

| ವಿಲಾಸ ಮೇಲಗಿರಿ ಬೆಂಗಳೂರು / ವೇಣುವಿನೋದ ಕೆ.ಎಸ್. ಮಂಗಳೂರು
ಭಾರತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿದ್ದು, ಖಾದ್ಯ ತೈಲಗಳ ಅವಶ್ಯಕತೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಪ್ರಸ್ತುತ ಅವಶ್ಯಕತೆ ಸುಮಾರು 235 ಲಕ್ಷ ಟನ್ ಆಗಿದೆ. 145-150 ಲಕ್ಷ ಟನ್ ಖಾದ್ಯ ತೈಲ (ಅಂದಾಜು ಶೇ.65) ಆಮದು ಮಾಡಿಕೊಳ್ಳುತ್ತಿದ್ದು, ಇದಕ್ಕೆ ಸುಮಾರು ಸಾವಿರಾರು ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. 10 ವರ್ಷಗಳಲ್ಲಿ ಆಮದು ಬಹುತೇಕ ದ್ವಿಗುಣಗೊಂಡಿದೆ. ಪಾಮ್ಯಿುಲ್, ಸೋಯಾ ಅವರೆ ಮತ್ತು ಸೂರ್ಯಕಾಂತಿ ಎಣ್ಣೆ ಆಮದು ಇದರಲ್ಲಿ ಪ್ರಮುಖವಾಗಿದೆ. ಭಾರತದ ಖಾದ್ಯ ತೈಲ ಆರ್ಥಿಕತೆ ವಿಶ್ವದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಅಮೆರಿಕ, ಚೀನಾ ಮತ್ತು ಬ್ರೆಜಿಲ್ ನಂತರ ಸುಮಾರು ಶೇ.14 ಎಣ್ಣೆ ಬೀಜಗಳ ಪ್ರದೇಶ ಮತ್ತು ಶೇ. 8.5 ತೈಲ ಬೀಜಗಳ ಉತ್ಪಾದನೆ ಮಾಡುತ್ತಿದೆ. ಸಿರಿಧಾನ್ಯಗಳ ನಂತರ ಭಾರತೀಯ ಕೃಷಿ ವಲಯದಲ್ಲಿ ಎಣ್ಣೆ ಬೀಜಗಳ ವಲಯ ವಿಶಿಷ್ಟ ಸ್ಥಾನ ಪಡೆದಿದೆ. ದೇಶದ ಒಟ್ಟು ಕೃಷಿಯಾಧಾರಿತ ಪ್ರದೇಶದಲ್ಲಿ ಶೇ.13 ಎಣ್ಣೆ ಬೀಜ ಬೆಳೆಯ ಪಾಲಿದೆ. ದೇಶದಲ್ಲಿ ನೆಲಗಡೆಲೆ, ಎಳ್ಳು, ಔಡಲ, ಅಗಸೆ, ಕುಸುಬೆ, ಸಾಸಿವೆ, ಸೂರ್ಯಕಾಂತಿ, ಸೋಯಾ ಅವರೆ ಮತ್ತು ಗುರೆಳ್ಳು ಉತ್ಪಾದನೆಗೆ ಸೂಕ್ತ ವೈವಿಧ್ಯಮಯ ಕೃಷಿ ಆರ್ಥಿಕ ಪರಿಸ್ಥಿತಿ ಹೊಂದಿದೆ. ಎರಡು ದೀರ್ಘಕಾಲಿಕ ಎಣ್ಣೆ ಬೆಳೆಗಳಾದ ತೆಂಗು ಮತ್ತು ತಾಳೆ ಎಣ್ಣೆ ಉತ್ಪಾದಿಸುತ್ತಿದೆ. ಇದರ ಜತೆಗೆ 2ನೇ ಹಂತದ ಬೆಳೆಗಳಾದ ಹತ್ತಿ, ಮೆಕ್ಕಜೋಳ ಉತ್ಪಾದನೆ ಮಾಡುತ್ತಿದೆ. ಔಡಲ ಬೀಜ ಉತ್ಪಾದನೆಯಲ್ಲಿ ವಿಶ್ವದಲ್ಲೇ ಭಾರತ ಮೊದಲ ಸ್ಥಾನದಲ್ಲಿದೆ. ಶೇಂಗಾ, ಎಳ್ಳು, ಸಾಸಿವೆ ಮತ್ತು ಕುಸುಬೆ ಎಣ್ಣೆಕಾಳುಗಳ ಉತ್ಪಾದನೆಗಳಲ್ಲಿ 2ನೇ ಸ್ಥಾನದಲ್ಲಿದೆ. ಆದಾಗ್ಯೂ ಉತ್ಪಾದಕತೆ ವಿಶ್ವ ಸರಾಸರಿ ಉತ್ಪಾದಕತೆಯ 2/3 ಭಾಗಕ್ಕಿಂತ ಕಡಿಮೆ ಇದೆ!
ಭಿನ್ನವಾಗಿರದ ರಾಜ್ಯದ ಸ್ಥಿತಿ: ದೇಶದ ಎಣ್ಣೆ ಬೀಜ ಬೆಳೆಗೆ ಹೋಲಿಸಿದರೆ ರಾಜ್ಯದ ಪರಿಸ್ಥಿತಿಯೂ ಭಿನ್ನವಾಗಿಯೇನೂ ಇಲ್ಲ. 1990-91ರ ಅವಧಿಯಲ್ಲಿ ತೈಲ ಬೀಜ ಬೆಳೆಯುವ ಪ್ರದೇಶ 25,51,177 ಹೆಕ್ಟೇರ್ ಆಗಿದೆ. ಆದಾಗ್ಯೂ 2020-21ರಲ್ಲಿ ಎಣ್ಣೆ ಬೀಜ ಬೆಳೆ ಪ್ರದೇಶ ಕ್ರಮೇಣ 16,47,212 ಹೆ. ಇಳಿದಿದೆ. ಆದರೆ, ಉತ್ಪಾದಕತೆ ಹೆಕ್ಟೇರಿಗೆ 552 ಕೆಜಿಯಿಂದ 792 ಕೆಜಿ/ಹೆ ಹೆಚ್ಚಾಗಿದೆ. ರಾಜ್ಯದಲ್ಲಿ ಸೋಯಾಬಿನ್, ಕುಸುಬೆ, ಔಡಲ, ನೆಲಗಡಲೆ, ಸಾಸಿವೆ ಬೆಳೆಯಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ. ಸೂರ್ಯಕಾಂತಿ ಉತ್ಪಾದಕತೆಯಲ್ಲಿ ಇಳಿಕೆ ಕಂಡುಬಂದಿದೆ. 10 ವರ್ಷಗಳಿಂದ ಎಣ್ಣೆಕಾಳು ಪ್ರದೇಶ ಮತ್ತು ಉತ್ಪಾದಕತೆಯಲ್ಲಿ ಯಾವುದೇ ಪ್ರಮುಖ ಸುಧಾರಣೆಗಳಿಲ್ಲ. ಬದಲಾಗಿ 1990ಕ್ಕೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತ ಬಂದಿದೆ. ಎಣ್ಣೆ ಬೀಜ ಬೆಳೆಯುವ ಪ್ರದೇಶದಲ್ಲಿ ಮಳೆಯ ಅಸ್ಥಿರತೆ ಮತ್ತು ಅನಿಯಮಿತತೆ ಕಾರಣ ಎನ್ನಲಾಗುತ್ತದೆ.
ಕಲ್ಯಾಣ ಯೋಜನೆಗಳು ಹೆಚ್ಚಿಸಿದ ಬೇಡಿಕೆ: ಸಮಾಜದ ಬಡವರ್ಗಕ್ಕೆ ಸರ್ಕಾರಗಳು ಕಲ್ಯಾಣ ಯೋಜನೆಗಳ ಮೂಲಕ ಖಾದ್ಯ ತೈಲ ಪೂರೈಸುತ್ತಿರುವುದರಿಂದ ಖಾದ್ಯ ತೈಲಗಳ ಭಾರತದ ಒಟ್ಟಾರೆ ಬೇಡಿಕೆ ತೀವ್ರವಾಗಿ ಹೆಚ್ಚಾಗಿದೆ. ಇದು ವರ್ಷಕ್ಕೆ 250 ಲಕ್ಷ ಟನ್ಗಳಷ್ಟು ಆಗಬಹುದು. ದೇಶೀಯ ಖಾದ್ಯ ತೈಲ ಉತ್ಪಾದನೆಯು ವರ್ಷಕ್ಕೆ 70-80 ಲಕ್ಷ ಟನ್ಗೆ ಸ್ಥಗಿತಗೊಂಡಿದೆ.
ಮುಂದೆ ಏನಾಗಬೇಕು?: ಐದು ವರ್ಷಗಳಲ್ಲಿ ಎಣ್ಣೆ ಬೀಜಗಳ ಉತ್ಪಾದಕತೆ 25.30 ಮಿ. ಟನ್ಗಳ ಮಟ್ಟದಲ್ಲೇ ನಿಂತಿದೆ. ಮುಂದಿನ 5 ವರ್ಷದಲ್ಲಿ 100 ದಶ ಲಕ್ಷ ಟನ್ ಉತ್ಪಾದನೆ ತಲುಪದೆ ಹೋದರೆ ಆಮದನ್ನೇ ಅಧಿಕವಾಗಿ ಅಲವಂಬಿಸಬೇಕಾಗುತ್ತದೆ. ಆದ್ದರಿಂದ ಬಿತ್ತನೆ ಪ್ರದೇಶ ಮತ್ತು ಉತ್ಪಾದನೆಯನ್ನು ಹೆಚ್ಚಿಸಲು ಸರ್ಕಾರ ರೈತ ಪರ ನೀತಿಗಳನ್ನು ಜಾರಿಗೆ ತರಬೇಕಿದೆ.
ಸೂರ್ಯಕಾಂತಿ ತೈಲ ಕೊರತೆ: ದೇಶದಲ್ಲಿ ಸೂರ್ಯಕಾಂತಿ ಮತ್ತು ತಾಳೆ ಎಣ್ಣೆಗೆ ಹೆಚ್ಚಿನ ಬೇಡಿಕೆ ಇದೆ. ಸೂರ್ಯಕಾಂತಿ ಪೂರೈಕೆ ಕಡಿಮೆಯಾದರೂ, ತಾಳೆ ಎಣ್ಣೆ ಇಂಡೋನೇಷ್ಯಾ ಹಾಗೂ ಮಲೇಷ್ಯಾದಿಂದ ಬರುತ್ತಿದೆ. ಉತ್ತರ ಭಾರತದಲ್ಲಿ ಸಾಸಿವೆ ಬಂಪರ್ ಬೆಳೆಯಾಗಿರುವುದರಿಂದ ಹಾಗೂ ಸಾಸಿವೆ ಎಣ್ಣೆ ಅಲ್ಲಿ ಹೆಚ್ಚು ಬಳಕೆ ಮಾಡುವ ಕಾರಣ ಅಷ್ಟು ಸಮಸ್ಯೆಯಾಗದು. ಆದರೆ ಕರ್ನಾಟಕದ ಕೆಲವು ಭಾಗಗಳಲ್ಲಿ ಒಂದಷ್ಟು ಪರಿಣಾಮ ಬೀರುವ ಸಾಧ್ಯತೆ ಇದೆ. ಭಾರತಕ್ಕೆ ಬರುವ ಒಟ್ಟು ಸನ್ಫ್ಲವರ್ ತೈಲದ ಶೇ.70 ಪ್ರಮಾಣ ಯೂಕ್ರೇನ್ನಿಂದಲೇ ಆಮದಾಗುತ್ತಿತ್ತು ಎನ್ನುವುದು ಗಮನಾರ್ಹ ಅಂಶ. ಉಳಿದಂತೆ ರಷ್ಯಾ, ಅರ್ಜೆಂಟೀನಾ ಹಾಗೂ ಬಲ್ಗೇರಿಯಾಗಳಿಂದ ಅಲ್ಪಪ್ರಮಾಣದ ತೈಲ ಬರುತ್ತದೆ. ಸದ್ಯ ಯೂಕ್ರೇನ್ ಬಂದರುಗಳು ಬಂದ್ ಆಗಿವೆ. ಹಾಗಾಗಿ ಅಲ್ಲಿಂದ ನಮಗೆ ತೈಲ ಬರುತ್ತಿಲ್ಲ ಎನ್ನುತ್ತಾರೆ ಮಂಗಳೂರಿನ ಅನಘಾ ರಿಫೈನರಿ ಮುಖ್ಯಸ್ಥ ಸಾಂಬಶಿವ ರಾವ್. ಸದ್ಯ ಚಿಲ್ಲರೆ ಮಾರುಕಟ್ಟೆಯಲ್ಲಿ ಸೂರ್ಯಕಾಂತಿ ಎಣ್ಣೆ ಕೆ.ಜಿ.ಗೆ 190 ರೂ.ವರೆಗೂ ತಲುಪಿದೆ. ಮುಂದೆ ದರ ಕೆ.ಜಿ.ಗೆ 200 ರೂ.ಗೆ ಏರಿಕೆಯಾಗುವುದನ್ನು ತಳ್ಳಿ ಹಾಕುವಂತಿಲ್ಲ ಎನ್ನುತ್ತಾರೆ ರಾವ್.
ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವ ಅನೇಕ ವಿಧದ ಅಡುಗೆ ಎಣ್ಣೆಗೆ ಶೇ.300 ತೆರಿಗೆ ವಿಧಿಸಲು ಅವಕಾಶವಿದೆ. ಆದರೆ ಕೇಂದ್ರ ಸರ್ಕಾರ ಕಡಿಮೆ ತೆರಿಗೆ ವಿಧಿಸಿರುವುದರಿಂದ ದೇಸಿ ರೈತರ ಎಣ್ಣೆ ಬೆಳೆಗೆ ಬೆಲೆ ಸಿಗುತ್ತಿಲ್ಲ. ಹಾಗಾಗಿ ರೈತರು ಎಣ್ಣೆ ಬೀಜ ಬೆಳೆಯಿಂದ ವಿಮುಖರಾಗುತ್ತಿದ್ದಾರೆ. ರೈತರಿಗೆ ನಿಶ್ಚಿತ ಆದಾಯದ ಭರವಸೆಯನ್ನು ಕೇಂದ್ರ ನೀಡಬೇಕು. | ವೆಂಕಟರಾವ್ ನಾಡಗೌಡ ಕೆಒಎಫ್ ನಿರ್ದೇಶಕ