

2019ರ ವರದಿಯ ಪ್ರಕಾರ, ಭಾರತದಲ್ಲಿ ಸುಮಾರು ಎರಡು ಕೋಟಿಯಷ್ಟು ಮಂದಿ ವೇಶ್ಯಾವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರಲ್ಲಿ ಹೆಚ್ಚಿನವರನ್ನು ಮೋಸದಿಂದ ಈ ವೃತ್ತಿಗೆ ದೂಡಲಾಗಿದೆ. ಅರ್ಧಕ್ಕಿಂತಲೂ ಹೆಚ್ಚು ಮಂದಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು! ಈ ವೃತ್ತಿಗೆ ತಳ್ಳಲ್ಪಟ್ಟ ಸಂತ್ರಸ್ತರನ್ನು ರಕ್ಷಿಸಿ, ಅವರಿಗೆ ನೆರವು ನೀಡಲು ಹಲವಾರು ಸಂಘ ಸಂಸ್ಥೆಗಳು ದುಡಿಯುತ್ತಿವೆ. ಇದೇ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುವ ಗುಜ್ಜರ್ ಮದುವೆ ಬಗ್ಗೆ ಧಾರವಾಡ ಮಾನವ ಹಕ್ಕುಗಳ ಕೇಂದ್ರದ ಸಂಸ್ಥಾಪಕಿ ಡಾ.ಇಸಬೆಲ ಎಸ್. ಝೇವಿಯರ್ ವಿವರಿಸಿದ್ದಾರೆ. ಈ ಗುಜ್ಜರ್ ಹೆಸರಿನಲ್ಲಿ ಹೆಣ್ಣುಮಕ್ಕಳ ಮಾರಾಟ ಹೇಗೆ ನಡೆಯುತ್ತದೆ ಎಂಬುದನ್ನು ತಿಳಿಸುವ ಮೂಲಕ ಎಚ್ಚರಿಸಿದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲಿ ಗುಜ್ಜರ್ ಮದುವೆ ಎನ್ನುವ ಹೆಸರಿನಲ್ಲಿ ಹೆಣ್ಣುಮಕ್ಕಳ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಉತ್ತರ ಭಾರತದ ಕೆಲವು ವೇಶ್ಯಾವಾಟಿಕೆ ಏಜೆಂಟರು ಉತ್ತರ ಕರ್ನಾಟಕದ ಬಡ ಹೆಣ್ಣುಮಕ್ಕಳ ಪಾಲಕರಿಗೆ ಸ್ವಲ್ಪ ದುಡ್ಡು, ಬಂಗಾರದ ಆಮಿಷ ಒಡ್ಡಿ, ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಂಡು ಹೋಗುತ್ತಿದ್ದಾರೆ.
ದುಡ್ಡು, ಚಿನ್ನ ನೋಡುವ ಬಡ ಪಾಲಕರು ಈತ ತುಂಬಾ ಸಿರಿವಂತನಿರಬಹುದು ಎಂದು ನಂಬಿ ಅಥವಾ ದುಡ್ಡಿನ ವ್ಯಾಮೋಹಕ್ಕೆ ಬಲಿಯಾಗಿ ಮದುವೆ ಮಾಡಿಸುತ್ತಾರೆ. ಇದು ಗುಜ್ಜರ್ ಸಮುದಾಯದಲ್ಲಿ ಹೆಚ್ಚಾಗಿರುವ ಕಾರಣ, ಗುಜ್ಜರ್ ಮದುವೆ ಎನ್ನುತ್ತಾರೆ. ನಂತರ ಈ ಹೆಣ್ಣುಮಕ್ಕಳನ್ನು ಮುಂಬೈ, ಪುಣೆ ಇತ್ಯಾದಿ ರೆಡ್ಲೈಟ್ ಏರಿಯಾಗಳಿಗೆ ಮಾರಾಟ ಮಾಡಲಾಗುತ್ತದೆ. ಇಂಥ ಸಂದರ್ಭಗಳಲ್ಲಿ ದೌರ್ಜನ್ಯದ ಕೇಸೂ ಹಾಕಲು ಆಗುತ್ತಿಲ್ಲ, ಮಹಿಳೆಯರಿಗೆ ಕಾನೂನಿನ ಅಡಿ ರಕ್ಷಣೆಯೂ ಸಿಗುತ್ತಿಲ್ಲ. ಇಂಥ ಹೀನಾಯ ಬದುಕು ಬದುಕುವ ಬದಲು ಫುಲ್ ಟೈಂ ಅಥವಾ ಪಾರ್ಟ್ ಟೈಂ ಲೈಂಗಿಕ ಕಾರ್ಯಕರ್ತೆಯಾಗಿ ದುಡಿದರೆ ಏನು ತಪ್ಪು ಎಂದು ಹಲವು ಮಹಿಳೆಯರು ನನ್ನನ್ನು ಪ್ರಶ್ನಿಸುತ್ತಾರೆ.
ಕುಡುಕ ಗಂಡ, ತುತ್ತು ಅನ್ನಕ್ಕೂ ಪರದಾಡುವ ಮಕ್ಕಳು, ಕುಡಿದು ಬಂದು ಹೊಡೆದು, ಬಡಿದು ಹಿಂಸಿಸುವ ಗಂಡ... ಇಂಥ ಸಂಸಾರಗಳೇ ಈ ಭಾಗಗಳಲ್ಲಿ ಹೆಚ್ಚು. ಅಂಥ ಸಂದರ್ಭಗಳಲ್ಲಿ ಗಾರೆ ಕೆಲಸಕ್ಕೋ, ಮನೆ ಕೆಲಸಕ್ಕೋ ಅಥವಾ ಇನ್ನಾವುದೇ ಕಚೇರಿಗಳಲ್ಲಿ ಚಿಕ್ಕಪುಟ್ಟ ಕೆಲಸ ಮಾಡಲು ಹೋದಾಗ ಅಲ್ಲಿಯೂ ಇವರ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆಯುತ್ತವೆ. ಕೂಲಿ ಕೆಲಸಕ್ಕೆ ದುಡ್ಡು ಕೊಡಬೇಕೆಂದರೆ, ತಮ್ಮ ಜತೆ ಲೈಂಗಿಕ ಸಂಪರ್ಕ ನಡೆಸಬೇಕು ಎಂದು ಕೇಳುವ ಪುರುಷರ ನಡುವೆ ನಲುಗುವ ಮಹಿಳೆಯರೂ ಸ್ವ ಇಚ್ಛೆಯಿಂದ ಲೈಂಗಿಕ ಕಾರ್ಯಕರ್ತೆಯರಾಗಿ ದುಡಿಯುತ್ತಿದ್ದಾರೆ. ಇಂಥ ಮಹಿಳೆಯರಿಗೆ ಕೌನ್ಸೆಲಿಂಗ್ ಮಾಡಿ, ಅವರಿಗೆ ಎಲ್ಲಾ ರೀತಿಯ ಸಹಾಯ ಮಾಡುವ ನಿಟ್ಟಿನಲ್ಲಿ 2000ನೇ ಸಾಲಿನಲ್ಲಿ ಧಾರವಾಡದಲ್ಲಿ ‘ಸಾಧನಾ ಮಾನವ ಹಕ್ಕುಗಳ ಸಂಸ್ಥೆ’ ಹುಟ್ಟುಹಾಕಲಾಗಿದೆ. ನಮ್ಮ ಕೈಲಾದಷ್ಟು ಸಹಾಯ ನಾವು ಮಾಡಬಹುದು. ಆದರೆ ಇದಕ್ಕೆ ಸಂಬಂಧಿತ ಅಧಿಕಾರಿಗಳ ಸಹಾಯವೂ ಅಷ್ಟೇ ಮುಖ್ಯವಲ್ಲವೆ? ಒಳ್ಳೆಯ ಅಧಿಕಾರಿಗಳು ಬಂದಾಗ, ಮಹಿಳೆಯರ ರಕ್ಷಣೆ ಮಾಡುವುದು, ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಿದ್ದಿದೆ.
ಆದರೆ ದುರದೃಷ್ಟ ಎಂದರೆ, ಅಂಥ ಒಳ್ಳೆಯ ಅಧಿಕಾರಿಗಳು ಸಿಗುವುದು ವಿರಳಾತಿವಿರಳ, ಒಂದು ವೇಳೆ ಅವರು ನಮ್ಮ ನೆರವಿಗೆ ಬಂದರೂ, ಮೇಲಧಿಕಾರಿಗಳ, ರಾಜಕೀಯ ಒತ್ತಡದಿಂದ ಕೇಸು ಟುಸ್ ಆಗುವುದೇ ಹೆಚ್ಚು. ಪರಿಸ್ಥಿತಿ ಹೀಗಿರುವಾಗ ಯಾರಿಂದ ನಾವು ಏನು ತಾನೆ ನಿರೀಕ್ಷಿಸಲು ಸಾಧ್ಯ? ನಮ್ಮ ವ್ಯವಸ್ಥೆ ಸರಿಯಾಗುವವರೆಗೆ ಇಂಥ ಮಹಿಳೆಯರ ಶೋಷಣೆ ತಪ್ಪಿದ್ದಲ್ಲ.
| ಡಾ.ಇಸಬೆಲ ಎಸ್. ಝೇವಿಯರ್, ಸಂಸ್ಥಾಪಕರು, ಮಾನವ ಹಕ್ಕುಗಳ ಕೇಂದ್ರ, ಧಾರವಾಡ