ಸ್ವಾಭಿಮಾನಿ ಸಂಗೊಳ್ಳಿ ರಾಯಣ್ಣ; ಇಂದು ಬಲಿದಾನ ದಿನ

Sangolli Rayanna 26 Jan 20
Published on

ನಾಡಿನ ರಕ್ಷಣೆ ಕೇವಲ ಆಳುವವರ ಕೆಲಸವಲ್ಲ, ಅದರಲ್ಲಿ ಜನರ ಪಾತ್ರವೂ ಹಿರಿದು ಎಂದು ತನ್ನ ನಡೆಯಿಂದ ನಿರೂಪಿಸಿದ ಅಪ್ರತಿಮ ರಾಷ್ಟ್ರಭಕ್ತ ಸಂಗೊಳ್ಳಿ ರಾಯಣ್ಣ.

ಅವರದು ಕಿತ್ತೂರು ಸಂಸ್ಥಾನದ ಊಳಿಗದಲ್ಲಿದ್ದ ಕುಟುಂಬ. ರಾಜಪರಿವಾರದ ಬಗ್ಗೆ ಅಪಾರ ಭಕ್ತಿ. ರಾಯಣ್ಣನ ರಕ್ತದಲ್ಲೂ ಅದೇ ಬಂದಿತ್ತು. ಬ್ರಿಟಿಷರ ವಿರುದ್ಧ ನಡೆಯುತ್ತಿದ್ದ ಹೋರಾಟಗಳಲ್ಲಿ ರಾಯಣ್ಣ ಕಾದಾಡುತ್ತಿದ್ದ ರೀತಿ, ರಾಣಿ ಚೆನ್ನಮ್ಮನ ಮೆಚ್ಚುಗೆಗೆ ಪಾತ್ರವಾಗಿತ್ತು. ಹಾಗೆ ನೋಡಿದರೆ ರಾಯಣ್ಣನ ಮನೆತನ ಮೊದಲಿನಿಂದಲೂ ಶೌರ್ಯ-ಸಾಹಸಕ್ಕೆ ಹೆಸರಾದದ್ದು. ರಾಯಣ್ಣನ ಅಜ್ಜ ರಾಗಪ್ಪ, ಚಿಣಗಿ ಯುದ್ಧದಲ್ಲಿ ಅಪಾರ ಶೌರ್ಯ ತೋರಿದ್ದ. ಅದಕ್ಕಾಗಿ ಅವನಿಗೆ ಆಗಿನ ರಾಜ ವೀರಪ್ಪ ದೇಸಾಯಿ ‘ಸಾವಿರ ಒಂಟೆಗಳ ಸರದಾರ’ ಎಂಬ ಬಿರುದು ನೀಡಿದ್ದ. ಇಷ್ಟಿದ್ದರೂ ರಾಯಣ್ಣನಿಗೆ ಸ್ವತಃ ರಾಜನಾಗುವ ಆಸೆ ಇರಲಿಲ್ಲ. ಕಿತ್ತೂರಿನ ರಾಜಮನೆತನವನ್ನು ರಕ್ಷಿಸುವುದು ಮತ್ತು ಪರಕೀಯರನ್ನು ಹಿಮ್ಮೆಟ್ಟಿಸುವುದಷ್ಟೇ ಆತನ ಧ್ಯೇಯವಾಗಿತ್ತು.

ಕಿತ್ತೂರನ್ನು ಆಳುತ್ತಿದ್ದ ದೇಸಾಯಿ ಮನೆತನದವರು ರಾಯಣ್ಣನಿಗೆ ಶೇತ್​ಸನದಿ/ಗ್ರಾಮರಕ್ಷಕ ಪದವಿಯನ್ನು ನೀಡಿದ್ದರು. ಜತೆಗೆ ಸೈನಿಕ ಗುತ್ತಿಗೆ ಆಧಾರದಲ್ಲಿ ಹಲವು ಎಕರೆಗಳಷ್ಟು ಭೂಮಿಯನ್ನೂ ಕೊಟ್ಟಿದ್ದರು. ಬ್ರಿಟಿಷರ ವಿರುದ್ಧದ ಯುದ್ಧದಲ್ಲಿ ಪಾಲ್ಗೊಳ್ಳುವಂತೆ ಚೆನ್ನಮ್ಮ ರಾಣಿಯ ಕರೆಗೆ ಓಗೊಟ್ಟು ಕಿತ್ತೂರಿನತ್ತ ಹೊರಟ ಐದು ಸಾವಿರ ಶೇತ್​ಸನದಿಗಳ ಜತೆ ರಾಯಣ್ಣನೂ ಸೇರಿಕೊಂಡಿದ್ದ. ತನ್ನ ಇಪ್ಪತ್ತೊಂಬತ್ತನೇ ವಯಸ್ಸಿನಲ್ಲಿಯೇ ಬ್ರಿಟಿಷರ ವಿರುದ್ಧ ಹೋರಾಡಿದ್ದ.

1824ರಲ್ಲಿ ನಡೆದ ಯುದ್ಧದಲ್ಲಿ ಕಿತ್ತೂರ ಸಂಸ್ಥಾನ ಸೋತುಹೋಯಿತು. ಬ್ರಿಟಿಷರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಮುಂತಾದವರನ್ನೆಲ್ಲ ಬಂಧಿಸಿದರು. 1826ರಲ್ಲಿ ಎಚ್ಚರಿಕೆ ಕೊಟ್ಟು ಹಲವಾರು ಕೈದಿಗಳನ್ನು ಬಿಡುಗಡೆ ಮಾಡಿದರು. ಹಾಗೆ ಬಿಡುಗಡೆಯಾದವರಲ್ಲಿ ರಾಯಣ್ಣನೂ ಒಬ್ಬನಾಗಿದ್ದ. ತನ್ನ ಹಳ್ಳಿಗೆ ವಾಪಸ್ ಹೋಗಿ ನೆಲೆಸಿದ.

ಚೆನ್ನಮ್ಮನೇ ಸ್ಪೂರ್ತಿ: ನಡುನಡುವೆ ಬೈಲಹೊಂಗಲದ ಕಾರಾಗೃಹಕ್ಕೆ ಹೋಗಿ ತಾನು ಚೆನ್ನಮ್ಮನ ಸಂಬಂಧಿ ಎಂದು ಸುಳ್ಳು ಹೇಳಿ ಭೇಟಿ ಮಾಡುತ್ತಿದ್ದ. ಕಿತ್ತೂರನ್ನು ಮರುವಶ ಮಾಡಿಕೊಳ್ಳುವಂತೆ ರಾಯಣ್ಣನಲ್ಲಿ ಚೆನ್ನಮ್ಮ ಸ್ಪೂರ್ತಿ ತುಂಬುತ್ತಿದ್ದಳು. 1829ರ ಆರಂಭದಲ್ಲಿ ಚೆನ್ನಮ್ಮ ಕಾರಾಗೃಹದಲ್ಲೇ ಕೊನೆಯುಸಿರೆಳೆದಳು. ಕಿತ್ತೂರು ಸಂಸ್ಥಾನ ಸಂಪೂರ್ಣವಾಗಿ ಬ್ರಿಟಿಷರ ಕೈವಶವಾಗಿತ್ತು. ಆದರೆ ಕಿತ್ತೂರಿನ ಜನರ ಮನಸ್ಸಿನಲ್ಲಿ ಸ್ವಾತಂತ್ರ್ಯ ಕಿಚ್ಚು ಮಾತ್ರ ಆರಿರಲಿಲ್ಲ. ಬ್ರಿಟಿಷರ ವಿರುದ್ಧ ಸೇಡು ತೀರಿಸಿಕೊಳ್ಳಬೇಕೆಂಬ ರೊಚ್ಚು ಹೊಗೆಯಾಡುತ್ತಿತ್ತು. ಆಗ ಅದಕ್ಕೊಂದು ಹೋರಾಟದ ರೂಪ ನೀಡಿ ಬ್ರಿಟಿಷರ ನಿದ್ದೆಗೆಡಿಸಿದವನು ರಾಯಣ್ಣ.

ಗ್ರಾಮದಲ್ಲಿ ದೇಶಪ್ರೇಮಿಗಳು ಸಾಕಷ್ಟಿದ್ದರೂ, ಬ್ರಿಟಿಷರ ಜತೆ ಕೈಜೋಡಿಸಿ ಅವರಿಗಾಗಿ ದುಡಿಯುತ್ತಿದ್ದವರೂ ಇದ್ದರು. ಕರಣಿಕನಾಗಿದ್ದ ಕುಲಕರ್ಣಿ ಬಾಳಣ್ಣ ಕೂಡ ಅಂಥವರಲ್ಲಿ ಒಬ್ಬ. ಆತ ರೈತರಿಗೆ ನೀಡುತ್ತಿದ್ದ ಕಿರುಕುಳ ಅಸಹನೀಯವಾಗಿತ್ತು. ತೆರಿಗೆಯ ನೆಪವೊಡ್ಡಿ ಹಿಂಸಿಸುತ್ತಿದ್ದ. ಸ್ಥಳೀಯರ ವಿರುದ್ಧ ಬ್ರಿಟಿಷರಿಗೆ ಸುಳ್ಳುವರದಿ ಕಳಿಸುತ್ತಿದ್ದ. ಅಂಥ ಒಂದು ವರದಿಯನ್ನು ಆಧರಿಸಿಯೇ ಬ್ರಿಟಿಷರು ರಾಯಣ್ಣನ ಕುಟುಂಬದ ವತನ್ ಭೂಮಿಯ ಒಂದು ಭಾಗವನ್ನು ವಶಪಡಿಸಿಕೊಂಡಿದ್ದರು. ಇನ್ನೊಂದು ಭಾಗಕ್ಕೆ ದೊಡ್ಡ ಬಾಡಿಗೆ ನಿಗದಿಪಡಿಸಿದ್ದರು. ಇದು ರಾಯಣ್ಣನನ್ನು ರೊಚ್ಚಿಗೆಬ್ಬಿಸಿತು.

ಗೆರಿಲ್ಲಾ ಹೋರಾಟ: ಚೆನ್ನಮ್ಮ ರಾಣಿಯ ದತ್ತುಪುತ್ರ ಶಿವಲಿಂಗಪ್ಪನನ್ನು ಕಿತ್ತೂರಿನ ಸಿಂಹಾಸನದ ಮೇಲೆ ಪ್ರತಿಷ್ಠಾಪಿಸುವ ದಿಸೆಯಲ್ಲಿ ರಾಯಣ್ಣ ಹೋರಾಟ ಆರಂಭಿಸಿದ. ಒಮ್ಮೆಲೇ ಬ್ರಿಟಿಷರ ವಿರುದ್ಧ ಯುದ್ಧಕ್ಕಿಳಿಯದೆ, ಅವರ ಕಾರ್ಯಗಳಿಗೆ ಆಗಾಗ ಅಡ್ಡಿ ಮಾಡಲು ನಿರ್ಧರಿಸಿದ. ಅದಕ್ಕಾಗಿ ಸಮಾನಮನಸ್ಕ ಸಾಹಸಿಗಳ ಗುಂಪು ಕಟ್ಟಿದ. ಗೆರಿಲ್ಲಾ ಯುದ್ಧತಂತ್ರ ಅನುಸರಿಸಲು ತೀರ್ವನಿಸಿದ. ಪುರಾಣೇತಿಹಾಸಗಳಲ್ಲೂ ಈ ತಂತ್ರದ ಉಲ್ಲೇಖವಿದೆ. ಇದನ್ನು ರಾಮಾಯಣದಲ್ಲಿ ವಾಲಿಯ ಮೇಲೆ ಶ್ರೀರಾಮ ಪ್ರಯೋಗಿಸಿದ್ದ. ಪಲ್ಲವರ ಮೇಲೆ ಮಯೂರಶರ್ಮ ಅನುಸರಿಸಿದ್ದ. ಶಿವಾಜಿಯದೂ ಇದೇ ತಂತ್ರ. ಅನಿರೀಕ್ಷಿತವಾಗಿ ವೈರಿಗಳ ಮೇಲೆ ಎರಗಿ, ಗಾಬರಿ ಬೀಳಿಸಿ, ಅವರು ಸುಧಾರಿಸಿಕೊಳ್ಳುವುದಕ್ಕೂ ಅವಕಾಶ ನೀಡದೆ ದಾಳಿ ನಡೆಸುವುದು ಇದರ ಲಕ್ಷಣ.

ಇದನ್ನನುಸರಿಸಿ ರಾಯಣ್ಣ ಅನೇಕ ಸರ್ಕಾರಿ ಕಚೇರಿಗಳನ್ನು ಲೂಟಿ ಮಾಡುತ್ತಿದ್ದ. ಕಾಗದಪತ್ರಗಳನ್ನು ಸುಡುತ್ತಿದ್ದ. ಲೂಟಿ ಮಾಡಿದ ಹಣವನ್ನು ತನ್ನ ಜತೆಗಿರುತ್ತಿದ್ದ ಸೈನಿಕರಿಗೆ ಹಂಚುತ್ತಿದ್ದ. ಅದರಿಂದ ಅವರು ಇಡೀ ತಂಡಕ್ಕೆ ಆಹಾರದ ವ್ಯವಸ್ಥೆ ಮಾಡುತ್ತಿದ್ದರು. ಈ ಅನೀರೀಕ್ಷಿತ ದಾಳಿಗಳು ಬ್ರಿಟಿಷರಿಗೆ ದುಃಸ್ವಪ್ನವಾಗಿ ಕಾಡತೊಡಗಿದವು. ಹಳ್ಳಿಗಳಲ್ಲಿ ಕಂದಾಯ ವಸೂಲಿ ಮಾಡಿ ಮುಂಬೈಗೆ ಕಳಿಸಿಕೊಡುವ ಬ್ರಿಟಿಷರ ಕಾರ್ಯಕ್ಕೆ ರಾಯಣ್ಣನ ಹೋರಾಟದಿಂದ ಅಡ್ಡಿಯಾಗತೊಡಗಿತು.

ಬೆಳಗಾವಿ ಕೋಟೆ ವಶಕ್ಕೆ ಯೋಜನೆ: ರಾಯಣ್ಣನ ಉಪಟಳವನ್ನು ತಾಳದೆ ಬ್ರಿಟಿಷರು ಕಿತ್ತೂರ ಸಂಸ್ಥಾನವನ್ನು ವಿಭಜಿಸಿ ಅದರ ಹಳ್ಳಿಗಳನ್ನು ಬೆಳಗಾವಿ, ಸಂಪಗಾಂವಿ, ಧಾರವಾಡ, ಹಳ್ಯಾಳ ಮುಂತಾದ ಪ್ರದೇಶಗಳಿಗೆ ಹಂಚಿದರು. 1829ರ ಒಂದು ದಿನ ಖಾನಾಪುರ ತಾಲೂಕಿನ ಬೀಡಿ ಎಂಬಲ್ಲಿದ್ದ ಸರ್ಕಾರಿ ಕಚೇರಿ ಮೇಲೆ ರಾಯಣ್ಣನ ಸೇನೆ ಮಿಂಚಿನ ದಾಳಿ ಮಾಡಿತು. ಕಾವಲಿನವರನ್ನು ಕೊಂದು ಕಚೇರಿಗೆ ಬೆಂಕಿ ಹಚ್ಚಿತು. ತಿಜೋರಿಯಲ್ಲಿದ್ದ 1900 ರೂ. ಲೂಟಿ ಮಾಡಿತು. ಮುಂದೆ ಸಾಗಿ ಬೆಳಗಾವಿ ಕೋಟೆಯನ್ನು ವಶಪಡಿಸಿಕೊಳ್ಳುವ ಯೋಚನೆ ರಾಯಣ್ಣನದಾಗಿತ್ತು. ಅಷ್ಟರಲ್ಲಿ ಬ್ರಿಟಿಷರು ರಾಜದ್ರೋಹದ ಆರೋಪ ಹೊರಿಸಿ ರಾಯಣ್ಣನ ಬಂಧನಕ್ಕೆ ಆದೇಶ ನೀಡಿದರು. ಮೇಜರ್ ಪಿಕರಿಂಗ್ ಎಂಬಾತನ ನೇತೃತ್ವದಲ್ಲಿ ಬ್ರಿಟಿಷ್ ಸೈನಿಕರು ಕಿತ್ತೂರ, ಮುಗುಟಖಾನ ಹುಬ್ಬಳ್ಳಿ, ಸಂಗೊಳ್ಳಿ, ಬೀಡಿ ಸಮೀಪದ ಅರಣ್ಯ, ಬಾಳಗುಂದ ಬೆಟ್ಟದ ಗುಹೆಗಳು ಸೇರಿದಂತೆ ಅನೇಕ ಕಡೆ ಒಂದು ವರ್ಷ ಕಾಲ ಎಡೆಬಿಡದೆ ಜಾಲಾಡಿದರೂ ರಾಯಣ್ಣ ಸಿಗಲಿಲ್ಲ. ಕಡೆಗೊಮ್ಮೆ 1930ರ ಜನವರಿಯಲ್ಲಿ ಒಂದು ದಿನ ಖಾನಾಪುರ ಬಳಿ ಈ ಬ್ರಿಟಿಷ್ ಸೈನಿಕರು ಬೀಡುಬಿಟ್ಟರು. ಅದೇ ರಾತ್ರಿ ರಾಯಣ್ಣ ತನ್ನ ಸಹಚರರೊಂದಿಗೆ ಬ್ರಿಟಿಷ್ ಸೈನ್ಯದ ಮೇಲೆ ಮಿಂಚಿನಂತೆ ದಾಳಿ ಮಾಡಿ ಹಲವರನ್ನು ಕೊಂದ. ಶಸ್ತ್ರಾಸ್ತ್ರಗಳನ್ನು ಅಪಹರಿಸಿದ. ನಂತರ ಸಂಪಗಾಂವಿ ಸಮೀಪದ ಹಳ್ಳಿಗಳ ಮೇಲೆ ದಾಳಿ ಮಾಡಿದ. ಅಲ್ಲಿನ ಮಾಮಲೇದಾರ ಕಚೇರಿ ಮೇಲೆ ಎರಗಿ ತಿಜೋರಿ ಲೂಟಿ ಮಾಡಿ ಕಾಗದಪತ್ರಗಳಿಗೆ ಬೆಂಕಿ ಹಚ್ಚಿದ. ಈ ಸುದ್ದಿ ಕೇಳಿ ಮಾಮಲೇದಾರ ಕೃಷ್ಣರಾಯ, ಕುದುರೆಸವಾರರ ಒಂದು ದಳವನ್ನು ತೆಗೆದುಕೊಂಡು ಧಾವಿಸಿದ. ಸಂಪಗಾಂವಿ ಬಳಿ ಮುಖಾಮುಖಿಯಾಯಿತು. ಕೃಷ್ಣರಾಯನ ಅನೇಕ ಸೈನಿಕರನ್ನು ರಾಯಣ್ಣ ಕೊಂದುಹಾಕಿದ. ರಾಯಣ್ಣನ ಜನರೂ ಮಡಿದರು. ಈ ಘಟನೆಯ ನಂತರ ರಾಯಣ್ಣ ತನ್ನ ಸೈನ್ಯವನ್ನು ಎರಡು ಭಾಗವಾಗಿ ವಿಂಗಡಿಸಿದ. ಒಂದಕ್ಕೆ ತಾನು ನಾಯಕತ್ವ ವಹಿಸಿದ. ಇನ್ನೊಂದಕ್ಕೆ ಬಿಚ್ಚುಗತ್ತಿ ಚನ್ನಬಸಪ್ಪನನ್ನು ನಾಯಕನನ್ನಾಗಿಸಿದ. ತನ್ನ ದಳದೊಂದಿಗೆ ರಾಯಣ್ಣ ದೇಸೂರ ಕಡೆಗೆ ಹೋಗಿ ಅಲ್ಲಿನ ಕಿಲ್ಲೆ (ಕೋಟೆ) ವಶಪಡಿಸಿಕೊಂಡು ನಂದಿಧ್ವಜ ಹಾರಿಸಿದ. ಚನ್ನಬಸಪ್ಪನ ನಾಯಕತ್ವದ ದಳ ನೇಸರಗಿ ಸಮೀಪದ ಅಡವಿಯಲ್ಲಿ ಬಿಡಾರ ಹೂಡಿತ್ತು. ಅದರ ಮೇಲೆ ಕೃಷ್ಣರಾಯ ದಾಳಿ ಮಾಡಿದ. ಯೋಧರು ಜೀವದ ಹಂಗು ತೊರೆದು ಹೋರಾಡಿದರು.

ಸೋತು ಸುಣ್ಣವಾದ ಬ್ರಿಟಿಷರು: ರಾಯಣ್ಣನನ್ನು ಬಂಧಿಸಲು ಶ್ರಮಿಸಿ ಸೋತು ಸುಣ್ಣವಾದ ಬ್ರಿಟಿಷರು ಕೊನೆಗೆ ಆತನನ್ನು ಹಿಡಿದು ಕೊಟ್ಟವರಿಗೆ ಬಹುಮಾನ ಕೊಡುವುದಾಗಿ ಘೊಷಿಸಿದರು. ಇದರಿಂದ ಏನೂ ಪ್ರಯೋಜನವಾಗಲಿಲ್ಲ. ನಂತರ ಭೇದ ನೀತಿ ಅನುಸರಿಸಲು ಆರಂಭಿಸಿದರು. ಕಿತ್ತೂರ ದೇಸಾಯರ ಮನೆತನಕ್ಕೆ ಖೋದಾನಪುರದ ಲಿಂಗನಗೌಡರು ತಮ್ಮ ಮಗನನ್ನು ದತ್ತು ಕೊಡಲು ಬಯಸಿದ್ದರು. ಆದರೆ ದೇಸಾಯರು ಅದಕ್ಕೆ ಒಪ್ಪಿಗೆ ಕೊಟ್ಟಿರಲಿಲ್ಲ. ಹಾಗಾಗಿ ಅವರಿಗೆ ಕಿತ್ತೂರಿನ ಮೇಲೆ ದ್ವೇಷವಿತ್ತು. ನೇಗಿಹಾಳದ ವೆಂಕನಗೌಡರೂ ಈ ವಿಷಯದಲ್ಲಿ ಲಿಂಗನಗೌಡರ ಪರವಾಗಿದ್ದರು. ದೇಸಾಯಿ ಮನೆತನದ ದತ್ತುಪುತ್ರನಾದ ಶಿವಲಿಂಗಪ್ಪನನ್ನು ಮತ್ತೆ ಸಿಂಹಾಸನದ ಮೇಲೆ ಕೂರಿಸುವ ರಾಯಣ್ಣನ ಬಗ್ಗೆ ಇವರಿಬ್ಬರಿಗೂ ಅಸಮಾಧಾನವಿತ್ತು. ಕೃಷ್ಣರಾಯ ಇವರನ್ನು ಭೇಟಿ ಮಾಡಿ ಕುತಂತ್ರ ರೂಪಿಸಿದ. ಅದರ ಫಲವಾಗಿ ಲಿಂಗನಗೌಡರು ರಾಯಣ್ಣನಿಗೆ ಬೆಂಬಲ ಘೊಷಿಸಿದರು. ತಮ್ಮ 300 ಸೈನಿಕರನ್ನು ರಾಯಣ್ಣನ ಸೇವೆಗೆ ಕಳಿಸಿಕೊಟ್ಟರು. ರಾಯಣ್ಣ ಇದನ್ನು ನಿಜವೆಂದು ನಂಬಿದ. ಕೆಲವು ದಿನ ಎಲ್ಲರೂ ಜತೆಯಾಗಿಯೇ ಕೆಲಸ ಮಾಡಿ ಸಂಶಯಕ್ಕೆ ಆಸ್ಪದವಿಲ್ಲದಂತಹ ವಾತಾವರಣ ನಿರ್ವಿುಸಿದರು.

ಒಮ್ಮೆ ರಾಯಣ್ಣ ತನ್ನ ಗುಂಪಿನೊಡನೆ ಡೋರಿಯ ಗುಡ್ಡದಲ್ಲಿ ಬೀಡುಬಿಟ್ಟಿದ್ದ. ಅಲ್ಲಿ ವೆಂಕನಗೌಡರೂ ಇದ್ದರು. ರಾಯಣ್ಣ ತನ್ನ ಕತ್ತಿಯನ್ನು ಲಕ್ಕಪ್ಪನ ಕೈಗೆ ಕೊಟ್ಟು ಸಮೀಪದ ಹಳ್ಳಕ್ಕೆ ಸ್ನಾನ ಮಾಡಲು ಹೋಗುತ್ತಿದ್ದ. ಆ ಲಕ್ಕಪ್ಪ ನೇಗಿನಹಾಳದವನು. ವೆಂಕನಗೌಡರ ಆಪ್ತ. ಹಿಂದಿನಿಂದ ಹೋಗಿ ರಾಯಣ್ಣನನ್ನು ಬಿಗಿಯಾಗಿ ಹಿಡಿದುಕೊಂಡು ಕೂಗು ಹಾಕಿದ. ಸಮೀಪದಲ್ಲೇ ಅಡಗಿಕೊಂಡಿದ್ದ ಶತ್ರುಪಡೆಯ ಸೈನಿಕರು ದಾಳಿ ಮಾಡಿದರು. ಒಬ್ಬಂಟಿಯಾಗಿದ್ದ ಮತ್ತು ನಿರಾಯುಧನಾಗಿದ್ದ ರಾಯಣ್ಣ ಏನೂ ಮಾಡಲು ಆಗಲಿಲ್ಲ. ಆತನನ್ನು ಬಂಧಿಸಿ, ಧಾರವಾಡಕ್ಕೆ ಕರೆತರಲಾಯಿತು. ನಂತರ ಅವನ ಸೈನಿಕರನ್ನೂ ಬಂಧಿಸಲಾಯಿತು. ಜಿ.ವಿ. ಆಂಡರ್ಸನ್ ಎಂಬ ಬ್ರಿಟಿಷ್ ಅಧಿಕಾರಿ ರಾಯಣ್ಣನ ವಿಚಾರಣೆ ನಡೆಸಿದ. ರಾಯಣ್ಣ ತನ್ನ ಕೃತ್ಯಗಳನ್ನೆಲ್ಲ ಒಪ್ಪಿಕೊಂಡ. ನಾಡಿನ ಜನರ ಒಳಿತಿಗಾಗಿ ಇದನ್ನೆಲ್ಲ ಮಾಡಿದೆ ಎಂದು ಹೇಳಿಕೆ ಕೊಟ್ಟ. 1830ರ ಡಿ. 30ರಂದು ರಾಯಣ್ಣ ಮತ್ತು ಆತನ 12 ಸಹಚರರಿಗೆ ಗಲ್ಲು ಶಿಕ್ಷೆ ಘೊಷಿಸಲಾಯಿತು. ಅದಾಗಿ ಸುಮಾರು ಒಂದು ತಿಂಗಳ ನಂತರ, 1831ರ ಜ. 26ರಂದು ಅವರನ್ನು ಗಲ್ಲಿಗೇರಿಸಲಾಯಿತು.

ಸೈನ್ಯದ ವಿಶಾಲ ಜಾತಿ ಸಂಯೋಜನೆ

ರಾಯಣ್ಣನ ಜತೆಗೆ ಗಲ್ಲಿಗೇರಿಸಲಾದ ಆತನ 12 ಸಹಚರರ ಜಾತಿ ಯಾವುದು ಎಂಬುದನ್ನೂ ಬ್ರಿಟಿಷರು ತಮ್ಮ ದಾಖಲೆಗಳಲ್ಲಿ ನಮೂದಿಸಿದ್ದಾರೆ. ಅದನ್ನು ಗಮನಿಸಿದರೆ ರಾಯಣ್ಣ ಜಾತಿಯ ವಿಷಯದಲ್ಲಿ ಎಷ್ಟು ವಿಶಾಲಹೃದಯಿಯಾಗಿದ್ದ ಎಂಬುದು ಮನದಟ್ಟಾಗುತ್ತದೆ. ರಾಯಣ್ಣನ ಮತ್ತು ಅವನ ಜತೆ ಗಲ್ಲಿಗೇರಿದವರ ಹೆಸರು, ಜಾತಿ ಇಂತಿವೆ. ರಾಯಣ್ಣ, ದನಗರ (ಕುರುಬರು); ರುದ್ರನಾಯಕ, ಯಾಳಯ್ಯಾ, ಅಪ್ಪೋಜಿ, ಬಾಲಾನಾಯಕ ಮತ್ತು ಭೀಮಾ, ಬೇಡರು; ಕರಬಸಪ್ಪ, ಕೆಂಚಪ್ಪ ಮತ್ತು ಬಸಲಿಂಗಪ್ಪ, ವೀರಶೈವರು; ಅಪ್ಪೂಣಿ, ಮುಸಲ್ಮಾನರು; ಕೋನೇರಿ ಮತ್ತು ರಾಣೋಜಿ, ಮರಾಠರು; ನ್ಯಾಮಣ್ಣ, ಜೈನರು. ರಾಯಣ್ಣನ ಜತೆಗಿದ್ದ ಸಾಹಸಿಗಳ್ಯಾರೂ ಆತನ ಅಡಗುತಾಣ, ದಾಳಿಯ ಯೋಜನೆ ಬಗ್ಗೆ ಗುಟ್ಟು ಬಿಟ್ಟುಕೊಡುತ್ತಿರಲಿಲ್ಲ. ಅಷ್ಟು ನಿಷ್ಠಾವಂತರನ್ನೇ ಆತ ಗುಂಪಿಗೆ ಸೇರಿಸಿಕೊಳ್ಳುತ್ತಿದ್ದ. ಎಲ್ಲರೂ ಸೇರಿ ಆಗಾಗ ಸಹಭೋಜನ ಮಾಡುತ್ತಿದ್ದರು. ದೇವಸ್ಥಾನಗಳಿಗೆ ಹೋಗುತ್ತಿದ್ದರು. ವಿವಿಧ ಜಾತಿ-ಧರ್ಮದವರಿದ್ದರೂ ಅವರಲ್ಲಿ ಭೇದ ಇರಲಿಲ್ಲ.

ಕೊನೆಯ ಆಸೆ

ನೇಣಿಗೇರಿಸುವ ಮುನ್ನ ಅಧಿಕಾರಿಗಳು ರಾಯಣ್ಣನಿಗೆ ‘‘ನಿನ್ನ ಕೊನೆಯ ಆಸೆ ಏನು’’ ಎಂದು ಕೇಳಿದರು. ‘‘ಈ ನಾಡಿನಲ್ಲಿ ಮತ್ತೊಮ್ಮೆ ಹುಟ್ಟಿ ಬಂದು ಬ್ರಿಟಿಷರನ್ನು ಹೊರಹಾಕಬೇಕು’’ ಎಂದು ರಾಯಣ್ಣ ಉತ್ತರಿಸಿದ. ಅವನನ್ನು ನೇಣು ಹಾಕಲು ಕರೆದುಕೊಂಡು ಹೋಗಿ, ಆತನಿಗೆ ನಿಲ್ಲಲು ಕುರ್ಚಿಯನ್ನೂ, ಕೊರಳಿಗೆ ಹಾಕಲು ಹಗ್ಗವನ್ನೂ ತರಲಾಯಿತು. ಆದರೆ ರಾಯಣ್ಣ ಕುರ್ಚಿಯನ್ನು ಒದ್ದು ಸರಿಸಿ, ಹಗ್ಗವನ್ನು ತಾನೇ ಕೊರಳಿಗೆ ಹಾಕಿಕೊಂಡು ಅದನ್ನು ಎಳೆಯಲು ಅಧಿಕಾರಿಗಳಿಗೆ ಸನ್ನೆ ಮಾಡಿದ. ಇದು ಅವನ ಸ್ವಾಭಿಮಾನಕ್ಕೆ ಸಾಕ್ಷಿ.

ದೇಶಪ್ರೇಮಿಯ ಘರ್ಜನೆ

ಮರಣದಂಡನೆ ಶಿಕ್ಷೆ ಪ್ರಕಟವಾದ ಬಳಿಕ ಬ್ರಿಟಿಷ್ ಅಧಿಕಾರಿಗಳು ನ್ಯಾಯಾಲಯದಿಂದ ಕರೆದೊಯ್ಯುವಾಗ, ತನ್ನನ್ನು ಹಿಡಿದುಕೊಟ್ಟ ನೇಗಿಹಾಳದ ಲಕ್ಕಪ್ಪನನ್ನು ನೋಡಿದ ರಾಯಣ್ಣ, ‘‘ಲೋ ವಿಶ್ವಾಸಘಾತ ಕುಲಗೇಡಿ, ನಿಮ್ಮಂಥವರು ಎಷ್ಟು ದಿನ ಬಾಳೀರಿ? ನಾನು ಸತ್ತರೂ ನನ್ನಂಥ ನೂರಾರು ಜನ ಹುಟ್ಟಿಯೇ ಹುಟ್ಟುತ್ತಾರೆ. ಈ ದೇಶ ಬಹಳ ದಿನ ಪರಾಧೀನವಾಗಿ ಉಳಿಯುವುದಿಲ್ಲ’’ ಎಂದು ರೋಷದಿಂದ ಹೇಳಿದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net