ಒಲಿಂಪಿಕ್ಸ್ ರೋಮಾಂಚನ, ಗೆದ್ದು ಬಾ ಭಾರತ..

Savyasachi
Published on
ಜಗತ್ತಿನ ಅತ್ಯಂತ ಅಪರೂಪದ, ಹೃದಯ ಕಲಕುವ, ಮಾನವೀಯ ಕಥೆಗಳು ಒಲಿಂಪಿಕ್ಸ್ ಅಂಗಳದಲ್ಲಿ ಸೃಷ್ಟಿಯಾಗುತ್ತವೆ. ಅದೆಷ್ಟೋ ರೋಮಾಂಚಕ ಕಥೆಗಳು, ವೀರಗಾಥೆಗಳು ಅಷ್ಟೇ ಏಕೆ ದುರಂತ ಚರಿತ್ರೆಗಳಿಗೂ ಇದು ಸಾಕ್ಷಿಯಾಗುತ್ತದೆ. ಹತ್ತಾರು ವರ್ಷಗಳ ಶ್ರಮ, ಛಲ, ಪರಿಶ್ರಮ, ತ್ಯಾಗ, ಹೋರಾಟಗಳು ಮುಕ್ತಾಯದ ಬಿಂದು ತಲುಪುವ ವೇದಿಕೆ ಒಲಿಂಪಿಕ್ಸ್.

ಇಡೀ ಜಗತ್ತಿನ ಗಮನ ಟೋಕಿಯೊ ಕಡೆಗಿದೆ. ಇದೇ 23ರಿಂದ ಅಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯಲಿದೆ. ಸರಿಯಾಗಿ 57 ವರ್ಷ ಕೆಳಗೆ, ಅಂದರೆ 1964ರ ಮೆಲುಕು ಇದು. ಆಗಲೂ ಒಲಿಂಪಿಕ್ಸ್​ಗೆ ಟೋಕಿಯೊ ಆತಿಥ್ಯ ವಹಿಸಿತ್ತು. ಆ ದಿನ 10 ಸಾವಿರ ಮೀ. ಓಟ ನೋಡಲು ಸಹಸ್ರಾರು ಜನ ಕುತೂಹಲದಿಂದ ನೆರೆದಿದ್ದರು. ಸ್ಪರ್ಧಾಕಣದಲ್ಲಿದ್ದ 38 ಓಟಗಾರರ ನಡುವೆ ಆತನೂ ಇದ್ದ. ಆತನ ಹೆಸರು ಬಿಲ್ಲಿ ಮಿಲ್ಸ್. ಆದರೆ, ಯಾರವನು? ಯಾವ ದೇಶದವನು? ಹೇಗೆ ಓಡುತ್ತಾನೆ? ಹಿಂದೆ ಎಲ್ಲೆಲ್ಲಿ ಗೆದ್ದಿದ್ದಾನೆ? ಯಾರಿಗೂ ಆ ಬಗ್ಗೆ ಗೊತ್ತಿರಲಿಲ್ಲ. ತಿಳಿದುಕೊಳ್ಳುವ ಆಸಕ್ತಿಯೂ ಇರಲಿಲ್ಲ. ಜಗತ್ತಿನ ಪಾಲಿಗೆ ಆತ ಅಪರಿಚಿತ, ಅನಾಮಿಕ.

ಉಳಿದವರ ಮಾತು ಹಾಗಿರಲಿ, ಸ್ವತಃ ಬಿಲ್ಲಿಗೂ ಕೆಲವೇ ಹೊತ್ತಿನಲ್ಲಿ ಸಂಭವಿಸಲಿರುವ ಪವಾಡದ ಬಗ್ಗೆ ಅರಿವಿರಲಿಲ್ಲ. ಒಗ್ಲಾಲ ಲಕೊಟ ಎಂಬ ಅಮೆರಿಕದ ಬುಡಕಟ್ಟು ಜನಾಂಗಕ್ಕೆ ಸೇರಿದ ಬಿಲ್ಲಿ, 12ನೇ ವಯಸ್ಸಿನಲ್ಲೇ ಅನಾಥರಾಗಿ ದಕ್ಷಿಣ ಡಕೋಟದಲ್ಲಿ ಬುಡಕಟ್ಟು ಜನರಿಗೆ ಬಲವಂತ ಆಶ್ರಯತಾಣವಾದ ಮೀಸಲು ಕೇಂದ್ರದಲ್ಲಿ ಬೆಳೆದಿದ್ದರು. ಬಡತನ, ನಿರುದ್ಯೋಗ, ವರ್ಣದ್ವೇಷದ ತಾರತಮ್ಯದಿಂದ ರೋಸಿಹೋಗಿದ್ದ ಬಿಲ್ಲಿ ಇವೆಲ್ಲದರಿಂದ ತಪ್ಪಿಸಿಕೊಂಡು ದೂರ ಓಡಲು ಬಯಸಿದ್ದರು. ಬಾಲ್ಯದಲ್ಲಿ ಓದಿದ್ದ ಒಲಿಂಪಿಕ್ಸ್ ಕುರಿತ ಪುಸ್ತಕವೊಂದು ಹೊಸ ಕನಸೊಂದನ್ನು ಚಿಗುರಿಸಿತ್ತು. ಒಲಿಂಪಿಕ್ಸ್​ನಲ್ಲಿ ಪಾಲ್ಗೊಳ್ಳುವವರು ‘ದೇವರ ಪ್ರೀತಿಯ ಮಕ್ಕಳು’ ಎಂದು ಆ ಪುಸ್ತಕದಲ್ಲಿತ್ತು. ಆ ಕನಸೇ ಬಿಲ್ಲಿಯನ್ನು ಟೋಕಿಯೊಗೆ ತಂದು ನಿಲ್ಲಿಸಿತು. ಕನ್ಸಾಸ್ ವಿಶ್ವವಿದ್ಯಾಲಯದಲ್ಲಿ ಓದುವ ಸಂದರ್ಭದಲ್ಲಿ ಅಥ್ಲೆಟಿಕ್ಸ್ ಸ್ಕಾಲರ್​ಷಿಪ್ ಪಡೆದುಕೊಂಡ ಬಿಲ್ಲಿ ಮಿಲ್ಸ್, ಗುಡ್ಡಗಾಡು ಓಟ, ದೂರ ಅಂತರದ ಓಟದಲ್ಲಿ ಪರಿಣತಿ ಸಾಧಿಸಿದ್ದರು. ಅದಾದ ಬಳಿಕ ಅಮೆರಿಕದ ನೇವಿಗೆ ಸೇರ್ಪಡೆಗೊಂಡು, ಸಶಸ್ತ್ರ ಪಡೆಯಲ್ಲಿ ಸೇವೆಯಲ್ಲಿದ್ದಾಗಲೇ ಟೋಕಿಯೊ ಒಲಿಂಪಿಕ್ಸ್​ಗೆ ಅರ್ಹತೆ ಗಳಿಸಿಕೊಂಡರು.

ಒಲಿಂಪಿಕ್ಸ್​ನ 10 ಸಾವಿರ ಮೀ. ಓಟದಲ್ಲಿ ಆ ವರ್ಷ ಆಸ್ಟ್ರೇಲಿಯಾದ ರಾನ್ ಕ್ಲಾರ್ಕ್ ಫೇವರಿಟ್ ಎನಿಸಿದ್ದರು. ಸೋವಿಯತ್ ಯೂನಿಯನ್​ನ ಪ್ಯೋಟಿರ್ ಬೊಲೊನಿಕೊವ್ ಹಿಂದಿನ ಒಲಿಂಪಿಕ್ಸ್ ನಲ್ಲಿ ಚಾಂಪಿಯನ್ ಆಗಿದ್ದರು. 5000 ಮೀ. ಓಟದ ಹಾಲಿ ಚಾಂಪಿಯನ್ ನ್ಯೂಜಿಲೆಂಡ್​ನ ಮರ್ರೆ ಹಾಲ್​ಬರ್ಗ್ ಸಹ ಫೇವರಿಟ್ ಆಗಿದ್ದರು. ಓಟ ಶುರುವಾದಾಗ ಪ್ರಾರಂಭದ ಎಲ್ಲ ಚರಣಗಳಲ್ಲಿ ಕ್ಲಾರ್ಕ್ ಮುನ್ನಡೆ ಕಾಯ್ದುಕೊಂಡಿದ್ದರು. ಅರ್ಧರೇಸ್ ಮುಗಿದಾಗ ಕ್ಲಾರ್ಕ್​ರೊಂದಿಗೆ ಟ್ಯುನೇಶಿಯಾದ ಮೊಹಮ್ಮದ್ ಗಮೌಂಡಿ, ಇತಿಯೋಪಿಯಾದ ಮಾಮೊ ವೊಲ್ಡೆ, ಜಪಾನ್​ನ ಕೊಕಿಚಿ ಸುಬುರಾಯ ಮತ್ತು ಮಿಲ್ಸ್ ಮಾತ್ರ ಮುನ್ನಡೆಯಲ್ಲಿದ್ದರು. ಗೆಲುವಿಗೆ 2 ಚರಣವಿದ್ದಾಗ ಸ್ಥಳೀಯ ಫೇವರಿಟ್ ಸುಬುರಾಯ ಹಿಂದೆ ಬಿದ್ದರು. ವೊಲ್ಡೆ ಸಹ ಹಿಂದುಳಿದರು. ಕೊನೆಯ ಚರಣದ ಓಟ ಶುರುವಾಗುವ ಹೊತ್ತಿಗೆ ಕ್ಲಾರ್ಕ್ ಮತ್ತು ಮಿಲ್ಸ್​ರನ್ನು ತಳ್ಳಿ ಗಮೌಂಡಿ ಮುನ್ನಡೆ ಸಾಧಿಸಿದರು. ಗಮೌಂಡಿಯನ್ನು ಹಿಂದಿಕ್ಕಲು ಕ್ಲಾರ್ಕ್ ಶತಪ್ರಯತ್ನ ಮಾಡುತ್ತಿರುವಾಗಲೇ ಕೊನೆಯ ಹಂತದಲ್ಲಿ ದೈತ್ಯಶಕ್ತಿ ಒಗ್ಗೂಡಿಸಿಕೊಂಡ ಬಿಲ್ಲಿ 4ನೇ ಲೇನ್​ಗೆ ಜಿಗಿದು ಚಿರತೆಯಂತೆ ಓಡಿದರು. ಆಶ್ಚರ್ಯ! ಎಲ್ಲರೂ, ಯಾರೀತ ಎಂದು ಬೆರಗಿನಿಂದ ನೋಡುತ್ತಿರುವಾಗಲೇ ಮೊದಲಿಗರಾಗಿ ಗೆಲುವಿನ ಗೆರೆ ದಾಟಿಯೇಬಿಟ್ಟರು. ಬಿಲ್ಲಿ 10 ಸಾವಿರ ಮೀ. ಓಟ ಮುಗಿಸಲು ತೆಗೆದುಕೊಂಡ 28 ನಿಮಿಷ 24.4 ಸೆಕೆಂಡ್​ಗಳ ಅವಧಿ ಒಲಿಂಪಿಕ್ಸ್ ದಾಖಲೆಯಾಗಿತ್ತು. ಒಲಿಂಪಿಕ್ಸ್​ನಲ್ಲಿ ಈ ಓಟದ ಚಿನ್ನ ಗೆದ್ದ ಮೊದಲ ಯುರೋಪೇತರ ಓಟಗಾರ ಅವರೆನಿಸಿದ್ದರು. ಇವತ್ತಿಗೂ 10 ಸಾವಿರ ಮೀ. ಓಟದಲ್ಲಿ ಒಲಿಂಪಿಕ್ಸ್ ಚಾಂಪಿಯನ್ ಎನಿಸಿಕೊಂಡ ಏಕೈಕ ಅಮೆರಿಕ ಸ್ಪರ್ಧಿ ಬಿಲ್ಲಿ ಮಿಲ್ಸ್.

ಓಟ ಮುಗಿದ ಬಳಿಕ ಬಿಲ್ಲಿ ಬಳಿಗೆ ತೆರಳಿದ ಆತಿಥೇಯ ಜಪಾನ್ ವರದಿಗಾರನೊಬ್ಬ ‘ಯಾರು ನೀನು ಮಹರಾಯ’ ಎಂದು ಪ್ರಶ್ನಿಸಿದ. ನಿಜ, ಬಿಲ್ಲಿ ಮಿಲ್ಸ್ ಎಂಬ ಅನಾಮಿಕನ ಒಲಿಂಪಿಕ್ಸ್ ದಿಗ್ವಿಜಯ ಜಗತ್ತಿಗೆ ಅಚ್ಚರಿ ಒಂದೆಡೆಯಾದರೆ, ಸ್ವತಃ ಅಮೆರಿಕನ್ನರಿಗೂ ನಂಬಲಸಾಧ್ಯವಾಗಿತ್ತು. ಎನ್​ಬಿಸಿ ಚಾನೆಲ್​ನಲ್ಲಿ ವೀಕ್ಷಕ ವಿವರಣೆ ನೀಡುತ್ತಿದ್ದ ಡಿಕ್ ಬ್ಯಾಂಕ್ ಭಾವೋದ್ರೇಕದಿಂದ ‘ನೋಡಲ್ಲಿ ಮಿಲ್ಸ್, ನೋಡಲ್ಲಿ ಮಿಲ್ಸ್...’ ಎಂದು ಕಿರುಚಿದ್ದರು. ಒಲಿಂಪಿಕ್ಸ್ ವೀಕ್ಷಕ ವಿವರಣೆಯನ್ನು ನಾಟಕೀಯಗೊಳಿಸಿದ ಕಾರಣಕ್ಕೆ ಬ್ಯಾಂಕ್ ಕೆಲಸ ಕಳೆದುಕೊಂಡಿದ್ದರು!

ಒಲಿಂಪಿಕ್ಸ್ ಎಂದರೇ ಹಾಗೆ. ಜಗತ್ತಿನ ಅತ್ಯಂತ ಅಪರೂಪದ, ಹೃದಯ ಕಲಕುವ, ಮಾನವೀಯ ಕಥೆಗಳು ಒಲಿಂಪಿಕ್ಸ್ ಅಂಗಳದಲ್ಲಿ ಸೃಷ್ಟಿಯಾಗುತ್ತವೆ. ಅದೆಷ್ಟೋ ರೋಮಾಂಚಕ ಕಥೆಗಳು, ವೀರಗಾಥೆಗಳು ಅಷ್ಟೇ ಏಕೆ ದುರಂತ ಚರಿತ್ರೆಗಳಿಗೂ ಒಲಿಂಪಿಕ್ಸ್ ಸಾಕ್ಷಿಯಾಗುತ್ತದೆ. ಹತ್ತಾರು ವರ್ಷಗಳ ಶ್ರಮ, ಛಲ, ಪರಿಶ್ರಮ, ತ್ಯಾಗ, ಹೋರಾಟಗಳು ಮುಕ್ತಾಯದ ಬಿಂದು ತಲುಪುವ ವೇದಿಕೆ ಒಲಿಂಪಿಕ್ಸ್. ಇಲ್ಲಿ ಗೆದ್ದು ಜಗದ್ವಿಖ್ಯಾತರಾದವರು, ಹೀರೋಗಳಾದವರು, ರಾಷ್ಟ್ರಪ್ರಜ್ಞೆ, ದೇಶಭಕ್ತಿಯ ಸಂಕೇತಗಳಾದವರು ಅಸಂಖ್ಯಾತ. ಅದೇ ರೀತಿ ಸೋತು ಇತಿಹಾಸದ ಧೂಳಿನಲ್ಲಿ ಕಣ್ಮರೆಯಾದವರೂ ಕಡಿಮೆಯೇನಿಲ್ಲ. ಏನೂ ಅಲ್ಲದ ಯಕಶ್ಚಿತ್ ವ್ಯಕ್ತಿಗಳೂ ಒಲಿಂಪಿಕ್ಸ್ ಎಂಬ ಮಹಾ ಕುಂಭಮೇಳದಲ್ಲಿ ಕೆಲವೇ ಕ್ಷಣಗಳ ಅಂತರದಲ್ಲಿ ಮಹಾನ್ ಸಾಧಕರಾಗಿಬಿಡುತ್ತಾರೆ. ಅದೇ ಕಾರಣಕ್ಕೆ ಕ್ರೀಡಾಜೀವನದ ಪರಮಸಾರ್ಥಕ್ಯವನ್ನು ಒಲಿಂಪಿಕ್ಸ್​ನಲ್ಲಿ ಪಡೆದುಕೊಳ್ಳಬೇಕೆಂದು ಎಲ್ಲರೂ ಬಯಸುವುದು. ಅದೆಷ್ಟೋ ಸಹಸ್ರ ಕ್ರೀಡಾಪಟುಗಳಿಗೆ ಒಲಿಂಪಿಯನ್ ಎಂದು ಕರೆಸಿಕೊಳ್ಳುವುದೇ ಪರಮ ಸಾಧನೆ. ಇನ್ನು ಪದಕ ಗೆದ್ದು ಚಾಂಪಿಯನ್ ಎನಿಸಿಕೊಳ್ಳುವುದಕ್ಕೆ ಸರಿಸಾಟಿ ಬೇರೇನೂ ಇಲ್ಲ. ಪ್ರತೀ ನಾಲ್ಕು ವರ್ಷಕ್ಕೊಮ್ಮೆ ಜಗತ್ತಿನ ವಿವಿಧೆಡೆ ಒಲಿಂಪಿಕ್ಸ್ ಸಂಘಟನೆಗೊಳ್ಳುವಾಗ ಬಿಲ್ಲಿ ಮಿಲ್ಸ್​ರಂಥ ವಿರಳಸಾಧಕರ ರೋಮಾಂಚಕ ಕಥೆಗಳು ಹೊಸಪೀಳಿಗೆಯ ಕನಸುಗಾರರಿಗೆ ಸಾಧನೆಗೆ ಸ್ಪೂರ್ತಿಯಾಗುತ್ತವೆ, ಮೆಟ್ಟಿಲಾಗುತ್ತವೆ. ಛಲವೊಂದಿದ್ದರೆ, ಆತ್ಮಬಲವೊಂದಿದ್ದರೆ ‘ನನ್ನಿಂದಲೂ ಸಾಧ್ಯ’ ಎಂಬ ಆತ್ಮವಿಶ್ವಾಸವನ್ನು ತುಂಬುತ್ತವೆ.

ಯುಸ್ರಾ ಮರ್ದೀನಿ ಎಂಬ ಯುವತಿ ಈ ಬಾರಿ ಒಲಿಂಪಿಕ್ಸ್​ನ 100 ಮೀ. ಫ್ರೀಸ್ಟೈಲ್ ಮತ್ತು 100 ಮೀ. ಬಟರ್​ಫ್ಲೈ ಈಜು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇನೂ ಅಂಥ ವಿಶೇಷ ಸಂಗತಿಯಲ್ಲ. ಈಕೆ 2016 ರಿಯೊ ಒಲಿಂಪಿಕ್ಸ್​ನಲ್ಲೂ ಈಜಿದ್ದರು. ಇದರಲ್ಲೂ ಹೊಸತೇನಿಲ್ಲ. ಆದರೆ, ಆಕೆ ಒಲಿಂಪಿಕ್ಸ್ ಕೊಳದಲ್ಲಿ ಈಜುವ ಕನಸು ಕಾಣುವಂಥ ಬಡಯುವತಿಯರಿಗೆ ರೋಲ್ ಮಾಡೆಲ್. ಕಾರಣ ಆಕೆಯ ಹಿನ್ನೆಲೆ. ಯುಸ್ರಾ ಯುದ್ಧಗ್ರಸ್ತ ಸಿರಿಯಾದ ಯುವತಿ. 2015ರಲ್ಲಿ ಆಕೆ ಸಿರಿಯಾದಲ್ಲಿ ಬಾಂಬ್ ದಾಳಿಯ ತೀವ್ರತೆಗೆ ಭಗ್ನಗೊಂಡ ಈಜುಕೊಳಗಳಲ್ಲಿ ತರಬೇತಿ ಪಡೆಯುತ್ತಿದ್ದರು. ಯುದ್ಧದ ಭಯಭೀತ ವಾತಾವರಣದಲ್ಲಿ ಈಜುವುದು ಅಸಾಧ್ಯ ಎಂದು ಮನದಟ್ಟಾದ ಮೇಲೆ ಆಕೆ ಟರ್ಕಿ ಮಾರ್ಗವಾಗಿ ಗ್ರೀಸ್​ಗೆ ಪಲಾಯನ ಮಾಡಿದರು. ಹೀಗೆ ಟರ್ಕಿಯಿಂದ ಸಮುದ್ರ ಮಾರ್ಗವಾಗಿ ಗ್ರೀಸ್​ಗೆ ತೆರಳುವಾಗ ಯುಸ್ರಾ ಇಪ್ಪತ್ತು ಜನರ ಜೀವ ಕಾಪಾಡಿದ್ದು ದೊಡ್ಡ ಸಾಹಸ. ಹೌದು, ಕೇವಲ 6 ಜನ ಪ್ರಯಾಣಿಸಬಹುದಾದ ದೋಣಿಯಲ್ಲಿ ಇಪ್ಪತ್ತು ನಿರಾಶ್ರಿತರು ತುಂಬಿಕೊಂಡಿದ್ದರು. ಕೆಲವು ದೂರ ಸಾಗುವಷ್ಟರಲ್ಲೇ ದೋಣಿಯ ಎಂಜಿನ್ ಕೆಟ್ಟುನಿಂತಿತು. ಇನ್ನೇನು ದೋಣಿ ಮುಳುಗಿ ಎಲ್ಲರೂ ನೀರುಪಾಲಾಗುವ ಅಪಾಯ ಎದುರಾಗಿತ್ತು. ಆ ಇಪ್ಪತ್ತು ಜನರಲ್ಲಿ ಸಮುದ್ರದಲ್ಲಿ ಈಜುವ ಧೈರ್ಯ ಮತ್ತು ಕೌಶಲ ಇದ್ದಿದ್ದು ಯುಸ್ರಾ ಸಹಿತ ನಾಲ್ವರಿಗೆ ಮಾತ್ರ. ದೋಣಿಗೆ ಕಟ್ಟಿದ ಹಗ್ಗವನ್ನು ತಮ್ಮ ಒಂದು ಕೈಗೆ ಸುತ್ತಿಕೊಂಡ ಆ ನಾಲ್ವರು ಸತತ ಮೂರು ಗಂಟೆ ಕಾಲ ಮಂಜು ಕೊರೆಯುವ ನೀರಿನಲ್ಲಿ ಈಜುತ್ತ, ದೋಣಿಯನ್ನು ಎಳೆಯುತ್ತ ದಡ ಸೇರಿದರು, ದೋಣಿಯಲ್ಲಿದ್ದ ಇತರ 16 ಜನರ ಜೀವವನ್ನೂ ಕಾಪಾಡಿದರು. ಗ್ರೀಸ್​ನಿಂದ ಜರ್ಮನಿಗೆ ತೆರಳಿದ ಯುಸ್ರಾ 2016ರಲ್ಲಿ ನಿರಾಶ್ರಿತರ ಒಲಿಂಪಿಕ್ಸ್ ತಂಡದ ಪರವಾಗಿ ಸ್ಪರ್ಧಿಸಿದರು. ಸದ್ಯ ವಿಶ್ವಸಂಸ್ಥೆಯ ರಾಯಭಾರಿಯೂ ಆಗಿರುವ 23 ವರ್ಷದ ಯುಸ್ರಾ ಈ ಬಾರಿಯೂ ನಿರಾಶ್ರಿತರ ಒಲಿಂಪಿಕ್ಸ್ ತಂಡದಿಂದ ಟೋಕಿಯೊದಲ್ಲಿ ಈಜಲಿದ್ದಾರೆ.

ಯುಸ್ರಾರಂಥ ಯುವತಿಯರ ಪಾಲಿಗೆ ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳುವುದೇ ಬಹುದೊಡ್ಡ ಸಾಧನೆ. ಯುದ್ಧ, ಬಡತನ ಮತ್ತಿತರ ಸಾಮಾಜಿಕ, ಆರ್ಥಿಕ, ಭೌಗೋಳಿಕ ಕಾರಣಗಳಿಗೆ ಸಾಮಾನ್ಯ ಜಗತ್ತಿನ ಸೌಲಭ್ಯಗಳಿಂದ ವಂಚಿತರಾಗಿರುವ ಅನೇಕ ಸ್ಪರ್ಧಿಗಳಿಗೆ ಒಲಿಂಪಿಕ್ಸ್ ಸ್ಪರ್ಧೆಯೆನ್ನುವುದು ಮುಖ್ಯವಾಹಿನಿಗೆ ಮರಳಲು ಚಿಮ್ಮುಹಲಗೆಯಾಗುತ್ತದೆ. ಟೋಕಿಯೊದಲ್ಲಿ ಈ ಬಾರಿ ಭಾರತದ 119 ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ. 2016 ರಿಯೋದಲ್ಲಿ ಭಾರತದ 117 ಕ್ರೀಡಾಪಟುಗಳು ಕಣದಲ್ಲಿದ್ದರು. ಪಿ.ವಿ. ಸಿಂಧು ಬ್ಯಾಡ್ಮಿಂಟನ್​ನಲ್ಲಿ ಬೆಳ್ಳಿ ಮತ್ತು ಸಾಕ್ಷಿ ಮಲಿಕ್ ಕುಸ್ತಿಯಲ್ಲಿ ಕಂಚು ಗೆದ್ದಿದ್ದೇ ರಿಯೋದಲ್ಲಿ ಭಾರತದ ಮಹತ್ಸಾಧನೆಯಾಗಿತ್ತು. ಅದಕ್ಕೆ ಮುನ್ನ 2012 ಲಂಡನ್​ನಲ್ಲಿ ಭಾರತ 2 ಬೆಳ್ಳಿ, 4 ಕಂಚು ಸಹಿತ 6 ಪದಕ ಗೆದ್ದಿತ್ತು. ಈ ಬಾರಿ ಈವರೆಗಿನ ಅತಿ ದೊಡ್ಡ ತಂಡವನ್ನು ಒಲಿಂಪಿಕ್ಸ್​ಗೆ ಕಳುಹಿಸಿರುವ ಭಾರತ ಎಷ್ಟು ಪದಕ ಗೆದ್ದೀತು ಎನ್ನುವುದು ನಿರೀಕ್ಷೆ. ಹಾಕಿಯಲ್ಲಿ ವಿಶ್ವ ಪ್ರಾಬಲ್ಯವನ್ನು ಅನ್ಯದೇಶಗಳಿಗೆ ಬಿಟ್ಟುಕೊಟ್ಟ ಮೇಲೆ ಅಂದರೆ, 1980ರ ದಶಕದಿಂದೀಚೆಗೆ ಒಲಿಂಪಿಕ್ಸ್​ನಲ್ಲಿ ಭಾರತ ಯಾವ ಕ್ರೀಡೆಯಲ್ಲೂ ಸ್ವರ್ಣ ಫೇವರಿಟ್ ಅಲ್ಲ. ಶೂಟಿಂಗ್ ಮತ್ತು ಆರ್ಚರಿ, ಬಾಕ್ಸಿಂಗ್​ನಲ್ಲಿ ಪ್ರತೀ ಒಲಿಂಪಿಕ್ಸ್​ಗೆ ಮುನ್ನ ಭಾರತೀಯರು ಹಲವು ವಿಶ್ವಕಪ್​ಗಳಲ್ಲಿ ವಿಜೃಂಭಿಸುತ್ತಾರಾದರೂ, ಒಲಿಂಪಿಕ್ಸ್ ಅಂಗಳದಲ್ಲಿ ನಿರಾಸೆ ಪಡಿಸಿದ್ದೇ ಹೆಚ್ಚು. ಇನ್ನು ಅಥ್ಲೆಟಿಕ್ಸ್, ಈಜು ಸ್ಪರ್ಧೆಗಳಲ್ಲಿ ಭಾರತೀಯರಿಗೆ ಒಲಿಂಪಿಕ್ಸ್ ಅರ್ಹತೆ ದಕ್ಕಿಸಿಕೊಡುವ ಟೈಮಿಂಗ್​ಗೂ, ಪದಕ ವಿಜೇತ ಅಥ್ಲೀಟ್​ಗಳ ಟೈಮಿಂಗ್​ಗೂ ಅಜಗಜಾಂತರವಿರುತ್ತದೆ. ಅಲ್ಲಿ ವಾಸ್ತವಿಕವಾಗಿ ಅವಕಾಶಗಳು ಕಡಿಮೆ. ಇಷ್ಟಾಗಿಯೂಈ ಬಾರಿ ಭಾರತ ತಂಡದಲ್ಲಿ ಅಮೋಘ ಫಾಮ್ರ್ ನಲ್ಲಿರುವ ಆರ್ಚರ್​ಗಳಾದ ದೀಪಿಕಾ ಕುಮಾರಿ, ಅಥನು ದಾಸ್, ಜಾವೆಲಿನ್ ಪಟು ನೀರಜ್ ಚೋಪ್ರಾ, ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು, ಬಾಕ್ಸರ್​ಗಳಾದ ಅಮಿತ್ ಪಾಂಗಲ್ ಮತ್ತು ಮೇರಿಕೋಮ್ ಶೂಟರ್​ಗಳಾದ ಸೌರಭ್ ಚೌಧರಿ, ಎಲವೆನಿಲ್ ವಲರಿವನ್, ಮನು ಬಾಕರ್, ಟೇಬಲ್ ಟೆನಿಸ್​ನಲ್ಲಿ ಅಚಾಂತ ಶರತ್ ಕಮಲ್ ಮತ್ತು ಮನಿಕಾ ಬಾತ್ರಾ ಮಿಶ್ರ ಡಬಲ್ಸ್ ಜೋಡಿ, ವೇಟ್​ಲಿಫ್ಟಿಂಗ್​ನಲ್ಲಿ ಮೀರಾ ಬಾಯಿ ಚಾನು, ಕುಸ್ತಿಯಲ್ಲಿ ವಿನೇಶ್ ಪೊಗಟ್ ಮತ್ತು ಭಜರಂಗ್ ಪೂನಿಯಾ ಮೇಲೆ ನಿರೀಕ್ಷೆ ಇಟ್ಟುಕೊಳ್ಳಬಹುದು.

ಒಂದಂತೂ ನಿಜ. ಭಾರತ 121 ವರ್ಷಗಳ ಆಧುನಿಕ ಒಲಿಂಪಿಕ್ಸ್ ಇತಿಹಾಸದಲ್ಲಿ ಗೆದ್ದಿರುವುದು ಒಟ್ಟು 28 ಪದಕ. ಅಮೆರಿಕದ ಈಜುಗಾರ ಮೈಕೆಲ್ ಫೆಲ್ಪ್ ್ಸ ಒಬ್ಬರೇ 4 ಒಲಿಂಪಿಕ್ಸ್​ಗಳಿಂದ 28 ಪದಕ ಗೆದ್ದಿದ್ದಾರೆ. ಅಂದರೆ, ಭಾರತ ಒಲಿಂಪಿಕ್ಸ್​ನಲ್ಲಿ ಸಾಧಿಸಬೇಕಾದ್ದು ಬೆಟ್ಟದಷ್ಟಿದೆ. 2024ರ ಒಲಿಂಪಿಕ್ಸ್​ನಲ್ಲಿ 50 ಪದಕಗಳ ಗುರಿಯೊಂದಿಗೆ ತರಬೇತಿ ಕಾರ್ಯಕ್ರಮ ರೂಪಿಸುತ್ತಿರುವ ಭಾರತ, ಅದಕ್ಕೆ ಮುನ್ನುಡಿಯನ್ನು ಟೋಕಿಯೊದಲ್ಲಿ ಬರೆಯಬೇಕಿದೆ. ಅಂಥ ಸಾಧನೆಗೆ ಸ್ಪೂರ್ತಿಗೇನೂ ಕೊರತೆ ಇಲ್ಲ. ಹಿಂದಿನ ಒಲಿಂಪಿಕ್ಸ್​ಗಳ ಪೂರ್ವಸಾಧಕರ ಸಾಧನೆ ಮೆಲುಕು ಹಾಕಿದರೆ ಸಾಕು.

ಗೆದ್ದು ಬಾ ಭಾರತ...

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net