

ಅಯ್ಯೋ ಎಲ್ಲಿ ಟ್ಯಾಕ್ಸ್ ಉಳಿಸೋದಪ್ಪಾ? ಪ್ರತಿ ವರ್ಷ ಈ ಇನ್ ಕಮ್ ಟ್ಯಾಕ್ಸ್ ದೇ ದೊಡ್ಡ ತಲೆನೋವು ಅಂತ ವೇತನದಾರರು ಅಲವತ್ತುಕೊಳ್ತಿರ್ತಾರೆ. ಹೀಗೆ ತೆರಿಗೆ ಉಳಿಸೋ ಪ್ರಯತ್ನದಲ್ಲಿರುವವರಿಗೆ ಮಾರ್ಚ್ 31, 2020 ಡೆಡ್ ಲೈನ್. ಹೌದು ಇಲ್ಲಿಯ ತನಕ ವೈಯಕ್ತಿಕ ಆದಾಯ ತೆರಿಗೆಯಲ್ಲಿ ಉಳಿತಾಯ ಮಾಡೋಕೆ ಎಷ್ಟು ಪ್ಲಾನ್ ಮಾಡಿದ್ದೀರೋ ಗೊತ್ತಿಲ್ಲ. ಆದರೆ ಇನ್ನುಳಿದಿರೋ ಕೆಲ ದಿನಗಳಲ್ಲಿ ಕಾರ್ಯಪ್ರವೃತ್ತರಾಗಿ ಹೂಡಿಕೆ ಮಾಡಿದ್ರೂ ತೆರಿಗೆ ಉಳಿಸೋ ಸರ್ಕಸ್ ನಲ್ಲಿ ನೀವು ಸಫಲರಾಗಬಹುದು.
ತೆರಿಗೆಗೆ ಒಳಪಡುವ ಆದಾಯವೆಷ್ಟು ಅರಿಯಿರಿ: ನಿಮ್ಮ ಒಟ್ಟು ಆದಾಯದಲ್ಲಿ ತೆರಿಗೆ ವ್ಯಾಪ್ತಿಗೆ ಬರುವ ಆದಾಯವೆಷ್ಟು? ಇದನ್ನು ಅರಿಯುವುದರೊಂದಿಗೆ ತೆರಿಗೆ ಉಳಿಸುವ ಪ್ರಕ್ರಿಯೆ ಆರಂಭಿಸಬಹುದು. (ಪಟ್ಟಿ ಗಮನಿಸಿ)
ನ್ಯಾಯಯುತವಾಗಿ ಗರಿಷ್ಠ ಆದಾಯ ತೆರಿಗೆ ಉಳಿಸುವುದು ಹೇಗೆ?
35 ವರ್ಷ ವಯಸ್ಸಿನ ನವೀನ್ ವಾರ್ಷಿಕವಾಗಿ ರೂ. 10 ಲಕ್ಷ ಆದಾಯ ಗಳಿಸುತ್ತಾರೆ. ಅವರು ಇಎಲ್ ಎಸ್ ಎಸ್ , ಪಿಪಿಎಫ್ ಮತ್ತು ಇನ್ಶೂರೆನ್ಸ್ ಸೇರಿ ಆದಾಯ ತೆರಿಗೆಯ ಸೆಕ್ಷನ್ 80 ಸಿ ಅಡಿಯಲ್ಲಿ ರೂ. 1.5 ಲಕ್ಷ ಉಳಿತಾಯ ಮಾಡುತ್ತಾರೆ. ನವೀನ್ ತಮಗೆ, ಮಡದಿ ಮಕ್ಕಳಿಗೆ ಮತ್ತು ಹಿರಿಯ ನಾಗರಿಕರಾಗಿರುವ ಪೋಷಕರಿಗೆ ಆರೋಗ್ಯ ವಿಮೆ ಪಡೆದುಕೊಂಡಿದ್ದಾರೆ. ಆರೋಗ್ಯ ವಿಮೆಗೆ ನವೀನ್ ವಾರ್ಷಿಕ 50 ಸಾವಿರ ಪ್ರೀಮಿಯಂ ಪಾವತಿಸುತ್ತಾರೆ. ಇದಕ್ಕಾಗಿ ಸೆಕ್ಷನ್ 80 ಡಿ ಅಡಿಯಲ್ಲಿ ವಿನಾಯಿತಿ ಪಡೆದುಕೊಳ್ಳುತ್ತಾರೆ. ನವೀನ್ ಮಾಡಿರುವ ಗೃಹ ಸಾಲಕ್ಕೆ ಪಾವತಿಸುವ ಬಡ್ಡಿಯ ಮೇಲೆ ಸೆಕ್ಷನ್ 24 ಅಡಿಯಲ್ಲಿ ರೂ. 2 ಲಕ್ಷದ ವರೆಗೆ ವಿನಾಯಿತಿ ಲಭ್ಯ. ಇನ್ನು ಎನ್ ಪಿಎಸ್ ನಲ್ಲಿ ರೂ. 50 ಸಾವಿರ
ಹೂಡಿಕೆ ಮಾಡಿ ಅವರು ಸೆಕ್ಷನ್ 80 ಸಿಸಿಡಿ (1ಬಿ) ಅಡಿಯಲ್ಲಿ ರೂ. 50 ಸಾವಿರ ವಿನಾಯಿತಿ ಪಡೆಯುತ್ತಾರೆ. 10 ಲಕ್ಷ ಆದಾಯವಿದ್ದರೂ ಸಹಿತ ಆದಾಯ ತೆರಿಗೆ ವಿನಾಯಿತಿ ಮತ್ತು ಇನ್ನಿತರ ನಿಯಮಗಳನ್ನು ಬಳಸಿಕೊಂಡು ನವೀನ್ ಶೂನ್ಯ ತೆರಿಗೆ ಪಾವತಿಸುತ್ತಾರೆ.
| ಸಿ. ಎಸ್. ಸುಧೀರ್ ಸಿಇಒ, ಸಂಸ್ಥಾಪಕ, ಇಂಡಿಯನ್ ಮನಿ ಡಾಟ್ ಕಾಂ