ಭಾರತ-ಪಾಕ್ ಕ್ರಿಕೆಟ್ ನೆನಪುಗಳ ಸವಿಸವಿ ಮೆಲುಕು

Column F
Published on
125 ರನ್.

ವರ್ಷ 1985, ಶಾರ್ಜಾ ಮೈದಾನ, ಎದುರಾಳಿ ಪಾಕಿಸ್ತಾನ. ದಯನೀಯ ಬ್ಯಾಟಿಂಗ್ ವೈಫಲ್ಯ ಕಂಡಿದ್ದ ಭಾರತ ತಂಡ ಗೆಲ್ಲುವುದು ಅಸಂಭವ ಎಂಬಂಥ ವಾತಾವರಣ. ಇಷ್ಟು ಸಣ್ಣ ಮೊತ್ತ ಪಾಕ್​ಗೆ ಸುಲಭ ತುತ್ತು ಎನ್ನುವುದೇ ಎಲ್ಲರ ಗ್ರಹಿಕೆಯಾಗಿತ್ತು. ಆದರೆ, ಜೀವನ ಮತ್ತು ಕ್ರಿಕೆಟ್ ಯಾವತ್ತೂ ನಮ್ಮ ಗ್ರಹಿಕೆ, ಎಣಿಕೆಗಳಿಗೆ ತಕ್ಕಂತೆ ನಡೆಯುವುದಿಲ್ಲವಲ್ಲ.

ಭಾರತ ತಂಡ ಮೇಲ್ಮಟ್ಟದ ಜೋಷ್​ನಲ್ಲಿದ್ದ ದಿನಗಳವು. 1983ರಲ್ಲಿ ವಿಶ್ವಕಪ್ ಗೆದ್ದು ಇತಿಹಾಸ ನಿರ್ವಿುಸಿದ್ದ ಭಾರತ, ಶಾರ್ಜಾದ ಈ ನಾಲ್ಕು ರಾಷ್ಟ್ರಗಳ ರೋಥ್ಮನ್ಸ್ ಕಪ್ ಟೂರ್ನಿಗೆ ಮುನ್ನ ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್ ವಿಶ್ವ ಚಾಂಪಿಯನ್​ಷಿಪ್ ಗೆದ್ದ ಹುಮ್ಮಸ್ಸಿನಲ್ಲಿತ್ತು. ನಾಯಕ ಕಪಿಲ್ ದೇವ್​ಗೆ ಅಸಾಧ್ಯವನ್ನು ಸಾಧಿಸುವ ಛಲ. ಮತ್ತಿನ್ನೇನು? ಪವಾಡ ನಡೆದೇ ಬಿಟ್ಟಿತ್ತು. ಕಪಿಲ್ ಮುಂಚೂಣಿಯಲ್ಲಿ 17ಕ್ಕೆ 3 ವಿಕೆಟ್ ಕಬಳಿಸಿದ್ದರು. ಶಿವರಾಮಕೃಷ್ಣನ್, ರವಿಶಾಸ್ತ್ರಿ ತಲಾ 2 ವಿಕೆಟ್, ಮದನ್ ಲಾಲ್ ಮತ್ತು ರೋಜರ್ ಬಿನ್ನಿ ತಲಾ 1 ವಿಕೆಟ್ ಕಬಳಿಸಿದ್ದರು. ಪಾಕ್ ಪರ ಜಾವೇದ್ ಮಿಯಾಂದಾದ್, ಅಶ್ರಫ್ ಅಲಿ ಮತ್ತು ಇಮ್ರಾನ್ ಖಾನ್ 1 ರನ್ ಅಂತರದಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಒಟ್ಟಾರೆ ಪಾಕಿಸ್ತಾನ 87 ರನ್​ಗೆ ಕುಸಿದುಬಿದ್ದಿತ್ತು. ಭಾರತ ಗೆದ್ದೇಬಿಟ್ಟಿತ್ತು.

ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯಗಳೆಂದರೇ ಹಾಗೆ. ವಿಶ್ವದ ಯಾವುದೇ ಮೂಲೆಯಲ್ಲಿ ಸಂಧಿಸಿದರೂ, ಈ ತಂಡಗಳ ನಡುವೆ ನಡೆಯುವುದು ಕ್ರಿಕೆಟ್ ಪಂದ್ಯಕ್ಕಿಂತ ಮಿಗಿಲಾದ ಬ್ಯಾಟು-ಬಾಲುಗಳ ಯುದ್ಧ. ಕ್ರೀಡೆಯಲ್ಲಿ ಗೆಲುವಿಗಾಗಿ ಸ್ಪರ್ಧೆ ನಡೆದರೆ, ಈ ತಂಡಗಳ ನಡುವೆ ಯಾವಾಗಲೂ ನಡೆಯುವುದು ‘ಯಾವುದೇ ಕಾರಣಕ್ಕೂ ಸೋಲಬಾರದು’ ಎಂಬ ಹೋರಾಟ. ಅದೊಂದು ರೀತಿ ಆತ್ಮಾಭಿಮಾನದ ಮೇಲಾಟ.

ಕಳೆದ ವರ್ಷ ದುಬೈನಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ಶಹೀನ್ ಷಾ ಅಫ್ರಿದಿ ಎಂಬ ವೇಗಿಯ ಬೆಂಕಿಮಾರುತವನ್ನು ಎದುರಿಸಲಾಗದೆ ಹೀನಾಯ ಸೋಲು ಅನುಭವಿಸಿತ್ತು. ಅದು ವಿಶ್ವಕಪ್ ಪಂದ್ಯಗಳಲ್ಲೇ ಭಾರತ ತಂಡ ಪಾಕ್ ವಿರುದ್ಧ ಅನುಭವಿಸಿದ್ದ ಅತ್ಯಂತ ಕೆಟ್ಟ ಸೋಲಾಗಿತ್ತು. ಆ ಸೋಲಿಗೆ ಮೊನ್ನೆ ದುಬೈನ ಅದೇ ಮೈದಾನದಲ್ಲಿ ನಡೆದ ಏಷ್ಯಾ ಕಪ್ ಪಂದ್ಯದಲ್ಲಿ ಭಾರತ ಸೇಡು ತೀರಿಸಿಕೊಂಡಿತು. ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಮತ್ತು ಭುವನೇಶ್ವರ ಕುಮಾರ್ ಈ ಗೆಲುವಿನ ರೂವಾರಿಗಳಾದರು. ಈ ದಿಗ್ವಿಜಯದ ಸೊಗಸು ಉಭಯ ತಂಡಗಳ ನಡುವಿನ ಪೂರ್ವ ಪೈಪೋಟಿಗಳ ನೆನಪುಗಳ ಮೆರವಣಿಗೆಯನ್ನು ಪುನರಾವರ್ತಿಸಿತು.

ಭಾರತ-ಪಾಕಿಸ್ತಾನ ವಿಶ್ವಕಪ್ ಟೂರ್ನಿಯಲ್ಲಿ ಮೊಟ್ಟಮೊದಲ ಬಾರಿ ಮುಖಾಮುಖಿಯಾಗಿದ್ದು 1992ರಲ್ಲಿ. ಅದಕ್ಕೆ ಮುನ್ನ ನಡೆದಿದ್ದ ನಾಲ್ಕು ವಿಶ್ವಕಪ್​ಗಳಲ್ಲಿ ಸಾಂಪ್ರದಾಯಿಕ ಎದುರಾಳಿಗಳಿಗೆ ಪರಸ್ಪರ ಎದುರಾಗುವ ಅವಕಾಶ ದೊರೆತಿರಲಿಲ್ಲ. ಸಿಡ್ನಿಯಲ್ಲಿ ನಡೆದ ಆ ಪಂದ್ಯದಲ್ಲಿ ಭಾರತ ಮೇಲುಗೈ ಸಾಧಿಸಿತ್ತು. ಭಾರತದ ಬೌಲರ್​ಗಳನ್ನು ಎದುರಿಸಲಾಗದೆ ಪಾಕ್ ಬ್ಯಾಟ್ಸ್​ಮನ್​ಗಳು ಹತಾಶರಾಗಿದ್ದರು. ವಿಕೆಟ್ ಕೀಪರ್ ಕಿರಣ್ ಮೋರೆ ಜೋರುದನಿಯಲ್ಲಿ ಅಪೀಲು ಮಾಡುತ್ತಿದ್ದರು. ಜಾವೇದ್ ಮಿಯಾಂದಾದ್ ರನ್ ತಿಣುಕಾಟದ ನಡುವೆ ವಿವೇಕ ಕಳೆದುಕೊಂಡವರಂತೆ ಮೋರೆಯನ್ನು ಅಣಕಿಸಿ ಕುಪ್ಪಳಿಸಿ ನೆಗೆದರು. ಮೈದಾನದಲ್ಲಿ ಮಿಯಾಂದಾದ್​ರ ಈ ಹುಚ್ಚಾಟ ಎಲ್ಲರಿಗೂ ಬೇಸರ ತಂದರೆ, ಅಂಪೈರ್​ಗಳು ಮ್ಯಾಚ್​ರೆಫ್ರಿಗೆ ದೂರು ನೀಡಿದರು. ಮಿಯಾಂದಾದ್ ಪ್ರಹಸನದಿಂದ ಪಾಕ್​ಗೆ ಲಾಭವೇನೂ ಆಗಲಿಲ್ಲ. ಏಕೆಂದರೆ, ಭಾರತ ಪಂದ್ಯವನ್ನು 43 ರನ್​ಗಳಿಂದ ಗೆದ್ದಿತ್ತು. ಪಾಕಿಸ್ತಾನ ಆ ವಿಶ್ವಕಪ್​ನಲ್ಲಿ ಚೊಚ್ಚಲ ಬಾರಿ ಚಾಂಪಿಯನ್ ಪಟ್ಟಕ್ಕೇರಿತಾದರೂ, ಭಾರತದ ವಿರುದ್ಧ ಸೋತಿತ್ತು!

ಪಾಕಿಸ್ತಾನದ ವಿರುದ್ಧ ಆಡುವಾಗ ಭಾರತದ ಕ್ರಿಕೆಟಿಗರು ದೇಶಭಕ್ತ ಹೋರಾಟಗಾರರಂತೆ ಕಾಣುವುದು ಅತಿಶಯೋಕ್ತಿಯೇನೂ ಅಲ್ಲ. ಕರಾಚಿಯಲ್ಲಿ 1978ರಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತದ ಎಲ್ಲ ಬ್ಯಾಟ್ಸ್​ಮನ್​ಗಳು ಪಿಚ್​ನಿಂದ ಪೆವಿಲಿಯನ್​ಗೆ ಪಥಸಂಚಲನ ನಡೆಸುತ್ತಿದ್ದಾಗ ಏಕಾಂಗಿಯಾಗಿ ಪಾಕ್ ವೇಗಿಗಳ ಬುಲೆಟ್ ಚೆಂಡಿಗೆ ಎದೆಯೊಡ್ಡಿ ನಿಂತಿದ್ದ ಸುನಿಲ್ ಗಾವಸ್ಕರ್ ಎರಡೂ ಇನಿಂಗ್ಸ್​ಗಳಲ್ಲಿ ಶತಕ ಬಾರಿಸಿದ್ದರು. 1999ರ ಚೆನ್ನೈ ಟೆಸ್ಟ್​ನಲ್ಲಿ 277 ರನ್ ಗುರಿ ಬೆನ್ನಟ್ಟಿದ್ದ ಭಾರತ 82ರನ್​ಗೆ 5 ವಿಕೆಟ್ ಕಳೆದುಕೊಂಡ ಬಳಿಕವೂ ಕೆಚ್ಚೆದೆಯ ಹೋರಾಟ ನಡೆಸಿದ್ದ ಸಚಿನ್ ತೆಂಡುಲ್ಕರ್ ವೃತ್ತಿಜೀವನದ ಅತ್ಯಂತ ಕ್ಲಿಷ್ಟ ಶತಕ ಬಾರಿಸಿದ್ದರು. ಇವೆಲ್ಲ ದೇಶದ ಗೌರವ ಕಾಪಾಡಲು ನಡೆಸಿದ ಅಪ್ಪಟ ಹೋರಾಟಗಳು.

ಚೆನ್ನೈನಲ್ಲಿ ಸಚಿನ್ ವೀರೋಚಿತ ಶತಕದ ಹೊರತಾಗಿಯೂ ಭಾರತ ಕೊನೆಯ 3 ವಿಕೆಟ್​ಗಳಿಂದ ಅಂತಿಮ 17 ರನ್ ಗಳಿಸಲಾಗದೆ ಸೋತಿತ್ತು. ಆ ನಿರಾಸೆಯನ್ನು ಮರೆಸಿ, ಐತಿಹಾಸಿಕ ಸಾಧನೆಯ ಮೆರುಗು ತಂದವರು ಅನಿಲ್ ಕುಂಬ್ಳೆ. ದೆಹಲಿಯ ಫಿರೋಜ್​ಷಾ ಕೋಟ್ಲಾ ಮೈದಾನದಲ್ಲಿ ನಡೆದ ಆ ಸರಣಿಯ 2ನೇ ಟೆಸ್ಟ್​ನಲ್ಲಿ ಕುಂಬ್ಳೆ ಪಾಕಿಸ್ತಾನವನ್ನು ತಮ್ಮ ಸ್ಪಿನ್ ಮಾಯಾಜಾಲದಲ್ಲಿ ಕಟ್ಟಿ ಕೆಡವಿದರು. 2ನೇ ಇನಿಂಗ್ಸ್​ನಲ್ಲಿ 74 ರನ್​ಗೆ ಪಾಕಿಸ್ತಾನದ ಎಲ್ಲ 10 ವಿಕೆಟ್ ಕಬಳಿಸಿದ ಕುಂಬ್ಳೆ ಸಾಧನೆ ಇತಿಹಾಸದ ಪುಟ ಸೇರಿತು.

ಪಾಕ್ ವಿರುದ್ಧ ಐತಿಹಾಸಿಕ ಮತ್ತು ಕೆಚ್ಚೆದೆಯ ಆಟವೆಂದಾಗ ವೀರೇಂದ್ರ ಸೆಹ್ವಾಗ್​ರನ್ನು ಮರೆಯಲು ಸಾಧ್ಯವೇ ಇಲ್ಲ. ಅದರಲ್ಲೂ 2004ರ ಪಾಕ್ ಪ್ರವಾಸದಲ್ಲಿ ಮುಲ್ತಾನ್​ನಲ್ಲಿ ವೀರೂ ಆಟವನ್ನು ಅಭಿಮಾನಿಗಳು ಮರೆಯುವುದುಂಟೇ? ಸೆಹ್ವಾಗ್ ಮೊದಲ ಟೆಸ್ಟ್​ನಲ್ಲಿ ಭರ್ಜರಿ 309 ರನ್ ಸಿಡಿಸುವ ಮೂಲಕ ಭಾರತದ ಪರ ಪ್ರಪ್ರಥಮ ಟೆಸ್ಟ್ ತ್ರಿಶತಕ ದಾಖಲಿಸಿ ಮುಲ್ತಾನಿನ ಸುಲ್ತಾನನೆನಿಸಿದರು. ಅದೇ ಪಂದ್ಯದಲ್ಲಿ ಸಚಿನ್ 194 ರನ್ ಗಳಿಸಿದ್ದಾಗ ತಂಡದ ಮೊತ್ತ 5 ವಿಕೆಟ್ 675 ರನ್​ಗೆ ನಾಯಕ ರಾಹುಲ್ ದ್ರಾವಿಡ್ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು. ಆ ಪಂದ್ಯದಲ್ಲಿ ಸಚಿನ್​ಗೆ ವಿವಾದಾಸ್ಪದವಾಗಿ ದ್ವಿಶತಕ ತಪ್ಪಿದರೂ ಭಾರತಕ್ಕೆ ಗೆಲುವು ತಪ್ಪಲಿಲ್ಲ.

ದಕ್ಷಿಣ ಆಫ್ರಿಕಾದಲ್ಲಿ ನಡೆದ 2007ರ ಚೊಚ್ಚಲ ಟಿ20 ವಿಶ್ವಕಪ್​ನಲ್ಲಿ ಭಾರತ ಸತತ 2 ಬಾರಿ ಪಾಕಿಸ್ತಾನವನ್ನು ಬಗ್ಗುಬಡಿಯಿತು. ಲೀಗ್ ಹಂತದಲ್ಲಿ ಉಭಯ ತಂಡಗಳು ತಲಾ 141 ರನ್ ಗಳಿಸಿದ ಬಳಿಕ ನಡೆದ ವಿಖ್ಯಾತ ಬೌಲ್ ಔಟ್​ನಲ್ಲಿ ಭಾರತ ಗೆಲುವು ಸಾಧಿಸಿತು. ಟೂರ್ನಿಯ ಫೈನಲ್​ನಲ್ಲಿ ಆರಂಭಿಕ ಗೌತಮ್ ಗಂಭೀರ್ ಅವರ ಅಮೋಘ 75 ರನ್ ನೆರವಿನಿಂದ ಭಾರತ 157 ರನ್ ಸವಾಲೊಡ್ಡಿತು. ಬಳಿಕ ಭಾರತದ ಕೆಚ್ಚಿನ ಆಟ ಮತ್ತು ಧೋನಿ ನಾಯಕತ್ವ ಚಾಂಪಿಯನ್ ಪಟ್ಟಕ್ಕೇರಿಸಿತು. ಕೊನೆಯ ಓವರ್​ನಲ್ಲಿ ಪಾಕಿಸ್ತಾನಕ್ಕೆ 13 ರನ್ ಅಗತ್ಯವಿದ್ದಾಗ ಜೋಗಿಂದರ್ ಸಿಂಗ್ ಎಂಬ ‘ಅದೃಶ್ಯಾಸ್ತ್ರ’ವನ್ನು ದಾಳಿಗಿಳಿಸಿ ಧೋನಿ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದರು. ಪಾಕ್ ನಾಯಕ ಮಿಸ್ಬಾ ಉಲ್ ಹಕ್ ಸ್ಕೂಪ್ ಮಾಡಿ ಸಿಕ್ಸರ್ ಬಾರಿಸಲು ಯತ್ನಿಸಿ ಶ್ರೀಶಾಂತ್​ಗೆ ಕ್ಯಾಚ್ ನೀಡುವುದರೊಂದಿಗೆ ಭಾರತ ಚೊಚ್ಚಲ ಟಿ20 ಚಾಂಪಿಯನ್ ಎನಿಸಿತು.

ದಕ್ಷಿಣ ಆಫ್ರಿಕಾದಲ್ಲಿ ನಡೆದ 2003ರ ವಿಶ್ವಕಪ್​ನಲ್ಲೂ ಪಾಕ್ ವಿರುದ್ಧದ ಪಂದ್ಯ ವಿಶೇಷವಾಗಿತ್ತು. 100 ಮೈಲಿ ವೇಗದಲ್ಲಿ ಬೌಲಿಂಗ್ ಮಾಡುವುದಾಗಿ ಬೀಗುತ್ತಿದ್ದ ಶೋಯಿಬ್ ಅಖ್ತರ್​ಗೆ ಸಚಿನ್ ತೆಂಡುಲ್ಕರ್ ಅದೇ ಪಂದ್ಯದಲ್ಲಿ ಗರ್ವಭಂಗ ಮಾಡಿದ್ದರು. ಶರವೇಗದಲ್ಲಿ ಎಸೆದ ಅಖ್ತರ್ ಎಸೆತವನ್ನು ಸಚಿನ್ ತುದಿಗಾಲಲ್ಲಿ ನಿಂತು ಅಪ್ಪರ್​ಕಟ್ ಮಾಡಿ ಸಿಕ್ಸರ್​ಗಟ್ಟಿದ್ದು ನಯನಮನೋಹರವಾಗಿತ್ತು. ಆ ಪಂದ್ಯದಲ್ಲಿ ಸಚಿನ್​ರ 98 ರನ್ ಮತ್ತು ದ್ರಾವಿಡ್- ಯುವರಾಜ್​ರ 99ರನ್ ಜತೆಯಾಟದ ನೆರವಿನಿಂದ ಭಾರತ 6 ವಿಕೆಟ್ ಗೆಲುವು ದಾಖಲಿಸಿತು.

ಇವೆಲ್ಲ ಭಾರತದ ಯಶೋಗಾಥೆಗಳಾದರೆ, ಶಾರ್ಜಾದಲ್ಲಿ ಜಾವೇದ್ ಮಿಯಾಂದಾದ್ ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸಿದ್ದು, ಶಾಹೀದ್ ಅಫ್ರಿದಿ ಕಾನ್ಪುರದಲ್ಲಿ 2005ರಲ್ಲಿ 46 ಎಸೆತಗಳಲ್ಲಿ 102 ರನ್ ಚಚ್ಚಿದಂಥ ಸ್ಮರಣೆಗಳೂ ಇವೆ. ಆದರೆ, ಪಾಕ್ ಆಟಗಾರರ ಇಂಥ ಒಂದೊಂದು ಸಾಹಸಗಳಿಗೂ ಭಾರತದ ಆಟಗಾರರು ಮಹತ್ವದ ಪಂದ್ಯಗಳಲ್ಲಿ ದುಪ್ಪಟ್ಟು ತಿರುಗೇಟು ನೀಡಿದ್ದಾರೆ. ಅಂಥ ಒಂದು ಪಂದ್ಯ ಹಾಗೂ ಎರಡು ಪ್ರಸಂಗಗಳಿಗೆ ಸಾಕ್ಷಿಯಾಗಿದ್ದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ. ಅಜಯ್ ಜಡೇಜಾ ಮತ್ತು ವೆಂಕಟೇಶ್ ಪ್ರಸಾದ್ ಎಂಬಿಬ್ಬರು ಅಪ್ಪಟ ಹೋರಾಟಗಾರರ ಅವಿಸ್ಮರಣೀಯ ಆಟ ಮೆಲುಕು ಹಾಕದ ಹೊರತು ಭಾರತ-ಪಾಕ್ ಕ್ರಿಕೆಟ್ ನೆನಪುಗಳು ಅಪೂರ್ಣ.

1996ರ ವಿಶ್ವಕಪ್​ನ 2ನೇ ಕ್ವಾರ್ಟರ್​ಫೈನಲ್ ಪಂದ್ಯ ಅದು. ನವ್​ಜೋತ್ ಸಿಧು ಅವರ 93 ರನ್ ಆರಂಭಿಕ ಆಟದ ಫಲವಾಗಿ ಭಾರತ ಉತ್ತಮ ಮೊತ್ತದತ್ತ ಸಾಗಿತ್ತಾದರೂ ಇನಿಂಗ್ಸ್​ನ ದ್ವಿತೀಯಾರ್ಧದಲ್ಲಿ ಒಂದಷ್ಟು ವಿಕೆಟ್ ಕಳೆದುಕೊಂಡು ಆತಂಕದಲ್ಲಿತ್ತು. ಆದರೆ, 46 ಓವರ್​ಗಳಲ್ಲಿ ಭಾರತ 6 ವಿಕೆಟ್​ಗೆ 236 ರನ್ ಗಳಿಸಿದ್ದ ಹಂತದಲ್ಲಿ ಪಂದ್ಯಕ್ಕೆ ಪವಾಡಸದೃಶ ತಿರುವು ದೊರೆಯಿತು. ಅಜಯ್ ಜಡೇಜಾರ ‘ದಿಲ್ ಮಾಂಗೆ ಮೋರ್’ ಆಟಕ್ಕೆ ಪಾಕ್ ಬೆಚ್ಚಿಬಿತ್ತು. ಜಡೇಜಾ ಆ ದಿನ ಮನಸೋಇಚ್ಛೆ ಹೊಡೆತಗಳ ಮೂಲಕ ಪಾಕಿಸ್ತಾನದ ಬೆಸ್ಟ್ ಬೌಲರ್ ವಕಾರ್ ಯೂನಿಸ್​ರ ಮರ್ಯಾದೆ ತೆಗೆದರು.

25 ಎಸೆತಗಳಲ್ಲಿ 45 ರನ್ ಸಿಡಿಸಿದ ಜಡೇಜಾ, ಯಾರ್ಕರ್ ಸ್ಪೆಷಲಿಸ್ಟ್ ವಕಾರ್​ರ ಕೊನೆಯ ಎರಡು ಓವರ್​ಗಳಲ್ಲಿ 18 ಮತ್ತು 22 ರನ್ ಚಚ್ಚಿ ಬಿಸಾಡಿದರು. ಪರಿಣಾಮ ಭಾರತದ ಮೊತ್ತ 287ಕ್ಕೇರಿತು. ಪ್ರತಿಯಾಗಿ ಪಾಕ್ ಬ್ಯಾಟಿಂಗ್ ಆರಂಭವೂ ಅಬ್ಬರದಿಂದಲೇ ಕೂಡಿತ್ತು. 1 ವಿಕೆಟ್​ಗೆ 113 ರನ್ ಗಳಿಸಿದ್ದ ಪಾಕ್, ವೆಂಕಟೇಶ್ ಪ್ರಸಾದ್​ರನ್ನು ಕೆಣಕಿ ಹಳ್ಳಕ್ಕೆ ಬಿತ್ತು. ವೆಂಕಿ ಜತೆ ವಿನಾಕಾರಣ ಮಾತಿನ ಚಕಮಕಿ ನಡೆಸಿದ ಆರಂಭಿಕ ಬ್ಯಾಟ್ಸ್​ಮನ್ ಆಮೀರ್ ಸೊಹೈಲ್, ಬೌಂಡರಿ ಬಾರಿಸಿ ಪ್ರಸಾದ್​ರತ್ತ ಉದ್ಧಟ ಸನ್ನೆ ಮಾಡಿದರು. ಅದಾದ ಕೆಲವೇ ಕ್ಷಣಗಳಲ್ಲಿ ಪ್ರಸಾದ್ ಬೆಂಕಿಚೆಂಡು ಎಸೆದು ಸೊಹೈಲ್​ರನ್ನು ಬೌಲ್ಡ್ ಮಾಡಿದ್ದಲ್ಲದೆ, ‘ನೀನು ಆಡಿದ್ದು ಸಾಕು, ವಾಪಸ್ ತೆರಳು’ ಎಂದು ಪೆವಿಲಿಯನ್​ನತ್ತ ಕೈತೋರಿದರು. ಈ ಚಕಮಕಿಯ ಬಳಿಕ ಚೇತರಿಸಿಕೊಳ್ಳದ ಪಾಕ್ 39 ರನ್​ಗಳಿಂದ ಶರಣಾಯಿತು.

ಎಲ್ಲವೂ ನಿರೀಕ್ಷೆಯಂತೆಯೇ ನಡೆದರೆ ಸೆ.4ರಂದು ಭಾರತ-ಪಾಕ್ ಮತ್ತೊಮ್ಮೆ ಈ ಏಷ್ಯಾ ಕಪ್​ನ ಸೂಪರ್-4 ರೌಂಡ್​ರಾಬಿನ್ ಲೀಗ್ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ. ಸೆ. 11ರಂದು ಫೈನಲ್ ಸಹ ಭಾರತ -ಪಾಕ್ ನಡುವೆಯೇ ನಡೆಯುವ ಸಾಧ್ಯತೆ ಇದೆ. ಭಾರತ- ಪಾಕಿಸ್ತಾನ ಕ್ರಿಕೆಟ್ ಮುಖಾಮುಖಿಗಳೇ ವಿರಳವಾಗಿರುವ ಕಾಲಘಟ್ಟದಲ್ಲಿ ಏಷ್ಯಾ ಕಪ್ ನೆಪದಲ್ಲಿ ಹದಿನೈದು ದಿನಗಳಲ್ಲಿ ಮೂರು ಪಂದ್ಯಗಳಿಗೆ ವೇದಿಕೆ ರೂಪುಗೊಂಡಿರುವುದು ಪರಮಾಶ್ಚರ್ಯವೇ ಸರಿ. ಇದೇ ನೆಪದಲ್ಲಿ ಹಳೆಯ ಮೆಲುಕುಗಳ ಸವಿಸವಿ ನೆನಪು ಸಾವಿರ ನೆನಪುಗಳನ್ನು ಸವಿಯುವಂತಾಯಿತು.

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net