ಕಾಮೋದ್ವೇಗವೇ ಅಪರಾಧಕ್ಕೆ ಪ್ರೇರಣೆ

edit 3
Published on

ಅದೊಂದು ರಾಷ್ಟ್ರೀಯ ಹೆದ್ದಾರಿ. ಬೆಳಗಿನ 5 ಗಂಟೆಯಾಗಿತ್ತು. ಇನ್ನೂ ಕತ್ತಲಿತ್ತು. ಹೆದ್ದಾರಿ ಪಕ್ಕದಲ್ಲಿ ಒಂದು ಮೋಟಾರ್ ಸೈಕಲ್ ಹಾಗೂ ಅದರ ಸವಾರ ಬಿದ್ದಿದ್ದನ್ನು ಕಂಡು ಒಬ್ಬ ಲಾರಿ ಚಾಲಕ ವಾಹನವನ್ನು ನಿಲ್ಲಿಸಿ ಕೆಳಗಿಳಿದು ನೋಡಿದ. ರಕ್ತದ ಮಡುವಿನಲ್ಲಿ ಬಿದ್ದಿದ್ದು ಇನ್ನೂ ಉಸಿರಾಡುತ್ತಿದ್ದ ಗಾಯಾಳುವನ್ನು ಲಾರಿಯಲ್ಲಿ ಹಾಕಿಕೊಂಡು ಹತ್ತಿರದ ಆಸ್ಪತ್ರೆಗೆ ಕರೆತಂದ. ರಸ್ತೆ ಅಪಘಾತದ ಕೇಸೆಂದು ಉಪಚಾರ ಮಾಡಲು ಹೊರಟಾಗ ಗಾಯಾಳುವಿನ ದೇಹದ ಮೇಲೆ ಇರಿತದ ಗಾಯಗಳಾದದ್ದನ್ನು ಕಂಡ ವೈದ್ಯರು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಪೊಲೀಸರು ಗಾಯಾಳುವಿನ ಪರ್ಸಿನಲ್ಲಿದ್ದ ಗುರುತಿನ ಪತ್ರ ಮತ್ತು ಡ್ರೖೆವಿಂಗ್ ಲೈಸೆನ್ಸ್​ನ ಮೂಲಕ ಆತ 36 ವರ್ಷ ವಯಸ್ಸಿನ ಮನೋಜ್ ಎಂಬುವವನಾಗಿದ್ದು ರಾಜಧಾನಿಯಲ್ಲಿನ ಸಾಫ್ಟ್​ವೇರ್ ಕಂಪನಿಯೊಂದರ ಉದ್ಯೋಗಿ ಎಂದು ಅರಿತರು. ಮನೋಜ್​ನ ಪತ್ನಿಗೆ ಫೋನ್ ಮಾಡಿದಾಗ ಆಕೆ ತನ್ನ ಗಂಡ ಕಳೆದ ಹತ್ತುದಿನಗಳಿಂದ ಜಿಲ್ಲಾ ಕೇಂದ್ರದಲ್ಲಿದ್ದ ಕಚೇರಿಯೊಂದಕ್ಕೆ ಅಧಿಕೃತ ಕೆಲಸದ ಮೇಲೆ ತನ್ನ ವಾಹನದಲ್ಲಿ ಹೋಗಿ ಬರುತ್ತಿದ್ದನೆಂದು ತಿಳಿಸಿ ತಾನು ಆಸ್ಪತ್ರೆಗೆ ಕೂಡಲೇ ಬರುವುದಾಗಿ ಹೇಳಿದಳು.

ಆಕೆ ಬರುವಷ್ಟರಲ್ಲಿಯೇ ಮನೋಜ್ ಅಸುನೀಗಿದ. ಎದೆ ಹಾಗೂ ಬೆನ್ನಿನ ಮೇಲೆ ಹರಿತ ಆಯುಧದಿಂದ ತಿವಿದ ಕಾರಣದಿಂದ ಸಾವುಂಟಾಗಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿಯಿತು. ಘಟನಾ ಸ್ಥಳವನ್ನು ಪರಿಶೀಲಿಸಿದಾಗ ಮೋಟರ್ ಸೈಕಲ್ ಹಿಂಬದಿ ಜಜ್ಜಿತ್ತು. ಮನೋಜನ ಬ್ಯಾಕ್​ಪ್ಯಾಕ್, ಸೆಲ್ ಫೋನ್ ಸ್ಥಳದಲ್ಲಿಯೇ ಇದ್ದವು. ಯಾರೋ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಆತ ಬಿದ್ದನಂತರ ಅವನನ್ನು ತಿವಿದು ಕೊಂದಿರುವುದು ಕಂಡುಬರುತ್ತಿತ್ತು. ತಮ್ಮ ವಿವಾಹವಾಗಿ ಕೇವಲ ಎರಡು ವರ್ಷವಾಗಿದ್ದು ತಮಗೆ ಮಕ್ಕಳಿರಲಿಲ್ಲ ಎಂದು ಹೇಳಿದ ಅವನ ಪತ್ನಿ ಅರ್ಚನಾ ತಾನು ಟಿವಿ ಚಾನಲ್​ನಲ್ಲಿ ವರದಿಗಾರ್ತಿಯಾಗಿರುವುದಾಗಿ ತಿಳಿಸಿದಳು. ತಮ್ಮ ವೈವಾಹಿಕ ಜೀವನವು ಉತ್ತಮವಾಗಿತ್ತು, ತಮ್ಮಿಬ್ಬರಿಗೂ ಯಾವುದೇ ವೈರಿಗಳಿರಲಿಲ್ಲ ಎಂದು ಹೇಳಿದ ಆಕೆ ಬೇರೊಬ್ಬ ವ್ಯಕ್ತಿಯೆಂಬ ತಪ್ಪು ಕಲ್ಪನೆಯಿಂದ ತನ್ನ ಗಂಡನ ಕೊಲೆ ಮಾಡಿರಬಹುದೆಂದು ಅನುಮಾನಿಸಿದಳು.

ಘಟನೆಗೆ ಯಾವುದೇ ಪ್ರತ್ಯಕ್ಷದರ್ಶಿಗಳಿರದಿದ್ದ ಕಾರಣ ರಸ್ತೆ ಬದಿಯ ಡಾಬಾಗಳಿಂದ ಏನಾದರೂ ಮಾಹಿತಿ ಸಿಗಬಹುದೇನೋ ಎಂದು ತನಿಖಾಧಿಕಾರಿ ಘಟನೆ ನಡೆದಿದ್ದ ಸ್ಥಳದ 20 ಕಿ.ಮೀ ಫಾಸಲೆಯಲ್ಲಿದ್ದ ಎಲ್ಲ ಡಾಬಾಗಳಲ್ಲಿಯೂ ವಿಚಾರಿಸಿದರು. ಒಂದು ಡಾಬಾದ ಮಾಲೀಕ ಘಟನೆ ನಡೆದ ದಿನದಂದು ಬೆಳಗಿನ 4.30ಕ್ಕೆ ತಮ್ಮಲ್ಲಿಗೆ ಬಂದ ಮನೋಜ್ ಚಹಾ ಕುಡಿದನೆಂದೂ ಆತ ಡಾಬಾದಿಂದ ಹೊರಟ ಕೂಡಲೇ ಅದೇ ಡಾಬಾದಲ್ಲಿಯೇ ಚಹಾ ಕುಡಿಯುತ್ತಿದ್ದ ನಾಲ್ಕು ಜನರು ಇಂಡಿಕಾ ಕಾರಲ್ಲಿ ಅವನನ್ನು ಹಿಂಬಾಲಿಸಿದರು ಎಂದು ಹೇಳಿ ಕಾರಿನಲ್ಲಿ 3 ಪುರುಷರು ಮತ್ತು ಒಬ್ಬ ಮಹಿಳೆಯಿದ್ದಳು ಎಂದ.

ಟೋಲ್​ಗೇಟು ಸಿಸಿಟಿವಿ ಮೂಲಕ ಆ ದಿನ ಹೋಗಿದ್ದ ಇಂಡಿಕಾ ವಾಹನದ ವಿವರಗಳನ್ನು ಪಡೆದು ವಾಹನದ ಚಾಲಕ ಗಿರೀಶ್​ನನ್ನು ಸಂರ್ಪಸಲಾಯಿತು. ತನ್ನ ವಾಹನದಲ್ಲಿ ಪತ್ನಿ ಮತ್ತು ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋದದ್ದಾಗಿ ತಿಳಿಸಿದ ಆತ ತಾವು ಡಾಬಾದಿಂದ ಯಾರನ್ನೂ ಹಿಂಬಾಲಿಸಲಿಲ್ಲ ಹಾಗೂ ಯಾವುದೇ ಅಪಘಾತ ಮಾಡಿಲ್ಲ ಎಂದ. ಆತನ ವಾಹನದ ಮುಂಭಾಗದ ಎಡಭಾಗದ ತುದಿ ಜಜ್ಜಿ ಹೋಗಿದ್ದು ಕಂಡುಬಂತು. ಗಿರೀಶ್ ಹಾರಿಕೆಯ ಉತ್ತರ ಕೊಟ್ಟ. ಆತನ ಪತ್ನಿ ಫಾತಿಮಾ ಕೂಡ ಯಾವುದೇ ಸುಳಿವನ್ನು ಕೊಡಲಿಲ್ಲ. ಫಾತಿಮಾ ಆಂಧ್ರದವಳೆಂದೂ, ಅವರದ್ದು ಪ್ರೇಮವಿವಾಹವೆಂದೂ ಹೇಳಿದ ಗಿರೀಶನ ನೆರೆಹೊರೆಯವರು ಆಕೆ ಲೇವಾದೇವಿ ವ್ಯವಹಾರ ಮಾಡುತ್ತಾಳೆ ಎಂದರು.

ಕಾರಿನಲ್ಲಿದ್ದ ಇತರರು ಲೋಕೇಶ್ ಮತ್ತು ಮಹಮ್ಮದ್ ಆಲಿ ಎಂದು ತಿಳಿಯಿತು. ಆಂಧ್ರ ಮೂಲದ ಆಲಿ ಫಾತಿಮಾಳ ಗೆಳೆಯನಾಗಿದ್ದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದು ಎರಡು ಮೂರು ಪ್ರಕರಣಗಳಲ್ಲಿ ಜೈಲಿಗೆ ಹೋಗಿ ಬಂದಿದ್ದ. ಲೋಕೇಶ್ ಕಾರು ಮೆಕ್ಯಾನಿಕ್ ಆಗಿದ್ದ. ಅವರಿಬ್ಬರನ್ನೂ ಬೇರೆ ಬೇರೆಯಾಗಿ ವಿಚಾರಣೆ ನಡೆಸಲಾಯಿತು. ಗಿರೀಶ್ ಮತ್ತು ಫಾತಿಮಾ ತಮ್ಮಿಬ್ಬರನ್ನೂ ಕರೆಸಿ ‘ಒಬ್ಬ ವ್ಯಕ್ತಿಯನ್ನು ಕೊಲೆ ಮಾಡಿದರೆ ಎರಡು ಲಕ್ಷ ರೂಗಳನ್ನು ಕೊಡುತ್ತೇವೆ. ಆತ ಸಾಫ್ಟ್​ವೇರ್ ಕಂಪನಿಯಲ್ಲಿ ಕೆಲಸದಲ್ಲಿದ್ದಾನೆ’ ಎಂದು ತಿಳಿಸಿದರು. ನಾವು ಆತನ ಚಲನವಲನಗಳನ್ನು ಗಮನಿಸಿದೆವು. ಒಂದು ವಾರದಿಂದ ಆತ ಬೇರೆ ಊರಿನಲ್ಲಿರುವ ಕಚೇರಿಗೆ ಪ್ರತಿದಿನವೂ ಟೂ ವೀಲರಿನಲ್ಲಿ ಬೆಳಗಿನ ಜಾವ ಹೋಗಿ ಸಂಜೆ ಹಿಂತಿರುಗುತ್ತಿದ್ದ. ಅವನು ಪ್ರತಿದಿನವೂ ಒಂದು ಡಾಬಾದಲ್ಲಿ ಚಹಾ ಕುಡಿದು, ಮುಂದೆ ಹೋಗುತ್ತಿದ್ದ. ರಸ್ತೆ ಅಪಘಾತ ಮಾಡಿಸಿ ಅವನನ್ನು ಕೊಲ್ಲಲು ಉದ್ದೇಶಿಸಿ ಗಿರೀಶನ ಕಾರನ್ನು ಬಳಸಲು ತೀರ್ವನಿಸಿದೆವು. ಡಾಬಾದಲ್ಲಿ ಅತ ಚಹಾ ಕುಡಿದು ಹೊರಟ ನಂತರ ನಾವು ಹಿಂಬಾಲಿಸಿ ಹಿಂದಿನಿಂದ ಅವನ ವಾಹನಕ್ಕೆ ಗುದ್ದಿ ಅವನು ಆಯತಪ್ಪಿ ಕೆಳಗೆ ಬಿದ್ದನಂತರ ಸಹಾಯ ಮಾಡುವ ನೆಪದಲ್ಲಿ ಅವನ ಬಳಿ ಹೋದೆವು. ಅವನಿಗೆ ಹೆಚ್ಚು ಪೆಟ್ಟಾಗಿರದಿದ್ದುದರಿಂದ ಅವನನ್ನು ಚಾಕುವಿನಿಂದ ಇರಿದು ನಂತರ ನಮ್ಮ ಮನೆಗಳಿಗೆ ವಾಪಸ್ಸಾದೆವು. ಮನೋಜ್ ಸತ್ತನೆಂದು ಟಿವಿಯಲ್ಲಿ ಸುದ್ದಿ ಬಂದಕೂಡಲೇ ಗಿರೀಶ್ ನಮಗೆ ಕೊಡಬೇಕಾದ ದುಡ್ಡನ್ನು ಕೊಟ್ಟ ಎಂದು ಅವರು ಹೇಳಿದರು.

ಆನಂತರ ಗಿರೀಶ್ ಮತ್ತು ಫಾತಿಮಾಳನ್ನು ಜಂಟಿಯಾಗಿ ವಿಚಾರಣೆ ನಡೆಸಿದಾಗ ತಿಳಿದುಬಂದಿದ್ದು ಇದು: ಗಿರೀಶ್ ಈ ಹಿಂದೆ ರಾಮಪ್ರಸಾದ್ ಎನ್ನುವ ಆಂಧ್ರ ಮೂಲದ ಪಿಡಬ್ಲೂ್ಯಡಿ ಗುತ್ತಿಗೆದಾರನ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಸ್ಥಿ್ಥವಂತನಾಗಿದ್ದ ರಾಮಪ್ರಸಾದ್ ಶೋಕಿಲಾಲನಾಗಿದ್ದು ಹಲವಾರು ಹೆಂಗಳೆಯರ ಸಹವಾಸ ಮಾಡಿದ್ದ. ಅವನ ಪತ್ನಿ ರಿಚಾ ಸಾಫ್ಟ್​ವೇರ್ ಕಂಪನಿಯೊಂದರಲ್ಲಿ ಕೆಲಸಕ್ಕಿದ್ದಳು. ಅವರಿಗೆ ಐದು ವರ್ಷದ ಮಗನಿದ್ದ. ಮನೋಜ್​ನ ಪತ್ನಿ ಅರ್ಚನಾ ರಿಚಾಳ ಕಿರಿಯ ಸೋದರಿ. ಆಕೆ ಅಕ್ಕನಿಗಿಂತ ಸುಂದರಿಯಾಗಿದ್ದು ಆಕೆಯ ಮೇಲೆ ರಾಮಪ್ರಸಾದ್ ಅನುರಕ್ತನಾಗಿದ್ದ. ರಿಚಾ ಹಾಗೂ ಅರ್ಚನಾಗೆ ಮಾತಾಪಿತರಾಗಲೀ ಸೋದರರಾಗಲೀ ಇರಲಿಲ್ಲ. ಹೇಗಾದರೂ ಮಾಡಿ ಮನೋಜ್​ನನ್ನು ಅರ್ಚನಾಳಿಂದ ದೂರ ಮಾಡಿಸಿದರೆ ಆಕೆ ಒಬ್ಬಂಟಿಯಾಗುತ್ತಾಳೆ, ಆಗ ತಾನು ಮನವೊಲಿಸಿ ಮದುವೆ ಮಾಡಿಕೊಳ್ಳಬಹುದು ಎಂದು ರಾಮಪ್ರಸಾದ್ ಲೆಕ್ಕಹಾಕಿದ. ಮನೋಜನನ್ನು ಕೊಲೆ ಮಾಡಿಸುವುದು ಸೂಕ್ತ ಎಂದು ತೀರ್ವನಿಸಿದ ರಾಮಪ್ರಸಾದ್ ತನ್ನ ಹಿಂದಿನ ಚಾಲಕ ಗಿರೀಶ್​ನನ್ನು ಕರೆಯಿಸಿಕೊಂಡ. ಫಾತಿಮಾಳ ಜತೆಗೆ ತನ್ನ ವಿವಾಹ ಮಾಡಿಸಲು ಹಾಗೂ ಟ್ಯಾಕ್ಸಿ ಓಡಿಸಲು ಕಾರನ್ನು ಖರೀದಿಸಲು ಆತ ಧನಸಹಾಯ ಮಾಡಿದ್ದ ಕಾರಣ ಮನೋಜ್​ನ ಕೊಲೆ ಮಾಡಿಸಲು ಗಿರೀಶ್ ಒಪ್ಪಿದ. ಮೂರು ಲಕ್ಷ ರೂಗಳನ್ನು ಕೊಡುವುದಾಗಿ ರಾಮ್್ರಸಾದ್ ಹೇಳಿ ಮುಂಗಡವೆಂದು ಒಂದು ಲಕ್ಷರೂ ನೀಡಿದ. ಈ ವಿಷಯದ ಬಗ್ಗೆ ಫಾತಿಮಾಳ ಜತೆಗೆ ಸಮಾಲೋಚಿಸಿದಾಗ ಆಕೆ, ತನ್ನ ಗ್ರಾಮಕ್ಕೇ ಸೇರಿದವನಾಗಿದ್ದ ಮೊಹಮ್ಮದ್ ಆಲಿ ಸೂಕ್ತ ವ್ಯಕ್ತಿ ಎಂದು ಸೂಚಿಸಿದಳು. ಆತ ಸುಪಾರಿಗೆ ಒಪ್ಪಿ ತನ್ನ ಜತೆಗೆಂದು ಲೋಕೇಶ್​ನನ್ನು ಕರೆದುಕೊಂಡ. ಮನೋಜ್ ತನ್ನ ಟೂ ವೀಲರಿನಲ್ಲಿ ಹೋಗುವಾಗ ಅವನನ್ನು ಅಡ್ಡಗಟ್ಟಿ ಇರಿದು ಕೊಲ್ಲಬೇಕೆಂದು ತೀರ್ವನವಾಯಿತು. ಎರಡು ಪ್ರಯತ್ನಗಳು ವಿಫಲವಾಗಿದ್ದವು. ಮನೋಜ್ ಹೆದ್ದಾರಿಯಲ್ಲಿ ಕತ್ತಲಲ್ಲಿ ಪಯಣಿಸಲಾರಂಭಿಸಿದಾಗ ಅವರ ಕೆಲಸ ಹಗುರವಾಯಿತು.

ರಾಮಪ್ರಸಾದ್​ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಆತ ಹೀಗೆಂದ: ‘ನಾನು ಮದುವೆಯಾದ ದಿನದಿಂದಲೂ ನಾದಿನಿಯಾದ ಅರ್ಚನಾಳ ಮೇಲೆ ಅನುರಕ್ತನಾಗಿದ್ದೆ. ಆಕೆ ನನ್ನ ಜತೆಗೆ ಬಹಳ ಸಲುಗೆಯಿಂದ ಇರುತ್ತಿದ್ದಳು. ಎರಡು ಮೂರು ಬಾರಿ ಅವಳನ್ನು ಅನುಭವಿಸಬೇಕೆಂದು ಪ್ರಯತ್ನಿಸಿದರೂ ಆಕೆ ಬಹಳ ನಾಜೂಕಾಗಿ ದೂರ ಸರಿದಿದ್ದ ಕಾರಣ ಏನಾದರೂ ಮಾಡಿ ಅವಳನ್ನು ನನ್ನವಳನ್ನಾಗಿ ಮಾಡಿಕೊಳ್ಳಬೇಕೆಂಬ ಹಠಕ್ಕೆ ಬಿದ್ದೆ. ಅವಳು ಮನೋಜ್​ನ ಜತೆಗೆ ಅನ್ಯೋನ್ಯವಾಗಿಯೇ ಇದ್ದದ್ದು ನನ್ನನ್ನು ಇನ್ನಷ್ಟು ತಲೆಕೆಡಿಸಿತ್ತು. ಅವರಿಬ್ಬರ ಸಂಸಾರದಲ್ಲಿ ಹುಳಿ ಹಿಂಡಿ ವಿವಾಹ ವಿಚ್ಛೇದನ ಮಾಡಿಸಬೇಕೆಂದು ನಾನು ಸಾಕಷ್ಟು ಪ್ರಯತ್ನಗಳನ್ನು ಮಾಡಿದೆ. ಆದರೆ ಅವಳು ಮನೋಜನನ್ನು ತುಂಬಾ ಪ್ರೀತಿಸುತ್ತಿದ್ದಳು. ಅವರಿಬ್ಬರು ದೂರವಾಗಬೇಕಾದರೆ ಮನೋಜ್​ನನ್ನು ಕೊಲೆ ಮಾಡಿಸುವುದೊಂದೇ ಉಪಾಯ ಎನಿಸಿತು. ನಂತರ ಅರ್ಚನಾಳನ್ನು ನನ್ನ ಎರಡನೆಯ ಹೆಂಡತಿಯನ್ನಾಗಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಮನೋಜನ ಕೊಲೆಗೆ ಸುಪಾರಿ ಕೊಟ್ಟೆ.’ ರಾಮಪ್ರಸಾದ್​ನ ಹೇಳಿಕೆ ಪಡೆದ ಪೊಲೀಸರು ಇತರ ನಾಲ್ವರನ್ನು ಬಂಧಿಸಿ ಒಳಸಂಚನ್ನು ರೂಪಿಸಿ ಕೊಲೆಮಾಡಿದ ಆರೋಪದ ಮೇರೆಗೆ ಆರೋಪಪಟ್ಟಿ ಸಲ್ಲಿಸಿದರು. ನ್ಯಾಯಾಧೀಶರು ರಾಮಪ್ರಸಾದ್​ಗೆ ಜೀವಿತಾವಧಿವರೆಗೆ ಕಾರಾಗೃಹವಾಸ ವಿಧಿಸಿ ಫಾತಿಮಾ ಹೊರತಾಗಿ ಉಳಿದವರಿಗೆ ಜೀವಾವಧಿ ಶಿಕ್ಷೆ ನೀಡಿದರು. ‘ಕಾಮೋದ್ವೇಗದ ಅಪರಾಧಗಳೆನ್ನುವುವು ಇಲ್ಲವೇ ಇಲ್ಲ; ಎಲ್ಲವೂ ಸ್ವಾಧೀನತೆಗಾಗಿ ನಡೆಯುವ ಅಪರಾಧಗಳೇ’ ಎನ್ನುತ್ತಾಳೆ ಅಮೆರಿಕಾದ ಸ್ತ್ರೀವಾದಿ ಆಂದೋಲನದ ನಾಯಕಿ ಗ್ಲೋರಿಯಾ ಸ್ಟೀನೆಮ್ ಅರ್ಚನಾಳನ್ನು ಸ್ವಾಧೀನ ಪಡಿಸಿಕೊಳ್ಳಬೇಕೆಂಬ ರಾಮಪ್ರಸಾದ್​ನ ಹಠ ಅಮಾಯಕ ಮನೋಜ್​ನ ಸಾವಿಗೆ ಕಾರಣವಾದದ್ದು ದುರ್ದೈವ.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net