

| ಮನೋಹರ ಜೋಶಿ
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನಲ್ಲಿರುವ ಸನ್ನತಿಯು ಬಹು ಪುರಾತನವಾದ ಶಕ್ತಿಪೀಠಗಳಲ್ಲಿ ಒಂದು. ಸನ್ನತಿ ಗ್ರಾಮ ರಾಷ್ಟ್ರಕೂಟರ ಮತ್ತು ಚಾಲುಕ್ಯರ ಆಡಳಿತಕ್ಕೆ ಒಳಪಟ್ಟಿತ್ತು. ಬೌದ್ಧರ ಪವಿತ್ರ ಕ್ಷೇತ್ರವೂ ಆಗಿತ್ತು. ಈ ಕ್ಷೇತ್ರದ ಅಧಿದೇವತೆ ಶ್ರೀ ಚಂದ್ರಲಾ ದೇವಿಯು ಬಲೂಚಿಸ್ಥಾನದ ಹಿಂಗ್ಲಾಜ್ ಎಂಬಲ್ಲಿಂದ ಕನ್ನಡನಾಡಿಗೆ ಬಂದ ಆದಿಶಕ್ತಿ ಎನ್ನುವ ಐತಿಹ್ಯವಿದೆ. ಲಕ್ಷಿ್ಮದೇವಿಯ ಅನೇಕ ರೂಪಗಳಲ್ಲಿ ಸನ್ನತಿಯ ಚಂದ್ರಲಾದೇವಿಯೂ ಒಬ್ಬಳು. ಭೀಮಾ ನದಿ ತೀರದಲ್ಲಿರುವ ಈ ದೇವಿ ಬೇಡಿದ್ದನ್ನೆಲ್ಲ ನೀಡುವ ಮಾತೃಸ್ವರೂಪಿಣಿ ಎನ್ನುವುದು ಭಕ್ತರ ನಂಬಿಕೆ.
ನಾಲ್ಕನೇ ಶತಮಾನಕ್ಕಿಂತ ಮೊದಲು ನಿರ್ವಿುತವಾದ ಸನ್ನತಿ ದೇವಾಲಯ ಭವ್ಯ, ಸುಂದರ ರಾಜಗೋಪುರದಿಂದ ಕೂಡಿದೆ. ಇತ್ತೀಚೆಗೆೆ ಜೀಣೋದ್ಧಾರಗೊಂಡಿದೆ. ಭೀಮಾನದಿ ತಟದಲ್ಲಿ ಪೂರ್ವಾಭಿಮುಖವಾಗಿ ಸ್ಥಾಪಿತವಾಗಿದ್ದು, ಗರ್ಭ ಗುಡಿಯು ಶ್ರೀ ಚಕ್ರ ತಳಹದಿಯ ವಿನ್ಯಾಸದಲ್ಲಿ ನಿಮಾಣವಾಗಿದೆ. ದೇವಾಲಯದ ಆವರಣದಲ್ಲಿ ಪುರಾತನವಾದ ದ್ವಾದಶಲಿಂಗಗಳಲ್ಲದೆ ಮಹಾಕಾಳಿ, ಮಹಾಲಕ್ಷಿ್ಮ ಮತ್ತು ಮಹಾಸರಸ್ವತಿಯ ಭವ್ಯವಿಗ್ರಹಗಳಿವೆ. ಗರ್ಭಗೃಹ, ವಿಶಾಲವಾದ ಹಜಾರ ಇದೆ. ಚಾಲುಕ್ಯರ, ರಾಷ್ಟ್ರಕೂಟರ ಕಲೆ ಮನೋಹರವಾಗಿದೆ. ಗರ್ಭಗುಡಿಯಲ್ಲಿ ಚಂದ್ರಲಾದೇವಿಯ ಮೂಲ ಪಾದುಕೆಗಳು ಮತ್ತು ಉದ್ಭವ ಮೂರ್ತಿಗಳಿವೆ.
ಕ್ಷೇತ್ರದ ವೈಶಿಷ್ಟ್ಯ ಶ್ರೀ ರಾಮ ಸೀತೆಯರ ಪಟ್ಟಾಭಿಷೇಕದ ನಂತರ ಸೇತುರಾಜನಾಗಿ ಅವತರಿಸಿದ್ದ ಸಮುದ್ರ ರಾಜನ ಗರ್ವವನ್ನು ಮುರಿಯಲು ಶ್ರೀರಾಮನು ನಾರಾಯಣ ಮುನಿಯಾಗಿ ಮತ್ತು ಸೀತಾದೇವಿಯು ಚಂದ್ರವದನೆಯಾಗಿ ಅವತರಿಸಿದರು. ಚಂದ್ರವದನೆಯನ್ನು ಪೀಡಿಸುತ್ತಿದ್ದ ಕಾಮಾಂಧ ಸೇತುರಾಜನನ್ನು ಸಂಹರಿಸಲು ನಾರಾಯಣ ಮುನಿಯು ತನ್ನ ಕುಲದೇವತೆಯಾದ ಹಿಂಗುಲಾ ದೇವಿಯನ್ನು ಕೇಳಿಕೊಂಡನು. ಸೇತುರಾಜನನ್ನು ಸಂಹರಿಸಲು ಬಲೂಚಿಸ್ಥಾನದಿಂದ ಬರಲು ದೇವಿಯು ಒಪ್ಪಿದಳು. ಆದರೆ ತಾನು ಮುನಿಯ ಹಿಂದೆ ಬರುವುದಾಗಿಯೂ ಯಾವುದೇ ಕಾರಣಕ್ಕೂ ಹಿಂದಿರುಗಿ ನೋಡಬಾರದೆಂದೂ ಹೇಳಿದ್ದಳು. ಸನ್ನತಿ ಬಳಿ ನದಿ ನೀರಿನ ಭೋರ್ಗರೆವ ಸದ್ದು ಇತ್ತು. ಹಾಗಾಗಿ ಚಂದ್ರಲೆಯ ಕಾಲುಗಳ ಗೆಜ್ಜೆ ಶಬ್ದ ಕೇಳಿಸದೇ ಇದ್ದಾಗ ಅನುಮಾನಗೊಂಡ ನಾರಾಯಣಮುನಿ ಹಿಂತಿರುಗಿ ನೋಡಿಬಿಟ್ಟನು. ಆಗ ಚಂದ್ರಲೆಯು ಅಲ್ಲಿಯೇ ನೆಲೆಸಿ ತನ್ನ ದಿವ್ಯ ಪಾದುಕೆಗಳು ಮತ್ತು 5 ಭೃಂಗಗಳಿಂದ ಕೂಡಿದ ತೆಂಗಿನ ಫಲವನ್ನು ಸೇತುರಾಜನ ಸಂಹಾರಕ್ಕಾಗಿ ಕಳಿಸಿಕೊಟ್ಟಳು. ಚಂದ್ರಲಾದೇವಿಯ ಆಜ್ಞೆಯಂತೆ ನಾರಾಯಣಮುನಿಯು ತೆಂಗಿನ ಫಲವನ್ನು ಸನ್ನತಿ ಕ್ಷೇತ್ರದಲ್ಲಿ ಛೇದಿಸಿದಾಗ ಅದರೊಳಗಿಂದ ಉದ್ಭವವಾದ 5 ಭೃಂಗಗಳು ಸೇತುರಾಜನನ್ನು ಸಂಹರಿಸಿದವು. ನಾರಾಯಣಮುನಿಯ ಆಸೆಯಂತೆ ಈ ಕ್ಷೇತ್ರದಲ್ಲಿ ಲಕ್ಷಿ್ಮದೇವಿಯು ಶ್ರೀ ಚಂದ್ರಲಾ ಪರಮೇಶ್ವರಿಯ ರೂಪದಲ್ಲಿ ಶಾಶ್ವತವಾಗಿ ನೆಲೆಸಿದಳು.
ಚಂದ್ರಲಾದೇವಿಯ ವಿವಿಧ ನಾಮಾವಳಿಗಳು: ಭ್ರಮರಾಂಬಾ, ಬಕುಲಾಂಬಾ, ಚಂದ್ರಲಾಂಬಾ, ಚಂದ್ರವದನೆ, ಭವಾನಿ, ಮಾತಾ ಮಹಾಲಕ್ಷ್ಮೀ ಮುಂತಾದ ಹೆಸರುಗಳಿಂದ ಕರೆಸಿಕೊಳ್ಳುವ ಲಕ್ಷಿ್ಮದೇವಿಯು ಸನ್ನತಿಯಲ್ಲಿ ನೆಲೆಸಿ ತನ್ನ ದಿವ್ಯ ಸನ್ನಿಧಾನದಿಂದ ಭಕುತರ ಮನೋ ಅಭೀಷ್ಟ್ಟಳನ್ನು ಈಡೇರಿಸುತ್ತಿದ್ದಾಳೆ.
ರಥೋತ್ಸವದ ವಿಶೇಷ: ಸನ್ನತಿ ಶ್ರೀ ಲಕ್ಷ್ಮೀ ಚಂದ್ರಲಾ ದೇವಿಯ ಜಾತ್ರಾ ಮಹೋತ್ಸವ ಚೈತ್ರಮಾಸ ಕೃಷ್ಣ ಪಕ್ಷ ಪೌರ್ಣಿಮೆಯಿಂದ ಆರಂಭಗೊಂಡು ಚೈತ್ರ ಅಷ್ಟ್ಟುವರೆಗೂ 9 ದಿನ ಜರುಗುತ್ತದೆ. ಪಂಚಮಿ ದಿನ, ಏ.21ರಂದು ರಥೋತ್ಸವ ನಡೆಯುತ್ತದೆ. ಕಲಾ ತಂಡಗಳ ಪ್ರದರ್ಶನ ಗಮನ ಸೆಳೆಯುತ್ತದೆ. ಕಲ್ಲಿನ 10 ಅಡಿಯ ರಥವು ಪುಷ್ಪಾಲಂಕಾರದೊಂದಿಗೆ ಕಂಗೊಳಿಸುತ್ತದೆ. ಈ ವೈಭವವನ್ನು ಕಣ್ತುಂಬಿಕೊಳ್ಳಲು ನಾಡಿನ ಹಾಗೂ ನಾನಾ ರಾಜ್ಯಗಳ ಭಕ್ತರು ಪಾಲ್ಗೊಳ್ಳುತ್ತಾರೆ.
ಸನ್ನತಿಗೆ ತಲುಪುವ ಬಗೆ: ಕಲಬುರಗಿ ಜಿಲ್ಲಾ ಕೇಂದ್ರದಿಂದ ಸನ್ನತಿಯು 76 ಕಿಮೀ ದೂರದಲ್ಲಿದೆ. ನಾಲವಾರ ರೈಲು ನಿಲ್ದಾಣದಿಂದ 18 ಕಿಮೀ ದೂರದಲ್ಲಿದೆ. ರಸ್ತೆ ಮೂಲಕ ಸುಲಭವಾಗಿ ತಲುಪಲು ಎಲ್ಲಾ ರೀತಿಯ ಸಾರಿಗೆ ಸೌಲಭ್ಯಗಳು ಇವೆ.