

ಮೈಸೂರಿನಲ್ಲಿ ಕರ್ನಾಟಕ ಹಾಗೂ ತ್ರಿಪುರ ತಂಡಗಳ ನಡುವೆ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯ ನಡೆಯಿತು. ಈ ಪಂದ್ಯ ಭಾರತದ ಈಶಾನ್ಯ ತುದಿಯಲ್ಲಿರುವ ರಾಜ್ಯದ ಬಗ್ಗೆ ತಿಳಿದುಕೊಳ್ಳುವುದಕ್ಕೊಂದು ನೆಪ ಒದಗಿಸಿದಂತಾಯಿತು. ಭಾರತದ ಸಪ್ತ ಸಹೋದರಿಯರು ಎಂದು ಗುರುತಿಸಲಾಗುವ ಈಶಾನ್ಯ ರಾಜ್ಯಗಳ ಪೈಕಿ ತ್ರಿಪುರ 2ನೇ ಅತೀ ಸಣ್ಣ ರಾಜ್ಯ. ಮಹಾಭಾರತ ಕಾಲದ, ಸೂರ್ಯವಂಶದ 40ನೇ ರಾಜ ತ್ರಿಪುರನಿಂದ ಈ ರಾಜ್ಯಕ್ಕೆ ಆತನ ಹೆಸರು ಬಂದಿದೆ ಎಂಬ ಕಥೆಯೊಂದಿದೆ.
ಸ್ವಾತಂತ್ರ್ಯಪೂರ್ವದಲ್ಲಿ ಶತಮಾನಗಳ ಕಾಲ ತ್ರಿಪುರವನ್ನು ಆಳಿದ ಮಾಣಿಕ್ಯ ರಾಜವಂಶದ ಇತಿಹಾಸವನ್ನು ದಾಖಲಿಸಿರುವ ‘ರಾಜಮಾಲಾ’ ಪ್ರಕಾರ ಶಿವನು ತ್ರಿಪುರಾಸುರರನ್ನು ಸಂಹರಿಸಿದ ಕಾರಣದಿಂದಲೇ ಆ ಹೆಸರು ಬಂದಿದೆ. ಪಾರ್ವತಿ ದೇವಿಯ 51 ಶಕ್ತಿಪೀಠಗಳಲ್ಲಿ ಒಂದಾದ ಲಲಿತಾ ಮಹಾ ತ್ರಿಪುರಸುಂದರಿ ದೇವಿಯ ಹೆಸರಿನಿಂದಲೂ ಈ ರಾಜ್ಯ ಗುರುತಿಸಿಕೊಂಡಿದೆ. ಆಧುನಿಕ ಇತಿಹಾಸತಜ್ಞರ ಪ್ರಕಾರ ತ್ರಿಪುರದ ಬುಡಕಟ್ಟು ಭಾಷೆ ಕೋಕ್ಬೊರೋಕ್ನಲ್ಲಿ ತುಯಿ ಅಂದರೆ ನೀರು, ಪ್ರ ಅಂದರೆ ಹತ್ತಿರ, ತೀರ ಇತ್ಯಾದಿ ಅರ್ಥವಿದೆ. ಬಂಗಾಳಕೊಲ್ಲಿಯ ವಿಸ್ತಾರಕ್ಕೆ ಚಾಚಿಕೊಂಡಿರುವ, ಪುರಾಣ ಪ್ರಸಿದ್ಧ ಗೋಮತಿ ಸಹಿತ 10 ಪ್ರಮುಖ ನದಿಗಳ ಆವಾಸಸ್ಥಾನವಾಗಿರುವ ತ್ರಿಪುರ ನೀರಿಗೆ ಹತ್ತಿರ ಎಂಬ ಅರ್ಥದಲ್ಲಿ ತುಯಿ ಪ್ರ, ತ್ರಿಪುರ ಆಗಿದೆ ಎಂಬ ವಾದವೂ ಇದೆ. ತ್ರಿಪುರ 1949ರ ಅಕ್ಟೋಬರ್ನಲ್ಲಿ ಭಾರತದ ಒಕ್ಕೂಟಕ್ಕೆ ಸೇರ್ಪಡೆಗೊಂಡಿತು.
ತ್ರಿಪುರ ಸುಂದರಿ ನಾಡು: ತ್ರಿಪುರ ರಾಜ್ಯದ ಅಧಿದೇವತೆ, ಕುಲದೇವತೆ ತ್ರಿಪುರ ಸುಂದರಿ ದೇವಿ. ರಾಜಧಾನಿ ಅಗರ್ತಲಾದಿಂದ 50 ಕಿ.ಮೀ. ಅಂತರದಲ್ಲಿ, ಗೋಮತಿ ನದಿದಂಡೆಯ ಮೇಲಿರುವ ಪಟ್ಟಣ ಉದಯಪುರ. ಪ್ರಾಚೀನ ಮಾಣಿಕ್ಯ ವಂಶದ ರಾಜಧಾನಿಯಾಗಿದ್ದ ಉದಯಪುರದಲ್ಲಿ ಮಾತಾ ತ್ರಿಪುರ ಸುಂದರಿ ದೇಗುಲವಿದೆ. ‘ತ್ರಿಪುರೇಶ್ವರಿ’ ಹಾಗೂ ‘ಮಾತಾಬಾರಿ’ ಎಂಬ ಹೆಸರಿನಿಂದಲೂ ದೇವಿಯನ್ನು ಗುರುತಿಸಲಾಗುತ್ತದೆ.
ಪೌರಾಣಿಕ ಮಹತ್ವ: ದಕ್ಷ ಯಜ್ಞ ಸಂದರ್ಭದಲ್ಲಿ ಶಿವನಿಗಾದ ಅಪಮಾನವನ್ನು ಸಹಿಸದೆ ಸತಿದೇವಿಯು ಪ್ರಾಣತ್ಯಾಗ ಮಾಡಿದಳು. ಈ ಸಂದರ್ಭದಲ್ಲಿ ರೌದ್ರಾವತಾರ ತಳೆದ ಪರಶಿವನು ಸತಿದೇವಿಯ ದೇಹವನ್ನು ಹೊತ್ತು ರುದ್ರತಾಂಡವ ಮಾಡುತ್ತಿರುವಾಗ ಮಹಾವಿಷ್ಣು ಸುದರ್ಶನ ಚಕ್ರದಿಂದ ಸತಿದೇವಿಯ ಶರೀರವನ್ನು ತುಂಡರಿಸುತ್ತಾನೆ. ಈ ಸಂದರ್ಭದಲ್ಲಿ ಸತಿದೇವಿಯ ಅಂಗಾಂಗಗಳು ಬಿದ್ದ 51 ಸ್ಥಳಗಳು ಶಕ್ತಿಪೀಠಗಳೆನಿಸಿದವು. ಪೀಠಮಾಲಾ ತಂತ್ರ ಶಾಸ್ತ್ರಗ್ರಂಥದ ಪ್ರಕಾರ ಸತಿದೇವಿಯ ಬಲಗಾಲು ಬಿದ್ದ ಶಕ್ತಿಪೀಠವೇ ತ್ರಿಪುರದಲ್ಲಿರುವ ತ್ರಿಪುರ ಸುಂದರಿ ಸನ್ನಿಧಾನವಾಯಿತು. ಈ ದೇವಾಲಯವು ಆಮೆಯ ಬೆನ್ನಿನ ಆಕಾರದಲ್ಲಿರುವ ಸಣ್ಣ ಬೆಟ್ಟದ ಮೇಲೆ ನಿರ್ವಣಗೊಂಡಿದೆ. ದೇಗುಲದ ಪಕ್ಕದಲ್ಲಿ ಕಲ್ಯಾಣಸಾಗರವೆಂಬ ದೊಡ್ಡ ಸರೋವರವಿದ್ದು, ಇದು ಶತಮಾನಗಳಿಂದ ಆಮೆಗಳ ಆವಾಸಸ್ಥಾನವಾಗಿದೆ.
ಭಕ್ತರು ಈ ಆಮೆಗಳನ್ನು ದೇವರೆಂದು ಪೂಜಿಸುತ್ತಾರೆ. ‘ರಾಜಮಾಲಾ’ ಕೃತಿಯ ಪ್ರಕಾರ ಮಾಣಿಕ್ಯ ವಂಶದ ರಾಜ ಧನ್ಯಮಾಣಿಕ್ಯನಿಗೆ ಆದಿಪರಾಶಕ್ತಿಯು ಕನಸಿನಲ್ಲಿ ಕಾಣಿಸಿಕೊಂಡು ಚಿತ್ತಗಾಂಗ್ನಲ್ಲಿರುವ (ಈಗಿನ ಬಾಂಗ್ಲಾದೇಶ) ತನ್ನ ವಿಗ್ರಹವನ್ನು ತಂದು ಮಾತಾಬಾರಿ ಬೆಟ್ಟದ ಮೇಲೆ ಪ್ರತಿಷ್ಠಾಪಿಸುವಂತೆ ಆದೇಶ ನೀಡಿದಳು. ಹೀಗೆ 1501ರಲ್ಲಿ ಧನ್ಯಮಾಣಿಕ್ಯ ರಾಜ ತ್ರಿಪುರ ಸುಂದರಿ ದೇವಿಯ ದೇಗುಲ ನಿರ್ಮಾಣ ಮಾಡಿದನು. ದೇಗುಲದಲ್ಲಿ ದೇವಿಯ ಎರಡು ವಿಗ್ರಹಗಳಿದ್ದು, 5 ಅಡಿ ಎತ್ತರದ ಕೃಷ್ಣಶಿಲೆಯ ಭದ್ರಕಾಳಿ ಸ್ವರೂಪದಲ್ಲಿ ತ್ರಿಪುರ ಸುಂದರಿ ಪ್ರತಿಷ್ಠಾಪನೆಗೊಂಡಿದ್ದರೆ, ಪಕ್ಕದಲ್ಲಿ 2 ಅಡಿಯ ಚಿಕ್ಕ ಚಂಡಿ (ಛೋಟಿ ಮಾ) ವಿಗ್ರಹವಿದೆ. ಹಿಂದೆ ರಾಜರು ಯುದ್ಧಕ್ಕೆ ತೆರಳುವಾಗ ಚಂಡಿ ವಿಗ್ರಹವನ್ನು ಜತೆಯಲ್ಲಿ ಕೊಂಡೊಯ್ಯುತ್ತಿದ್ದ ಐತಿಹ್ಯವಿದೆ. ದೀಪಾವಳಿಯಲ್ಲಿ ಇಲ್ಲಿ ಲಕ್ಷಾಂತರ ಭಕ್ತರು ಸೇರುತ್ತಾರೆ.
ಕೋಟಿಗೊಂದು ಕಮ್ಮಿ- ಉನಕೋಟಿ: ತ್ರಿಪುರ ರಾಜ್ಯಕ್ಕೆ ಕಿರೀಟಪ್ರಾಯವಾಗಿರುವುದು ಇಲ್ಲಿನ ಪ್ರಸಿದ್ಧ ಯಾತ್ರಾ- ಪ್ರವಾಸಿತಾಣ ಉನಕೋಟಿ. ರಾಜ್ಯದ ಉತ್ತರ ಭಾಗದಲ್ಲಿರುವ ರಘುನಂದನ ಬೆಟ್ಟಗಳ ದಟ್ಟಾರಣ್ಯದಲ್ಲಿರುವ ಭಾರತದ ಅತ್ಯಂತ ನಿಗೂಢ ಹಾಗೂ ವಿಸ್ಮಯಕಾರಿ ಶಿಲ್ಪಕಲಾ ತಾಣವಿದು. ಉನಕೋಟಿ ಅಂದರೆ ಕೋಟಿಗೆ ಒಂದು ಕಡಿಮೆ (99,99,999) ಎಂದರ್ಥ. ಈಶಾನ್ಯ ಭಾರತದ ಅಂಗ್ಕೋರ್ ವಾಟ್ ಎಂದು ಕರೆಯಲಾಗುವ ಇಲ್ಲಿ ಬೆಟ್ಟದ ಕಡಿದಾದ ಬಂಡೆಗಳ ಮೇಲೆ ಹಾಗೂ ನೈಸರ್ಗಿಕ ಜಲಪಾತಗಳ ಸುತ್ತ ಸಾವಿರಾರು ಬೃಹತ್ ಶಿಲ್ಪಗಳನ್ನು ಕೆತ್ತಲಾಗಿದೆ.
ಉನಕೋಟಿಯ ಕುರಿತು ಎರಡು ಕಥೆಗಳು ಪ್ರಚಲಿತದಲ್ಲಿವೆ. ಒಂದು ಪೌರಾಣಿಕವಾದರೆ ಇನ್ನೊಂದು ಜಾನಪದೀಯ ಮಹತ್ವ ಹೊಂದಿವೆ. ಒಮ್ಮೆ ಶಿವನು ಒಂದು ಕೋಟಿ ದೇವದೇವತೆಗಳೊಂದಿಗೆ ಕೈಲಾಸದಿಂದ ಕಾಶಿಗೆ ಕಾಲ್ನಡಿಗೆಯಲ್ಲಿ ತೆರಳುತ್ತಿರುತ್ತಾನೆ. ದೀರ್ಘ ಪ್ರಯಾಣದಿಂದ ದೇವತೆಗಳು ದಣಿದಿದ್ದ ಹಿನ್ನೆಲೆಯಲ್ಲಿ ದಟ್ಟಾರಣ್ಯ, ನೈಸರ್ಗಿಕ ಝುರಿ, ಜಲಪಾತಗಳ ರಮಣೀಯ ತಾಣ ರಘುನಂದನ ಬೆಟ್ಟದಲ್ಲಿ ವಿಶ್ರಾಂತಿ ಪಡೆಯಲು ನಿರ್ಧರಿಸುತ್ತಾರೆ. ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಎಲ್ಲರೂ ಪ್ರಯಾಣ ಆರಂಭಿಸಬೇಕು. ಸೂರ್ಯೋದಯಕ್ಕೆ ಮುನ್ನ ರಘುನಂದನ ಬೆಟ್ಟ ದಾಟಿರಬೇಕು ಎಂದು ಶಿವ ಎಲ್ಲರಿಗೂ ಎಚ್ಚರಿಕೆ ನೀಡಿರುತ್ತಾನೆ. ಆದರೆ, ಮಾರನೇ ಬೆಳಗ್ಗೆ ಶಿವ ಎದ್ದರೂ, ದೇವ-ದೇವತೆಗಳೆಲ್ಲರೂ ಗಾಢನಿದ್ರೆಯಲ್ಲಿರುತ್ತಾರೆ. ಶಿವನೇ ಎಬ್ಬಿಸಿದರೂ ಏಳುವುದಿಲ್ಲ. ದೇವತೆಗಳ ಆಲಸ್ಯ ಮತ್ತು ಗಾಢನಿದ್ರೆಯಿಂದ ಕುಪಿತನಾಗುವ ಪರಮೇಶ್ವರ, ‘ನೀವೆಲ್ಲರೂ ಇಲ್ಲಿಯೇ ಶಾಶ್ವತವಾಗಿ ನಿದ್ರಿಸಿ. ಶಿಲೆಯಾಗಿ ಇಲ್ಲಿಯೇ ನೆಲೆಸಿ’ ಎಂದು ಶಾಪ ಕೊಡುತ್ತಾನೆ. ತಕ್ಷಣವೇ ಶಿವನನ್ನು ಹೊರತುಪಡಿಸಿ 99,99,999 ದೇವತೆಗಳು ಶಿಲೆಗಳಾಗಿ ಮಾರ್ಪಡುತ್ತಾರೆ. ಶಿವನೊಬ್ಬನೇ ಕಾಶಿಗೆ ತೆರಳುತ್ತಾನೆ. ಅಂದಿನಿಂದ ಈ ಸ್ಥಳ ಕೋಟಿಗಿಂತ ಒಂದು ಕಡಿಮೆ ಅಂದರೆ ಉನಕೋಟಿ ಎಂದು ಪ್ರಸಿದ್ಧವಾಗಿದೆ.
ಬುಡಕಟ್ಟು ಸಮುದಾಯಗಳಲ್ಲಿ ಪ್ರಚಲಿತದಲ್ಲಿರುವ ಇನ್ನೊಂದು ಕಥೆಯ ಪ್ರಕಾರ, ಕಾಲು ಕಾಮಾರ್ ಎಂಬ ಶಿವಭಕ್ತ ಶಿಲ್ಪಿಯೊಬ್ಬ ಒಮ್ಮೆ ಶಿವಪಾರ್ವತಿಯರು ರಘುನಂದನ ಬೆಟ್ಟದಲ್ಲಿ ಸಂಚರಿಸುತ್ತಿದ್ದ ಸಂದರ್ಭದಲ್ಲಿ ತನ್ನನ್ನೂ ಕೈಲಾಸಕ್ಕೆ ಕರೆದೊಯ್ಯುವಂತೆ ದುಂಬಾಲು ಬೀಳುತ್ತಾನೆ. ಶಿವನು ನಿರಾಕರಿಸುತ್ತಾನಾದರೂ, ಕರುಣಾಮಯಿಯಾದ ತಾಯಿ ಪಾರ್ವತಿ, ಆ ಕಲ್ಲುಕುಟಿಕನಿಗೆ ಒಂದು ಷರತ್ತು ವಿಧಿಸುತ್ತಾಳೆ. ರಾತ್ರಿ ಬೆಳಗಾಗುವ ಒಳಗೆ ಒಂದು ಕೋಟಿ ಶಿವನ ಶಿಲ್ಪಗಳನ್ನು ಕೆತ್ತಿದ್ದೇ ಆದರೆ, ಕೈಲಾಸಕ್ಕೆ ಕರೆದೊಯ್ಯುವುದಾಗಿ ಮಾತುಕೊಡುತ್ತಾಳೆ. ಕಾಲು ಕಾಮಾರ್ಗೆ ತನ್ನ ಕಲಾಪ್ರೌಢಿಮೆ ಬಗ್ಗೆ ಅಪಾರ ಹೆಮ್ಮೆ ಇತ್ತು. ಅದೇ ರೀತಿ, ಜಗತ್ತಿನಲ್ಲೇ ತನ್ನಷ್ಟು ವೇಗವಾಗಿ ಶಿಲ್ಪ ಕೆತ್ತುವವರು ಯಾರೂ ಇಲ್ಲ ಎಂಬ ಅಹಂಕಾರವೂ ಇತ್ತು. ಆತ ಕೂಡಲೇ ದೊಡ್ಡ ದೊಡ್ಡ ಬಂಡೆಗಳಲ್ಲಿ ಶಿವನ ಪ್ರತಿಮೆ ಕೆತ್ತುತ್ತಾನೆ. ಅತಿಮಾನುಷ ವೇಗದಲ್ಲಿ ಶಿವನ ವಿಗ್ರಹ ಕೆತ್ತುವ ಕಾಲು ಕಾಮಾರ್, ರಾತ್ರಿ ಸರಿಯುವ ಒಳಗೆ 99 ಲಕ್ಷ, 99 ಸಾವಿರ, 999 ವಿಗ್ರಹ ಕೆತ್ತಿರುತ್ತಾನೆ. ಇನ್ನೇನು ಕೊನೆಯ ವಿಗ್ರಹ ಕೆತ್ತನೆ ಶುರು ಮಾಡುವ ಮುನ್ನ ಕೋಳಿ ಕೂಗುತ್ತದೆ; ಬೆಳಕಾಗುತ್ತದೆ. ಶಿವಪಾರ್ವತಿಯರ ಜತೆ ಕೈಲಾಸಕ್ಕೆ ತೆರಳುವ ಶಿಲ್ಪಿಯ ಕನಸು ನುಚ್ಚುನೂರಾಗುತ್ತದೆ. ಆತ ರಾತ್ರಿ ಒಪ್ಪತ್ತಿನಲ್ಲಿ ಕೆತ್ತನೆ ಮಾಡಿದ ಕೋಟಿಗಿಂತ ಒಂದೇ ಒಂದು ಕಡಿಮೆ ಶಿಲ್ಪಗಳೇ ಉನಕೋಟಿ ಎಂಬ ಕಥೆ ಜನಪದೀಯರಲ್ಲಿದೆ.
ಯುನೆಸ್ಕೋ ವಿಶ್ವ ಪರಂಪರೆ ತಾಣಗಳ ತಾತ್ಕಾಲಿಕ ಪಟ್ಟಿಯಲ್ಲಿರುವ ಉನಕೋಟಿ ಶಿಲ್ಪಗಳಲ್ಲಿ 30 ಅಡಿ ಎತ್ತರದ ಕಾಲಭೈರವೇಶ್ವರ ಪ್ರಮುಖ ಆಕರ್ಷಣೆ. ಆತನ ಶಿರದ ಜಟಾಮುಕುಟವೇ 10 ಅಡಿಗಳಷ್ಟು ಗಾತ್ರವಿದೆ. ಗಣೇಶನ ಅಪರೂಪದ ಶಿಲ್ಪಗಳು ಸಹಿತ ಎಲ್ಲ ದೇವದೇವತೆಯರ ಕೆತ್ತನೆಗಳು ಇಲ್ಲಿವೆ. ಐತಿಹಾಸಿಕವಾಗಿ 8-9ನೇ ಶತಮಾನದ ನಡುವೆ ಪಾಲ ರಾಜವಂಶದ ಕಾಲಘಟ್ಟದಲ್ಲಿ ಈ ಶಿಲ್ಪಗಳು ಕೆತ್ತಲ್ಪಟ್ಟಿವೆ ಎಂದು ಪುರಾತತ್ವ ಇಲಾಖೆ ಅಧ್ಯಯನ ಹೇಳುತ್ತದೆ. ಪ್ರವಾಸೋದ್ಯಮ ತಾಣವಾಗಿ ಉನಕೋಟಿಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಇಲ್ಲಿ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದು, ರಸ್ತೆ ಹಾಗೂ ರೈಲು ಸಂಪರ್ಕಗಳು ಉತ್ತಮಗೊಂಡಿವೆ. ಏಪ್ರಿಲ್ ತಿಂಗಳಲ್ಲಿ ಅಶೋಕಾಷ್ಠಮಿ ಸಂದರ್ಭದಲ್ಲಿ ಇಲ್ಲಿ ಸಹಸ್ರಾರು ಭಕ್ತರು ಉನಕೋಟೀಶ್ವರನಿಗೆ (ಕಾಲಭೈರವೇಶ್ವರ) ಪೂಜೆ ಸಲ್ಲಿಸುತ್ತಾರೆ.
ತ್ರಿಪುರ ದಹನದ ಕಥೆ: ಇನ್ನು ತ್ರಿಪುರ ಹೆಸರಿನೊಂದಿಗೆ ಜೋಡಿಸಿಕೊಂಡಿರುವ ತ್ರಿಪುರ ದಹನದ ಕಥೆಯೂ ಈ ರಾಜ್ಯಕ್ಕೆ ಪಾರಂಪರಿಕ ಪ್ರಭಾವಳಿಯನ್ನು ತಂದುಕೊಟ್ಟಿದೆ. ತಾರಕಾಸುರನ ಸಂಹಾರದ ಬಳಿಕ ಆತನ ಮೂವರು ಮಕ್ಕಳಾದ ತಾರಕಾಕ್ಷ, ಕಮಲಾಕ್ಷ ಮತ್ತು ವಿದ್ಯುನ್ಮಾಲಿ ಬ್ರಹ್ಮದೇವನ ಕುರಿತು ತಪಸ್ಸು ಮಾಡಿ ಅಮರತ್ವದ ವರ ಬೇಡುತ್ತಾರೆ. ಬ್ರಹ್ಮ ನಿರಾಕರಿಸಿದಾಗ, ವಿಲಕ್ಷಣ ವರವೊಂದನ್ನು ಬೇಡುತ್ತಾರೆ. ತಮಗಾಗಿ ಸ್ವರ್ಗ, ಅಂತರಿಕ್ಷ ಹಾಗೂ ಭೂಮಿಯ ಮೇಲೆ ಕ್ರಮವಾಗಿ ಬಂಗಾರ, ಬೆಳ್ಳಿ, ಕಬ್ಬಿಣದ ಮೂರು ಪ್ರತ್ಯೇಕ ಚಲಿಸುವ ನಗರ ನಿರ್ವಣವಾಗಬೇಕು. ಆ ನಗರಗಳು ಸಾವಿರ ವರ್ಷಕ್ಕೊಮ್ಮೆ ಮಾತ್ರ ಒಂದೇ ರೇಖೆಯಲ್ಲಿ ಸಂಧಿಸಬೇಕು. ಆ ಕ್ಷಣದಲ್ಲಿ ಒಂದೇ ಬಾಣದಿಂದ ಮೂರೂ ಪುರಗಳನ್ನು ಭೇದಿಸಬಲ್ಲವನಿಂದ ಮಾತ್ರ ತಮ್ಮ ಮರಣ ಸಂಭವಿಸಬೇಕು ಎಂದು ವರ ಬೇಡುತ್ತಾರೆ. ಬ್ರಹ್ಮನು ‘ತಥಾಸ್ತು’ ಎಂದ ಬಳಿಕ, ಮಯನು ಅಂಥ ಮೂರು ನಗರ ನಿರ್ವಿುಸಿಕೊಡುತ್ತಾನೆ. ಈ ಮೂರೂ ನಗರಗಳು ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದ್ದ ಕಾರಣ ಆ ರಾಕ್ಷಸರ ಉಪಟಳ ತಡೆಯುವುದು ಯಾರಿಂದಲೂ ಸಾಧ್ಯವಾಗುವುದಿಲ್ಲ.
ಹೀಗಾಗಿ ಮಹಾದೇವ ಶಿವನೇ ತ್ರಿಪುರಾಸುರರನ್ನು ಸಂಹರಿಸಲು ಮುಂದಾಗುತ್ತಾನೆ. ಆ ಸಂದರ್ಭದಲ್ಲಿ ಬ್ರಹ್ಮಾಂಡವೇ ರಥವಾಯಿತು. ಸೂರ್ಯ-ಚಂದ್ರರೇ ಚಕ್ರಗಳಾದರು. ಬ್ರಹ್ಮದೇವನೇ ಸಾರಥಿಯಾದನು. ಮೇರು ಪರ್ವತವೇ ಬಿಲ್ಲಾದರೆ, ವಾಸುಕಿ ಬಿಲ್ಲಿನ ಹೆದೆಯಾದನು. ಸಾಕ್ಷಾತ್ ಭಗವಾನ್ ವಿಷ್ಣು ಬಾಣದ ಮುಂಭಾಗ, ಅಗ್ನಿ ಬಾಣದ ತುದಿ ಹಾಗೂ ವಾಯು ಬಾಣದ ಪುಕ್ಕಗಳಾದರು. ಸರಿಯಾಗಿ ಸಾವಿರ ವರ್ಷ ಕಳೆದ ನಂತರ ಅಭಿಜಿನ್ ಮುಹೂರ್ತದಲ್ಲಿ ಮೂರೂ ನಗರಗಳು ಒಂದು ರೇಖೆಯಲ್ಲಿ ಸಂಧಿಸುವ ಸಂದರ್ಭದಲ್ಲಿ ತಮ್ಮೆಲ್ಲರ ಸಾಮೂಹಿಕ ಶಕ್ತಿಯಿಂದ ತ್ರಿಪುರಾಸುರರು ಸಾಯಲಿದ್ದಾರೆ ಎಂಬ ಅಹಂಕಾರ ದೇವತೆಗಳಲ್ಲಿ ಕಾಣಿಸಿಕೊಂಡಿತು. ಇದನ್ನು ಅರಿತ ಶಿವನು ಕಿರುನಗೆಯನ್ನು ಬೀರಿದನು. ಆ ಮಂದಹಾಸದಿಂದ ಹೊರಹೊಮ್ಮಿದ ಜ್ವಾಲೆಯು ತ್ರಿಪುರಗಳನ್ನು ಸುಟ್ಟು ಭಸ್ಮಮಾಡಿತು. ಆಗ ಶಿವನು ಪಾಶುಪತಾಸ್ತ್ರ ಪ್ರಯೋಗಿಸಿ ಮೂರೂ ರಾಕ್ಷಸರನ್ನು ಸಂಹರಿಸಿ ತ್ರಿಪುರಾಂತಕನೆನಿಸಿದನು. ಈ ತ್ರಿಪುರ ದಹನ ಮತ್ತು ತ್ರಿಪುರಾಸುರರ ಸಂಹಾರದ ಪೌರಾಣಿಕ ಕಥೆ ಜೋಡಣೆಗೊಂಡಿರುವ ಕಾರಣ ತ್ರಿಪುರಕ್ಕೆ ಪೌರಾಣಿಕ ಮಹತ್ವ ಬಂದಿದೆ.
ಮಹಾಭಾರತದಲ್ಲಿ ಧರ್ಮರಾಜನು ರಾಜಸೂಯಯಾಗ ಮಾಡಿದಾಗ ಸಹದೇವನು ಪೂರ್ವದಿಕ್ಕಿನಲ್ಲಿ ತ್ರಿಪುರದ ರಾಜನನ್ನು ಸೋಲಿಸಿದ ಉಲ್ಲೇಖ ಬರುತ್ತದೆ. ಅದು ಈಗಿನ ತ್ರಿಪುರವೇ ಎಂಬ ವಾದವಿದೆ. ಆದರೆ, ಮತ್ಸ್ಯಪುರಾಣ ಮತ್ತು ಪದ್ಮಪುರಾಣಗಳಲ್ಲಿ ಮಧ್ಯಪ್ರದೇಶದ ನರ್ಮದಾ ನದಿ ತೀರದಲ್ಲಿರುವ ತ್ರಿಪುರಿ ಎಂಬ ಪ್ರದೇಶ ತ್ರಿಪುರ ದಹನ ನಡೆದ ಜಾಗವೇ ಹೊರತು ತ್ರಿಪುರ ರಾಜ್ಯವಲ್ಲ ಎಂದು ಕೆಲವರು ವಾದಿಸುತ್ತಾರೆ. ಆದರೆ, ತ್ರಿಪುರ ಶೈವ ಕ್ಷೇತ್ರವಾಗಿರುವುದು, ಉನಕೋಟೀಶ್ವರ ಸಹಿತ ಉನಕೋಟಿಯ ಶೈವ ಶಿಲ್ಪಗಳು, ತ್ರಿಪುರ ಸುಂದರಿ ಶಕ್ತಿಪೀಠ ಇವೆಲ್ಲವೂ ತ್ರಿಪುರವೇ ತ್ರಿಪುರ ದಹನದ ತಾಣ ಎಂಬ ವಾದ ಮಂಡನೆಗೆ ಪೂರಕವಾಗಿ ಬಳಕೆಯಾಗುತ್ತಿದೆ.
ನೀರಮಹಲ್: ತ್ರಿಪುರದ ಮತ್ತೊಂದು ಆಕರ್ಷಣೆ ಅಗರ್ತಲಾದಿಂದ 53 ಕಿ.ಮೀ. ದೂರದಲ್ಲಿರುವ ಮೇಲಘರ್ ಎಂಬಲ್ಲಿ ರುದ್ರಸಾಗರ ಸರೋವರದ ನಡುವೆ ನಿರ್ವಣಗೊಂಡಿರುವ ನೀರ್ವುಹಲ್ ಅಥವಾ ವಾಟರ್ ಪ್ಯಾಲೇಸ್. 1921ರಿಂದ 1938ರ ಅವಧಿಯಲ್ಲಿ ಮಾಣಿಕ್ಯ ವಂಶದ ರಾಜನ ಇಚ್ಛೆಯಂತೆ ಬ್ರಿಟಿಷ್ ವಾಸ್ತುಶಿಲ್ಪಿಗಳು ಇದನ್ನು ನಿರ್ವಿುಸಿದ್ದು ಇಲ್ಲಿ ಪ್ರತೀ ವರ್ಷ 3 ದಿನಗಳ ಜಲ ಉತ್ಸವ ನಡೆಯುತ್ತದೆ. ಒಟ್ಟಿನಲ್ಲಿ ತ್ರಿಪುರ ದೇಶದ ಈಶಾನ್ಯ ಮೂಲೆಯಲ್ಲಿರುವ ವಿಸ್ಮಯದ ಖಜಾನೆ ಎನ್ನಲಡ್ಡಿಯಿಲ್ಲ.
(ಲೇಖಕರು ‘ವಿಜಯವಾಣಿ’ ಸೀನಿಯರ್ ಡೆಪ್ಯೂಟಿ ಎಡಿಟರ್)