್ವಿಡ್ ಫಂಡ್ ಹೂಡಿಕೆಯಲ್ಲಿ ಅಪಾಯ ಬಹಳಷ್ಟು ಕಡಿಮೆ ಇದೆ. ಇದೊಂದು ಉತ್ತಮ ಹೂಡಿಕೆಯಾಗಿದ್ದು, ಯಾವುದೇ ಮ್ಯೂಚುವಲ್ ಫಂಡ್ ವೆಬ್​ಸೈಟ್ ಅಥವಾ ವಿತರಕರಲ್ಲಿ ಖರೀದಿ ಮಾಡಬಹುದು. ಕೆವೈಸಿ ಮುಗಿಸಿದ ತಕ್ಷಣ ಆನ್​ಲೈನ್ ಹೂಡಿಕೆ ಆರಂಭವಾಗುತ್ತದೆ. ಆಫ್​ಲೈನ್​ಗಿಂತ ಆನ್​ಲೈನ್ ಮೂಲಕ ವ್ಯವಹರಿಸಿದರೆ ತಕ್ಷಣವೇ ಆದಾಯ ಆರಂಭವಾಗುತ್ತದೆ.

ಮ್ಯೂಚುವಲ್ ಫಂಡ್ ಸರಿ, ಆದರೆ...

ಮ್ಯೂಚುವಲ್ ಫಂಡ್​ಗಳು ಹೊಸ ಫಂಡ್ ಆಫರ್ (ಎನ್​ಎಫ್​ಒ) ಬಗ್ಗೆ ಎಚ್ಚರಿಕೆ ಇರಬೇಕು. ಶ್ವಾನ ನಿದ್ದೆ, ಬಕ ಧ್ಯಾನ, ಗಜ ಸ್ನಾನದಂತೆ ಇರಬೇಕು ಎನ್ನುತ್ತಾರೆ. ಅಂದರೆ ಶ್ವಾನದ ರೀತಿ ಸದಾ ಎಚ್ಚರದಿಂದ ಇರಬೇಕು, ಮಾರುಕಟ್ಟೆ ಗರಿಷ್ಠದಲ್ಲಿರುವಾಗ ಬಕಪಕ್ಷಿ ಧ್ಯಾನ ಮಾಡಿದಂತೆ ಗಮನ ಕೇಂದ್ರೀಕರಿಸಿ ಹೂಡಿಕೆ ಮಾಡಬೇಕು. ಆಗ ಮಾತ್ರ ಗಜ ಸ್ನಾನದ ತೃಪ್ತಿ ನಮಗೆ ಸಿಗುತ್ತದೆ. ಅರಿತು ಹೂಡಿಕೆ ಮಾಡಿ, ಅನುಸರಿಸಬೇಡಿ ಎಂಬ ಮಾತಿದೆ. ಮಾಧ್ಯಮಗಳಲ್ಲಿ ಸಂಪೂರ್ಣ ಸುದ್ದಿ ಇರುವುದಿಲ್ಲ. ಕೆಲವನ್ನು ಬಲ್ಲವರಿಂದ ಮಾಹಿತಿ ಪಡೆಯಬೇಕು. ಮ್ಯೂಚುವಲ್ ಫಂಡ್ ಸರಿ, ಆದರೆ ಯಾವ ವಲಯ, ಯಾವ ಕಂಪನಿ ಎಂಬುದನ್ನು ತಿಳಿಯಬೇಕು. ಡೆಟ್ ಫಂಡ್​ನಲ್ಲಿ ಅಪಾಯ ಕಡಿಮೆ ಇರುತ್ತದೆಯೇ ಹೊರತು ಅಪಾಯವೇ ಇಲ್ಲ ಎನ್ನುವ ಮಾತಿಲ್ಲ. ಬ್ಯಾಂಕ್ ಠೇವಣಿಯಲ್ಲೂ 5 ಲಕ್ಷ ರೂ.ವರೆಗೆ ಮಾತ್ರ ಗ್ಯಾರಂಟಿ ಇರುತ್ತದೆ.

ಹೂಡಿಕೆಯಿಂದ ತೆರಿಗೆ ಲಾಭ

ಒಂದು ವರ್ಷದ ಹೂಡಿಕೆಯನ್ನು ದೀರ್ಘಕಾಲೀನ ಹೂಡಿಕೆ ಎಂದು ಆದಾಯ ತೆರಿಗೆ ಆಧಾರದಲ್ಲಿ ಪರಿಗಣಿಸಲಾಗುತ್ತದೆ. 10-20 ವರ್ಷದ ಹಿಂದೆ ಖರೀದಿಸಿದ ಕಂಪನಿಗಳ ಷೇರು ಇದ್ದರೆ, 2018ರ ಜ.31ರ ದರವನ್ನು ಖರೀದಿ ದರ ಎಂದು ತೆಗೆದುಕೊಂಡು ವರ್ಷದ ಬಂಡವಾಳ ಆದಾಯಕ್ಕೆ ತೆರಿಗೆಗೆ ಲೆಕ್ಕ ಹಾಕಿಕೊಳ್ಳಬಹುದು. ಡಿವಿಡೆಂಡ್​ಗಳು ಸಂಪೂರ್ಣವಾಗಿ ತೆರಿಗೆಗೆ ಒಳಪಡುತ್ತವೆ.

ಇಂಟ್ರಾಡೇ ಎಂಬುದು ತಾಂತ್ರಿಕ ವಿಧಾನ

ಇಂಟ್ರಾಡೇ ವಹಿವಾಟಿಗೆ ಯಾವುದೇ ಸ್ಥಾಪಿತ ವ್ಯವಸ್ಥೆ ಇಲ್ಲ. ಇದಕ್ಕೆ ಫಂಡಮೆಂಟಲ್ಸ್ ಬೇಡ, ತಾಂತ್ರಿಕತೆಯ ಆಧಾರದಲ್ಲಿ ನಿರ್ಧರಿಸಬಹುದು. ಹಿಂದಿನ ದಿನ ಯಾವ ಕಂಪನಿ ಷೇರು ಬಿದ್ದಿದೆ ಎಂದು ನೋಡಿ ಖರೀದಿಸಬೇಕು, ಏರಿಕೆ ಕಂಡ ಸಮಯದಲ್ಲಿ ಮಾರಿಕೊಳ್ಳಬಹುದು.

ವಿದ್ಯುತ್ ಕಂಪನಿ ಬಗ್ಗೆ ಎಚ್ಚರ

ಅನೇಕ ವಸ್ತುಗಳ ಮಾರಾಟದ ಸ್ಥಳ ಬದಲಾದಂತೆ ಮೌಲ್ಯ ಹೆಚ್ಚುತ್ತದೆ. ಅದೇ ರೀತಿ ಕೆಲವು ಸುಧಾರಣೆ ಹಾಗೂ ಜನರ ಜಾಗರೂಕತೆ ಕಾರಣಕ್ಕೆ ವಿದ್ಯುತ್ ಕಂಪನಿಗಳ ಷೇರು ಮೌಲ್ಯ ಹೆಚ್ಚಾಗಿರಬಹುದು. ನೀವು ಕೊಂಡಿದ್ದಕ್ಕಿಂತ ಅರ್ಧದಷ್ಟಾದರೂ ಲಾಭ ಸಿಕ್ಕರೆ ಮಾರಿಕೊಂಡು ಹೊರಬರುವುದು ಉತ್ತಮ ನಿರ್ಧಾರ.

ಶಾಶ್ವತ ಹೂಡಿಕೆದಾರರಾಗುವ ಅಪಾಯ

ಲೆಹ್​ವುನ್ ಬ್ರದರ್ಸ್ ಪೆಟ್ಟಿನಿಂದ ಸಂಕಷ್ಟ ಎದುರಿಸಿದ ಸಂಸ್ಥೆಗಳಲ್ಲಿ ಸುಜಲಾನ್ ಕಂಪನಿಯೂ ಒಂದು. ಸುಜಲಾನ್​ನಿಂದ ಹೊರನಡೆಯಲು ಈಗಲೂ ಕೊಟೇಷನ್ ಬರುತ್ತಲೇ ಇದೆ. 2011ರಲ್ಲಿ ಐಪಿಒ ಹೊರತಂದ ಕಂಪನಿಯೊಂದು 150 ರೂ.ನಲ್ಲಿ ಇಶ್ಯೂ ಮಾಡಿ ಡಿಲಿಸ್ಟ್ ಆಯಿತು. ಅಲ್ಪಕಾಲಕ್ಕೆಂದು ಹೂಡಿಕೆ ಮಾಡಿದವರು ಈಗ ಶಾಶ್ವತ ಹೂಡಿಕೆದಾರರಾಗಿದ್ದಾರೆ! ಇದು ಮಾರುಕಟ್ಟೆ ಹೂಡಿಕೆಯಲ್ಲಿ ಅಡಕವಾಗಿರುವ ಅಪಾಯ. ಮಧ್ಯಮ ಹಾಗೂ ಕೆಳ ಮಧ್ಯಮ, ಕಳಪೆ ಷೇರುಗಳಲ್ಲಿ ಹೂಡಿಕೆ ಮಾಡಬೇಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net