

ಅಲ್ಲಿ ಅಸಂಖ್ಯಾತ ಸಂಖ್ಯೆಯಲ್ಲಿ ಕಾಣಸಿಕೊಂಡ ಸಾಧು-ಸಂನ್ಯಾಸಿ-ಬೈರಾಗಿಗಳು, ಅವರ ವಿಚಿತ್ರ ವೇಷ-ಭೂಷಣಗಳು ಹಾಗೂ ಅವರ ಮಠ ಮತ್ತು ಅಖಾಡಾಗಳು ಆಧ್ಯಾತ್ಮಿಕತೆಯೆಂದರೆ ಜನಸಾಮಾನ್ಯರಿಂದ ಬಹುದೂರವಾದ ಜೀವನವಿಧಾನವೆಂದೂ, ಸಾಮಾನ್ಯರು ಹೆಚ್ಚೆಂದರೆ ಅಲ್ಲಿಯ ಸಂಗಮದಲ್ಲಿ ಮೂರು ಬಾರಿ ಮುಳುಗಿ ಪವಿತ್ರರಾಗಬಹುದೆಂಬ ಮಿಥ್ಯಾಭಾವವನ್ನು ಪ್ರತಿಬಿಂಬಿಸುತ್ತವೆ.
ಭಾರತೀಯ ಸಂಸ್ಕೃತಿಯಲ್ಲಿ ಆಧ್ಯಾತ್ಮಿಕತೆಯು ಮೇಲೆ ಹೇಳಿದಂತೆ ಕೇವಲ ನಿವೃತ್ತಿ ಮಾರ್ಗವಲ್ಲ. ಅದು, ‘ನಾನು’ ಮತ್ತು ‘ನನ್ನದು’ ಎಂಬ ಸಹಜ ಪ್ರಬಲ ಪ್ರವೃತ್ತಿಗಳಿಂದ ಸೆಳೆಯಲ್ಪಡದೆ ಪ್ರಪಂಚದಲ್ಲಿ ನಿಷ್ಕಾಮ ಭಾವದೊಂದಿಗೆ ಕಾರ್ಯೋನ್ಮುಖರಾಗಿರುವುದೇ ಆಗಿದೆ. ಇದುವೇ ಭಗವದ್ಗೀತೆಯ ಉಪದೇಶ ಸಾರ. ಮಾನವನು ತನ್ನ ಜೀವನದ ಅತ್ಯುನ್ನತ ಗುರಿಯನ್ನು ಮುಟ್ಟಬೇಕಾದರೆ, ಸನಾತನ ಧರ್ಮವು ಪ್ರಾಚೀನ ಕಾಲದಿಂದಲೂ ಘೊಷಿಸುತ್ತಿರುವಂತೆ, ಅವನು ತನ್ನ ಉತ್ಕರ್ಷಕ್ಕಿಂತಲೂ ಲೋಕ ಕಲ್ಯಾಣವನ್ನು ಸಾಧಿಸುವುದಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು ಎಂಬುದು ಇದರ ಅರ್ಥ.
ನಮ್ಮೆಲ್ಲರಿಗೂ ತಿಳಿದಿರುವ ಶ್ರೀ ರಾಮಾನುಜಾಚಾರ್ಯರ ಬಾಲ್ಯಜೀವನದಲ್ಲಿ ನಡೆದ ಒಂದು ಘಟನೆ ಇದಕ್ಕೆ ಉಜ್ವಲ ನಿದರ್ಶನ. ಬಾಲಕರಾಗಿದ್ದ ಶ್ರೀ ರಾಮಾನುಜರಿಗೆ ಅವರ ಗುರುಗಳು ಜೀವನ ಸಾಫಲ್ಯತೆಯನ್ನು ಕರುಣಿಸುವ ಮಂತ್ರವನ್ನು ಉಪದೇಶಿಸುವ ಮುನ್ನ ಒಂದು ಷರತ್ತನ್ನು ವಿಧಿಸಿದ್ದರು- ‘ಶಿಷ್ಯನು ಈ ಮಂತ್ರವನ್ನು ಗೌಪ್ಯವಾಗಿಟ್ಟುಕೊಳ್ಳಬೇಕು; ಒಂದು ವೇಳೆ ಆವನು ಅದನ್ನು ಇತರರಿಗೆ ಬೋಧಿಸಿದ್ದೇ ಆದರೆ, ಅವರ ಉದ್ಧಾರವಾಗಬಹುದೇ ಹೊರತು ಶಿಷ್ಯನಿಗೆ ಅದರಿಂದ ಏನೂ ಪ್ರಯೋಜನವಾಗುವುದಿಲ್ಲ’. ಇದನ್ನು ಕೇಳಿದ ಬಾಲ ರಾಮಾನುಜರು ಆ ಊರಿನಲ್ಲಿ ಜನಸಂದಣಿಯಿಂದ ಕೂಡಿದ್ದ ಪ್ರಮುಖ ರಸ್ತೆಗಳು ಕೂಡುವ ಚೌಕಕ್ಕೆ ಹೋಗಿ, ಎಲ್ಲರಿಗೂ ಕೇಳುವಂತೆ ತಾವು ಗುರುವಿನಿಂದ ಕಲಿತ ಮಂತ್ರವನ್ನು ಗಟ್ಟಿಯಾಗಿ ಕೂಗಿ ಹೇಳಿದರು.
ಇದನ್ನು ತಿಳಿದ ಗುರುಗಳು, ‘ನೀನು ಯಾಕೆ ಹೀಗೆ ಮಾಡಿದೆ?’ ಎಂದು ಕೇಳಿದಾಗ, ಶಿಷ್ಯನು ಹೇಳಿದ ಉತ್ತರವು ಹೀಗಿತ್ತು: ‘ಈ ಮಂತ್ರದ ಬಲದಿಂದ ಸರ್ವರ ಉದ್ಧಾರವಾಗಬಹುದಾದರೆ ಅದನ್ನು ಇತರರಿಗೆ ಹೇಳಲು ನಾನೇಕೆ ಹಿಂಜರಿಯಬೇಕು? ಅದರಿಂದ ನನ್ನ ಉದ್ಧಾರವಾಗದಿದ್ದರೂ ತೊಂದರೆಯಿಲ್ಲ’.
ಹೀಗೆ ಸನಾತನ ಧರ್ಮೀಯರು ತಮ್ಮಲ್ಲಿದ್ದ ಯಾವುದೇ ಉತೃ ್ಕ್ಟ ವಸ್ತು-ವಿಷಯಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದೇ ಅವರ ಆಧ್ಯಾತ್ಮಿಕ ಜೀವನದ ಒಂದು ಮುಖ್ಯ ಭಾಗವಾಗಿತ್ತು. ಸಮಾಜದ ಸಮಸ್ಯೆಗಳಿಗೆ, ಅವರು ಸದಾ ತಮ್ಮ ಸ್ವಂತ ಉನ್ನತಿಗಿಂತಲೂ ಹೆಚ್ಚಾಗಿ ಸ್ಪಂದಿಸುತ್ತಿದ್ದರು. ‘ತ್ಯಾಗೇನೈಕೇ ಅಮೃತತ್ವ ಮಾನಶುಃ’- ‘ತ್ಯಾಗದಿಂದ ಮಾತ್ರ ಅಮೃತತ್ವ ಪಡೆಯಬಹುದು’ ಎಂದು ಉಪನಿಷತ್ತುಗಳು ಘೊಷಿಸುತ್ತವೆ. ಅಂತೆಯೇ ಭಗವದ್ಗೀತೆಯು ಸಾರುವಂತೆ, ‘ತೇ ಪ್ರಾಪ್ನುವಂತಿ ಮಾಮೇವ ಸರ್ವಭೂತಹಿತೇ ರತಾಃ’- ‘ಸರ್ವ ಜೀವಿಗಳ ಹಿತದಲ್ಲಿ ರತರಾದ ವ್ಯಕ್ತಿಗಳು ನನ್ನನ್ನೇ ಹೊಂದಿ ಪರಮಪದವನ್ನು ಪಡೆಯುತ್ತಾರೆ’. ಅದೇ ರೀತಿಯಲ್ಲಿ ಶ್ರೀ ಆದಿ ಶಂಕರಾಚಾರ್ಯರು ತಮ್ಮ ‘ಪ್ರಶ್ನೋತ್ತರ ರತ್ನಮಾಲಿಕಾ’ ಎಂಬ ಗ್ರಂಥದಲ್ಲಿ ಕೇಳಿರುವ ಒಂದು ಪ್ರಶ್ನೆ: ‘ಕುತ್ರ ಯತ್ನೋ ವಿಧೇಯಃ?’-‘ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಸದಾ ಯಾವ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು?’ ಇದಕ್ಕೆ ಅವರೇ ನೀಡಿರುವ ಉತ್ತರ: ‘ವಿದ್ಯಾಭ್ಯಾಸೇ ಸದೌಷಧೇ ದಾನೇ’ - ‘ವಿದ್ಯಾಭ್ಯಾಸವನ್ನು ಪ್ರಚಾರ ಮಾಡುವುದರಲ್ಲಿ, ಸದೌಷಧದ ವ್ಯವಸ್ಥೆಯಲ್ಲಿ ಹಾಗೂ ದಾನಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು’.
ಹೀಗೆ ಒಂದು ಸಹಸ್ರ ವರ್ಷಗಳ ಹಿಂದೆಯೇ ಲೋಕ ಕಲ್ಯಾಣ ಕಾರ್ಯಗಳಲ್ಲಿ ತೊಡಗಬೇಕೆಂದು ಸರ್ವರಿಗೂ ಅವರು ಕರೆಯಿತ್ತಿದ್ದರು. ಇದು ಭಾರತೀಯ ಸಂಸ್ಕೃತಿಯ ಆಧ್ಯಾತ್ಮಿಕತೆಯ ವಿಧಾನವಾಗಿತ್ತು. ಆದಿಶಂಕರರ ಕಾಲಕ್ಕಿಂತ ನಾಲ್ಕು ಶತಮಾನಗಳ ನಂತರ ಕರ್ನಾಟಕದಲ್ಲಿ ಉದಯವಾದ ಬಸವಣ್ಣನವರು, ‘ದಯವೇ ಧರ್ಮದ ಮೂಲವಯ್ಯ’ ಎಂದು ಘೊಷಿಸಿದ್ದಾರಲ್ಲವೇ!
ನಮ್ಮ ದೇಶದ ಇತಿಹಾಸದಲ್ಲಿ ಕಂಡುಬರುವಂತೆ ಹಿಂದಿನ ರಾಜ-ಮಹಾರಾಜರು ದೇವಸ್ಥಾನಗಳ ನಿರ್ಮಾಣ ಹಾಗೂ ಅವುಗಳ ಆಡಳಿತ ನಿರ್ವಹಣೆಯಲ್ಲಿ ತೊಡಗಿ, ಅಲ್ಲಿ ಎಲ್ಲರಿಗೂ ಸಂಪೂರ್ಣ ಉಚಿತ ವಿದ್ಯಾಭ್ಯಾಸ, ಔಷಧೋಪಚಾರ ಹಾಗೂ ಪೌಷ್ಠಿಕ ಆಹಾರಗಳನ್ನು ನೀಡುವ ವ್ಯವಸ್ಥೆಯನ್ನು ಮಾಡಿದ್ದರು. ಅದು ಅವರ ಆಧ್ಯಾತ್ಮಿಕ ಜೀವನ ವಿಧಾನವಾಗಿತ್ತು. ಪ್ರಾಚೀನ ಭಾರತದ ಪ್ರಸಿದ್ಧ ವಿಶ್ವವಿದ್ಯಾಲಯಗಳಾಗಿದ್ದ ನಳಂದ, ತಕ್ಷಶಿಲ ಮತ್ತು ವಿಕ್ರಮಶಿಲಗಳಲ್ಲಿ ನಾನಾ ದೇಶಗಳಿಂದ ಬರುತ್ತಿದ್ದ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತವಾಗಿ ವಿದ್ಯಾದಾನವನ್ನು ಮಾಡುತ್ತಿದ್ದರು. ಅಂತೆಯೇ ನಮ್ಮ ದೇಶದ ಆಯುರ್ವೆದ ವ್ಯವಸ್ಥೆಯಲ್ಲಿ ಔಷಧೋಪಚಾರವಲ್ಲದೆ ಶಸ್ತ್ರಕ್ರಿಯೆಗಳನ್ನೂ ಉಚಿತವಾಗಿ ಮಾಡುತ್ತಿದ್ದರು. ಪ್ರತಿಯೊಂದು ಮನೆಯಲ್ಲಿಯೂ, ಬಂದ ಯಾವುದೇ ಯಾತ್ರಾರ್ಥಿಗಳನ್ನು ತಮ್ಮ ಅತಿಥಿಗಳೆಂದೇ ಭಾವಿಸಿ ಅವರಿಗೆ ಆಶ್ರಯವನ್ನು ನೀಡುತ್ತಿದ್ದರು.
ಇತರರಿಗೆ ಸಹಾಯ ಮಾಡುವ ಹಾಗೂ ತನ್ನಲ್ಲಿರುವುದನ್ನು ಇತರರೊಂದಿಗೆ ಹಂಚಿಕೊಳ್ಳುವ ಪ್ರವೃತ್ತಿಯು ಭಾರತೀಯ ಸಂಸ್ಕೃತಿಯ ಒಂದು ಅವಿಚ್ಛಿನ್ನ ಭಾಗವಾಗಿತ್ತು. ನಮ್ಮ ದೇಶದ ಸವೋನ್ಮುಖ ಉತ್ಕರ್ಷಕ್ಕೆ ಇಂತಹ ಸಂಸ್ಕೃತಿಯೇ ಕಾರಣವಾಗಿತ್ತು. ಆದರೆ ಆಧುನಿಕ ಕಾಲದಲ್ಲಿ ಸರ್ವರ ಮೂಲಭೂತ ಅವಶ್ಯಕತೆಗಳಾದ ಆಹಾರ, ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ವ್ಯಾಪಾರೀಕರಣವಾಗಿರುವುದು ನಮ್ಮ ದೇಶದ ಸಂಸ್ಕೃತಿಯನ್ನು ಮತ್ತು ಸಮಾಜದಲ್ಲಿನ ರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸಿವೆ.
ಸನಾತನ ಧರ್ಮೀಯರು ಇಂದಿಗೂ ಪೂಜಿಸುತ್ತಿರುವ ದೇವ-ದೇವಿಯರೂ, ಇಂತಹ ಸರ್ವರ ಕಲ್ಯಾಣಕ್ಕಾಗಿ ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡುತ್ತಿದ್ದುದನ್ನು ನಾವು ಕಾಣಬಹುದಾಗಿದೆ. ಈಗ ತಾನೇ ಪ್ರಯಾಗ್ರಾಜ್ನಲ್ಲಿ ಸಮಾಪ್ತವಾಗಿರುವ ಮಹಾ ಕುಂಭಮೇಳವು ಜಗತ್ತಿನ ಅತ್ಯಂತ ದೊಡ್ಡ ಜನಸಂಗಮವಾಗಿದೆ. ಅಲ್ಲಿನ ಪವಿತ್ರ ತ್ರಿವೇಣಿ ಸಂಗಮದಲ್ಲಿ ಶ್ರದ್ಧಾವಂತ ಭಕ್ತರು ಮಾಡುವ ಸ್ನಾನವನ್ನು ‘ಅಮೃತ ಸ್ನಾನ’ವೆಂದು ಕರೆಯುತ್ತಾರೆ. ಈ ಸ್ನಾನವು ಅತ್ಯಂತ ಪವಿತ್ರವಾಗಿದ್ದು, ಅದಕ್ಕೆ ಜೀವನದ ಪರಮಗುರಿಯಾದ ಮೋಕ್ಷವನ್ನೇ ಪ್ರದಾನ ಮಾಡುವ ಶಕ್ತಿಯಿದೆಯೆಂದು ಶ್ರದ್ಧಾಳುಗಳು ನಂಬುತ್ತಾರೆ.
ಇದಕ್ಕೆ ಹಿನ್ನೆಲೆಯಾಗಿ ಒಂದು ಪೌರಾಣಿಕ ಘಟನೆಯಿದೆ. ಇದನ್ನು ನಾವು ವಿಷ್ಣು ಪುರಾಣದಲ್ಲಿ ಕಾಣಬಹುದು. ದೇವತೆಗಳು ಹಾಗೂ ದಾನವರು ಒಂದುಗೂಡಿ ಸಮುದ್ರ ಮಂಥನವನ್ನು ಮಾಡುತ್ತಾರೆ. ಅದರ ಉದ್ದೇಶ ಸಮುದ್ರದ ಉದರದಿಂದ ಬರುವ ಅತ್ಯುತೃ ್ಕ್ಟ ಕೊಡುಗೆಗಳನ್ನು ಪಡೆದುಕೊಳ್ಳುವುದು. ವಿಷ್ಣುವಿನ ಅವತಾರವಾದ ಮಹಾಕೂರ್ಮನ ಬೆನ್ನಮೇಲೆ ಮಂದರ ಪರ್ವತವನ್ನಿಟ್ಟು ವಾಸುಕಿ ಸರ್ಪವನ್ನೇ ಹಗ್ಗವನ್ನಾಗಿ ಉಪಯೋಗಿಸಿ, ಸಮುದ್ರವನ್ನು ಮಂಥಿಸಿದರು. ಸಮುದ್ರದಿಂದ ಬಂದ ಅಮೃತ ಕಲಶವನ್ನು ಪಡೆದುಕೊಳ್ಳುವುದೇ ದೇವ-ದಾನವರ ಉದ್ದೇಶವಾಗಿತ್ತು.
ಅಮೃತ ಕಲಶಕ್ಕಾಗಿ ಅವರು ಪರಸ್ಪರ ಹೋರಾಟ ಮಾಡುತ್ತಿದ್ದಾಗ, ಮಹಾವಿಷ್ಣುವು ಲೋಕ ಕಲ್ಯಾಣದ ಉದ್ದೇಶದಿಂದ ಮೋಹಿನಿಯ ರೂಪವನ್ನು ತಳೆದನು. ಮೋಹಿನಿಯು ತನ್ನ ಚತುರತೆಯಿಂದ ಅಮೃತವನ್ನು ದೇವತೆಗಳಿಗೆ ಮಾತ್ರ ನೀಡಿದಳು. ದಾನವರಿಗೆ ಅಮೃತದ ಒಂದು ಬಿಂದುವೂ ಲಭ್ಯವಾಗಲಿಲ್ಲ. ಆ ಸಂದರ್ಭದಲ್ಲಿ ಕೆಲವು ಅಮೃತದ ಹನಿಗಳು ಹರಿದ್ವಾರ, ನಾಸಿಕ್, ಉಜ್ಜಯಿನಿ ಮತ್ತು ಪ್ರಯಾಗ್ರಾಜ್ಗಳಲ್ಲಿ ಬಿದ್ದವೆಂಬುದು ಪ್ರತೀತಿ. ಈ ಸ್ಥಳಗಳಲ್ಲಿ ಪ್ರಾಚೀನ ಕಾಲದಿಂದ ಇಂದಿನವರೆಗೂ ಕುಂಭಮೇಳವು ನಡೆಯುತ್ತಿದೆ. 6 ವರ್ಷಗಳಿಗೊಮ್ಮೆ ನಡೆಯುವ ಕುಂಭಮೇಳವನ್ನು ‘ಅರ್ಧಕುಂಭ’ವೆಂದೂ, 12 ವರ್ಷಗಳಿಗೊಮ್ಮೆ ನಡೆಯುವ ಮೇಳವನ್ನು ‘ಪೂರ್ಣಕುಂಭ’ವೆಂದೂ, 144 ವರ್ಷಗಳಿಗೊಮ್ಮೆ ನಡೆಯುವ ಮೇಳವನ್ನು ‘ಮಹಾಕುಂಭ’ವೆಂದೂ ಕರೆಯುತ್ತಾರೆ.
ಇವುಗಳ ಪೈಕಿ ಪ್ರಯಾಗ್ರಾಜ್ನಲ್ಲಿ 144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭದ ಅಮೃತ ಸ್ನಾನವು, ಮಾನವೀಯತೆಯನ್ನು ಅಮರವಾಗಿಸುವ ಶಕ್ತಿಯನ್ನು ಹೊಂದಿದೆಯೆಂಬ ನಂಬಿಕೆಯಿದೆ. ಈ ಸಮುದ್ರ ಮಂಥನದ ಮತ್ತೊಂದು ಕೌತುಕಪೂರ್ಣ ಘಟನೆಯೆಂದರೆ ವಾಸುಕಿಯ ಮುಖದಿಂದ ಹಾಲಾಹಲವು ಹೊರಹೊಮ್ಮಿದುದು. ಈ ಹಾಲಾಹಲದ ಪ್ರಭಾವದಿಂದ ದೇವ-ದಾನವರು ಮೂರ್ಛಿತರಾಗಿ ಬಿದ್ದರು. ಇದರಿಂದ ಜಗತ್ತಿನ ಸರ್ವ ಜೀವಿಗಳಿಗೆ ಇನ್ನೂ ಹೆಚ್ಚಿನ ಹಾನಿಯಾಗುವುದನ್ನು ತಡೆಯಲು ಯಾರಾದರೊಬ್ಬರು ಈ ಹಾಲಾಹಲವನ್ನು ಕುಡಿಯಬೇಕಾಗಿತ್ತು. ಹಾಲಾಹಲವನ್ನು ಸೇವಿಸಲು ಯಾರಿಗೂ ಧೈರ್ಯವಿರಲಿಲ್ಲ.
ಆಗ ದೇವಾದಿದೇವನಾದ ಪರಶಿವನು ಆ ಕಾಳರಾತ್ರಿಯಲ್ಲಿ ಹಾಲಾಹಲವನ್ನು ಕುಡಿಯುತ್ತಾನೆ. ಮಾತೆ ಪಾರ್ವತಿಯು ಹಾಲಾಹಲದಿಂದ ಮಹಾಶಿವನ ದೇಹವನ್ನು ರಕ್ಷಿಸಲು ತನ್ನ ಹಸ್ತದಿಂದ ಕಂಠವನ್ನು ಭದ್ರವಾಗಿ ಹಿಡಿಯುತ್ತಾಳೆ. ಹಾಲಾಹಲವು ಕಂಠದಲ್ಲಿಯೇ ಉಳಿದು ಶಿವನು ಅಂದು ನೀಲಕಂಠನಾಗುತ್ತಾನೆ. ‘ಕಾಲಕೂಟ ವಿಷಂ ಪೀತ್ವಾ ನೀಲಕಂಠಃ ಸಂಸ್ಥಿತಃ’ - ‘ಕಾಲಕೂಟ ವಿಷವನ್ನು ಕುಡಿದು ಶಿವನು ನೀಲಕಂಠನಾದನು’ ಎಂದು ವರ್ಣಿಸಲಾಗಿದೆ. ಇದನ್ನೇ ಮಹಾಶಿವರಾತ್ರಿಯೆಂದು ಸನಾತನ ಧರ್ಮೀಯರು ಶ್ರದ್ಧೆಯಿಂದ ಆಚರಿಸುತ್ತಾರೆ.
ಅಂದು ಉಪವಾಸ, ಜಾಗರಣೆಗಳನ್ನು ಮಾಡಿ ಪವಿತ್ರ ಮಂತ್ರಯುಕ್ತ ಅಭಿಷೇಕದಿಂದ, ಹಾಲಾಹಲದಿಂದ ದಗ್ಧವಾದ ಮಹಾಶಿವನ ಕಂಠವನ್ನು ತಣಿಸುತ್ತಾರೆ. ಇದೊಂದು ಪೌರಾಣಿಕ ಘಟನೆಯೆಂದು ಭಾವಿಸದೆ, ಅದು ಸಕಲ ಜೀವ ಸಂರಕ್ಷಣೆಗಾಗಿ ಮಹಾಶಿವನು ಮಾಡಿದ ತ್ಯಾಗಕ್ಕೆ ದ್ಯೋತಕವೆಂದು ಅರ್ಥಮಾಡಿಕೊಳ್ಳಬೇಕು. ಲೋಕ ಕಲ್ಯಾಣಕ್ಕಾಗಿ ವ್ಯಕ್ತಿಯು ಮಾಡುವ ಇಂತಹ ಮಹತ್ಯಾಗವೇ ಸನಾತನ ಧರ್ಮದ ಆಧ್ಯಾತ್ಮಿಕ ಪರಂಪರೆಗೆ ಆಧಾರವಾಗಿದೆ. ಹೀಗೆ, ಸರ್ವರ ಒಳಿತಿಗಾಗಿ ಒಬ್ಬ ವ್ಯಕ್ತಿ ಮಾಡುವ ತ್ಯಾಗವೇ ಸನಾತನ ಧರ್ಮದ ಆಧ್ಯಾತ್ಮಿಕತೆಗೆ ಬುನಾದಿಯಾಗಿದೆ. ಇಂತಹ ತ್ಯಾಗವೇ ವ್ಯಕ್ತಿಗೆ ಅಮೃತತ್ವವನ್ನು ಪ್ರದಾನ ಮಾಡುತ್ತದೆ.
ಜಗತ್ತಿನಲ್ಲಿ ಇಂದು ಪ್ರಚಲಿತವಾಗಿರುವ ಎಲ್ಲ ಮತ-ಧರ್ಮಗಳೂ ತಮ್ಮ ಪೂಜೆ-ಪುನಸ್ಕಾರ-ಸಂಪ್ರದಾಯ ಪದ್ಧತಿಗಳಿಗಿಂತ ಹೆಚ್ಚಾಗಿ ಇಂತಹ ತ್ಯಾಗ ಮತ್ತು ಸೇವೆಗಳ ಆದರ್ಶಕ್ಕೆ ಹೆಚ್ಚಿನ ಮಹತ್ವವನ್ನು ನೀಡಬೇಕಾಗಿದೆ. ನಮ್ಮ ಆಧುನಿಕ ಕಾಲದಲ್ಲಿ ಜಗತ್ತಿನಾದ್ಯಂತ ಕೋಟ್ಯಂತರ ದೀನದುರ್ಬಲರು ಮೂಲಭೂತ ಭೌತಿಕ ಅವಶ್ಯಕತೆಗಳಿಂದ ವಂಚಿತರಾಗಿರುವಾಗ, ಮೇಲಿನ ಆದರ್ಶವನ್ನು ಪಾಲಿಸದೆ ಇದ್ದರೆ ಅಂತಹ ಮತಧರ್ಮವು ನಮ್ಮ ಕಾಲಕ್ಕೆ ಉಚಿತವಾಗದೆ ಕಣ್ಮರೆಯಾಗಹುದು.
ಸನಾತನ ಧರ್ಮವು ಸರ್ವರಿಗೂ ಇಂತಹ ಉದಾತ್ತ ತ್ಯಾಗ ಮತ್ತು ಸೇವೆಗಳ ಸ್ಪೂರ್ತಿಯನ್ನು ನೀಡಲಿ. ಎಲ್ಲ ಮತಗಳ ಶ್ರದ್ಧಾಳುಗಳೂ ಆಧ್ಯಾತ್ಮಿಕ ಅಮರತ್ವವನ್ನು ಅರಸುತ್ತ, ವಾಸ್ತವಿಕ ಜಗತ್ತಿನಲ್ಲಿ ತ್ಯಾಗ-ಸೇವೆಗಳ ಆದರ್ಶಗಳನ್ನು ಪಾಲಿಸುವಂತಾಗಿ ಸರ್ವರ ಏಳಿಗೆಯಾಗಲಿ!
ನಮ್ಮ ಕಾಲದಲ್ಲಿ ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರು ಸನಾತನ ಧರ್ಮದ ಸಾರವನ್ನು ಎರಡು ಸರಳ ವಾಕ್ಯಗಳಲ್ಲಿ ಸಾರಿದರು: ‘ಎಲ್ಲರನ್ನೂ ಪ್ರೇಮಿಸು, ಎಲ್ಲರಿಗೂ ಸೇವೆಯನ್ನು ಸಲ್ಲಿಸು’ (Love All - Serve All). ಈ ವರ್ಷದಲ್ಲಿ ಭಗವಾನ್ ಬಾಬಾರವರ ಜನ್ಮ ಶತಮಾನೋತ್ಸವವನ್ನು ಆಚರಿಸಲಾಗುತ್ತಿದ್ದು, ಇದು ಕರ್ನಾಟಕದ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿಯೂ ಇದೇ ಆಗಸ್ಟ್ 16 ರಿಂದ ನವೆಂಬರ್ 23ರವರೆಗೆ ನೂರು ದಿನಗಳ ಕಾಲ ನಡೆಯಲಿದೆ. ಇದರ ಕೊನೆಯ ಹಂತವಾಗಿ ಜಾಗತಿಕ ಸರ್ವ ಮತಧರ್ಮಗಳ ಸಮಾವೇಶವನ್ನು ಆಯೋಜಿಸಲಾಗುವುದು. ಇದೇ ಸಂದರ್ಭದಲ್ಲಿ 600 ಹಾಸಿಗೆಗಳ ಸೌಲಭ್ಯವಿರುವ ಸಂಪೂರ್ಣ ಉಚಿತ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಯ (Super Speciality Hospital ) ಉದ್ಘಾಟನೆಯಾಗಲಿದೆ.
ಹೀಗೆ ಆಧ್ಯಾತ್ಮಿಕತೆ ಮತ್ತು ಸೇವೆಗಳು ‘ಸನಾತನ ಧರ್ಮ’ ನಾಣ್ಯದ ಎರಡು ಮುಖಗಳು. ಈ ಎರಡು ಮುಖಗಳಿಲ್ಲದ ಯಾವ ಮತಧರ್ಮವೂ ಪ್ರಚಲಿತ ಜಗತ್ತಿನಲ್ಲಿ ಚಾಲನೆಯಲ್ಲಿರಲು ಸಾಧ್ಯವಿಲ್ಲ!
(ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)