

2019ರ ವರದಿಯ ಪ್ರಕಾರ, ಭಾರತದಲ್ಲಿ ಸುಮಾರು ಎರಡು ಕೋಟಿಯಷ್ಟು ಮಂದಿ ವೇಶ್ಯಾವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರಲ್ಲಿ ಹೆಚ್ಚಿನವರನ್ನು ಮೋಸದಿಂದ ಈ ವೃತ್ತಿಗೆ ದೂಡಲಾಗಿದೆ. ಅರ್ಧಕ್ಕಿಂತಲೂ ಹೆಚ್ಚು ಮಂದಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು! ಈ ವೃತ್ತಿಗೆ ತಳ್ಳಲ್ಪಟ್ಟ ಸಂತ್ರಸ್ತರನ್ನು ರಕ್ಷಿಸಿ, ಅವರಿಗೆ ನೆರವು ನೀಡಲು ಹಲವಾರು ಸಂಘ ಸಂಸ್ಥೆಗಳು ದುಡಿಯುತ್ತಿವೆ. ಹಾಸನದ ರೂಪಾ ಅವರು ಕೂಡ ಲೈಂಗಿಕ ಕಾರ್ಯಕರ್ತೆಯರ ರಕ್ಷಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಲೈಂಗಿಕ ಕಾರ್ಯಕರ್ತೆಯರ ರಕ್ಷಣೆಯಲ್ಲಿ ತೊಡಗಿರುವ ಪ್ರಮುಖ ಮಹಿಳೆಯರಲ್ಲಿ ಹಾಸನದ ರೂಪಾ ಹಾಸನ ಒಬ್ಬರಾಗಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಲೈಂಗಿಕ ಕಾರ್ಯಕರ್ತೆಯರ ಸಮಸ್ಯೆಗಳಿಗೆ ಕಿವಿಯಾಗಿ ಸರ್ಕಾರದ ಮಟ್ಟದಲ್ಲಿ ಚರ್ಚೆ, ಅಧ್ಯಯನ ನಡೆಸುತ್ತಿರುವ ರೂಪಾ, ಈ ನಿಟ್ಟಿನಲ್ಲಿ ಅನೇಕ ಹೋರಾಟಗಳನ್ನು ಕೈಗೊಂಡಿದ್ದಾರೆ.
ಹತ್ತು ವರ್ಷದ ಹಿಂದೆ ಬಾಲಕಾರ್ವಿುಕ ಪದ್ಧತಿ, ಜೀತ ಪದ್ಧತಿ, ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳ ಸ್ಥಿತಿಗತಿ ಪರಿಶೀಲನೆ ವೇಳೆ 14 ವರ್ಷದ ಬಾಲಕಿಯೊಬ್ಬಳು ಲೈಂಗಿಕ ಶೋಷಣೆಗೆ ಒಳಪಟ್ಟಿರುವ ವಿಚಾರ ಬೆಳಕಿಗೆ ಬಂದಿತ್ತು. ಅದರಿಂದ ವಿಚಲಿತರಾದ ರೂಪಾ, ಅಂದಿನಿಂದ ಲೈಂಗಿಕ ಕಾರ್ಯಕರ್ತೆಯರ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ನೂರಾರು ಮಹಿಳೆಯರನ್ನು ಲೈಂಗಿಕ ಶೋಷಣೆಯಿಂದ ಹೊರ ತಂದಿದ್ದಾರೆ.
ಸಾಹಿತಿಯೂ ಆಗಿರುವ ಇವರು, ‘ಪ್ರೇರಣಾ’ ಎಂಬ ಟ್ರಸ್ಟ್ ಮೂಲಕ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಹೆಣ್ಣು ಸ್ವಇಚ್ಛೆಯಿಂದ ಲೈಂಗಿಕ ಕಾರ್ಯಕರ್ತೆಯಾಗಿದ್ದರೆ ಆಕೆಯನ್ನು ಮಾತ್ರ ಲೈಂಗಿಕ ಕಾಯಕರ್ತೆ ಎಂದು ಕರೆಯಬೇಕು. ಆದರೆ ಬಡತನ, ಅನಕ್ಷರತೆ, ದಬ್ಬಾಳಿಕೆ ಹಾಗೂ ತನ್ನದಲ್ಲದ ಕಾರಣಗಳಿಂದ ವೃತ್ತಿಯಲ್ಲಿ ತೊಡಗಿರುವವರನ್ನು ಲೈಂಗಿಕ ದಮನಿತರು ಎಂದು ಕರೆಯಬೇಕೆಂದು ಇವರು ಪ್ರತಿಪಾದಿಸುತ್ತಾರೆ.
2015 ರಲ್ಲಿ ರಚನೆಯಾದ ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿ ಅಧ್ಯಯನ ಸಮಿತಿಯ ಸದಸ್ಯರಾಗಿ ಎರಡು ವರ್ಷ ರಾಜ್ಯಾದ್ಯಂತ ಸಂಚರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಜಿಲ್ಲೆಯಲ್ಲಿರುವ ಲೈಂಗಿಕ ದಮನಿತರನ್ನು ಗುರುತಿಸಿ ಜಿಲ್ಲಾಡಳಿತದಿಂದ ಸಾಲಸೌಲಭ್ಯ ಕೊಡಿಸಿ 150ಕ್ಕೂ ಹೆಚ್ಚು ಮಹಿಳೆಯರಿಗೆ ಉತ್ತಮ ಜೀವನ ಕಟ್ಟಿಕೊಡುವಲ್ಲಿ ನೆರವಾಗಿದ್ದಾರೆ. ಜಿಲ್ಲೆಯ 36 ಬಾಲಕಿಯರನ್ನು ಲೈಂಗಿಕ ಶೋಷಣೆಯಿಂದ ಹೊರ ತಂದಿದ್ದಾರೆ.
ಸರ್ಕಾರದ ಘಟಕವಾಗಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಮಂಡಳಿ ಕಾಂಡೋಮ್ಸ್ ಹಂಚಲು ಬಾಲಕಿಯರನ್ನೇ ಬಳಸಿಕೊಳ್ಳುತ್ತಿದೆ. ಒಂದು ರೀತಿಯಲ್ಲಿ ಮಹಿಳೆಯರು ದಾರಿ ತಪ್ಪಲು ಸರ್ಕಾರವೇ ನೇರ ಕಾರಣವಾಗಿದೆ. ಸಂಬಳಕ್ಕಾಗಿ ಕಾಂಡೋಮ್ಸ್ ವಿತರಣೆ ಕೆಲಸಕ್ಕೆ ಸೇರಿರುವ ಮಹಿಳೆಯರು ಅದನ್ನೇ ವೃತ್ತಿಯಾಗಿ ಮಾಡಿಕೊಳ್ಳುತ್ತಾರೆ ಎಂಬ ಸಂಪೂರ್ಣ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ.