

ರಾಷ್ಟ್ರಕವಿ ಕುವೆಂಪು ಸಂಸ್ಕೃತ ಭಾಷೆಯ ಬಗ್ಗೆ ಹೀಗೆನ್ನುತ್ತಾರೆ. ‘ಪೃಥ್ವಿಯ ಪ್ರಥಮ ಪ್ರಭಾತದಲಿ, ಇತಿಹಾಸ , ಸೃಷ್ಟಿಗಸ್ಪಷ್ಟ ಅಜ್ಞಾತ ಪ್ರಾಚೀನದಲಿ ಚಿರಧವಲ ಹಿಮಕಿರಣ ಪೃಥುಲೋರು ಪ್ರೇಂಖದಲಿ ನವಜಾತ ಶಿಶುವಾಗಿ ನಲಿದ ಮಂಗಳಮಾಯಿ ಆರ್ಯರಾಗಿಹ ನಾವು ನಿನ್ನ ಮೊಲೆಪಾಲ ಸವಿಯಿಲ್ಲದೆಯೇ ಬದುಕುವುವೇ!?
ನೀನಿಲ್ಲದಿನ್ನೆಲ್ಲಿಹುದು ಭರತಖಂಡದ ಬದುಕು, ಸಂಪತ್ತು, ಸಂಸ್ಕೃತಿ!’
ಎಷ್ಟೊಂದು ಅದ್ಭುತ ವಿಷಯಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ ಕುವೆಂಪು ಇಲ್ಲಿ. ಕಳೆದ ಅರ್ಧ ಶತಮಾನದಿಂದ ನಮ್ಮಲ್ಲಿ ಚಿಂತಕರ ವಲಯವೊಂದು ಸೃಷ್ಟಿಯಾಗಿದೆ. ಅದು ಚಿಂತಕರ ವಲಯವೋ ಚಿಂತಾಕ್ರಾಂತರ ವಲಯವೋ ಆ ಸೃಷ್ಟಿಕರ್ತನಿಗೇ ಗೊತ್ತು. ಅವರ ಭಾಷಣದಲ್ಲಿ ಐದನೇ ವಾಕ್ಯಕ್ಕೂ ಐವತ್ತನೇ ವಾಕ್ಯಕ್ಕೂ ತಾಳಮೇಳ ಇರುವುದಿಲ್ಲ.
ಈ ಪುಸ್ತಕಕ್ಕೂ ಆ ಪುಸ್ತಕಕ್ಕೂ, ಬದುಕಿಗೂ ಬರಹಕ್ಕೂ ಹೊಂದಾಣಿಕೆಯಾಗುವುದಿಲ್ಲ. ಅಂಥ ಧೀಮಂತ ಚಿಂತಕನೊಬ್ಬನ ಈ ವಿರೋಧಾಭಾಸವನ್ನು ಕುರಿತು ಯಾರೋ ಪ್ರಶ್ನಿಸಿದಕ್ಕೆ ಆತನ ಪತ್ನಿ ಉತ್ತರಿಸಿದ್ದು ‘ಬದುಕೇ ಬೇರೆ, ಬರಹವೇ ಬೇರೆ’ ಎಂದು. ಇದು ಭಾರತೀಯರಾದ ನಮಗೆ ಒಂದು ಹೊಸ ವಿಚಾರವೇ. ಹಾಗೆ ಬದುಕಿದ ಚಿಂತಕರನ್ನೇ ನಾನು ‘ಚಿಂತಾಕ್ರಾಂತ’ರು ಅರ್ಥಾತ್ ತಮ್ಮ ಇಂಥ ಚಿಂತನೆಗಳಿಂದ ಕ್ರಾಂತಿ ಮಾಡಹೊರಟವರು ಎಂದು ಹೇಳಿದ್ದು. ಕೆಲ ದಿನಗಳ ಹಿಂದೆ ಇಂಥದ್ದೇ ಚಿಂತಾಕ್ರಾಂತರು ಒಂದು ಕ್ರಾಂತಿಕಾರಿ ಭಾಷಣವನ್ನು ಮಾಡಿದ್ದರಿಂದ ಸಾರ್ವಜನಿಕರಿಗೆ ತಪ್ಪು ಸಂದೇಶ ಹೋಗಬಾರದೆಂದು ಈ ಪುಟ್ಟ ಲೇಖನ.
ಕು.ವೆಂ.ಪು. ಅವರ ಮೇಲಿನ ಒಂದೊಂದೂ ವಾಕ್ಯವನ್ನು ಗಮನಿಸಿ! ಸೃಷ್ಟಿಯ ಪ್ರಾರಂಭದಲ್ಲೇ, ಇತಿಹಾಸದ ಕಣ್ಣು ಸ್ಪಷ್ಟವಾಗಿ ಕಾಣುವುದಕ್ಕೆ ಸಾಧ್ಯವಿರದಷ್ಟು ಪ್ರಾಚೀನದಲ್ಲಿ ಆಗತಾನೇ ಹುಟ್ಟಿದ ಆರ್ಯರಾದ ನಾವು (ಕು.ವೆಂ.ಪು ದಕ್ಷಿಣಭಾರತೀಯರು!) ನಿನ್ನ ಮೊಲೆಹಾಲ ಉಣ್ಣದೇ ಬದುಕಬಲ್ಲೆವೇ? ಹೇ ಮಾತೆ, ಸಂಸ್ಕೃತವೆಂಬ ಭಾಷೆಯೇ! ನಮ್ಮ ಬದುಕು, ಸಂಪತ್ತು ಅಷ್ಟೇಕೆ ಸಂಸ್ಕೃತಿಯೇ ಬಂದಿರುವುದು ನಿನ್ನಿಂದ!
ಕು.ವೆಂ.ಪು.ರವರ ವಿಮರ್ಶಾತ್ಮಕ ಬುದ್ಧಿಯ ಬಗ್ಗೆ ನಾನೇನೂ ಯಾರಿಗೂ ಹೊಸದಾಗಿ ಪರಿಚಯಿಸಬೇಕಾಗಿಲ್ಲ. ಸಂಸ್ಕೃತ ಭಾಷೆಯ ಗತ್ತು, ಗೈರತ್ತು, ಆಳ, ಅಗಾಧತೆ, ಅನನ್ಯತೆ, ವರ್ಣಿಸಲಸಾಧ್ಯವಷ್ಟೇ ಅಲ್ಲ ಊಹಿಸಲಸಾಧ್ಯ! ಅದೊಂದು ಸಂಖ್ಯೆಇಲ್ಲದ ಭಾಗ್ಯಗಳ ಅಕ್ಷಯಪಾತ್ರೆ! ಪೊ›.ಮ್ಯಾಕ್ಸ್ ಮುಲ್ಲರ್ ಹೇಳಿದಂತೆ ಈಜಿಪ್ಟಿನ ಪಿರಮಿಡ್ಡುಗಳು ಕಾಲದ ಸವೆತಕ್ಕೆ ಸಿಕ್ಕಿ ನಶಿಸಬಹುದು. ಯಾರೋ ಮದ್ದು ಗುಂಡುಗಳಿಂದ ಅದನ್ನು ನಾಶ ಮಾಡಲೂಬಹುದು.
ಆದರೆ ಆರ್ಯನಿರ್ವಿುತ ಸಂಸ್ಕೃತ ಭಾಷೆ ಮತ್ತು ಅದು ತನ್ನೊಡಲಲ್ಲಿ ಅಡಗಿಸಿಕೊಂಡಿರುವ ಅಸಂಖ್ಯಾತ ರತ್ನಗಳ ರಾಶಿಯನ್ನು ಯಾರೂ ಕದ್ದೊಯ್ಯಲೂ ಆಗುವುದಿಲ್ಲ ಮತ್ತು ನಾಶಪಡಿಸಲೂ ಆಗುವುದಿಲ್ಲ. ಆದ್ದರಿಂದಲೇ ಆರ್ಯಾವರ್ತ ಕೋಟೆ ಕೊತ್ತಲುಗಳಿಗಿಂತ ಹೆಚ್ಚಾಗಿ ಜ್ಞಾನ ಭಂಡಾರಗಳನ್ನು ನಿರ್ವಿುಸಿದ.
ವಿಲ್ ಡ್ಯೂರೆಂಟ್ ತಮ್ಮ ‘The Story of Civilization' ನಲ್ಲಿ ಬರೆಯುತ್ತಾರೆ. ಈಸ್ಟ್ ಇಂಡಿಯಾ ಕಂಪನಿಯ ಪ್ರಪ್ರಥಮ ಗವರ್ನರ್ ಜನರಲ್ ವಾರನ್ ಹೇಸ್ಟಿಂಗ್ಸ್ನ ಜೊತೆಯಲ್ಲಿ ಬಂದಿದ್ದ ಬಹುಭಾಷಾ ಪಂಡಿತ ಮತ್ತು ಕಲ್ಕತ್ತೆಯ ಸುಪ್ರೀಂಕೋರ್ಟ್ನ ಪ್ರಥಮ ನ್ಯಾಯಾಧೀಶ ವಿಲಿಯಂ ಜೋನ್ಸ್ ಹಿಂದೂ ಕಾಯ್ದೆಗಳನ್ನು ನಿರ್ವಿುಸುವುದರ ಸಂದರ್ಭದಲ್ಲಿ ಸಂಸ್ಕೃತವನ್ನು ಭಾಷಾಂತರಿಸಬೇಕಾದ ಅನಿವಾರ್ಯತೆ ತಲೆದೋರಿ ಸಂಸ್ಕೃತವನ್ನು ಕಲಿತ. ಮನುಸ್ಮ ೃಯೊಂದಿಗೆ ಇತರ ಸಂಸ್ಕೃತ ಗ್ರಂಥಗಳನ್ನೂ ಅಧ್ಯಯನಿಸತೊಡಗಿದ. ಆಶ್ಚರ್ಯಗೊಂಡ ವಿಲಿಯಂ ಜೋನ್ಸ್ ವಾರನ್ ಹೇಸ್ಟಿಂಗ್ಸ್ಗೆ ಹೇಳಿದ್ದು ಹೀಗೆ- ‘ಭಾರತದಲ್ಲಿನ ದ್ರವ್ಯರೂಪೀ ಸಂಪತ್ತು ಸಂಸ್ಕೃತಭಾಷೆಯಲ್ಲಡಗಿರುವ ಅತ್ಯಮೂಲ್ಯ ಜ್ಞಾನ ಭಂಡಾರಕ್ಕೆ ಹೋಲಿಸಿದರೆ ನಗಣ್ಯ. ನಾವು ಇಂಗ್ಲೆಂಡಿಗೆ ಸಾಗಿಸಬೇಕಾದ್ದು ಮೊದಲು ಈ ಭಂಡಾರವನ್ನು’ ಎಂದು.
ಆ ಉದ್ದೇಶಕ್ಕಾಗಿಯೇ ಕಲ್ಕತ್ತೆಯಲ್ಲಿ ‘ಏಷಿಯಾಟಿಕ್ ಸೊಸೈಟಿ’ (ಇದಕ್ಕೆ ಕೆಲ ವರ್ಷಗಳ ಹಿಂದೆ ನಾನು ಭೇಟಯಿತ್ತಿದ್ದೆ) ಎಂಬ ಚಿಂತನವೇದಿಕೆಯನ್ನು ನಿರ್ವಿುಸಿ ಬೃಹತ್ ಪ್ರಮಾಣದಲ್ಲಿ ಸಂಸ್ಕೃತ ಕೃತಿಗಳನ್ನು ಇಂಗ್ಲಿಷಿಗೆ ಭಾಷಾಂತರಿಸುವ ಕಾರ್ಯ ರೂಪಗೊಂಡಿತು. ಈ ವೇದಿಕೆಯ ಮೊದಲ ಅಧ್ಯಕ್ಷನೂ ತಾನೇ ಆದ. ಇಂಥ ಅಗಾಧ ಜ್ಞಾನರಾಶಿಯ ತವರು ಭಾರತ ಎಂದು ಕಂಡುಕೊಂಡ ಬ್ರಿಟಿಷ್ ರಾಜಮನೆತನದವರು ಇಂಗ್ಲೆಂಡಿನಲ್ಲಿದ್ದ ಸಮಾನಮನಸ್ಕರಿಂದೊಡಗೂಡಿ ಏಷಿಯಾಟಿಕ್ ಸೊಸೈಟಿಯ ಶತಮಾನೋತ್ಸವ ವರ್ಷವಾದ 1883ರಲ್ಲಿ ಪ್ರಾರಂಭಿಸಿದ Indian Institute of Englandನ ಉದ್ಘಾಟನಾ ಶಿಲಾಫಲಕದ ಮೇಲೆ ಒಂದು ಸಂಸ್ಕೃತ ಶ್ಲೋಕವನ್ನೇ ಕೆತ್ತಿಸಿದರು,
ಈಶಾನುಕಂಪಯಾನಿತ್ಯಂ | ಆರ್ಯವಿದ್ಯಾ ಮಹೀಯತಾಂ | ಆರ್ಯವರ್ತಾಂಗ್ಲಭೂಮ್ಯೋಶ್ಚಂ | ಇಥೋ ಮೈತ್ರೀ ವಿವರ್ಧತಾಂ ||
ಅರ್ಥಾತ್ ‘ದೈವಾನುಗ್ರಹದಿಂದ ಎಂದೆಂದಿಗೂ ಭಾರತೀಯ ವಿದ್ಯೆ ಗೌರವ ಪಡೆಯಲಿ. ಭಾರತ ಆಂಗ್ಲದೇಶಗಳ ಮೈತ್ರಿ ಮತ್ತಷ್ಟು ಹೆಚ್ಚಲಿ’. ಈ ಕಾರ್ಯಕ್ರಮವನ್ನು ಉದ್ಘಾಟಿಸಿದವರು ಸ್ವಯಂ ಬ್ರಿಟಿಷ್ ಚಕ್ರವರ್ತಿ ಪ್ರಿನ್ಸ್ ಆಫ್ ವೇಲ್ಸ್ ಎನ್ನುವುದು ಇಲ್ಲಿ ಗಮನಾರ್ಹ.
ಕತ್ತಿಯಿಂದ ಭಾರತ ಏನನ್ನು ಸಾಧಿಸಲಾಗಲಿಲ್ಲವೋ ಅದನ್ನು ಜ್ಞಾನದಿಂದ, ವಿದ್ಯೆಯಿಂದ, ಸಾಧಿಸಿತು. ಈ ಜ್ಞಾನ, ಈ ವಿದ್ಯೆಗಳನ್ನು ನಿರಂತರ ತನ್ನ ಒಡಲಾಳದಲ್ಲಿ ಧರಿಸಿ ಪೋಷಿಸಿಕೊಂಡು ಬರುತ್ತಿರುವ ಮಹಾಮಾತೆ ಸಂಸ್ಕೃತ ಭಾಷೆ. ಅದನ್ನೇ ಕು.ವೆಂ.ಪು. ‘ಓ ತಾಯಿ ನಿನ್ನಿಂದಲೇ ನಮ್ಮ ಬದುಕು, ಸಂಪತ್ತು, ಸಂಸ್ಕೃತಿ’ ಎಂದು ಹಾಡಿದ್ದು.
ತನ್ನ ನಲವತ್ತರ ಹರಯದಲ್ಲಿ ತೀರಿಕೊಂಡ ವಿಲಿಯಂ ಜೋನ್ಸ್ ಮತ್ತೊಂದೆಡೆ ಹೇಳುತ್ತಾನೆ- ‘ಇಡೀ ಒಂದು ಜನ್ಮವನ್ನೇ ಸವೆಸಿದರೂ ಸಂಸ್ಕೃತ ಭಾಷೆಯಲ್ಲಿ ಭಾರತ ಹಿಡಿದಿಟ್ಟಿರುವ ಜ್ಞಾನರಾಶಿಯ ಒಂದಂಶವನ್ನೂ ನಾವು ಓದಿ ಮುಗಿಸಲಾರವು’ ಎಂದು. ಅಂಥದ್ದೇನಿದೆ ಈ ಸಂಸ್ಕೃತದಲ್ಲಿ? ಅದೊಂದು ಭಾಷೆಯಷ್ಟೇ ಅಲ್ಲವೇ? ಎಂಬ ಪ್ರಶ್ನೆಗೆ ನಾನು ಹೇಳುವ ಉತ್ತರ ಇಷ್ಟು. ಭಾಷೆಗಳು ಸಾವಿರಾರು ಇವೆ. ಧರ್ಮಗಳು, ದೇಶಗಳು ಇದ್ದಂತೆ! ಆದರೆ ಭಾರತೀಯ ಮೂಲದ್ದು ಯಾವುದೇ ಇರಲಿ ಅದು ಬೇರೆಯೇ ಆಗಿರುತ್ತದೆ ಎಂದು.
ವಿಶ್ವವಿಖ್ಯಾತ ವಿದ್ವಾಂಸರು, ಅನುಭಾವಿಗಳು ಆದ ಮಹರ್ಷಿ ಅರವಿಂದರು ಸಂಸ್ಕೃತ ಭಾಷೆಯ ಭವ್ಯತೆ ಮತ್ತು ಅಗಾಧತೆಗಳನ್ನು ಕುರಿತು ಹೀಗೆ ಹೇಳಿದ್ದಾರೆ.
‘ಜಗತ್ತಿನ ಹಲವು ಉತ್ಕೃಷ್ಟ ಸಾಹಿತ್ಯಗಳಲ್ಲಿಯೇ ಅತ್ಯಂತ ಪುರಾತನವೂ ಮತ್ತು ಶಾಸ್ತ್ರೀಯ ಭಾಷೆಯಾದಂತಹ ಸಂಸ್ಕೃತ ಭಾಷೆಯು ವರಿಷ್ಠತೆ ಹಾಗೂ ರಚನೆಯಲ್ಲಿ ಶ್ರೇಷ್ಠತೆಯ ಬಾಹುಳ್ಯವನ್ನು ಹೊಂದಿದ್ದು ಅದರ ವೈಶಿಷ್ಟ್ಯವೂ-ಗುಣ ವಿಶಿಷ್ಟತೆಗಳು ಹಲವು. ಸಂಸ್ಕೃತ ಭಾಷೆಯು ಗುಣಮಟ್ಟದಲ್ಲಿ, ಅಗಾಧತೆ ಸೌಂದರ್ಯಗಳಲ್ಲಿ, ಭಾಷೆಯಲ್ಲಿರುವ ಸತ್ಯಾಂಶದ ತಿರುಳು, ಕಲಾತ್ಮಕವಾದಂತಹ ರಚನೆ, ವೈಭವತೆ, ನ್ಯಾಯ ಪಕ್ಷಪಾತಿಕೆ, ಮಾತಿನ ಸೌಂದರ್ಯ ಹಾಗೂ ಭಾಷೆಯು ಹೇಳಹೊರಟ ಆಶಯದ ಉದ್ದಗಲಗಳ ಆಳ ಎಷ್ಟೊಂದು ಉಚ್ಛಾ›ಯಸ್ಥಿತಿಯಲ್ಲಿತ್ತು ಎಂದರೆ, ಜಗತ್ತಿನ ಇನ್ನಿತರ ಸಾಹಿತ್ಯಗಳಲ್ಲಿಯೇ ಸಂಸ್ಕೃತ ಭಾಷೆಯು ಪರಮೋನ್ನತವಾದಂತಹ ಸ್ಥಾನ ಪಡೆದಿದೆ.
ಸಾರ್ವತ್ರಿಕ ಮಾನದಂಡಗಳ ಪ್ರಕಾರ, ಸಂಸ್ಕೃತ ಭಾಷೆಯು ಮಾನವನ ಉತ್ಕೃಷ್ಟ ಬುದ್ಧಿಮತ್ತೆ ನಿರ್ವಿುಸಿದ ಅತ್ಯದ್ಭುತವೂ, ಪರಿಪೂರ್ಣವೂ ಆದ ಅದ್ಭುತ ಸಾಹಿತ್ಯ ಸಲಕರಣೆಯಾಗಿದೆ. ಈ ಸಂಸ್ಕೃತ ಭಾಷೆಯು ಭವ್ಯವೂ, ದಿವ್ಯವೂ, ಇಂಪಾದ, ಪ್ರಬಲವಾದ, ಅಚ್ಚುಕಟ್ಟಾಗಿ ನಿರ್ವಿುತವಾದ ಮತ್ತು ಅಷ್ಟೇ ರೋಮಾಂಚನಕಾರಕ ಹಾಗೂ ಅತ್ಯಂತ ಸೂಕ್ಷ ್ಮ ಸೌಜನ್ಯದ ಭಾಷೆಯಾಗಿದೆ’
ಪ್ರಪಂಚದ ಯಾವುದಾದರೂ ಭಾಷೆಯನ್ನು ಕುರಿತು ಅಧಿಕಾರವಾಣಿಯಿಂದ ಮಾತನಾಡಬಲ್ಲ ವಿದ್ವಾಂಸರೊಬ್ಬರು ಇದಕ್ಕಿಂತಲೂ ಭವ್ಯವಾದ ಚಿತ್ರಣವನ್ನು ಕೊಟ್ಟಿದ್ದಾರೆ ಎಂದು ನನಗೇನು ಅನ್ನಿಸುವುದಿಲ್ಲ.
ಸುಪ್ರಸಿದ್ಧ ಅಮೆರಿಕನ್ ವಿದ್ವಾಂಸ ಡೇವಿಡ್ ಫ್ರಾಲೆಯವರ ಪ್ರಕಾರ ಪ್ರಪಂಚದ ಯಾವ ಭಾಷೆಯಲ್ಲಿಯೂ ಇಷ್ಟು ಅಗಾಧ, ವಿಪುಲ ಸಾಹಿತ್ಯವಿಲ್ಲ. ಪ್ರಪಂಚದ ಎರಡು ಮಹಾಧರ್ಮಗಳಿಗೆ ಸಂಬಂಧಿಸಿದ ಅಧ್ಯಾತ್ಮ, ತತ್ವಶಾಸ್ತ್ರ, ಪೌರಾಣಿಕ, ಪದ್ಯ, ನಾಟಕ, ಗದ್ಯ ಸಾಹಿತ್ಯವೂ ಇಲ್ಲಿಯಷ್ಟು ಬೇರಾವುದೇ ಭಾಷೆಯಲ್ಲಿಲ್ಲ. ಕಾಳಿದಾಸ, ವಾಲ್ಮೀಕಿ, ಪತಂಜಲಿ ಮತ್ತು ಶ್ರೀಶಂಕರಚಾರ್ಯರು ಈ ಭಾಷೆಯಲ್ಲಿ ರಚಿಸಿರುವ ಕೃತಿಗಳು ಕೇವಲ ತಮ್ಮ ತಥ್ಯಕ್ಕಾಗಿ ಅಲ್ಲ, ಭಾಷಾ ಲಾಲಿತ್ಯ (Beauty), ಗಾಂಭೀರ್ಯ (Depth) ಮತ್ತು ನವಿರುಗಳಿಗೂ (Grace) ವಿಶ್ವಮಾನ್ಯವಾಗಿವೆ. ದೇವಗಂಗೆಯಂತೆ ಭಾರತೀಯರ ಮನಸ್ಸುಗಳನ್ನು ಇವು ಅನಾದಿಕಾಲದಿಂದಲೂ ಉದಾತ್ತೀಕರಿಸುತ್ತಿವೆ, ರಂಜಿಸುತ್ತಿವೆ , ಧನ್ಯತಾಭಾವವನ್ನೀಯುತ್ತಿವೆ.
ಪಾಶ್ಚಾ್ಯತ್ಯರಿಗಂತೂ ವೇದಗಳಂತೆ ಅದರ ಮಾಧ್ಯಮವಾದ ಸಂಸ್ಕೃತವನ್ನು ಎಷ್ಟು ಹೊಗಳಿದರೂ ತೃಪ್ತಿ ಇಲ್ಲ. ತಮ್ಮದೇ ಭಾಷೆಗಳೊಂದಿಗೆ ಹೋಲಿಸುತ್ತ, ‘ಸಂಸ್ಕೃತಭಾಷೆಯು ಇತರ ಭಾಷೆಗಳಲ್ಲಿ ಪ್ರತ್ಯೇಕವಾಗಿ ಕಂಡುಬರುವ ವಿವಿಧ ಗೌಣಮೌಲ್ಯಗಳನ್ನು ಏಕಸಂಧಾನವಾಗಿ ಹೊಂದಿದೆ. ಗ್ರೀಕ್ ಭಾಷೆಯ ಪ್ರವಾಹಮಯ ಸಮೃದ್ಧತೆ, ರೋಮನ್ ಭಾಷೆಯ ಗಂಭೀರ ಶಕ್ತಿತನ, ಹೀಬ್ರೂ ಭಾಷೆಯ ದೈವೀಸ್ಪೂರ್ತಿಯಂತಹ ಸಂವೇದನೆ- ಇವೆಲ್ಲವೂ ಸಂಸ್ಕೃತದಲ್ಲಿ ಸಮನ್ವಯಗೊಂಡಿವೆ.
ಭಾಷೆಯ ಮೂಲಭೂತ ಅಂಶಗಳನ್ನು ಆಧಾರವನ್ನಾಗಿ ಮಾಡಿಕೊಂಡು ಜೀವಂತ ತತ್ವಗಳನ್ನು ಆಧರಿಸಿ ತೀರ್ವನಿಸಿದಾಗ, ಸಂಸ್ಕೃತವು ವ್ಯಾಕರಣಾತ್ಮಕ ರಚನೆಯದಲ್ಲಿ ಪ್ರಾಬಲ್ಯ ಹೊಂದಿದ್ದು, ಎಲ್ಲ ಭಾಷೆಗಳ ಪೈಕಿ ಅತ್ಯಂತ ಪರಿಪೂರ್ಣವಾಗಿ ರೂಪುಗೊಂಡ ಭಾಷೆ ಎಂದು ನಿರೂಪಿಸಬಹುದು ಗ್ರೀಕ್ ಮತ್ತು ಲ್ಯಾಟಿನ್ ಅನ್ನು ಹೊರತುಪಡಿಸಿದರೂ’ ಎಂದು ಜರ್ಮನಿಯಲ್ಲಿ ಸಂಸ್ಕೃತ ಭಾಷೆಯನ್ನು ಜನಪ್ರಿಯಗೊಳಿಸಿದ ವಿಖ್ಯಾತ ಸಂಸ್ಕೃತ ಪಂಡಿತ ಫ್ರೆಡ್ರಿಕ್ ಶೆಲೆಗೆಲ್ ತಮ್ಮ ಸಂತಸವನ್ನು ವ್ಯಕ್ತಪಡಿಸುತ್ತಾರೆ.
ಇಷ್ಟೇ ಅಲ್ಲ, ಅಣುಬಾಂಬಿನ ಜನಕ ರಾಬರ್ಟ್ ಓಪನೀಮರ್ ಸಂಸ್ಕೃತ ವಿದ್ವಾಂಸರಾಗಿದ್ದಷ್ಟೇ ಅಲ್ಲ ಗೀತೆಯ ಹಲವು ಶ್ಲೋಕಗಳನ್ನು ಕಂಠಪಾಠ ಮಾಡಿದ್ದರು. ಭಾರತೀಯ ವಿಜ್ಞಾನಿ ರಾಜಾರಾಮಣ್ಣ, ‘ಜಗತ್ತಿನಲ್ಲಿ ಸಂಸ್ಕೃತ ಭಾಷೆಯೊಂದೇ ವೈಜ್ಞಾನಿಕ ಆಧಾರವುಳ್ಳದ್ದು. ಸಂಸ್ಕೃತದಿಂದ ನಮಗೆ ಲಭಿಸುವ ಜ್ಞಾನವು ಅತ್ಯಂತ ರ್ತಾಕ, ವೈಜ್ಞಾನಿಕ ಅಷ್ಟೇ ಅಲ್ಲ ಕಂಪ್ಯೂಟರ್ ಭಾಷೆಗೆ ಅಳವಡಿಸಬಹುದಾದ ಏಕಮೇವ ಭಾಷೆ ಸಂಸ್ಕೃತ’ ಎಂದು ಹೇಳಿದ್ದಾರೆ.
ಇಂತಹ ಅತ್ಯಮೂಲ್ಯ ಆಸ್ತಿಯೊಂದನ್ನು ನಮ್ಮ ಪೂರ್ವಜರು ನಮಗೆ ಬಿಟ್ಟು ಹೋಗಿದ್ದಾರೆ. ಆದರೇನಾಯಿತು ಅದರ ಮೌಲ್ಯವನ್ನು ತಿಳಿಯುವ ಸಾಮರ್ಥ್ಯ ನಮ್ಮಲ್ಲಿ ಇರಲೇಬೇಕೆಂದೇನೂ ಇಲ್ಲವಲ್ಲ! ಪೂರ್ವಗ್ರಹ, ನರಿ ಸಂಸ್ಕೃತಿ ಇತ್ಯಾದಿಗಳಿಂದ ತೊಳಲುತ್ತಿರುವ ಸ್ವಯಂಘೊಷಿತ ಚಿಂತಕರು ಒಂದು ವಿಷಯವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ಈ ಮೇಲಿನ ದೌರ್ಬಲ್ಯಗಳೇ ಬೌದ್ಧಿಕ ಬೆಳವಣಿಗೆಗೆ ಪ್ರಧಾನ ಆತಂಕಗಳು ಎಂದು! (ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)