

ಯಾವುದೇ ತಂಡವಿರಲಿ, ನಾಯಕ ಸೇರಿದಂತೆ ಪ್ರಮುಖ ಬ್ಯಾಟರ್ಗಳು ಹಾಗೂ ಬೌಲರ್ಗಳ ಒಂದು ಕೋರ್ ಟೀಮ್ ಇಟ್ಟುಕೊಂಡು, ಉಳಿದ ಸ್ಥಾನಗಳಿಗೆ ಪ್ರಯೋಗ ಮಾಡುವುದು, ಹೊಸಬರಿಗೆ ಅವಕಾಶ ನೀಡುವುದು ಲೋಕರೂಢಿ. ಆದರೆ, ದ್ರಾವಿಡ್ ಕೋಚ್ ಆದ ಮೇಲೆ ಟೀಮ್ ಇಂಡಿಯಾದಲ್ಲೊಂದು ಕೋರ್ ತಂಡವೇ ಇಲ್ಲ.
ರಾಹುಲ್ ದ್ರಾವಿಡ್ 16 ವರ್ಷಗಳಲ್ಲಿ 164 ಟೆಸ್ಟ್, 344 ಏಕದಿನ
ಸೌರವ್ ಗಂಗೂಲಿ 12 ವರ್ಷಗಳಲ್ಲಿ 113 ಟೆಸ್ಟ್, 311 ಏಕದಿನ
ವಿವಿಎಸ್ ಲಕ್ಷ್ಮಣ್ 16 ವರ್ಷಗಳಲ್ಲಿ 134 ಟೆಸ್ಟ್, 83 ಏಕದಿನ
ರೋಹಿತ್ ಶರ್ಮ 15 ವರ್ಷಗಳಲ್ಲಿ 45 ಟೆಸ್ಟ್, 230 ಏಕದಿನ
ಆಟ ಯಾವುದೇ ಇರಲಿ, ಎದುರಾಳಿ ಯಾರೇ ಇರಲಿ ಪ್ರತೀ ಪಂದ್ಯವನ್ನೂ ಗಂಭೀರವಾಗಿ ಪರಿಗಣಿಸಿ, ನೂರಕ್ಕೆನೂರು ಸಂಪನ್ಮೂಲ, ಸಾಮರ್ಥ್ಯ ಬಳಸಿ ಆಡಬೇಕೆನ್ನುವುದು ಕ್ರೀಡೆಯ ಅಲಿಖಿತ ನಿಯಮ. ಆಟವೆಂದ ಮೇಲೆ ಸೋಲು ಗೆಲುವು ಇದ್ದಿದ್ದೇ. ಆದರೆ, ನಮ್ಮ ಪ್ರಯತ್ನದಲ್ಲಿ ಕೊರತೆ ಇರಬಾರದು. ಅಂದರೆ, ಪ್ರತೀ ಬಾರಿ ಲಭ್ಯವಿರುವ ಅತ್ಯುತ್ತಮ ತಂಡವನ್ನೇ (ಬೆಸ್ಟ್ ಟೀಮ್, ಅತ್ಯುತ್ತಮ ಆಟಗಾರರನ್ನೇ (ಬೆಸ್ಟ್ ಪ್ಲೇಯರ್ಸ್) ಕಣಕ್ಕಿಳಿಸಬೇಕು. ಅದು ಕ್ರೀಡಾಧರ್ಮ. ಆದರೆ, ಕಳೆದ ಎರಡು ವರ್ಷಗಳಿಂದ, ಅದರಲ್ಲೂ ದ್ರಾವಿಡ್ ಕೋಚ್ ಆದ ಮೇಲೆ ಅದು ನಡೆಯುತ್ತಿಲ್ಲ. ಪ್ರತೀ ಬಾರಿ, ಯಾವುದೇ ಪ್ರವಾಸ, ಸರಣಿಗೆ ತಂಡ ಆಯ್ಕೆ ಮಾಡುವಾಗ ಒಂದಷ್ಟು ಪ್ರಮುಖ ಆಟಗಾರರಿಗೆ ವಿಶ್ರಾಂತಿ ಕೊಟ್ಟು ಕೂರಿಸಲಾಗುತ್ತಿದೆ. ಈ ಪದ್ಧತಿಯಿಂದ ಅತೀ ಹೆಚ್ಚು ಸಂತ್ರಸ್ತರಾಗಿರುವುದು ರೋಹಿತ್ ಶರ್ಮ. ಭಾರತೀಯ ಕ್ರಿಕೆಟ್ ಕಂಡ ಅಪರೂಪದ ಪ್ರತಿಭೆ ರೋಹಿತ್ ಶರ್ಮ. ಸ್ವಭಾವತಃ ಶಾಂತ, ಸಂಯಮಿ, ಬ್ಯಾಟಿಂಗ್ನಲ್ಲಿ ರೌದ್ರಸ್ವಭಾವದ ಆಟಗಾರ ಈತ. ಕೆಲವು ತಾಂತ್ರಿಕ ದೌರ್ಬಲ್ಯಗಳಿದ್ದರೂ, ಏಕದಿನ ಕ್ರಿಕೆಟ್ನಲ್ಲಿ ಮೂರು ದ್ವಿಶತಕ ಬಾರಿಸಿರುವ ಏಕೈಕ ಆಟಗಾರ. ಅತ್ಯಂತ ಪ್ರತಿಭಾವಂತ ಆದರೆ, ಅಷ್ಟೇ ದುರ್ಭಾಗ್ಯವಂತ. ಕಾರಣ ಅವಕಾಶಗಳ ಬರ. 2007ರಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟರೂ ರೋಹಿತ್ ಮೊದಲ ಟೆಸ್ಟ್ ಅವಕಾಶಕ್ಕಾಗಿ 2013ರವರೆಗೆ ಕಾಯಬೇಕಾಯಿತು. ಆನಂತರವೂ ಅವರು 9 ವರ್ಷಗಳಲ್ಲಿ ಆಡಿರುವುದು ಕೇವಲ 45 ಟೆಸ್ಟ್ ಪಂದ್ಯಗಳಷ್ಟೇ. ಅದಕ್ಕೆ ಕಾರಣ ಅವರ ವೈಫಲ್ಯವೇನೂ ಅಲ್ಲ. ಬದಲಿಗೆ ಟೀಮ್ ಮ್ಯಾನೇಜ್ವೆುಂಟ್ ಮತ್ತು ಆಯ್ಕೆಗಾರರ ವಿಚಿತ್ರ ಮರ್ಜಿಗಳು. ಕೊನೆಗೂ ವಿರಾಟ್ ಕೊಹ್ಲಿ ನಾಯಕತ್ವ ತ್ಯಾಗದ ಬಳಿಕ ಪೂರ್ಣಪ್ರಮಾಣದ ನಾಯಕರಾಗಿ ನೇಮಕಗೊಂಡ ಮೇಲಾದರೂ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ರೋಹಿತ್ ಅಬ್ಬರವನ್ನು ಪೂರ್ಣ ಪ್ರಮಾಣದಲ್ಲಿ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಗುತ್ತಿಲ್ಲ. ಕಾರಣ ಮತ್ತದೇ ಟೀಮ್ ಮ್ಯಾನೇಜ್ವೆುಂಟ್, ಆಯ್ಕೆಗಾರರ ವಿಚಿತ್ರ ಮರ್ಜಿ.
ಟೀಮ್ ಇಂಡಿಯಾದಲ್ಲಿ ನಾಯಕನೇ ನಂ.1 ಎಂಬ ಕಾಲವಿತ್ತು. ಗಂಗೂಲಿ, ಧೋನಿ, ಕೊಹ್ಲಿ ತಮ್ಮ ಇಷ್ಟದ ಪ್ರಕಾರ ತಂಡವನ್ನು ಮುನ್ನಡೆಸುತ್ತಿದ್ದರು. ಆಟಗಾರರ ಆಯ್ಕೆಯಿಂದ ಮೈದಾನದ ಎಲ್ಲ ನಿರ್ಧಾರಗಳವರೆಗೂ ನಾಯಕನ ತೀರ್ವನವೇ ಬಹುಮುಖ್ಯವಾಗಿರುತ್ತಿತ್ತು. ತರಬೇತುದಾರ ನಾಯಕನ ಬೆನ್ನಹಿಂದಿರುತ್ತಿದ್ದರು. ಆದರೆ, ದ್ರಾವಿಡ್ ಕೋಚ್ ಆದ ಮೇಲೆ ನಾಯಕತ್ವ ಎನ್ನುವುದೇ ಸಂಗೀತಕುರ್ಚಿ ಆಗಿಬಿಟ್ಟಿದೆ. ರೋಹಿತ್ ಶರ್ಮ ಪೂರ್ಣಪ್ರಮಾಣದ ನಾಯಕ ಎನಿಸಿಕೊಂಡಿದ್ದರೂ, ಅವರಿಗೆ ಪೂರ್ಣ ಪ್ರಮಾಣದಲ್ಲಿ ಆಡುವ ಅವಕಾಶವೇ ಸಿಗುತ್ತಿಲ್ಲ. ಒಂದು ಸರಣಿ ಆಡುವ ಹೊತ್ತಿಗೆ ಮುಂದಿನ ಸರಣಿಗೆ ವಿಶ್ರಾಂತಿ ನೆಪದಲ್ಲಿ ನಾಯಕನನ್ನೇ ಹೊರಗಿಡಲಾಗುತ್ತಿದೆ. ನಾಯಕನನ್ನೇ ತಂಡದಿಂದ ಹೊರಗಿಟ್ಟು ಮಾಡುತ್ತಿರುವ ಪ್ರಯೋಗ ಕ್ರಿಕೆಟ್ ಪ್ರಪಂಚದಲ್ಲೇ ಹಿಂದೆಂದೂ ಕಂಡುಕೇಳರಿಯದ್ದು. ಯುರೋಪಿಯನ್ ಫುಟ್ಬಾಲ್ನಲ್ಲಿ ನಾಯಕನನ್ನು ಟಾಸ್ಗಷ್ಟೇ ಸೀಮಿತಗೊಳಿಸಿ, ಬೇರೆಲ್ಲವನ್ನೂ ಮ್ಯಾನೇಜರ್ ನಿಭಾಯಿಸುವ ಪರಿಪಾಠವಿದೆ. ದ್ರಾವಿಡ್ ಕೋಚ್ ಆದ ಮೇಲೆ ಭಾರತೀಯ ಕ್ರಿಕೆಟ್ನಲ್ಲೂ ಅದೇ ಪದ್ಧತಿ ಬಂದಂತಿದೆ. ಇಲ್ಲವಾದರೆ, ಐಪಿಎಲ್ನಲ್ಲಿ ಸತತ 14 ಪಂದ್ಯ ಆಡುವ ರೋಹಿತ್, ವಿರಾಟ್ ಕೊಹ್ಲಿ, ಬುಮ್ರಾ, ಹಾರ್ದಿಕ್ ಪಾಂಡ್ಯ ಇವರಿಗೆಲ್ಲ ಒಂದು ಸರಣಿ ಆಡುತ್ತಿದ್ದಂತೆಯೇ ವಿಶ್ರಾಂತಿ ಅಗತ್ಯವೇ? ಪ್ರತೀ 2ನೇ ಸರಣಿಗೆ ಅವರನ್ನು ತಂಡದಿಂದ ಹೊರಗಿಡುವ ಅವಶ್ಯಕತೆ ಇದೆಯೇ?
ಹಾಗೆ ನೋಡಿದರೆ ಕ್ರಿಕೆಟಿಗರಿಗೆ ಕಾರ್ಯಬಾಹುಳ್ಯ (ವರ್ಕ್ಲೋಡ್) ಎನ್ನುವುದೊಂದು ಮಿಥ್ಯೆ. ಕ್ರಿಕೆಟ್ ಆಡುವುದೆಂದರೆ, ಅದೇನು ವರ್ಷದ ಮುನ್ನೂರ ಅರವತೆôದು ದಿನವೂ ಆಡುವುದಲ್ಲ. 2022ರಲ್ಲಿ ಟೀಮ್ ಇಂಡಿಯಾಕ್ಕೆ ನಿಗದಿಯಾಗಿದ್ದೇ 11 ಟೆಸ್ಟ್ (ಪೂರ್ಣ 5 ದಿನಗಳ ಆಟ ನಡೆದರೆ ಮಾತ್ರ ಒಟ್ಟು 55 ದಿನ), 26 ಏಕದಿನ ಮತ್ತು 20 ಟಿ20 ಪಂದ್ಯಗಳು. ಅಂದರೆ ಒಟ್ಟು 101 ದಿನಗಳ ದ್ವಿಪಕ್ಷೀಯ ಕ್ರಿಕೆಟ್. ಇದರ ಜೊತೆಗೆ 70 ದಿನಗಳಲ್ಲಿ 14 ಪಂದ್ಯ ಆಡಬೇಕಾದ ಐಪಿಎಲ್, ಟಿ20 ವಿಶ್ವಕಪ್ ಮತ್ತು ಏಷ್ಯಾ ಕಪ್ ಕ್ರಿಕೆಟ್ ಮಾತ್ರ. ಇಷ್ಟೂ ಪಂದ್ಯಗಳು ಮತ್ತು ಸರಣಿಗಳ ನಡುವೆ ಆಟಗಾರರಿಗೆ ವಿಶ್ರಾಂತಿ ಬೇಕಾದಷ್ಟು ದೊರೆತಿರುತ್ತದೆ. ಪ್ರವಾಸದ ದಿನಗಳನ್ನೂ ಲೆಕ್ಕಹಾಕಿದರೆ ವರ್ಷಕ್ಕೆ ಇನ್ನೂರು ದಿನಗಳೂ ದಾಟುವುದಿಲ್ಲ.
ಇನ್ನು ಹೋದಲ್ಲೆಲ್ಲ ಪಂಚತಾರಾ ಹೋಟೆಲ್ನಲ್ಲಿ ವಾಸ, ವಿಮಾನದ ಬಿಸಿನೆಸ್ ಕ್ಲಾಸ್ನಲ್ಲಿ ಪ್ರಯಾಣ, ಚಪ್ಪಾಳೆ, ನೆಟಿಕೆ ಸದ್ದಿಗೆ ಧಾವಿಸಿ ಬರುವ ವೈದ್ಯರು, ಫಿಸಿಯೋಗಳು, ಫಿಟ್ನೆಸ್ ಟ್ರೖೆನರ್ಗಳ ನೆರವು. ಇನ್ನು ಕರೋನಾ ಹಿನ್ನೆಲೆಯಲ್ಲಿ ಸತತ ಎರಡು ವರ್ಷ ಕಾಲ ಕ್ರಿಕೆಟಿಗರು ಮನೆಯಲ್ಲೇ ಇದ್ದರು. ಹೀಗಿರುವಾಗ ರೋಹಿತ್, ವಿರಾಟ್ರಂಥ ಆಟಗಾರರಿಗೆ ಪ್ರತೀ 2ನೇ ಸರಣಿಗೆ ವಿಶ್ರಾಂತಿ ನೀಡುವುದಕ್ಕಾದರೂ ತರ್ಕವಿದೆಯೇ? ಹೊಸ ಆಟಗಾರರಿಗೆ ಅವಕಾಶ ಕೊಡಬೇಕೆನ್ನುವುದಾದರೆ, ಆಯಿತು, ಕೊಡಲಿ. ಆದರೆ, ತಂಡದ ನಾಯಕ, ಪ್ರಮುಖ ಆಟಗಾರರನ್ನು ಹೊರಗಿಟ್ಟು ಹೊಸಬರನ್ನು ಆಡಿಸಬೇಕೇ? ಮಹತ್ವದ ಏಷ್ಯಾ ಕಪ್ ಮತ್ತು ವಿಶ್ವ ಕಪ್ ಹತ್ತಿರದಲ್ಲೇ ಇರುವಾಗ ಮೇಲಿಂದ ಮೇಲೆ ತಂಡದಿಂದ ಕೈಬಿಟ್ಟರೆ, ನಾಯಕನಿಗೆ ತಂಡ, ಆಟಗಾರರ ಮೇಲೆ, ತನ್ನ ಹೊಣೆಗಾರಿಕೆಯ ಮೇಲೆ ಹಿಡಿತ ಸಿಗುವುದಾದರೂ ಹೇಗೆ? ತಂಡದ ನಾಯಕನಾದವನಿಗೇ ತಾನು ಯಾವ ಪಂದ್ಯ, ಸರಣಿಯಲ್ಲಿ ಆಡುವೆನೆನ್ನುವುದು ಖಾತ್ರಿ ಇಲ್ಲದಿದ್ದರೆ, ತಂಡಕ್ಕೊಂದು ನಿರಂತರತೆ (ಮೊಮೆಂಟಮ್ ಸಿಗುವುದಾದರೂ ಹೇಗೆ? ಒಂದು ವೇಳೆ ರೋಹಿತ್ಗೆ ಫಿಟ್ನೆಸ್ ಇಲ್ಲದಿದ್ದರೆ, ಸತತವಾಗಿ ಸರಣಿಗಳನ್ನು ಆಡುವಷ್ಟು ಕ್ಷಮತೆ ಇಲ್ಲದೇ ಹೋದರೆ, ಅದನ್ನು ದಾಖಲೆ ಸಹಿತ ಬಹಿರಂಗಪಡಿಸಿ ಅವರನ್ನು ತಂಡದಿಂದ ಶಾಶ್ವತವಾಗಿ ಕೈಬಿಡಲಿ. ಅವರ ಬದಲು ಮತ್ತೊಬ್ಬ ಯುವಕನನ್ನು ನಾಯಕನನ್ನಾಗಿಸಿ ದ್ರಾವಿಡ್ ತಮಗೆ ಬೇಕಾದಂತೆ ತಿದ್ದಿತೀಡಲಿ. ಅದನ್ನು ಬಿಟ್ಟು ರೋಹಿತ್ರಂಥ ನಿರೂಪಿತ ಕ್ರಿಕೆಟಿಗನನ್ನು ಪ್ರಯೋಗಪಶು ಮಾಡುವ ಅಗತ್ಯವೇನಿದೆ? ಒಂದು ವೇಳೆ ರೋಹಿತ್ರ ಐಪಿಎಲ್ ಕಳಪೆ ಫಾಮ್ರ್ ವಿಶ್ರಾಂತಿಗೆ ಕಾರಣ ಎನ್ನುವುದಾದರೆ, ಮನೆಯಲ್ಲಿ ಕುಳಿತರೆ ಫಾಮ್ರ್ ಮರಳುವುದೇ? ಕೇವಲ ನೆಟ್ಸ್ನಲ್ಲಿ ಬ್ಯಾಟಿಂಗ್ ಮಾಡಿದರೆ ಫಾಮ್ರ್ ಮರಳುವುದೇ? ಕಳೆದ ವರ್ಷ ದಕ್ಷಿಣ ಆಫ್ರಿಕಾ ಪ್ರವಾಸದಿಂದ ರೋಹಿತ್ರನ್ನು ಕೈಬಿಡಲಾಯಿತು. ಗಾಯಾಳು ಎಂಬ ಕಾರಣವನ್ನು ಆಗ ಕೊಟ್ಟಿದ್ದರೂ, ಇವತ್ತಿಗೂ ಆ ಗಾಯದ ಬಗ್ಗೆ ಅನುಮಾನಗಳಿವೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯಿಂದ ಅವರಿಗೆ ವಿಶ್ರಾಂತಿ ನೀಡಲಾಯಿತು. ದಕ್ಷಿಣ ಆಫ್ರಿಕಾ ವಿರುದ್ಧದ ತವರಿನ ಸರಣಿಯಿಂದಲೂ ವಿಶ್ರಾಂತಿ ನೀಡಲಾಯಿತು. ಮೊನ್ನೆ ಇಂಗ್ಲೆಂಡ್ ವಿರುದ್ಧ ‘ಬಾಕಿ’ ಟೆಸ್ಟ್ ಪಂದ್ಯಕ್ಕೆ ಮುನ್ನ ಅವರು ಕರೊನಾ ಸೋಂಕಿಗೊಳಗಾದರು. ಹಾಗಾಗಿ ಪಂದ್ಯ ತಪ್ಪಿಸಿಕೊಳ್ಳುವಂತಾಯಿತು. ಅವರ ಅನುಪಸ್ಥಿತಿಯಲ್ಲಿ ಭಾರತ ತಂಡ ಸೂಕ್ತ ನಾಯಕತ್ವವಿಲ್ಲದೆ 4ನೇ ಇನಿಂಗ್ಸ್ನಲ್ಲಿ 378 ರನ್ಗಳ ದೊಡ್ಡ ಮೊತ್ತವನ್ನೂ ರಕ್ಷಿಸಿಕೊಳ್ಳಲಾಗದೆ ಹೀನಾಯವಾಗಿ ಸೋಲುವಂತಾಯಿತು.
ಇದೀಗ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ರೋಹಿತ್ ಮರಳಿದರೆನ್ನು ವಷ್ಟರಲ್ಲಿ, ಮುಂಬರುವ ವೆಸ್ಟ್ ಪ್ರವಾಸದಿಂದ ಹೊರಗಿಡಲಾಗಿದೆ. ಈ ರೀತಿ ಮಾಡುವುದಕ್ಕಿಂತ ಟೀಮ್ ಇಂಡಿಯಾಕ್ಕೆ ಕಾಯಂ ನಾಯಕತ್ವ ಎಂಬ ಪರಿಕಲ್ಪನೆಯನ್ನೇ ಕಿತ್ತುಹಾಕಿ ಆಯಾ ಸರಣಿಗೆ ಮುನ್ನ ಯಾರಾದರೊಬ್ಬರನ್ನು ನಾಯಕ ಎಂದು ಹೆಸರಿಸುವ ಪರಿಪಾಠ ಶುರುವಿಟ್ಟುಕೊಳ್ಳಲಿ. ಹಿಂದೆ ಸಚಿನ್ ತೆಂಡುಲ್ಕರ್ ಆಡುವಷ್ಟು ಕಾಲ ಗಾಯಗೊಂಡ ಅವಧಿ ಬಿಟ್ಟರೆ ಅವರು ಯಾವತ್ತೂ ವಿಶ್ರಾಂತಿ ಪಡೆಯಲಿಲ್ಲ. ಟೆಸ್ಟ್ ಕ್ರಿಕೆಟ್ನಲ್ಲಿ ದ್ರಾವಿಡ್ ಒಮ್ಮೆಯೂ ವಿಶ್ರಾಂತಿ ಪಡೆಯದೆ ಸತತ 94 ಟೆಸ್ಟ್ ಪಂದ್ಯ ಆಡಿದ್ದಿದೆ. ಯಾವುದೇ ತಂಡವಿರಲಿ, ನಾಯಕ ಸೇರಿದಂತೆ ಪ್ರಮುಖ ಬ್ಯಾಟರ್ಗಳು ಹಾಗೂ ಬೌಲರ್ಗಳ ಒಂದು ಕೋರ್ ಟೀಮ್ ಇಟ್ಟುಕೊಂಡು, ಉಳಿದ ಸ್ಥಾನಗಳಿಗೆ ಪ್ರಯೋಗ ಮಾಡುವುದು, ಹೊಸಬರಿಗೆ ಅವಕಾಶ ನೀಡುವುದು ಲೋಕರೂಢಿ. ಆದರೆ, ದ್ರಾವಿಡ್ ಕೋಚ್ ಆದ ಮೇಲೆ ಟೀಮ್ ಇಂಡಿಯಾದಲ್ಲೊಂದು ಕೋರ್ ತಂಡವೇ ಇಲ್ಲ. ಒಂದು ಸರಣಿಯಲ್ಲಿ ಆಡಿದ ತಂಡ ಮತ್ತೊಂದು ಸರಣಿಯಲ್ಲಿ ಆಡುತ್ತಿಲ್ಲ.
ಕೇವಲ ಹೊಸ ಆಟಗಾರರಿಗೆ ಅವಕಾಶಗಳ ಮೇಲೆ ಅವಕಾಶ ಕೊಟ್ಟರಷ್ಟೇ ಸಾಲದು. ನಿರೂಪಿತ, ಪ್ರಧಾನ ಆಟಗಾರರನ್ನು ಎಲ್ಲ ಪಂದ್ಯ, ಸರಣಿ, ಪ್ರವಾಸಗಳಲ್ಲೂ ಬಳಸಿಕೊಳ್ಳುವ ಮೂಲಕ ತಂಡವನ್ನು ಗಟ್ಟಿಗೊಳಿಸುವ ಪ್ರಯತ್ನ ಯಾಕೆ ನಡೆಯುತ್ತಿಲ್ಲ ಎಂಬುದಕ್ಕೆ ಭಾರತೀಯ ಕ್ರಿಕೆಟ್ಗೆ ಉತ್ತರದಾಯಿಗಳಾಗಿರುವ ಗಂಗೂಲಿ, ದ್ರಾವಿಡ್, ಲಕ್ಷ್ಮಣ್ರೇ ಉತ್ತರ ನೀಡಬೇಕು. ಕ್ರೀಡಾಪಟುಗಳ ಸರಾಸರಿ ವೃತ್ತಿಜೀವನವೇ 10-12 ವರ್ಷ. ಕ್ರಿಕೆಟ್ನಲ್ಲಿ ಆಟಗಾರರ ಕ್ಷಮತೆ, ಯಾವ ವಯಸ್ಸಿನಲ್ಲಿ ಪ್ರವರ್ಧಮಾನಕ್ಕೆ ಬಂದಿರುತ್ತಾರೆ ಎನ್ನುವುದರ ಮೇಲೆ 15-20 ವರ್ಷಗಳವರೆಗೆ ವಿಸ್ತರಿಸುತ್ತದೆ. ಒಮ್ಮೆ 34-35 ವರ್ಷ ದಾಟಿದರೆ, ಅನೇಕ ಆಟಗಾರರಿಗೆ ಫಾಮ್ರ್, ತಾಂತ್ರಿಕ ಸಮಸ್ಯೆಗಳು ಎದುರಾಗುತ್ತವೆ. 30 ರಿಂದ 34 ಕ್ರಿಕೆಟಿಗರ ಜೀವನದಲ್ಲಿ ಉತ್ತುಂಗ ವರ್ಷಗಳು. ನಾವೆಲ್ಲರೂ ಕಂಡಿರುವಂತೆ ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್ರ ಉತ್ತುಂಗ ವರ್ಷಗಳು ಕೆಲವರ ರಾಜಕೀಯದಿಂದಾಗಿ ನಷ್ಟವಾದವು. ಈಗ ರೋಹಿತ್ರ ಶ್ರೇಷ್ಠದಿನಗಳು ಸಹ ‘ವಿಶ್ರಾಂತಿಯ ರಾಜಕಾರಣದಿಂದ’ ನಷ್ಟವಾಗದಿರಲಿ ಎಂಬುದಷ್ಟೇ ಕಳಕಳಿ..
(ಲೇಖಕರು ವಿಜಯವಾಣಿ ಡೆಪ್ಯೂಟಿ ಎಡಿಟರ್)