

| ಸುಮಾ ಬದರಿನಾಥ್
ಮೊದಲನೇ ಅವತಾರ ಮತ್ಸ್ಯ: ಜೀವ ಜಗತ್ತಿನ ಮೊದಲ ಜೀವ ನೀರಿನಲ್ಲಿ ಏಕಾಣುಜೀವಿಯಾಗಿ ಉಗಮಗೊಂಡು ವಿಕಸಿಸಿ ಆನಂತರ ಅನೇಕ ಪ್ರಭೇದದ ಜಲಚರ ಜೀವಿಗಳ ಹುಟ್ಟಿಗೆ ಕಾರಣವಾಯಿತು. ಆ ಎಲ್ಲ ಜಲಚರಗಳ ಪೈಕಿ ಮತ್ಸ್ಯವೇ ಮೊದಲ ಕಶೇರುಕವಾಗಿ ವಿಕಸನಗೊಂಡಿತು. ಮನುಷ್ಯನ ಬೆನ್ನುಮೂಳೆಯ ರಚನೆಗೆ ಮತ್ಸ್ಯವೇ ಮೂಲ ಕಾರಣವಾಯಿತು. ನೀರಿನಲ್ಲಿ ಅನೇಕ ಜಲಚರಗಳು ಇದ್ದರೂ ಮತ್ಸ್ಯವನ್ನೇ ಏಕೆ ಅವತಾರಕ್ಕೆ ಬಳಸಿದರು ಎಂಬ ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿತು.
ಎರಡನೇ ಅವತಾರ ಕೂರ್ಮ: ಕಾಲಾನಂತರ ಜಲಚರ ಜೀವಿಗಳು ನೀರಿನಿಂದ ಹೊರಬಂದು ಭೂಪ್ರದೇಶದಲ್ಲಿ ವಾಸ ಮಾಡುವುದನ್ನು ಕಲಿತು ಉಭಯಚರ ಜೀವಿಗಳಾಗಿ ನಂತರ ಸರೀಸೃಪಗಳಾದವು. ಗಾಳಿಯನ್ನು ಉಸಿರಾಡಲು ಪೂರ್ಣಪ್ರಮಾಣದ ಶ್ವಾಸಕೋಶ ರೂಪುಗೊಂಡಿದ್ದು ಇವುಗಳಲ್ಲಿ. ನಂತರ ಶ್ವಾಸಕೋಶವನ್ನು ಕಾಪಾಡಲು ಪಕ್ಕೆಲುಬು ರೂಪಗೊಂಡಿತು. ನಂತರ ಬಂದ ಸರೀಸೃಪ ಡೈನೋಸಾರ್ಗಳು ಭಾಗಶಃ ವಿನಾಶ ಹೊಂದಿ ಉಳಿದವು ಪಕ್ಷಿ ಪ್ರಭೇದದ ಹುಟ್ಟಿಗೆ ಕಾರಣವಾದವು. ವಿನಾಶಗೊಳ್ಳದೆ ಸರೀಸೃಪ ಆಮೆ ಪೂರ್ಣ ಪ್ರಮಾಣದ ಶ್ವಾಸಕೋಶ ಮತ್ತು ಪಕ್ಕೆಲುಬು ಹೊಂದಿ ನಾಲ್ಕು ಕಾಲುಗಳನ್ನು ಬಳಸಿ ನಡೆದಾಡಿದವು. ಅವುಗಳ ಕಾಲುಗಳಲ್ಲಿ ಬೆರಳುಗಳು ಮೂಡಿದವು. ಮನುಷ್ಯನ ಶ್ವಾಸಕೋಶ, ಪಕ್ಕೆಲುಬುಗಳಲ್ಲದೆ ಕಾಲು-ಬೆರಳುಗಳು ಸರೀಸೃಪದ ಕೊಡುಗೆ ಎಂದು ಮತ್ತು ಆಮೆಯು ಉಭಯಚರ ಜೀವಿ ಎಂದು ತಪ್ಪಾಗಿ ತಿಳಿದಿದ್ದ ನನಗೆ ಅದು ಸರೀಸೃಪ ಎಂದು ತಿಳಿಯಿತು.
ಮೂರನೇ ಅವತಾರ ವರಾಹ: ಸರೀಸೃಪಗಳ ನಂತರ ಬಂದದ್ದು ಸಸ್ತನಿಗಳು. ಇವುಗಳಲ್ಲೂ ಅನೇಕ ಪ್ರಭೇದಗಳಿದ್ದರೂ ವರಾಹ, ಅಂದರೆ ಆಡುಭಾಷೆಯ ಕಾಡುಹಂದಿಗೆ ಮೊದಲು ಮೇಲ್ದವಡೆ ಕೆಳದವಡೆ ಮತ್ತು ಮನುಷ್ಯರಲ್ಲಿ ಇರುವ ಹಾಗೆ ಸರಳ ಜೀರ್ಣಾಂಗ ರಚನೆ ವಿಕಸನಗೊಂಡಿತ್ತು. ಮನುಷ್ಯನಿಗೆ ಹಂದಿ ಹೃದಯ ಕಸಿ ಮಾಡಿ ಆ ರೋಗಿ 2 ತಿಂಗಳು ಬದುಕಿದ್ದ ಪ್ರಸಂಗ ವರದಿಯಾಗಿದ್ದು ಥಟ್ಟನೆ ಕಣ್ಮುಂದೆ ಬಂತು. ಅಂದರೆ ಗಾತ್ರ, ರಚನೆಯಲ್ಲಿ ವ್ಯತ್ಯಾಸವಿಲ್ಲ!
ಸದ್ಯ ಹಸುವಿನ ತರಹ 4 ಜಠರ ಹೊಂದಿ, ತಿಂದ ಆಹಾರವನ್ನು ಬಾಯಿಗೆ ತಂದುಕೊಂಡು ಮೆಲುಕು ಹಾಕದಂತೆ ಮನುಷ್ಯನಿಗೆ ಏಕ ಜಠರದ ಸರಳ ಜೀರ್ಣಾಂಗ ವ್ಯವಸ್ಥೆಯನಿತ್ತ ವರಾಹಕ್ಕೆ ಮನದಲ್ಲೇ ನಮಸ್ಕರಿಸಿದೆ.
ನಾಲ್ಕನೇ ಅವತಾರ ನರಸಿಂಹ: ಸಿಂಹವನ್ನು ವಿಜ್ಞಾನ ಜಗತ್ತಿನಲ್ಲಿ ಕೀಸ್ಟೋನ್ ಸ್ಪೀಶಿಸ್ ಮತ್ತು ತುದಿ ಪರಭಕ್ಷಕ ಎಂದು ವರ್ಗೀಕರಿಸುತ್ತಾರೆ. ಇದರ ಅರ್ಥ ಪ್ರಾಣಿ ಪ್ರಪಂಚದಲ್ಲಿ ವ್ಯವಸ್ಥೆಯನ್ನು ಒಟ್ಟಿಗೆ ಹಿಡಿದಿಡಲು ಸಹಾಯ ಮಾಡುವ ಜೀವಿಗೆ ಕೀಸ್ಟೋನ್ ಸ್ಪೀಶಿಸ್ ಎಂದು ಕರೆಯುತ್ತಾರೆ. ಅದು ನಶಿಸಿ ಹೋದರೆ ಇಡೀ ಜೀವ ಜಗತ್ತಿನ ಪರಿಸರ ವ್ಯವಸ್ಥೆ ಮೇಲೆ ಅಗಾಧ ಪರಿಣಾಮವಾಗುತ್ತದೆ. ಹಾಗೆ ಕೆಲವೊಮ್ಮೆ ಪರಿಸರವು ಬದಲಾವಣೆಗಳಿಗೆ ಹೊಂದಿಕೊಳ್ಳಲು ಸಾಧ್ಯವಾಗುವುದಿಲ್ಲ. ಆಹಾರ ಸರಪಳಿ ಮೇಲು ತುದಿಯಲ್ಲಿರುವ ಜೀವಿಯನ್ನು ತುದಿ ಪರಭಕ್ಷಕ ಎನ್ನುತ್ತಾರೆ. ಈ ತರಹದ ಜೀವಿಗಳಿಗೆ ಯಾವುದೇ ನೈಸರ್ಗಿಕ ಪರಭಕ್ಷಕ ಅಥವಾ ಶತ್ರುಗಳಿರುವುದಿಲ್ಲ. ದೊರೆತ ಪಳೆಯುಳಿಕೆಗಳ ಪ್ರಕಾರ ಸಿಂಹ ಮತ್ತು ಮನುಷ್ಯ ಬಹುತೇಕ ಸಮಾನಾಂತರವಾಗಿ ವಿಕಸನಗೊಂಡಿದ್ದು, ಸಹ-ವಿಕಾಸದ ಅಂಶವಿತ್ತು ಎಂದು ಮೇರಿ ಡೌಗ್ಲಾಸ್ ಲೀಕಿ, ಇಂಗ್ಲಿಷ್ ಮೂಲದ ಪುರಾತತ್ವ ಶಾಸ್ತ್ರಜ್ಞೆ, ಅನ್ವೇಷಿಸಿದ್ದನ್ನು ಓದಿದ್ದೆ.
ತಪಸ್ವಿ ವೃದ್ಧರು ದಶಾವತಾರದ ಎರಡನೇ ಭಾಗದ ಅರ್ಥವನ್ನು ವಿವರಿಸತೊಡಗಿದರು. ಎರಡನೇ ಭಾಗವು ಬರಿಯ ಮನುಷ್ಯ ಕೇಂದ್ರಿತ ಎಂತಲೂ ಮತ್ತು ಸಾಮಾಜಿಕವಾಗಿ ಅವನ ಅಭಿವೃದ್ಧಿಯನ್ನು ಐದು ಅವತಾರಗಳಲ್ಲಿ ಹಾಗೂ ಅವನ ಅವನತಿಗೆ ಕಾರಣ ಕೊನೆಯ ಅವತಾರದಲ್ಲಿ ಕಾಣಬಹುದು ಎಂದರು. ಮೀನಿನಿಂದ - ಬೆನ್ನುಮೂಳೆ; ಕೂರ್ಮದಿಂದ - ಶ್ವಾಸಕೋಶ, ಪಕ್ಕೆಲುಬು, ಕಾಲು, ಬೆರಳುಗಳು; ವರಾಹದಿಂದ - ದವಡೆ ಮತ್ತು ಏಕ ಜಠರ ಸರಳ ಜೀರ್ಣಾಂಗ; ಸಿಂಹದಿಂದ - ಮಾನಸಿಕತೆ, ಸಮಾನಾಂತರ ಮತ್ತು ಸಹ-ವಿಕಾಸ.... ಈ ಪ್ರಾಣಿಗಳಿಂದ ದೇಹ ಅಂಗರಚನೆಯ ಒಂದೊಂದು ಅಂಶವನ್ನು, ಜತೆಗೆ ಮಾನಸಿಕತೆಯನ್ನು ಪಡೆದ ಜೀವಿ ಉಗಮವಾಯಿತು. ಅದೇ ಮನುಷ್ಯ. ಈ ಪ್ರಾಣಿಗಳ ಉಗಮ ಹಾಗೂ ಅದು ಆ ರೀತಿಯಲ್ಲಿ ವಿಕಸನ ಹೊಂದಿಲ್ಲದಿದ್ದರೆ ಮನುಷ್ಯನ ದೇಹರಚನೆ ಮತ್ತು ಮಾನಸಿಕತೆ ಬೇರೆಯದೇ ರೀತಿಯಲ್ಲಿ ಇರುತ್ತಿತ್ತೇನೋ ಎಂದು ಅಭಿಪ್ರಾಯಪಟ್ಟರು.
ಐದನೇ ಅವತಾರ ವಾಮನ: ಮಾನವನ ಮೊದಲ ರೂಪ ಇದು. ಈಗಿನವರು ಹೇಳುವಂತೆ ಚಿಂಪಾಂಜಿಯ ವಿಕಾಸವೇ ಮನುಷ್ಯ. ಆದರೆ ಮನುಷ್ಯರಲ್ಲಿಯೂ ಪ್ರಭೇದಗಳಿದ್ದವು. ಅದರಲ್ಲಿ ಒಂದು ಪ್ರಭೇದ ವಾಮನಾಕೃತಿ ಹೊಂದಿತ್ತು. ಇತ್ತೀಚಿನ ಜಾವಾ ದ್ವೀಪದ ಬಳಿ ಉತ್ಖನನದಲ್ಲಿ ಸಿಕ್ಕ ಪೂರ್ಣವಾಗಿ ಬೆಳೆದ ಕುಬ್ಜ ಮನುಷ್ಯನ ಅಸ್ಥಿಪಂಜರ ವಾಮನಾಕೃತಿಯ ಮನುಷ್ಯ ಇದ್ದನೆಂದು ದೃಢಪಡಿಸಿದೆ. ಅವತಾರದಲ್ಲಿ ಕುಬ್ಜ ಮನುಷ್ಯನನ್ನು ಬಳಸಿದ್ದು ಏಕೆಂದು ಅರ್ಥವಾಯಿತು.
ಆರನೇ ಅವತಾರ ಪರಶುರಾಮ: ಉಗಮಗೊಂಡ ಬಹಳ ಕಾಲದ ನಂತರ ಮನುಷ್ಯ ಆಹಾರಕ್ಕಾಗಿ ಬೇಟೆಯಾಡುವುದನ್ನು ಕಲಿತ. ತನ್ನ ಬುದ್ಧಿ ಶಕ್ತಿಯಿಂದಲೇ ಬೇಟೆಗೆ ಬೇಕಾದ ಆಯುಧಗಳನ್ನು ಆವಿಷ್ಕರಿಸಿದ. ಅವತಾರದಲ್ಲಿ ಕೊಡಲಿಯನ್ನು ಏಕೆ ಚಿತ್ರಿಸಿದರು ಎಂದು ಕಂಡುಕೊಂಡೆ.
ಏಳನೇ ಅವತಾರ ರಾಮ: ನೂರಾರು ವರುಷಗಳ ಕಾಲ ಕಾಡಿನ ಗುಹೆಗಳಲ್ಲಿ ವಾಸವಿದ್ದ ಮನುಷ್ಯನಿಗೆ ಕಾಡು ಪ್ರಾಣಿಗಳಿಂದ ಮತ್ತು ಹವಾಮಾನ ವೈಪರೀತ್ಯಗಳಿಂದ ಕಷ್ಟ ಉಂಟಾಗಿ ಅಭದ್ರತೆ ಕಾಡತೊಡಗಿತು. ಹೀಗಾಗಿ ಮನುಷ್ಯ ಗುಂಪುಗಳಲ್ಲಿ ಇರತೊಡಗಿದ. ಕ್ರಮೇಣ ಗುಂಪುಗಳು ದೊಡ್ಡದಾಗತೊಡಗಿದವು. ಅಲೆಮಾರಿಯಾಗಿದ್ದ ಮನುಷ್ಯ ನಿಗದಿತ ಭೂಪ್ರದೇಶಗಳಲ್ಲಿ ವಾಸ ಮಾಡತೊಡಗಿದ. ವಸಾಹತು ಸ್ಥಾಪನೆಗಾಗಿ ಗುಂಪುಗಳ ನಡುವೆ ಘರ್ಷಣೆಯಾಗತೊಡಗಿತು.
ಯಾವ ರೀತಿ ಮನುಷ್ಯ ತನ್ನ ಸುತ್ತಲಿನ ಪ್ರಾಣಿ ಪರಿಸರದಿಂದ ಪ್ರಭಾವಕ್ಕೆ ಒಳಗಾಗುತ್ತಾನೆ ಎಂದರೆ ಅವನಿಗೆ ಸಿಂಹಗಳಲ್ಲಿರುವಂತೆ ತನಗೂ ಒಬ್ಬ ಪರಾಕ್ರಮಿಯಾದ ಬುದ್ಧಿವಂತ ನಾಯಕನ ಅವಶ್ಯಕತೆ ಅರಿವಾಗತೊಡಗಿತ್ತು. ಬಲಿಷ್ಠ ನಾಯಕ ಚುನಾಯಿತನಾದ ನಂತರ ಗುಂಪಿಗೆ ನಿಯಮದ ಚೌಕಟ್ಟನ್ನು ಅಳವಡಿಸಿದ. ಕೇರಿ ಊರಾಯಿತು, ಊರು ಪಟ್ಟಣವಾಯಿತು, ಪಟ್ಟಣ ಸಾಮ್ರಾಜ್ಯವಾಯಿತು ಮತ್ತು ನಾಯಕ ರಾಜನಾದ, ಸಾಮ್ರಾಟನಾದ. ಜನ ತಮ್ಮ ಸಾಮ್ರಾಟ ನ್ಯಾಯಕ್ಕೆ ಬದ್ಧನಾಗಿರಬೇಕು ಎಂದು ಅಪೇಕ್ಷೆಪಟ್ಟರು. ರಾಮರಾಜ್ಯ ಏನೆಂದು ಈಗ ತಿಳಿಯಿತು. ಕುಟುಂಬದ ಪರಿಕಲ್ಪನೆ ಸಿಂಹವನ್ನು ನೋಡಿ ಕಲಿತಿರಬಹುದೇ ಎಂಬ ಸಂಶಯವೂ ಬಂತು.
ಎಂಟನೇ ಅವತಾರ ಕೃಷ್ಣ: ಈ ಕಾಲಘಟ್ಟದಲ್ಲಿ ಮನುಷ್ಯನು ಮನೋವೈಜ್ಞಾನಿಕ ವಿಷಯಗಳನ್ನು ಆಳವಾಗಿ ಅಭ್ಯಾಸ ಮಾಡಿದ. ಅಧಿಕಾರದ ಆಸೆಯಿಂದ ಅತಿಯಾದ ಅಧರ್ಮ ತಾಂಡವವಾಡತೊಡಗಿತು. ಎಲ್ಲರಿಗೂ ಒಳಿತನ್ನು ಮಾಡುವ ನಿಯಮಗಳನ್ನೇ ಧರ್ಮವೆನ್ನುತ್ತಾರೆ. ಮನುಷ್ಯನ ಮನಸ್ಸು ಮತ್ತು ನಡವಳಿಕೆಯನ್ನು ಗಮನದಲ್ಲಿಟ್ಟುಕೊಂಡು ಧರ್ಮವನ್ನು ರೂಪಿಸಿದ.
ಗೀತಾಚಾರ್ಯ ಕೃಷ್ಣ ಧರ್ಮದ ಸಂಕೇತ ಮತ್ತು ಶ್ರೇಷ್ಠ ಮನೋವಿಜ್ಞಾನಿ.
ಒಂಬತ್ತನೇ ಅವತಾರ ಬಲರಾಮ/ಬುದ್ಧ: ಈ ಕಾಲಾವಧಿಯಲ್ಲಿ ಮನುಷ್ಯ ತೀವ್ರವಾದ ಸ್ವಯಂಶಿಸ್ತು ಮತ್ತು ಎಲ್ಲ ರೀತಿಯ ಭೋಗದಿಂದ ದೂರವಿರುವುದು, ಪ್ರಾರ್ಥನೆ, ಉಪವಾಸ ಮತ್ತು ದೈಹಿಕ ಶ್ರಮದ ತಪಸ್ವಿ ಜೀವನ ನಡೆಸಿ ಮನುಷ್ಯನ ಉಗಮಕ್ಕೆ ಅಲೌಕಿಕವಾಗಿ ಮೂಲ ಕಾರಣವೇನಾದರೂ ಇದ್ದೀತೆ ಎಂದು ಹುಡುಕಹೊರಟ. ಜ್ಞಾನೋದಯದ ಹೊಸ ಶಕೆ ಪ್ರಾರಂಭವಾಯಿತು. ಈ ಅವಧಿಯಲ್ಲಿ ಕೃಷಿಯನ್ನೂ ಪ್ರಧಾನವಾಗಿ ಮಾಡಿಕೊಂಡು ಮನುಷ್ಯ ಅದರಲ್ಲಿ ಆವಿಷ್ಕಾರಗಳನ್ನು ಮಾಡಿದ. ನೇಗಿಲು ಹಿಡಿದ ಯೋಗಿ ಎನಿಸಿದ.
ಹತ್ತನೇ ಅವತಾರ ಕಲ್ಕಿ: ಈ ಅವಧಿಯಲ್ಲಿ ಮನುಷ್ಯ ತನ್ನ ಬುದ್ಧಿಮತ್ತೆಯ ತುರ್ಯಾವಸ್ಥೆಯಲ್ಲಿದ್ದು ಅದನ್ನು ಯೋಗ್ಯ ರೀತಿಯಲ್ಲಿ ಬಳಸಲು ಬರದೆ ತನ್ನ ಅವನತಿಯನ್ನು ತಾನೇ ಹೇಗೆ ತಂದುಕೊಳ್ಳುತ್ತಾನೆ ಅಂತ ನೋಡಬಹುದು ಎಂದರು. ಮನುಷ್ಯನ ಅವನತಿಗೆ ಉಕ್ರೇನ್ ಮತ್ತು ರಷ್ಯಾ ಯುದ್ಧದಲ್ಲಿ ಬಳಸಿರುವ ಮದ್ದುಗುಂಡು, ಕ್ಷಿಪಣಿ ಹಾಗೂ ಪರಮಾಣು ಶಸ್ತ್ರಾಸ್ತ್ರ ಬಳಸಲು ಉತ್ಸುಕನಾಗಿರುವುದನ್ನು ಉದಾಹರಣೆಯಾಗಿ ಕೊಟ್ಟದ್ದು ನೋಡಿ ನನಗೆ ಆಶ್ಚರ್ಯವಾಯಿತು. ರೆಕ್ಕೆಗಳಿರುವ ಕುದುರೆಯನ್ನು ವಿಮಾನವನ್ನಾಗಿ ಅರ್ಥೈಸಬಹುದು ಮತ್ತು ಕೈಯಲ್ಲಿ ಹಿಡಿದಿರುವ ಆಯುಧವನ್ನು ಅವನತಿಯ ಸಂಕೇತವೆಂದು ಪರಿಗಣಿಸಬಹುದು ಎಂದರು.
ಮೂರು ವೈಜ್ಞಾನಿಕ ಆವಿಷ್ಕಾರಗಳ ವಿವರ: ದಶಾವತಾರದಲ್ಲಿ ಇನ್ನು ಮೂರು ವೈಜ್ಞಾನಿಕ ಆವಿಷ್ಕಾರದ ವಿವರಗಳನ್ನು ಜೋಡಿಸಿದ್ದೇನೆ ಎಂದು ತಿಳಿಸಿದರು. ಅದೇನೆಂದರೆ, ಎಲ್ಲ ಅವತಾರಗಳು ಭಗವಂತನ ಅಂಶವೇ. ಆದರೆ ಎಂಟನೇ ಅವತಾರವಾದ ಕೃಷ್ಣ ಮಾತ್ರ ತನ್ನಿಂದಲೇ ಬ್ರಹ್ಮಾಂಡ ನಡೆಯುತ್ತಿರುವುದು ಹಾಗೂ ಸಕಲ ಚರಾಚರ ವಸ್ತುವಿನ ಚಲನೆಗೆ ತಾನೇ ಕಾರಣ ಎಂದು ಹೇಳಿಕೊಳ್ಳುತ್ತಾನೆ. ಈ ರೀತಿಯಾದ ಹೇಳಿಕೆ ಇನ್ನಾವ ಅವತಾರದಲ್ಲೂ ಇಲ್ಲ. ಕೃಷ್ಣಾವತಾರದಲ್ಲಿ ಈಗಿನ ಖಗೋಳ ವಿಜ್ಞಾನಿಗಳು ಹೇಳುವುದನ್ನೇ ಪ್ರತಿಪಾದಿಸಿದ್ದೇನೆ ಎಂದರು. ಕೃಷ್ಣ ಎಂದರೆ ಕಪ್ಪು ಎಂದರ್ಥ; ಇಂಗ್ಲಿಷ್ನಲ್ಲಿ ಅದನ್ನು ಡಾರ್ಕ್ ಎನ್ನುತ್ತಾರೆ. ಕೃಷ್ಣನ ಕೈಯಲ್ಲಿರುವ ಸುದರ್ಶನ ಚಕ್ರ ನಕ್ಷತ್ರಪುಂಜದ ಸಂಕೇತ. ತಕ್ಷಣ ನನಗೆ ಭಗವದ್ಗೀತೆಯ ಸಾಲುಗಳು ನೆನಪಾದವು. ಕೃಷ್ಣನು ತಾನು ಅಣುರೇಣು ತೃಣಕಾಷ್ಠದ ಸೃಷ್ಟಿಕರ್ತ ಮತ್ತು ವಿನಾಶಕರ್ತೃ ಎಂದು ಹೇಳುತ್ತಾನೆ. ಒಂದು ಹುಲ್ಲು ಕಡ್ಡಿಯಿಂದ ಹಿಡಿದು ನಕ್ಷತ್ರಪುಂಜಗಳ ಚಲನೆಗೂ ನಾನೇ ಕಾರಣ ಎನ್ನುತ್ತಾನೆ. ಎಲ್ಲರಲ್ಲಿಯೂ ಎಲ್ಲದರಲ್ಲಿಯೂ ನಾನು ಇರುವೆ. ಬ್ರಹ್ಮಾಂಡದಲ್ಲಿ ಸೂರ್ಯ, ನಕ್ಷತ್ರ ಅಥವಾ ನೀವು ಮತ್ತು ನಾನು ಪ್ರತ್ಯೇಕವಾಗಿ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ. ನನಗೆ ಸೃಷ್ಟಿಯಾದ ವಿಶ್ವದಲ್ಲಿರುವ ಎಲ್ಲಾ ವಸ್ತುಗಳನ್ನು ಒಗ್ಗೂಡಿಸುವ ಶಕ್ತಿ ಇದೆ ಎನ್ನುತ್ತಾನೆ. ನಕ್ಷತ್ರಪುಂಜದ ಹೊರಗಿನ ನಕ್ಷತ್ರಗಳು ಒಳಗಿನ ನಕ್ಷತ್ರಗಳ ವೇಗದಲ್ಲೇ ಚಲಿಸುತ್ತಿರುವುದು ವಿಚಿತ್ರವಾಗಿದೆ ಎಂದು ಇವತ್ತಿನ ಖಗೋಳಶಾಸ್ತ್ರಜ್ಞರು ಹೇಳುತ್ತಾರೆ. ಆದ್ದರಿಂದ ಅವರು ಈ ವೈಚಿತ್ರ್ಯನ್ನು ಪರಿಹರಿಸಲು ಡಾರ್ಕ್ ಮ್ಯಾಟರ್, ಅಂದರೆ ಅಗೋಚರ ದ್ರವ್ಯವನ್ನು ಪರಿಚಯಿಸಿದರು. ಅನೇಕ ರೀತಿಯ ಶಕ್ತಿಶಾಲಿ ಆಯುಧಗಳಿದ್ದರೂ ಕೃಷ್ಣ ಸುದರ್ಶನ ಚಕ್ರವನ್ನೇ ಹಿಡಿದಿದ್ದರ ಪರಮಾರ್ಥ ತಿಳಿಯಿತು.
ಕೂರ್ವವತಾರದಲ್ಲಿನ ಸಮುದ್ರಮಂಥನವನ್ನು ಜ್ಞಾನಮಂಥನ ಎಂದು ಅರ್ಥೈಸಿಕೊಳ್ಳಬೇಕು ಎಂದರು. ಅರ್ಥವಾಗದೆ ನಾನು ಪ್ರಶ್ನಾರ್ಥಕವಾಗಿ ಅವರೆಡೆ ನೋಡಿದೆ. ಆಗಿನ ಕಾಲದ ಋಷಿಗಳಿಗೆ ಯಾವ ಯಾವ ವಿಷಯಗಳಲ್ಲಿ ಪರಿಣತಿ ಇತ್ತೆಂದು ಸೂಚಿಸುತ್ತದೆ ಎಂದರು. ಉದಾಹರಣೆಗೆ ಚಂದ್ರನ ಬಗ್ಗೆ ಅಧ್ಯಯನ, ಹಸುವಿನ ಹಾಲಿನ ಉಪಯೋಗಗಳು, ಪಾರಿಜಾತ ಹೂವಿನ ಗಿಡದ ಔಷಧೀಯ ಗುಣಗಳು, ವಜ್ರ ಹರಳು ಕೌಸ್ತುಭ ಮಣಿಯ ಗಣಿಗಾರಿಕೆ, ಅಪ್ಸರೆಯರ ಮೂಲಕ ನೃತ್ಯ ಶಾಸ್ತ್ರದ ಆವಿಷ್ಕಾರ, ಲಕ್ಷ್ಮಿಯ ಮೂಲಕ ದುಡ್ಡಿನ ವ್ಯವಹಾರ, ವಿಷದ ಬಗೆಗಿನ ಅರಿವು, ಮದ್ಯ, ಆನೆ ಕುದುರೆಗಳನ್ನು ಪಳಗಿಸುವಿಕೆ, ಅತ್ಯಂತ ಶ್ರೇಷ್ಠವಾದ ಧನ್ವಂತರಿ ಅಂದರೆ ಔಷಧ ಬಗೆಗಿನ ಆಳವಾದ ಜ್ಞಾನ ಇವಿಷ್ಟು ಆಗಿನಕಾಲದ ಋಷಿಗಳಿಗೆ ಗೊತ್ತಿತ್ತು ಎಂದು ತಿಳಿಸಿದರು. ಹೇಗೆ ವಾಯೇಜರ್ ಎಂಬ ಬಾಹ್ಯಾಕಾಶ ನೌಕೆಯೊಳಗೆ ಭೂಮಿಯ ಮೇಲಿನ ಜೀವನ ಮತ್ತು ಸಂಸ್ಕೃತಿಯ ವೈವಿಧ್ಯವನ್ನು ಫೋನೋಗ್ರಾಫ್ನಲ್ಲಿ ಧ್ವನಿ ಹಾಗೂ ಚಿತ್ರದ ಮೂಲಕ ರೆಕಾರ್ಡ್ ಮಾಡಿ ಸಂದೇಶವನ್ನು ಬಾಹ್ಯಾಕಾಶ ಇತರ ಜೀವಿಗಳಿಗೆ ತಿಳಿಯಲೆಂದು ವಿಶಿಷ್ಟವಾದ ಟೈಮ್ ಕ್ಯಾಪ್ಸುಲ್ ಸಾಗಿಸಲಾಗಿತ್ತೋ ಅದೇ ರೀತಿ ಸಮುದ್ರ ಮಂಥನವನ್ನು ನೋಡಬೇಕೆಂದರು. ಖಗೋಳ ವಿಜ್ಞಾನಿಗಳಿಗೆ ಗೊತ್ತಿರುವ ಹಾಗೆ ಭೂಮಿ ಅದರ ಕಕ್ಷೆಯಿಂದ ಹಲವು ಬಾರಿ ದೂರ ಸರಿದಿತ್ತು, ಮತ್ತೆ ಕಕ್ಷೆಗೆ ಬಂದು ಸೇರಿತ್ತು. ವರಾಹ ಅವತಾರದಲ್ಲಿ ಇರುವುದು ಇದೇ ಖಗೋಳ ಘಟನೆ ಎಂದರು.