

2019ರ ವರದಿಯ ಪ್ರಕಾರ, ಭಾರತದಲ್ಲಿ ಸುಮಾರು ಎರಡು ಕೋಟಿಯಷ್ಟು ಮಂದಿ ವೇಶ್ಯಾವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರಲ್ಲಿ ಹೆಚ್ಚಿನವರನ್ನು ಮೋಸದಿಂದ ಈ ವೃತ್ತಿಗೆ ದೂಡಲಾಗಿದೆ. ಅರ್ಧಕ್ಕಿಂತಲೂ ಹೆಚ್ಚು ಮಂದಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು! ಈ ವೃತ್ತಿಗೆ ತಳ್ಳಲ್ಪಟ್ಟ ಸಂತ್ರಸ್ತರನ್ನು ರಕ್ಷಿಸಿ, ಅವರಿಗೆ ನೆರವು ನೀಡಲು ಹಲವಾರು ಸಂಘ ಸಂಸ್ಥೆಗಳು ದುಡಿಯುತ್ತಿವೆ. ಅವರಲ್ಲಿ ಶಿವಮೊಗ್ಗ ಏಡ್ಸ್ ತಡೆಗಟ್ಟುವ ಮಹಿಳಾ ಸಂಘದ 'ಸಾಧನಾ'ದ ಕಲಾವತಿಯವರು ಎಚ್ಐವಿ ಪೀಡಿತರ ಪರವಾಗಿ ಅವಿರತವಾಗಿ ಶ್ರಮಿಸುತ್ತಿದ್ದಾರೆ.
ಲೈಂಗಿಕ ಕಾರ್ಯಕರ್ತೆಯರು ಹಾಗೂ ಎಚ್ಐವಿ ಪೀಡಿತರ ಪರವಾಗಿ ಶಿವಮೊಗ್ಗದ ಕಲಾವತಿ ಅವರದ್ದು ದಣಿವರಿಯದ ಕೆಲಸ. ಈ ಕೆಲಸದಲ್ಲಿ ಎಷ್ಟೇ ಕಷ್ಟಗಳು ಎದುರಾದರೂ ಸತತ 15 ವರ್ಷಗಳಿಂದ ಸಮಾಜದಲ್ಲಿ ನೊಂದವರ ಪರವಾಗಿ, ಅವರ ದನಿಯಾಗಿ ಕೆಲಸ ಮಾಡುತ್ತಿದ್ದಾರೆ. 54ರ ಹರೆಯದಲ್ಲೂ ಇವರದ್ದು ಬತ್ತದ ಉತ್ಸಾಹ ಹಾಗೂ ಕಾಳಜಿ. ಶಿವಮೊಗ್ಗದ ‘ಸಾಧನ’ ಏಡ್ಸ್ ತಡೆಗಟ್ಟುವ ಮಹಿಳಾ ಸಂಘದಲ್ಲಿ ಕ್ಷೇತ್ರ ಕಾರ್ಯಕರ್ತೆಯಾಗಿರುವ ಕಲಾವತಿ, ಲೈಂಗಿಕ ಕಾರ್ಯಕರ್ತೆಯರನ್ನು ಆ ವೃತ್ತಿಯಿಂದ ವಿಮುಕ್ತಿಗೊಳಿಸಿ ಸಮಾಜದ ಮುಖ್ಯವಾಹಿನಿಗೆ ಕರೆತರಲು ಇನ್ನಿಲ್ಲದ ಶ್ರಮ ವಹಿಸುತ್ತಿದ್ದಾರೆ. ಇದುವರೆಗೆ ನೂರಾರು ಮಹಿಳೆಯರನ್ನು ರಕ್ಷಿಸಿದ್ದಾರೆ. ಶಿವಮೊಗ್ಗ ಆಟೋ ಕಾಂಪ್ಲೆಕ್ಸ್ನಲ್ಲಿ ಸಣ್ಣದೊಂದು ಕ್ಯಾಂಟೀನ್ ಮೂಲಕ ಜೀವನದ ದಾರಿ ಕಂಡುಕೊಂಡಿರುವ ಇವರು, ಹೆಚ್ಚಿನ ಸಮಯವನ್ನು ಲೈಂಗಿಕ ಕಾರ್ಯಕರ್ತೆಯರು ಹಾಗೂ ಎಚ್ಐವಿ ಪೀಡಿತರ ಕಲ್ಯಾಣಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಇಷ್ಟೇ ಅಲ್ಲದೆ, ಸರ್ಕಾರ ರೂಪಿಸಿರುವ ಯೋಜನೆಗಳ ಬಗ್ಗೆ ಇಂಥ ಮಹಿಳೆಯರಿಗೆ ಅರಿವು ಮೂಡಿಸಿ ಹೊಸ ಬದುಕು ಕಟ್ಟಿಕೊಡುತ್ತಿದ್ದಾರೆ. ‘ನಾನು ಪ್ರಾಥಮಿಕ ಹಂತದ ವಿದ್ಯಾಭ್ಯಾಸವನ್ನೂ ಮುಗಿಸಿಲ್ಲ. ಆದರೆ ಸಮಾಜದಿಂದ ಅವಗಣನೆಗೆ ಒಳಗಾದವರ ಸೇವೆ ಮಾಡಬೇಕೆಂಬ ಹಂಬಲದಿಂದ ಕಾರ್ಯನಿರ್ವಹಿಸುತ್ತಿದ್ದೇನೆ. ಲೈಂಗಿಕ ಕಾರ್ಯಕರ್ತೆಯರ ಪುನರ್ವಸತಿಗಾಗಿ ಸರ್ಕಾರ ಇನ್ನಷ್ಟು ಉತ್ತೇಜನಕರ ಯೋಜನೆಗಳನ್ನು ರೂಪಿಸಬೇಕು. ಆಗ ಅವರ ಜೀವನ ಮಟ್ಟ ಸುಧಾರಿಸಲು ಸಾಧ್ಯ’ ಎನ್ನುತ್ತಾರೆ ಕಲಾವತಿ.
ಲೈಂಗಿಕ ಕಾರ್ಯಕರ್ತೆಯರು ಪದೇಪದೇ ವಲಸೆ ಹೋಗುವುದರಿಂದ ಅವರೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಳ್ಳುವುದು ಸುಲಭದ ಮಾತಲ್ಲ. ಕೆಲವರು ಹಲವು ಸಂದರ್ಭಗಳಲ್ಲಿ ನಮ್ಮ ಮನವೊಲಿಕೆ ವಿರುದ್ಧ ತಿರುಗಿ ಬೀಳುತ್ತಾರೆ. ನಮ್ಮನ್ನೇ ಬೈಯ್ಯುವ ಅಪಾಯವೂ ಎದುರಾಗಿದೆ. ಹೀಗಾಗಿ ಬಹಳ ತಾಳ್ಮೆ ಹಾಗೂ ವಿಶ್ವಾಸದಿಂದ ಅವರೊಂದಿಗೆ ವರ್ತಿಸಬೇಕಾಗುತ್ತದೆ. | ಕಲಾವತಿ, ‘ಸಾಧನ’ ಏಡ್ಸ್ ತಡೆಗಟ್ಟುವ ಮಹಿಳಾ ಸಂಘ, ಶಿವಮೊಗ್ಗ