_1776965333628.webp?w=480&auto=format%2Ccompress&fit=max)
_1776965333628.webp?w=480&auto=format%2Ccompress&fit=max)
(ಲೇಖಕರು ‘ವಿಜಯವಾಣಿ’ ಸೀನಿಯರ್ ಡೆಪ್ಯೂಟಿ ಎಡಿಟರ್)
ಆತ್ಮಹತ್ಯೆಗೆ ಯತ್ನಿಸುತ್ತಿರುವವರು ಒಂದು ಕ್ಷಣ ವಿಚಾರ ಮಾಡಿದರೆ ಜೀವನದಲ್ಲಿ ಮತ್ತೆ ಯಾವತ್ತೂ ಸಾಯಲು ಮುಂದಾಗುವುದಿಲ್ಲ... ಈಕೆಯ ವಿಷಯದಲ್ಲೂ ಹೀಗೆಯೇ ಆಯಿತು. ಈ ಜನಗಳು ನಾನು ಸಾಯಲಿ ಎಂದೇ ಕಾಯುತ್ತಿದ್ದಾರೆ.. ಇವರ ಸಲುವಾಗಿ ನಾನೇಕೆ ಸಾಯಬೇಕು? ನಾನು ಬದುಕಬೇಕು.. ಇದ್ದು ಸಾಧಿಸಬೇಕು ಎಂಬ ಹಟ ಅವಳ ಮನಸ್ಸನ್ನು ಗಟ್ಟಿಗೊಳಿಸಿತು... ಕುಣಿಕೆ ಬಿಚ್ಚಿ ಮಂಚದಿಂದ ಕೆಳಗಿಳಿದ ಆಕೆ ನಿದ್ರಿಸುತ್ತಿದ್ದ ಎರಡೂ ಮಕ್ಕಳನ್ನು ಕಂಕುಳಲ್ಲಿ ಅವುಚಿಕೊಂಡು ಆ ಮನೆಯಿಂದ ಹೊರಬಿದ್ದಳು.. ಈ ಮನೆಯ, ಮನೆಯವರ ಋಣವಿನ್ನು ತೀರಿತು ಎಂದುಕೊಂಡು ಹೊಸಿಲು ದಾಟಿದಳು...
ಜೀವನವೆನ್ನುವುದು ಅನುಭವಿಸುವವರೆಗೆ ಯಾತನೆ, ತಿರುಗಿಬೀಳುವವರೆಗೆ ಶೋಷಣೆ. ತಗ್ಗುವವರá-, ಬಗ್ಗುವವರು ಇರುವವರೆಗೆ ಬೆನ್ನಿಗೆ ಗುದ್ದುವವರು ಇದ್ದೇ ಇರುತ್ತಾರೆ.. ಅದರಲ್ಲೂ ಹೆಣ್ಣಿನ ಜನ್ಮ ಕಷ್ಟ. ಹುಟ್ಟಿದ ಮನೆಯಲ್ಲಿ ಅಪ್ಪಅಮ್ಮ, ಮದುವೆಯಾದ ಮೇಲೆ ಗಂಡ, ವಯಸ್ಸಾದ ಮೇಲೆ ಮಕ್ಕಳ ಆಶ್ರಯವೆಂಬ ಸಾಮಾಜಿಕ ವ್ಯವಸ್ಥೆ, ಹೆಣ್ಣಿನ ಶೋಷಣೆಯ ಮೂಲವೂ ಆಗುತ್ತಿರುವುದು ವಿಪರ್ಯåಸ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಹೆಣ್ಣು ಇಂದು ಸಮಾನತೆ, ಸಬಲತೆ, ಸ್ವಾತಂತ್ರ್ಯ ಬೆಳಕು ಕಾಣುತ್ತಿದ್ದರೂ, ಮನೆಯ ಚೌಕಟ್ಟಿನಲ್ಲಿ ಹೆತ್ತವರು, ಗಂಡ, ಮಕ್ಕಳ ಬಾಂಧವ್ಯಕ್ಕೆ ಕಟ್ಟುಬೀಳಲೇಬೇಕು.. ಈ ಬಾಂಧವ್ಯಗಳು ಎಲ್ಲರ ಸಂಸಾರದಲ್ಲೂ ಆನಂದ ಸಾಗರ ಆಗಿರುವುದಿಲ್ಲ. ಒಂದೊಂದು ಮನೆಯ ಕಥೆ ಒಂದೊಂದು ರೀತಿ...
ಆತ್ಮಹತ್ಯೆ ನಿರ್ಧಾರ ಬದಲಿಸಿದ್ದಾಯಿತು. ಆದರೆ, ಮುಂದಿನ ಬದುಕು ಹೇಗೆ ಎಂಬುದು ಆಕೆಗೆ ತಿಳಿದಿರಲಿಲ್ಲ... ಎಲ್ಲಿ ಹೋಗಬೇಕು? ಏನು ಮಾಡಬೇಕು? ಈ ಮಕ್ಕಳ ಗತಿ ಏನು? ಹೊಸಿಲು ದಾಟಿರುವ ತನ್ನನ್ನು ದುಷ್ಟ ಗಂಡ ಸುಮ್ಮನೆ ಬಿಟ್ಟಾನೆಯೇ? ಉತ್ತರವಿಲ್ಲದ ನೂರಾರು ಪ್ರಶ್ನೆಗಳು, ದಿಕ್ಕು ತೋಚದ ಅಸಹಾಯಕತೆಯ ನಡುವೆ ಕಣ್ಣೀರು ಹಾಕುವುದು ಬಿಟ್ಟರೆ ಬೇರೇನೂ ಗೊತ್ತಾಗುತ್ತಿರಲಿಲ್ಲ.
ಇಂಥ ಪರಿಸ್ಥಿತಿ ಬಂದಿದ್ದಾದರೂ ಹೇಗೆ? ಹೇಗಿದ್ದ ಜೀವನ ಹೇಗಾಗಿ ಹೋಯಿತು? ಡಾಕ್ಟರ್ ಆಗುವುದು ಬಾಲ್ಯದ ಕನಸಾಗಿತ್ತು. ಆದರೆ, 10ನೇ ತರಗತಿಯಿಂದ ಮುಂದೆ ಓದಲಿಲ್ಲ.. ನೋಡಲು ಅಂದವಾಗಿದ್ದುದೇ ಬದುಕು ಈ ರೀತಿ ಬರಗೆಡಲು ಕಾರಣವಾಯಿತೇ? ಬಡತನದಲ್ಲೇ ಬೆಳೆದು 10ನೇ ತರಗತಿ ಪಾಸಾದಾಗ ಅಪ್ಪಅಮ್ಮನ ಕಣ್ಣಲ್ಲಿ ಅದೆಂಥ ಸಂಭ್ರಮ? ಇನ್ನೇನು ಕಾಲೇಜು ಮೆಟ್ಟಿಲೇರುವ ತಯಾರಿ ಮಾಡುತ್ತಿರುವಾಗಲೇ ಅವರು ಹುಡುಕಿಕೊಂಡು ಬಂದಿದ್ದರು.. ಹುಡುಗಿ ಮಹಾಲಕ್ಷ್ಮಿಯ ಹಾಗಿದ್ದಾಳೆ, ನಮ್ಮ ಮನೆಗೆ ಸೊಸೆಯಾಗಿ ಮಾಡಿಕೊಳ್ಳುತ್ತೇವೆ ಎಂದು ಬಂದಿದ್ದರು.. ಶ್ರೀಮಂತ ಕುಟುಂಬ, ಒಬ್ಬನೇ ಮಗ, ತಾವಾಗಿಯೇ ಕೇಳುತ್ತಿದ್ದಾರೆ. ಮಗಳ ಭಾಗ್ಯದ ಬಾಗಿಲು ತೆರೆಯಿತು ಎಂದು ಅಪ್ಪ ಕೂಡಲೇ ಒಪ್ಪಿದ್ದರು.. ಬುಡಕಟ್ಟು ಸಂಪ್ರದಾಯಸ್ಥ ಕುಟುಂಬದಲ್ಲಿ ಮಗಳ ಇಷ್ಟಕಷ್ಟ ಕೇಳುವವರ್ಯåರು? 16ನೇ ವಯಸ್ಸಿನಲ್ಲೇ ಮದುವೆಯಾಗಿತ್ತು.. ಗಂಡ, ಅತ್ತೆ-ಮಾವ, ಬಂಧು ಬಳಗ ಅರ್ಥ ಮಾಡಿಕೊಳ್ಳುವ ಮೊದಲೇ ಮಗ ಜನಿಸಿಯಾಗಿತ್ತು.. ಮದುವೆಯಾದ ನಾಲ್ಕು ವರ್ಷಗಳಲ್ಲಿ, ವಯಸ್ಸು ಇಪ್ಪತ್ತು ತುಂಬುವ ಮೊದಲೇ ಎರಡು ಮಕ್ಕಳಿಗೆ ತಾಯಿ ಎನಿಸಿಕೊಂಡಾಗಿತ್ತು.. ಇಷ್ಟೇ ಆಗಿದ್ದರೆ ಬದುಕೆಷ್ಟು ಸೊಗಸು, ದೇವಲೋಕ ಪ್ರೇಮ ಲೋಕ ನನ್ನ ಮನೆಯೀಗ ಎಂದು ಖುಷಿ ಪಡಬಹುದಿತ್ತೇನೋ? ಆದರೆ, ಜೀವನ ಯಾವತ್ತೂ ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬವಲ್ಲ.. ಹೊರಗಿನಿಂದ ಹೊಳೆಯುವ ಗಾಜಿನ ಅರಮನೆಯ ಒಳಗೆ ಸುಪ್ಪತ್ತಿಗೆ ಇದೆಯೇ ಕಬ್ಬಿಣದ ಸಂಕೋಲೆಯಿದೆಯೇ ಎನ್ನುವುದು ಅವರವರು ಪಡೆದುಕೊಂಡು ಬಂದಿದ್ದನ್ನು ಅವಲಂಬಿಸಿರುತ್ತದೆ.. ಮದುವೆಯ ಅರ್ಥ ತಿಳಿಯುವ ಮುನ್ನವೇ ಗಂಡನ ಮನೆ ಸೇರಿದ್ದ ಆ ಹುಡುಗಿ, ಸಿರಿವಂತ ಅತ್ತೆಯ ಪಾಲಿಗೆ ಸಂಬಳವಿಲ್ಲದೆ ದುಡಿಯುವ ಕೆಲಸದ ಆಳಾಗಿದ್ದಳು.. ಗಂಡನ ಉಗ್ರಪ್ರತಾಪಕ್ಕೆ ಬಲಿಪಶು ಅವಳೇ. ಹಗಲೂ ರಾತ್ರಿಯೂ ಅವಳ ಪಾಲಿಗೆ ನೆಮ್ಮದಿ ಮರೀಚಿಕೆಯಾಗಿತ್ತು.. ಕೈಕಾಲು, ಬೆನ್ನು, ಕೆನ್ನೆ, ಮೈತುಂಬಾ ಗಂಡ ಬೆಲ್ಟ್ನಿಂದ, ಸಿಗರೇಟ್ನಿಂದ, ಕೈಗೆ ಸಿಕ್ಕಿದ್ದರಿಂದ ಚುಚ್ಚಿದ, ಚಚ್ಚಿದ, ಹಲ್ಲೆ ಮಾಡಿದ ಗಾಯಗಳಿದ್ದವು, ರಕ್ತ ಹೆಪ್ಪುಗಟ್ಟಿದ ಕಪ್ಪು ಕಲೆಗಳಿದ್ದವು... ಜೀವಮಾನದಲ್ಲಿ ಅಳಿಯದ ನೋವುಗಳಿದ್ದವು. ನರಕವೆಂದರೆ ಗಂಡನ ಮನೆಯೇ ಎಂದು ಅವಳಿಗನ್ನಿಸಿತ್ತು.. ಹೋಗಲಿ, ಹೊಟ್ಟೆ ತುಂಬ ಊಟವಾದರೂ ಇದೆಯೇ? ಎಲ್ಲರ ಜತೆ ಕುಳಿತು ಊಟ ಮಾಡುವ ಸಮಾನತೆ ಆಕೆಗಿರಲಿಲ್ಲ.. ಆಕೆಯ ಊಟತಿಂಡಿ ಬಗ್ಗೆ ಯಾರಿಗೂ ಯೋಚನೆ ಇರುತ್ತಿರಲಿಲ್ಲ.. ಹಳಸಲು ಆಹಾರ ಉಳಿದರಷ್ಟೇ ಆಕೆಗೆ ಅರೆಹೊಟ್ಟೆ. ಇಲ್ಲವಾದರೆ ಅದೂ ಇಲ್ಲ.. ಅತ್ತೆಗೆ ತಿಳಿಯದಂತೆ ತಿಂಡಿ, ಬ್ರೆಡ್ಡು ಪೊಟ್ಟಣ ಕಟ್ಟಿ ಒಳ ಉಡುಪಿನೊಳಗೆ ಅಡಗಿಸಿಕೊಂಡು ಬಚ್ಚಲು ಮನೆಯಲ್ಲಿ ಕದ್ದು ತಿಂದ ದಿನಗಳಿದ್ದವು... ಒಮ್ಮೆ ಅಪ್ಪ ಬಂದಾಗ ನನ್ನಿಂದ ಈ ಮನೆಯಲ್ಲಿ ಏಗಲು ಆಗುತ್ತಿಲ್ಲ.. ತವರಿಗೆ ಕರೆದುಕೊಂಡು ಹೋಗು ಎಂದು ಗೋಗರೆದಿದ್ದಳು.. ಆಯಿತು, ಪೇಟೆಗೆ ಹೋಗಿ ಬಂದು, ಸಂಜೆ ಕರೆದುಕೊಂಡು ಹೋಗುವೆ ಎಂದು ಭರವಸೆ ನೀಡಿದ್ದ ಅಪ್ಪ ಸಂಜೆ ಮತ್ತೆ ಮರಳಲೇ ಇಲ್ಲ!
ಹಾಗಿದ್ದರೆ, ಈ ನರಕದಿಂದ ಬಿಡುಗಡೆಯೇ ಇಲ್ಲವೇ? ಈ ಯಾತನೆಯಿಂದ ಬಿಡುಗಡೆ ಯಾವಾಗ ಎಂಬ ಪ್ರಶ್ನೆಗೆ ಆಕೆಗೆ ಸಿಗುತ್ತಿದ್ದ ಉತ್ತರ ಆತ್ಮಹತ್ಯೆ ಒಂದೇ.. ಮಕ್ಕಳ ಸಲುವಾಗಿ ಬದುಕಬೇಕು ಎಂಬ ಅನಿವಾರ್ಯವೂ ಹೆಚ್ಚುದಿನ ಮುಂದುವರಿಯಲಿಲ್ಲ.. ಗಂಡನಾಗಲೀ, ಅತ್ತೆ- ಮಾವಂದಿರಾಗಲಿ ಯಾವತ್ತೂ ಬದಲಾಗುವುದಿಲ್ಲ.. ಕನಿಷ್ಠ ಮಾನವೀಯ ವಾತಾವರಣದಲ್ಲಿ ಬದುಕುವ ಅವಕಾಶವೂ ಯಾವತ್ತೂ ಸಿಗುವುದಿಲ್ಲ ಎಂಬ ಕೊರಗು ಅವಳನ್ನು ಬದುಕಿನಿಂದ ವಿಮುಖಗೊಳಿಸುತ್ತಿತ್ತು.. ಇಷ್ಟೊಂದು ಹಿಂಸೆ ಕೊಡುವುದಾದರೆ ಇವರಿಗೆ ಹೆಂಡತಿ, ಸೊಸೆ ಯಾಕೆ ಬೇಕಿತ್ತು ಎಂಬ ಪ್ರಶ್ನೆಗೆ ಉತ್ತರವಿರಲಿಲ್ಲ.. ಕೊನೆಗೊಂದು ದಿನ ಸತ್ತೇಬಿಡುವುದೆಂದು ಕುಣಿಕೆಗೆ ಕೊರಳು ಒಡ್ಡಿದ ಆ ಕ್ಷಣದಲ್ಲಿ ತನ್ನ ಸಾವೂ ಅತ್ತೆಯ ಕಟುಕ ಮನಸ್ಸನ್ನು ಕರಗಿಸುವುದಿಲ್ಲ ಎಂದು ಗೊತ್ತಾದ ಬಳಿಕ ಅವಳಿಗೆ ಬದುಕುವ ಕೆಚ್ಚು ಮೂಡಿತ್ತು.. ಮಕ್ಕಳೊಂದಿಗೆ ಮನೆಯಿಂದ ಹೊರ ಬಿದ್ದ ಆಕೆ ಸೋದರ ಸಂಬಂಧಿಯ ಮನೆ ಸೇರಿದ್ದಳು. ಪಾರ್ಲರ್ನಲ್ಲಿ, ಅಲ್ಲಿ-ಇಲ್ಲಿ ಕೆಲಸ ಮಾಡುತ್ತ ಜೀವನೋಪಾಯ ಹುಡುಕಿಕೊಂಡಿದ್ದಳು. ಆದರೆ, ಇದೇ ರೀತಿ ಎಷ್ಟು ದಿನ? ಗಂಡನ ಮನೆಯಲ್ಲಿ ಒಂದು ಬಗೆಯ ಕಷ್ಟವಾದರೆ, ಇಲ್ಲಿ ಬೇರೆಯೇ ಬಗೆಯ ಹೋರಾಟ.. ಸಾವಿನ ಮನೆಯ ಹೊಸ್ತಿಲು ದಾಟಿಬರುವಾಗ ಮನಸ್ಸಿನಲ್ಲಿ ಮೂಡಿದ್ದ ಕೆಚ್ಚು, ಹಟ, ಛಲ ಹಾಗೆಯೇ ಸಾಯಲು ಬಿಡಬಾರದು ಎಂಬ ತುಡಿತ ಮನಸ್ಸನ್ನು ಕೊರೆಯುತ್ತಿತ್ತು.
ಭಾರತದಂಥ ದೇಶದಲ್ಲಿ ಜನ ಬಡತನದಿಂದ, ಶೋಷಣೆಯಿಂದ, ಅನ್ಯಾಯಗಳಿಂದ ಆಚೆ ಬಂದು ಗೌರವದ ಬದುಕು ಸಾಗಿಸುವುದಕ್ಕೆ ಇರುವ ಬಹುಮುಖ್ಯ ಮಾರ್ಗವೇ ವಿದ್ಯಾಭ್ಯಾಸ. ಆಕೆಯೂ ಅದನ್ನೇ ಮಾಡಿದ್ದಳು. 10ನೇ ತರಗತಿಗೆ ನಿಂತು ಹೋಗಿದ್ದ ವಿದ್ಯಾಭ್ಯಾಸವನ್ನು ಮುಂದುವರಿಸಿದ್ದಳು. ಮೊದಲಿನಂತೆ ವೈದ್ಯಳಾಗುವ ಕನಸು ಈಗ ಇರಲಿಲ್ಲ. ಒಂದು ಸರ್ಕಾರಿ ನೌಕರಿ ದೊರೆತರೆ ತನ್ನೆಲ್ಲ ಕಾರ್ಪಣ್ಯಗಳು ದೂರ ಸರಿಯಬಹುದು ಎಂಬ ಆಸೆ ಚಿಗುರೊಡೆದಿತ್ತು. ಹಾಗಾಗಿ ಪದವಿ ಮುಗಿಯುತ್ತಿದ್ದಂತೆಯೇ ಆಕೆ ಮಧ್ಯಪ್ರದೇಶ ಸರ್ಕಾರದ ನಾಗರಿಕ ಸೇವಾ ಪರೀಕ್ಷೆ (ಎಂಪಿ ಪಿಎಸ್ಸಿ) ತೆಗೆದುಕೊಂಡಿದ್ದಳು. ಮೊದಲ ಪ್ರಯತ್ನದಲ್ಲೇ ಯಶಸ್ಸು ಒಲಿದಿತ್ತು. ಮಧ್ಯಪ್ರದೇಶ ಸರ್ಕಾರದ ಆಡಳಿತಾತ್ಮಕ ಸೇವೆಗೆ ಆಕೆ ಸೇರ್ಪಡೆಗೊಂಡಿದ್ದರು.
ಇದು ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯಲ್ಲಿ ಪೌರಾಯುಕ್ತೆಯಾಗಿ ಸೇವೆ ಸಲ್ಲಿಸುತ್ತಿರುವ ಸವಿತಾ ಪ್ರಧಾನ್ ಅವರ ಜೀವನ. ಪ್ರತಿಯೊಬ್ಬರ ಜೀವನದಲ್ಲೂ ಕಷ್ಟಗಳೆನ್ನುವುದು ಇದ್ದೇ ಇರುತ್ತದೆ. ಅದರಲ್ಲೂ ಬಡಕುಟುಂಬದಿಂದ ಮೇಲೆ ಬಂದ ಒಬ್ಬೊಬ್ಬರ ಜೀವನವೂ ಒಂದು ಕಾದಂಬರಿಯಾಗಬಲ್ಲ, ಚಲನಚಿತ್ರವಾಗಬಲ್ಲ ಕಥೆಯಾಗಿರುತ್ತದೆ.. ಆದರೆ, ಕಷ್ಟಪಟ್ಟವರೆಲ್ಲರೂ ಪ್ರವಾಹದ ವಿರುದ್ಧ ಈಜಿ ಸಾಧನೆಯ ದಡ ಸೇರುವುದಿಲ್ಲ. ನೂರಕ್ಕೆ 99 ಜನರ ಜೀವನಕಥೆ ಬದುಕಿನ ಅವಕಾಶಗಳನ್ನು ಬಳಸಿಕೊಳ್ಳದೆ ವಿನಾಕಾರಣ ಸೋತುಹೋದ ದುರಂತಕಥೆಯಾದರೆ, ಒಬ್ಬರು ಮಾತ್ರ ಸೋಲನ್ನು, ವೈಫಲ್ಯವನ್ನು, ಅವಮಾನವನ್ನು, ಯಾತನೆಯನ್ನು ಸಾಧನೆಗೆ ಮೆಟ್ಟಿಲಾಗಿಸಿಕೊಂಡು ಯಶೋಗಾಥೆ ಬರೆಯುತ್ತಾರೆ. ಸವಿತಾ ಪ್ರಧಾನ್ ಅಂಥವರಲ್ಲೊಬ್ಬರು.
ಹಾಗೆಂದು, ಗಂಡನ ಮನೆ ಬಿಟ್ಟುಬಂದ ಮೇಲೂ ಸವಿತಾ ಬದುಕಿನಲ್ಲಿ ನೆಮ್ಮದಿ ಎನ್ನುವುದು ಅಷ್ಟು ಸುಲಭದಲ್ಲಿ ಸಿಕ್ಕಿರಲಿಲ್ಲ. ಏಕೆಂದರೆ, ಗಂಡನಿಂದ ವಿಚ್ಛೇದನ ಸಿಕ್ಕಿರಲಿಲ್ಲ. ಪತ್ನಿ ಆಶ್ರಯ ಪಡೆದಿದ್ದ ಸಂಬಂಧಿಗಳ ಮನೆಗೆ, ಕೆಲಸದ ಜಾಗಕ್ಕೆ ಬಂದು ಆತ ಕಿರುಕುಳ ಕೊಡುತ್ತಿದ್ದ. ಒಮ್ಮೆಯಂತೂ ಮಹತ್ವದ ಪರೀಕ್ಷೆಗೆಂದು ತಯಾರಾಗಿ ಮನೆಯಿಂದ ಹೊರಡುವ ಅವಸರದಲ್ಲಿದ್ದಾಗ ಬಂದಿದ್ದ ಗಂಡ ಜಗಳ ತೆಗೆದಿದ್ದ. ಬಚ್ಚಲುಮನೆಯಲ್ಲಿದ್ದ ಬಕೆಟ್ನಲ್ಲಿ ಮೂತ್ರ ಮಾಡಿ ಅದನ್ನು, ಆಕೆಯ ಮೇಲೆ ಸುರಿದಿದ್ದ. ಆದರೆ, ಆತನ ಇಂಥ ಯಾವ ವಿಕೃತಿಯೂ ಸವಿತಾರ ಛಲವನ್ನು, ಧೈರ್ಯವನ್ನು ಕುಗ್ಗಿಸಲಿಲ್ಲ. ಹೋರಾಟ ಕೈಬಿಡದೆ ವಿದ್ಯಾಭ್ಯಾಸ ಮುಂದುವರಿಸಿದ ಆಕೆ ಪೌರಾಯುಕ್ತೆ ಆದ ಬಳಿಕ ಗಂಡನಿಂದ ವಿಚ್ಛೇದನ ಪಡೆದುಕೊಂಡು ಸ್ವತಂತ್ರ ಬದುಕು ಕಟ್ಟಿಕೊಂಡರು. ತನ್ನ ಮಕ್ಕಳು ತಂದೆಯಂತಾಗದೆ, ಉತ್ತಮ ಸಂಸ್ಕಾರ ಕಲಿಯುವಂತೆ ಮಾರ್ಗದರ್ಶನ ಮಾಡುತ್ತಿರುವ ಸವಿತಾ, ಸಮಾಜದಲ್ಲಿ ನೊಂದ ಮಹಿಳೆಯರಿಗೆ ತಮ್ಮದೇ ಜೀವನದ ಉದಾಹರಣೆ ನೀಡಿ ಹೊಸ ಬದುಕು ಕಟ್ಟಿಕೊಳ್ಳುವುದಕ್ಕೆ ಪ್ರೇರಣೆ ಆಗುತ್ತಿದ್ದಾರೆ. ಪ್ರತಿನಿತ್ಯ ಕೌಟುಂಬಿಕ ಹಿಂಸೆ, ದೌರ್ಜನ್ಯ ಎದುರಿಸುತ್ತಿರುವ ಅಸಂಖ್ಯಾತ ಮಹಿಳೆಯರು ಈ ಸಮಾಜದಲ್ಲಿದ್ದಾರೆ. ಅಂಥವರಿಗೆ ಸವಿತಾ ಸಾಧನೆ ದಾರಿದೀಪ.