

ನಮ್ಮ ವಿಶ್ವ ಪರ್ಯಟನೆ ಮುಂದುವರಿದಂತೆ ದೂರದ ದೇಶಗಳಲ್ಲಿ, ಅಲ್ಲಿಯ ಜನರ ಮೇಲೆ ಸನಾತನ ಧರ್ಮ ಬೀರುತ್ತಿರುವ ಭವ್ಯ ಪ್ರಭಾವವು ಬಹು ಹರ್ಷಪ್ರದಾಯಕ ವಿಷಯ.
ನಾವು ಯೂರೋಪಿನ ಕ್ರೊಯೇಶಿಯಾದಿಂದ ಹೊರಟು ನೆದಲ್ಯಾಂಡ್ಸ್ ತಲುಪಿದೆವು. ಆ ದೇಶದ ದಕ್ಷಿಣದಲ್ಲಿರುವ ಬ್ರೖೆನ್ಪೋರ್ಟ್ ಪ್ರದೇಶದ ಇಂಡ್ಹೋವ್ ನಗರದಲ್ಲಿ ಉಳಿದುಕೊಂಡೆವು. ಸುಪ್ರಸಿದ್ಧ ಫಿಲಿಪ್ಸ್ ಕಂಪೆನಿ ಸೇರಿ ಹಲವು ಆಧುನಿಕ ತಂತ್ರಜ್ಞಾನ ಸಂಸ್ಥೆಗಳು ಇಲ್ಲಿವೆ. ನೆದಲ್ಯಾಂಡ್ಸ್ ಎಂಬ ಹೆಸರನ್ನು ಕೇಳಿದ ಕೂಡಲೇ ಜಗತ್ತಿನ ಬಹುತೇಕರಿಗೆ ನೆನಪಾಗುವುದು, ಅಲ್ಲಿಯ ಸುಪ್ರಸಿದ್ಧ ತುಲಿಪ್ ಪುಷ್ಪಗಳ ತೋಟಗಳು ಮತ್ತು ಸಮುದ್ರ ತೀರದಲ್ಲಿ ನಿರ್ವಿುಸಿರುವ ಡೈಕ್ ಅಥವಾ ತಡೆಗೋಡೆಗಳು. ಇಡೀ ದೇಶ ಸಮುದ್ರಮಟ್ಟಕ್ಕಿಂತ ಕೆಳಗಿರುವುದರಿಂದ, ಸಮುದ್ರವು ಭೂಮಿಗೆ ನುಗ್ಗದಂತೆ ಈ ಡೈಕ್ಗಳು ರಕ್ಷಿಸುತ್ತವೆ. ಅಲ್ಲಿ ನಮ್ಮ ಆತಿಥೇಯರೆಂದರೆ ಭಾರತದಿಂದ ಹೋಗಿ ಅಲ್ಲಿಯೇ ನೆಲೆಸಿರುವವರು. ಆದರೆ ನನ್ನ ಗಮನ ಹೆಚ್ಚಾಗಿ ಹರಿದದ್ದು, ಆ ದೇಶದ ನಿವಾಸೀ ಜನಾಂಗದವರೆಡೆಗೆ. ಆ ಸಂಜೆಯ ಸಮಾರಂಭದಲ್ಲಿ ಬಹುತೇಕ ಸಭಿಕರು ಅವರೇ ಆಗಿದ್ದರು.
ಸಭಾಭವನ ಪ್ರವೇಶಿಸುತ್ತಿದ್ದಂತೆ ನನ್ನಲ್ಲಿ ಅಚ್ಚರಿ ಮೂಡಿಸಿದ್ದು, ಅಲ್ಲಿಯ ಯುವಕನೊಬ್ಬ ಭಾರತೀಯ ಉಡುಪನ್ನು ಧರಿಸಿ ಸಿತಾರ್ ವಾದನ ನುಡಿಸುತ್ತಿದ್ದುದು. ಆತ ನುಡಿಸುತ್ತಿದ್ದ ಸಿಂಧು ಭೈರವಿ ರಾಗ ಆ ಸಭೆಗೆ ಒಂದು ಭಾರತೀಯ ಮೆರುಗನ್ನು ನೀಡುತ್ತಿತ್ತು. ಆಗ ನನ್ನಲ್ಲಿ ಉದಯವಾದ ವಿಚಾರವೆಂದರೆ, ಸನಾತನ ಧರ್ಮ ಕೇವಲ ತತ್ವಜ್ಞಾನಕ್ಕೆ ಸೀಮಿತವಾಗಿಲ್ಲ. ಅದರ ಸಂಸ್ಕೃತಿಯ ಮೃದುಶಕ್ತಿಯು (ಸಾಫ್ಟ್ ಪವರ್) ಶಾಸ್ತ್ರೀಯ ಸಂಗೀತ-ನೃತ್ಯಗಳ ರೂಪದಲ್ಲಿ ಹಲವು ದೇಶಗಳಿಗೆ ಹರಿದುಬಂದಿದೆ. ಪ್ರಾಚೀನ ಭಾರತದ ಭರತಮುನಿಯ ನಾಟ್ಯಶಾಸ್ತ್ರದಲ್ಲಿ ನಮ್ಮ ಶಾಸ್ತ್ರೀಯ ಸಂಗೀತ, ನೃತ್ಯ, ನಾಟಕಗಳ ಬಗ್ಗೆ ವಿಪುಲ ಸಾಹಿತ್ಯವಿದೆ. ಅಲ್ಲಿನ ಮೇಳಕರ್ತ ರಾಗಪದ್ಧತಿಯ ಸೂಕ್ಷ್ಮತೆಗಳನ್ನು ನಾವು ಪಾಶ್ಚಾತ್ಯ ಸಂಗೀತದಲ್ಲಿಯೂ ಕಾಣಬಹುದು. ನಮ್ಮ ಸುತ್ತ ನಿರ್ವಿುಸಿಕೊಂಡಿರುವ ನಾನು-ನನ್ನದು ಎಂಬ ತಡೆಗೋಡೆಗಳು, ಅಲ್ಲಿಯ ಸಮುದ್ರ ತೀರದ ಡೈಕ್ಗಳಿದ್ದಂತೆ.
ಈ ಸಂಕುಚಿತ ಪರಿಧಿಯ ಸೀಮೆಗಳನ್ನು ದಾಟಿ ವಿಶ್ವಮಾನವ ಪ್ರಜ್ಞೆ ಬೆಳೆಸಿಕೊಳ್ಳುವುದು ಹೇಗೆ ಎಂಬುದು ಆ ಸಭೆಯ ಮುಖ್ಯ ವಿಷಯ. ಸಭೆಗೆ ನೆರೆಯ ದೇಶ ಬೆಲ್ಜಿಯಂನಿಂದ ಹಲವರು ಆಗಮಿಸಿದ್ದರು. ಆ ಪೈಕಿ ಒಬ್ಬರು ಬೆಲ್ಜಿಯಂನ ಆಮ್ಸ್ಟರ್ಡ್ಯಾಮ್ ಒಂದು ಶಿವಮಂದಿರ ನಿರ್ವಿುಸುತ್ತಿದ್ದಾರೆ. ಅಲ್ಲದೆ ಅಲ್ಲಿ ಮಕ್ಕಳು ಮತ್ತು ವಯಸ್ಕರಿಗಾಗಿ ಯೋಗ ತರಗತಿಗಳು ನಡೆಯುತ್ತಿವೆ. ಹೀಗೆ ಭಾರತೀಯ ಶಾಸ್ತ್ರೀಯ ಸಂಗೀತ-ನೃತ್ಯಗಳಿಂದ ಹಿಡಿದು, ಯೋಗ-ಧ್ಯಾನಗಳ ರೂಪದಲ್ಲಿ ಸನಾತನ ಧರ್ಮ ಯೂರೋಪಿನ ದೇಶಗಳಿಗೆ ಸ್ವಚ್ಛಂದವಾಗಿ ಹರಿದುಹೋಗುತ್ತಿದೆ. ನಮ್ಮ ಮುಂದಿನ ತಾಣ, ಬ್ರಿಟನ್ನಿನ ಲಂಡನ್. ಅಲ್ಲಿ ವಿವಿಧ ದೇಶೀಯರು ಹಾಗೂ ವಂಶೀಯರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಬ್ರಿಟಿಷರು ಜಗತ್ತಿನ ಉದ್ದಗಲಗಳಲ್ಲಿ ವಸಾಹತು ಸ್ಥಾಪಿಸಿ ಹಲವಾರು ವರ್ಷ ಆಳಿದುದರ ಪರಿಣಾಮವು, ಆ ರಾಷ್ಟ್ರಗಳಿಂದ ವಲಸೆ ಬಂದು ಬ್ರಿಟನ್ನಿನಲ್ಲಿ ನೆಲೆಸಿರುವ ಜನಸಮೂಹಗಳಲ್ಲಿ ಎದ್ದು ಕಾಣುತ್ತದೆ.
ನಾವು ಲಂಡನ್ನಿನ ವಿಮಾನನಿಲ್ದಾಣದಿಂದ ಪೂರ್ವ ಲಂಡನ್ನಿನಲ್ಲಿರುವ ನಮ್ಮ ಆತಿಥೇಯರ ಗೃಹಕ್ಕೆ ತೆರಳುವಾಗ, ದಾರಿಯುದ್ದಕ್ಕೂ ಆ ದೇಶದ ನಾಗರಿಕತೆ-ಸಂಸ್ಕೃತಿ ಸಾರುವ ಕಟ್ಟಡಗಳು ಇಕ್ಕೆಲಗಳಲ್ಲಿ ಕಾಣುತ್ತಿದ್ದವು. ನಮ್ಮ ಗೃಹವನ್ನು ಪ್ರವೇಶಿಸಿದ ಕೂಡಲೇ ಕಂಡುಬಂದದ್ದು, ಗಣೇಶನ ವಿಗ್ರಹ ಹಾಗೂ ದೇವ-ದೇವಿಯರ ಚಿತ್ರಗಳು. ಬ್ರಿಟಿಷ್ ಆಳ್ವಿಕೆ ಸಂದರ್ಭದಲ್ಲಿ ಭಾರತದ ಪಂಜಾಬ್ನಿಂದ ಆ ಕುಟುಂಬದ ಪೂರ್ವಜರು ಜೀವನಕ್ಕೆ ಹೆಚ್ಚಿನ ಶ್ರೀಮಂತ ಅವಕಾಶಗಳನ್ನು ಅನ್ವೇಷಿಸುತ್ತ ಇಲ್ಲಿ ಬಂದು ನೆಲೆಸಿದ್ದರು. ಈಗ ಅಲ್ಲಿರುವ ಆ ಕುಟುಂಬದ ಹಿರಿಯರು, ಮಕ್ಕಳು ಅಲ್ಲೇ ಹುಟ್ಟಿ ಬೆಳೆದಿದ್ದರೂ ತಮ್ಮ ಸಾಂಸ್ಕೃತಿಕ ಬೇರುಗಳಿಂದ ಬೇರೆಯಾಗಿರಲಿಲ್ಲ. ಅವರಿಗೆ ವೇದಘೊಷ, ಭಾರತೀಯ ಸಂಗೀತ ವಾದ್ಯ ನುಡಿಸುವುದು, ಹಿಂದೂ ಭಕ್ತಿಗೀತೆ ಹಾಡುವುದು ಇತ್ಯಾದಿಗಳಲ್ಲಿ ಪರಿಣಿತಿಯಿದೆ. ಅವರಲ್ಲಿ ಹಲವರು ಅಲ್ಲಿಯ ಸರ್ಕಾರದ ಉನ್ನತ ಹುದ್ದೆ, ವೈದ್ಯಕೀಯ, ವಾಣಿಜ್ಯೋದ್ಯಮ ರಂಗಗಳಲ್ಲಿ ತಮ್ಮ ವೃತ್ತಿ ಜೀವನ ನಡೆಸುತ್ತಿದ್ದಾರೆ.
ಆ ಪೂರ್ವಜರ ನಾಲ್ಕನೇ ತಲೆಮಾರಿನವರು ಇಂದು ಅಲ್ಲಿ ಬೆಳೆಯುತ್ತಿದ್ದು, ಅವರಲ್ಲಿಯೂ ಭಾರತೀಯ ಸಂಸ್ಕೃತಿ ಹಲವು ರೂಪಗಳಲ್ಲಿ ವ್ಯಕ್ತವಾಗುತ್ತಿದೆ. ಅಷ್ಟೇ ಅಲ್ಲ, ಭಾರತೀಯ ಸಂಸ್ಕೃತಿ, ಸನಾತನ ಧರ್ಮದಲ್ಲಿ ಆಸಕ್ತಿ, ಗೌರವ, ಶ್ರದ್ಧೆ ಬೆಳೆಸಿಕೊಂಡಿರುವ ನೂರಾರು ಭಾರತೀಯ ವಲಸಿಗರು ಹಾಗೂ ಬ್ರಿಟಿಷ್ ಪ್ರಜೆಗಳು ಲಂಡನ್ನಲ್ಲಿದ್ದಾರೆ. ಅಲ್ಲಿ ನಡೆದ ಸಮಾರಂಭದಲ್ಲಿ ಭಾರತೀಯ ವಲಸಿಗರಲ್ಲದೆ ಸ್ಥಳೀಯರೂ ಇದ್ದರು. ಆ ಸಭೆಯ ಮುಖ್ಯ ವಿಷಯ- ಭಗವದ್ಗೀತೆಯ ಸ್ವಧರ್ಮ ಹಾಗೂ ಆಧ್ಯಾತ್ಮಿಕ ಪಥದಲ್ಲಿ ಗುರುವಿನ ಮಹತ್ವ. ಆ ಸನ್ನಿವೇಶ ನನ್ನ ಹೃದಯದಲ್ಲಿ ಸನಾತನ ಧರ್ಮದ ವಿಶ್ವ ವ್ಯಾಪಕತೆ ಬಗ್ಗೆ ಉನ್ನತ ಆಶಾವಾದವನ್ನು ಮೂಡಿಸಿತು. ಅದರ ಜೊತೆಯಲ್ಲೇ ಭಾರತದ ಇಂದಿನ ಯುವ ಜನಾಂಗದಲ್ಲಿ ಸನಾತನ ಧರ್ಮದ ಬಗ್ಗೆ ಗೌರವ-ಶ್ರದ್ಧೆಗಳನ್ನು ಬೆಳೆಸಬೇಕಾದ ಸವಾಲೂ ನನ್ನ ಮನದಲ್ಲಿ ಹಾದು ಹೋಯಿತು.
ಯುರೋಪಿನಿಂದ ನಮ್ಮ ಮುಂದಿನ ಪಯಣ, ಅರ್ಜೆಟೀನಾ ಕಡೆಗೆ. ಈ ದೇಶದಲ್ಲಿ ಬಹುತೇಕ ಜನರು ಸ್ಪ್ಯಾನಿಷ್ ಭಾಷೆ ಮಾತನಾಡುತ್ತಾರೆ. ಪೋರ್ಚುಗೀಸ್ ಭಾಷೆಯವರೂ ಕೆಲವರಿದ್ದಾರೆ. ಅಲ್ಲಿ ಬಹುತೇಕರಿಗೆ ಇಂಗ್ಲಿಷ್ ಗೊತ್ತಿಲ್ಲ. ಅರ್ಜೆಟೀನಾದ ರಾಜಧಾನಿ ಬ್ಯುನೋಸ್ ಐರ್ಸ್ ನಗರದ ಹೊರವಲಯದಲ್ಲಿರುವ ಪ್ರೇಮ-ಶಾಂತಿ ಧಾಮ ನಮ್ಮ ವಾಸಸ್ಥಾನ. ಅಲ್ಲಿ ನಡೆದ ಸಮಾವೇಶದಲ್ಲಿ ದಕ್ಷಿಣ ಅಮೆರಿಕ ಖಂಡದ ಹೆಚ್ಚಿನ ದೇಶಗಳಿಂದ ಬಂದ ಪ್ರತಿನಿಧಿಗಳಿದ್ದರು. ಅಲ್ಲಿ ಭಾರತೀಯ ವಲಸಿಗರು ವಿರಳ. ಸಭೆಯ ಮುಖ್ಯ ವಿಷಯ- ಶಿಕ್ಷಣ ವ್ಯವಸ್ಥೆಯಲ್ಲಿ ಮಾನವೀಯ ಮೌಲ್ಯಗಳ ಬೋಧನೆ. ಹಲವು ಹಿನ್ನೆಲೆಗಳಿಂದ ಬಂದಿದ್ದ ಉಪನ್ಯಾಸಕರಲ್ಲಿ ಧಾರ್ವಿುಕ ನಾಯಕರೂ ಇದ್ದರು. ಎಲ್ಲರಲ್ಲಿಯೂ ಇದ್ದ ಒಂದು ಆತಂಕವೆಂದರೆ ಕೇವಲ ಭೌತಿಕ ವಿಲಾಸವಾದಕ್ಕೆ ಮಾರುಹೋಗಿ, ಎಲ್ಲ ಜೀವನ ಮೌಲ್ಯಗಳನ್ನೂ ಕಳೆದುಕೊಂಡು ಹಳಿ ತಪ್ಪುತ್ತಿರುವ ಯುವ ಜನಾಂಗ ಹಾಗೂ ಅದರಿಂದ ಮಾನವ ಸಮುದಾಯಗಳ ಭವಿಷ್ಯದ ಬಗ್ಗೆ ಇರುವ ಅನಿಶ್ಚಿತತೆ. ಆಧುನಿಕ ತಂತ್ರಜ್ಞಾನದ ಸಮಸ್ಯಾತ್ಮಕ ಶಿಶುವಾದ ಡಿಜಿಟಲ್ ಮಾಧ್ಯಮಗಳಿಗೆ ದಾಸರಾಗಿ, ಮಾನವ ಜೀವನದ ಉದ್ದೇಶ ಮರೆತು ಮಾದಕ ವಸ್ತುವ್ಯಸನಿಗಳಾಗಿರುವ ಯುವಕ-ಯುವತಿಯರ ಹೆಚ್ಚಿನ ಸಂಖ್ಯೆಯು ಅಲ್ಲಿ ಒಂದು ಬಿಡಿಸಲಾರದ ಸಮಸ್ಯೆ. ಅದರ ಜೊತೆಗೆ ಏರುತ್ತಿರುವ ಬಾಲಾಪರಾಧಿಗಳ ಸಂಖ್ಯೆ.
ಆ ಸಭೆಯಲ್ಲಿ ಹೆಚ್ಚಿನ ಉಪನ್ಯಾಸಕರು ಮನಶ್ಶಾಸ್ತ್ರ, ಸಾಮಾಜಿಕ-ಸಾಂಸ್ಕೃತಿಕ ನೆಲೆಯಲ್ಲಿ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಮಾತನಾಡಿದರು. ನಾನು ಸನಾತನ ಧರ್ಮದ ಆಧ್ಯಾತ್ಮಿಕ ತಳಹದಿ ಮೇಲೆ ಇರುವ ಪರಿಹಾರಗಳ ಬಗ್ಗೆ ಮಾತನಾಡಿದೆ. ಆಧ್ಯಾತ್ಮಿಕ ಬುನಾದಿ ಮೇಲೆ ಮಾತ್ರ, ಸರ್ವರೂ ಶಾಂತಿ-ಸಮರಸಗಳೊಂದಿಗೆ ಬದುಕಬಹುದಾದ ಸತ್ಯಯುಗದ ಸುಂದರ ಕಲ್ಪನೆಯನ್ನು ಅವರ ಮುಂದಿಟ್ಟೆ. ಅಂತಹ ಸುವರ್ಣ ಯುಗಕ್ಕೆ ತಳಹದಿ- ಸರ್ವರೂ ಸ್ವಾರ್ಥ, ಅಹಂಕಾರ, ಭೋಗಲಾಲಸೆ ನಿಯಂತ್ರಿಸಿಕೊಂಡು, ಧರ್ಮದ ಚೌಕಟ್ಟಿನಲ್ಲಿ ಬಾಳುವುದು. ಅಂತಹ ಸಮುದಾಯದಲ್ಲಿ ಯಾರೂ ಇತರರಿಗೆ ತೊಂದರೆಯನ್ನುಂಟು ಮಾಡುವುದಿಲ್ಲ. ಬದಲಿಗೆ ಎಲ್ಲರೂ ಇನ್ನೊಬ್ಬರಿಗೆ ಸಹಾಯ ಮಾಡಲು ಕಾತರರಾಗಿರುತ್ತಾರೆ. ಇಂತಹ ಉದಾತ್ತ ವ್ಯಕ್ತಿಗಳನ್ನೊಳಗೊಂಡ ಸುಂದರ ಸಮಾಜದ ನಿರ್ವಣಕ್ಕೆ ನೆರವಾಗಬಲ್ಲ ಭಗವದ್ಗೀತೆ, ಅಷ್ಟಾವಕ್ರಗೀತೆಯ ಸಂದೇಶಗಳನ್ನು ತಿಳಿಸಿದೆ. ಅದನ್ನು ಕೇಳಿದ ಸಭಿಕರಲ್ಲಿ ಹೊಸ ಸಂಚಲನ ಕಂಡುಬಂತು.
ಸನಾತನ ಧರ್ಮದ ಆಧ್ಯಾತ್ಮಿಕ, ಧಾರ್ವಿುಕ ಶಾಸ್ತ್ರಗಳಿಂದ ಆಯ್ದ ಕೆಲವು ಮಂತ್ರ, ಶ್ಲೋಕಗಳನ್ನು ಉಚ್ಛರಿಸಿ ಅರ್ಥ ವಿವರಿಸಿದಾಗ, ಎಲ್ಲರಲ್ಲೂ ಇನ್ನಷ್ಟು ಕೇಳಬೇಕೆಂಬ ತವಕ ವ್ಯಕ್ತವಾಯಿತು. ಅವರಿಗೆ ಸಂಸ್ಕೃತ ಗೊತ್ತಿಲ್ಲ. ಆದರೂ ಸಂಸ್ಕೃತ ಶ್ಲೋಕಗಳ ಉಚ್ಛಾರವೇ ಅವರ ಹೃದಯಗಳನ್ನು ಹೊಕ್ಕು ಅವರಲ್ಲಿ ಒಂದು ನವ ಆಶಾಕಿರಣ ಮೂಡಿಸಿರುವಂತೆ ಭಾಸವಾಯಿತು. ಸಭೆ ಮುಗಿದ ಮೇಲೆ, ‘ಇಂತಹ ವಿಶಿಷ್ಟ ಸಂಪತ್ತನ್ನು ಹೊಂದಿರುವ ಭಾರತೀಯರು ಎಷ್ಟು ಅದೃಷ್ಟವಂತರು!’ ಎಂಬ ಭಾವನೆ ನನ್ನಲ್ಲಿ ಮೂಡಿತು. ಜೊತೆಯಲ್ಲಿಯೇ ‘ಇಂದಿನ ಭಾರತೀಯ ಯುವ ಜನಾಂಗದಲ್ಲಿ ನಮ್ಮ ಆಧ್ಯಾತ್ಮಿಕ ಗ್ರಂಥಗಳು, ಸಂಸ್ಕೃತ ಭಾಷೆ ಬಗ್ಗೆ ಶ್ರದ್ಧೆ-ಆಸಕ್ತಿ ಮಾಯವಾಗುತ್ತಿರುವುದು ಎಂತಹ ವಿಪರ್ಯಾಸ!’ ಎನಿಸಿತು. ಅರ್ಜೆಟೀನಾದಿಂದ ಉತ್ತರಕ್ಕೆ ಪಯಣಿಸಿ ಜಾರ್ಜಿಯಾ ತಲುಪಿದೆವು. ಅಲ್ಲಿ ಸಾಕಷ್ಟು ದಕ್ಷಿಣ ಭಾರತೀಯ ವಲಸಿಗರಿದ್ದಾರೆ. ಅಲ್ಲಿ ನಮ್ಮ ವಾಸ- ಒಂದು ಗುಜರಾತಿ ಕುಟುಂಬ ಹಾಗೂ ಮತ್ತೊಂದು ಕನ್ನಡಿಗರ ಕುಟುಂಬದ ಜತೆ. ಅಲ್ಲಿನ ಸಭೆಗಳಲ್ಲ್ಲೂ ವೇದಘೊಷ, ಪ್ರಾರ್ಥನೆ, ಭಕ್ತಿಗೀತೆಗಳು ಪ್ರತಿಧ್ವನಿಸಿದವು. ಭಾರತದಿಂದ ಬಂದು ಅಲ್ಲಿ ಉದ್ಯೋಗ, ವಾಣಿಜ್ಯೋದ್ಯಮದಲ್ಲಿ ಉನ್ನತಿ ಸಾಧಿಸಿದ ಭಾರತೀಯರ ಜೊತೆಗೆ, ಸ್ಥಳೀಯರಲ್ಲಿಯೂ ಇರುವ ಪರೋಪಕಾರ ಬುದ್ಧಿ ಕಂಡು ನನಗೆ ಸಂತೋಷವಾಯಿತು.
ಇಂದು ಅಮೆರಿಕದಲ್ಲಿ ಬದಲಾಗುತ್ತಿರುವ ಆಡಳಿತ ಧೋರಣೆಗಳ ಸನ್ನಿವೇಶದಲ್ಲಿ, ಒಂದು ರೀತಿಯ ಅನಿಶ್ಚಿತತೆ-ಆತಂಕ ತಲೆದೋರಿರುವುದು ನನ್ನ ಗಮನಕ್ಕೆ ಬರದೇ ಇರಲಿಲ್ಲ. ಅಲ್ಲಿ ಸಭೆ ನಡೆದದ್ದು ರಾಮನವಮಿಯಂದು. ಶ್ರೀರಾಮನ ಧರ್ಮನಿಷ್ಠೆ ಸಮಕಾಲೀನ ಸನ್ನಿವೇಶದಲ್ಲಿ ಒಂದು ದಾರಿದೀಪವಲ್ಲವೇ? ತನ್ನ ಜೀವನದಲ್ಲಿ ಶ್ರೀರಾಮ ಎದುರಿಸಿದ ಸವಾಲುಗಳು ಹಲವಾರು. ಅವುಗಳಿಗೆಲ್ಲ ಅವನು ಪರಿಹಾರ ಕಂಡುಕೊಂಡದ್ದು ಧರ್ಮದ ನೆಲೆಯಲ್ಲಿಯೇ. ಅವನು ತನ್ನ ವೈಯಕ್ತಿಕ ಜೀವನ, ಕುಟುಂಬ ಜೀವನ, ಸಮಾಜ ಜೀವನದಲ್ಲಿ ಸದಾ ಧರ್ಮವನ್ನು ಆಶ್ರಯಿಸಿ ಜಯಶಾಲಿಯಾದುದು ಇಂದಿಗೂ ಒಂದು ಆಶಾಕಿರಣ. ಗುರು ವಿಶ್ವಾಮಿತ್ರನೊಂದಿಗೆ ಅವನು ಉತ್ತಮ ಶಿಷ್ಯ ಧರ್ಮವನ್ನೂ, ತಂದೆ ದಶರಥನಿಗೆ ಸಂಪೂರ್ಣ ವಿಧೇಯನಾಗಿ ಪುತ್ರ ಧರ್ಮವನ್ನೂ ಪಾಲಿಸಿದನು. ತನ್ನ ಪತಿ ಧರ್ಮವನ್ನು ಎತ್ತಿ ಹಿಡಿಯಲು, ಸೀತೆಯ ರಕ್ಷಣೆಗಾಗಿ ದೇಶದ ಉದ್ದಕ್ಕೂ ನಡೆದು ಸಮುದ್ರವನ್ನು ದಾಟಿ ಲಂಕೆಯಲ್ಲಿ ಮಹಾಯುದ್ಧವನ್ನೇ ಮಾಡಿದನು. ಪ್ರಜೆಗಳೆಡೆಗೆ ತನ್ನ ರಾಜಧರ್ಮವನ್ನು ಪಾಲಿಸಲು ದೇಶಹಿತಕ್ಕಾಗಿ ತನ್ನ ಪತ್ನಿಯನ್ನು ಅರಣ್ಯಕ್ಕೆ ಕಳುಹಿಸಿ ತನ್ನ ಕೌಟುಂಬಿಕ ಜೀವನವನ್ನು ತ್ಯಜಿಸಿದನು.
ಈ ಬಗ್ಗೆ ಅಲ್ಲಿನ ಸಭೆಯಲ್ಲಿ ಕೆಲವು ಪ್ರಶ್ನೆಗಳು ಬರದೇ ಇರಲಿಲ್ಲ. ಅವುಗಳಿಗೆ ಸಮಂಜಸ ಉತ್ತರ ನೀಡಲಾಯಿತು. ಶ್ರೀರಾಮನ ಆದರ್ಶ ಇಂದಿನ ಮಾನವೀಯತೆಗೂ ಪ್ರಸ್ತುತ. ಇದನ್ನು ಹಲವು ಅಮೆರಿಕನ್ನರೂ ಒಪ್ಪುತ್ತಾರೆ. ಅಯೋಧ್ಯೆಯಲ್ಲಿ ಇತ್ತೀಚೆಗಷ್ಟೇ ರಾಮಮಂದಿರ ಉದ್ಘಾಟನೆ ಆಗಿರುವುದರಿಂದ ಇಂದು ಶ್ರೀರಾಮನ ಪವಿತ್ರನಾಮ ಎಲ್ಲೆಡೆ ಪಸರಿಸಿದೆ. ಅಲ್ಲಿಂದ ನ್ಯೂಜೆರ್ಸಿ ತಲುಪಿದೆವು. ಅಲ್ಲಿ ಜಗತ್ತಿನ ಅತಿ ದೊಡ್ಡ ಸ್ವಾಮಿನಾರಾಯಣ ಮತ್ತು ಇನ್ನೂ ಹಲವು ಹಿಂದೂ ಮಂದಿರಗಳು ಪ್ರಸಿದ್ಧವಾಗಿವೆ. ಆ ಪೈಕಿ ನಾನು ಭೇಟಿ ಕೊಟ್ಟ ಗುರುವಾಯೂರಪ್ಪ ಮಂದಿರದಲ್ಲಿ ವೇದ ಪಾಠಶಾಲೆ ಜೊತೆಗೆ ಗೋಶಾಲೆಯೂ ಇದೆ. ಶ್ರೀರಾಮ, ಬಾಲಾಜಿ, ವಿಷ್ಣು, ಶಿವ, ದೇವಿ ಇತ್ಯಾದಿ ಹಲವು ದೇವದೇವಿಯರನ್ನು ಅಲ್ಲಿ ಪ್ರತಿಷ್ಠಾಪಿಸಿದ್ದಾರೆ. ಅನೇಕ ತಂದೆ-ತಾಯಂದಿರು ಅಲ್ಲಿಗೆ ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ಸನಾತನ ಧರ್ಮದ ಆಚಾರ-ವಿಚಾರಗಳ ಬಗ್ಗೆ ತಿಳಿಸುತ್ತಿರುವ ದೃಶ್ಯವು ಹೃದಯಸ್ಪರ್ಶಿಯಾಗಿತ್ತು. ಅಲ್ಲಿಯ ಸಭೆಯಲ್ಲಿ ವಿವಿಧ ಹಿನ್ನೆಲೆಗಳಿಂದ ಬಂದವರು ಸೇರಿದ್ದರು. ಸಮಾಲೋಚನೆಯ ಮುಖ್ಯ ವಿಷಯ- ‘ನಾವು ಸದಾ ಸುಖ-ಸಂತೋಷಗಳಿಂದ ಬಾಳಬೇಕಾದರೆ ಏನು ಮಾಡಬೇಕು?’ ಎಂಬುದು. ಆಧ್ಯಾತ್ಮಿಕತೆ ಕಣ್ಮರೆ ಆಗುತ್ತಿರುವ ಇಂದಿನ ಸನ್ನಿವೇಶದಲ್ಲಿ ಈ ಪ್ರಶ್ನೆ ಸಹಜವಾಗಿ ಏಳುತ್ತದೆ. ಇದಕ್ಕೆ ನಾನು ಸೂಚಿಸಿದ ಪರಿಹಾರವೆಂದರೆ, ಸನಾತನ ಧರ್ಮದ ಸುಭಾಷಿತ ಭಂಡಾರದಿಂದ ಆಯ್ದ ಒಂದು ಸರಳ ಸೂತ್ರ-
ವಿದ್ಯಾ ದದಾತಿ ವಿನಯಂ ವಿನಯಾದ್ಯಾತಿ ಪಾತ್ರತಾಮ್ |ಪಾತ್ರತ್ವಾತ್ ಧನಮಾಪ್ನೋತಿ ಧನಾದ್ಧಮಂ ತತಃ ಸುಖಮ್ ||
ವಿದ್ಯೆಯಿಂದ ಬರುವ ಜ್ಞಾನವು ಮಾನವನನ್ನು ವಿನೀತನನ್ನಾಗಿಸುತ್ತದೆ. ವಿನಯದಿಂದ ವ್ಯಕ್ತಿತ್ವದಲ್ಲಿ ಅರ್ಹತೆ- ಸಾಮರ್ಥ್ಯ ಉಂಟಾಗುತ್ತವೆ. ಅದರಿಂದ ಸಂಪತ್ತಿನ ಗಳಿಕೆ, ಸಂಪತ್ತಿನ ಸದ್ವಿನಿಯೋಗದಿಂದ ಧರ್ಮ ಮತ್ತು ಧರ್ಮದ ಆಧಾರದಲ್ಲಿ ಸುಖ-ಸಂತೃಪ್ತಿ ಸಹಜವಾಗಿ ಲಭಿಸುತ್ತವೆ. ಕೇವಲ ಶಿಕ್ಷಣ, ಧನಾರ್ಜನೆಯಿಂದ ಸುಖ ಲಭಿಸುವುದಿಲ್ಲ. ಗಳಿಸಿದ ವಿದ್ಯೆ, ಸಂಪತ್ತುಗಳ ಸದ್ವಿನಿಯೋಗ ಮಾಡಿ ಧರ್ಮವನ್ನು ಪಾಲಿಸಿದಾಗ, ಸುಖ ಲಭ್ಯವಾಗುತ್ತದೆ. ಕೇವಲ ಸಂಪತ್ತಿನಿಂದ ಸುಖವಿಲ್ಲ. ಇವರೆಡರ ಮಧ್ಯದ ಕೊಂಡಿಯೇ ಧರ್ಮ. ಈ ಸೂತ್ರವು ದೇಶ-ಕಾಲಗಳ ಸೀಮೆಯನ್ನು ಮೀರಿದ ಸತ್ಯ. ಇಂದಿನ ಅಮೆರಿಕ ದೇಶದ ಜನರಿಗಂತೂ ಇದು ಅತ್ಯಂತ ಅವಶ್ಯಕ. ಅಲ್ಲಿಂದ ನಮ್ಮ ಮುಂದಿನ ಪಯಣ ಕೆನಡಾ ದೇಶಕ್ಕೆ. ಈ ಬಗ್ಗೆ ಮುಂದಿನ ಲೇಖನದಲ್ಲಿ ಬರೆದು ತಿಳಿಸುತ್ತೇನೆ.