

ಅವರು ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು ಹಾಗೂ ಹೆಸರಾಂತ ಸಂಶೋಧನಾ ಸಂಸ್ಥೆಯೊಂದರ ಮಾಜಿ ನಿರ್ದೇಶಕರು. ವಿಶ್ರಾಂತ ಜೀವನವನ್ನು ಸ್ವತಂತ್ರವಾಗಿ ಕಳೆಯುವ ಅವರ ಆಸೆಗೆ ಅಡ್ಡಿಯಾಗಿದ್ದು ಮರೆವಿನ ಕಾಯಿಲೆ. ಸದಾ ನೆರವಿಗೆ ಯಾರಾದರೊಬ್ಬರು ಇರಲೇಬೇಕು. ಅದೊಂದು ದಿನ ಮಗಳು ತಂದೆಯನ್ನು ಕಾರಿನಲ್ಲಿ ಸುತ್ತಾಟಕ್ಕೆ ಕರೆದುಕೊಂಡು ಹೋದಳು. ಮಾರ್ಗಮಧ್ಯೆ ತಂದೆಯನ್ನು ಕಾರಿನಲ್ಲಿ ಕೂರಿಸಿ ಅಂಗಡಿಗೆ ತೆರಳಿದಾಗ, ರಸ್ತೆಯಲ್ಲಿ ಸಾಗುತ್ತಿದ್ದ ಆನೆಯೊಂದು ಪ್ರಾಧ್ಯಾಪಕರ ಗಮನ ಸೆಳೆಯಿತು. ಕಾರಿನಿಂದಿಳಿದ ಅವರು ಆನೆಯನ್ನೇ ಹಿಂಬಾಲಿಸಿಕೊಂಡು ಹೋದರು. ಹಲವು ರಸ್ತೆಗಳನ್ನು ದಾಟಿಕೊಂಡು ಸಾಗಿದ ಮೇಲೆ ಮರಳಿ ಬರುವ ದಾರಿ ಅವರಿಗೆ ತಿಳಿಯದು. ಇವರ ಪರದಾಟ ನೋಡಿದ ಆನೆಯ ಮಾವುತ ನೆರವು ನೀಡಲು ಯತ್ನಿಸಿದರೂ, ಮನೆಯ ವಿಳಾಸ, ಮಗಳ ಹೆಸರು ಒಂದೂ ಅವರಿಗೆ ನೆನಪಾಗುತ್ತಿಲ್ಲ. ಅತ್ತ ಮಗಳಿಗೂ ಆತಂಕ. ಅಪ್ಪನಿಗಾಗಿ ಹುಡುಕಾಟ. ಪೊಲೀಸರಿಗೆ ದೂರು. ಏನೂ ಪ್ರಯೋಜನವಾಗುತ್ತಿಲ್ಲ. ಮಾವುತನಿಗೂ ಅನುಕಂಪ. ಹಿರಿ ಜೀವವನ್ನು ಬೀದಿಯಲ್ಲಿ ಬಿಡಲು ಮನಸ್ಸೊಪ್ಪದೆ ಮನೆಯಲ್ಲೇ ಆಶ್ರಯ ಕೊಟ್ಟ. ಆತನ ಪತ್ನಿ ಕೆಲವು ದಿನಗಳ ಹಿಂದಷ್ಟೇ ಮಗುವಿಗೆ ಜನ್ಮ ನೀಡಿದ್ದಳು. ಆಕೆಗೀಗ ಇಬ್ಬರು ಮಕ್ಕಳು. ಕೊನೆಗೊಂದು ದಿನ ಪೊಲೀಸರು ಪತ್ತೆ ಹಚ್ಚಿದಾಗ ಅವರು ಮಾವುತನ ಮನೆ ಬಿಟ್ಟು ಮಗಳ ಮನೆಗೆ ಹೋಗಲೊಲ್ಲರು. ಇದು ‘ಅಸ್ತು’ ಎಂಬ ಮರಾಠಿ ಚಿತ್ರದ ಕಥೆ.
ಜೀವನಪೂರ್ತಿ ಕಷ್ಟ ಪಟ್ಟು ದುಡಿದು ಹಣ್ಣಾದ ದೇಹ-ಜೀವ ಇಳಿವಯಸ್ಸಿನಲ್ಲಾದರೂ ನೆಮ್ಮದಿ ಸಿಗಲೆಂದು ಆಸೆ ಪಡುವ ಹೊತ್ತಿಗೆ ದೇವರು ಮರೆವಿನ ಕಾಯಿಲೆ ಕೊಟ್ಟು ಬಿಡುತ್ತಾನೆ. ಕಾಯಿಲೆಯ ತೀವ್ರತೆ, ಸ್ವರೂಪ ಆಧರಿಸಿ ಅಲ್ಝೈಮರ್, ಡೆಮೆನ್ಷಿಯ ಇತ್ಯಾದಿ ಹೆಸರಿಂದ ಗುರುತಿಸುವ ಈ ಕಾಯಿಲೆ ಹಿರಿಯ ಜೀವಗಳ ಪಾಲಿಗೆ ಮತ್ತೊಂದು ನರಕವನ್ನು ತೋರಿಸಿ ಬಿಡುತ್ತದೆ. ಅವರ ಬಳಿ ಎಲ್ಲವೂ ಇದ್ದರೂ ಏನನ್ನೂ ಅನುಭವಿಸಲಾಗದಂಥ ಪರಿಸ್ಥಿತಿ. ಇಪ್ಪತೆôದು-ಐವತ್ತು ವರ್ಷ ಹಳೆಯ ಸಂಗತಿ ಇಂದು ಮೊನ್ನೆ ನಡೆದಂತೆ ನೆನಪಿದ್ದರೂ, ವರ್ತಮಾನದ ಬಗ್ಗೆ ಪ್ರಜ್ಞೆಯಿಲ್ಲ. ಮನೆಯಲ್ಲೇ ಇದ್ದರೂ, ಬೇರೆಲ್ಲೋ ಇದೆ ನನ್ನ ಮನೆ, ಇಲ್ಲಿರುವುದು ಸುಮ್ಮನೆ ಎಂಬಂಥ ಹುಡುಕಾಟ, ಮಕ್ಕಳು ಕಣ್ಣೆದುರಿಗೇ ಇದ್ದರೂ, ಯಾರೋ ಅಪರಿಚಿತರು ಎಂಬಂಥ ನೋಟ, ಊಟ ಮಾಡಿದ್ದು ನೆನಪಿಲ್ಲ, ಸ್ನಾನ ಬೇಕಿಲ್ಲ, ಮೈಮೇಲೆ ಬಟ್ಟೆ ಇದೆಯೋ, ಇಲ್ಲವೋ ಪರಿವೆಯೇ ಇಲ್ಲ... ಅಂಥ ವಿಚಿತ್ರ ಸ್ಥಿತಿಗೆ ತಂದಿಟ್ಟು ಹಿರಿಜೀವಗಳನ್ನು ಹಣ್ಣಾಗಿಸುವ ಕಾಯಿಲೆಯನ್ನು ಪೂರ್ಣ ಗುಣವಾಗಿಸುವಂಥ ಮದ್ದೂ ಇಲ್ಲ.
ಮನೆಯೆಂದ ಮೇಲೆ ಮಕ್ಕಳಿರಬೇಕು, ಹಿರಿಜೀವಗಳೂ ಇರಬೇಕು. ಮನೆಯಲ್ಲಿ ದೊಡ್ಡವರಿರುವರೆಂದರೆ, ಉಳಿದವರಿಗೆ ಅದೊಂಥರ ನೆಮ್ಮದಿ, ಸುರಕ್ಷಿತ ಭಾವ. ಆದರೆ, ಇತ್ತೀಚಿನ ವರ್ಷಗಳಲ್ಲಿ ವಯಸ್ಸಾದವರಿದ್ದರೆ ಮಕ್ಕಳಿಗೆ ಕಿರಿಕಿರಿ. ಅವರಿಗೇನೂ ತಿಳಿಯುವುದಿಲ್ಲ ಎಂಬ ತಾತ್ಸಾರ. ಎಲ್ಲರ ಎದುರು ಏನಾದರೂ ಮಾತನಾಡಿಬಿಡುತ್ತಾರೆ ಎಂಬ ಅಸಹನೆ. ಸುಮ್ಮನೆ ಉಪದೇಶ ಮಾಡುತ್ತಾರೆ, ಸಲಹೆ ಕೊಡಲು ಇವರಿಗೇನು ತಿಳಿದಿದೆ ಎಂಬ ಅಹಂಕಾರ. ವಯಸ್ಸಾದವರು ಯಾಕಾದರೂ ಮನೆಯಲ್ಲಿದ್ದಾರೋ ಎಂಬ ಸಿಟ್ಟು. ಇನ್ನೂ ಎಷ್ಟು ದಿನವೋ ಎಂಬ ಅವಸರ. ಮನೆ ಗಲೀಜು ಮಾಡುತ್ತಾರೆ, ಹಾಳು ಮಾಡುತ್ತಾರೆ, ಹಳೆಯ ಕಾಲದವರಂತೆ ವರ್ತಿಸುತ್ತಾರೆ ಎಂಬ ಕೋಪ-ತಾಪ. ಒಟ್ಟಿನಲ್ಲಿ ಅಪ್ಪನೋ ಅಮ್ಮನೋ, ಅತ್ತೆಯೋ ಮಾವನೋ ಮನೆಯಲ್ಲಿದ್ದರೆ ನಿತ್ಯ ಕಿರಿಕಿರಿ, ಜಗಳ, ರಗಳೆ. ಇವರನ್ನು ಯಾರು ನೋಡಿಕೊಳ್ಳುತ್ತಾರೆ? ಯಾಕೆ ನೋಡಿಕೊಳ್ಳಬೇಕು? ಇವರಿಂದ ನಮಗೆ ಪ್ರೖೆವೆಸಿ ಇಲ್ಲ ಎಂಬ ಅಸಹನೆ.
ಅದರಲ್ಲೂ ಮರೆವಿನಂತಹ, ಜೀವವನ್ನು ಒಳಗೊಳಗೇ ಕೊರೆಯುವ ರೋಗದಿಂದ ಬಳಲುವವರು ಮನೆಯಲ್ಲಿರುವ ಕಾರಣಕ್ಕೆ ಕುಟುಂಬಗಳು ಒಡೆದುಹೋದ ಅನೇಕ ಉದಾಹರಣೆಗಳಿವೆ. ಬಡವರು, ಮಧ್ಯಮ ವರ್ಗ, ಸಿರಿವಂತರೆಂಬ ಭೇದವಿಲ್ಲದೆ, ವಯೋವೃದ್ಧ ತಂದೆತಾಯಿಗಳನ್ನು ನೋಡಿಕೊಳ್ಳುವ ವಿಚಾರದಲ್ಲಿ ಬಹುತೇಕ ಮಕ್ಕಳದು ‘ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರದ ಮಗನ ಪಾತ್ರವೇ... ಸಂದರ್ಭ, ಸನ್ನಿವೇಶಗಳು ಬೇರೆಯಾಗಿರುತ್ತವೆ. ಆದರೆ, ಈ ಜಗತ್ತಿನಲ್ಲಿ ಯಾರೂ ಚಿರಂಜೀವಿಗಳಾಗಿರಲು, ಚಿರಯುವಕರಾಗಿರಲು ಬಂದಿಲ್ಲ. ಎಲ್ಲರೂ ಒಂದು ದಿನ ಮುದುಕರಾಗಲೇಬೇಕು.
ಇಳಿವಯಸ್ಸಿನ ಒಂದೊಂದು ಅಭಿವ್ಯಕ್ತಿಗೂ ಏನಾದರೊಂದು ಕಾರಣವಿರುತ್ತದೆ. ಅದನ್ನು ಮಕ್ಕಳು ಸಹನೆ, ಸಹಾನುಭೂತಿಯಿಂದ ಅರಿತು, ವೈದ್ಯಕೀಯ ಸಲಹೆ ಪಡೆದರೆ ಕೊನೆಗಾಲದ ನೋವನ್ನು ಅಷ್ಟರ ಮಟ್ಟಿಗೆ ತಗ್ಗಿಸಬಹುದು. ಈ ಡೆಮೆನ್ಷಿಯಾ ವಿಚಾರದಲ್ಲೂ ಅಷ್ಟೇ. ಇದು ಒಳಗೊಳಗೇ ಕೊರೆಯುವ, ಜೀವ ಹಣ್ಣಾಗಿಸುವ ಕಾಯಿಲೆ. ಆಲೋಚಿಸುವ ಶಕ್ತಿ ಕುಂದುವುದು, ಸಂವಹನ ಮಾಡಲು ಕಷ್ಟ ಪಡುವುದು ಮತ್ತು ಮರೆವು ಅದರ ಲಕ್ಷಣಗಳು. ಇನ್ನೂ ಹೇಳಬೇಕೆಂದರೆ, ಅದೊಂದು ರೀತಿ ಅರೆ ಮರೆವು. ದೈನಂದಿನ ಸಂಗತಿಗಳು ನೆನಪಿನಲ್ಲಿ ಉಳಿಯುವುದಿಲ್ಲ. ಊಟ ಮಾಡಿದ ಸ್ವಲ್ಪ ಹೊತ್ತಿನಲ್ಲೇ ನನಗೆ ಊಟ ಕೊಡಲೇ ಇಲ್ಲ ಎಂದು ದೂರುವಂತಹ ಮರೆವು. ಅಗತ್ಯ ವಸ್ತುಗಳನ್ನು ಎಲ್ಲೋ ಇಟ್ಟು ಇನ್ನೆಲ್ಲೋ ಹುಡುಕುವುದು ಸಹ ಲಕ್ಷಣಗಳಲ್ಲೊಂದು. ಏನನ್ನೋ ತುಂಬ ಮುಖ್ಯ ವಿಚಾರ ಎಂಬಂತೆ ಮಾತನಾಡುತ್ತಿರುತ್ತಾರೆ. ಆದರೆ, ಒಂದು ವಾಕ್ಯಕ್ಕೂ ಇನ್ನೊಂದು ವಾಕ್ಯಕ್ಕೂ ಸಂಬಂಧವೇ ಇರುವುದಿಲ್ಲ. ದೈನಂದಿನ ಚಟುವಟಿಕೆಗಳಲ್ಲಿ ಆಸಕ್ತಿ ತೋರುವುದಿಲ್ಲ. ಟಿವಿ ವೀಕ್ಷಣೆ, ದಿನಪತ್ರಿಕೆ, ಕುಟುಂಬದವರೊಂದಿಗೆ ಲೋಕಾಭಿರಾಮ ಮಾತು ಸಹ ಆಸಕ್ತಿ ತರುವುದಿಲ್ಲ. ಸಣ್ಣಪುಟ್ಟ ಅಗತ್ಯಗಳಿಗೆಂದು ಅಂಗಡಿಗೆ, ದೇವಸ್ಥಾನಕ್ಕೆ ಅಥವಾ ಸುತ್ತಾಡಲು ಹೋದವರಿಗೆ ಮನೆಯ ದಾರಿ ಮರೆತು ಹೋಗುತ್ತದೆ. ಮನೆಯ ವಿಳಾಸ, ಮಕ್ಕಳ ಹೆಸರು ಯಾವುದೂ ನೆನಪಾಗುವುದಿಲ್ಲ.
ನೆನಪಿನ ಶಕ್ತಿ ಕುಂದುವುದು ಅಥವಾ ಮರೆವು ಕಾಣಿಸಿಕೊಂಡ ಕೂಡಲೇ ಡೆಮೆನ್ಷಿಯಾ ಬಂದಿದೆ ಎಂದಲ್ಲ. ಅದು ವಯೋಸಹಜ ಸಮಸ್ಯೆ. ಹಾಗೆಂದು ನಿರ್ಲಕ್ಷ್ಯ ಮಾಡುವುದೂ ಸಲ್ಲದು. ಏಕೆಂದರೆ ಡೆಮೆನ್ಷಿಯಾ ನಿಧಾನಗತಿಯಲ್ಲಿ ಹಂತಹಂತವಾಗಿ ಹೆಚ್ಚುತ್ತ ಹೋಗುತ್ತದೆ. ಒಂದರಿಂದ ಮತ್ತೊಂದು ಸಮಸ್ಯೆಗೆ ಕಾರಣವಾಗಬಹುದು. ವಯೋವೃದ್ಧರಿಗೆ ಈ ಕಾಯಿಲೆ ಕಾಣಿಸಿಕೊಂಡ ಬಳಿಕ ಔಷಧೋಪಚಾರಗಳ ಮೂಲಕ ಕಾಯಿಲೆ ಒಂದು ಘಟ್ಟದಿಂದ ಇನ್ನೊಂದು ಘಟ್ಟಕ್ಕೆ ತೀವ್ರಗೊಳ್ಳುವ ಪ್ರಕ್ರಿಯೆಯನ್ನು ವಿಳಂಬಗೊಳಿಸಬಹುದು.
ನಕಾರಾತ್ಮಕ ಚಿಂತನೆಗಳಿಂದ ಮರೆವು ಹೆಚ್ಚುವುದೆಂದು ವೈದ್ಯರು ಹೇಳುತ್ತಾರೆ. ವಯೋವೃದ್ಧರಲ್ಲಿ ಅದರಲ್ಲೂ ಡೆಮೆನ್ಷಿಯಾ ಲಕ್ಷಣಗಳುಳ್ಳ ದುರ್ಬಲ ಮನಸ್ಸಿನವರಲ್ಲಿ ನಕಾರಾತ್ಮಕ ಚಿಂತನೆ ಹೆಚ್ಚಿರುತ್ತದೆ. ಸದಾ ಅಪಘಾತ, ಅನಾಹುತಗಳು ಸಂಭವಿಸುವ ಬಗ್ಗೆ ಯೋಚಿಸುತ್ತಿರುತ್ತಾರೆ. ಮನೆಯಿಂದ ಹೊರಹೋದ ಮಕ್ಕಳಿಗೆ ಏನೋ ತೊಂದರೆಯಾಗಿದೆ. ಏನೋ ಅನಾಹುತವಾಗುತ್ತದೆ ಎಂದು ಭ್ರಮಿಸಿಕೊಂಡು ದುಃಖಿಸುತ್ತಿರುತ್ತಾರೆ. ಹಿಂದೆ ಎಂದೋ ನಡೆದುಹೋದ ಘಟನೆಗಳನ್ನು ವರ್ತಮಾನಕ್ಕೆ ತಳುಕು ಹಾಕಿ ಆತಂಕಗೊಳ್ಳುತ್ತಾರೆ.
ಇಂಥ ಮರೆವಿನ ಕಾಯಿಲೆಗೆ ವಂಶವಾಹಿ ಇತಿಹಾಸ ಇರಬೇಕೆಂದಿಲ್ಲ. ಅದಕ್ಕೊಂದು ನಿರ್ದಿಷ್ಟ ಕಾರಣವೂ ಇರುವುದಿಲ್ಲ. ಯಾರಿಗೆ ಬೇಕಾದರೂ ಬರಬಹುದು. ಇಂಥ ರೋಗಿಗಳನ್ನು ತಾಳ್ಮೆಯಿಂದ, ಪ್ರೀತಿಯಿಂದ ನೋಡಿಕೊಳ್ಳುವುದೊಂದೇ ಮಾರ್ಗ. ಮುಖ್ಯವಾಗಿ ಇವರನ್ನು ಒಂಟಿಯಾಗಿ ಬಿಡಬಾರದು. ಮಿದುಳು ದುರ್ಬಲವಾಗುತ್ತ ದೈಹಿಕ ಚಟುವಟಿಕೆಗಳು ಕ್ಷೀಣವಾಗಿ, ಸ್ವತಂತ್ರವಾಗಿ ಯಾವ ಕೆಲಸವನ್ನೂ ಮಾಡಿಕೊಳ್ಳಲಾಗದ ಮಕ್ಕಳ ಸ್ಥಿತಿಗೆ ಈ ವೃದ್ಧರು ತಲುಪಿರುತ್ತಾರೆ. ಹಾಗಾಗಿ ಅವರನ್ನು ಮಕ್ಕಳಂತೆಯೇ ನೋಡಿಕೊಳ್ಳಬೇಕು. ಮರೆವು ಹೆಚ್ಚಾಗಿದ್ದರೂ, ಅನ್ಯ ಕಾಯಿಲೆಗಳಿಲ್ಲದೆ ದೈಹಿಕವಾಗಿ ಗಟ್ಟಿಮುಟ್ಟಾಗಿರುವ ಕೆಲವು ವೃದ್ಧರು ಮನೆಯವರ ಕಣ್ತಪ್ಪಿಸಿ ದಿಢೀರನೆ ಹೊರಗೆ ತೆರಳಿಬಿಡುತ್ತಾರೆ. ಇಂಥವರು ಮರಳಿ ಬರಲು ಸಾಧ್ಯವಾಗದೆ ಯಾವುದೋ ರೈಲು, ಬಸ್ಸು ಹತ್ತಿ ಎಲ್ಲೆಲ್ಲಿಗೋ ಹೋಗಿ ಬಿಡುವ ಅಪಾಯವಿರುತ್ತದೆ. ಕೆಲವೊಮ್ಮೆ ಇಂಥವರನ್ನು ದಾರಿಹೋಕರು ಪೊಲೀಸ್ ಠಾಣೆಗೆ ತಲುಪಿಸಿದರೂ ವಿಳಾಸ ಹೇಳಲು ಅವರಿಗೆ ತಿಳಿಯುವುದಿಲ್ಲ. ಈ ರೀತಿ ದಾರಿ ತಪ್ಪುವ ಅನೇಕರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಾರೆ, ಅನಾಥಾಶ್ರಮ, ನಿರಾಶ್ರಿತರ ಕೇಂದ್ರಗಳ ಪಾಲಾಗುತ್ತಾರೆ. ಹಸಿವಿನಿಂದ ಬೀದಿಯಲ್ಲಿ ಭಿಕ್ಷೆ ಬೇಡುತ್ತಾರೆ. ಮನೆಯಿಂದ ತಪ್ಪಿಸಿಕೊಳ್ಳುವ ಇಂಥ ವೃದ್ಧರನ್ನು ಹುಡುಕುವುದೂ ಕಷ್ಟ. ಇದಕ್ಕೂ ಕೆಲವೊಂದು ಉಪಾಯಗಳಿವೆ. ಅವರು ತೊಡುವ ಎಲ್ಲ ಉಡುಪುಗಳ ಕಾಲರ್ನಲ್ಲಿ ಮಕ್ಕಳ ಹೆಸರು, ಫೋನ್ ನಂಬರ್ ಬರೆದಿಡಬಹುದು. ವಿಸಿಟಿಂಗ್ ಕಾರ್ಡ್ಗಳನ್ನು ತೆಗೆಯಲು ಸಾಧ್ಯವಾಗದಂತೆ ಕಿಸೆಗೆ ಪಿನ್ ಮಾಡಿ ಇಡಬಹುದು. ಕೈನಿಂದ ಕಳಚಲು ಸಾಧ್ಯವಾಗದಂಥ ಬ್ರೇಸ್ಲೆಟ್ಗಳಲ್ಲಿ ಫೋನ್ ನಂಬರ್ ಅಚ್ಚು ಹಾಕಿಸಬಹುದು. ಬೇಸಿಕ್ ಫೋನ್ಗಳನ್ನು ಸದಾ ಅವರ ಕೊರಳಿಗೆ ಕಟ್ಟಿಡಬಹುದು. ಹತ್ತಿರದ ಪೊಲೀಸ್ ಠಾಣೆಗಳಲ್ಲಿ ಇಂಥ ವೃದ್ಧರ ಮಾಹಿತಿ ನೀಡಿ ಸಂಬಂಧಪಟ್ಟವರ ವಿಳಾಸ, ಸಂಪರ್ಕ ಸಂಖ್ಯೆ ಕೊಡುವ ಮೂಲಕ ಮುಂಜಾಗ್ರತೆ ವಹಿಸಬಹುದು.
ಮರೆವಿನ ಕಾಯಿಲೆಗಳ ಬಗ್ಗೆ ಅರಿವು ಮೂಡಿಸುವಂಥ ಪ್ರಯತ್ನಗಳು ಸಾಕಷ್ಟು ನಡೆಯುತ್ತಿವೆ. ಆಸ್ಪತ್ರೆಗಳಲ್ಲಿ ಇಂಥ ರೋಗಿಗಳಿಗೆ ಹಾಗೂ ಅವರನ್ನು ನೋಡಿಕೊಳ್ಳುವ ಕುಟುಂಬದವರಿಗೆ ಕೌನ್ಸೆಲಿಂಗ್ ಮಾಡಲಾಗುತ್ತದೆ.
ಹಾಲಿವುಡ್ನಲ್ಲಿ ಮರೆವಿನ ಕಾಯಿಲೆ ಕುರಿತ ಹಲವು ಅದ್ಭುತ ಚಿತ್ರಗಳು ಬಂದಿವೆ. ಭಾರತದಲೂ ್ಲ ಹಲವು ಭಾಷೆಗಳ ಚಿತ್ರಗಳಲ್ಲಿ ಇಳಿವಯಸ್ಸಿನ ಮರೆವಿನ ಕುರಿತ ಚಿತ್ರಣಗಳು ದಾಖಲಾಗಿವೆ. ಬಾಲಿವುಡ್ ಚಿತ್ರ ‘ಬ್ಲಾ್ಯಕ್’ನಲ್ಲಿ ಅಮಿತಾಬ್ ಬಚ್ಚನ್ ಅಂಗಡಿಯಲ್ಲಿ ಐಸ್ಕ್ರೀಂ ಖರೀದಿಸಿದರೂ, ಯಾರಿಗಾಗಿ ಖರೀದಿಸಿದ್ದೇನೆ ಎಂಬುದೇ ನೆನಪಾಗುವುದಿಲ್ಲ. ಹಣಕೊಟ್ಟ ಬಳಿಕ ಚಿಲ್ಲರೆ ಪಡೆಯಲು ನೆನಪಾಗುವುದಿಲ್ಲ. ‘ಕೇರಳ ಕೆಫೆ’ ಎಂಬ ವೆಬ್ಸರಣಿಯ ‘ಬ್ರಿಜ್’ ಕಿರುಚಿತ್ರದಲ್ಲಿ ಡೆಮೆನ್ಷಿಯ ಗುಣಲಕ್ಷಣವುಳ್ಳ ವಯೋವೃದ್ಧ ತಾಯಿಯನ್ನು ನೋಡಿಕೊಳ್ಳಲು ಸಾಧ್ಯವಾಗದೆ ಮಗ ಬೀದಿಯಲ್ಲಿ ಬಿಡುತ್ತಾನೆ. ಆ ಕಥೆಯಲ್ಲಿ ಮರೆವಿನಿಂದ ಬಳಲುವ ತಾಯಿ ಬಟ್ಟೆ ತೊಡುವುದಕ್ಕೆ ಕಷ್ಟಪಡುತ್ತಾಳೆ. ತನ್ನ ಕೆಲಸ ಮಾಡಿಕೊಳ್ಳಲು ಆಗುವುದಿಲ್ಲ. ಊಟ ಮಾಡಿದ್ದೇ ನೆನಪಿರುವುದಿಲ್ಲ. ಮಗನ ಹೆಸರೂ ನೆನಪಾಗುವುದಿಲ್ಲ. ಸದಾ ಬೀಚ್ಗೆ ಹೋಗಬೇಕೆಂಬ ಹಟ. ಒಂದೆಡೆ ಬಡತನ, ಇನ್ನೊಂದೆಡೆ ಪತ್ನಿಯ ಕಿರಿಕಿರಿ, ತಾಯಿಯನ್ನು ನೋಡಿಕೊಳ್ಳಲಾಗದ ಅಸಹಾಯಕತೆ ಮಗ ತಾಯಿಯನ್ನು ಬೀದಿಯಲ್ಲಿ ಬಿಡುವಂಥ ಪ್ರಸಂಗ ಸೃಷ್ಟಿಯಾಗುತ್ತದೆ. ‘ಯು ಮಿ ಔರ್ ಹಮ್ ಎಂಬ ಹಿಂದಿ ಚಿತ್ರದಲ್ಲಿ 28 ವರ್ಷದ ಕಥಾನಾಯಕಿಗೆ ಡೆಮೆನ್ಷಿಯ ಕಾಣಿಸಿಕೊಳ್ಳುತ್ತದೆ. ಆಕೆ, ತನ್ನ ಗಂಡನನ್ನೇ ಗುರುತಿಸುವುದಿಲ್ಲ. ಹಸುಗೂಸಿನ ಪಾಲನೆ ಮರೆಯುತ್ತಾಳೆ. ‘ಮೈನೆ ಗಾಂಧಿ ಕೊ ನಹಿ ಮಾರಾ’ ಚಿತ್ರದಲ್ಲಿ ಕಥಾನಾಯಕನಿಗೆ ತಾನು ನಿವೃತ್ತನಾಗಿರುವುದು, ಪತ್ನಿ ನಿಧನಳಾಗಿರುವುದೇ ಮರೆತುಹೋಗುತ್ತದೆ. ಕೆಲಸದಾಕೆ ತನಗೆ ಊಟದಲ್ಲಿ ವಿಷ ಹಾಕುತ್ತಾಳೆ ಎಂಬ ಭ್ರಮೆಯಿಂದ ಅನುಮಾನ ಪಡುತ್ತಾನೆ. ‘ಗೋಧಿಬಣ್ಣ ಸಾಧಾರಣ ಮೈಕಟ್ಟು’ ಚಿತ್ರದಲ್ಲೂ ಸಾಫ್ಟ್ವೇರ್ ಮಗ ಪರಊರಿಗೆ ತೆರಳುವ ಸಂದರ್ಭದಲ್ಲಿ ಮರೆವಿನ ಕಾಯಿಲೆ ಇರುವ ತಂದೆಯನ್ನು ವೃದ್ಧಾಶ್ರಮದಲ್ಲಿ ಬಿಡುತ್ತಾನೆ. ಆದರೆ, ತಂದೆ ಅಲ್ಲಿಂದ ತಪ್ಪಿಸಿಕೊಂಡು ಅನ್ಯರ ಮನೆ ಸೇರುತ್ತಾರೆ. ತಂದೆಯ ಹುಡುಕಾಟದಲ್ಲಿ ಮಗ ಜೀವನದ ಪಾಠ ಕಲಿಯುತ್ತಾನೆ.
ಕಾಯಿಲೆಗಳು ಮನುಷ್ಯನಿಗಲ್ಲದೆ ಮರಕ್ಕೆ ಬರುವುದಿಲ್ಲ. ಅದನ್ನು ಎದುರಿಸುವ ತಾಳ್ಮೆ ನಮ್ಮಲ್ಲಿರಬೇಕು. ಮುದುಕರಿಗೆ ಮರೆವು ಎಂದು ಮಕ್ಕಳು ತಮ್ಮ ಕರ್ತವ್ಯ ಮರೆಯಬಾರದು. ಎಷ್ಟು ಹಣವಿದ್ದರೇನು? ವೃದ್ಧಾಶ್ರಮಗಳಲ್ಲಿ, ಆಸ್ಪತ್ರೆಗಳಲ್ಲಿ ಮನೆಯ ಪ್ರೀತಿ ಸಿಗುವುದಿಲ್ಲ. ಮಕ್ಕಳ ಒಡನಾಟ ಸಿಗುವುದಿಲ್ಲ. ಮುಸ್ಸಂಜೆಯ ದಿನಗಳಲ್ಲಿ ಮಕ್ಕಳ ಪ್ರೀತಿ ಜೊತೆಗಿದ್ದರೆ ಹಿರಿಯ ಜೀವಗಳಿಗೆ ಅದೇ ನೆಮ್ಮದಿ.
(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)