ದಾಸ್ಯಭಕ್ತಿಯ ಪರಾಕಾಷ್ಠೆ ವೀರ ಹನುಮನ ರಾಮನಿಷ್ಠೆ

Hanumajayanti
Hanumajayanti
Published on
ಸೇವಕತನದ ರುಚಿ ಹನುಮಂತಗಲ್ಲದೆ | ಭಾವಿಸಿ ನೋಡಲು ಅನ್ಯರಿಗುಂಟೆ ||
ದೇವರದೇವ ಶ್ರೀರಾಮಚಂದ್ರನ ಪಾದ | ಸೇವೆಯ ಮಾಡುವ ಭಾಗ್ಯ ಹನುಮಗೇ || (ಪುರಂದರ ದಾಸರು)
ಜಗತ್ತು ಸಾಕ್ಷಿಯಾದ ಅತ್ಯಂತ ವೈಭವದ ರಾಜ್ಯಾಭಿಷೇಕವೆಂದರೆ ಅದು ಅಯೋಧ್ಯೆಯಲ್ಲಿ ಶ್ರೀರಾಮನ ಪಟ್ಟಾಭಿಷೇಕ. ಶ್ರೀರಾಮಚಂದ್ರನು ಪಟ್ಟಾಭಿಷೇಕ ಸಮಾರಂಭದ ಬಳಿಕ ವಿಭೀಷಣ, ಸುಗ್ರೀವ, ಮೈಂದ, ದ್ವಿವಿದ, ನೀಲ, ಅಂಗದ.. ಸಹಿತ ಸಮಸ್ತ ವಾನರ ಪ್ರಮುಖರಿಗೆ, ಅತಿಥಿ, ಅಭ್ಯಾಗತರಿಗೆ ಯಥೋಚಿತ ಉಡುಗೊರೆಗಳನ್ನು ನೀಡಿ ಸತ್ಕರಿಸುತ್ತಾನೆ. ಆದರೆ, ಹನುಮಂತ ಮಾತ್ರ ತನಗೆ ಯಾವುದೇ ಬಾಹ್ಯ ಉಡುಗೊರೆಗಳು ಬೇಡ, ನಿನ್ನ ಸೇವಕತನವನ್ನು ಕರುಣಿಸು ಎಂದು ಬೇಡಿಕೊಳ್ಳುತ್ತಾನೆ.
ಸ್ನೇಹೋ ಮೇ ಪರಮೋ ರಾಜಂಸ್ತ್ವಯಿ ತಿಷ್ಠತು ನಿತ್ಯದಾ | ಭಕ್ತಿಶ್ಚ ನಿಯತಾ ವೀರ ಭಾವೋ ನಾನ್ಯತ್ರ ಗಚ್ಛತು || ನಿನ್ನ ಮೇಲೆ ನನಗಿರುವ ಅಪಾರವಾದ, ಪರಮ ಪವಿತ್ರವಾದ ಭಕ್ತಿಯು ಶಾಶ್ವತವಾಗಿರಲಿ. ನನ್ನ ಮನಸ್ಸು ಬೇರೆಲ್ಲೂ (ಅನ್ಯತ್ರ) ವಿಚಲಿತವಾಗದಂತೆ, ಸದಾಕಾಲ ನಿನ್ನಲ್ಲೇ ಸ್ಥಿರವಾಗಿರಲಿ ಎಂದು ಹನುಮಂತನು ವಿಶೇಷವಾದ ವರವನ್ನು ಬೇಡುತ್ತಾನೆ. ಯಾವದ್ರಾಮಕಥಾ ಲೋಕೇ ಚರಿಷ್ಯತಿ ಮಹೀತಲೇ | ತಾವತ್ಛರೀರೇ ವತ್ಸ್ಯಂತು ಪ್ರಾಣಾಃ ಮಮ ನ ಸಂಶಯಃ | ಈ ಲೋಕದಲ್ಲಿ ಎಲ್ಲಿಯವರೆಗೆ ರಾಮಕಥೆಯು ಪ್ರಚುರವಾಗಿರುವುದೋ, ಅಲ್ಲಿಯವರೆಗೆ ನನ್ನ ದೇಹದಲ್ಲಿ ಪ್ರಾಣವು ನೆಲೆಸಿರಲಿ ಎಂಬ ಹನುಮಂತನ ಕೋರಿಕೆಗೆ ಶ್ರೀರಾಮಚಂದ್ರನು ‘ಹಾಗೆಯೇ ಆಗಲಿ’ ಎನ್ನುತ್ತಾನೆ.
ಅಂದರೆ, ಹನುಮಂತನಿಗೆ ಸದಾ ಕಾಲ ರಾಮ ಧ್ಯಾನ, ರಾಮನಾಮ ಪಾರಾಯಣ ಶ್ರವಣದ ಎರಡು ಅಪೇಕ್ಷೆ ಬಿಟ್ಟರೆ ಬೇರಾವ ಆಸೆಯೂ ಇರಲಿಲ್ಲ. ಪ್ರತಿಯಾಗಿ ಶ್ರೀರಾಮನು ಕೂಡ, ‘ನೀನು ನನಗೆ ಮಾಡಿರುವ ಒಂದೊಂದು ಉಪಕಾರಕ್ಕೂ ನನ್ನ ಪ್ರಾಣವನ್ನೇ ನೀಡಿದರೂ ಸಾಲದು’ ಎಂದು ಹನುಮನ ಬಗ್ಗೆ ಭಾವುಕನಾಗಿ ಹೊಗಳುತ್ತಾನೆ. ಏವಮೇತತ್ಕಪಿಶ್ರೇಷ್ಠ ಭವಿತಾ ನಾತ್ರ ಸಂಶಯಃ | ಚರಿಷ್ಯತಿ ಕಥಾ ಯಾವದೇಷಾ ಲೋಕೇ ಚ ಮಾಮಿಕಾ || ತಾವತ್ತೇ ಪ್ರೀತಿರಸ್ಮತ್ಸು ಪ್ರಾಣಾಶ್ಚ ತವ ತಿಷ್ಠತು || ಕಪಿಶ್ರೇಷ್ಠನೇ, ಈ ಭೂಮಂಡಲದ ಮೇಲೆ ಎಲ್ಲಿಯವರೆಗೆ ನನ್ನ ಕಥೆಯು ಇರುವುದೋ ಅಲ್ಲಿಯವರೆಗೆ ನಿನ್ನ ಪ್ರಾಣವು ದೇಹದಲ್ಲಿರುತ್ತದೆ ಹಾಗೂ ನಮ್ಮ ಮೇಲಿನ ನಿನ್ನ ಪ್ರೀತಿಯು ಸ್ಥಿರವಾಗಿರುತ್ತದೆ ಎಂದು ಚಿರಂಜೀವಿತ್ವವನ್ನು ಹನುಮನಿಗೆ ಶ್ರೀರಾಮನು ದಯಪಾಲಿಸುತ್ತಾನೆ.
ವಿಶೇಷವೆಂದರೆ, ಹನುಮಂತನಿಗೆ ಚಿರಂಜೀವಿಯಾಗು ಎಂಬ ವರವನ್ನು ಶ್ರೀರಾಮನಿಗೂ ಮೊದಲೇ ಸೀತಾಮಾತೆಯೂ ದಯಪಾಲಿಸಿರುತ್ತಾಳೆ. ಹನುಮಂತನು ಲಂಕೆಯ ಅಶೋಕವನದಲ್ಲಿ ಸೀತೆಯನ್ನು ಕಂಡು, ಆಕೆಯಿಂದ ಚೂಡಾಮಣಿಯನ್ನು ಪಡೆದು ಅಲ್ಲಿಂದ ಹಿಂದಿರುಗುವ ಸಂದರ್ಭದಲ್ಲಿ ‘ಅಜರಶ್ಚಾಮರಶ್ರ್ಚೈವ ಭವತಿ ತ್ವಂ ಹರೀಶ್ವರ’ - ವಾನರಶ್ರೇಷ್ಠನೇ ನೀನು ಮುಪ್ಪಿಲ್ಲದವನೂ, ಮರಣವಿಲ್ಲದವನೂ ಆಗು’ ಎಂದು ಸೀತಾಮಾತೆ ಅನುಗ್ರಹಿಸುತ್ತಾಳೆ. ಹೀಗೆ ಸೀತೆಯು ನೀಡಿದ ವರಕ್ಕೆ, ‘ನನ್ನ ಚರಿತ್ರೆ ಇರುವವರೆಗೆ’ ಎಂದು ರಾಮನು ಚಿರಂಜೀವಿತ್ವದ ಅಧಿಕೃತ ಮೊಹರು ಒತ್ತುತ್ತಾನೆ.
ಯತ್ರ ಯತ್ರ ರಘುನಾಥ ಕೀರ್ತನಂ ತತ್ರ ತತ್ರ ಕೃತಮಸ್ತಕಾಂಜಲಿಮ್ | ಭಾಷ್ಪವಾರಿ ಪರಿಪೂರ್ಣಲೋಚನಂ ಮಾರುತಿಂ ನಮತ ರಾಕ್ಷಸಾಂತಕಮ್ || ಜಗತ್ತಿನ ಯಾವುದೇ ಸ್ಥಳದಲ್ಲಿ, ಯಾವುದೇ ಕಾಲದಲ್ಲಿ ರಘುನಾಥನ ಕೀರ್ತನೆ ನಡೆದರೂ, ಅಲ್ಲಿ ರಾಮಭಕ್ತಿಯ ಭಾವಪರವಶತೆಯಿಂದ ಕಣ್ಣಲ್ಲಿ ಆನಂದಭಾಷ್ಪ ತುಂಬಿಕೊಂಡು, ಕೈಮುಗಿದು ಭಕ್ತಿಯಿಂದ ಕುಳಿತಿರುವ ರಾಕ್ಷಸಾಂತಕ ಹನುಮಂತನಿಗೆ ನಮಿಸುವ ಪ್ರಸಿದ್ಧ ಶ್ಲೋಕವು ಆಂಜನೇಯನ ಚಿರಂಜೀವಿತ್ವವನ್ನು ಸಾರುತ್ತದೆ.
ಹನುಮಂತನೆಂದರೆ ತಾಯಿ ಸೀತಾಮಾತೆಗೆ ಪುತ್ರವಾತ್ಸಲ್ಯ. ವಾಲ್ಮೀಕಿ ರಾಮಾಯಣದಲ್ಲಿ ವರ್ಣಿಸಲಾಗಿರುವಂತೆ, ಪಟ್ಟಾಭಿಷೇಕದ ನಂತರ ಶ್ರೀರಾಮನು ಅಮೂಲ್ಯವಾದ ಮುತ್ತಿನಹಾರವನ್ನು ಸೀತೆಗೆ ನೀಡಿ, ನಿನಗೆ ಪ್ರೀತಿಪಾತ್ರರಾದವರಿಗೆ ಉಡುಗೊರೆಯಾಗಿ ಕೊಡುವಂತೆ ಹೇಳುತ್ತಾನೆ. ಸೀತೆಯು ಹನುಮಂತನಿಗೆ ಆ ಹಾರವನ್ನು ನೀಡುತ್ತಾಳೆ. ಅಷ್ಟೇ ಅಲ್ಲ, ಸಮುದ್ರವನ್ನು ಲಂಘಿಸಿ ಲಂಕೆಗೆ ಆಗಮಿಸಿ, ಶ್ರೀರಾಮನ ಕ್ಷೇಮ ಸಮಾಚಾರವನ್ನು ತಿಳಿಸಿ, ರಾಮನು ಕೊಟ್ಟಿದ್ದ ಉಂಗುರವನ್ನು ತಲುಪಿಸಿದ ಮಾರುತಿಗೆ ಸೀತಾಮಾತೆ ಎಂಟು ಸಿದ್ಧಿ ಹಾಗೂ ಒಂಬತ್ತು ನಿಧಿಗಳನ್ನು ವರವಾಗಿ ಪ್ರದಾನಿಸುತ್ತಾಳೆ ಎಂದು ಗೋಸ್ವಾಮಿ ತುಳಸೀದಾಸರು ‘ಅಷ್ಟ ಸಿದ್ಧಿ ನವ ನಿಧಿ ಕೆ ದಾತಾ | ಅಸ ಬರ ದೀನ್ ಜಾನಕೀ ಮಾತಾ’ || ಎಂದು ಹನುಮಾನ್ ಚಾಲೀಸಾದಲ್ಲಿ ವರ್ಣಿಸುತ್ತಾರೆ. ಯೋಗಶಾಸ್ತ್ರದಲ್ಲಿ ಬರುವ ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯ, ಈಶಿತ್ವ, ವಶಿತ್ವ ಎಂಬ ಎಂಟು ಸಿದ್ಧಿಗಳು ಹಾಗೂ ಕುಬೇರನ ಬಳಿ ಇರುವ ಪದ್ಮ, ಮಹಾಪದ್ಮ, ಶಂಖ, ಮಕರ, ಕಚ್ಛಪ, ಮುಕುಂದ, ಕುಂದ, ನೀಲ, ಖರ್ವ ಎಂಬ ನವನಿಧಿಗಳನ್ನು ಜಾನಕಿಯು ವರವಾಗಿ ಕರುಣಿಸುತ್ತಾಳೆ.
ಭಗವಂತನನ್ನು ತಲುಪಲು ಇರುವ ಸುಲಭ ದಾರಿಯೇ ಭಕ್ತಿ. ದೈವಭಕ್ತಿಯಲ್ಲಿ ನವ ವಿಧಗಳಿವೆ. ಅವುಗಳೇ ಶ್ರವಣ (ಪರೀಕ್ಷಿತ), ಕೀರ್ತನ (ನಾರದ), ಸ್ಮರಣ (ಪ್ರಹ್ಲಾದ), ಪಾದಸೇವನ (ಮಹಾಲಕ್ಷ್ಮೀ), ಅರ್ಚನ (ಪೃಥು ಮಹಾರಾಜ), ವಂದನ (ಅಕ್ರೂರ), ದಾಸ್ಯ (ಹನುಮಂತ), ಸಖ್ಯ (ಅರ್ಜುನ), ಆತ್ಮನಿವೇದನ (ಬಲಿ ಚಕ್ರವರ್ತಿ). ಹನುಮಂತ ರಾಮನಲ್ಲಿ ಬೇಡಿಕೊಂಡಿದ್ದು ದಾಸ್ಯ ಭಕ್ತಿ. ‘ಸೇವಕತನ ಕೊಡು ಎನಗೆ.. ರಾಮಾ..’, ‘ನಿನ್ನ ಪಾದಸೇವೆ ಕೊಡು ಎನಗೆ..’ ಎನ್ನುವ ಹನುಮನ ಪಾಲಿಗೆ ‘ರಾಮ ಭಕ್ತಿಯೇ ಸಾಮ್ರಾಜ್ಯ’. ‘ನಾನು ನಿನ್ನಯ ದಾಸನಹುದು| ನೀನು ಈ ಜಗದೀಶನಹುದು| ಬಾನುಕೋಟಿ ಪ್ರಕಾಶನೇ| ಸಂಗೀತಗಾನ ವಿನೋದ ರಂಗ|| ನಾ ನಿನ್ನ ದಾಸನಯ್ಯ | ಸೀತಾರಾಮ | ನಾ ನಿನ್ನ ದಾಸನಯ್ಯ|| ಎಂಬಿತ್ಯಾದಿಯಾಗಿ ಹನುಮಂತನ ದಾಸ್ಯ ಭಕ್ತಿಯನ್ನು ಪುರಂದರ ದಾಸರು, ಕನಕ ದಾಸರು, ವಿಜಯ ದಾಸರು, ಗೋಪಾಲದಾಸರು, ಜಗನ್ನಾಥ ದಾಸರು, ಪ್ರಸನ್ನವೆಂಕಟ ದಾಸರಾದಿಯಾಗಿ ಕನ್ನಡದ ಎಲ್ಲ ಹರಿದಾಸ ವರೇಣ್ಯರು ಪರಿಪರಿಯಾಗಿ ಹಾಡಿ ಹೊಗಳಿದ್ದಾರೆ.
ವಾಯು ಪುತ್ರ ಹನುಮಂತ ಅಪಾರ ಬಲವಂತ. ಸೂರ್ಯನನ್ನೇ ಹಣ್ಣೆಂದು ಭ್ರಮಿಸಿ ತಿನ್ನಲು ಯತ್ನಿಸಿದವನು. ತನ್ನ ಬಾಲದ ಬೆಂಕಿಯಿಂದಲೇ ಲಂಕಾ ನಗರಿಯನ್ನು ಸುಟ್ಟವನು. ಸಂಜೀವಿನಿ ಪರ್ವತವನ್ನೇ ಹೊತ್ತು ತಂದವನು. ಇಚ್ಛಾಮಾತ್ರದಿಂದಲೇ ಅಣುವಿನ ಗಾತ್ರಕ್ಕೆ ದೇಹ ಕುಗ್ಗಿಸಿಕೊಳ್ಳುವ, ಬೃಹದಾಕಾರಕ್ಕೆ ಹಿಗ್ಗಿಸಿಕೊಳ್ಳುವ, ಕುಂತಿ ಪುತ್ರ ಭೀಮನಿಗೆ ಬಾಲವನ್ನು ಅಲ್ಲಾಡಿಸಲೂ ಸಾಧ್ಯವಾಗದಂತೆ ದೇಹದ ತೂಕ ಹೆಚ್ಚಿಸಿಕೊಳ್ಳುವ, ಹತ್ತಿಯಂತೆ ಹಗುರವಾಗಿಸಿಕೊಳ್ಳುವ, ಮನಸ್ಸಿನ ವೇಗದಲ್ಲಿ ಕ್ಷಣಮಾತ್ರದಲ್ಲಿ ಎಲ್ಲಿಗೆ ಬೇಕಾದರೂ ತಲುಪುವ, ಪ್ರಕೃತಿ ಪ್ರಾಣಿಗಳ ಮೇಲೆ ಪ್ರಭಾವ ಬೀರುವ, ಎದುರಿಗಿದ್ದವರನ್ನು ವಶೀಕರಣ ಮಾಡಿಕೊಳ್ಳುವ ಅಷ್ಟಸಿದ್ಧಿಗಳು ಇದ್ದರೂ ತಾನು ಶ್ರೀರಾಮನ ಸೇವಕ ಎಂಬ ಸಮರ್ಪಣಾಭಾವದಿಂದ ಸಾರ್ಥಕ್ಯ ಕಂಡವನು ಹನುಮಂತ. ಅಶೋಕವನದಲ್ಲಿ ಕೋಲಾಹಲವೆಬ್ಬಿಸಿ ರಾವಣನ ಒಡ್ಡೋಲಗಕ್ಕೆ ಆಗಮಿಸುವ ಹನುಮಂತ, ರಾವಣನ ಎದುರು ತನ್ನನ್ನು ತಾನು ‘ದಾಸೋಹಂ ಕೋಸಲೇಂದ್ರಸ್ಯ’ - ಕೋಸಲಾಧಿಪತಿ ಶ್ರೀರಾಮನ ದಾಸ ನಾನು’ ಎಂದು ಪರಿಚಯಿಸಿಕೊಳ್ಳುತ್ತಾನೆ.
ಲಂಕಾಯುದ್ಧದಲ್ಲಿ ಹನುಮಂತ ರಾವಣರ ನಡುವೆ ಒಮ್ಮೆ ಮುಷ್ಟಿ ಯುದ್ಧ ನಡೆಯುತ್ತದೆ. ರಾವಣನ ಎದೆಗೆ ಹನುಮಂತ ಮೊದಲು ಮುಷ್ಟಿ ಪ್ರಹಾರ ಮಾಡುತ್ತಾನೆ. ಆ ಏಟಿಗೆ ಕೈಲಾಸ ಪರ್ವತವು ಭೂಕಂಪಕ್ಕೆ ಸಿಲುಕಿ ನಡುಗಿದಂತೆ ರಾವಣನು ಅದುರಿಹೋಗಿ ಮೂರ್ಛೆ ತಪ್ಪುತ್ತಾನೆ. ಸ್ವಲ್ಪ ಹೊತ್ತಿನ ಬಳಿಕ ಸಾವರಿಸಿಕೊಂಡು, ನಿನ್ನ ಪ್ರಹಾರವನ್ನು ಮೆಚ್ಚಿದೆ ಎಂದು ಹನುಮನನ್ನು ಹೊಗಳುತ್ತಾನೆ. ಆದರೆ, ನನ್ನ ಗುದ್ದು ತಿಂದರೂ ನೀನು ಬದುಕುಳಿದೆಯಲ್ಲ ಎಂದು ಹನುಮ ವಿಷಾದಿಸುತ್ತಾನೆ. ಇದಾದ ಬಳಿಕ ರಾವಣ ಹನುಮಂತನ ಎದೆಗೆ ಇರುವ ಬಲವನ್ನೆಲ್ಲ ಹಾಕಿ ಗುದ್ದುತ್ತಾನೆ. ಒಂದು ಕ್ಷಣ ಹನುಮಂತನೂ ಅಲ್ಲಾಡಿಹೋಗುತ್ತಾನೆ. ಹನುಮಂತ ಎರಡನೇ ಬಾರಿ ಪ್ರಹಾರ ಮಾಡಲು ಮುಂದಾದಾಗ ರಾವಣ ಹೆದರಿ ಅಲ್ಲಿಂದ ಪಲಾಯನಗೈಯುತ್ತಾನೆ ಎಂದು ಮೂಲರಾಮಾಯಣದಲ್ಲಿದೆ. ಆದರೆ, ನಂತರದ ಕವಿಗಳು ಈ ಪ್ರಸಂಗವನ್ನು ಸ್ವಲ್ಪ ವಿಸ್ತರಿಸಿದ್ದಾರೆ.
ಹನುಮಂತ ಎರಡನೇ ಬಾರಿ ಸರ್ವಶಕ್ತಿಯನ್ನೂ ಹಾಕಿ ರಾವಣನ ಎದೆಗೆ ಗುದ್ದಿದಾಗ, ದಶಕಂಠನ ವಜ್ರಕಾಯ ಜರ್ಜರಿತವಾಗುತ್ತದೆ. ಆತ ರಕ್ತವಾಂತಿ ಮಾಡಿಕೊಂಡು ನೆಲಕ್ಕುರುಳುತ್ತಾನೆ. ಆತನ ದೇಹದ ಮಾಂಸ-ಮಜ್ಜೆಗಳು ಚೆಲ್ಲಾಪಿಲ್ಲಿಯಾಗಿ ಬೀಳುತ್ತವೆ. ಇದನ್ನು ಕಂಡು ಹನುಮಂತ, ಅಯ್ಯೋ! ಇದೆಂಥ ಕೆಲಸ ಮಾಡಿದೆ ಎಂದು ಪ್ರಲಾಪಿಸುತ್ತಾನೆ. ಯುದ್ಧದಲ್ಲಿ ರಾವಣನನ್ನು ಕೊಂದು, ಸೀತೆಯನ್ನು ಬಿಡಿಸುವುದಾಗಿ ಶ್ರೀರಾಮಚಂದ್ರನೇ ಶಪಥ ಮಾಡಿರುವಾಗ, ನಾನೇ ರಾವಣನನ್ನು ಕೊಂದುಬಿಟ್ಟೆನಲ್ಲ! ಪ್ರಭು ಶ್ರೀರಾಮನ ಕೈಯಲ್ಲಿ ಸಾಯಬೇಕಿದ್ದ ರಾವಣನನ್ನು ಸೇವಕನಾದ ನಾನೇ ಸಂಹರಿಸಿ ಅಪರಾಧ ಮಾಡಿಬಿಟ್ಟೆ ಎಂದು ಶೋಕಿಸುತ್ತಾನೆ. ನಂತರ ಚೆಲ್ಲಾಪಿಲ್ಲಿಯಾಗಿದ್ದ ಮಾಂಸದ ಮುದ್ದೆಗಳನ್ನು ಎಚ್ಚರಿಕೆಯಿಂದ ಜೋಡಿಸಿ, ರಾಮಸ್ಮರಣೆಯ ಬಲದಿಂದ ರಾವಣನನ್ನು ಬದುಕಿಸುತ್ತಾನೆ.
ನಿನ್ನ ಸಾವು ಪ್ರಭು ಶ್ರೀರಾಮನ ಕೈಯಲ್ಲಿದೆ, ಯುದ್ಧ ಮಾಡು ಹೋಗು ಎಂದು ರಾವಣನನ್ನು ಎಬ್ಬಿಸಿ ಅಲ್ಲಿಂದ ಕಳುಹಿಸುತ್ತಾನೆ. ಅಂದರೆ, ಸ್ವತಃ ಸರ್ವಶಕ್ತಿವಂತನಾಗಿದ್ದರೂ, ರಾವಣನನ್ನು ಕೊಂದು ಯುದ್ಧ ಮುಗಿಸುವಷ್ಟು ಸಾಮರ್ಥ್ಯವಿದ್ದರೂ, ಪ್ರಭು ಶ್ರೀರಾಮನ ಸೇವಕತನಕ್ಕೆ ಸಮರ್ಪಿಸಿಕೊಂಡ ಅಪರೂಪದ ದಾಸ್ಯಭಕ್ತಿಗೆ ಹನುಮಂತ ನಿದರ್ಶನವಾಗುತ್ತಾನೆ.
ಮನೋಜವಂ ಮಾರುತ ತುಲ್ಯ ವೇಗಂ | ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ ||
ವಾತಾತ್ಮಜಂ ವಾನರಯೂಥ ಮುಖ್ಯಂ | ಶ್ರೀರಾಮದೂತಂ ಶಿರಸಾ ನಮಾಮಿ ||
ಮನಸ್ಸಿಗಿಂತ ಮಿಗಿಲಾದ ವಾಯುವೇಗವುಳ್ಳವನು, ಇಂದ್ರಿಯ ನಿಗ್ರಹ ಹೊಂದಿರುವವನೂ, ಬುದ್ಧಿವಂತರಲ್ಲೇ ಶ್ರೇಷ್ಠನೂ, ವಾಯುದೇವರ ಪುತ್ರನೂ, ವಾನರ ಸೈನ್ಯದ ಪ್ರಮುಖನೂ ಆಗಿದ್ದರೂ ಅಶೋಕವನದಲ್ಲಿ ಮೊದಲ ಬಾರಿ ಸೀತೆಯನ್ನು ಕಂಡಾಗ ‘ದೂತೋಹಂ ರಾಮಚಂದ್ರಸ್ಯ’ ಎಂದು ಪರಿಚಯಿಸಿಕೊಳ್ಳುವ ಹನುಮಂತನನ್ನು ಪೂಜಿಸುವವರಿಗೆ ಜೀವನದಲ್ಲಿ ಸೋಲೆಂಬುದಿಲ್ಲ.
ಸಂತ ಭದ್ರಗಿರಿ ಅಚ್ಯುತದಾಸರು ಮುಖ್ಯಪ್ರಾಣ ದೇವರ ಕುರಿತು ರಚಿಸಿರುವ ಸುಂದರ ಕೀರ್ತನೆಯೊಂದಿಗೆ ಹನುಮ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸೋಣ.
ಅಂಜನಿ ನಂದನ | ಸ್ವಾಮಿ ಮುಖ್ಯಪ್ರಾಣಾ || ನೀಡು ಅಭಯ ದಾನ | ದಯಾ ಸಂಪೂರ್ಣ|| ರಾಮ ಧ್ಯಾನರತ | ರಾಮ ದೂತ ಪ್ರಖ್ಯಾತಾ || ರಾಮ ಮಂತ್ರ ನೇಮದಿ | ಕಾಮಾರಿಗರುಹಿದಾತ || ಸಂತ ಜನ ಪ್ರೇಮಿ | ಮಂತ್ರ ಸಿದ್ಧ ಕರುಣಿ || ಚಿಂತೆ ಬಿಡಿಸಯ್ಯಾ | ಹನುಮಂತಾ ಮಹಿಮತ್ರಾಣಿ || ಧನ್ಯ ವಾಯು ನಂದನಾ | ಜ್ಞಾನ ಭಕ್ತಿ ಪರಿಪೂರ್ಣಾ || ಮಾನ್ಯ ಮೂಲ ನಾರಾಯಣ | ನಾಮ ಪ್ರೇಮ ಸಂಪನ್ನಾ ||
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net