ಸರ್ವಜ್ಞಾನ ಸಮನ್ವಯಮೂರ್ತಿ ಸ್ವಾಮಿ ವಿವೇಕಾನಂದ

Vivekananda
Published on
ಸ್ವಾಮಿ ವಿವೇಕಾನಂದರ ಮನಸ್ಸಿನಲ್ಲಿ ಸತತವಾಗಿ ಉನ್ನತ ವಿಚಾರಧಾರೆಗಳ ವಿಮರ್ಶೆ ಮತ್ತು ಮಂಥನ ನಡೆಯುತ್ತಿತ್ತು. ಆದುದರಿಂದ ಅವರು ಅಂತಹ ಶ್ರೇಷ್ಠ ಮಟ್ಟದ ಜ್ಞಾನದ ಪಾಕವನ್ನು ಉಣಿಸಲು ಸಾಧ್ಯವಾಯಿತು. ಅವರು ವಿಚಾರಗಳನ್ನು ಮಂಡಿಸುತ್ತಿದ್ದ ರೀತಿಯೂ ಅನುಪಮ.

ಸ್ವಾಮಿ ವಿವೇಕಾನಂದರದು ಜ್ಞಾನಕೇಂದ್ರಿತ ವ್ಯಕ್ತಿತ್ವ. ವ್ಯಕ್ತಿತ್ವವನ್ನು ನಿಜವಾಗಿ ಬೆಳಗಿಸುವ ಶಕ್ತಿಯಿರುವುದು ಜ್ಞಾನಕ್ಕೆ ಮತ್ತು ಅದರಿಂದ ಪರಿಷ್ಕೃತಗೊಂಡ ವಿವೇಕಪೂರ್ಣ ಬುದ್ಧಿಗೆ. ಸ್ವಾಮೀಜಿಯವರ ವ್ಯಕ್ತಿತ್ವದಲ್ಲಿ ಮತ್ತು ಜೀವನದಲ್ಲಿ ವಿವೇಕದ ಪರಿಪೂರ್ಣತೆಯನ್ನು ನಾವು ಕಾಣಬಹುದು. ಅವರ ಬೋಧನೆ, ಚಿಂತನೆಗಳು ಲಕ್ಷಾಂತರ ಜನಮನವನ್ನು ಜಾಗೃತಗೊಳಿಸಿ ನವಶಕ್ತಿ ಮತ್ತು ಹೊಸ ಬೆಳಕನ್ನು ಕೊಟ್ಟು ಜೀವನದಲ್ಲಿ ಪ್ರಗತಿಯ ಮಾರ್ಗವನ್ನು ಕಂಡುಕೊಳ್ಳಲು ಸಹಾಯ ಮಾಡುವ ಒಂದು ಬೃಹತ್ ಸ್ಪೂರ್ತಿಯ ಕೇಂದ್ರ. ಇದಕ್ಕೆ ಕಾರಣವೇನೆಂದರೆ ಎಲ್ಲ ಅವಶ್ಯಕ ಜ್ಞಾನಗಳ ಸಮನ್ವಯವನ್ನು ಅವರಲ್ಲಿ ನಾವು ಕಾಣಬಹುದು.

ಭಾರತದ ಪ್ರಜ್ವಲ ರತ್ನ: ಅವರು ಹುಟ್ಟಿ ಬೆಳೆದ ಕಾಲ ಇತಿಹಾಸದಲ್ಲಿ ಒಂದು ಔಚಿತ್ಯಪೂರ್ಣವಾದ ಸಂಕ್ರಮಣಕಾಲ. ಅದು ‘ಜ್ಞಾನ ಪುನರುಜ್ಜೀವನ’ದ ಘಟ್ಟ. ಪಾಶ್ಚಾತ್ಯ ವಿಜ್ಞಾನದ ಉದಯ, ನೂತನ ಸಾಮಾಜಿಕ ಪ್ರಜ್ಞೆ, ಬೆಳವಣಿಗೆಯ ಮತ್ತು ವಿಶ್ವದಾದ್ಯಂತ ಹೊಸ ಚಿಂತನೆಗಳ ಮಂಥನದ ಕಾಲ. ‘ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು’ ಎಂಬಂತೆ ಆದಿ ಮಾನವನಿಂದ ಆಧುನಿಕ ಮಾನವನವರೆಗೆ ಬೆಳೆದುಬಂದ ಮುಖ್ಯ ಜ್ಞಾನರಾಶಿಯನ್ನು ಅವಲೋಕಿಸಿ, ಚಿಂತಿಸಿ, ಸಮನ್ವಯಗೊಳಿಸಿ, ಅದನ್ನು ವರ್ತಮಾನಕ್ಕೆ ಅನ್ವಯಿಸಿದರು. ಭವಿಷ್ಯದ ಅವಶ್ಯಕತೆಗಳನ್ನು ಕಂಡುಕೊಂಡು ಅದನ್ನು ಪುನಶ್ಚೇತನಗೊಳಿಸಿದ ದಾರ್ಶನಿಕರು ಸ್ವಾಮಿ ವಿವೇಕಾನಂದರು. ಭಾರತದ ಜ್ಞಾನಪುನರುತ್ಥಾನ ಕಾಲದ ‘ಪ್ರಜ್ವಲರತ್ನ’ವೆಂದು ಇತಿಹಾಸ ತಜ್ಞರಿಂದ ಪರಿಗಣಿಸಲ್ಪಟ್ಟವರು ಸ್ವಾಮೀಜಿಯವರು.

ಸ್ವಾಮೀಜಿಯವರು ಪುರಾತನ ಮತ್ತು ಆಧುನಿಕತೆಗಳ ಅಪೂರ್ವ ಸಂಗಮವಾಗಿದ್ದರು. ವೇದೋಪನಿಷತ್ತಿನ ಕಾಲದಿಂದ ಆಧುನಿಕ ವೈಜ್ಞಾನಿಕ ಯುಗದವರೆಗಿನ ಸಮಸ್ತ ಜ್ಞಾನಭಂಡಾರವನ್ನು ಕಡೆದು ಅದರ ಸಾರ ಸಂಗ್ರಹವನ್ನೆಲ್ಲ ಅರಗಿಸಿಕೊಂಡಿದ್ದನ್ನು ಅವರ ಬದುಕಿನಲ್ಲಿ ಮತ್ತು ಕೃತಿಗಳಲ್ಲಿ ಕಾಣಬಹುದು. ಜಗತ್ತಿನ ಇತಿಹಾಸದಲ್ಲಿ ಸ್ವಾಮೀಜಿಯವರನ್ನು ಬಿಟ್ಟರೆ ಅಷ್ಟೊಂದು ಜ್ಞಾನದ ವ್ಯಾಪ್ತಿ, ಸಮನ್ವಯ ದೃಷ್ಟಿಕೋನ, ಪ್ರತಿಭೆ, ಸ್ವಂತಿಕೆ, ಒಳನೋಟಗಳನ್ನೊಳಗೊಂಡ ಹಾಗೂ ಆಧ್ಯಾತ್ಮಿಕ ಅನುಭೂತಿಯನ್ನು ಪಡೆದ ವಿರಾಟ್ ವ್ಯಕ್ತಿತ್ವ ಇನ್ನೊಂದು ಕಾಣಬರುವುದಿಲ್ಲ. ಅವರ ದೂರದೃಷ್ಟಿ ಮತ್ತು ಅನುಷ್ಠಾನಯೋಗ್ಯ ವಿಚಾರಗಳು ಸರ್ವಕಾಲಕ್ಕೂ ಪ್ರಸ್ತುತವಾದವು.

ಬಹುಮುಖ ವಿದ್ವತ್ತಿನ ವ್ಯಾಪ್ತಿ: ಸ್ವಾಮೀಜಿಯವರ ಜ್ಞಾನರಾಶಿಯ ವ್ಯಾಪ್ತಿ ಮತ್ತು ವಿದ್ವತ್ತಿನ ಆಯಾಮಗಳು ವೈವಿಧ್ಯಮಯ ಮತ್ತು ಅಪಾರ. ಅವರು ಭಾರತೀಯ ತತ್ತ ್ವಾಸ್ತ್ರಗಳಾದ ಉಪನಿಷತ್ತು, ವೇದಗಳು, ಭಗವದ್ಗೀತೆ, ಯೋಗ ಮತ್ತಿತರ ಷಡ್​ದರ್ಶನಗಳನ್ನು ಆಳವಾಗಿ ಅಧ್ಯಯನ ಮಾಡಿದವರಾಗಿದ್ದರು. ಬಂಗಾಳಿ, ಸಂಸ್ಕೃತ, ಹಿಂದಿ, ಫ್ರೆಂಚ್ ಮತ್ತು ಆಂಗ್ಲಭಾಷೆಗಳಲ್ಲಿ ಪ್ರಭುತ್ವವನ್ನು ಸಾಧಿಸಿದ್ದರು. ವಿಜ್ಞಾನ, ಇತಿಹಾಸ, ತರ್ಕಶಾಸ್ತ್ರ, ಪಾಶ್ಚಾತ್ಯ ತತ್ತ್ವಶಾಸ್ತ್ರ, ಸಂಗೀತಶಾಸ್ತ್ರ, ಮನಃಶಾಸ್ತ್ರ, ಆಂಗ್ಲ ಸಾಹಿತ್ಯ, ಸಂಸ್ಕೃತ ಸಾಹಿತ್ಯ ಮುಂತಾದ ವಿಷಯಗಳಲ್ಲಿ ಪಾಂಡಿತ್ಯವನ್ನು ತಮ್ಮದಾಗಿಸಿಕೊಂಡಿದ್ದರು.

ಸಮನ್ವಯ ಪ್ರತಿಭೆ: ಸ್ವಾಮೀಜಿಯವರ ವಿಚಾರಧಾರೆಯಲ್ಲಿ ಈ ಕೆಳಗಿನ ಭಾವನೆ, ತತ್ತ್ವಸಿದ್ಧಾಂತ, ಸಾಧನಮಾರ್ಗಗಳ ಸಮನ್ವಯಗಳನ್ನು ಕಾಣಬಹುದು. ಪುರಾತನ ಮತ್ತು ಆಧುನಿಕ; ಸಾಂಪ್ರದಾಯಿಕತೆ ಮತ್ತು ನೂತನತೆ; ಧರ್ಮ ಮತ್ತು ವಿಜ್ಞಾನ; ಕರ್ಮ ಮತ್ತು ಪೂಜೆ; ಲೌಕಿಕ ಮತ್ತು ಪಾರಮಾರ್ಥಿಕ; ಶ್ರದ್ಧೆ ಮತ್ತು ವೈಚಾರಿಕತೆ; ಹೃದಯವಂತಿಕೆ ಮತ್ತು ಬುದ್ಧಿವಂತಿಕೆ; ಭಕ್ತಿ ಮತ್ತು ಜ್ಞಾನ; ದೇಶಭಕ್ತಿ ಮತ್ತು ವಿಶ್ವಕಲ್ಯಾಣ; ಮೋಕ್ಷ ಮತ್ತು ಜಗತ್​ಹಿತ; ತತ್ತ್ವ ಮತ್ತು ಅನುಷ್ಠಾನ. ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ರೊಮೈ ರೋಲಾ ಅವರು ಸ್ವಾಮೀಜಿಯವರ ವ್ಯಕ್ತಿತ್ವದ ಹಿರಿಮೆ ಮತ್ತು ವೈಶಿಷ್ಟ್ಯದ ಬಗ್ಗೆ ಹೀಗೆ ಹೇಳಿದ್ದಾರೆ: ‘ಸ್ವಾಮಿ ವಿವೇಕಾನಂದರ ರಚನಾತ್ಮಕ ಪ್ರತಿಭೆಯನ್ನು

ಸಮತೋಲನ ಮತ್ತು ಸಮನ್ವಯ ಎಂಬ ಎರಡೇ ಶಬ್ದಗಳಲ್ಲಿ ಸಂಕ್ಷಿಪ್ತವಾಗಿ ಹೇಳಬಹುದು’.

ಸೋದರಿ ನಿವೇದಿತಾ ಬರೆಯುತ್ತಾರೆ- ‘ಹೀಗೆ ಪ್ರಾಚ್ಯ ಮತ್ತು ಆಧುನಿಕ ಚಿತ್ತಪ್ರವಾಹಗಳು, ಎರಡು ಮಹಾಭಾವನದಿಗಳು ಅಲ್ಲಿ ಸಂಧಿಸಿದವು. ಐತಿಹಾಸಿಕ ಷಿಕಾಗೋ ಸರ್ವಧರ್ಮ ಸಮ್ಮೇಳನದ ವೇದಿಕೆಯ ಮೇಲೆ ನಿಂತಿದ್ದ ಕಾವಿಧಾರಿಯಾದ ಪರಿವ್ರಾಜಕನು ಆ ಭಾವನದಿಗಳ ಸಂಗಮ ಸ್ಥಾನವಾದನು. ಇದೇ ನಮ್ಮ ಗುರುವಿನ ಜೀವನದ ಪರಮೋಚ್ಚ ವೈಶಿಷ್ಟ್ಯ. ಏಕೆಂದರೆ ಇಲ್ಲಿ ಇವರು ಪೂರ್ವಪಶ್ಚಿಮಗಳಷ್ಟೇ ಅಲ್ಲದೆ ಭೂತ ಭವಿಷ್ಯತ್ತು ಗಳ ಸಂಗಮಸ್ಥಾನವಾಗುತ್ತಾರೆ’.

ವೈಚಾರಿಕತೆಯ ಹಿರಿಮೆ: ಮಾನವನ ಚರಿತ್ರೆಯಲ್ಲಿ, ಸಾಮಾಜಿಕ ಬದುಕಿನಲ್ಲಿ ಮತ್ತು ತತ್ತ್ವಶಾಸ್ತ್ರದಲ್ಲಿ ಕಂಡುಬರುವ ಅನೇಕ ಪರಸ್ಪರ ವಿರೋಧಾಭಾಸಗಳನ್ನು ತಮ್ಮ ಸೃಜನಶೀಲ ಮತ್ತು ಧೀಮಂತ ವಿಚಾರಗಳಿಂದ ಹೋಗಲಾಡಿಸುವ ಪ್ರಯತ್ನವನ್ನು ಸ್ವಾಮಿ ವಿವೇಕಾನಂದರ ಬರಹ ಮತ್ತು ಜೀವನದಲ್ಲಿ ಕಾಣಬಹುದು. ಸ್ವಾಮೀಜಿಯವರ ಈ ಕೆಳಗಿನ ಕೆಲವು ಔಚಿತ್ಯಪೂರ್ಣವಾದ ವಿಚಾರ ಹಾಗೂ ವ್ಯಾಖ್ಯೆಗಳು ಅವರ ಚಿಂತನೆಯ ಆಳ, ವಿಸ್ತಾರ, ಪ್ರಾಯೋಗಿಕತೆಯನ್ನು ಪ್ರತಿಬಿಂಬಿಸುತ್ತವೆ:

‘ಮನುಷ್ಯನಲ್ಲಿ ಸುಪ್ತವಾಗಿರುವ ದೈವತ್ವದ ಅಭಿವ್ಯಕ್ತಿಯೇ ಧರ್ಮ’ ಎಂಬ ಸ್ವಾಮೀಜಿಯವರ ವ್ಯಾಖ್ಯೆಯಲ್ಲಿ ಧರ್ಮದ ಸಾರ ಅಡಕವಾಗಿದೆ. ಧರ್ಮದ ಬಗ್ಗೆ ಅವರ ವ್ಯಾಖ್ಯೆ ಮತ್ತು ವಿಚಾರ ಧನಾತ್ಮಕವಾದುದು, ಪ್ರತಿಯೊಬ್ಬರಿಗೆ ಭರವಸೆ, ಶಕ್ತಿ ಮತ್ತು ಸರಿಯಾದ ತಿಳಿವಳಿಕೆ ಕೊಡುವಂತಹದು. ಹುಟ್ಟಿನಿಂದಲೆ ಒಬ್ಬ ವ್ಯಕ್ತಿ ಪಾಪಿಷ್ಠ ಎಂಬ ನಂಬಿಕೆಯನ್ನು ಸ್ವಾಮೀಜಿಯವರು ಅಲ್ಲಗಳೆದುದಲ್ಲದೆ, ಪ್ರತಿಯೊಬ್ಬರು ದೈವತ್ವದ ಖನಿ ಎಂಬ ಧನಾತ್ಮಕ, ಆಧ್ಯಾತ್ಮಿಕ ಸತ್ಯವನ್ನು ಮುಂದಿಟ್ಟರು. ಯಾವುದೇ ಒಂದು ವಿಷಯದ ಕೇಂದ್ರಬಿಂದು, ಮೂಲಸೂತ್ರ ಮತ್ತು ಮುಖ್ಯ ಧ್ಯೇಯವನ್ನು ಮೊದಲು ಪ್ರಸ್ತಾಪಿಸಿ ಎಲ್ಲರ ಗಮನ ಸೆಳೆಯುವುದೇ ಸ್ವಾಮೀಜಿಯವರ ಬರಹಗಳಲ್ಲಿ ಕಂಡುಬರುವ ಮುಖ್ಯ ವೈಶಿಷ್ಟ್ಯ. ಅವಶ್ಯಕ ವಿಷಯವನ್ನು ಬಿಟ್ಟು ಅನ್ಯವಿಷಯಗಳಲ್ಲಿ ಮತ್ತು ಅನವಶ್ಯಕ ವಾಗ್ ವೈಖರಿಗಳಲ್ಲಿ ವಿಹರಿಸುವ ಸಾಹಿತಿಗಳ ಶೈಲಿಗೆ ಇದು ವ್ಯತಿರಿಕ್ತವಾದದು. ಜೀವನದ ಧ್ಯೇಯದ ಬಗ್ಗೆ ಪ್ರಶ್ನಿಸಿದಾಗ ಸ್ವಾಮೀಜಿಯವರು, ‘ಪ್ರತಿಯೊಬ್ಬ ಮಾನವನ ಆಂತರ್ಯದಲ್ಲಿ ಹುದುಗಿರುವ ದೈವತ್ವದ ಬಗ್ಗೆ ಅರಿವು ಮೂಡಿಸಿ ಜೀವನದ ಪ್ರತಿಕ್ಷಣದಲ್ಲೂ ಅದನ್ನು ಅಭಿವ್ಯಕ್ತಿಗೊಳ್ಳುವಂತೆ ಮಾಡುವುದೇ ನನ್ನ ಜೀವನದ ಧ್ಯೇಯ’ ಎಂದು ಸಾರಿದರು.

ಸ್ವಾಮೀಜಿಯವರು ಕೇವಲ ಆತ್ಮಾನುಭೂತಿಯಿಂದ ತೃಪ್ತರಾದವರಲ್ಲ. ಅದು ಜೀವನದ ಪ್ರತಿ ಮಜಲುಗಳಲ್ಲೂ ವ್ಯಕ್ತವಾಗಬೇಕೆಂಬುದು ಅವರು ಪ್ರಸ್ತುತಪಡಿಸಿದ ಅನುಷ್ಠಾನ ವೇದಾಂತದ ತುಡಿತವಾಗಿತ್ತು ಮತ್ತು ಕರೆಯಾಗಿತ್ತು. ಆದ್ದರಿಂದಲೇ ಅವರು ‘ಯಾವ ಸಮಾಜದಲ್ಲಿ ಉನ್ನತವಾದ ಸತ್ಯ ಅನುಷ್ಠಾನಕ್ಕೆ ಬಂದಿದೆಯೋ ಆ ಸಮಾಜ ಅತ್ಯುತ್ತಮವಾದುದು ಎನ್ನಬಹುದು’ ಎಂದು ಘೊಷಿಸಿದರು. ‘ನಾಗರಿಕತೆಗಳ ಇತಿಹಾಸವೆಂದರೆ ಜಡವಸ್ತುವಿನಲ್ಲಿ ಹೆಚ್ಚು ಹೆಚ್ಚು ಚೈತನ್ಯವನ್ನು ಕಾಣುವುದು’ ಎಂಬುದು ನಾಗರಿಕತೆ, ಸಂಸ್ಕೃತಿಗಳ ಬೆಳವಣಿಗೆ ಬಗ್ಗೆ ಅವರ ಒಳನೋಟ. ಆತ್ಮಜಾಗೃತಿಯ ಪರಿಣಾಮ ವ್ಯಕ್ತಿತ್ವವೊಂದರ ಮೇಲೆ ಹೇಗಾಗುವುದು ಎಂದು ವಿಶ್ಲೇಷಿಸುತ್ತ ಸ್ವಾಮೀಜಿ ಹೀಗೆ ಹೇಳುತ್ತಾರೆ: ‘ಎಲ್ಲರಲ್ಲಿ ಸುಪ್ತವಾಗಿರುವ ಆತ್ಮಚೈತನ್ಯವು ಜಾಗೃತಗೊಂಡು ಕ್ರಿಯಾತ್ಮಕವಾದಾಗ ಶಕ್ತಿ, ಭವ್ಯತೆ ಮತ್ತು ಎಲ್ಲ ತರಹದ ನೈಪುಣ್ಯತೆ ಮೂಡಿಬರುವುವು’. ‘ಏಕತೆಯೇ ಜ್ಞಾನದ ಗುರಿ’ ಎಂದು ಹೇಳುತ್ತ ಸ್ವಾಮೀಜಿ, ‘ಎಲ್ಲ ಶಕ್ತಿಗಳ ಮೂಲವಾದ ಒಂದು ಶಕ್ತಿಯನ್ನು ಕಂಡುಹಿಡಿದಾಗ ಭೌತಶಾಸ್ತ್ರದ ಅನ್ವೇಷಣೆ ಕೊನೆಗೊಳ್ಳುತ್ತದೆ, ಹಾಗೆಯೇ ಎಲ್ಲ ದ್ರವ್ಯಗಳ ಮೂಲವಾದ ಒಂದು ದ್ರವ್ಯವನ್ನು ಕಂಡುಹಿಡಿದಮೇಲೆ ರಸಾಯನ ಶಾಸ್ತ್ರದ ಅನ್ವೇಷಣೆ ಕೊನೆಗೊಳ್ಳುತ್ತದೆ’ ಎಂದು ತಮ್ಮ ಅಪೂರ್ವ ವೈಜ್ಞಾನಿಕ ಅಂತರ್ಜ್ಞಾನವನ್ನು ವ್ಯಕ್ತಪಡಿಸುತ್ತಾರೆ. ಮುಂದೆ ಪ್ರತಿಪಾದಿತವಾದ ಅನೇಕ ವೈಜ್ಞಾನಿಕ ಸಿದ್ಧಾಂತಗಳ ಮುನ್ಸೂಚನೆಗಳನ್ನು ಅವರ ವಾಣಿ ಮತ್ತು ಬರಹಗಳಲ್ಲಿ ನಾವು ಕಾಣಬಹುದು.

ಅವರ ಮೇರುಕೃತಿಗಳಾದ ‘ಜ್ಞಾನಯೋಗ’, ‘ಅನುಷ್ಠಾನ ವೇದಾಂತ’, ‘ಭಕ್ತಿಯೋಗ’, ‘ರಾಜಯೋಗ’, ‘ಸ್ಪೂರ್ತಿವಾಣಿ’, ‘ಕರ್ಮಯೋಗ’, ‘ಪತ್ರಮಾಲೆ’, ‘ಕೊಲಂಬೊಯಿಂದ ಆಲ್ಮೋರಕೆ’ ಮುಂತಾದುವುಗಳಲ್ಲಿ ಅವರ ವಿದ್ವತ್ತು, ದೇಶಪ್ರೇಮ, ಆಧ್ಯಾತ್ಮಿಕ ಜ್ಞಾನ, ಸಾಮಾಜಿಕ ಕಳಕಳಿ ಮತ್ತು ಧರ್ಮಗಳ ಸಮನ್ವಯೀಕರಣಗಳ ಬಗ್ಗೆ ನಾವು ತಿಳಿದುಕೊಳ್ಳಬಹುದು.

ವ್ಯಕ್ತಿಯಲ್ಲ, ಜ್ಞಾನಶಕ್ತಿ: ಸ್ವಾಮೀಜಿಯವರ ಜೀವನದ ಅದ್ಭುತ ಘಟನಾವಳಿಗಳು ಮತ್ತು ಕೃತಿಗಳ ಬಗ್ಗೆ ಚಿಂತಿಸಿದಾಗ ನಮಗೆ ಭಾಸವಾಗುವುದೇನೆಂದರೆ: ವಿವೇಕಾನಂದ ಎಂಬ ಹೆಸರು ಒಂದು ವ್ಯಕ್ತಿಯದಲ್ಲ, ಒಂದು ಸಂಸ್ಥೆಯದಲ್ಲ- ಅದು ಒಂದು ಜ್ಞಾನರಾಶಿಯ, ಶಕ್ತಿ ಸಂಚಲನದ, ಜ್ಞಾನಸ್ಪೋಟದ ಹೆಸರು, ಮಹಾನ್ ಆದರ್ಶ ಹಾಗೂ ಚೇತನದ ಹೆಸರು. ಅವರ ಕೇವಲ 39 ವರ್ಷದ ಶಕ್ತಿ ಸಾಹಸ ಸಮನ್ವಿತವಾದ ಮತ್ತು ರಭಸದ ಜೀವನ ನೋಡಿದರೆ ಅದೊಂದು ಆಕಾಶದಲ್ಲಿ ಸಿಡಿದು ಧಾವಿಸುವ ಉಲ್ಕೆಯಂತೆ, ಭೋರ್ಗರೆದು ಧುಮುಕುವ ಜಲಪಾತದಂತೆ, ಸುಂಟರಗಾಳಿಯಂತೆ ಭಾಸವಾಗುತ್ತದೆ. ಈ ಆಧ್ಯಾತ್ಮಿಕ ಶಕ್ತಿ ಸಂಚಲನದ ಪ್ರಭಾವಕ್ಕೆ ಒಳಗಾದ ಮನಸ್ಸನ್ನು ಗುರಿಯ ಕಡೆಗೆ ಕ್ಷಿಪ್ರಗತಿಯಿಂದ ಸೆಳೆದುಕೊಳ್ಳುವ ದೈವೀಸ್ಪೂರ್ತಿಯನ್ನು ಅಲ್ಲಿ ನಾವು ಅನುಭವಿಸಬಹುದು.

ಆಧುನಿಕ ಋಷಿ: ಸ್ವಾಮೀಜಿಯವರು ಓರ್ವ ಆಧುನಿಕ ಋಷಿ ಹಾಗೂ ಮಂತ್ರದ್ರಷ್ಟಾರರು. ‘ದರಿದ್ರ ದೇವೋ ಭವ’, ‘ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ’ ಎಂಬಂಥ ಅನೇಕ ಅರ್ಥಪೂರ್ಣ ಹೊಸಮಂತ್ರಗಳನ್ನು ಕೊಟ್ಟವರು. ಅವರು ಕೊಟ್ಟ ಈ ಎರಡು ಮಂತ್ರಗಳೂ ಒಂದು ಪರಿಪಕ್ವ ಮತ್ತು ಆದರ್ಶ ಸಮಾಜದ ನವನಿರ್ವಣಕ್ಕೆ, ಜನಸಾಮಾನ್ಯರ, ಬಡವರ ಅಭ್ಯುದಯಕ್ಕೆ ಬೇಕಾದ ವಿಚಾರ, ಸ್ಪೂರ್ತಿ ಮತ್ತು ಮಾರ್ಗದರ್ಶನವನ್ನು ಕೊಡುತ್ತವೆ. ಆತ್ಮಕಲ್ಯಾಣವೆಂಬ ಮೂಲಧ್ಯೇಯದ ಹಿಂದೆ ಲೋಕಕಲ್ಯಾಣದ ಸ್ಪೂರ್ತಿ ಮತ್ತು ಶಕ್ತಿ ಸಹಜವಾಗಿ ಅಡಕವಾಗಿದೆ. ಅಲ್ಲದೆ ಸರಿಯಾದ ಭಾವದಲ್ಲಿ

ಲೋಕಕಲ್ಯಾಣದ ಕಾಯಕದಲ್ಲಿ ತೊಡಗಿದವನ ಆತ್ಮಕಲ್ಯಾಣ ಆಗದೇ ಇರಲಾರದು. ವ್ಯಕ್ತಿ, ಕುಟುಂಬ, ಸಮಾಜ, ದೇಶ, ವಿಶ್ವ ಹೀಗೆ ವ್ಯಕ್ತಿತ್ವ ವಿಕಸನಗೊಳ್ಳುತ್ತ ಹೋಗಬೇಕು. ಆದ್ದರಿಂದಲೇ ಸ್ವಾಮೀಜಿಯವರು, ‘ವಿಕಸನವೇ ಜೀವನ, ಸಂಕುಚಿತತೆಯೇ ಮರಣ’ ಎಂದು ಉದ್ಘೋಷಿಸಿದರು. ಮನುಷ್ಯನ ನಿಜವಾದ ಪರಿವರ್ತನೆ, ತನ್ಮೂಲಕ ಸಮಾಜ ಹಾಗೂ ವಿಶ್ವದ ಪರಿವರ್ತನೆ- ಇದನ್ನು ಆಧ್ಯಾತ್ಮಿಕ ಜ್ಞಾನಪ್ರಸಾರ, ಸೇವೆ, ಅನುಕಂಪ ಮತ್ತು ಪ್ರೀತಿಯ ಮೂಲಕ ಸಾಧಿಸುವುದನ್ನು ತಮ್ಮ ಬಾಳಿನ ಧ್ಯೇಯವನ್ನಾಗಿಸಿಕೊಂಡಿದ್ದರು ಸ್ವಾಮೀಜಿ.

ಮಾನವನ ಸರ್ವತೋಮುಖ ಅಭಿವೃದ್ಧಿಗೆ ಮತ್ತು ಎಲ್ಲರಿಗೂ ಅವಕಾಶ ದೊರಕಿಸುವ ಪ್ರಗತಿಶೀಲ ಹೊಸ ಸಮಾಜದ ಸೃಷ್ಟಿಗೆ ಅನವರತವಾಗಿ ಶ್ರಮಿಸಿ ಧನ್ಯತೆಯನ್ನು ಪಡೆದ ಬದುಕು ಸ್ವಾಮಿ ವಿವೇಕಾನಂದರದು. ಅವರು ಅಜ್ಞಾನ, ದಾಸ್ಯ, ಪರಸ್ಪರ ಶೋಷಣೆಯಿಂದ ಜಾತೀಯತೆಯ ಅಂಧಕಾರದಲ್ಲಿ ಬಳಲಿ ತೊಳಲುತ್ತಿದ್ದ ಭಾರತೀಯ ಸಮಾಜಕ್ಕೆ ಸ್ಪೂರ್ತಿ, ಶಕ್ತಿಯನ್ನು ಪ್ರವಹಿಸುವ ಜ್ಞಾನಸೂರ್ಯನಾಗಿ ಮೂಡಿಬಂದರು. ಈ ದಿವ್ಯಚೇತನ, ಭಾರತದ ಇತಿಹಾಸದ ದಿಗಂತದಲ್ಲಿ ಉದಯಿಸಿದ ಮಹಾಪುರುಷರ ಸರಣಿಯಲ್ಲಿ ಅಗ್ರಗಣ್ಯವಾಗಿದೆ. ಅವರ ಜೀವನ, ಜ್ಞಾನಪೂರ್ಣ ವಿಚಾರ, ಬೋಧನೆಗಳ ಸ್ಮರಣೆಯಿಂದ ನಮ್ಮ ಬಾಳು ಪರಿವರ್ತನೆಗೊಂಡು ಹೊಸ ಉತ್ಸಾಹವನ್ನೂ ಚೈತನ್ಯವನ್ನೂ ಪಡೆಯುತ್ತದೆ ಎಂಬುದು ಅನೇಕ ಜನರಿಗೆ ಅನುಭವಗಮ್ಯವಾದುದು.

(ಲೇಖಕರು ಮೈಸೂರು ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net