ಯುವಕರ ಕೈಲಿ ಹೂವಾದ ಸೀರೆ! ಸಮಾರಂಭದ ಹಾಲ್​ಗಳನ್ನು ಸುಂದರವಾಗಿ ಶೃಂಗರಿಸುತ್ತಾರೆ ಈ ಯುವಕರು...

Saree Flower 11 Feb 20
Published on

ಸೀರೆಯುಡುವುದು ಹೆಣ್ಣುಮಕ್ಕಳಾದರೇನಂತೆ? ಸೀರೆಯಲ್ಲಿಯೇ ಸಮಾರಂಭಗಳ ಹಾಲ್​ಗಳನ್ನು ಸಿಂಗರಿಸುವಲ್ಲಿ ತಾವೇನೂ ಕಮ್ಮಿ ಇಲ್ಲ ಎಂದು ಬೀಗುತ್ತಿವೆ ಶಿರಸಿಯ ಯುವಕರ ಗುಂಪು. ಈ ಮೂಲಕವೇ ಉದ್ಯೋಗ ಸೃಷ್ಟಿಸಿಕೊಂಡಿದ್ದಾರೆ ಈ ಯುವಕರು.

ನಗರ ಪ್ರದೇಶಗಳಲ್ಲಿ ಮದುವೆಯಿಂದ ಹಿಡಿದು ಸಣ್ಣಪುಟ್ಟ ಕಾರ್ಯಕ್ರಮಗಳನ್ನೂ ಛತ್ರಗಳಲ್ಲಿ ಮಾಡುವುದು ರೂಢಿ. ಅದು ನಗರಿಗರಿಗೆ ಅನಿವಾರ್ಯ ಕೂಡ. ಆದರೆ ಹಳ್ಳಿಗಳಲ್ಲಿ- ಅದರಲ್ಲೂ ಮಲೆನಾಡಿನ ಒಂಟಿ ಮನೆಗಳಲ್ಲಿ ಮನೆಯೆದುರಿಗೇ ಅಡಿಕೆ ದಬ್ಬೆಯ ಚಪ್ಪರ ಹಾಕಿ, ಮಂಟಪ ಕಟ್ಟಿ ನೆಂಟರಿಷ್ಟರಿಗೆ ಭೂರಿ ಭೋಜನ ವ್ಯವಸ್ಥೆ ಮಾಡುವ ಸಂಪ್ರದಾಯ ಇಂದಿಗೂ ಚಾಲ್ತಿಯಲ್ಲಿದೆ. ಮನೆಯಂಗಳದಲ್ಲೇ ಮದುವೆ - ಮುಂಜಿ ಕಾರ್ಯಗಳೂ ನಡೆಯುತ್ತವೆ. ಇವು ಮನೆಯವರಿಗೆ ತಮ್ಮ ಅಂಗಳದಲ್ಲೇ ನೆಂಟರಿಷ್ಟರಿಗೆ ಆದರಾತಿಥ್ಯ ಮಾಡಿದ ಸಮಾಧಾನ ನೀಡುವುದು ಒಂದೆಡೆಯಾದರೆ, ಇದೀಗ ಇದು ಹಳ್ಳಿಯ ಯುವಕರ ಕೌಶಲಗಳನ್ನು ತೋರಿಸಿ ಅವರಿಗೆ ಉದ್ಯೋಗದ ದಾರಿಯನ್ನೂ ಕಲಿಸುತ್ತಿದೆ.

ಅಂಥ ಒಂದು ಸಾಧ್ಯತೆ ಈಚಿನ ವರ್ಷಗಳಲ್ಲಿ ಉತ್ತರ ಕನ್ನಡದ ಅನೇಕ ಹಳ್ಳಿಗಳಲ್ಲಿ ಕಂಡುಬಂದಿದೆ. ಇದು ಹಳ್ಳಿಯ ಹುಡುಗರಿಗೆ ಕೆಲಸ ಕೊಡುತ್ತಿದ್ದು, ಕಾಸು ಓಡಾಡಲು ಕಾರಣವಾಗಿದೆ. ಜತೆಗೆ, ಏಕತಾನತೆಯಿಂದ ಕೂಡಿದ್ದ ಹಳ್ಳಿ ಹೈದರ ಬದುಕಲ್ಲಿ ಹೊಸ ಹುರುಪು ಹಾಗೂ ಅವರ ಕಲೆಗೆ ಒಂದು ಬೆಲೆ ಬಂದಂತಾಗಿದೆ. ಇಂಥ ಒಂದು ಪ್ರಯತ್ನವನ್ನು ಹಳ್ಳಿಗಳಲ್ಲಿ ವಿಶೇಷಗಳಾದಾಗ ಹಳೆಯ ಸೀರೆಗಳಿಂದ ಅಲಂಕಾರಮಾಡುವ ಕಲೆಯಲ್ಲಿ ಕಾಣಬಹುದು.

ಹಳೆಯ ಸೀರೆಗಳಿಂದ ಅಲಂಕಾರ ಮಾಡುವ ಉದ್ಯೋಗವನ್ನು ಸಾಮಾನ್ಯವಾಗಿ ಮೂರು ನಾಲ್ಕು ಜನರ ಗುಂಪುಗಳು ಮಾಡುತ್ತವೆ. ಸಿದ್ದಾಪುರ ತಾಲೂಕಿನ ವಾಜಗದ್ದೆಯ ಯುವಕ ಮಂಡಳದ ಸದಸ್ಯರು ಹತ್ತಾರು ವರ್ಷಗಳಿಂದ ಈ ಭಾಗದ ಮದುವೆಗಳಿಗೆ ಚಂದದ ಮಂಟಪ ಹಾಗೂ ಚಪ್ಪರ ಕಟ್ಟುತ್ತಾ ಬಂದಿದ್ದಾರೆ. ಶಿರಸಿ ತಾಲೂಕಿನ ವಾನಳ್ಳಿಯ ಕೊರ್ಕೆಡಿನ ಯುವಕರೂ ಈ ಕಲೆಯಲ್ಲಿ ಹೆಸರು ಮಾಡಿದ್ದಾರೆ. ಹೀಗೆ ಮಲೆನಾಡಿನ ಅನೇಕ ಊರುಗಳಲ್ಲಿ ಈ ರೀತಿ ಮದುವೆಯ ಹಾಲ್​ಗಳನ್ನು ಹಳೆಯ ಸೀರೆಗಳಿಂದ ಅಲಂಕಾರ ಮಾಡುವವರ ಪಡೆ ಸಿದ್ಧವಾಗಿರುವುದು ವಿಶೇಷ.

ಹೀಗೆ ಸೀರೆ ಶೃಂಗಾರದಲ್ಲಿ ನಿಗದಿತ ಮಾದರಿಗಳೇನೂ ಇಲ್ಲ. ಹೊಸಹೊಸ ಮಾದರಿಯಲ್ಲಿ ಸೀರೆ ಕಟ್ಟಬೇಕೆಂಬ ಹಂಬಲವೇ ನವನವೀನ ಮಾದರಿಗಳಿಗೆ ಕಾರಣವಾಗಿದೆ. ಇದು ಒಂದು ರೀತಿಯಲ್ಲಿ ಬಿನ್ ಬಂಡವಾಳ ಉದ್ಯೋಗ. ಮನೆಯಲ್ಲಿ ಅಮ್ಮಂದಿರು, ಅಕ್ಕಂದಿರು ಉಟ್ಟು ಬಿಟ್ಟ ಹಳೆ ಸೀರೆಗಳೇ ಇವರ ಕಲೆಗೆ ಆಧಾರ. ಚಪ್ಪರಕ್ಕೆ ಬಿಳಿ ಬಟ್ಟೆಯ ಮುಚ್ಚಿಗೆಯನ್ನು ಮೊದಲು ಹಾಕುತ್ತಾರೆ. ಈ ಬಿಳಿ ಪಂಚೆಯ ಭಿತ್ತಿಯ ಮೇಲೆ ಅವರ ಸೀರೆ ಕಲೆ ಅರಳುತ್ತದೆ. ಚಪ್ಪರದ ಒಂದೊಂದು ಕಂಬಕ್ಕೂ ಒಂದೊಂದು ಸೀರೆಯನ್ನು ಕಲಾತ್ಮಕವಾಗಿ ಸುತ್ತುತ್ತಾರೆ. ನಂತರ ನಾನಾ ರೀತಿಗಳಲ್ಲಿ ಸೀರೆಗಳನ್ನು ಮಡಿಚಿ ಹೂವಿನ ಪಕಳೆಗಳನ್ನು ಅರಳಿಸುತ್ತಾರೆ. ಹಳೆ ಸೀರೆಗಳು ಏನು ಚಂದ ಕಾಣಬಹುದೆಂದು ನೀವು ಉಡಾಫೆ ಮಾಡಿದರೆ ನಿಮ್ಮ ಗೃಹಿಕೆ ತಪ್ಪು. ಇದರಲ್ಲೇ ನೂರಾರು ಮಾದರಿಗಳನ್ನು ಈ ಯುವಕರು ಸೃಷ್ಟಿಸುತ್ತಾರೆ. ಬಂದವರು ಈ ಸೀರೆಗಳಲ್ಲಿ ಅರಳಿದ ಕಲೆ ಕಂಡು ಬೆರಗಾಗುತ್ತಾರೆ. ಒಂದೊಂದು ಸಂದರ್ಭಕ್ಕೆ ನಾಕೈದು ಸಾವಿರದಲ್ಲಿ ಇವರ ಅಲಂಕಾರ ಮುಗಿಯುವುದರಿಂದ ಇದೇನೂ ದೊಡ್ಡ ವ್ಯವಹಾರವಲ್ಲ. ಆದರೆ ಹುಡುಗರ ಬದುಕಿನ ಹೊಸತನ ತುಂಬಲು ಹಾಗೂ ಅವರಲ್ಲಿರುವ ಸೃಜನಶೀಲತೆಗೆ ಪುಟನೀಡಲು ಇದೊಂದು ಅವಕಾಶ.

| ಡಾ. ನಿರಂಜನ ವಾನಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net