ತಾರೆಯರ ಮಾಸದ ಸೌಂದರ್ಯ

Calender 26 Feb 30
Published on

ಬೆಂಗಳೂರು:  ಸ್ಯಾಂಡಲ್​ವುಡ್​ನ ಸಿನಿಮಾ ತಾರೆಯರು ದಿನಾ ಕಣ್ಮುಂದೆಯೇ ಕಾಣಿಸುವಂತಿದ್ದರೆ ಹೇಗಿರಬೇಡ!? ದಿನವೂ ಹಾಗೆ ತಾರೆಯರ ದರ್ಶನ ಮಾಡಿಸುವಂಥ ಪ್ರಯತ್ನವೊಂದನ್ನು ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಒಬ್ಬರು ಮಾಡಿದ್ದಾರೆ.

ಅಂದರೆ, ಕನ್ನಡದ ಚಿತ್ರರಂಗದ ಕೆಲವು ನಟಿಯರಿಗೆ ವಿಶೇಷವಾದ ಉಡುಪು ತೊಡಿಸಿ, ಅವರ ಫೋಟೋಶೂಟ್ ಮಾಡಿಸಿ, ವಿನೂತನವಾದ ಕ್ಯಾಲೆಂಡರ್ ರೂಪಿಸಿ ಬಿಡುಗಡೆ ಮಾಡಿದ್ದಾರೆ ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಲಕ್ಷ್ಮೀ ಕೃಷ್ಣ. ಅಂದಹಾಗೆ ಹಿಂದೂ ಹೊಸ ವರ್ಷವಾದ ಯುಗಾದಿ ಆಚರಿಸಲ್ಪಡುವ ಮಾರ್ಚ್ ತಿಂಗಳಿನಿಂದಲೇ ಈ ಸೆಲೆಬ್ರಿಟಿ ಕ್ಯಾಲೆಂಡರ್ ಆರಂಭವಾಗಿದ್ದು, 11 ಸೆಲೆಬ್ರಿಟಿಗಳು ಇದಕ್ಕೆ ರೂಪದರ್ಶಿಯರಾಗಿದ್ದಾರೆ.

ನಟಿಯರಾದ ರಾಧಿಕಾ ನಾರಾಯಣ್, ಸಿಂಧೂ ಲೋಕನಾಥ್, ಅದಿತಿ ಪ್ರಭುದೇವ, ಪಾವನಾ ಗೌಡ, ದಿವ್ಯಾ ಉರುಡುಗ, ಶ್ರೀಲೀಲಾ, ಅರ್ಚನಾ ಜೋಯಿಸ್, ಕವಿತಾ ಗೌಡ, ವೈಷ್ಣವಿ ಗೌಡ, ಕಾರುಣ್ಯಾ ರಾಮ್ ಮತ್ತು ಅವರ ಸೋದರಿ ಸಮೃದ್ಧಿ ರಾಮ್ ಈ ಕ್ಯಾಲೆಂಡರ್​ನಲ್ಲಿ ತಿಂಗಳಿಗೊಬ್ಬರಂತೆ ವಿಭಿನ್ನ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಸಲ ಮೂಡಿಬಂದಿರುವ ಈ ಕ್ಯಾಲೆಂಡರ್ ಇತ್ತೀಚೆಗಷ್ಟೇ ನಟಿ ಪ್ರಿಯಾಂಕಾ ಉಪೇಂದ್ರ ಅವರಿಂದ ಅನಾವರಣಗೊಂಡಿತು. ವಿಶೇಷವೆಂದರೆ, ಉದ್ಘಾಟಕರಾಗಿದ್ದ ಅವರಿಗೂ ಲಕ್ಷ್ಮೀ ವಿಭಿನ್ನ ಉಡುಗೆ ವಿನ್ಯಾಸ ಮಾಡಿದ್ದು, ಅದನ್ನೇ ಧರಿಸಿ ಆಗಮಿಸಿ ಕ್ಯಾಲೆಂಡರ್ ಉದ್ಘಾಟನೆ ಮಾಡಿದ್ದರು ಪ್ರಿಯಾಂಕಾ. ಜೀನ್ಸ್​ನಿಂದಲೇ ಮಾಡಿದ ಸೀರೆ, ಗರಿಗಳಿಂದ ಮಾಡಿದ ರವಿಕೆ, ಕಾಮಿಕ್ ಪ್ರಿಂಟ್ ಸೀರೆ, ಗರಿಯ ಗೌನ್, ಧೋತಿ ಸೀರೆ, ಗಿಫ್ಟ್ ಪ್ಯಾಕ್​ನಂಥ ಉಡುಗೆ.. ಹೀಗೆ ಬಗೆಬಗೆಯ ವಿನ್ಯಾಸಗಳ ದಿರಿಸನ್ನು ರೂಪಿಸಿ ಅದರಲ್ಲಿ ಸೆಲೆಬ್ರಿಟಿಗಳು ಕಂಗೊಳಿಸುವಂತೆ ಮಾಡಿ ಕ್ಯಾಲೆಂಡರ್ ರೂಪಿಸಲಾಗಿದೆ. ಅಂದಹಾಗೆ ಲಕ್ಷ್ಮೀಕೃಷ್ಣ 2 ವರ್ಷಗಳಿಂದ ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಆಗಿ ಸ್ಯಾಂಡಲ್​ವುಡ್​ನಲ್ಲಿದ್ದು, 17 ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ.

ಒಂದು ಸಿನಿಮಾದಲ್ಲಿ ನಾಯಕಿಯ ಕಾಸ್ಟ್ಯೂಮ್ ಡಿಸೈನ್ ಮಾಡುವಾಗ ಆ ಚಿತ್ರದ ಪಾತ್ರ ಹಾಗೂ ಬಜೆಟ್ ಇತ್ಯಾದಿಗೆ ಸೀಮಿತವಾಗಿ ಮಾಡಬೇಕಿರುತ್ತದೆ. ಹೀಗಾಗಿ ತೀರಾ ಹೊಸದು ಅಥವಾ ವಿಭಿನ್ನವಾದದ್ದನ್ನು ಮಾಡಲು ಅಷ್ಟು ಅವಕಾಶ ಇರುವುದಿಲ್ಲವಾದ್ದರಿಂದ ಇಂಥದ್ದೊಂದು ಕ್ಯಾಲೆಂಡರ್ ಮಾಡಿ, ತಾರೆಯರನ್ನು ವಿಶೇಷವಾಗಿ ಕಾಣಿಸುವಂತೆ ತೋರಿಸಲಾಗಿದೆ. | ಲಕ್ಷ್ಮೀ ಕೃಷ್ಣ ಸೆಲೆಬ್ರಿಟಿ ಫ್ಯಾಷನ್ ಡಿಸೈನರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net