ಪ್ರತಿಷ್ಠಿತ ಕೆಲಸಕ್ಕೆ ಬೈ, ಸ್ವಯಂ ವೃತ್ತಿಗೆ ಜೈ...

Job
Published on

ಹೆಸರಿಗೆ ಪ್ರತಿಷ್ಠಿತ ಕಂಪನಿಯಾಗಿದ್ದರೂ ಪ್ರತಿಭೆಗೆ ತಕ್ಕ ಪ್ರೋತ್ಸಾಹ ಸಿಗದಿದ್ದಾಗ, ಏನಾದರೂ ಸಾಧಿಸಲೇಬೆಕೆಂದು ಹಠತೊಟ್ಟ ಯುವಕನೊಬ್ಬ ಇದೀಗ ಸ್ವಾವಲಂಭಿಯಾಗಿ ದ್ವಿಚಕ್ರ ವಾಹನ ಹಾಗೂ ಕೃಷಿ ಯಂತ್ರೋಪಕರಣಗಳನ್ನು ಸ್ವತಃ ತಯಾರಿಸುವ ಕಾರ್ಯದಲ್ಲಿ ನಿರತನಾಗಿದ್ದಾನೆ. ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಬಿಳಿಗೇರಿಯ ಎನ್.ಕೆ.ಆಕಾಶ್ ಈ ಸಾಧಕ. ತನ್ನ ಮನೆಯ ಅಂಗಳದಲ್ಲೇ ಗ್ಯಾರೇಜ್ ಮಾಡಿಕೊಂಡಿದ್ದು, ಮಿನಿ ಬೈಕ್, ಕೃಷಿಕರಿಗೆ ಉಪಯೋಗವಾಗುವ ಹಲವು ಯಂತ್ರೋಪಕರಣಗಳನ್ನು ತಯಾರಿಸಿ ಯಶಸ್ವಿಯಾಗಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ಮೆಕ್ಯಾನಿಕಲ್​ನಲ್ಲಿ ಅತೀವ ಆಸಕ್ತಿ ಹೊಂದಿದ್ದ ಆಕಾಶ್, ಸಣ್ಣಪುಟ್ಟ ಬೈಕ್​ಗಳನ್ನು ತಯಾರಿಸಿದ್ದರು. ಬೇರೆ ಬೇರೆ ಕಂಪನಿಗಳ ಬೈಕ್ ಹಾಗೂ ಕಾರುಗಳನ್ನು ನೋಡುವಾಗ ತನಗೂ ಈ ರೀತಿ ಮಾಡಬೇಕೆಂಬ ಉತ್ಸಾಹ ಬಂತು. ಕ್ಯಾಂಪಸ್ ಸೆಲೆಕ್ಷನ್​ನಲ್ಲಿ ಆಯ್ಕೆಯಾಗಿ ಟಾಟಾ ಮೋಟಾರ್ಸ್, ಮಾರುತಿ, ಬೋಶ್, ಟಿವಿಎಸ್ ಸೇರಿ ಹಲವು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡಿ ಅನುಭವ ಪಡೆದುಕೊಂಡು ಇದೀಗ ಸ್ವಂತ ಉದ್ಯಮ ಆರಂಭಿಸಲು ನಿರ್ಧಾರ ತೆಗೆದುಕೊಂಡಿದ್ದಾರೆ. ಆಕಾಶ್ ಮನೆಯ ಅಂಗಳದ ಶೆಡ್​ನಲ್ಲಿ ಬೈಕ್ ಹಾಗೂ ಕೃಷಿ ಯಂತ್ರೋಪಕರಣಗಳನ್ನು ತಯಾರಿಸುವಲ್ಲಿ ನಿರತರಾಗಿದ್ದಾರೆ. ಮೋಟಾರ್ ಸ್ಕೂೕಟರ್​ಗಳಲ್ಲಿ ಹೆಸರಾಗಿರುವ ಗೋಕಾರ್ಟ್ ಅನ್ನು ತಾವೇ ತಯಾರಿಸುವ ಮೂಲಕ ಗಮನ ಸೆಳೆದಿದ್ದಾರೆ. ಆರಂಭದಲ್ಲಿ ಪೆಡಲ್ ಮಾಡುವ ವಾಹನವನ್ನು ನಿರ್ವಿುಸಿದ್ದರು. ತನ್ನ ಅಜ್ಜ ಮಹಾಭಲೇಶ್ವರ ಭಟ್, ಈ ವಾಹನ ಅಂಗಳದಲ್ಲಿ ಮಾತ್ರ ಓಡಿಸಲು ಸಾಧ್ಯ. ರಸ್ತೆಗೆ ಹೋಗಲು ಸಾಧ್ಯವೇ ಎಂದು ಪ್ರಶ್ನಿಸಿದ್ದರು. ಇದರಿಂದ ಆಕಾಶ್ ಹೊಸ ಪ್ರಯೋಗಗಳನ್ನು ಮಾಡಲು ತೊಡಗಿಸಿಕೊಂಡರು. ಮಿನಿ ಬೈಕ್, ಕೃಷಿ ಯಂತ್ರೋಪಕರಣಗಳನ್ನೂ ಮಾಡಿ ಸಾಧನೆ ಮಾಡಿದರು. ಮುಂದಿನ ದಿನಗಳಲ್ಲಿ ಹಲವು ಮಾದರಿಯ ವಾಹನಗಳು ಹಾಗೂ ಕೃಷಿ ಯಂತ್ರೋಪಕರಣಗಳನ್ನು ನಿರ್ವಿುಸಬೇಕೆಂಬ ಉದ್ದೇಶವನ್ನು ಆಕಾಶ್ ಹೊಂದಿದ್ದಾರೆ. ಈವರೆಗೆ ಆರು ಬೈಕ್​ಗಳನ್ನು ನಿರ್ವಿುಸಿದ್ದು, ಹೋಂಸ್ಟೇ, ರೆಸಾರ್ಟ್​ಗಳಲ್ಲಿ ಮನರಂಜನೆಗಾಗಿ ಓಡಿಸುವ ವಾಹನಗಳನ್ನು ತಯಾರಿಸಿದ್ದಾರೆ.

ಎಲೆಕ್ಟ್ರಿಕಲ್ ಕಾರು ತಯಾರಿ: ಪುತ್ತೂರಿನ ಮಾಣಿಯಲ್ಲಿ ಎಲೆಕ್ಟ್ರಿಕಲ್ ಕಾರು ತಯಾರಿಸಿ ದ್ದಾರೆ. ಈ ಕಾರನ್ನು 3 ಗಂಟೆ ಚಾರ್ಜ್ ಮಾಡಿದರೆ 70 ಕಿ.ಮೀ. ಓಡಿಸಬಹುದಾಗಿದೆ. 1.50 ಲಕ್ಷ ರೂ. ವೆಚ್ಚದಲ್ಲಿ ಈ ಕಾರು ನಿರ್ವಣಗೊಂಡಿದೆ. ಹಳೆಯ ಗುಜರಿ ವಸ್ತುಗಳನ್ನು ಹಾಗೂ ವಿವಿಧ ವಾಹನಗಳ ಬಿಡಿ ಭಾಗಗಳಿಂದ ಮಿನಿ ಬೈಕ್ ತಯಾರಿಸಿದ್ದು ವಿಶೇಷ ಆಕರ್ಷಣೆಯಾಗಿದೆ. ಈ ಬೈಕ್​ಗೆ 28 ಸಾವಿರ ರೂ. ವೆಚ್ಚ ಮಾಡಿದ್ದಾರೆ. ವಿತ್​ಔಟ್ ಗೇರ್ ಬೈಕ್ ಆಗಿದ್ದು, ಯಾರು ಬೇಕಾದರೂ ಚಾಲನೆ ಮಾಡಬಹುದು. ಇದುವರೆಗೆ 6 ಬೈಕ್, 2 ಸ್ಕೂಟರ್, ಸಾಮಗ್ರಿ ಸಾಗಿಸುವ 4 ಟ್ರಾ್ಯಲಿಗಳನ್ನು ತಯಾರಿಸಿ ಮಾರಾಟ ಮಾಡಿದ್ದಾರೆ. ಬೈಕ್ ವಿಶೇಷವಾಗಿದ್ದು ನೋಡಲು ಆಕರ್ಷಕವಾಗಿದೆ. ಇದುವರೆಗೆ ಇಂಧನ ಚಾಲಿತ ವಾಹನಗಳನ್ನು ತಯಾರು ಮಾಡಿರುವ ಆಕಾಶ್, ಇದೀಗ ಬ್ಯಾಟರಿ ಚಾಲಿತ ವಾಹನಗಳನ್ನು ತಯಾರು ಮಾಡುವ ಯೋಜನೆ ಹಮ್ಮಿಕೊಂಡಿದ್ದಾರೆ.

ಗ್ರಾಹಕರಿಂದ ಆರ್ಡರ್ ಬಂದರೆ ಅವರ ಅಭಿರುಚಿಗೆ ತಕ್ಕಂತೆ ಬೈಕ್ ಹಾಗೂ ಕೃಷಿ ಯಂತ್ರೋಪಕರಣಗಳನ್ನು ನಿರ್ವಿುಸಿಕೊಡುತ್ತೇನೆ. ಇತ್ತೀಚಿನ ದಿನಗಳಲ್ಲಿ ಕೂಲಿ ಕೆಲಸಕ್ಕೆ ಕೆಲಸಗಾರರು ಸಿಗುತ್ತಿಲ್ಲ. ಅಲ್ಲದೆ, ಕೃಷಿಕರು ಹಲವು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಆದ್ದರಿಂದ ಕೃಷಿಕರಿಗೆ ಉಪಯೋಗವಾಗುವ ಯಂತ್ರೋಪಕರಣಗಳನ್ನು ತಯಾರಿಸಿ ಕೃಷಿಕರ ಹೊರೆಯನ್ನು ನೀಗಿಸುವುದು ಹಾಗೂ ಅವರಿಗೆ ಕಡಿಮೆ ದರದಲ್ಲಿ ಯಂತ್ರಗಳನ್ನು ನೀಡುವುದು ನನ್ನ ಗುರಿ. | ಆಕಾಶ್ ಬೈಕ್ ತಯಾರಕ ಬೈಕ್ ಹಾಗೂ ಸಣ್ಣ ಕಾರುಗಳು ರೆಸಾರ್ಟ್, ಹೋಂಸ್ಟೇಗಳಲ್ಲಿ ಉಪಯೋಗಿಸಲು ಹೇಳಿ ಮಾಡಿಸಿದಂತಿವೆ. ಈ ಹಿನ್ನೆಲೆಯಲ್ಲಿ ಆಕಾಶ್ ರೆಸಾರ್ಟ್​ಗಳಿಗೆ ತನ್ನ ವಾಹನಗಳನ್ನು ಮಾರಾಟ ಮಾಡಿದ್ದಾನೆ. ಜತೆಗೆ ಏಲಕ್ಕಿ ಹಾಗೂ ಕಾಳುಮೆಣಸು ಒಣಗಿಸುವ ಯಂತ್ರ, ಮೆಣಸು ಬಿಡಿಸುವ ಯಂತ್ರ ತಯಾರು ಮಾಡುತ್ತಿರುವುದು ವಿಶೇಷ. ಮಗನ ಪ್ರತಿಭೆ ಹೊರ ಜಗತ್ತಿಗೆ ಗೊತ್ತಾದರೆ ಸಾಕು. ಅವಕಾಶಗಳು ತಾನಾಗಿಯೇ ಬರಬಹುದು. | ಎನ್.ಎಂ.ಕುಮಾರ್ ಆಕಾಶ್ ತಂದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net