ಸ್ಕ್ವ್ಯಾಷ್ ಮಿಂಚು ಅನಾಹತ್ ಎಂಬ ನವತಾರೆ

ವಿಶೇಷ ಅಂಕಣ
ವಿಶೇಷ ಅಂಕಣ
Published on

(ಲೇಖಕರು ‘ವಿಜಯವಾಣಿ’ ಸೀನಿಯರ್ ಡೆಪ್ಯೂಟಿ ಎಡಿಟರ್)

ಒಂದಲ್ಲ, ಎರಡಲ್ಲ, ನಾಲ್ಕು ವರ್ಷ.. ಒಂದೋ ಕ್ವಾರ್ಟರ್​ಫೈನಲ್, ಇಲ್ಲವೇ ಸೆಮಿಫೈನಲ್.. ಅದಕ್ಕಿಂತ ಮುಂದೆ ಸಾಗುವುದು ಸಾಧ್ಯವೇ ಆಗಿರಲಿಲ್ಲ ಆ ಹುಡುಗಿಗೆ. ಈ ವರ್ಷ ಕೊನೆಯ ಅವಕಾಶವಾಗಿತ್ತು. ಈ ಬಾರಿಯೂ ವಿಫಲವಾಗಿದ್ದರೆ, ನಿರಾಸೆ ಆವರಿಸುತ್ತಿತ್ತು, ಬಹುಶಃ ಜೀವನದ ದಾರಿಯೇ ಬದಲಾಗುತ್ತಿತ್ತು. ಮಾರ್ಚ್​ನಲ್ಲಿ 18ನೇ ಜನ್ಮದಿನ ಆಚರಿಸಿಕೊಂಡಿದ್ದ ಆಕೆ ಮತ್ತೆ ಮುಂದಿನ ವರ್ಷ ಜೂನಿಯರ್ ಹಂತದಲ್ಲಿ ಆಡುವುದು ಸಾಧ್ಯವಿರಲಿಲ್ಲ. ಹಾಗಾಗಿ ಇದು ಆಕೆಯ ಪಾಲಿಗೆ ಕನಸು ನನಸು ಮಾಡಿಕೊಳ್ಳುವುದಕ್ಕೆ ಕೊನೆಯ ಪ್ರಯತ್ನವಾಗಿತ್ತು.

ಕೆಲವು ಸಾಧನೆಗಳ ಮಹತ್ವ ಸಾಧಿಸಿದವರಿಗೆ ಮಾತ್ರ ಗೊತ್ತಿರುತ್ತದೆ. ಸ್ಕ್ವ್ಯಾಷ್

ನಲ್ಲಿ ಜೂನಿಯರ್ ವಿಶ್ವ ಚಾಂಪಿಯನ್​ಷಿಪ್ ಗೆಲ್ಲುವುದು ಎಂಥ ಮಹತ್ವದ ಸಾಧನೆ ಎನ್ನುವುದು ಆ ಆಟ ಆಡಿದವರಿಗೆ ಹಾಗೂ ನಿರಂತರವಾಗಿ ಅನುಸರಿಸಿದವರಿಗೆ ಮಾತ್ರವೇ ಗೊತ್ತು. ಮೊನ್ನೆ ಕೆನಡಾದಲ್ಲಿ ನಡೆದ ವಿಶ್ವ ಜೂನಿಯರ್ ಸ್ಕ್ವ್ಯಾಷ್ ಚಾಂಪಿಯನ್​ಷಿಪ್​ನಲ್ಲಿ ದೆಹಲಿಯ ಹುಡುಗಿ ಅನಾಹತ್ ಸಿಂಗ್ ಸತತ 4 ವರ್ಷಗಳ ನಿರಾಸೆಯ ಬಳಿಕ ಕೊನೆಗೂ 5ನೇ ಪ್ರಯತ್ನದಲ್ಲಿ ಚಾಂಪಿಯನ್ ಪಟ್ಟಕ್ಕೇರಿ ಇತಿಹಾಸ ನಿರ್ವಿುಸಿದರು. ಇದು ಭಾರತೀಯ ಸ್ಕ್ವ್ಯಾಷ್ ಕ್ರೀಡಾವಲಯದ ಪಾಲಿಗೆ ಅಭೂತಪೂರ್ವ ಸಾಧನೆ.

ಸ್ಕ್ವ್ಯಾಷ್​ನಲ್ಲಿ ಇದುವರೆಗೆ ಭಾರತ ಕಂಡ ಸರ್ವಶ್ರೇಷ್ಠ ಆಟಗಾರ್ತಿ ಜೋಷ್ನಾ ಚಿನ್ನಪ್ಪ 2005ರಲ್ಲಿ ಈ ಟೂರ್ನಿಯಲ್ಲಿ ಪ್ರಶಸ್ತಿ ಹೊಸ್ತಿಲವರೆಗೆ ಬಂದು ಫೈನಲ್​ನಲ್ಲಿ ಎಡವಿದ್ದರು. ಅದಾದ ಬಳಿಕ 2010ರಲ್ಲಿ ದೀಪಿಕಾ ಪಲ್ಲಿಕಲ್ ಸೆಮಿಫೈನಲ್ ತಲುಪಿ ಕಂಚಿನ ಸಾಧನೆ ಮಾಡಿದ್ದರು. ಜೋಷ್ನಾ, ದೀಪಿಕಾ ಹಾಗೂ ಸೌರವ್ ಘೋಷಾಲ್ ಸ್ಕ್ವ್ಯಾಷ್​ನಲ್ಲಿ ಭಾರತದ ಅಗ್ರಮಾನ್ಯ ತಾರೆಗಳಾಗಿ ಗುರುತಿಸಿಕೊಂಡರೂ, ವಿಶ್ವ ಮಟ್ಟದಲ್ಲಿ ವ್ಯಕ್ತಿಗತವಾಗಿ ಭಾರತೀಯರ ಸಾಧನೆ ಅಷ್ಟಕ್ಕಷ್ಟೇ ಎನಿಸಿತ್ತು. ಜೋಷ್ನಾ ಮತ್ತು ದೀಪಿಕಾ ಹಾಗೂ ಸೌರವ್ ವಿಶ್ವ ಶ್ರೇಯಾಂಕದಲ್ಲಿ 10ನೇ ಸ್ಥಾನಕ್ಕೇರಿದ್ದೇ ಭಾರತದ ಮಟ್ಟಿಗೆ ಉನ್ನತ ಗೌರವವೆನಿಸಿತ್ತು.

ಭಾರತ ಏಷ್ಯಾಡ್ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟ ಹಾಗೂ ವಿಶ್ವ ಚಾಂಪಿಯನ್​ಷಿಪ್ ಗಳಲ್ಲಿ ಈ ಹಿಂದೆ ಡಬಲ್ಸ್, ಮಿಶ್ರ ಡಬಲ್ಸ್​ನಲ್ಲಿ ಸ್ವರ್ಣ ಸಾಧನೆ ಮಾಡಿದ್ದರೂ, ಈ ವರ್ಷವೇ ಭಾರತ ಚೆನ್ನೈನಲ್ಲಿ ನಡೆದ ಸ್ಕ್ವ್ಯಾಷ್ ವಿಶ್ವಕಪ್​ನಲ್ಲಿ ಸಿಂಗಾಪುರವನ್ನು ಸೋಲಿಸಿ ಪ್ರಶಸ್ತಿ ಗೆದ್ದಿತ್ತಾದರೂ, ವೃತ್ತಿಪರ ಸಿಂಗಲ್ಸ್ ನಲ್ಲಿ ಯಾವುದೇ ಭಾರತೀಯರು ಪ್ರಶಸ್ತಿ ಗೆದ್ದಿರಲಿಲ್ಲ. ಹೀಗಾಗಿ ಅನಾಹತ್ ಟ್ರೋಫಿ ಭಾರತದ ಮಟ್ಟಿಗೆ ಪ್ರಪ್ರಥಮ ವಿಶ್ವ ಯಶಸ್ಸು.

ಈಜಿಪ್ಟ್ ಪ್ರಾಬಲ್ಯ

ವಿಶ್ವದ 185ಕ್ಕೂ ಹೆಚ್ಚು ದೇಶಗಳಲ್ಲಿ ಸ್ಕ್ವ್ಯಾಷ್​ ಜನಪ್ರಿಯ ಕ್ರೀಡೆಯಾಗಿದೆ. ಜಗದಗಲ ಸುಮಾರು 2 ಕೋಟಿಗೂ ಅಧಿಕ ಹಿರಿ-ಕಿರಿಯ ಸ್ಕ್ವ್ಯಾಷ್​ ಆಟಗಾರರಿದ್ದಾರೆ. ಆದರೆ, ಈ ಆಟದ ಮೇಲೆ ಈಜಿಪ್ಟ್ ಸಾಧಿಸಿರುವ ಪ್ರಭುತ್ವಕ್ಕೆ ಸವಾಲೊಡ್ಡುವುದು ಇದುವರೆಗೆ ಯಾವುದೇ ದೇಶಕ್ಕೆ ಸಾಧ್ಯವಾಗಿಲ್ಲ. ಸ್ಕ್ವ್ಯಾಷ್​ನಲ್ಲಿ ಈಜಿಪ್ಟ್​ನ ಏಕಮೇವಾದ್ವಿತೀಯ ಪ್ರಾಬಲ್ಯಕ್ಕೆ ಕಾರಣವೇನು ಎನ್ನುವುದು ಅಧ್ಯಯನಾರ್ಹ ವಿಚಾರ. ಈಜಿಪ್ಟ್ ಹಿಂದೆ ಬ್ರಿಟಿಷ್ ರಾಜಪ್ರಭುತ್ವಕ್ಕೆ ಒಳಪಟ್ಟಿದ್ದರೂ, ಸ್ವಾತಂತ್ರ್ಯ ಪಡೆದ ಬಳಿಕ ಕಾಮನ್ವೆಲ್ತ್ ಒಕ್ಕೂಟಕ್ಕೆ ಸೇರ್ಪಡೆಗೊಳ್ಳಲು ನಿರಾಕರಿಸಿತು. ಹೀಗಾಗಿ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಈಜಿಪ್ಟ್ ಪಾಲ್ಗೊಳ್ಳುವುದಿಲ್ಲ. 

ಇನ್ನು ಒಲಿಂಪಿಕ್ಸ್​ನಲ್ಲಿ ಇಲ್ಲಿಯವರೆಗೆ ಸ್ಕ್ವ್ಯಾಷ್​ ಸ್ಪರ್ಧಾಕಣದ ಭಾಗವಾಗಿರಲಿಲ್ಲ. ಹಾಗಾಗಿ ಕಾಮನ್ವೆಲ್ತ್ ಮತ್ತು ಏಷ್ಯಾಡ್​ಗಳಲ್ಲಿ ಈಜಿಪ್ಟ್ ಇಲ್ಲ ಎಂಬ ಕಾರಣಕ್ಕೆ ಅನ್ಯದೇಶಗಳಿಗೆ ಸ್ಕ್ವ್ಯಾಷ್​ ಪದಕ ಗೆಲ್ಲಲು ಸಾಧ್ಯವಾಗುತ್ತಿದೆ. ಆದರೆ, ವಿಶ್ವ ಸ್ಕ್ವ್ಯಾಷ್ ಚಾಂಪಿಯನ್​ಷಿಪ್​ಗಳಲ್ಲಿ ಈಜಿಪ್ಟ್ ಪ್ರಾಬಲ್ಯ ಮುರಿಯುವುದು ಯಾವುದೇ ದೇಶಗಳಿಗೆ ಸಾಧ್ಯವಾಗಿಲ್ಲ. ತೀರಾ ಇತ್ತೀಚಿನ ಉದಾಹರಣೆಗಳನ್ನೇ ಗಮನಿಸುವುದಾದರೂ, 2016ರಿಂದ ಈಚೆಗೆ 10ರಲ್ಲಿ 9 ವರ್ಷ ಈಜಿಪ್ಟ್​ನ ಆಟಗಾರರೇ ವಿಶ್ವ ಚಾಂಪಿಯನ್​ಷಿಪ್ ಗೆದ್ದಿದ್ದಾರೆ. ಮಹಿಳಾ ವಿಭಾಗದಲ್ಲೂ 2015ರಿಂದ ಸತತ 11 ವರ್ಷಗಳಿಂದ ಈಜಿಪ್ಟ್ ವನಿತೆಯರೇ ವಿಶ್ವ ಚಾಂಪಿಯನ್ ಆಗಿದ್ದಾರೆ. 

ಇನ್ನು ಜೂನಿಯರ್ ವಿಭಾಗದಲ್ಲೂ 2010ರಿಂದ ಸತತ 15 ವರ್ಷಗಳಿಂದ ಈಜಿಪ್ಟ್​ನ ಬಾಲಕಿಯರೇ ವಿಶ್ವ ಚಾಂಪಿಯನ್​ಷಿಪ್ ಗೆಲ್ಲುತ್ತಿದ್ದರು. ಈ ಸರಪಳಿಯನ್ನು ತುಂಡರಿಸಿದ್ದು ಭಾರತದ ಬಾಲಕಿ ಅನಾಹತ್ ಸಿಂಗ್. ಅಷ್ಟೇ ಅಲ್ಲ, ಮೊನ್ನೆ ಕೆನಡಾದಲ್ಲಿ ನಡೆದ ಈ ಟೂರ್ನಿಯಲ್ಲಿ ಕ್ವಾರ್ಟರ್​ಫೈನಲ್ (ಹಬೀಬಾ ರಿಜ್ಕ್), ಸೆಮಿಫೈನಲ್ (ಬಾರ್ಬ್ ಸಮೇಹ್) ಹಾಗೂ ಫೈನಲ್​ನ (ರುಖಯ್ಯ ಸಲೇಮ್ ಸತತ ಮೂರು ಪಂದ್ಯಗಳಲ್ಲಿ ಅನಾಹತ್ ಸದೆಬಡಿದಿದ್ದು ಈಜಿಪ್ಟ್ ಆಟಗಾರ್ತಿಯರನ್ನು. ಹೀಗಾಗಿ ಈಜಿಪ್ಟ್​ನ ಸ್ಪರ್ಧಿಗಳೇ ಇಲ್ಲದ ಏಷ್ಯಾಡ್, ಕಾಮನ್ವೆಲ್ತ್ ಕೂಟಗಳಲ್ಲಿ ಪದಕ ಗೆಲ್ಲುವುದಕ್ಕಿಂತ, ಈಜಿಪ್ಟ್​ನ ಸ್ಪರ್ಧಿಗಳನ್ನೇ ಸೋಲಿಸಿ ಅನಾಹತ್ ವಿಶ್ವ ಜೂನಿಯರ್ ಸ್ಕ್ವ್ಯಾಷ್​ ಪ್ರಶಸ್ತಿ ಗೆದ್ದಿದ್ದು ಬಹುದೊಡ್ಡ ಸಾಧನೆ. ಇದೊಂದು ರೀತಿ ಬಲಾಢ್ಯ ಸಾಮ್ರಾಜ್ಯ ಉರುಳಿಸಿ, ಕೀರ್ತಿಪತಾಕೆ ನೆಟ್ಟಂತೆಯೇ ಚರಿತ್ರಾರ್ಹ.

ಹಾಗೆ ನೋಡಿದರೆ ಸ್ಕ್ವ್ಯಾಷ್​ ಅನಾಹತ್ ಪಾಲಿಗೆ ಮೊದಲ ಆಯ್ಕೆ ಏನೂ ಆಗಿರಲಿಲ್ಲ. ಆಕೆಗೆ ಚಿಕ್ಕ ವಯಸ್ಸಿನಿಂದಲೂ ಪಿ.ವಿ. ಸಿಂಧು ಅಂದರೆ ಪಂಚಪ್ರಾಣ. ಸಿಂಧೂ ಹಾಗೆ ತಾನೂ ಬ್ಯಾಡ್ಮಿಂಟನ್ ಆಡಬೇಕು, ಒಲಿಂಪಿಕ್ಸ್ ಪದಕ ಗೆಲ್ಲಬೇಕು ಎನ್ನುವುದು ಅನಾಹತ್ ಕನಸಾಗಿತ್ತು.. 6ನೇ ವಯಸ್ಸಿನಲ್ಲೇ ಬ್ಯಾಡ್ಮಿಂಟನ್ ಅಕಾಡೆಮಿಗೂ ಸೇರಿದ್ದಾಗಿತ್ತು.. ಜೂನಿಯರ್ ಹಂತದಲ್ಲಿ ಸಣ್ಣಪುಟ್ಟ ಯಶಸ್ಸುಗಳೂ ಬಂದಾಗಿತ್ತು.. ಆದರೆ, ಜೀವನಚಕ್ರ ಯಾವಾಗ, ಹೇಗೆ ನಮ್ಮ ಪಥ ಬದಲಾಯಿಸಿ ಬಿಡುತ್ತದೆಂಬುದು ಗೊತ್ತಾಗುವುದೇ ಇಲ್ಲ... ಅಕ್ಕ ಅಮೈರಾ ಸ್ಕ್ವ್ಯಾಷ್​ ಆಡುತ್ತಿದ್ದಳು. ತಂಗಿ ಬ್ಯಾಡ್ಮಿಂಟನ್. ಅನಾಹತ್ ತಂದೆ ಗುರುಶರಣ್ ಸಿಂಗ್, ತಾಯಿ ತಾನಿ ವದೇರಾ ವೃತ್ತಿಯಿಂದ ವಕೀಲ ಹಾಗೂ ಇಂಟೀರಿಯರ್ ಡಿಸೈನರ್ ಆಗಿದ್ದರೂ, ಇಬ್ಬರೂ ಕಾಲೇಜು ದಿನಗಳಲ್ಲಿ ಹಾಕಿ ಆಡಿದ್ದವರು.. 

ಮಕ್ಕಳು ಅವರಿಷ್ಟದ ಆಟ ಆಡಲಿ ಎಂಬ ಆಸೆ ಆ ದಂಪತಿಗೂ ಇತ್ತು. ಆದರೆ, ಇಬ್ಬರೂ ತಮ್ಮ ತಮ್ಮ ವೃತ್ತಿ ಬದುಕಿನಲ್ಲಿ ಮುಳುಗಿಹೋಗಿರುವಾಗ ಒಬ್ಬ ಮಗಳನ್ನು ಬ್ಯಾಡ್ಮಿಂಟನ್ ಅಕಾಡೆಮಿಗೆ, ಇನ್ನೊಬ್ಬಳನ್ನು ಸ್ಕ್ವ್ಯಾಷ್​ ಅಕಾಡೆಮಿಗೆ ಕರೆದುಕೊಂಡು ಹೋಗುವುದು, ಬರುವುದು.. ಆ ದೆಹಲಿ ಟ್ರಾಫಿಕ್​ನಲ್ಲಿ, ಅಸಾಧ್ಯ ಕಸರತ್ತಾಗಿತ್ತು.. ಹೀಗಾಗಿ ಅನಾಹತ್ ಬ್ಯಾಡ್ಮಿಂಟನ್ ಕನಸು ತ್ಯಾಗ ಮಾಡಿ ಅಕ್ಕನ ಜತೆ ಸ್ಕ್ವ್ಯಾಷ್​ ಅಕಾಡೆಮಿ ಸೇರಿದ್ದಳು... ಬ್ಯಾಡ್ಮಿಂಟನ್ ರಾಕೆಟ್ ಹಿಡಿದು ಮಣಿಕಟ್ಟು ತಿರುಗಿಸಲು ಕಲಿತಿದ್ದು ಸ್ಕ್ವ್ಯಾಷ್​ನಲ್ಲಿ ಅಡ್ವಾಂಟೇಜ್ ಆಗಿತ್ತು.. ಕೆಲವೇ ದಿನಗಳಲ್ಲಿ ಅನಾಹತ್ ಆಟ ಏರುಗತಿ ಹಿಡಿದಿತ್ತು.. ಜೂನಿಯರ್ ವಿಭಾಗದಲ್ಲಿ ರಾಷ್ಟ್ರ ಮಟ್ಟದಲ್ಲಿ ಯಶಸ್ಸು ಒಲಿದಿತ್ತು.. 

ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಪ್ರತಿನಿಧಿಸುವ ಕನಸು ನನಸಾಗಿತ್ತು. ಆದರೆ ಜೂನಿಯರ್ ವಿಶ್ವ ಚಾಂಪಿಯನ್​ಷಿಪ್​ನಲ್ಲಿ ಮಾತ್ರ ಸತತ ನಾಲ್ಕು ವರ್ಷ ಅದೃಷ್ಟ ಕೈಕೊಟ್ಟಿತ್ತು.. 2022, 23 ಹಾಗೂ 24ರಲ್ಲಿ ಮೂರು ಬಾರಿ ಕ್ವಾರ್ಟರ್​ಫೈನಲ್​ನಲ್ಲಿ ಸೋತಿದ್ದ, ಅನಾಹತ್, ಕಳೆದ ವರ್ಷ ಸೆಮಿಫೈನಲ್​ವರೆಗೂ ತಲುಪಿ ಕಂಚಿನ ಪದಕಕ್ಕೆ ತೃಪ್ತಿ ಪಟ್ಟಿದ್ದರು. ಈ ವರ್ಷ ಜೂನಿಯರ್ ಮಟ್ಟದಲ್ಲಿ ಅವರಿಗೆ ಕೊನೆಯ ಅವಕಾಶವಾಗಿತ್ತು. ಏಕೆಂದರೆ, 19 ವರ್ಷವಾದ ಮೇಲೆ ಜೂನಿಯರ್ ಸ್ಪರ್ಧೆಗಳಲ್ಲಿ ಆಡುವ ಅವಕಾಶವಿಲ್ಲ. ಹಾಗಾಗಿ ಈ ವರ್ಷವೇ ಲಾಸ್ಟ್ ಚಾನ್ಸ್ ಎಂಬ ಒತ್ತಡ ಪೆಡಂಭೂತವಾಗಿ ಹೆಗಲೇರಿತ್ತು.. ಕೊನೆಗೂ ಕನಸು ನನಸಾಗಿತ್ತು..

ಜೂನಿಯರ್ ವಿಶ್ವ ಚಾಂಪಿಯನ್​ಷಿಪ್ ಗೆದ್ದ ಮೇಲೆ ಅನಾಹತ್ ಪಾಲಿಗೆ ಆದ್ಯತೆಗಳು ಬದಲಾಗಿದೆ. ಕೆಲವೇ ತಿಂಗಳ ಹಿಂದೆ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪದವಿಗೆ ಸೇರುವ ಕನಸು ಕಾಣುತ್ತಿದ್ದ ಆಕೆ, ಸದ್ಯ ಶಿಕ್ಷಣವನ್ನು ವರ್ಷದ ಮಟ್ಟಿಗೆ ಮುಂದೂಡಿದ್ದಾರೆ. ಕಾರಣ ಇದೇ ಮೊದಲ ಬಾರಿ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್​ಗೆ ಸ್ಕ್ವ್ಯಾಷ್​ನಲ್ಲಿ ಸೇರ್ಪಡೆಗೊಂಡಿದ್ದು, ಈ ಕ್ರೀಡೆಯಲ್ಲಿ ಈಜಿಪ್ಟ್​ನ ಪ್ರಾಬಲ್ಯಕ್ಕೆ ಸೆಡ್ಡು ಹೊಡೆದಿರುವ ಅನಾಹತ್, ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಸ್ಕ್ವ್ಯಾಷ್​ನಲ್ಲಿ ಪದಕ ಗೆದ್ದುಕೊಡುವ ವಾಸ್ತವಿಕ ಅವಕಾಶವಿದೆ.

ಸ್ಕ್ವ್ಯಾಷ್​ನಲ್ಲಿ ಅತ್ಯಂತ ವೇಗ, ಚುರುಕುತನ ಮತ್ತು ಶಾರೀರಿಕ ಸಾಮರ್ಥ್ಯವನ್ನು ಬೇಡುವ ರ್ಯಾಕೆಟ್ ಆಟ. ನಾಲ್ಕು ಗೋಡೆಗಳ ನಡುವೆ ನಡೆಯುವ ಒಳಾಂಗಣ ಅಂಕಣದಲ್ಲಿ ಟೊಳ್ಳಾದ ಸಣ್ಣ ರಬ್ಬರ್ ಚೆಂಡನ್ನು ಎದುರು ಭಾಗದ ಗೋಡೆಗೆ ಬಾರಿಸುವ ಮೂಲಕ ಆಡುವ ಈ ಆಟ ಅತ್ಯಲ್ಪ ಅವಧಿಯಲ್ಲಿ ಅತಿ ಹೆಚ್ಚು ಕ್ಯಾಲೋರಿಗಳನ್ನು ಕರಗಿಸುತ್ತದೆ. ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ, ದೇಹದ ಸ್ನಾಯುಗಳನ್ನು ಬಲಪಡಿಸುತ್ತದೆ ಹಾಗೂ ದೈಹಿಕ ಸಹಿಷ್ಣುತೆ ಹೆಚ್ಚಿಸಲು ನೆರವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ತಂತ್ರ ಮತ್ತು ಮಾನಸಿಕ ಜಾಣ್ಮೆ ಪ್ರಮುಖವಾಗುವ ಈ ಆಟವನ್ನು ‘ಭೌತಿಕ ಚೆಸ್’ ಎಂದೂ ಕರೆಯಲಾಗುತ್ತದೆ. ಏಕೆಂದರೆ ಚೆಂಡನ್ನು ಹೊಡೆಯುವ ವೇಗಕ್ಕಿಂತ ಅದನ್ನು ಗೋಡೆಯ ಯಾವ ಕೋನಕ್ಕೆ ಬಾರಿಸಬೇಕು ಮತ್ತು ಎದುರಾಳಿಯನ್ನು ಅಂಕಣದ ಯಾವ ಭಾಗಕ್ಕೆ ಓಡಿಸಬೇಕು ಎಂಬ ತಂತ್ರಗಾರಿಕೆ ಇಲ್ಲಿ ಮುಖ್ಯವಾಗುತ್ತದೆ. 

ಇಂಥ ಆಟ ಭಾರತದಲ್ಲಿ ಸೌರವ್ ಘೋಷಾಲ್, ಜೋಷ್ನಾ ಚಿನ್ನಪ್ಪ, ದೀಪಿಕಾ ಪಲ್ಲಿಕಲ್ ಮೊದಲಾದ ತಾರೆಯರ ಮೂಲಕ ಜನಪ್ರಿಯಗೊಂಡಿತ್ತು. ಆಟಗಾರನಾಗಿ ನಿವೃತ್ತಿ ಬಳಿಕ ಕೋಚ್ ಆಗಿ ಯಶಸ್ಸು ಕಾಣುತ್ತಿರುವ ಸೌರವ್ ಘೋಷಾಲ್ ಮಾರ್ಗದರ್ಶನದಲ್ಲೇ ಪ್ರವರ್ಧಮಾನಕ್ಕೆ ಬಂದಿರುವ ಅನಾಹತ್ ಸಿಂಗ್ ಜೂನಿಯರ್ ವಿಶ್ವ ಚಾಂಪಿಯನ್ ಪಟ್ಟಕ್ಕೇರುವ ಮೂಲಕ ಇನ್ನಷ್ಟು ಮಕ್ಕಳು ಸ್ಕ್ವ್ಯಾಷ್​ ಆಟ ಕಲಿಯಲು ಪ್ರೇರಣೆಯಾಗಿದ್ದಾರೆ. ಮಾತ್ರವಲ್ಲ; ಮುಂಬರುವ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಹೊಸ ಸಾಧ್ಯತೆಯೊಂದರ ಹೆಬ್ಬಾಗಿಲು ತೆರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net