

ಪರಿಪೂರ್ಣ ಪರಮಾತ್ಮನೊಬ್ಬನೇ... ಒಂದು ಸಣ್ಣ ಕುಂದು ಸಹ ಇಲ್ಲದಿರುವುದು ಪರಿಪೂರ್ಣ. ಮನುಷ್ಯ ದೇವರಲ್ಲ, ದೇವರಾಗುವುದು ಸಾಧ್ಯವೂ ಇಲ್ಲ. ದೇವರಂಥವನು ಎಂಬ ಹೊಗಳಿಕೆ, ಹೋಲಿಕೆಗೂ ದೇವರೇ ಆಗುವುದಕ್ಕೂ ವ್ಯತ್ಯಾಸವಿದೆ. ಮನುಷ್ಯ ಆಸೆಯನ್ನು ಗೆದ್ದು ಬದುಕಲಾರ. ವ್ಯಾಮೋಹದಿಂದ ಮುಕ್ತನಾಗಲಾರ. ತಾನು, ತನ್ನದು ಎಂಬ ಸ್ವಾರ್ಥದಿಂದ ಹೊರಗುಳಿಯಲಾರ. ಸರ್ವಸಂಗ ಪರಿತ್ಯಜಿಸಿದ ಸನ್ಯಾಸಿಯು ತನ್ನ ಪಾದರಕ್ಷೆ ಕಾಣದೆ ಹೋದಾಗ ಚಡಪಡಿಸಿದರೆ ಆಸೆ, ಮೋಹ, ಸ್ವಾರ್ಥವನ್ನು ತ್ಯಜಿಸಿಲ್ಲ ಎಂದೇ ಅರ್ಥ. ಮನುಷ್ಯನಿಗೂ ದೈವತ್ವಕ್ಕೂ ಇರುವ ಅಂತರ ಲಕ್ಷಕೋಟಿ ಮೈಲಿ. ಸರ್ವ ಸ್ಥಳದಿ ವ್ಯಾಪ್ತನಾದ, ಸರ್ವ ದೋಷರಹಿತನಾದವನು ಭಗವಂತ. ಒಂದು ಸಣ್ಣ ಜಾಗದ ಪಾಲಕನಾಗಿ ಜಗತ್ತನ್ನೇ ಗೆದ್ದ ಚಕ್ರವರ್ತಿ ತಾನೆಂದು ಬೀಗುವುದು ಮನುಷ್ಯನ ಹುಂಬತನ.
ಶ್ರೇಷ್ಠತೆಯ ವಿಚಾರಕ್ಕೂ ಇದೇ ಮಾತು ಅನ್ವಯ. ಶ್ರೇಷ್ಠವೆಂದರೇನು? ಎಲ್ಲಕ್ಕಿಂತಲೂ ಮಿಗಿಲಾದದ್ದು, ಪುನರಾವರ್ತನೆ ಸಾಧ್ಯವಿಲ್ಲದ್ದು, ಒಂದು ಸಣ್ಣ ಲೋಪವೂ ಇಲ್ಲದಂಥದ್ದು. ಆದರೆ, ವಿಶೇಷವಾಗಿ ಕ್ರೀಡಾವಲಯದಲ್ಲಿ ಪರಿಪೂರ್ಣ ಮತ್ತು ಶ್ರೇಷ್ಠತೆಗಳ ಅಪಮೌಲ್ಯ ಆಗುತ್ತಿದೆ. ಕ್ರೀಡೆಯಲ್ಲಿ ಒಬ್ಬ ಆಟಗಾರನ ಕುರಿತು ಒಂದೇ ಒಂದು ಸಣ್ಣ ದೌರ್ಬಲ್ಯವೂ ಇಲ್ಲದ ಪರಿಪೂರ್ಣ ಅಥವಾ ಶ್ರೇಷ್ಠಾತಿಶ್ರೇಷ್ಠ ಎಂದು ವೈಭವೀಕರಿಸುವುದೇ ಸಮಂಜಸವಲ್ಲ. ಡಾನ್ ಬ್ರಾಡ್ಮನ್ ಪರಿಪೂರ್ಣತ್ವಕ್ಕೆ ಕೆಲವು ದಶಮಾಂಶ ಕಡಿಮೆಯಾಯಿತು. ನೂರಕ್ಕೆ ನೂರು ಸರಾಸರಿ ಕೂದಲೆಳೆಯ ಅಂತರದಿಂದ ಅವರ ಕೈತಪ್ಪಿತು. ಅದೇ ರೀತಿ ಪೀಲೆ, ಮರಡೋನಾ, ಮೊಹಮ್ಮದಾಲಿ, ಟೈಗರ್ ವುಡ್ಸ್, ಶುಮಾಕರ್ ಇವರೆಲ್ಲರೂ ಅನೇಕ ದೌರ್ಬಲ್ಯ, ಸವಾಲುಗಳನ್ನು ಒಡಲಲ್ಲಿಟ್ಟುಕೊಂಡೇ, ಅವನ್ನೆಲ್ಲ ಮೀರಿ ಜಗತ್ತು ಮೆಚ್ಚುವ ಸಾಧನೆ ಮಾಡಿದರು. ಆದರೂ, ಇವರೆಲ್ಲರ ಸಾಧನೆಗಳನ್ನೇ ಶ್ರೇಷ್ಠಾತಿಶ್ರೇಷ್ಠ; ಮುಂದೆ ಯಾರಿಂದಲೂ ಪುನರಾವರ್ತಿಸುವುದು ಸಾಧ್ಯವೇ ಇಲ್ಲ ಎಂದು ಹೇಳುವಂತಿಲ್ಲ. ಅವರ ಕಾಲಘಟ್ಟದಲ್ಲಿ ಅವರು ಸಾಧಿಸಿದ್ದು ಶ್ರೇಷ್ಠ. ಆದರೆ, ಕಾಲಾನಂತರದಲ್ಲಿ ಅವರನ್ನು ಮೀರಿಸುವ ಕ್ರೀಡಾಪಟುಗಳು ಉದ್ಭವಿಸುವುದು ಸೃಷ್ಟಿನಿಯಮ.
ಕ್ರೀಡೆಯಲ್ಲಿ ‘ಗ್ರೇಟೆಸ್ಟ್ ಆಫ್ ಆಲ್ ಟೈಮ್ ಎಂದು ಕೆಲವರನ್ನು ಹೊಗಳಲಾಗುತ್ತದೆ. ಇತ್ತೀಚೆಗಂತೂ ಈ ‘ಎ.ಣ.ಅ.ಖ’ ಜಾಗಟೆ ಕ್ಲೀಷೆಯಾಗಿಬಿಟ್ಟಿದೆ. ಹಾಗೆ ನೋಡಿದರೆ, ಕ್ರೀಡಾಪಟುಗಳ ವೃತ್ತಿಜೀವನವೆನ್ನುವುದು ಶ್ರೇಷ್ಠತೆಯ ಹಾದಿಯಲ್ಲಿನ ಪಯಣವಷ್ಟೇ. ಬ್ರಾಡ್ಮನ್ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ಗೆ ಗುಣಮಟ್ಟದ ಕ್ರಿಕೆಟ್ ಸೀಮಿತವಾಗಿದ್ದ ಕಾಲಘಟ್ಟದಲ್ಲಿ ಆಡಿದರು. ಸುನಿಲ್ ಗಾವಸ್ಕರ್ ಟೆಸ್ಟ್ ಕ್ರಿಕೆಟ್ನಲ್ಲಿ ಮೊದಲ ಬಾರಿ ಹತ್ತು ಸಾವಿರ ರನ್ ಗಡಿ ದಾಟಿದಾಗ ಈ ಸಾಧನೆ ಬೇರೆಯವರಿಂದ ಅಸಾಧ್ಯ, ಇವರೇ ಸರ್ವಶ್ರೇಷ್ಠ ಅನ್ನಿಸಿತ್ತು. ರಿಚರ್ಡ್ ಹ್ಯಾಡ್ಲಿಯ ವಿಕೆಟ್ ದಾಖಲೆಯನ್ನು ಕಪಿಲ್ ದೇವ್ ಹಿಂದಿಕ್ಕಿದಾಗಲೂ ಅಷ್ಟೇ. ಮುತ್ತಯ್ಯ ಮುರಳೀಧರನ್ರ 800 ಟೆಸ್ಟ್ ವಿಕೆಟ್ ಸಾಧನೆ ಕೂಡ ಮತ್ತೊಬ್ಬ ಮನುಷ್ಯಮಾತ್ರನಿಂದ ಅಸಾಧ್ಯ ಎಂಬಷ್ಟು ಎತ್ತರದಲ್ಲಿದೆ. ತೆಂಡುಲ್ಕರ್ ದಾಖಲೆಗಳ ಮೇಲೆ ದಾಖಲೆ ಪುಡಿಗಟ್ಟುತ್ತಿದ್ದಾಗ ದೇವಸದೃಶ ಅನ್ನಿಸಿತ್ತು. ನೂರು ಸೆಂಚುರಿ ಸಾಧನೆ ಒಮ್ಮೆ ಮಾತ್ರ; ಒಬ್ಬರಿಗೆ ಮಾತ್ರ ಒಲಿಯುವ ಸಾಧನೆ ಎನ್ನಿಸಿದ್ದರೂ, ವಿರಾಟ್ ಕೊಹ್ಲಿ 70 ಶತಕಗಳ ಧಾವಂತ ಕಂಡಾಗ ನೂರು ಯಾವ ಲೆಕ್ಕ ಅನ್ನಿಸಿತ್ತು. ಆದರೆ, 70ರ ನಂತರ ಇಪ್ಪತ್ತೇಳು ತಿಂಗಳೇ ಸವೆದರೂ ಕೊಹ್ಲಿಗೆ 71 ನಿಲುಕದಿರುವಾಗ ಶ್ರೇಷ್ಠತ್ವದ, ಪೂರ್ಣತ್ವದ ಮೌಲ್ಯ, ಮಹತ್ವ ಅರಿವಾಗುತ್ತದೆ. ನಾಳೆಯನ್ನು ಕಂಡವರಿಲ್ಲ. ಯಾವ ದಾಖಲೆಯೂ ಅಜರಾಮರ, ಶಾಶ್ವತವಲ್ಲ. ದಾಖಲೆಗಳಿರುವುದೇ ಮುರಿಯುವುದಕ್ಕೆ. ಹಾಗಾಗಿ ಶ್ರೇಷ್ಠತ್ವದ ಪಯಣ ನಿರಂತರ. ಒಬ್ಬ ವ್ಯಕ್ತಿಯೊಂದಿಗೆ, ಒಂದು ಸಾಧನೆಯೊಂದಿಗೆ ಅದು ನಿಂತುಹೋಗುವುದಿಲ್ಲ.
ಸಾಮಾಜಿಕ ಮಾಧ್ಯಮಗಳು ಮುಂಚೂಣಿಗೆ ಬಂದಮೇಲೆ ಒಬ್ಬೊಬ್ಬ ಆಟಗಾರರೂ ಫ್ಯಾನ್ ಕ್ಲಬ್ಗಳ ಹೆಸರಲ್ಲಿ ಸ್ವಪ್ರಶಂಸೆಯ ಸಾಮ್ರಾಜ್ಯ ಕಟ್ಟಿಕೊಂಡಿದ್ದಾರೆ. ಕ್ಯಾಚ್ ಹಿಡಿದಿದ್ದು, ಸಿಕ್ಸರ್ ಹೊಡೆದಿದ್ದು, ಶತಕ ಬಾರಿಸಿದ್ದು, ವಿಕೆಟ್ ಪಡೆದಿದ್ದು, ವೇಗದಲ್ಲಿ ರನ್ ಬಾರಿಸಿದ್ದು... ಹೀಗೆ ಒಂದೊಂದು ವ್ಯಕ್ತಿಗತ ಸಾಹಸಗಳನ್ನು ಸರ್ವಶ್ರೇಷ್ಠ ಎಂದು ಎದೆತಟ್ಟಿಕೊಳ್ಳುವ ಭ್ರಮೆಗಳು ಅತಿಯಾಗಿವೆ. ಕೆ.ಎಲ್. ರಾಹುಲ್ ಆಫ್ರಿಕಾದಲ್ಲಿ ಒಂದು ಶತಕ ಬಾರಿಸಿದಾಗ ‘ರಾಹುಲ್ ಗ್ರೇಟೆಸ್ಟ್ ಬ್ಯಾಟರ್’ ಎಂಬ ಟ್ವಿಟರ್ ಅಭಿಯಾನ ಶುರುವಾಗುತ್ತದೆ. ಶ್ರೇಯಸ್ ಅಯ್ಯರ್ ಸತತ ಸರಣಿಗಳಲ್ಲಿ ಮಿಂಚಿದಾಗ ಸ್ಪಿನ್ ಬೌಲಿಂಗ್ ವಿರುದ್ಧ ಭಾರತದ ಶ್ರೇಷ್ಠ ಬ್ಯಾಟರ್ ಎಂಬ ಹೊಗಳಿಕೆ ಮುಗಿಲು ಮುಟ್ಟುತ್ತದೆ. ಜಡೇಜಾ ಒಂದು ಸರಣಿಯಲ್ಲಿ ನಾಟೌಟ್ ಆಗುಳಿದಾಗ ಜಗತ್ತಿನ ಶ್ರೇಷ್ಠ ಆಲ್ರೌಂಡರ್ ಎಂಬ ತಮಟೆ ಶುರುವಾಗುತ್ತದೆ. ಪ್ರಶಂಸೆ ಬಯಸುವುದು ಮಾನವ ಸಹಜ ಗುಣ. ಅದರಿಂದ ಇನ್ನಷ್ಟು ಸಾಧಿಸುವುದಕ್ಕೆ ಪ್ರೇರಣೆ ದೊರಕುತ್ತದೆ. ಆದರೆ, ಒಂದು ಸಮಕಾಲೀನ ಸಾಧನೆಯನ್ನು ಹೊಗಳುವ ಭರದಲ್ಲಿ ಹಿಂದೆ ಆಡಿದವರೆಲ್ಲರೂ ಕೆಲಸಕ್ಕೆ ಬಾರದವರು, ಗತಕಾಲದ ಕ್ರಿಕೆಟ್ ಸಾಧನೆಗಳು ಲೆಕ್ಕಕ್ಕಿಲ್ಲ ಎಂಬಂತೆ ವರ್ತಮಾನವನ್ನು ವೈಭವೀಕರಿಸುವುದು ಸಲ್ಲಕ್ಷಣವಲ್ಲ. ದಶಕಗಳ ಹಿಂದೆ ಆಸ್ಟ್ರೇಲಿಯಾದಲ್ಲಿ, ವೆಸ್ಟ್ ಇಂಡೀಸ್ನಲ್ಲಿ, ಬೇರೆಬೇರೆ ದೇಶಗಳ ದುರ್ಗಮ ಪಿಚ್ಗಳಲ್ಲಿ ಲಾಲಾ ಅಮರನಾಥ್, ಪಟೌಡಿ, ಸರ್ದೇಸಾಯಿ, ವಿಶ್ವನಾಥ್, ಗಾವಸ್ಕರ್, ತೆಂಡುಲ್ಕರ್, ದ್ರಾವಿಡ್, ಲಕ್ಷ್ಮಣ್ರಂಥ ಬ್ಯಾಟ್ಸ್ಮನ್ಗಳು ಬೆವರು ಸುರಿಸಿ ಕಟ್ಟಿದ ಬುನಾದಿಯ ಮೇಲೆ ಇಂದಿನ ಯಶಸ್ಸಿನ ಸೌಧ ಎದ್ದುನಿಂತಿದೆ. ಕ್ರಿಕೆಟ್ ಮೈದಾನದಲ್ಲಿ ಯಾವ ಸಾಧನೆಯೂ ಮೇಲು-ಕೀಳು ಎಂದಲ್ಲ ಎಂಬುದನ್ನು ಮರೆಯಬಾರದು.
ರೋಹಿತ್ ಶರ್ಮ ಕಳೆದ ದಕ್ಷಿಣ ಆಫ್ರಿಕಾ ಪ್ರವಾಸದಲ್ಲೇ ನಾಯಕರಾಗಿದ್ದಿದ್ದರೆ ಅವರ ಪ್ರೌಢಿಮೆ ಅನಾವರಣಕ್ಕೊಂದು ಒಳ್ಳೆಯ ವೇದಿಕೆ ದೊರಕಿರುತ್ತಿತ್ತು. ಆದರೆ, ಅಲ್ಲಿ ಕೊಹ್ಲಿ ಮತ್ತು ರಾಹುಲ್ ನಾಯಕತ್ವದಲ್ಲಿ ಭಾರತ ಸೋತು ಬಂದ ಮೇಲೆ ರೋಹಿತ್ ತವರಿನಲ್ಲಿ ಸತತ ನಾಲ್ಕು ಸರಣಿಗಳಲ್ಲಿ ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾಗೆ ವೈಟ್ವಾಷ್ ಮಾಡಿದ್ದಾರೆ. ಕಳೆದ ವರ್ಷ ಟಿ20 ವಿಶ್ವಕಪ್ ನಂತರ ನ್ಯೂಜಿಲೆಂಡ್ಗೂ ರೋಹಿತ್ ವೈಟ್ವಾಷ್ ಮುಖಭಂಗ ಒಡ್ಡಿದ್ದರು. ಕೊಹ್ಲಿ ನಾಯಕರಾಗಿ ಭಾರತದಲ್ಲಿ ದಾಖಲೆ 11 ಸರಣಿ ಗೆದ್ದಿದ್ದಾರೆ. ಆದರೆ, ಯಾವ ತಂಡಕ್ಕೂ ಇಷ್ಟು ಅಧಿಕಾರಯುತವಾಗಿ ಕ್ಲೀನ್ಸ್ವೀಪ್ ಮುಜುಗರ ಒಡ್ಡಿರಲಿಲ್ಲ. ಐಪಿಎಲ್ನಲ್ಲಿ ರೋಹಿತ್ ನಾಯಕತ್ವ ದಿ ಬೆಸ್ಟ್. ಆದರೂ, ಭಾರತ ತಂಡದ ನಾಯಕರಾಗಿ ಅವರು ಇನ್ನೂ ಬೇರೆ ಬೇರೆ ತಂಡಗಳ ವಿರುದ್ಧ, ಬೇರೆ ಬೇರೆ ದೇಶ, ವಾತಾವರಣ, ಪಿಚ್, ಸವಾಲುಗಳ ವಿರುದ್ಧ ಸಾಧಿಸುವ ಮುನ್ನವೇ ಗ್ರೇಟ್ ಎಂದು ಹೊಗಳುವುದು ತರಾತುರಿಯಾಗುತ್ತದೆ. ಕಳಪೆ ನಾಯಕತ್ವ ಗುರುತಿಸುವುದಕ್ಕೆ ಹಲವು ನಿದರ್ಶನಗಳು ಕಣ್ಣೆದುರಿಗಿರುತ್ತವೆ. ಕಳೆದ ಆಶಸ್ ಸರಣಿಯಲ್ಲಿ ಇಂಗ್ಲೆಂಡಿನ ಜೋ ರೂಟ್ ನಾಯಕತ್ವ ಅತ್ಯಂತ ಕಳಪೆಯಾಗಿತ್ತು. ಮೊನ್ನೆ ಪಾಕಿಸ್ತಾನಕ್ಕೆ ನಾಯಕ ಪ್ಯಾಟ್ ಕಮಿನ್ಸ್ ಫಾಲೋಆನ್ ಹೇರಿದ್ದರೆ, ಆಸ್ಟ್ರೇಲಿಯಾ ಡ್ರಾ ಬದಲು ಗೆಲುವನ್ನೇ ಪಡೆಯಬಹುದಿತ್ತು. ಆಸೀಸ್ ವಿನಾ ಕಾರಣ 2ನೇ ಇನಿಂಗ್ಸ್ ಬ್ಯಾಟಿಂಗ್ಗೆ ಆಸೆ ಪಟ್ಟು 22 ಓವರ್ ಆಡಿದ್ದರಿಂದ ಕೊನೆಯಲ್ಲಿ ಪಾಕ್ನ 3 ವಿಕೆಟ್ ಕಬಳಿಸುವುದಕ್ಕೆ ಅಡ್ಡಿಯೆನಿಸಿತು. ಅದೇ ರೀತಿ ನಾಯಕತ್ವದ ಶ್ರೇಷ್ಠ ರೀತಿಯ ನಿಭಾವಣೆಗಳಿಗೆ ಹಲವು ಉದಾಹರಣೆಗಳು ಸಿಗುತ್ತವೆ. ಆದರೆ, ಒಬ್ಬ ನಾಯಕನನ್ನು ಶ್ರೇಷ್ಠ ಎಂದು ಪಟ್ಟಕಟ್ಟುವುದಕ್ಕೆ ಅಷ್ಟೇ ಸಾಲದು.
ನಾಯಕತ್ವ ಎನ್ನುವುದು ಕೌಶಲದ ಜತೆಗೆ ಅದೃಷ್ಟದಾಟವೂ ಹೌದು. ನಾಯಕನಿಗೆ ಸಮಯಪ್ರಜ್ಞೆ ಬಹಳ ಮುಖ್ಯ. ಸರಿಯಾದ ಸಂದರ್ಭದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ಬಹುಮುಖ್ಯ. ಬೋರ್ಡ್ ರೂಮಿನಲ್ಲಿ ಮಾಡಿದ ಎ ಪ್ಲಾ್ಯನ್, ಬಿ ಪ್ಲಾ್ಯನ್ಗಳನ್ನು ಮೈದಾನದಲ್ಲಿ ಜಾರಿಗೆ ತರುವವನು ನಾಯಕನೆನಿಸಲಾರ. ಮೈದಾನದಲ್ಲಿ ಸನ್ನಿವೇಶಕ್ಕೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳುವವನು, ವ್ಯೂಹಗಳನ್ನು ಬದಲಿಸುವವನು, ದಿಢೀರ್ ನಿರ್ಧಾರಗಳಿಂದ, ಚಾಣಾಕ್ಷತನದಿಂದ ಎದುರಾಳಿಗಳನ್ನು ತಬ್ಬಿಬ್ಬುಗೊಳಿಸುವವನು, ಆಟಗಾರರಿಂದ ಅಪೇಕ್ಷಿತ ಪ್ರದರ್ಶನ ಹೊರಸೆಳೆಯುವವನು ನಿಜವಾದ ನಾಯಕ. ಆಟಗಾರರ ಆತ್ಮವಿಶ್ವಾಸ ಹೆಚ್ಚಿಸುವವನು, ವಿಶ್ವಾಸಕ್ಕೆ ತೆಗೆದುಕೊಂಡು ಅಭದ್ರತೆ ದೂರ ಮಾಡುವವನು, ತನ್ನ ಉಪಸ್ಥಿತಿಯಿಂದಲೇ ಭರವಸೆ ಮೂಡಿಸುವವನು ಉತ್ತಮ ನಾಯಕ. ರೋಹಿತ್ ತಮ್ಮ ನಾಯಕತ್ವದ ಆರಂಭದಲ್ಲಿ ಇಂಥ ಉತ್ತಮ ನಾಯಕತ್ವದ ಭರವಸೆ ಮೂಡಿಸಿದ್ದಾರೆ.
ಹನ್ನೊಂದು ಅತ್ಯುತ್ತಮ ಆಟಗಾರರಿದ್ದರೆ ಯಾರು ಬೇಕಾದರೂ ನಾಯಕತ್ವ ನಿಭಾಯಿಸಬಹುದು ಎಂಬುದು ಸುಳ್ಳು. ನಾಯಕ ಉತ್ತಮನಾಗಿದ್ದರೆ; ಗಟ್ಟಿಗನಾಗಿದ್ದರೆ ಹನ್ನೊಂದು ಸಾಧಾರಣ ಆಟಗಾರರ ತಂಡದೊಂದಿಗೆ ಅಸಾಧಾರಣ ಫಲಿತಾಂಶ ತರಬಲ್ಲ. ಆರ್ಸಿಬಿ ತಂಡದಲ್ಲಿ ಅತ್ಯುತ್ತಮ ಆಟಗಾರರಿಗೇನೂ ಕೊರತೆ ಇಲ್ಲ. ಗೇಲ್, ಮೆಕ್ಕಲಂ, ಡಿವಿಲಿಯರ್ಸ್, ಕೊಹ್ಲಿಯಂಥ ಆಟಗಾರರು ವಿವಿಧ ಋತುಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದಾಗಲೂ ಟ್ರೋಫಿ ಆ ತಂಡಕ್ಕೆ ಮರೀಚಿಕೆ. ಕಾರಣ ಸಮರ್ಥ ನಾಯಕತ್ವದ ಕೊರತೆ. ಆದರೆ ಓರ್ವ ಶೇನ್ ವಾರ್ನ್ ರಾಜಸ್ಥಾನ ರಾಯಲ್ಸ್ಗೆ, ವಾರ್ನರ್ ಸನ್ರೈಸರ್ಸ್ಗೆ ಸಾಧಾರಣ ಆಟಗಾರರ ತಂಡ ಮುನ್ನಡೆಸಿ ಟ್ರೋಫಿ ಗೆದ್ದು ಕೊಡಲಿಲ್ಲವೇ?
ರಿಕಿ ಪಾಂಟಿಂಗ್, ಸ್ಟೀವ್ ವಾ, ಎಂಎಸ್ ಧೋನಿ ಹೀಗೆ ಹಲವರು ಶ್ರೇಷ್ಠ ರೀತಿಯಲ್ಲಿ, ಶ್ರೇಷ್ಠತೆಯ ಹಾದಿಯಲ್ಲಿ ಮಾದರಿಯಾಗಿ ನಾಯಕತ್ವ ನಿಭಾಯಿಸಿದ್ದಾರೆ. ಆದರೆ, ಸರ್ವಶ್ರೇಷ್ಠ ಎನ್ನುವುದು ಯಾರೂ ಕಾಣದ ಉತ್ತುಂಗ. ನಾವು ಸಾಗುವ ದಾರಿಯ ಬಗ್ಗೆ ವಿಶ್ವಾಸವಿರಬೇಕು, ಆದರೆ ಮಾರ್ಗವೇ ಗುರಿಯಲ್ಲ. ಮಾರ್ಗ ಹಾಗೂ ಗುರಿಯ ವ್ಯತ್ಯಾಸ ಅರಿತರಷ್ಟೇ ಭ್ರಮೆಯಿಂದ ಹೊರಬರಬಹುದು.
ವೃತ್ತಿಜೀವನದುದ್ದಕ್ಕೂ ಬ್ಯಾಟಿಂಗ್ ತಾಂತ್ರಿಕತೆಗೆ, ರಕ್ಷಣಾತ್ಮಕ ಶೈಲಿಗೆ ಹೆಸರಾದ ಬ್ಯಾಟ್ಸ್ಮನ್ಗಳು ವೃತ್ತಿಜೀವನದ ಕೊನೆಯ ಘಟ್ಟದಲ್ಲಿ ಸತತವಾಗಿ ಕ್ಲೀನ್ಬೌಲ್ಡ್ ಆಗಿ ಔಟಾದ ಹಲವು ನಿದರ್ಶನಗಳಿವೆ. ಅಂದರೆ, ಯಾರೂ ಪರಿಪೂರ್ಣರಲ್ಲ. ಪ್ರಾವಿಣ್ಯ, ನೈಪುಣ್ಯ, ತಜ್ಞತೆಯೇ ಬೇರೆ, ಪರಿಪೂರ್ಣತೆಯೇ ಬೇರೆ. ಕ್ರೀಡೆಯಲ್ಲಿ ಹಲವು ಕೌಶಲಗಳಲ್ಲಿ ಪ್ರವೀಣರು, ನಿಪುಣರು, ತಜ್ಞರು ಹಲವರಿದ್ದಾರೆ. ಆದರೆ, ಪರಿಪೂರ್ಣರು ಎಂದು ಹೇಳುವುದು ಕಷ್ಟ. ಏಕೆಂದರೆ, ವಯಸ್ಸಾದಂತೆ, ದೇಹ ಹಣ್ಣಾದಂತೆ, ದೃಷ್ಟಿಯ ಮೊನಚು ಕಡಿಮೆಯಾದಂತೆ ತಜ್ಞತೆ ಕಡಿಮೆಯಾಗುತ್ತ ಹೋಗುತ್ತದೆ. ಹೆಚ್ಚುಕಡಿಮೆ, ಏರುಪೇರು, ಆಚೆಈಚೆ ಆಗುವುದು ಪೂರ್ಣತ್ವವಲ್ಲ. ಅದೇ ಕಾರಣಕ್ಕೆ ಪರಿಪೂರ್ಣ ಪರಮಾತ್ಮ ಮಾತ್ರ. ಪೂರ್ಣತ್ವದ ಹಾದಿಯಲ್ಲಿ ಸಾಗುವುದು ಮನುಷ್ಯನ ಪಯಣದ ಗುರಿಯಾಗಬೇಕು.
ಪೂರ್ಣಮದಃ ಪೂರ್ಣಮಿದಂ
ಪೂರ್ಣಾತ್ಪೂರ್ಣಮುದಚ್ಯತೆ
ಪೂರ್ಣಸ್ಯ ಪೂರ್ಣಮಾದಾಯ
ಪೂರ್ಣಮೇವಾವಶಿಷ್ಯತೇ||
ಲೇಖಕರು 'ವಿಜಯವಾಣಿ' ಡೆಪ್ಯೂಟಿ ಎಡಿಟರ್