ಅನನ್ಯ ಸೇವೆಯ ಸವಿತಾ ಸಮಾಜ

4-67a103fb6292f
Published on
ಸವಿತಾ ಮಹರ್ಷಿಯು ಹಿಂದೂ ಪುರಾಣಗಳಲ್ಲಿ ಕಾಣುವ ದೇವತಾ ಅಥವಾ ಋಷಿ ಸಂಬಂಧಿತ ಮಹಾಪುರುಷ. ಪುರಾಣಗಳಲ್ಲಿ ಉಲ್ಲೇಖವಿರುವಂತೆ, ಸವಿತಾ ಎಂಬ ಪದದ ಅರ್ಥ ಸೂರ್ಯ ದೇವನನ್ನು ಸೂಚಿಸುತ್ತದೆ. ಇದರ ಬಗೆಗೆ ಶಿವಪುರಾಣದಲ್ಲಿಯೂ ಉಲ್ಲೇಖಿಸಲಾಗಿದೆ. ವೇದಗಳಲ್ಲಿ ಸಾಮವೇದವನ್ನು ಸೃಷ್ಟಿಸಿದವರು ಸವಿತಾ ಮಹರ್ಷಿ ಎಂದು ನಂಬಲಾಗಿದೆ.

ಸವಿತಾ ಎಂಬುದು ವೇದಗಳಲ್ಲಿ ಸೂರ್ಯದೇವರ ಮಹಿಮೆಯನ್ನು ಒಳಗೊಂಡ ಎಂಬ ಅರ್ಥ ಸ್ಪುರಿಸುತ್ತದೆ. ವೇದ ಎಂದರೆ ಜ್ಞಾನ ಎಂಬ ಅರ್ಥವಿದೆ. ಜ್ಞಾನವನ್ನು ಪಸರಿಸುವ ಕಾರ್ಯವನ್ನು ಬಹು ದೊಡ್ಡ ಮಟ್ಟಕ್ಕೆ ಮಾಡಿದವರು ಸವಿತಾ ಮಹರ್ಷಿಗಳು. ಇವರ ಮಗಳೇ ಗಾಯತ್ರಿ ಎಂಬುದು ಇನ್ನೊಂದು ವಿಶೇಷ. ಸೂರ್ಯನ ಉಪಾಸನೆ ಮಾಡುವುದು ಸವಿತಾ ಸಮುದಾಯದ ಹೆಮ್ಮೆಯ ಸಂಗತಿಯಾಗಿದೆ.

ಆದ್ದರಿಂದಲೇ ಸವಿತಾ ಮಹರ್ಷಿಯಿಂದಲೂ ಸವಿತಾ ಸಮುದಾಯದವರು ಸೂರ್ಯ ದೇವನ ಆರಾಧಕರಾಗಿದ್ದರು. ಹೀಗಾಗಿ ಸವಿತಾ ಮಹರ್ಷಿ ಜಯಂತಿಯನ್ನು ರಥಸಪ್ತಮಿ ದಿನದಂದೇ ಆಚರಿಸುವುದು ವಿಶೇಷ. ರಥಸಪ್ತಮಿ ದಿನದಂದು ಸೂರ್ಯ ತನ್ನ ಪಥದಲ್ಲಿ ಪ್ರಖರವಾಗಿ ಎತ್ತರಕ್ಕೆ ಚಲಿಸುತ್ತಾನೆ. ಅಂದು ಹಗಲು- ರಾತ್ರಿ ಸಮ ಪ್ರಮಾಣದಲ್ಲಿರುವುದು ಇನ್ನೊಂದು ವಿಶೇಷ. ಆದ್ದರಿಂದಲೇ ಸೂರ್ಯ ದೇವನ ಆರಾಧಕರಾಗಿದ್ದ ಸವಿತಾ ಮಹರ್ಷಿ ಜಯಂತಿಯನ್ನು ರಥಸಪ್ತಮಿ ದಿನದಂದು ಆಚರಿಸುವುದು ವಾಡಿಕೆ. ಸೂರ್ಯನ ಆರಾಧನೆ ಜೊತೆಗೇ ಸವಿತಾ ಮಹರ್ಷಿಯ ಜಯಂತಿ ಆಚರಿಸುವುದರೊಂದಿಗೆ ಇಡೀ ಜಗತ್ತಿಗೆ ಒಳಿತನ್ನು ಬಯಸುವುದು ಇದರ ಹಿಂದಿನ ಉದ್ದೇಶವಾಗಿದೆ.

ಸವಿತಾ ಮಹರ್ಷಿಯ ಜಯಂತಿಯನ್ನು ಒಂದು ಸಮುದಾಯಕ್ಕೆ ಸೀಮಿತ ಮಾಡಿರುವುದು ವಿಪರ್ಯಾಸ. ಸವಿತಾ ಸಮಾಜವೆಂದರೆ ಆದಿ ಕಾಲದಿಂದಲೂ ಯಾವುದೇ ತಾರತಮ್ಯ ಮಾಡದೆ ಎಲ್ಲರಿಗೂ ಸಮಾನವಾಗಿ ಸೇವೆ ಸಲ್ಲಿಸುತ್ತ ಬಂದಿರುವ ಕ್ಷೌರಿಕರ ಸಮುದಾಯ.

ಸವಿತಾ ಸಮಾಜದಲ್ಲಿ 27ಕ್ಕೂ ಹೆಚ್ಚು ಒಳ ಪಂಗಡಗಳನ್ನು ಕಾಣಬಹುದು. ಹಡಪದರು, ಕಾಯಕದವರು, ನಾಯಿಂದ, ಭಂಡಾರಿ, ನಾವಿ, ನಯನ ಕ್ಷೇತ್ರಿಯಾ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಇವರೆಲ್ಲರನ್ನು ಒಟ್ಟು ಸೇರಿಸಿದರೆ ಅದೇ ಸವಿತಾ ಸಮಾಜ. ಶಿವನ ಆಯುಷ್ ಕರ್ಮವನ್ನು ಮಾಡುತ್ತಿದ್ದವರು ಸವಿತಾ ಸಮಾಜದ ಮಹರ್ಷಿಗಳು. ಸವಿತಾ ಮಹರ್ಷಿಯ ಭಾವಚಿತ್ರವನ್ನು ಗಮನಿಸಿದರೆ ಪ್ರಧಾನವಾಗಿ ಮೂರು ವಿಚಾರಗಳು ತಿಳಿದು ಬರುತ್ತವೆ. ಅವುಗಳೆಂದರೆ, ಮೊದಲನೆಯದು ಆಯುಷ್​ಕರ್ಮ. ಎರಡನೆಯದು, ವೈದ್ಯಕೀಯ ಕ್ಷೌರಿಕರೇ ಪಾರಂಪರಿಕ ವೈದ್ಯೋಪಚಾರ ಮಾಡುತ್ತಿದ್ದರು ಎಂಬುದು. ಮೂರನೆಯದು, ಸಂಗೀತ ಸಭೆ ಮಾಡುತ್ತಿದ್ದರು ಎಂಬುದು.

ಸವಿತಾ ಮಹರ್ಷಿಯ ಸಂದೇಶಗಳು: ಸಮಾನತೆ ಮತ್ತು ಸಾಮಾಜಿಕ ನ್ಯಾಯ, ವಿದ್ಯಾಭ್ಯಾಸ ಮತ್ತು ಜ್ಞಾನದ ಪ್ರಸಾರ/ ಪ್ರಚಾರ, ಧಾರ್ವಿುಕ ಸಹಿಷ್ಣುತೆ ಮತ್ತು ಸಾಮಾಜಿಕ ಸೇವೆ- ಇವು ಸವಿತಾ ಮಹರ್ಷಿಗಳ ಸಂದೇಶಗಳಲ್ಲಿ ಪ್ರಮುಖವಾದವು. ಇಂದಿಗೂ ಇವು ಪ್ರಸ್ತುತವೇ ಆಗಿವೆ. ಸವಿತಾ ಸಮಾಜ ಹಿಂದಿನಿಂದಲೂ ಸಾಮಾಜಿಕ ಸಮಾನತೆ ಮತ್ತು ನ್ಯಾಯದ ನೆಲೆಯಲ್ಲಿ ಸೇವೆ ಸಲ್ಲಿಸುತ್ತಾ ಬಂದಿದೆ. ಇಂದಿಗೂ ಎಲ್ಲರನ್ನೂ ಇದರ ಹಿನ್ನೆಲೆಯಲ್ಲಿಯೇ ಕಂಡು, ಕ್ಷೌರಿಕ ಸೇವೆ ಸಲ್ಲಿಸುತ್ತಿರುವುದು ನಮ್ಮ ಕಣ್ಣಮುಂದೆ ಇರುವ ಸತ್ಯವಾಗಿದೆ.

ವಿದ್ಯಾಭ್ಯಾಸ ಮತ್ತು ಜ್ಞಾನದ ಪ್ರಸಾರಕ್ಕೆ ಸವಿತಾ ಸಮಾಜ ಕೊಡುಗೆ ನೀಡಿರುವುದೂ ಅಷ್ಟೇ ಸತ್ಯ ಸಂಗತಿಯಾಗಿದೆ. ಆದರೆ ಇಂದು ಸವಿತಾ ಸಮಾಜದ ಯುವಕರು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಈ ಸಮಾಜದವರು ಕೆಲವರು ಉನ್ನತ ಶಿಕ್ಷಣ ಪಡೆದು ಉನ್ನತ ಸ್ಥಾನದಲ್ಲಿದ್ದು, ಅವರು ಸವಿತಾ ಸಮಾಜದಲ್ಲಿನ ಹಿಂದುಳಿದ ಕುಟುಂಬಗಳ ಶಿಕ್ಷಣಕ್ಕೆ ಸಹಾಯ ಮಾಡುವುದು ಅಗತ್ಯವಾಗಿದೆ.

ಸವಿತಾ ಸಮಾಜದವರು ಧಾರ್ವಿುಕ ಸಹಿಷ್ಣುತೆ ಮತ್ತು ಸಾಮಾಜಿಕ ಸೇವೆಗೆ ಹೆಸರುವಾಸಿಯಾದವರು. ಸವಿತಾ ಮಹರ್ಷಿಯ ಸಂದೇಶವನ್ನು ಇಂದಿನ ಆಧುನಿಕ ಯುಗದಲ್ಲೂ ಚಾಚೂತಪ್ಪದೇ ಪಾಲಿಸುತ್ತ ಬರುತ್ತಿದ್ದಾರೆ. ಇವರ ಸಾಮಾಜಿಕ ಸೇವೆ ಅನನ್ಯವಾದುದು. ಹುಟ್ಟಿನಿಂದ ಚಟ್ಟದವರೆಗೆ ಕ್ಷೌರಿಕನ ಸೇವೆ ಅಗತ್ಯವಾಗಿ ಬೇಕೇಬೇಕು. ಸವಿತಾ ಸಮಾಜದ ಈ ಅಂಗಡಿಗಳು ಹಿಂದಿನ ಕಾಲದಿಂದಲೂ ಸಾರ್ವಜನಿಕ ಕಳವಳವನ್ನು ತಿಳಿಸುವ, ನಾಗರಿಕರನ್ನು ಸಮಕಾಲೀನ ವಿಷಯಗಳ ಬಗ್ಗೆ ಚರ್ಚೆಗಳಲ್ಲಿ ತೊಡಗಿಸಿಕೊಳ್ಳುವ ನೆಲೆಗಳಾಗಿ ಕಾರ್ಯನಿರ್ವಹಿಸಿವೆ.

ಹಿಂದಿನ ಕಾಲದಿಂದಲೂ ಕ್ಷೌರಿಕರು ಅಥವಾ ಸವಿತಾ ಸಮಾಜದವರು ಶಸ್ತ್ರಚಿಕಿತ್ಸೆ ಮತ್ತು ದಂತ ಚಿಕಿತ್ಸೆಯಲ್ಲಿ ಪರಿಣಿತಿ ಪಡೆದವರಾಗಿದ್ದರು ಎಂದರೆ ಅತಿಶಯೋಕ್ತಿಯಲ್ಲ. ಐತಿಹಾಸಿಕವಾಗಿ ನೋಡಿದರೆ, ಎಲ್ಲ ಕೇಶ ವಿನ್ಯಾಸಕರು ಕ್ಷೌರಿಕರೇ ಆಗಿದ್ದರೂ ಮುಂದೆ 20ನೇ ಶತಮಾನದಲ್ಲಿ ಪ್ರಸಾಧನ ಕಲೆ ಕ್ಷೌರ ವೃತ್ತಿಯಿಂದ ಕವಲೊಡೆಯಿತು. ಅಂದರೆ ಪ್ರಸಾಧನ ಕಲೆ ಕೂಡ ಕ್ಷೌರ ವೃತ್ತಿಯ ಕುಲಕಸುಬಿನೊಂದಿಗೆ ಬಂದದ್ದು.

ಸವಿತಾ ಸಮಾಜದವರು ಇಂದಿನ ಯುಗದಲ್ಲಿ ಸ್ಪರ್ಧೆಯನ್ನು ಮೆಟ್ಟಿ ನಿಲ್ಲಬೇಕಾದರೆ ಕೌಶಲ್ಯಭರಿತರಾಗಬೇಕು. ಪ್ರಸಾಧನ ಕಲೆಯಲ್ಲಿ ಹೆಚ್ಚಿನ ಪರಿಣಿತಿಯನ್ನು ಪಡೆಯಬೇಕು. ಸರಕಾರದ ಕೌಶಲ್ಯ ಅಭಿವೃದ್ಧಿ ಕೇಂದ್ರದಿಂದ ತರಬೇತಿ ಹೊಂದಿ, ಶೈಕ್ಷಣಿಕ ಪ್ರಮಾಣಪತ್ರ ಪಡೆದು ಈ ವೃತ್ತಿಯಲ್ಲಿ ನಿಪುಣರಾದಾಗ ಮಾತ್ರ ಸಬಲರಾಗಿ ಬದುಕು ಸಾಗಿಸಲು ಸಾಧ್ಯ. ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ ಎನ್ನುವಂತೆಯೇ ಕೌಶಲ್ಯ ಬಲ್ಲವನಿಗೆ ನಿರುದ್ಯೋಗವಿಲ್ಲ.

ಸವಿತಾ ಸಮಾಜವು ಇಂದು ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದೆ. ಈ ಸಮಾಜದವರನ್ನು ಮೇಲೆತ್ತುವ ಕಾರ್ಯ ಆಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸವಿತಾ ಮಹರ್ಷಿ ಜಯಂತಿ ಆಚರಣೆಯು ಈ ಸಮುದಾಯದವರ ಜನರನ್ನು ಸಂಘಟಿಸಲು, ಸಾಮಾಜಿಕವಾಗಿ, ಆರ್ಥಿಕವಾಗಿ ಬಲಪಡಿಸಲು ಸಹಾಯಕವಾಗಲಿದೆ.

ಈ ಜಯಂತಿ ಆಚರಣೆಯು ಕೇವಲ ಸವಿತಾ ಸಮಾಜದವರಿಗೆ ಸೀಮಿತವಾದ ಆಚರಣೆಯಾಗದೇ ಸರ್ವರ ಏಳಿಗೆಯ ಪ್ರತೀಕವಾಗಲಿ. ಸವಿತಾ ಮಹರ್ಷಿಗಳ ಹಾದಿಯಲ್ಲಿ ನಾವೆಲ್ಲ ಸಾಗಿ ಆಚಾರ- ವಿಚಾರ ಮೈಗೂಡಿಸಿಕೊಳ್ಳೋಣ. ಸಮಾಜದಲ್ಲಿ ಸತ್ಪ್ರಜೆಗಳಾಗಿ, ಸರ್ವರನ್ನು ಗೌರವಿಸುವಂತಾಗೋಣ. ಎಲ್ಲ ವರ್ಗದ ಜನರಿಗೂ ತಾರತಮ್ಯವಿಲ್ಲದೇ ಸವಿತಾ ಸಮಾಜ ಸೇವೆ ನೀಡುತ್ತಿರುವುದು ಹೀಗೆಯೇ ಮುಂದುವರೆಯಲಿ. ಸವಿತಾ ಸಮಾಜದವರು ಸಾಮಾಜಿಕ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಮತ್ತಷ್ಟು ಸದೃಢವಾಗಲಿ.

(ಲೇಖಕರು ವಿಶ್ರಾಂತ ಕುಲಪತಿ, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ವಿಶ್ವವಿದ್ಯಾಲಯ, ಗದಗ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net