

ನಿಮಗಿನ್ನೂ 38 ವರ್ಷ. 45 ಅಲ್ಲ, 50 ಅಲ್ಲ. ಕೇವಲ 38. ಈ ವಯಸ್ಸಿಗೆ ದೇಹದಲ್ಲಿ ಶಕ್ತಿ, ತಲೆಯಲ್ಲಿ ವಿದ್ಯೆಯ ಶಕ್ತಿ ಎರಡೂ ಧಾರಾಳವಾಗಿ ನಿಮ್ಮ ಹತ್ತಿರ ಇದೆಯಲ್ಲವೇ? ಇಷ್ಟು ಶಕ್ತಿವಂತರಾದ ನೀವು ಗಂಡ ಡೈವೋರ್ಸ್ ಕೊಡುತ್ತೇನೆಂದು ಹೆದರಿಸುತ್ತಾರೆ ಎಂದು ಬರೆಯುತ್ತೀರಲ್ಲ? ನಿಜವಾಗಿ ನೋಡಿದರೆ ನೀವೇ ಅವರನ್ನು ಹೆದರಿಸಬಹುದು. ಆ ಶಕ್ತಿ ನಿಮ್ಮಲ್ಲಿ ಇದೆ. ನಿಮಗೆ ಮೋಸ ಮಾಡಿರುವವರೇ ಅವರು. ಕಾನೂನಿನ ದೃಷ್ಟಿಯಿಂದಲೂ ಅವರು ಅಪರಾಧಿಗಳು.
ದಾಂಪತ್ಯವನ್ನು ನಡೆಸಲು ದೈಹಿಕವಾಗಿ ಶಕ್ತಿಯಿಲ್ಲದ ವ್ಯಕ್ತಿ, ತನ್ನ ಕೊನೆಗಾಲಕ್ಕೆ ಮನೆಯ ಕೆಲಸಕ್ಕೆ ಒಬ್ಬ ಆಳಿರಲಿ ಎಂದು ಮೋಸಮಾಡಿ ನಿಮ್ಮನ್ನು ಮದುವೆಯಾಗಿದ್ದಾರೆ. ಅಲ್ಲದೇ ನಿಮ್ಮನ್ನು ಮಾನಸಿಕವಾಗಿ ಅತ್ತೆ ಮತ್ತು ಗಂಡ ಹಿಂಸಿಸುತ್ತಿದ್ದಾರೆ. ಈ ಬಗ್ಗೆ ನಿಮ್ಮೂರಿನ ಪೊಲೀಸರಿಗೆ ಕಂಪ್ಲೇಂಟ್ ಕೊಡಿ. ತವರಿನ ಬಗ್ಗೆ ನೀವು ಏನೂ ಬರೆದಿಲ್ಲ. ಮೊದಲು ಆ ಮನೆಯನ್ನು ಬಿಟ್ಟು ಬನ್ನಿ. ನೀವು ಮದುವೆಗೆ ಮುನ್ನ ಮಾಡುತ್ತಿದ್ದ ಉದ್ಯೋಗದ ಕಂಪನಿಯಲ್ಲೇ ಉದ್ಯೋಗ ಸಿಗುತ್ತದಾ ಪ್ರಯತ್ನಿಸಿ.
ಸರ್ಕಾರಿ ಕೆಲಸವೇ ಏಕೆ ಬೇಕು? ಮೊದಲು ಸಣ್ಣ ಪುಟ್ಟ ಯಾವುದಾದರೂ ಕೆಲಸಕ್ಕೆ ಸೇರಿ. ನಂತರ ನಿಧಾನವಾಗಿ ಒಳ್ಳೆಯ ಕೆಲಸವನ್ನು ಹುಡುಕಿಕೊಳ್ಳಿ. ಎರಡೆರಡು ಪದವಿಗಳನ್ನು ಇಟ್ಟುಕೊಂಡಿರುವ ನೀವು ಬರಿ ಭಾವುಕರಾಗಿ ಯೋಚಿಸಬಾರದು. ನಿಮ್ಮಲ್ಲಿರುವ ಜಾಣತನವನ್ನು ಬಳಸಿ ನಿಮ್ಮ ಕಾಲಮೇಲೆ ನಿಲ್ಲುವ ಪ್ರಯತ್ನ ಮಾಡಿ. ನಿಮ್ಮ ಗಂಡನ ಜತೆ ಬದುಕುವುದರ ಬಗ್ಗೆ ಆ ನಂತರ ಯೋಚಿಸಬಹುದು. ಅದಕ್ಕೆ ವಕೀಲರೂ, ನ್ಯಾಯಾಲಯವೂ ಸಹಾಯ ಮಾಡುತ್ತದೆ.
ಶಾಂತಾ ನಾಗರಾಜ್ ಅವರಿಂದ ಉಚಿತ ಸಲಹೆಗಾಗಿ (ಸಂಜೆ 6ರಿಂದ8) ಈ ಕೆಳಗಿನ ವಿಳಾಸದಲ್ಲಿ ನೇರವಾಗಿ ಭೇಟಿ ಮಾಡಬಹುದು. ಮೊದಲೇ ಅಪಾಯಿಂಟ್ವೆುಂಟ್ ತೆಗೆದುಕೊಳ್ಳುವ ಅಗತ್ಯವಿಲ್ಲ. ಪ್ರತಿ ಸೋಮವಾರ: ಅರುಣಚೇತನ, ಕ್ಲೂನಿ ಕಾನ್ವೆಂಟ್ ಎದುರು, ಎಂ.ಇ.ಎಸ್ ಕಾಲೇಜ್ ಹಿಂಭಾಗ, ಮಲ್ಲೇಶ್ವರ, ಬೆಂಗಳೂರು. ಪ್ರತಿ ತಿಂಗಳ ಕೊನೆಯ ಗುರುವಾರ: ನಚಿಕೇತ ಮನೋವಿಕಾಸ ಕೇಂದ್ರ, 14ನೇ ಕ್ರಾಸ್, ಎಂ.ಸಿ. ಲೇಔಟ್, ವಿಜಯನಗರ, ಬೆಂಗಳೂರು ಪತ್ರ ಬರೆಯುವವರು ವಿಜಯವಾಣಿ ಲಲಿತಾ ಪುರವಣಿಗೆ ಬರೆಯಬೇಕು.