

ವಿಶ್ವದಲ್ಲಿರುವ ಸಕಲ ಚರಾಚರ ವಸ್ತುಗಳು ಹಾಗೂ ಜೀವಿಗಳು ಸ್ವಯಂಭು ಪರಮಾತ್ಮನ ಅಭಿವ್ಯಕ್ತ ರೂಪವೇ ಎಂದು ಸನಾತನ ಧರ್ಮ ಸಾರುತ್ತದೆ. ಜೇಡರಹುಳು ಬಲೆಯನ್ನು ತನ್ನ ಉದರದಿಂದಲೇ ಹೊರತೆಗೆದು, ಅದರಲ್ಲೇ ವಾಸಿಸಿ ಅದನ್ನು ಕೊನೆಯಲ್ಲಿ ತನ್ನೊಳಗೇ ಸೆಳೆದುಕೊಳ್ಳುತ್ತದೆ. ಜೇಡರಹುಳು ಹಾಗೂ ಬಲೆಗಳ ನಡುವೆ ಇರುವ ಸಂಬಂಧವೇ ಬ್ರಹ್ಮ ಮತ್ತು ವಿಶ್ವದ ಮಧ್ಯೆ ಇರುವ ಸಂಬಂಧವನ್ನು ಸೂಚಿಸುತ್ತದೆ. ಸಕಲ ವಿಶ್ವವು ಬ್ರಹ್ಮವಸ್ತುವಿನಿಂದಲೇ ಆವಿರ್ಭವಿಸಿರುವುದರಿಂದ ಸರ್ವವೂ ಬ್ರಹ್ಮವೇ ಎಂದಿದೆ ಸನಾತನ ಧರ್ಮ. ನಾಮ-ರೂಪರಹಿತ ಬ್ರಹ್ಮನು ಧರ್ಮಸ್ಥಾಪನೆಗಾಗಿ ಹಲವು ರೂಪಗಳಲ್ಲಿ ಭೂಮಿ ಮೇಲೆ ಅವತರಿಸುತ್ತಾನೆ. ಈ ಅವತರಣದ ಉದ್ದೇಶ ಶಿಷ್ಟರಕ್ಷಣೆ ಹಾಗೂ ದುಷ್ಟವಿನಾಶಗಳು ಮಾತ್ರವೇ ಅಲ್ಲ; ವಿಕಾಸದ ಮೂಲಕ ಮಾನವತೆಯನ್ನು ದೈವತ್ವದ ಕಡೆಗೆ ಕೊಂಡೊಯ್ಯುವುದು- ಈ ಧರ್ಮಸ್ಥಾಪನೆಯ ಪ್ರಮುಖ ಅಂಗವಾಗಿದೆ. ವಿಶ್ವವು ಬ್ರಹ್ಮನ ಪ್ರಕಟರೂಪವೇ ಆಗಿರುವಾಗ ಎಲ್ಲ ಮಾನವರೂ ಬ್ರಹ್ಮನ ಪ್ರತಿರೂಪಗಳೇ ಆಗಿರಬೇಕಲ್ಲವೇ? ಇಂತಹ ಮಾನವರು ಸದಾಕಾಲ ಒಳ್ಳೆಯದನ್ನೇ ಮಾಡಬೇಕಲ್ಲವೇ? ಹಾಗಾದರೆ ಮಾನವ ಸಮಾಜದಲ್ಲಿ ಇಷ್ಟು ದುಷ್ಟತನ ಎಲ್ಲಿಂದ ಬಂದಿತು? ಪ್ರಪಂಚ ಏಕೆ ಇಷ್ಟು ಸಮಸ್ಯೆಗಳಿಂದ ತುಂಬಿದೆ? ಅದರಲ್ಲೂ ಬಹುತೇಕ ಸಮಸ್ಯೆಗಳು ಮಾನವನಿರ್ವಿುತವೇ ಆಗಿರುವುದು ಅನೇಕ ಪ್ರಶ್ನೆಗಳಿಗೆ ಎಡೆಮಾಡಿಕೊಡುತ್ತದೆ. ಈ ಅಸಂಬದ್ಧತೆಯನ್ನು ಅರ್ಥಮಾಡಿಕೊಳ್ಳಲು ಉಪನಿಷತ್ತುಗಳ ಬೋಧನೆಗಳಿಗೆ ಮೊರೆಹೋಗಬೇಕು.
ನಮ್ಮ ಸುತ್ತಮುತ್ತಲೂ ದೃಷ್ಟಿಯನ್ನು ಹಾಯಿಸಿದಾಗ ಪ್ರಕೃತಿಯಲ್ಲಿ ಎಲ್ಲವೂ ಲಯಬದ್ಧ ನಿಯಮಗಳಿಗೆ ಅನುಗುಣವಾಗಿ ನಡೆಯುತ್ತಿರುವುದು ತಿಳಿಯುತ್ತದೆ. ಪರಿಸರದ ಸಮತೋಲನ (Ecological Balance) ಆಹಾರ-ಚಕ್ರದ (Food-Cycle) ಮೂಲಕ ಸಂರಕ್ಷಿಸಲ್ಪಡುತ್ತದೆ. ಉದಾಹರಣೆಗೆ ನಿಸರ್ಗದಲ್ಲಿ ಹುಲ್ಲನ್ನು ಜಿಂಕೆ ತಿನ್ನುತ್ತದೆ; ಜಿಂಕೆಯನ್ನು ಹುಲಿ ತಿನ್ನುತ್ತದೆ. ಹುಲಿ ಸತ್ತಮೇಲೆ ಅದನ್ನು ಸೂಕ್ಷಾ್ಮಣು ಜೀವಿಗಳು ತಿಂದು ಅದರಿಂದ ಬಂದ ಗೊಬ್ಬರ ಹುಲ್ಲನ್ನು ಪೋಷಿಸುತ್ತದೆ. ಈ ಆಹಾರ ಸರಪಳಿಯ ಯಾವುದೇ ಒಂದು ಸ್ತರದಲ್ಲಿ ಪ್ರಾಣಿಜಾತಿ ಅವನತಿ ಹೊಂದಿ ಅಸಮತೋಲನವುಂಟಾದಾಗ, ಆಹಾರ ಚಕ್ರದಲ್ಲಿರುವ ಇನ್ನೊಂದು ಪ್ರಾಣಿ ಆ ಸ್ತರವನ್ನು ತುಂಬಿ ಸಮತೋಲನವನ್ನು ಕಾಪಾಡುತ್ತದೆ. ಇನ್ನೊಂದು ಉದಾಹರಣೆಯಾಗಿ ಜಲ-ಚಕ್ರವನ್ನು (Water-Cycle) ತೆಗೆದುಕೊಳ್ಳೋಣ. ಸಮುದ್ರದ ಜಲವು ಸೂರ್ಯನ ಶಾಖದಿಂದ ಆವಿಯಾಗಿ ಮಾರ್ಪಟ್ಟು ಆಕಾಶದಲ್ಲಿ ಮೋಡಗಳು ಉಂಟಾಗುತ್ತವೆ. ಈ ಮೋಡಗಳಿಂದ ಮಳೆ ಸುರಿದು ಹಳ್ಳ-ಕೊಳ್ಳಗಳು ಹರಿದು ನದಿ ರೂಪುಗೊಳ್ಳುತ್ತದೆ. ನದಿ ಸಮುದ್ರವನ್ನು ಸೇರಿದಾಗ ಜಲ-ಚಕ್ರವು ಪೂರ್ಣವಾಗುತ್ತದೆ. ಆದರೆ ಸೃಷ್ಟಿಯ ಒಂದು ಭಾಗವಾದ ಮಾನವರು ಮಾತ್ರ ಸ್ವಾರ್ಥ-ಲೋಭಗಳಿಂದಾಗಿ ನಿಸರ್ಗದ ಅಮೂಲ್ಯ ಸಂಪನ್ಮೂಲಗಳನ್ನು ಕೊಳ್ಳೆಹೊಡೆದು ಸೃಷ್ಟಿಯಲ್ಲಿ ಅಸಮತೋಲನವನ್ನು ಉಂಟುಮಾಡುತ್ತಾರೆ. ಇದರ ಪರಿಣಾಮವಾಗಿ ಪ್ರಕೃತಿ-ವಿಕೋಪಗಳು ಸಂಭವಿಸುತ್ತವೆ. ಅಲ್ಲದೆ ಮಾನವ ಸಮಾಜದಲ್ಲಿ ಏರುಪೇರುಗಳಾಗಿ ಗೊಂದಲವುಂಟಾಗುತ್ತದೆ.
ಯಾವುದೇ ವಿದ್ಯೆಯಿಲ್ಲದ ಎಲ್ಲ ಪ್ರಾಣಿಗಳೂ ತಮ್ಮ ಕನಿಷ್ಠ ಅವಶ್ಯಕತೆಗಳನ್ನು ಮಾತ್ರ ಪೂರೈಸಿಕೊಂಡು ಜೀವಿಸುತ್ತಿರುವಾಗ, ಬುದ್ಧಿವಂತನಾದ ಮಾನವನು ಮಾತ್ರ ಏಕೆ ಇಷ್ಟು ಸ್ವಾರ್ಥ-ಲೋಭಗಳಿಗೆ ದಾಸನಾಗಿದ್ದಾನೆ? ಎಂಬ ಪ್ರಶ್ನೆ ಸಹಜವಾಗಿ ಬರುತ್ತದೆ. ಸೃಷ್ಟಿಯಲ್ಲಿ ಪ್ರಾಣಿಗಳು ಹಾಗೂ ಮಾನವರ ನಡುವೆ ಇರುವ ವ್ಯತ್ಯಾಸವನ್ನು ತಿಳಿದುಕೊಳ್ಳೋಣ. ಎಲ್ಲ ಪ್ರಾಣಿಗಳು ತಮ್ಮ ಪ್ರವೃತ್ತಿಗಳಿಗೆ (Instincts) ಅನುಗುಣವಾಗಿ ಜೀವನವನ್ನು ನಡೆಸುತ್ತವೆ. ಮೂಲ ಪ್ರವೃತ್ತಿಗಳಾದ ಆಹಾರ-ನಿದ್ರೆ-ಭಯ-ಮೈಥುನಗಳು ಮಾನವರಿಗೂ ಪ್ರಾಣಿಗಳಿಗೂ ಸಮಾನವೇ. ಆದರೆ ಮಾನವನಲ್ಲಿರುವ ವಿಶೇಷವೆಂದರೆ ಅವನ ವಿವೇಚನಾಶಕ್ತಿ; ಒಳಿತು-ಕೆಡುಕುಗಳನ್ನು ವಿವೇಚಿಸಿ ವರ್ತಿಸುವ ಶಕ್ತಿ. ಹಾಗಾದರೆ ಒಳಿತು-ಕೆಡುಕುಗಳು ಪ್ರಾಣಿ ಪ್ರಪಂಚಕ್ಕೆ ಅನ್ವಯಿಸುವುದಿಲ್ಲವೇ? ಎಂಬ ಪ್ರಶ್ನೆ ಉದ್ಭವಿಸಬಹುದು. ಉದಾಹರಣೆಗೆ, ಹುಲಿ ಜಿಂಕೆಯನ್ನು ತಿನ್ನುವುದು ತಪ್ಪಲ್ಲವೇ? ಇದು ಹುಲಿಯ ಕ್ರೌರ್ಯವಲ್ಲವೇ? ಆದರೆ ನಿಸರ್ಗಮಾತೆ ಈ ಜೀವಿಗಳನ್ನು ಸೃಷ್ಟಿಸಿರುವುದೇ ಹಾಗೆ. ಹುಲಿ ಜಿಂಕೆಯನ್ನು ತಿನ್ನಲೇಬೇಕು; ಜಿಂಕೆ ಹುಲ್ಲನ್ನು ತಿನ್ನಲೇಬೇಕು. ಅವುಗಳಿಗೆ ಇದನ್ನು ಬಿಟ್ಟು ಬೇರೆ ಆಯ್ಕೆಯೇ ಇಲ್ಲ; ಇದು ಅವುಗಳ ನೈಸರ್ಗಿಕ ನಿಯಮ. ಆದರೆ ಮನುಷ್ಯರಿಗೆ ಮಾತ್ರ ವಿವೇಚನಾಶಕ್ತಿ ಇರುವುದರಿಂದ ಅವರು ಒಳಿತು-ಕೆಡುಕುಗಳನ್ನು ವಿವೇಚಿಸಿ ಒಳ್ಳೆಯದನ್ನು ಮಾತ್ರ ಮಾಡಬೇಕು, ಕೆಟ್ಟದ್ದನ್ನು ಮಾಡಬಾರದು. ತನ್ಮೂಲಕ ಮಾನವನು ಪಶುತ್ವದಿಂದ ದೈವತ್ವಕ್ಕೆ ಏರಬಹುದು. ಇದು ವಿಕಾಸದ ನಿಯಮ ಹಾಗೂ ಮಾನವನಿಗೆ ಮಾತ್ರ ನೀಡಲ್ಪಟ್ಟಿರುವ ವಿವೇಚನಾಶಕ್ತಿಯ ಮೂಲ ಉದ್ದೇಶ. ಆದರೆ ಮಾನವನು ಸ್ವಾರ್ಥ-ಲೋಭಗಳಿಗೆ ಒಳಗಾಗಿ ವಿಕಾಸದ ನಿಯಮವನ್ನು ಮರೆತಾಗ ಮಾನವ ಪ್ರಪಂಚದಲ್ಲಿ ಅಲ್ಲೋಲಕಲ್ಲೋಲಗಳು ಉಂಟಾಗುತ್ತವೆ. ಮಾನವನ ಇಂತಹ ದುಷ್ಟವರ್ತನೆಗೆ, ಅವನು ತಾನು ಬ್ರಹ್ಮನ ಪ್ರತಿರೂಪ ಎಂಬುದನ್ನು ಮರೆತಿರುವುದೇ ಕಾರಣವಾಗಿದೆ.
ಹಾಗಾದರೆ ಮಾನವನು ತನ್ನ ದಿವ್ಯತ್ವವನ್ನು ಮರೆಯಲು ಕಾರಣವೇನು? ಅದಕ್ಕೆ ಅವನ ಮನಸ್ಸೇ ಕಾರಣ. ಸಂಕಲ್ಪ-ವಿಕಲ್ಪಗಳಿಂದ ಕೂಡಿರುವ ಮನಸ್ಸಿನ ಇತರ ಅಂಶಗಳೆಂದರೆ ಚಿತ್ತ, ಬುದ್ಧಿ, ಹಾಗೂ ಅಹಂಕಾರಗಳು. ಚಿತ್ತ ಸ್ಮರಣಶಕ್ತಿಗೆ ಕಾರಣ; ಬುದ್ಧಿ ವಿವೇಚನಾಶಕ್ತಿಗೆ ಮೂಲ; ಅಹಂಕಾರ ದೇಹಾತ್ಮಬುದ್ಧಿಯ ನೆಲೆ. ಮನಸ್ಸಿನಿಂದ ಉದ್ಭವವಾದ ದೇಹಾತ್ಮಬುದ್ಧಿ ಮಾನವನಲ್ಲಿ ತಾನು ಬ್ರಹ್ಮನೇ ಎಂಬ ಸತ್ಯವನ್ನು ಮರೆಮಾಚುತ್ತದೆ. ಇದನ್ನೇ ಅಜ್ಞಾನವೆಂದು ಹೇಳುತ್ತಾರೆ. ಇದನ್ನು ತೈತ್ತಿರೀಯ ಉಪನಿಷತ್ತು ಮಾನವನ ವ್ಯಕ್ತಿತ್ವದಲ್ಲಿರುವ ‘ಮನೋಮಯ ಕೋಶ’ದ ಪ್ರಭಾವವೆಂದು ಹೇಳುತ್ತದೆ. ಮನೋಮಯ ಕೋಶದಿಂದ ಆವೃತನಾದ ಮಾನವನಲ್ಲಿ, ತಾನು ಬ್ರಹ್ಮನೇ ಎಂಬ ಸತ್ಯ ವಿಸ್ಮರಣೆಯಾಗುತ್ತದೆ. ಆದ್ದರಿಂದ ಅವನು ಬ್ರಹ್ಮನಂತೆ ವರ್ತಿಸುವುದಿಲ್ಲ. ಯಾವ ರೀತಿಯಲ್ಲಿ ಒಂದು ವಸ್ತುವನ್ನು ಬಟ್ಟೆಯಿಂದ ಮುಚ್ಚಿದಾಗ, ಅದು ನಮಗೆ ಕಾಣುವುದಿಲ್ಲವೋ, ಅದೇ ರೀತಿಯಲ್ಲಿ ಮನಸ್ಸು ಮಾನವನಿಗೆ ಬ್ರಹ್ಮದರ್ಶನವಾಗದಂತೆ ಮಾಡುತ್ತದೆ.
ಇಂತಹ ಅಜ್ಞಾನವನ್ನು ಮಾನವನು ತೊಡೆದುಹಾಕಿ, ತಾನು ಬ್ರಹ್ಮನ ಪ್ರತಿರೂಪವೇ ಎಂಬ ಸತ್ಯವನ್ನು ದರ್ಶಿಸಲು ಸಾಧ್ಯವಿದೆಯೇ? ಸನಾತನ ಧರ್ಮ ಇದು ಸಾಧ್ಯ ಎಂದು ಹೇಳಿ ಅದನ್ನು ಸಾಧಿಸುವುದು ಹೇಗೆ ಎಂಬುದರ ಬಗ್ಗೆ ಮಾರ್ಗದರ್ಶನ ನೀಡುತ್ತದೆ. ಮಾನವನ ಅಜ್ಞಾನಕ್ಕೆ ಮೂಲ ಕಾರಣ ಅವನ ಮನಸ್ಸೇ ಎಂಬುದನ್ನು ತಿಳಿದುಕೊಂಡಿದ್ದೇವೆ. ಮನಸ್ಸು ಒಂದು ವಸ್ತ್ರವಿದ್ದಂತೆ. ವಸ್ತ್ರವು ಹೇಗೆ ದಾರಗಳಿಂದ ಮಾಡಲ್ಪಟ್ಟಿದೆಯೋ, ಅದೇ ರೀತಿಯಲ್ಲಿ ಮನಸ್ಸು ಯೋಚನೆಗಳಿಂದ (ಸಂಕಲ್ಪ-ವಿಕಲ್ಪಗಳಿಂದ) ಮಾಡಲ್ಪಟ್ಟಿದೆ. ವಸ್ತ್ರದಿಂದ ಒಂದೊಂದೇ ದಾರವನ್ನು ತೆಗೆದು ಹಾಕಿದಾಗ ಕೊನೆಗೆ ವಸ್ತ್ರ ಮಾಯವಾಗುತ್ತದೆ. ಅದೇ ರೀತಿಯಲ್ಲಿ ಮನಸ್ಸಿನಿಂದ ಒಂದೊಂದೇ ಯೋಚನೆಗಳನ್ನು ತೆಗೆದುಹಾಕಿದಾಗ ಮನಸ್ಸೂ ಮಾಯವಾಗುತ್ತದೆ. ಇದನ್ನೇ ‘ಮನೋನಾಶ’ವೆಂದು ಕರೆಯುತ್ತಾರೆ. ಮನೋನಾಶವಾದ ಕೂಡಲೇ ಮಾನವನು ತಾನು ಬ್ರಹ್ಮನೇ ಎಂಬುದಾಗಿ ತಿಳಿದುಕೊಂಡು ಅಲ್ಲಿಗೆ ಅವನ ಅಜ್ಞಾನದ ಅಂತ್ಯವಾಗುತ್ತದೆ; ಅವನಿಗೆ ಸತ್ಯದರ್ಶನವಾಗುತ್ತದೆ.
ಮಾನವನ ಯೋಚನೆಗಳಿಗೆ ಆಸೆಗಳೇ ಮೂಲ. ಈ ಆಸೆಗಳು ಸಹವಾಸ ದೋಷದಿಂದ ಹೆಚ್ಚಾಗುತ್ತವೆ. ದುರಾಸೆಗಳಿಂದ ಕೂಡಿದ ದುಷ್ಟಜನರ ಸಹವಾಸದಿಂದ ನಮ್ಮ ಆಸೆಗಳು ಹೆಚ್ಚಾಗುತ್ತವೆ. ಅದೇ ರೀತಿಯಲ್ಲಿ ಆಶಾರಹಿತ ಸಜ್ಜನರ ಸಹವಾಸದಿಂದ ನಮ್ಮ ಆಸೆಗಳು ಕಡಿಮೆಯಾಗುತ್ತವೆ, ಇದನ್ನೇ ‘ಸತ್ಸಂಗ’ವೆಂದು ಹೇಳುತ್ತಾರೆ. ಆದ್ದರಿಂದ ಆಧ್ಯಾತ್ಮಿಕ ವಿಕಾಸಕ್ಕೆ ಸಜ್ಜನರ ಸಹವಾಸವೇ ಮೊದಲ ಸೋಪಾನ. ಬ್ರಹ್ಮಜ್ಞಾನವನ್ನು ಪಡೆದ ಸಾಧು-ಸಂತರ, ಮಹಾತ್ಮರ ಸಹವಾಸದಲ್ಲಿ ಪ್ರಜ್ಞಾಪೂರ್ವಕ ಪ್ರಯತ್ನದಿಂದ ಬ್ರಹ್ಮಜ್ಞಾನವನ್ನು ಪಡೆದುಕೊಳ್ಳಬಹುದು.
ಇದಕ್ಕೆ ನಿದರ್ಶನವಾಗಿ ಒಂದು ಕಥೆಯಿದೆ. ತುಂಬು ಗರ್ಭಿಣಿಯಾದ ಒಂದು ಸಿಂಹಿಣಿ ಒಮ್ಮೆ ಕುರಿಗಳನ್ನು ಬೇಟೆಯಾಡುತ್ತಿತ್ತು. ಆ ಸಂದರ್ಭದಲ್ಲಿ ಅದು ಒಂದು ಮರಿಗೆ ಜನ್ಮವಿತ್ತು, ಅತಿ ಆಯಾಸದಿಂದ ಅಲ್ಲೇ ಪ್ರಾಣ ಬಿಟ್ಟಿತು. ಈ ಸಿಂಹದ ಮರಿ ಕುರಿಗಳ ಮಂದೆಯನ್ನು ಸೇರಿಕೊಂಡಿತು. ಕುರಿಗಳೇ ಅದರ ಲಾಲನೆ-ಪಾಲನೆ ಮಾಡಿದವು. ಕುರಿಗಳ ಸಹವಾಸದಲ್ಲೇ ಬೆಳೆದ ಸಿಂಹದ ಮರಿ ತಾನೂ ಒಂದು ಕುರಿಯ ಮರಿಯಾಗಿ ಭಾವಿಸಿಕೊಂಡು ಕುರಿಯಂತೆಯೇ ವರ್ತಿಸುತ್ತಿತ್ತು. ಒಂದು ದಿನ ಈ ಕುರಿಗಳ ಮಂದೆ ಅರಣ್ಯವನ್ನು ಹೊಕ್ಕಾಗ, ಅಲ್ಲಿ ಒಂದು ಸಿಂಹ ಪ್ರತ್ಯಕ್ಷವಾಯಿತು. ಸಿಂಹವನ್ನು ಕಂಡ ಕೂಡಲೇ ಕುರಿಗಳೆಲ್ಲವೂ ಚೆಲ್ಲಾಪಿಲ್ಲಿಯಾಗಿ ಓಡಿದವು. ಕುರಿಗಳ ಜೊತೆಯಲ್ಲಿ ಓಡುತ್ತಿದ್ದ ಸಿಂಹದ ಮರಿಯನ್ನು ಕಂಡು ಆ ಸಿಂಹಕ್ಕೆ ತುಂಬ ಆಶ್ಚರ್ಯವಾಯಿತು. ಸಿಂಹ ಅದನ್ನು ಹಿಡಿದುಕೊಂಡು, ‘ನೀನೇಕೆ ಕುರಿಗಳ ಜೊತೆ ಇದ್ದೀಯ?’ ಎಂದು ಕೇಳಿತು. ಆಗ ಅಜ್ಞಾನದಿಂದ ಆವೃತವಾದ ಸಿಂಹದ ಮರಿ, ‘ನಾನೂ ಕುರಿಯೇ. ಆದ್ದರಿಂದ ಕುರಿಗಳ ಜೊತೆಯಿದ್ದೇನೆ’ ಎಂದು ಹೇಳಿತು. ಆ ಸಿಂಹಕ್ಕೆ ಅದರ ಮೇಲೆ ಕರುಣೆಯುಂಟಾಯಿತು. ಅದನ್ನು ಸಮೀಪದಲ್ಲಿದ್ದ ಒಂದು ಕೊಳದ ಬಳಿಗೆ ಕರೆದುಕೊಂಡು ಹೋಗಿ, ನೀರಿನಲ್ಲಿ ಅದರ ಪ್ರತಿಬಿಂಬವನ್ನು ತೋರಿಸಿ ಒಮ್ಮೆ ಗರ್ಜಿಸಿತು. ಆಗ ಸಿಂಹದ ಮರಿ ತಾನೂ ಸಿಂಹವೇ ಎಂಬುದನ್ನು ಅರಿತು, ಗರ್ಜನೆಯನ್ನು ಮಾಡಿತು. ತನ್ನ ಜನ್ಮದ ಕ್ಷಣದಿಂದಲೇ ಕುರಿಗಳ ಜೊತೆಯಲ್ಲೇ ಬೆಳೆದ ಸಿಂಹದ ಮರಿ ತಾನೂ ಕೂಡ ಒಂದು ಕುರಿಯೇ ಎಂಬ ಅಜ್ಞಾನಕ್ಕೆ ಗುರಿಯಾಯಿತು. ಆದರೆ ಒಂದು ದಿನ ಅದು ದೊಡ್ಡ ಸಿಂಹವನ್ನು ನೋಡಿ ಅದರ ಸಹಾಯದಿಂದ ತಾನೂ ಕೂಡ ಸಿಂಹವೇ ಎಂಬ ಜ್ಞಾನವನ್ನು ಪಡೆಯಿತು. ಇದೇ ರೀತಿಯಲ್ಲಿ ಮಾನವನು ಅಜ್ಞಾನಿಗಳ ಸಹವಾಸದಲ್ಲಿ ಜೀವಿಸುತ್ತಿದ್ದರೆ, ಎಂದೂ ತಾನು ಬ್ರಹ್ಮನೇ ಎಂಬ ಜ್ಞಾನವನ್ನು ಪಡೆದುಕೊಂಡು ಅಜ್ಞಾನವನ್ನು ತೊಡೆದುಕೊಳ್ಳಲು ಸಾಧ್ಯವಿಲ್ಲ. ಇಂತಹ ಅಜ್ಞಾನದಿಂದ ಮಾನವನನ್ನು, ಒಬ್ಬ ಬ್ರಹ್ಮಜ್ಞಾನಿ ಮಾತ್ರ ಪಾರು ಮಾಡಬಹುದು. ಇಂತಹ ಬ್ರಹ್ಮಜ್ಞಾನಿಗಳು ಮಾನವ ಜನಾಂಗವನ್ನು ದೈವತ್ವದ ಕಡೆಗೆ ಕೊಂಡೊಯ್ಯುತ್ತಾರೆ. ಮಾನವನನ್ನು ಆವರಿಸಿರುವ ಅಜ್ಞಾನಕ್ಕೆ ‘ಮಾಯೆ’ಯೇ ಕಾರಣವೆಂದು ವೇದೋಪನಿಷತ್ತುಗಳು ಹೇಳುತ್ತವೆ. ಮಾಯೆಯೆಂದರೆ ‘ಯಾವುದು ಇಲ್ಲವೋ ಅದು’ ಎಂದು ಅರ್ಥ. ಬ್ರಹ್ಮಜ್ಞಾನಿಗಳ ಮಾರ್ಗದರ್ಶನದಲ್ಲಿ ಮಾನವನು ಇಂತಹ ಅಜ್ಞಾನವನ್ನು ಕಳೆದುಕೊಂಡಾಗ, ಅದನ್ನೇ ಮೋಕ್ಷವೆಂದು ಹೇಳುತ್ತಾರೆ. ಮೋಕ್ಷವೆಂದರೆ ಮೋಹಕ್ಷಯವೇ. ಆಸೆ ಹಾಗೂ ಮೋಹಗಳ ಪಾಶಗಳಿಂದ ಬಿಡುಗಡೆಯಾಗುವುದೇ ಮೋಕ್ಷ. ಇದನ್ನೇ ಮುಕ್ತಿಯೆಂದೂ ಕರೆಯುತ್ತಾರೆ.
ಅಜ್ಞಾನವನ್ನು ಅಂತ್ಯಗೊಳಿಸಲು ಬೇಕಾದ ಜ್ಞಾನಿಗಳ ಸಂಗವು ಎಲ್ಲರಿಗೂ ಲಭ್ಯವಾಗುತ್ತದೆಯೇ? ಜ್ಞಾನಿಗಳ ಸಂಗವನ್ನು ಪಡೆದ ಎಲ್ಲರೂ ಜ್ಞಾನಿಗಳಾಗಿ ಮೋಕ್ಷವನ್ನು ಪಡೆಯಬಹುದೇ? ಕಥೆಯಲ್ಲಿನ ಸಿಂಹದ ಮರಿಯ ಅದೃಷ್ಟವು ಎಲ್ಲರಿಗೂ ಸಿಗಬಹುದೇ? ಅಥವಾ ಈ ದಿಶೆಯಲ್ಲಿ ನಾವು ಮಾಡಬೇಕಾದ ಪ್ರಯತ್ನವೇನಾದರೂ ಇದೆಯೇ? ಇದನ್ನು ಈ ಅಂಕಣದ ಮುಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ.
(ಲೇಖಕರು ವಿದ್ವಾಂಸರು, ಸಂಸ್ಕೃತಿ ಚಿಂತಕರು)