ಕತ್ತಲ ಕೂಪದಲಿ ಕಂದೀಲು ಹಿಡಿದವರು: ರೇಷನ್​ಕಾರ್ಡ್​ನಲ್ಲಿ ದಲ್ಲಾಳಿ ಫೋಟೋ...

Brinda Adiga
Published on

2019ರ ವರದಿಯ ಪ್ರಕಾರ, ಭಾರತದಲ್ಲಿ ಸುಮಾರು ಎರಡು ಕೋಟಿಯಷ್ಟು ಮಂದಿ ವೇಶ್ಯಾವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರಲ್ಲಿ ಹೆಚ್ಚಿನವರನ್ನು ಮೋಸದಿಂದ ಈ ವೃತ್ತಿಗೆ ದೂಡಲಾಗಿದೆ. ಅರ್ಧಕ್ಕಿಂತಲೂ ಹೆಚ್ಚು ಮಂದಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು! ಈ ವೃತ್ತಿಗೆ ತಳ್ಳಲ್ಪಟ್ಟ ಸಂತ್ರಸ್ತರನ್ನು ರಕ್ಷಿಸಿ, ಅವರಿಗೆ ನೆರವು ನೀಡಲು ಹಲವಾರು ಸಂಘ ಸಂಸ್ಥೆಗಳು ದುಡಿಯುತ್ತಿವೆ. ಅವರಲ್ಲಿ ಬೆಂಗಳೂರಿನ ಗ್ಲೋಬಲ್ ಕನ್ಸರ್ನ್ಸ್ ಇಂಡಿಯಾದ ಬೃಂದಾ ಅಡಿಗೆ ಕೂಡ ಒಬ್ಬರು.ಈ ಗ್ಲೋಬಲ್​ ಕನ್ಸರ್ನ್ಸ್ ಇಂಡಿಯಾ ಹೇಗೆ ಕೆಲಸ ಮಾಡುತ್ತದೆ ಎಂದು ಅವರೇ ಹೇಳಿದ್ದಾರೆ ನೋಡಿ..

ವೇಶ್ಯಾವಾಟಿಕೆಗೆ ತಳ್ಳಲ್ಪಟ್ಟಿರುವ ಹೆಣ್ಣುಮಕ್ಕಳ ರಕ್ಷಣೆಗಾಗಿ ‘ಗ್ಲೋಬಲ್ ಕನ್ಸರ್ನ್ಸ್ ಇಂಡಿಯಾ’ ಎಂಬ ಸ್ವಯಂಸೇವಾ ಸಂಸ್ಥೆಯ ಮೂಲಕ 1991ರಿಂದಲೂ ಕೆಲಸ ಮಾಡುತ್ತಿದ್ದೇನೆ. ಈವರೆಗೆ ಪೊಲೀಸರ ಜತೆಗೂಡಿ ಎರಡು ಸಾವಿರಕ್ಕೂ ಅಧಿಕ ಹೆಣ್ಣುಮಕ್ಕಳ ರಕ್ಷಣೆ ಮಾಡಲಾಗಿದೆ.

ನಮ್ಮ ಸಂಸ್ಥೆಯ ಕೆಲಸ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳ ರಕ್ಷಣೆ ಮಾಡುವುದು. ಆದರೆ ದುರದೃಷ್ಟ ಎಂದರೆ, ಮಕ್ಕಳ ವಯಸ್ಸನ್ನು ಪತ್ತೆಹಚ್ಚುವುದೇ ತಲೆನೋವಿನ ಕೆಲಸ. 10-15 ವರ್ಷದ ಮಕ್ಕಳು ಕೂಡ ತಮ್ಮ ವಯಸ್ಸು 20-25 ಎನ್ನುತ್ತಾರೆ. ಏಕೆಂದರೆ ಅಲ್ಲೇ ಹತ್ತಿರಲ್ಲಿಯೇ ದಲ್ಲಾಳಿಗಳು ಇರುತ್ತಾರೆ. ಅವರ ರಕ್ಷಣೆಗೆಂದು ಬಂದವರನ್ನು ಕೂಡ ನಂಬಲಾಗದ ಸ್ಥಿತಿ ಆ ಮುಗ್ಧ ಕಂದಮ್ಮಗಳದ್ದು. ಅವರ ಭಯಕ್ಕೆ ಸಾಕ್ಷಿಯಾಗಿರುವುದ ಅವರೆಲ್ಲರ ಮೈಮೇಲಿನ ಬರೆಗಳು, ಗಾಯಗಳು! ಹೌದು. ಯಾವುದೋ ಸಂದರ್ಭದಲ್ಲಿ ಅಲ್ಲಿಂದ ತಪ್ಪಿಸಿಕೊಳ್ಳಲು ಹೋದಾಗಲೋ, ಗಿರಾಕಿಗಳು ಹೇಳಿದಂತೆ ಕೇಳದಿದ್ದಾಗಲೋ ಮೈಮೇಲೆ ಬರೆ ಎಳೆಯಲಾಗುತ್ತದೆ. ಮಾತು ಕೇಳದ ಹೆಣ್ಣುಮಕ್ಕಳಿಗೆ ಆಸಿಡ್ ಎರಚಿಯೋ ಇಲ್ಲವೇ ಅತ್ಯಂತ ಕ್ರೂರವಾಗಿ ಶಿಕ್ಷಿಸಿಯೋ ಅಲ್ಲಿ ಇರುವವರಿಗೆ ಭಯ ಹುಟ್ಟಿಸಲಾಗುತ್ತದೆ.

ಈ ಮಕ್ಕಳ ಮೇಲೆ ಎಷ್ಟರಮಟ್ಟಿಗೆ ಕ್ರೌರ್ಯ ನಡೆಯುತ್ತದೆ ಎಂದರೆ, ಮಾಸಿಕ ಋತುಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದರೆ, ಅವರ ಗುಪ್ತಾಂಗಕ್ಕೆ ಖಾರದ ಪುಡಿ ಹಾಕಲಾಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ಯಾರನ್ನೂ ನಂಬುವ ಸ್ಥಿತಿಯಲ್ಲಿ ಈ ಹೆಣ್ಣುಮಕ್ಕಳು ಇರುವುದಿಲ್ಲ. ಇಂಥ ಸಂದರ್ಭಗಳಲ್ಲಿ ರಕ್ಷಣಾ ಕಾರ್ಯಾಚರಣೆ ಬಹಳ ಕಷ್ಟವಾಗುತ್ತದೆ. ಒಂದು ಮಗುವಿನಿಂದ ಒಂದೇ ಒಂದು ಸ್ಟೇಟ್​ವೆುಂಟ್ ಪಡೆಯಬೇಕಾದಲ್ಲಿ ತಿಂಗಳಾನುಗಟ್ಟಲೆ ಹಿಡಿಯುತ್ತದೆ. ಅದೂ ಅಲ್ಲದೇ ಪೊಲೀಸ್ ಠಾಣೆಗಳಲ್ಲಿ ಆ ಮಕ್ಕಳು ಹೇಳಿಕೆ ಕೊಡುವಾಗ ದಲ್ಲಾಳಿಗಳು ಅಲ್ಲಿಯೇ ಓಡಾಡಿಕೊಂಡಿರುತ್ತಾರೆ. ವಿಚಿತ್ರ ಎಂದರೆ ವೇಶ್ಯಾವಾಟಿಕೆಗೆ ತಳ್ಳಲ್ಪಟ್ಟ ಅನೇಕ ಮಂದಿಯ ಆಧಾರ್ ಕಾರ್ಡ್​ನಲ್ಲಿ ಈ ಹೆಣ್ಣುಮಕ್ಕಳ ಜತೆ, ಪಿಂಪ್​ಗಳ ಹೆಸರಿದ್ದರೆ ರೇಷನ್ ಕಾರ್ಡ್ ಗಳಲ್ಲಿ ಅವರದ್ದೇ ಫೋಟೋ ಇರುತ್ತದೆ. ಆದ್ದರಿಂದ ರಕ್ಷಣೆ ಮಾಡುವುದೇ ಸವಾಲಿನ ಕೆಲಸವಾಗಿದೆ. ಇವೆಲ್ಲವುಗಳ ಹೊರತಾಗಿಯೂ ಸಾವಿರಾರು ಮಕ್ಕಳನ್ನು ಕಾಪಾಡಿ ಮಕ್ಕಳ ಕಲ್ಯಾಣ ಸಮಿತಿಗೆ ನೀಡಲಾಗಿದೆ.

| ಬೃಂದಾ ಅಡಿಗೆ, ಗ್ಲೋಬಲ್ ಕನ್ಸರ್ನ್ಸ್ ಇಂಡಿಯಾ, ಬೆಂಗಳೂರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net