ಕಲಾವಿದರಿಗೆ ಎರಡನೇ ಅಲೆ ಸುನಾಮಿ

Vihara
Published on

ಅದು ಹೇಗೋ ಕರೊನಾ ಮೊದಲ ಅಲೆಯನ್ನು ಈಸಿ ಜಯಿಸುತ್ತಿದ್ದ ಕಲಾ ಜಗತ್ತಿಗೆ ಎರಡನೇ ಅಲೆ ಅಕ್ಷರಶಃ ಸುನಾಮಿಯಂತೆ ಅಪ್ಪಳಿಸಿದೆ. ಮೇಲ್ನೋಟಕ್ಕೆ ಮೊದಲ ಬಾರಿಯ ಕರೊನಾದಷ್ಟು ಅಬ್ಬರ, ಗೌಜು ಗದ್ದಲ ಈ ಕ್ಷೇತ್ರದಲ್ಲಿ ಕಾಣಿಸುತ್ತಿಲ್ಲವಾದರೂ ಒಳಗೊಳಗೇ ಕಲೆ, ಕಲಾವಿದರು ಹಾಗೂ ಕಲಾ ಸಂಸ್ಥೆಗಳನ್ನು ಕೊಲ್ಲುತ್ತಿದೆ.

| ರಮೇಶ ದೊಡ್ಡಪುರ

ನಾಡಿನ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸ್ವಾಸ್ಥ್ಯ ಕಾಪಾಡಲು ಕಲಾವಿದರೇ ಜೀವಾಳ. ರಾಜ ಮಹಾರಾಜರ ಕಾಲದಲ್ಲಿ ಮಂತ್ರಿ, ವಿದ್ವಾಂಸರಿಗಿದ್ದಷ್ಟೇ ಪ್ರಾಮುಖ್ಯತೆ, ಕೆಲವೊಮ್ಮೆ ಅವರಿಗಿಂತಲೂ ಹೆಚ್ಚು ಗೌರವ ಕಲಾವಿದರಿಗಿತ್ತು. ಕಲಾವಿದ ಯಾವುದೇ ಮೂಲಧಾತು ಇಲ್ಲದೆ ಶೂನ್ಯದಿಂದ ಸೃಷ್ಟಿಸಬಲ್ಲ ಎಂಬುದು ಸತ್ಯ.

ಯಾವುದೇ ಶಬ್ದವಿಲ್ಲದೆ ತಮ್ಮಷ್ಟಕ್ಕೆ ತಾವು ಏಕಾಂತದಲ್ಲಿ ನಡೆಸುವ ದೃಶ್ಯ ಕಲೆಯೇ ಚಿತ್ರ ಕಲೆ. ಕಲಾಕೃತಿಗಳನ್ನೇ ಜೀವನ ಮಾಡಿಕೊಂಡು ದೇಶ ವಿದೇಶಗಳಲ್ಲಿ ಗೌರವ, ಮನ್ನಣೆ, ಪ್ರಶಸ್ತಿಗಳನ್ನು ಚಿತ್ರ ಕಲಾವಿದರು ಪಡೆಯುತ್ತಿದ್ದರು. ವಿದೇಶ ಪ್ರಯಾಣ, ವಿಶಾಲ ರೆಸಾರ್ಟ್​ನ ಏಕಾಂತದಲ್ಲಿ ಅಮೂರ್ತ ಕಲಾಭಿವ್ಯಕ್ತಿಗಳು ಅನೇಕ ಹಿರಿಯ ಕಲಾವಿದರ ಜೀವನಶೈಲಿಯಾಗಿತ್ತು. ಆದರೆ ಕರೊನಾ ಎರಡನೇ ಅಲೆ ಇಡೀ ಕ್ಷೇತ್ರವನ್ನು ಅಕ್ಷರಶಃ ನೆಲ ಕಚ್ಚುವಂತೆ ಮಾಡಿದೆ.

ಹಾಗೆ ನೋಡಿದರೆ ಮೊದಲ ಅಲೆಯ ಸಂದರ್ಭದಲ್ಲಿ ಅನೇಕ ಕಲಾವಿದರು ತಮ್ಮ ಕಲಾತ್ಮಕತೆಯನ್ನು ವಿಭಿನ್ನವಾಗಿ ಅಭಿವ್ಯಕ್ತಿಗೊಳಿಸಿದ್ದರು. ಕರ್ನಾಟಕ ಲಲಿತಕಲಾ ಅಕಾಡೆಮಿ ವತಿಯಿಂದ ಕಲಾವಿದರಿಗೆ ವರ್ಚುವಲ್ ಚಿತ್ರಕಲಾ ಶಿಬಿರ ನಡೆಯಿತು. ಸಾಮಾನ್ಯವಾಗಿ 25-30 ಕಲಾವಿದರಿರುತ್ತಿದ್ದ ಶಿಬಿರದಲ್ಲಿ ಮೊದಲ ಬಾರಿ 60 ಕಲಾವಿದರಿಗೆ ಅವಕಾಶ ನೀಡಲಾಯಿತು. ಕಲಾವಿದರ ಕೈಗೆ ಕೆಲಸ ಸಿಕ್ಕರೆ ಅದಕ್ಕಿಂತ ಸಂತೋಷ ಇನ್ನೇನು ಇದೆ? ಅಷ್ಟೇ ಸಂತೋಷದಲ್ಲಿ ತಮ್ಮ ತಮ್ಮ ಮನೆಯಲ್ಲಿ ಕಲಾಕೃತಿ ರಚಿಸಿದರು, ಅಕಾಡೆಮಿ ಗೌರವ ಧನ ನೀಡಿ ಅವುಗಳನ್ನು ಖರೀದಿಸಿತು. ಸಂಕಷ್ಟದಲ್ಲಿದ್ದ ಕಲಾವಿದರ ಕೈಗೆ ಸ್ವಲ್ಪ ಕಾಸೂ ಸಿಕ್ಕಿತು. ಆದರೂ ಎಂದಿನಂತೆ ಹೊಟ್ಟೆ ತುಂಬ ಅನ್ನ ನೀಡಲು ಅದರಿಂದಲೂ ಸಾಧ್ಯವಾಗಲಿಲ್ಲ.

ಇನ್ನು, ಚಿತ್ರಕಲಾ ಪರಿಷತ್ತು ಪ್ರತಿ ವರ್ಷ ನಡೆಸುವ ಚಿತ್ರಸಂತೆ ಎಂದಿನಂತೆ ನಡೆಸಲು ಆಗಲಿಲ್ಲ. ವರ್ಚುವಲ್ ವೇದಿಕೆಯಲ್ಲಿ ನಡೆಸುವ ವಿಶಿಷ್ಟ ಪ್ರಯತ್ನದಲ್ಲಿ ಸಾವಿರಾರು ಕಲಾವಿದರಿಗೆ ಅವಕಾಶ ಸಿಕ್ಕಿತು. ಬೆಂಗಳೂರಿನ ಕಲಾಸಕ್ತರನ್ನು ತಲುಪುತ್ತಿದ್ದ ಕಲಾವಿದರು ವರ್ಚುವಲ್ ಚಿತ್ರಸಂತೆ ಮೂಲಕ ವಿದೇಶದ ಕಲಾರಸಿಕರ ಗಮನ ಸೆಳೆದರು. ಕೆಲವೇ ಕಲಾವಿದರನ್ನು ಹೊರತುಪಡಿಸಿ ಅನೇಕರಿಗೆ ದೂರದೂರದಿಂದ ಕರೆಗಳು ಬಂದವೇ ಹೊರತು ಕಲಾಕೃತಿಗಳ ಮಾರಾಟದಲ್ಲಿ ರ್ತಾಕ ಅಂತ್ಯ ಕಾಣಲಿಲ್ಲ. ಕಲೆಯನ್ನು ರ್ಸ³ಸಿ ಖರೀದಿಸುವ ಪದ್ಧತಿ ಮೊದಲಿನಿಂದ ಇದೆ. ವರ್ಚುವಲ್ ಚಿತ್ರಸಂತೆಯ ವರ್ಣಗಳಲ್ಲಿ ಈ ಸ್ಪರ್ಶಾನುಭೂತಿ ಇಲ್ಲದ ಕಾರಣ ಸಹಜವಾಗಿ ಕಲಾವಿದರಿಗೆ ಅಷ್ಟೇನೂ ಉಪಯೋಗವಾಗಲಿಲ್ಲ.

ಮೂರು ಹೊತ್ತಿನ ಊಟವಿಲ್ಲದಿದ್ದರೂ ಅಷ್ಟರ ಮಟ್ಟಿಗಾದರೂ ಚಟುವಟಿಕೆ ಇದ್ದ ದೃಶ್ಯಕಲಾ ಕ್ಷೇತ್ರ ಇನ್ನೇನು ಚೇತರಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ 2ನೇ ಅಲೆಗೆ ಅಪ್ಪಚ್ಚಿಯಾಗಿದೆ ಎನ್ನುತ್ತಾರೆ ಕಲಾವಿದ, ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಿ. ಮಹೇಂದ್ರ. ಅವರ ಪ್ರಕಾರ ಈ ಸಮಸ್ಯೆ ಬಗೆಹರಿಯಬೇಕೆಂದರೆ ಮುಖ್ಯವಾಗಿ ಕರೊನಾ ಕಡಿಮೆ ಆಗಲೇಬೇಕು, ಅದು ಬಿಟ್ಟು ಅನ್ಯಮಾರ್ಗವಿಲ್ಲ. ಮುಖ್ಯವಾಗಿ, ಸಾವಿರಾರು ಚಿತ್ರಕಲಾವಿದರಿಗೆ ಊಟ ನೀಡುವುದು ಶಾಲೆಗಳು. ಅವು ಆರಂಭವಾದರೆ ಅರ್ಧ ಸಮಸ್ಯೆ ಬಗೆಹರಿಯುತ್ತದೆ. ನಂತರ ಚಿತ್ರಪ್ರದರ್ಶನಗಳು ಆಯೋಜನೆಯಾಗಬೇಕು, ಅಲ್ಲಿಗೆ ಕಲಾಸಕ್ತರು ಆಗಮಿಸಿ ಮೆಚ್ಚಬೇಕು, ಖರೀದಿ ನಡೆಯಬೇಕು.

ನೃತ್ಯದಲ್ಲಿ ಅಸಮತೋಲನ: ನೃತ್ಯ ಕಲಾವಿದರು ಹಾಗೂ ಅವರಿಗೆ ತರಬೇತಿ ನೀಡುವ ಸಂಸ್ಥೆಗಳ ಸ್ಥಿತಿ ಹೇಳತೀರದು. ಇತ್ತೀಚಿನ ವರ್ಷಗಳಲ್ಲಿ ಭರತನಾಟ್ಯ ಎಂಬುದು ಮೇಲ್ವರ್ಗ, ಶ್ರೀಮಂತರಷ್ಟೆ ಅಲ್ಲದೆ ಮಧ್ಯಮ ವರ್ಗವನ್ನೂ ಸೆಳೆಯುತ್ತಿರುವ ಕಲೆ. ಅದರ ಶ್ರೀಮಂತಿಕೆ ಎಂಥವರನ್ನೂ ಸೆಳೆಯುವಂಥದ್ದು. ಹಾಗಾಗಿ ಭರತನಾಟ್ಯ ತರಗತಿ ಸೇರಿ ನೃತ್ಯ ಕಲಿಯುವವರ ಸಂಖ್ಯೆ ತುಸು ಹೆಚ್ಚಾಗಿಯೇ ಇತ್ತು. ಬೆಂಗಳೂರಿನ ಬಸವೇಶ್ವರನಗರದಲ್ಲಿ ಪ್ರಸಿದ್ಧ ‘ನಾಟ್ಯಾಂತರಂಗ’ ಶಾಲೆಯಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದರು. ಕರೊನಾ ಮೊದಲ ಅಲೆ ನಿಯಂತ್ರಣಕ್ಕೆ ಲಾಕ್​ಡೌನ್ ವಿಧಿಸಿದಾಗ ತರಗತಿಗಳು ಸ್ಥಗಿತವಾದವು. ಆದರೆ ಸೆಪ್ಟೆಂಬರ್-ಅಕ್ಟೋಬರ್ ವೇಳೆ ನಿಧಾನವಾಗಿ ಸುಧಾರಿಸಿದ ತರಗತಿಗಳು ಜನವರಿ-ಫೆಬ್ರವರಿ ವೇಳೆಗೆ ಒಂದು ಹಂತಕ್ಕೆ ಬಂದಿದ್ದವು. ಶೇಕಡಾ 15-20 ವಿದ್ಯಾರ್ಥಿಗಳು ಆಗಮಿಸುತ್ತಿದ್ದರು. ಆದರೆ ಇದೇ ಸಮಯಕ್ಕೆ ಅಪ್ಪಳಿಸಿದ ಎರಡನೇ ಅಲೆಯಿಂದಾಗಿ ಈಗ ಮತ್ತೆ ಶೂನ್ಯ ಆವರಿಸಿದೆ ಎನ್ನುತ್ತಾರೆ ನಾಟ್ಯಾಂತರಂಗದ ಆಡಳಿತಾಧಿಕಾರಿ ಧನಂಜಯ್. ಅವರ ಪತ್ನಿ ಶುಭಾ ಖ್ಯಾತ ಭರತನಾಟ್ಯ ಕಲಾವಿದೆ. ಅವರ ಶಿಷ್ಯವರ್ಗ ದೊಡ್ಡದು. ಆದರೆ ಈಗ ಕರೊನಾ ಕಾರಣಕ್ಕೆ ತರಗತಿಗಳು ಸ್ತಬ್ಧವಾಗಿವೆ. ಧನಂಜಯ್ ಹೇಳುವಂತೆ, ಕೆಲವರು ಆನ್​ಲೈನ್​ನಲ್ಲಿ ನೃತ್ಯ ತರಗತಿ ನಡೆಸುವ ಪ್ರಯತ್ನಗಳನ್ನೂ ನಡೆಸಿದ್ದಾರೆ. ಆದರೆ ಈಗಾಗಲೆ ಶಾಲೆ, ಕಾಲೇಜು ಚಟುವಟಿಕೆಗಳೆಲ್ಲವೂ ಆನ್​ಲೈನ್​ನಲ್ಲೇ ನಡೆಯುತ್ತಿವೆ. ನೃತ್ಯವನ್ನೂ ಆನ್​ಲೈನ್​ನಲ್ಲೇ ಕಲಿಯಲು ವಿದ್ಯಾರ್ಥಿಗಳಿಗೆ ಆಸಕ್ತಿ ಬರುತ್ತಿಲ್ಲ. ಜತೆಗೆ ಎಲ್ಲರ ಮನೆಯಲ್ಲೂ ನೃತ್ಯಾಭ್ಯಾಸ ಮಾಡುವಷ್ಟು ಸ್ಥಳಾವಕಾಶ, ವಾತಾವರಣ ಇರುವುದಿಲ್ಲ. ಈ ಕ್ಷೇತ್ರ ಎರಡನೇ ಅಲೆಯ ಹೊಡೆತದಿಂದ ಚೇತರಿಸಿಕೊಂಡು ಸಾಮಾನ್ಯ ಹಂತಕ್ಕೆ ಬರಲು ಕನಿಷ್ಠ 2-3 ವರ್ಷವಾದರೂ ಬೇಕು ಎನ್ನುತ್ತಾರೆ ಆತಂಕದಲ್ಲಿ.

ಸೃಜನಶೀಲತೆಯೇ ಜೀವಾಳ: ಕಲಾವಿದರು ಎಂದ ಮೇಲೆ ಸೃಜನಶೀಲತೆ ಇದ್ದೇ ಇರುತ್ತದೆ. ಈ ಬಾರಿಯೂ ಅನೇಕರು ಯೂಟ್ಯೂಬ್, ಫೇಸ್​ಬುಕ್​ನಲ್ಲಿ ಗಾಯನ, ನಟನೆ, ನಾಟಕಗಳ ಮೂಲಕ ಜನಮನ ಸೂರೆಗೊಳ್ಳಲು ಸಿದ್ಧತೆ ನಡೆಸುತ್ತಿದ್ದಾರೆ. ಜನರ ಮನಗೆಲ್ಲಲು ಎನ್ನುವುದಕ್ಕಿಂತಲೂ, ಹೊರಗಿನ ಸಂಕಷ್ಟಗಳನ್ನು ಮರೆಯಲು ಕಲೆಯನ್ನೆ ಮಾಧ್ಯಮವಾಗಿಸಿ ಅಂತರಂಗದ ಆತಂಕವನ್ನು ಕಳೆಯುವ ನಿರಂತರ ಪ್ರಯತ್ನ ಮಾಡುತ್ತಿರುತ್ತಾರೆ. ಅದೇ ಕಲಾವಿದರ ವೈಶಿಷ್ಟ್ಯ ಎನ್ನುತ್ತಾರೆ ಧನಂಜಯ್.

ತರಗತಿ ನಡೆಸುವವರ ಸ್ಥಿತಿ ಸ್ವಲ್ಪ ಉತ್ತಮ: ಚಿತ್ರಕಲಾಕೃತಿಗಳ ಮಾರಾಟ ಹಾಗೂ ನೃತ್ಯ ಪ್ರದರ್ಶನಗಳನ್ನೇ ಆದಾಯದ ಮೂಲವಾಗಿಸಿಕೊಂಡಿದ್ದವರಿಗಿಂತ, ಚಿತ್ರಕಲೆ ಹಾಗೂ ನೃತ್ಯಗಳಲ್ಲಿ ಆನ್​ಲೈನ್ ತರಗತಿ ನಡೆಸುವವರಿಗೆ ಸಣ್ಣ ಪ್ರಮಾಣದ ಆದಾಯ ಇದೆ. ಚಿತ್ರಕಲಾ ತರಗತಿಗಳು ಮೌನವಾಗಿ ನಡೆಯುವುದರಿಂದ ಹೆಚ್ಚಿನ ತೊಂದರೆಯಾಗಿಲ್ಲ. ನೃತ್ಯ ತರಗತಿಗಳಲ್ಲೂ 8-10 ವಿದ್ಯಾರ್ಥಿಗಳಿರುತ್ತಿದ್ದರು. ಈಗ ಆ ಸಂಖ್ಯೆ 1-2ಕ್ಕೆ ಇಳಿದಿದೆ. ಆದರೆ ಹೇಗೋ ಬಂಡಿ ಸಾಗುತ್ತಿದೆ. ಸಾಫ್ಟ್​ವೇರ್ ಮತ್ತಿತರ ಕ್ಷೇತ್ರಗಳಲ್ಲಿದ್ದ ನೌಕರಿಯನ್ನು ತ್ಯಜಿಸಿ ಆಸಕ್ತಿಯನ್ನೇ ಜೀವನವನ್ನಾಗಿಸಿಕೊಳ್ಳಲು ಬಂದಿದ್ದವರ ಸ್ಥಿತಿ ಅಯೋಮಯವಾಗಿದೆ. ಹಾಗೆಯೇ ಚಿತ್ರಕಲಾವಿದರಲ್ಲಿ, ಪೋಷಕರಿಗೆ ಒಬ್ಬರೇ ಮಕ್ಕಳಿರುವವರು ಹಾಗೂ ಸ್ವತಃ ತಾವು ಒಬ್ಬರೇ ಇದ್ದು ಮಕ್ಕಳನ್ನು ನೋಡಿಕೊಳ್ಳುತ್ತಿರುವವರಿಗೆ (ಸಿಂಗಲ್ ಪೇರೆಂಟ್) ಭಾರಿ ಕಷ್ಟವಾಗಿದೆ ಎನ್ನುತ್ತಾರೆ ಡಿ. ಮಹೇಂದ್ರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net