

ಪ್ರಶ್ನೆ: ಅನುದಾನಿತ ಪದವಿ ಪೂರ್ವ ಕಾಲೇಜಿನಲ್ಲಿ ನಾನು 20 ವರ್ಷಗಳಿಂದ ಉಪನ್ಯಾಸಕಿಯಾಗಿದ್ದೇನೆ. ನನ್ನ ಸಹೋದ್ಯೋಗಿಯೊಬ್ಬರು ವಯಸ್ಸಿನಲ್ಲಿ ನನಗಿಂತ ಹಿರಿಯರಾಗಿದ್ದು, ಜ್ಯೇಷ್ಠತೆಯಲ್ಲಿ ಎರಡು ತಿಂಗಳ ನಂತರ ಕೆಲಸಕ್ಕೆ ಸೇರಿ ಕಿರಿಯರಾಗಿದ್ದಾರೆ. ಹೀಗಿರುವಾಗ ನಮ್ಮ ಸಂಸ್ಥೆಯ ಆಡಳಿತ ಮಂಡಳಿಯು 2022ರ ಸೆಪ್ಟೆಂಬರ್ನಲ್ಲಿ ನಿವೃತ್ತಿಯಿಂದ ಖಾಲಿ ಇರುವ ಪ್ರಿನ್ಸಿಪಾಲರ ಹುದ್ದೆಗೆ ಅವರಿಗೆ ಪದೋನ್ನತಿ ನೀಡಲು ಠರಾವು ಮಾಡಿ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಶಿಫಾರಸು ಮಾಡಿದೆ. ಇದು ಸರಿಯೇ?
| ಅಮಿತಾ ತೊಳ್ಪಾಡಿ, ಉಡುಪಿ
ಉತ್ತರ: ದಿನಾಂಕ: 10-04-2002ರ ಸರ್ಕಾರಿ ಆದೇಶ ಸಂಖ್ಯೆ: ಇಡಿ 52 ಟಿಪಿಯು 2002ರ ಪ್ರಕಾರ ಪ್ರಿನ್ಸಿಪಾಲರ ಹುದ್ದೆಗೆ ಬಡ್ತಿ ನೀಡುವಾಗ ಅಧ್ಯಾಪಕರು ಒಂದೇ ದಿನಾಂಕದಂದು ನೇಮಕವಾಗಿ ನಿಗದಿತ 15 ದಿವಸದೊಳಗೆ ಕರ್ತವ್ಯಕ್ಕೆ ಹಾಜರಾಗಿದ್ದಲ್ಲಿ ಅವರು ಜನ್ಮದಿನಾಂಕ ಆಧಾರವಾಗಿಟ್ಟುಕೊಂಡು ವಯಸ್ಸಿನಲ್ಲಿ ಹಿರಿಯರಾದವರನ್ನು ಪರಿಗಣಿಸಿ ಜ್ಯೇಷ್ಠತೆ ನಿರ್ಧರಿಸಿ ಪದೋನ್ನತಿ ನೀಡಲು ಆದೇಶಿಸಬಹುದು. ಆದ್ದರಿಂದ ಈ ಆದೇಶದ ಆಧಾರದ ಮೇಲೆ ನಿಮ್ಮ ಪದೋನ್ನತಿ ಹಕ್ಕನ್ನು ವಿನಂತಿಸಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಶಿಕ್ಷಣ ಕೈಪಿಡಿ’ ಕೃತಿಯನ್ನು ನೋಡಬಹುದು.