

| ಉಮೇಶ್ ಕುಮಾರ್ ಎಸ್. ಬೆಂಗಳೂರು
ಡಿಜಿಟಲ್ ಜಗತ್ತು ಬಹಳ ವೇಗವಾಗಿ ಬೆಳೆಯುತ್ತಿದೆ. ಇಂಟರ್ನೆಟ್ ಬಳಕೆದಾರರ ಸಂಖ್ಯೆಯೂ ಅದೇ ವೇಗದಲ್ಲಿ ವೃದ್ಧಿಯಾಗುತ್ತಿದೆ. ಡಿಜಿಟಲ್ ಜಗತ್ತು ಪ್ರವೇಶಿಸಿದವರು ಗೊತ್ತಿದ್ದೊ ಗೊತ್ತಿಲ್ಲದೆಯೋ ಅಪ್ಡೇಟ್ ಆಗುತ್ತಿದ್ದಾರೆ. ಮೆಟಾವರ್ಸ್ ಎಂಬ ಪರ್ಯಾಯ ಪ್ರಪಂಚದ ಬಗ್ಗೆ ಫೇಸ್ಬುಕ್, ಮೈಕ್ರೋಸಾಫ್ಟ್ ಮತ್ತು ಇತರೆ ಕಂಪನಿಗಳು ಇತ್ತೀಚೆಗಷ್ಟೆ ಗಮನಸೆಳೆದಿದ್ದವು. ಇಂತಹ ಡಿಜಿಟಲ್ ಜಗತ್ತಿನ ಉಸಿರು ಇಂಟರ್ನೆಟ್. ಇದು ಇಲ್ಲದೆ ಇಲ್ಲಿ ಯಾವುದೇ ವಹಿವಾಟು ಇರಲ್ಲ. ಜಗತ್ತಿನ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಗಮನಿಸಿದರೆ ಶೇಕಡ 70ರಷ್ಟು ಬಳಕೆದಾರರು ಯುವಜನರು. ಸಾಮಾಜಿಕ ಜಾಲತಾಣಗಳನ್ನೊಮ್ಮೆ ಇಣುಕಿ ನೋಡಿದರೆ ಇಂಟರ್ನೆಟ್ ಸೇವೆ ಸರಿಯಾಗಿ ಲಭ್ಯವಿಲ್ಲದಿರುವ ಬಗ್ಗೆ ಒಂದಿಲ್ಲೊಂದು ದೂರು ದುಮ್ಮಾನಗಳು ಗೋಚರಿಸುತ್ತವೆ. ಪರಿಹಾರ ಏನು? ಎಂದು ಕೇಳಿದರೆ, ಡಯಲ್ ಅಪ್ ಇಂಟರ್ನೆಟ್ ಸೇವೆಯಿಂದ ಹಿಡಿದು ಇತ್ತೀಚಿನ ಸ್ಯಾಟಲೈಟ್ ಇಂಟರ್ನೆಟ್ ತನಕ ಇಂಟರ್ನೆಟ್ ಸೇವೆ ಬೆಳೆದು ಬಂದ ದಾರಿಯೇ ಪರಿಹಾರ ಸೂಚಕವಾಗಿ ಕಣ್ಣಿಗೆ ಗೋಚರಿಸುತ್ತದೆ. ಬದಲಾಗುತ್ತಿರುವ ಡಿಜಿಟಲ್ ಜಗತ್ತಿನಲ್ಲಿ ಸ್ಯಾಟಲೈಟ್ ಇಂಟರ್ನೆಟ್ ಹೆಚ್ಚಿನ ಗಮನ ಸೆಳೆಯುತ್ತಿದೆ. ಜಗತ್ತಿನ ಅತ್ಯಂತ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಈಗಾಗಲೇ ಸ್ಯಾಟಲೈಟ್ ಇಂಟರ್ನೆಟ್ನ ‘ಬೀಟಾ’ ಸೇವೆ ಒದಗಿಸುತ್ತಿದ್ದಾರೆ. ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಕೂಡ ಈ ಸೇವೆ ಒದಗಿಸಲು ಸಿದ್ಧತೆ ನಡೆಸಿದ್ದಾರೆ. ಭಾರ್ತಿ ಏರ್ಟೆಲ್ ಸೇರಿ ಇತರೆ ಕೆಲವು ಕಂಪನಿಗಳು ಕೂಡ ಸ್ಯಾಟಲೈಟ್ ಇಂಟರ್ನೆಟ್ ಸೇವೆ ಒದಗಿಸಲು ಮುಂದಾಗಿವೆ.
ಭಾರತದಲ್ಲಿ ಮುಂದಿನ ವರ್ಷ ಸೇವೆ?: ಇಂಟರ್ನೆಟ್ ಮೂಲಸೌಕರ್ಯದ ಕೊರತೆ ಕಾರಣ ನಗರ ಮತ್ತು ಗ್ರಾಮಗಳ ನಡುವೆ ಡಿಜಿಟಲ್ ಕಂದಕ ಏರ್ಪಟ್ಟಿದೆ ಎಂಬ ವಾದ ಇತ್ತೀಚೆಗೆ ಸರ್ವೆಸಾಮಾನ್ಯ. ಇದನ್ನು ನೀಗಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ಕ್ರಮಗಳನ್ನು ತೆಗೆದುಕೊಂಡಿದೆ. ಇನ್ನೊಂದೆಡೆ, ಸರ್ಕಾರ ಅನುಮತಿ ನೀಡಿದರೆ ಮುಂದಿನ ವರ್ಷ ಅಂತ್ಯದೊಳಗೆ ಸ್ಯಾಟಲೈಟ್ ಇಂಟರ್ನೆಟ್ ಸೇವೆ ಭಾರತದಲ್ಲಿ ಒದಗಿಸುವುದಾಗಿ ಎಲಾನ್ ಮಸ್ಕ್ ಅವರ ಎಸ್ಎಸ್ಸಿಪಿಎಲ್ -ಸ್ಟಾರ್ಲಿಂಕ್ ಕಂಪನಿ ಘೋಷಿಸಿದೆ. ಇದರಂತೆ, ಭಾರತ ಸರ್ಕಾರದ ಅನುಮತಿ ಸಿಕ್ಕರೆ 2022ರ ಡಿಸೆಂಬರ್ ವೇಳೆಗೆ 2 ಲಕ್ಷ ಟರ್ವಿುನಲ್ನೊಂದಿಗೆ ಉಪಗ್ರಹ ಇಂಟರ್ನೆಟ್ ಸಕ್ರಿಯವಾಗಲಿದೆ.
ಹೇಗೆ ಕೆಲಸ ಮಾಡುತ್ತೆ?: ಎಲಾನ್ ಮಸ್ಕ್ ಅವರ ಸ್ಟಾರ್ ಲಿಂಕ್ ಉಪಗ್ರಹ ಗಳು ಲೇಸರ್ಗಳನ್ನು ಬಳಸುತ್ತವೆ. ಸಂವಹನ ಜಾಲವು ಡೇಟಾವನ್ನು ಕಳುಹಿಸುವ ಮತ್ತು ಸ್ವೀಕರಿಸುವ ಕೆಲಸ ಮಾಡುತ್ತದೆ. ಈ ಡೇಟಾ ವನ್ನು ಬಳಕೆದಾರರು ತಮ್ಮಲ್ಲಿರುವ ಉಪಕರಣಗಳ ಬಳಕೆಗೆ ಸ್ಯಾಟಲೈಟ್ ಡಿಶ್, ಮಾಡೆಮ್ಳ ಮೂಲಕ ಸ್ವೀಕರಿಸಿ ಬಳಸಬಹುದು. ಇದಕ್ಕಾಗಿ ಎನ್ಒಸಿ ಅಥವಾ ನೆಟ್ವಕ್ ಆಪರೇಶನ್ ಸೆಂಟರ್ಗಳನ್ನು ಕಂಪನಿ ಸ್ಥಾಪಿಸುತ್ತಿದೆ.
ಉಪಕರಣಗಳು ಏನು ಬೇಕು?: ಸ್ಯಾಟಲೈಟ್ ಇಂಟರ್ನೆಟ್ ಪಡೆಯಬೇಕಾದರೆ ಸ್ಯಾಟಲೈಟ್ ಡಿಶ್, ಮಾಡೆಮ್ರೂಟರ್ ಅಗತ್ಯವಿದೆ. ಸ್ಟಾರ್ಲಿಂಕ್ ಕಂಪನಿಯು ಇವುಗಳ ಕಿಟ್ ಅನ್ನು ಮಾರಾಟ ಮಾಡುತ್ತಿದೆ.
ದರ ಎಷ್ಟು?: ಭಾರತದಲ್ಲಿ ಈಗಾಗಲೇ 5,000ಕ್ಕೂ ಹೆಚ್ಚು ಜನ ಇಂಟರ್ನೆಟ್ ಸೇವೆ ಬೇಕೆಂದು ಪ್ರೀ-ಆರ್ಡರ್ ಮಾಡಿದ್ದಾರೆ. ಕಂಪನಿ ಪ್ರತಿ ಗ್ರಾಹಕರಿಂದ 7,350 ರೂಪಾಯಿ (99 ಅಮೆರಿಕನ್ ಡಾಲರ್) ಅನ್ನು ಠೇವಣಿಯಾಗಿ ಪಡೆದುಕೊಳ್ಳುತ್ತಿದೆ. ಪ್ರಾಯೋಗಿಕ ಹಂತದಲ್ಲಿ ಡೇಟಾ ಸ್ಪೀಡ್ ಸೆಕೆಂಡ್ಗೆ 50ರಿಂದ 150 ಮೆಗಾಬಿಟ್ ಇರಲಿದೆ ಎಂದು ಎಂದು ಕಂಪನಿಯ ಭಾರತದ ಕಂಟ್ರಿ ಡೈರೆಕ್ಟರ್ ಸಂಜಯ್ ಭಾರ್ಗವ ತಿಳಿಸಿದ್ದಾರೆ.
ಎಷ್ಟು ಪ್ರಯೋಜನಕಾರಿ?: ಗ್ರಾಮೀಣ ಭಾರತದ ಹಿಂದುಳಿದ ಪ್ರದೇಶಗಳಲ್ಲಿ ಇಂದಿಗೂ ಮೊಬೈಲ್ ನೆಟವರ್ಕ್ ಬಿಡಿ, ಸಾಮಾನ್ಯ ದೂರವಾಣಿಯೇ ಸರಿಯಾಗಿ ಕೆಲಸ ಮಾಡಲ್ಲ. ಇಂತಹ ಸನ್ನಿವೇಶದಲ್ಲಿ ‘ನಿಯತ’ ಇಂಟರ್ನೆಟ್ ಸೇವೆ ಕನಸಿನ ಮಾತೇ ಸರಿ. ಸ್ಯಾಟಲೈಟ್ ಇಂಟರ್ನೆಟ್ ಸೇವೆಯ ಮೂಲಕ ಗ್ರಾಮೀಣ ಭಾಗದಲ್ಲೂ 10-40 ಎಂಬಿಪಿಎಸ್ ವೇಗದ ಇಂಟರ್ನೆಟ್ ಪಡೆಯಬಹುದು. ಇದರ ಗರಿಷ್ಠ ವೇಗ 300 ಎಂಬಿಪಿಎಸ್ ಎಂದು ಅಂದಾಜಿಸಲಾಗಿದೆ.
ಮಳೆಗಾಳಿ ಇದ್ರೆ ಏನು ಕಥೆ?: ಉಪಗ್ರಹ ಚಾನೆಲ್ಗಳಂತೆಯೇ ತೀವ್ರ ಮಳೆ, ಗಾಳಿ ಮುಂತಾದ ಹವಾಮಾನ ವೈಪರೀತ್ಯ ಇದ್ದರೆ ಸ್ಯಾಟಲೈಟ್ ಡಿಶ್ ಸರಿಯಾಗಿ ಕೆಲಸ ಮಾಡಲ್ಲ. ಇಂಟರ್ನೆಟ್ ಸೇವೆಯಲ್ಲಿ ಅಡಚಣೆ ಉಂಟಾಗಬಹುದು ಎಂದು ಸ್ಟಾರ್ಲಿಂಕ್ ಕಂಪನಿ ಸ್ಪಷ್ಟಪಡಿಸಿದೆ.
ಉಪಗ್ರಹ ಟಿವಿ ಚಾನೆಲ್ನಂತೆ: ಉಪಗ್ರಹ ಆಧಾರಿತ ಟಿವಿ ಚಾನೆಲ್ಗಳಂತೆಯೇ ಸ್ಯಾಟಲೈಟ್ ಇಂಟರ್ನೆಟ್ಗೂ ಮನೆಯ ಮೇಲೆ ಛಾವಣಿಯಲ್ಲಿ ಸ್ಯಾಟಲೈಟ್ ಡಿಶ್ ಬೇಕು. ಇದನ್ನು ಸ್ಥಾಪಿಸಿದರೆ ಮಾತ್ರವೇ ಉಪಗ್ರಹದಿಂದ ಬಾಹ್ಯಾಕಾಶದಿಂದ ಇಂಟರ್ನೆಟ್ ಪಡೆಯಲು ಸಾಧ್ಯ. ಇದಕ್ಕೆ ಪ್ರತ್ಯೇಕ ಕೇಬಲ್ ಏನೂ ಬೇಕಾಗಿಲ್ಲ. ಬಾಹ್ಯಾಕಾಶದ ಕಕ್ಷೆಯಲ್ಲಿ ಇಂಟರ್ನೆಟ್ ಒದಗಿಸುವ ಉಪಗ್ರಹಗಳು ಸಂಚರಿಸುವ ಕಾರಣ ಅದರಿಂದ ಸಂಕೇತಗಳ ರೂಪದಲ್ಲಿ ಇಂಟರ್ನೆಟ್ ಡಿಶ್ಗೆ ‘ನೇರ’ ರವಾನೆಯಾಗುತ್ತದೆ.