

‘ಕೃಣ್ವಂತು ವಿಶ್ವಂ ಆರ್ಯಮ್- ಇದು ನಮ್ಮ ಪೂರ್ವಜರ ಉದ್ಘೋಷ. ಇದರ ಅರ್ಥ: ‘ವಿಶ್ವದ ಸರ್ವರೂ ಆರ್ಯರಾಗಲಿ’. ಇಲ್ಲಿ ‘ಆರ್ಯ’ರೆಂದರೆ ಜೀವನದ ಅತ್ಯುನ್ನತ ಮೌಲ್ಯಗಳನ್ನು ಆಚರಿಸುವವರು. ಇಂತಹ ಮೌಲ್ಯಗಳು ಸನಾತನ ಧರ್ಮದ ಸಾರಸರ್ವಸ್ವ.
ಈಗ ನಾನು ಮಧ್ಯಪ್ರಾಚ್ಯ ದೇಶಗಳಿಂದ ಪ್ರಾರಂಭಿಸಿ, ವಿಶ್ವ ಪರ್ಯಟನೆಯನ್ನು ಮಾಡುತ್ತಿದ್ದೇನೆ. ಈಗಾಗಲೇ ಆಫ್ರಿಕಾ ಹಾಗೂ ಯುರೋಪ್ ಖಂಡಗಳ ಕೆಲವು ದೇಶಗಳ ಪ್ರವಾಸವು ಮುಗಿದಿದೆ. ಈ ದೇಶಗಳಲ್ಲಿ ಹಲವು ಜನರು ಸನಾತನ ಧರ್ಮದಲ್ಲಿ ನಂಬಿಕೆಯನ್ನಿಟ್ಟುಕೊಂಡಿದ್ದಾರೆ. ಅವರ ಸಾಮಾಜಿಕ, ಆರ್ಥಿಕ ಅಥವಾ ಧಾರ್ವಿುಕ ಹಿನ್ನೆಲೆಗಳು ಭಿನ್ನ-ಭಿನ್ನವಾಗಿದ್ದರೂ ಅವರಲ್ಲಿರುವ ಸನಾತನ ಧರ್ಮದ ಬಗೆಗಿನ ಶ್ರದ್ಧೆಯನ್ನು ನೋಡಿ ನನ್ನ ಹೃದಯವು ಆನಂದದಿಂದ ತುಂಬಿದೆ.
ಸನಾತನ ಧರ್ಮದ ಮೂಲಭೂತ ತತ್ವಗಳು ಅವರ ಜೀವನಕ್ಕೆ ಒಂದು ಸ್ಪಷ್ಟ ಗುರಿಯನ್ನು ನೀಡಿವೆ. ದೇಶಗಳ ಹಾಗೂ ಖಂಡಗಳ ಭೌಗೋಳಿಕ ಎಲ್ಲೆಗಳನ್ನು ಮೀರಿ ಸನಾತನ ಧರ್ಮವು ಮಾನವಿಯತೆಯ ಮೇಲೆ ಪ್ರಭಾವವನ್ನು ಬೀರುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಅಬುಧಾಬಿಯಲ್ಲಿನ ಸ್ವಾಮಿ ನಾರಾಯಣ ಮಂದಿರವು ಭಾರತದ ಹಿಂದೂ ಧರ್ಮದ ಮತ್ತು ಅರಬ್ ರಾಷ್ಟ್ರಗಳ ಇಸ್ಲಾಂ ಧರ್ಮದ ಸಂಗಮವೆಂಬಂತೆ ತಲೆಯೆತ್ತಿ ನಿಂತಿದೆ. ಅಬುಧಾಬಿಯ ಮರಳು ದಿಬ್ಬಗಳ ನಡುವೆ ಇದು ಸನಾತನ ಸಂಸ್ಕೃತಿಯ ಒಂದು ‘ಓಯಸಿಸ್’ನಂತೆ ತೋರುತ್ತದೆ. ಇದು ಸರ್ವಧರ್ಮ ಸಮನ್ವಯ ಮತ್ತು ಸಮರಸಗಳಿಗೆ ಒಂದು ಸಂಕೇತ. ‘ವಸುಧೈವ ಕುಟುಂಬಕಂ- ಒಂದು ಜಗತ್ತು ಒಂದು ಕುಟುಂಬ’ ಎಂಬ ಉತ್ಕೃಷ್ಟ ಆದರ್ಶಕ್ಕೆ ಈ ದೇವ ಮಂದಿರವು ಒಂದು ಮಹಾನ್ ದ್ಯೋತಕವಾಗಿದೆ.
ಅಯಂ ನಿಜಃ ಪರೋ ವೇತಿ ಗಣನಾ ಲಘು ಚೇತಸಾಮ್ |ಉದಾರಚರಿತಾನಾಂ ತು ವಸುಧೈವ ಕುಟುಂಬಕಮ್ ||
‘ಇವರು ನನ್ನವರು, ಅವರು ನನ್ನವರಲ್ಲ ಎಂಬ ಭೇದ ಭಾವನೆಯು, ಸಂಕುಚಿತ ಮನಸ್ಕರಲ್ಲಿ ಮಾತ್ರ ತಲೆದೋರುತ್ತದೆ. ವಿಶಾಲ ಹೃದಯವುಳ್ಳವರಿಗೆ ಇಡೀ ಜಗತ್ತು ಒಂದು ಕುಟುಂಬ’. ದಕ್ಷಿಣ ಆಫ್ರಿಕಾ ದೇಶದಲ್ಲಿ ಹಲವು ಕ್ರೖೆಸ್ತ ಮತೀಯರು, ಮಹಮ್ಮದೀಯರು ಮತ್ತು ಅಲ್ಲಿಯ ಪ್ರಾದೇಶಿಕ ಮತಗಳ ಅನುಯಾಯಿಗಳು ಒಟ್ಟಿಗೆ ಸೇರಿ ‘ಸರ್ವೆ ಭವಂತು ಸುಖಿನಃ - ಸರ್ವರೂ ಸುಖಿಗಳಾಗಲಿ’ ಎಂಬ ಸನಾತನ ಧರ್ಮದ ಮೂಲತತ್ವದಿಂದ ಸ್ಪೂರ್ತಿ ಪಡೆದು, ಮಾನವಿಯತೆಯ ಹೃದಯದಲ್ಲಿ ಹೆಚ್ಚು ಹೆಚ್ಚು ಕರುಣೆ ಮತ್ತು ಪರೋಪಕಾರ ಭಾವಗಳು ಜಾಗೃತವಾಗಲೆಂದು ಹಾರೈಸಿದರು. ಈ ಉದ್ದೇಶವನ್ನು ಕಾರ್ಯರೂಪಕ್ಕೆ ತರಲು, ಮೊದಲಿಗೆ ಆಫ್ರಿಕಾದ ಮಕ್ಕಳನ್ನು ಕಾಡುತ್ತಿರುವ ಹಸಿವು ಮತ್ತು ಅಪೌಷ್ಟಿಕತೆಗಳನ್ನು ನೀಗಿಸಲು ಮಾಳವಿ ದೇಶದಲ್ಲಿ ಒಂದು ಪೌಷ್ಟಿಕ ಆಹಾರ ವಿತರಣಾ ಕಾರ್ಯಕ್ರಮವನ್ನು ರೂಪಿಸಲಾಗುತ್ತಿದೆ.
ಓಂ ಸರ್ವೆ ಭವಂತು ಸುಖಿನಃ ಸರ್ವೆ ಸಂತು ನಿರಾಮಯಾಃ |ಸರ್ವೆ ಭದ್ರಾಣಿ ಪಶ್ಯಂತು ಮಾ ಕಶ್ಚಿದ್ ದುಃಖಭಾಗ್ಭವೇತ್ ||ಓಂ ಶಾಂತಿಃ ಶಾಂತಿಃ ಶಾಂತಿಃ ||
‘ವಿಶ್ವದ ಎಲ್ಲ ಜೀವಿಗಳು ಸುಖವಾಗಿರಲಿ. ಯಾರೂ ಅನಾರೋಗ್ಯ ಪೀಡಿತರಾಗದೇ ಇರಲಿ. ಎಲ್ಲರೂ ಎಲ್ಲೆಡೆಯಲ್ಲೂ ಶುಭವನ್ನೇ ಕಾಣುವಂತಾಗಲಿ. ಯಾರೂ ಯಾವುದೇ ದುಃಖವನ್ನು ಅನುಭವಿಸದಂತೆ ಆಗಲಿ. ಓಂ ಶಾಂತಿಃ ಶಾಂತಿಃ ಶಾಂತಿಃ’. ನೈಜೀರಿಯಾ ದೇಶದ ಎನುಗು ಪ್ರಾಂತ್ಯದಲ್ಲಿ ಒಬ್ಬ ಕ್ರೖೆಸ್ತ ಪಾದ್ರಿಯು ನಿರ್ವಿುಸಿದ ಪ್ರಾರ್ಥನಾ ಮಂದಿರದಲ್ಲಿ, ಅಲ್ಲಿನ ಸಂಪೂರ್ಣ ಉಚಿತ ವಿದ್ಯಾಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರು ವೇದಾಧ್ಯಯನವನ್ನೂ ಮಾಡುತ್ತಿದ್ದಾರೆ. ನಾವು ಅಲ್ಲಿಗೆ ಹೋದಾಗ ಮಕ್ಕಳು ನಮ್ಮನ್ನು ಋಗ್ವೇದದ ನಾಸದೀಯ ಸೂಕ್ತ ಘೊಷದೊಂದಿಗೆ ಸ್ವಾಗತಿಸಿದರು. ವಿಶ್ವ ಸೃಷ್ಟಿಯ ಪ್ರಾರಂಭವನ್ನು ವರ್ಣಿಸುವ ಈ ಸೂಕ್ತವು ಋಗ್ವೇದದ 10ನೇ ಮಂಡಲದ 129ನೇ ಸೂಕ್ತವಾಗಿದೆ. ಅಲ್ಲದೆ ಈ ಸೂಕ್ತದಲ್ಲಿ ವಿಶ್ವದ ಮೂಲದಲ್ಲಿರುವ ಪರಮ ಸತ್ಯವನ್ನರಿಯಲು, ಮಾನವನ ಸೀಮಿತ ಬೌದ್ಧಿಕ ಅನ್ವೇಷಣೆಯಿಂದ ಸಾಧ್ಯವಿಲ್ಲವೆಂಬುದನ್ನು ಮನಗಾಣಿಸಲಾಗಿದೆ.
ನಾಸದಾಸೀನ್ನೋ ಸದಾಸೀತ್ತದಾನೀಂ ನಾಸೀದ್ರಜೋ ನೋ ವ್ಯೋಮಾ ಪರೋ ಯತ್ |ಕಿಮಾವರೀವಃ ಕುಹ ಕಸ್ಯ ಶರ್ಮನ್ನಂಭಃ ಕಿಮಾಸೀದ್ಗಹನಂ ಗಭೀರಮ್ ||
‘ಆಗ ಶೂನ್ಯವೂ ಇರಲಿಲ್ಲ ಅಥವಾ ಅಸ್ತಿತ್ವವೂ ಇರಲಿಲ್ಲ. ಆಗ ಗಾಳಿಯೂ ಇರಲಿಲ್ಲ, ಅದರಾಚೆಗೆ ಸ್ವರ್ಗವೂ ಇರಲಿಲ್ಲ. ಅದನ್ನು ಏನು ಆವರಿಸಿತ್ತು? ಎಲ್ಲಿತ್ತು? ನಾವು ಅರಿಯಲಾಗದ ಆ ವಿಶ್ವಮೂಲ ಜಲವು ಆಗ ಯಾರ ವಶದಲ್ಲಿತ್ತು?’
ಈ ಸೂಕ್ತವನ್ನು ಹೋಲುವ ವಿಶ್ವದ ಉಗಮದ ಬಗೆಗಿನ ಉಲ್ಲೇಖವು ಬೈಬಲ್ಲಿನ ಹಳೆಯ ಒಡಂಬಡಿಕೆಯಲ್ಲಿ ಕಾಣುತ್ತದೆ. ಆ ಪ್ರಾರ್ಥನಾ ಮಂದಿರದ ಪೂಜಾ ವೇದಿಕೆಯ ಮೇಲೆ ನಿಂತು ಅಲ್ಲಿ ನೆರೆದಿದ್ದ ಭಕ್ತರಿಗೆ ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಬೈಬಲ್ಲಿನ ಒಂದು ಸಂದೇಶವನ್ನು ಓದಿ ಹೇಳಲು ಅಲ್ಲಿದ್ದ ಪುಸ್ತಕವನ್ನು ತೆರೆದೆ. ಅಲ್ಲಿ ಕಂಡು ಬಂದದ್ದು ಏಸುವು ಯಹೂದಿಗಳ ಪ್ರಾರ್ಥನಾ ಮಂದಿರದಲ್ಲಿ ಭಕ್ತರಿಗೆ ಸೃಷ್ಟಿಕರ್ತನ ಮಹಿಮೆಯನ್ನು ವರ್ಣಿಸುತ್ತಿದ್ದ ವಿಷಯ. ಸಹಜವಾಗಿ ನನ್ನ ಮನದಲ್ಲಿ ಸನಾತನ ಧರ್ಮ ಹಾಗೂ ಕ್ರೖೆಸ್ತ ಧರ್ಮಗಳ ಬೋಧನೆಗಳ ನಡುವೆ ಇರುವ ಸಾಮ್ಯತೆಯು ಮೂಡಿಬಂದಿತು.
ಅಲ್ಲಿಂದ ಮುಂದೆ ನಾವು ಪ್ರಯಾಣ ಬೆಳೆಸಿದ್ದು ಟರ್ಕಿ ದೇಶದ ಇಸ್ತಾನ್ಬುಲ್ ನಗರಕ್ಕೆ. ಆ ನಗರದ ಹೊರವಲಯದಲ್ಲಿ ಇರುವ ನಮ್ಮ ಮಾನವ ಸಂಪನ್ಮೂಲಾಭಿವೃದ್ಧಿ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಟರ್ಕಿಯ ಗಾಯಕರು, ಆಗ ರಂಜಾನ್ ಆಚರಣೆ ಇದ್ದುದರಿಂದ, ಜಗದೊಡೆಯ ಅಲ್ಲಾನನ್ನು ಸ್ತುತಿಸುವ ಗೀತೆಗಳನ್ನು ಹಾಡಿದರು. ಇಡೀ ವಿಶ್ವವನ್ನು ಸೃಷ್ಟಿಸಿ ಪಾಲಿಸುತ್ತಿರುವ ಭಗವಂತನು ಒಬ್ಬನೇ ಎಂಬುದು ಆ ಗೀತೆಗಳ ಸಾರವಾಗಿತ್ತು. ‘ಯಾ ಅಲ್ಲಾಹು ಇಲ್ಲಲ್ಲಾಹು’ ಉಚ್ಚಾರಣೆಯನ್ನು ಕೇಳಿದಾಗ ನನ್ನ ಸ್ಮರಣೆಯಲ್ಲಿ ಹೊಳೆದದ್ದು: ಛಾಂದೋಗ್ಯ ಉಪನಿಷತ್ತಿನ ‘ಏಕೋಹಂ ಬಹುಸ್ಯಾಂ’ ಎಂಬ ಉದ್ಘೋಷ. ಇದರರ್ಥ ‘ನಾನೊಬ್ಬನೇ ಅನೇಕವಾಗಿ’ ಪರಿವರ್ತಿತಗೊಂಡೆ.
ನಮ್ಮ ಮುಂದಿನ ತಾಣ ಜಗತ್ತಿನ ಒಂದು ಮಹಾನ್ ಪ್ರಾಚೀನ ಸಂಸ್ಕೃತಿಯ ಉಗಮ ಸ್ಥಳವಾದ ಗ್ರೀಸ್ ದೇಶ. ಸಾಕ್ರಟಿಸ್, ಪ್ಲೇಟೋ ಮತ್ತು ಅರಿಸ್ಟಾಟಲ್ರಂಥ ತತ್ವಜ್ಞಾನಿಗಳಿಂದ ರೂಪಿತವಾದ ಆ ಸಂಸ್ಕೃತಿಯ ಹಲವು ಅವಶೇಷಗಳನ್ನು ಇಂದೂ ಅಥೆನ್ಸ್ ನಗರದ ಹೊರವಲಯದಲ್ಲಿ ನಾವು ಕಾಣಬಹುದು. ಅಲ್ಲಿ ನಡೆದ ಸಮಾವೇಶದ ಮುಖ್ಯ ವಿಷಯವೆಂದರೆ, ‘ಪರೋಪಕಾರ ಮತ್ತು ಸೇವೆಗಳು ಆಧ್ಯಾತ್ಮಿಕತೆಯೆಂಬ ನಾಣ್ಯದ ಎರಡು ಮುಖಗಳು’ ಎಂಬುದು. ಇದನ್ನು ವ್ಯವಹಾರದಲ್ಲಿ ಆಚರಿಸಿ ಗ್ರೀಸ್ ಮತ್ತು ಸುತ್ತಮುತ್ತಲಿನ ದೇಶಗಳಲ್ಲಿ ವಿಶೇಷ ಜನಸೇವೆಯನ್ನು ಮಾಡುತ್ತಿರುವ ಸೇವಾ ಸಂಸ್ಥೆಗಳ ಪ್ರತಿನಿಧಿಗಳನ್ನು ಸಭೆಯಲ್ಲಿ ಪುರಸ್ಕರಿಸಲಾಯಿತು. ಪರೋಪಕಾರ ಮತ್ತು ಸೇವೆಗಳಿಗೆ ಮೂಲವಾದ ಕರುಣಾಭಾವವನ್ನು ಅರಿಸ್ಟಾಟಲ್ ಹೀಗೆ ವರ್ಣಿಸಿದ್ದಾನೆ: ‘ಅದು ಯಾವುದೇ ಪ್ರತಿಫಲದ ಅಪೇಕ್ಷೆಯಿಲ್ಲದೆ ಕಷ್ಟಗಳಲ್ಲಿ ಸಿಲುಕಿರುವ ಸಹಜೀವಿಗಳಿಗೆ ಸಹಾಯ ಮಾಡಬೇಕೆಂಬ ಒಂದು ನಿಸ್ವಾರ್ಥ ಭಾವ.
ಇಲ್ಲಿ ಸಹಾಯ ಪಡೆಯುವವನು ಪ್ರಮುಖನೇ ಹೊರತು ಸಹಾಯ ಮಾಡುವವನಲ್ಲ. ಸಹಾಯ ಮಾಡುವವನು ಧನ್ಯತೆಯನ್ನು ಅನುಭವಿಸುವುದು ಇಂತಹ ಕರುಣಾಭಾವದಲ್ಲಿ’. ಭಗವಾನ್ ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಉಪದೇಶಿಸಿರುವುದೂ ಇದೇ ಅಲ್ಲವೇ? ಗೀತೆಯ 5ನೇ ಅಧ್ಯಾಯದ 25ನೇ ಶ್ಲೋಕದಲ್ಲಿ ಜ್ಞಾನಿಗಳನ್ನು ‘ಸರ್ವ ಭೂತ ಹಿತೇ ರತಾಃ’ ಎಂದು ಕೃಷ್ಣನು ವರ್ಣಿಸಿದ್ದಾನೆ. ಎಂದರೆ, ‘ಅವರು ಸರ್ವ ಜೀವಿಗಳ ಹಿತಸಾಧನೆಯಲ್ಲಿ ಸದಾ ತೊಡಗಿರುತ್ತಾರೆ’. ಇಟಲಿಯ ರೋಮ್ ಬಳಿಯ ವ್ಯಾಟಿಕನ್ ನಗರದಲ್ಲಿ ಕ್ರೖೆಸ್ತ ಧರ್ಮದ ಕೇಂದ್ರವಾದ ಅಲ್ಲಿಯ ಸಂತ ಪೀಟರಿನ ಹೆಸರಿನಲ್ಲಿ ನಿರ್ವಿುಸಲಾಗಿರುವ ಸಾರ್ವಜನಿಕ ಪ್ರಾರ್ಥನಾ ಮಂದಿರವೇ ಆಗಲಿ ಅಥವಾ ಮಹಾನ್ ಸಂತ ಫ್ರಾನ್ಸಿಸ್ನ ಜನ್ಮಸ್ಥಳವಾದ ಅಸ್ಸಿಸಿ ನಗರದಲ್ಲಿ ತಲೆಯೆತ್ತಿ ನಿಂತಿರುವ ಹಲವು ಪ್ರಾರ್ಥನಾ ಮಂದಿರಗಳಾಗಲಿ, ಸಾರುವ ಮುಖ್ಯ ಸಂದೇಶವೆಂದರೆ ಭಗವಂತನಿಗಾಗಿ ನಾವು ಮಾಡುವ ತ್ಯಾಗವೇ ಆಗಿದೆ.
ಈ ತ್ಯಾಗದ ಪ್ರತ್ಯಕ್ಷ ರೂಪವೇ ನಾವು ದೀನ-ದುರ್ಬಲರಿಗೆ ಅರ್ಪಿಸುವ ಸೇವೆ. ಇದುವೇ ನಾವು ಭಗವಂತನಿಗೆ ಸಲ್ಲಿಸುವ ಪೂಜೆಯೆಂದು ಸಂತ ಫ್ರಾನ್ಸಿಸ್ ತನ್ನ ಅನುಯಾಯಿಗಳಿಗೆ ಕರೆಕೊಟ್ಟಿದ್ದ. ಅದರಂತೆಯೇ ಅವನ ಹೆಜ್ಜೆಗಳಲ್ಲೇ ನಡೆದ ಅನೇಕ ಸ್ತ್ರೀ-ಪುರುಷರು ತಮ್ಮ ಜೀವನಗಳಲ್ಲಿ ಇದನ್ನು ಎತ್ತಿ ತೋರಿದ್ದಾರೆ. ಆದ್ದರಿಂದಲೇ ಅವರು ಇಂದೂ ಅಮರರಾಗಿದ್ದಾರೆ. ಸನಾತನ ಧರ್ಮದ ತೈತ್ತಿರೀಯ ಉಪನಿಷತ್ತು ‘ತ್ಯಾಗೇನೈಕೇ ಅಮೃತತ್ವಮಾನಶುಃ’ ಎಂದು ಸಾರಿದೆಯಲ್ಲವೇ? ತ್ಯಾಗದಿಂದ ಮಾತ್ರ ನಾವು ಅಮೃತತ್ವವನ್ನು ಪಡೆಯಬಹುದು. ಅಂತಹ ತ್ಯಾಗದಿಂದ ಮಾತ್ರ ಭಗವಂತನು ಸುಪ್ರೀತನಾಗುತ್ತಾನೆ. ‘ನ ಕರ್ಮಣಾ ನ ಪ್ರಜಯಾ ಧನೇನ ತ್ಯಾಗೇನೈಕೇ ಅಮೃತತ್ವ ಮಾನಶುಃ’ ಎಂಬುದು ಉಪನಿಷತ್ತುಗಳ ಉಪದೇಶ. ‘ಕೇವಲ ಕರ್ವಚರಣೆಯಿಂದಾಗಲೀ, ಪ್ರಜೋತ್ಪತ್ತಿಯಿಂದಾಗಲೀ ಅಥವಾ ಧನಾರ್ಜನೆಯಿಂದಾಗಲೀ ನಮಗೆ ಅಮೃತತ್ವವು ಲಭಿಸುವುದಿಲ್ಲ. ತ್ಯಾಗದಿಂದ ಮಾತ್ರ ಅಮೃತತ್ವವು ಲಭ್ಯ’.
ನಮ್ಮ ಪರ್ಯಟನೆಯಲ್ಲಿ ಮುಂದಿನ ತಾಣ ಕ್ರೊಯೇಷಿಯಾ. ಅಲ್ಲಿಯ ಹಲವು ಜನರು, ತಮ್ಮ ಪೂರ್ವಜರು ವೇದಕಾಲದ ನದಿ, ಸರಸ್ವತಿಯ ದಡದಲ್ಲಿ ನೆಲೆಯಾಗಿದ್ದ ಪ್ರಾಚೀನ ಭಾರತೀಯ ಸಂಸ್ಕೃತಿಯಿಂದ ತಮ್ಮ ಸಂಸ್ಕೃತಿಯನ್ನು ರೂಪಿಸಿದರೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಅಲ್ಲದೆ ತಾವು ಸರಸ್ವತಿಯೆಂಬ ಹೆಸರಿನ ಅಪಭ್ರಂಶವಾದ ‘ಹ್ರಾವತಿ’ ಜನಾಂಗದವರೆಂದೂ ಕರೆದುಕೊಳ್ಳುತ್ತಾರೆ. ಅಲ್ಲಿ ನಡೆದ ಸಮಾವೇಶದಲ್ಲಿ ಕ್ರೊಯೇಷಿಯನ್ನರು ‘ದೇವಿ ಮಹಾತ್ಮ್ಯ’ದ ಬ್ರಹ್ಮಸ್ತುತಿಯ ಮಂತ್ರಗಳನ್ನು ವಿಧ್ಯುಕ್ತವಾಗಿ ಪಠಿಸಿದರು. ಅಸುರರಾದ ಮಧು ಮತ್ತು ಕೈಟಭರನ್ನು ಸಂಹರಿಸಿದ ರೌದ್ರಾವತಾರರೂಪಿ ಕಾಳಿಯನ್ನು ಈ ಮಂತ್ರಗಳಲ್ಲಿ ಸ್ತುತಿಸಿದ್ದಾರೆ. ಇದು ನಮ್ಮ ಅಂತರಂಗ ಶತ್ರುಗಳಾದ ಕಾಮ-ಕ್ರೋಧಗಳ ಸಂಹಾರಕ್ಕೆ ಒಂದು ಸಂಕೇತ. ಅವರ ಮಂತ್ರೋಚ್ಚಾರಣೆಯಲ್ಲಿ ಭಾರತೀಯ ಸಂಸ್ಕೃತಿ ಮತ್ತು ಮೌಲ್ಯಗಳ ಬಗ್ಗೆ ಅವರ ಶ್ರದ್ಧೆಯು ಎದ್ದು ಕಾಣುತ್ತಿತ್ತು.
ಕ್ರೊಯೇಷಿಯಾದಿಂದ ನಾವು ಜರ್ಮನಿ ದೇಶವನ್ನು ತಲುಪಿದೆವು. ಅಲ್ಲಿಯ ಹಲವು ಜನರ ಮನದಲ್ಲಿ, ತಾವು ಎರಡು ಮಹಾಘೊರ ಜಾಗತಿಕ ಯುದ್ಧಗಳಿಗೆ ಕಾರಣರಾದೆವೆಂಬ ಭಾವವು ಇನ್ನೂ ಉಳಿದುಕೊಂಡಿದೆ. ಅಲ್ಲಿ ನಡೆದ ಸಭೆಯಲ್ಲಿ ಅವರು ನಮ್ಮ ಉಪನಿಷತ್ತುಗಳ ಶಾಂತಿ ಮಂತ್ರವನ್ನು ಶ್ರದ್ಧೆಯಿಂದ ಪಠಿಸಿದರು:
ಓಂ ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ಪೂರ್ಣಮುದಚ್ಯತೇ |ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಸಿಷ್ಯತೇ ||ಓಂ ಶಾಂತಿಃ ಶಾಂತಿಃ ಶಾಂತಿಃ ||
‘ಇದೂ ಪೂರ್ಣ, ಅದೂ ಪೂರ್ಣವೇ. ‘ಇದು’ ಎಂದರೆ ನಮ್ಮ ಕಣ್ಣಿಗೆ ಕಾಣುವ ಜಗತ್ತು. ‘ಅದು’ ಎಂದರೆ ಈ ಜಗತ್ತಿಗೆ ಕಾರಣವಾಗಿರುವ ಅವ್ಯಕ್ತ ದಿವ್ಯ ಚೈತನ್ಯ. ಪೂರ್ಣತೆಯ ಪರಾಕಾಷ್ಠೆಯಾದ ದಿವ್ಯ ಚೈತನ್ಯದಿಂದ ಉಗಮವಾಗಿರುವ ಈ ಜಗತ್ತೂ ಪೂರ್ಣತೆಯಿಂದ ತುಂಬಿ ತುಳುಕುತ್ತಿದೆ. ಓಂ ಶಾಂತಿಃ ಶಾಂತಿಃ ಶಾಂತಿಃ’. ಜರ್ಮನಿಯಲ್ಲಿ ನಮ್ಮ ವಾಸಸ್ಥಾನವಾಗಿದ್ದುದು ಪುರಾತನ ಐತಿಹಾಸಿಕ ನಗರವಾದ ಅಗ್ಸ್ಬರ್ಗ್. ಈ ನಗರದಲ್ಲಿ ಐನೂರು ವರ್ಷಗಳ ಹಿಂದೆ ಜಕೊಬ್ ಫೂಗರ್ ಎಂಬ ದಯಾಳುವಾದ ಶ್ರೀಮಂತ ವ್ಯಕ್ತಿಯು ಯುರೋಪ್ ಖಂಡದ ಮೊಟ್ಟಮೊದಲನೆಯ ಸಾಮಾಜಿಕ ಗೃಹಸಮೂಹವನ್ನು ಸ್ಥಾಪಿಸಿದ್ದನು. ಅಲ್ಲಿ ಅವನು ನೂರಾರು ಬಡಜನರಿಗೆ ವಸತಿ ಮತ್ತು ಊಟೋಪಚಾರಗಳ ವ್ಯವಸ್ಥೆಯನ್ನು ಮಾಡಿದ್ದನು. ಅಲ್ಲಿ ವಾಸಿಸುತ್ತಿದ್ದ ವ್ಯಕ್ತಿಗಳು ತಾವು ವರ್ಷಕ್ಕೊಮ್ಮೆ ಕೊಡಬೇಕಾದ ಶುಲ್ಕವು ಇಂದಿನ ನೂರು ರೂಪಾಯಿಗಳಿಗಿಂತ ಕಡಿಮೆಯಾಗಿದ್ದಿತು!
ಈ ವಿಷಯವನ್ನು ನಾನು ಅಲ್ಲಿಯ ಜನರಿಂದ ತಿಳಿದುಕೊಂಡಾಗ ನನ್ನ ಮನದಲ್ಲಿ ಸ್ಮರಣೆಗೆ ಬಂದದ್ದು ‘ಯತ್ರ ವಿಶ್ವಂ ಭವತಿ ಏಕ ನೀಡಮ್ ಎಂಬ ಸನಾತನ ಧರ್ಮದ ಆದರ್ಶ. ಅದರ ಅರ್ಥ- ‘ಎಲ್ಲಿ ಇಡೀ ವಿಶ್ವವು ಸರ್ವಜೀವಿಗಳಿಗೆ ಒಂದೇ ಗೂಡಾಗಿರುವ ವಿಶಾಲ ಮನೋಭಾವನೆ’. ನಮ್ಮ ಭಾರತ ದೇಶವು ಇತಿಹಾಸ ಕಾಲದಿಂದಲೂ ಹೊರಗಿನ ಹಲವು ದೇಶಗಳಿಂದ ಬಂದ ಹಲವು ಧರ್ಮ-ಸಂಸ್ಕೃತಿಗಳಿಗೆ ಸೇರಿದ್ದ ಜನರನ್ನು ಪ್ರೀತಿಯಿಂದ ಸ್ವಾಗತಿಸಿ ಆಶ್ರಯವನ್ನು ನೀಡಿರುವುದು ನಮಗೆ ತಿಳಿದೇ ಇದೆ.
ನಮ್ಮ ವಿಶ್ವ ಪರ್ಯಟನೆಯು ಇನ್ನೂ ಒಂದು ತಿಂಗಳು ಕಾಲ ಹೆಚ್ಚು ನಡೆಯಲಿದ್ದು, ತದನಂತರ ಭಾರತಕ್ಕೆ ಹಿಂತಿರುಗುತ್ತೇವೆ. ಈ ಪರ್ಯಟನೆ ಮಾಡುತ್ತಿದ್ದಂತೆ, ಇಂದು ನಮ್ಮ ಜಗತ್ತು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೆ ಪರಿಹಾರವನ್ನು ನೀಡಬಲ್ಲ ತತ್ವ-ಮೌಲ್ಯಗಳನ್ನು ಹೊಂದಿರುವುದು ಸನಾತನ ಧರ್ಮವು ಮಾತ್ರವೆಂಬ ವಿಷಯವು ನಮ್ಮ ಅನುಭವಕ್ಕೆ ಬರುತ್ತಿದೆ. ಇಂತಹ ಧರ್ಮಕ್ಕೆ ವಾರಸುದಾರರಾದ ಭಾರತೀಯರಾದ ನಮ್ಮ ಮೇಲೆ ಬಹಳ ದೊಡ್ಡ ಜವಾಬ್ದಾರಿಯಿದೆ. ಈ ಧರ್ಮವನ್ನು ನಮ್ಮ ಜೀವನಗಳಲ್ಲಿ ಆಚರಿಸಿ ಜಗತ್ತಿನ ಜನರಿಗೆಲ್ಲ ಅದನ್ನು ಬೋಧಿಸಬೇಕಾದ ಕಾಲವು ಸನ್ನಿಹಿತವಾಗಿದೆ. ಇಂತಹ ಧರ್ವಮೃತವನ್ನು ಉಂಡು ಸುಖ-ಶಾಂತಿಗಳನ್ನು ಪಡೆಯಬೇಕೆಂಬ ತೃಷೆಯು ವಿದೇಶೀಯರಲ್ಲಿ ಹೆಚ್ಚೆಚ್ಚು ವ್ಯಕ್ತಗೊಳ್ಳುತ್ತಿದೆ.
ನಮ್ಮ ಮುಂದಿನ ಪಯಣ ಬ್ರಿಟನ್ ದೇಶವೂ ಸೇರಿದಂತೆ ಯುರೋಪಿನ ಕೆಲವು ರಾಷ್ಟ್ರಗಳು, ದಕ್ಷಿಣ ಅಮೆರಿಕದ ಕೆಲವು ದೇಶಗಳು, ಅಮೆರಿಕ ಸಂಯುಕ್ತ ಸಂಸ್ಥಾನಗಳು, ಫಿಜಿ, ಆಸ್ಟೆ›ೕಲಿಯಾ, ಮಲೇಷ್ಯಾ, ಇಂಡೋನೇಷ್ಯಾ ಮತ್ತು ಸಿಂಗಾಪುರ. ಈ ಕುರಿತಾಗಿ ಇದೇ ಶೀರ್ಷಿಕೆಯಲ್ಲಿ ಮುಂದಿನ ಲೇಖನಗಳನ್ನು ಬರೆದು ತಿಳಿಸುವ ಇಚ್ಛೆಯಿದೆ.