

ಕೆನಡಾದ ಆರ್ಥಿಕ ರಾಜಧಾನಿಯಾದ ಟೊರೊಂಟೊದಲ್ಲಿ ನಾವು ಇಳಿದಾಗ ಅಲ್ಲಿ ಕಂಡುಬಂದದ್ದು ಹಿಮಾಚ್ಛಾದಿತ ರಸ್ತೆಗಳು, ಕಟ್ಟಡಗಳ ಮೇಲ್ಛಾವಣಿಗಳು ಹಾಗೂ ಅಲ್ಲಿ ಬೀಸುತ್ತಿದ್ದ ಶೀತ ಗಾಳಿ. ಅಲ್ಲಿ ನಾವು ಉಳಿದುಕೊಂಡದ್ದು ಒಂದು ಕೊಂಕಣಿ ಕುಟುಂಬದ ಆತಿಥ್ಯದಲ್ಲಿ. ಆ ಕುಟುಂಬದ ಮಗಳೊಬ್ಬಳು ಬಂಗಾಳಿ ಕುಟುಂಬದ ಸೊಸೆಯಾದದ್ದರಿಂದ ಅಲ್ಲಿ ಕೊಂಕಣಿ ಹಾಗೂ ಬಂಗಾಳಿಯರಿಬ್ಬರ ಜೀವನ ಸಂಸ್ಕೃತಿಗಳು ಮೇಳೈಸಿದ್ದವು. ಮೊದಲನೆಯ ದಿನ ಅವರು ನಮಗೆ ಉಣಬಡಿಸಿದ ಭಕ್ಷ್ಯಗಳಲ್ಲಿ ಹಲವು ಹಣ್ಣಿನ ಪಲ್ಯವೂ ಇತ್ತು! ಈ ಬಗ್ಗೆ ನಾನು ಸೋಜಿಗಗೊಂಡು ಆ ಮನೆಯೊಡತಿಯನ್ನು ಕೇಳಿದಾಗ ಅವರು ಸಡಗರದಿಂದ ಉತ್ತರಿಸಿದರು.
‘ಇಲ್ಲಿಯ ಕೆಲವು ಅಂಗಡಿಗಳಲ್ಲಿ ಭಾರತೀಯ ತರಕಾರಿಗಳು, ಹಣ್ಣುಗಳು ಮತ್ತು ಮಸಾಲೆ ವಸ್ತುಗಳು ನಮಗೆ ಸಿಗುತ್ತವೆ. ಮೊದಲು ಮಸಾಲೆ ವಸ್ತುಗಳನ್ನು ಕೆಲವು ತಿಂಗಳುಗಳಿಗೊಮ್ಮೆ ಭಾರತದಿಂದ ನಮ್ಮೊಡನೆ ವಿಮಾನದಲ್ಲಿ ತರುತ್ತಿದ್ದೆವು. ಈಗ ಎಲ್ಲವೂ ನಮ್ಮ ಸನಿಹದ ದೊಡ್ಡ ಮಳಿಗೆಯಲ್ಲಿ ಲಭ್ಯವಾಗುತ್ತವೆ’. ಆಗ ನನ್ನ ಮನಸ್ಸಿನಲ್ಲಿ ಹಾದು ಹೋಗಿದ್ದು. ಭಾರತೀಯ ಸಂಸ್ಕೃತಿಯೆಂದರೆ ತತ್ವಜ್ಞಾನ, ಸಂಗೀತ ಮತ್ತು ನಾಟ್ಯಗಳು ಮಾತ್ರವೇ ಅಲ್ಲ, ನಮ್ಮ ಭಕ್ಷ್ಯ-ಭೋಜ್ಯಗಳು ಹಾಗೂ ಆಹಾರ ಪದ್ಧತಿಗಳೂ ಅದರಲ್ಲಿ ಸೇರುತ್ತವೆ! ‘ಜನರ ಹೃದಯವನ್ನು ಅವರ ಉದರಗಳ ಮೂಲಕ ಮುಟ್ಟಬಹುದು’ ಎಂಬ ಆಂಗ್ಲ ನಾಣ್ಣುಡಿ ಇದೆಯಲ್ಲವೇ? ಭಾರತೀಯರು ತಮ್ಮ ದೇಶದವರಿಗೆ ಸಹಸ್ರಾರು ಮೈಲಿಗಳು ದೂರದಲ್ಲಿರುವ ವಿದೇಶವನ್ನು ತಲುಪಿ, ಅಲ್ಲಿಗೆ ಅವರು ತಮ್ಮ ವಿಶಿಷ್ಟ ತಿಂಡಿ-ತಿನಿಸುಗಳನ್ನು ಮತ್ತು ಆಹಾರ ಪದ್ಧತಿಯನ್ನು ತಲುಪಿಸಿದ್ದಾರೆ. ನಳ ಮಹಾರಾಜನು ಸಹಸ್ರಾರು ವರ್ಷಗಳ ಹಿಂದೆ ರಚಿಸಿದ ‘ಪಾಕ ದರ್ಪಣಂ’ ಗ್ರಂಥವು ಜಗತ್ತಿನಾದ್ಯಂತ ಲಭ್ಯವಿರುವ ಪಾಕಶಾಸ್ತ್ರ ಗ್ರಂಥಗಳಿಗೆ ಮುಕುಟಪ್ರಾಯವಾದ ಪಠ್ಯಗ್ರಂಥವೆಂದು ಹೇಳಬಹುದು.
ಅದೇ ದಿನ ನಾವು ಕೆನಡಾದ ದೂರದರ್ಶನ ಪ್ರಸಾರ ಸಂಸ್ಥೆ ಏಷ್ಯಾ ಟೆಲಿವಿಷನ್ ನೆಟ್ವರ್ಕ್ (ಎಟಿಎನ್)- ಇದರ ಭಾರತೀಯ ಮಾಲೀಕರನ್ನು ಭೇಟಿ ಮಾಡಿದೆವು. ದಕ್ಷಿಣ ಭಾರತದಿಂದ ಬಂದ ಆ ದಂಪತಿ ಅಲ್ಲಿ ಕಾಲು ಶತಮಾನದಿಂದ ಕೆನಡಾದ ಪ್ರಜೆಗಳಿಗೆ ಭಾರತೀಯ ವಾರ್ತೆಗಳು, ಮನರಂಜನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಮರ್ಥವಾಗಿ ತಲುಪಿಸುತ್ತಿದ್ದಾರೆ! ಭಾರತೀಯ ಮನರಂಜನೆಯ ಮೂಲ ಪುರುಷನೆಂದರೆ ಪ್ರಾಚೀನ ಕಾಲದಲ್ಲಿ ನಾಟ್ಯಶಾಸ್ತ್ರವನ್ನು ಬರೆದ ಭರತ ಮುನಿ. ಅವನ ಗ್ರಂಥದಲ್ಲಿ ನಾವು ಭಾರತೀಯ ಸಂಗೀತ, ನೃತ್ಯ ಹಾಗೂ ನಾಟಕಗಳ ವಿಸ್ತೃತವಾದ ವಿವರಗಳನ್ನು ಕಾಣಬಹುದು. ಏಷ್ಯಾ ಟೆಲಿವಿಷನ್ ನೆಟ್ವರ್ಕ್ನಂತಹ ಭಾರತೀಯ ಮೂಲದ ಸಮೂಹ ಮಾಧ್ಯಮ ಸಂಸ್ಥೆಗಳು, ಭರತ ಮುನಿಯ ಗ್ರಂಥದ ಆಧುನಿಕ ಅವತಾರವೆಂದೇ ಹೇಳಬಹುದು.
ಏಷ್ಯಾ ಟೆಲಿವಿಷನ್ ನೆಟ್ವರ್ಕ್ನಲ್ಲಿ ಪ್ರಸಾರಕ್ಕಾಗಿ ನಾನು ನೀಡಿನ ಸಂದರ್ಶನದ ಮುಖ್ಯ ವಿಷಯವೆಂದರೆ, ಸನಾತನ ಧರ್ಮದ ವಿವಿಧ ಮುಖಗಳು ಹಾಗೂ ನಾವು ಪ್ರಾರಂಭಿಸಿರುವ ಜಾಗತಿಕ ಮಾನವೀಯ ಸೇವಾ ಅಭಿಯಾನದ ಕಾರ್ಯಕ್ರಮಗಳು. ಆ ದೇಶದ ಪ್ರೇಕ್ಷಕ ಸಮೂಹಕ್ಕಾಗಿ ನಾನು ಅದ್ವೈತ ಸಿದ್ಧಾಂತದ ಕುರಿತಾಗಿ ಮಾತನಾಡಿದಾಗ, ನನ್ನ ಮನದಲ್ಲಿ ಹಾದು ಹೋದ ಒಂದು ವಿಸ್ಮಯದ ಭಾವವೆಂದರೆ: ‘ನಾನು ಇಂದು ಒಬ್ಬ ಡಿಜಿಟಲ್ ಆಚಾರ್ಯನಾಗಿ ಭಾರತೀಯ ತತ್ವಜ್ಞಾನವನ್ನು ದೂರದ ದೇಶಗಳಿಗೆ ಬೋಧಿಸುತ್ತಿದ್ದೇನೆ’ ಎಂಬುದು! ಮಾರನೆಯ ದಿನ ಅಲ್ಲಿಯ ಒಬ್ಬ ರಾಜಕೀಯ ನಾಯಕರನ್ನು ಭೇಟಿಯಾದಾಗ ನಡೆಸಿದ ಸಂವಾದದ ಮುಖ್ಯ ವಿಷಯ ‘ವಸುಧೈವ ಕುಟುಂಬಕಂ’ ಎಂಬ ವಿಶಾಲ ಭಾವನೆಯು ವರ್ತಮಾನದಲ್ಲಿ ಜಗತ್ತಿಗೆ ಎಷ್ಟು ಪ್ರಸ್ತುತವೆಂಬುದು. ಹೀಗೆ ಭಾರತೀಯ ವಿಚಾರಧಾರೆಗಳು ಇಂದು ಜಗತ್ತಿನ ಜನರಿಗೆ ಸ್ಪೂರ್ತಿದಾಯಕವಾಗಿರಲು ಕಾರಣವೆಂದರೆ, ಸನಾತನ ಧರ್ಮವು ಬೋಧಿಸುವ ‘ಏಕತ್ವ ದರ್ಶನ’.
ಟೊರೊಂಟೊದಿಂದ ಕೆನಡಾದ ರಾಜಕೀಯ ರಾಜಧಾನಿಯಾದ ಒಟ್ಟಾವಾ ನಗರವನ್ನು ತಲುಪಿದೆವು. ಅಲ್ಲಿ ನಮ್ಮನ್ನು ಸ್ವಾಗತಿಸಲು ಅಲ್ಲಿಯ ಭಾರತೀಯ ವಲಸಿಗ ಕುಟುಂಬಗಳು ಒಂದು ಭೋಜನ ಕೂಟವನ್ನು ಏರ್ಪಡಿಸಿದ್ದವು. ಆ ಗೃಹದಲ್ಲಿ ಕಂಡು ಬಂದ ಮುಖ್ಯ ಅಲಂಕಾರವೆಂದರೆ, ಭಾರತೀಯ ದೇವ-ದೇವತೆಯರ ವಿಗ್ರಹಗಳು ಮತ್ತು ಭಾರತೀಯ ಕಲೆಯನ್ನು ಪ್ರತಿಬಿಂಬಿಸುವ ವರ್ಣಚಿತ್ರಗಳು. ಅಲ್ಲಿ ಗಣೇಶನ ವಿಶಿಷ್ಟ ವಿಗ್ರಹವನ್ನು ನೋಡಿದೆ. ಅದನ್ನು ಮಾಡಿದವರು ಫ್ರಾನ್ಸ್ನ ಒಂದು ಕಲಾ ವಾಣಿಜ್ಯ ಸಂಸ್ಥೆಯವರು. ಪ್ರತಿ ವರ್ಷ ಅವರು ಒಂದು ಭಾರತೀಯ ದೇವ-ದೇವತೆಯರ ವಿಗ್ರಹವನ್ನು ವಿಶಿಷ್ಟವಾಗಿ ನಿರ್ವಿುಸಿ ಅದನ್ನು ಪ್ರಚುರ ಪಡಿಸುತ್ತಾರೆ ಎಂಬುದನ್ನು ತಿಳಿದು ವಿಸ್ಮಯಗೊಂಡೆ! ಆ ಸಂಸ್ಥೆಯ ಅಂತಹ ಹಲವಾರು ವಿಗ್ರಹಗಳು ಆ ಮನೆಯ ಹಜಾರವನ್ನು ಅಲಂಕರಿಸಿದ್ದವು.
ನಂತರ ನಾವು, ಅಮೆರಿಕ ಸಂಯುಕ್ತ ಸಂಸ್ಥಾನದ ರಾಜಧಾನಿ ವಾಷಿಂಗ್ಟನ್ ನಗರವನ್ನು ತಲುಪಿದೆವು. ಭಾರತೀಯ ಉದ್ಯಮಿಯೊಬ್ಬರು ಅಲ್ಲಿನ ಆರ್ಥಿಕವಾಗಿ ಹಿಂದುಳಿದ ಮತ್ತು ಕಡೆಗಣಿಸಲ್ಪಟ್ಟ ವರ್ಗಗಳ ಜನರಿಗಾಗಿ ಒಂದು ಕೌಶಲ ಅಭಿವೃದ್ಧಿ ಕೇಂದ್ರವನ್ನು ಉದ್ಘಾಟಿಸಲು ನಮ್ಮನ್ನು ಆಹ್ವಾನಿಸಿದ್ದರು. ಭಾರತೀಯರೊಬ್ಬರು ಹಿಂದುಳಿದ ಅಮೆರಿಕನ್ನರಿಗಾಗಿ ಉದ್ಯೋಗಾವಕಾಶಗಳನ್ನು ಕಲ್ಪಿಸಲು ಆ ದೇಶದ ಹಲವೆಡೆಗಳಲ್ಲಿ ಈಗಾಗಲೇ ಪ್ರಾರಂಭಿಸಿರುವ ಇಂತಹ ಕೇಂದ್ರಗಳು ಹೆಚ್ಚಿನ ಸಾಮಾಜಿಕ ಪ್ರಭಾವವನ್ನು ಬೀರಿವೆ. ದಾನ ಮತ್ತು ಪರೋಪಕಾರಗಳು ಭಾರತೀಯ ತತ್ವಜ್ಞಾನ ಆಚರಣೆಯ ಒಂದು ಪ್ರಮುಖ ಭಾಗವಷ್ಟೇ. ಇದನ್ನೇ ಅವರು ಇಂತಹ ಅಭಿವೃದ್ಧಿ ಕೌಶಲ ಕೇಂದ್ರಗಳನ್ನು ಸ್ಥಾಪಿಸುವುದರಲ್ಲಿ ಅನುಷ್ಠಾನಕ್ಕೆ ತಂದಿದ್ದರು. ಅಲ್ಲಿ ನಮ್ಮ ಸಮಾಲೋಚನೆಯ ವಿಷಯ ‘ಒಂದು ಪ್ರಪಂಚ-ಒಂದು ಕುಟುಂಬ’. ಅಮೆರಿಕದ ರಾಜಧಾನಿಯಲ್ಲಿ ಹಿಂದುಳಿದ ಅಮೆರಿಕನ್ನರ ಆರ್ಥಿಕ ಸ್ಥಿರತೆಗಾಗಿ ಭಾರತೀಯ ಉತ್ಸಾಹಿ ಉದ್ಯಮಿಯೊಬ್ಬರು ಇಂತಹ ಸಂಸ್ಥೆಯನ್ನು ಸ್ಥಾಪಿಸಿರುವುದು ಮೇಲಿನ ಉನ್ನತ ಆದರ್ಶಕ್ಕೊಂದು ನಿದರ್ಶನ. ‘ಪರೋಪಕಾರಾರ್ಥಂ ಇದಂ ಶರೀರಂ’ ಎಂಬ ಭಾರತೀಯ ಸುಭಾಷಿತ ನಾಣ್ಣುಡಿಯ ಅನುಷ್ಠಾನವು ಅಲ್ಲಿ ನಡೆದಿತ್ತು.
ವಾಷಿಂಗ್ಟನ್ನಿಂದ ನಾವು ಹೊರಟು ಅಮೆರಿಕ ಸಂಯುಕ್ತ ಸಂಸ್ಥಾನಗಳ ಬಡ ಪ್ರಾಂತ್ಯವಾದ ಮಿಸಿಸ್ಸಿಪ್ಪಿಯ ಒಂದು ಹಿಂದುಳಿದ ಊರು- ಕ್ಲಾರ್ಕ್ಸ್ ಡೇಲನ್ನು ತಲುಪಿದೆವು. ಅಲ್ಲಿಯ ನಿವಾಸಿಗಳು ಹಲವು ಶತಮಾನಗಳ ಗುಲಾಮಗಿರಿಯ ಶೋಷಣೆಗೆ ಒಳಗಾಗಿದ್ದ ಆಫ್ರಿಕನ್ ಅಮೆರಿಕನ್ನರು. ನಮ್ಮ ಸಂಸ್ಥೆಯ ವತಿಯಿಂದ ಅಲ್ಲಿ ನಾವು ಸ್ಥಾಪಿಸಲಾಗುತ್ತಿರುವ ಮಾತೆ-ಶಿಶು ಆಸ್ಪತ್ರೆಯ ಉದ್ಘಾಟನೆ, ಅಲ್ಲಿಯ ಮುಖ್ಯ ಕಾರ್ಯಕ್ರಮವಾಗಿತ್ತು. ಯಾವುದೇ ಜೀವವಿಮೆಯನ್ನು ಮಾಡಿಕೊಳ್ಳದ ಬಡವರಿಗೆ ಉಚಿತ ಚಿಕಿತ್ಸೆಯನ್ನು ನೀಡಿ ಸೇವೆ ಸಲ್ಲಿಸುವುದು ಈ ಆಸ್ಪತ್ರೆಯ ಉದ್ದೇಶ. ಭಾರತೀಯ ಮೂಲದ ವ್ಯಕ್ತಿಗಳು ಹಿಂದುಳಿದ ಅಮೆರಿಕನ್ನರಿಗಾಗಿ ಪ್ರಾರಂಭಿಸಿರುವ ಇಂತಹ ಸೇವಾ ಕಾರ್ಯಗಳು ಸನಾತನ ಧರ್ಮವು ಬೋಧಿಸಿರುವ ಮಾನವ ಸೋದರತ್ವಕ್ಕೆ ಒಂದು ದ್ಯೋತಕ.
ಮಹಾ ಉಪನಿಷತ್ತು ಹೇಳುವಂತೆ:ಅಯಂ ನಿಜಃ ಪರೋ ವೇತಿ ಗಣನಾ ಲಘುಚೇತಸಾಮ್ |ಉದಾರಚರಿತಾನಾಂ ತು ವಸುಧೈವ ಕುಟುಂಬಕಮ್ ||
‘ಕೇವಲ ಸಂಕುಚಿತ ಮನೋಭಾವದ ಜನರು ಮಾತ್ರ ಇವರು ನನ್ನವರು, ಉಳಿದವರು ಬೇರೆಯವರು ಎಂದು ಯೋಚಿಸುತ್ತಾರೆ. ವಿಶಾಲ ಮನೋಭಾವದ ಉದಾರ ಚರಿತರಿಗೆ ಇಡೀ ಜಗತ್ತು ಒಂದು ಕುಟುಂಬ’. ಅಲ್ಲಿಂದ ನಮ್ಮ ಮುಂದಿನ ಪಯಣ ಅಮೆರಿಕದ ಪಶ್ಚಿಮ ತೀರದ ಸಿಲಿಕಾನ್ ಕಣಿವೆ ಅಥವಾ ಸಿಲಿಕಾನ್ ವ್ಯಾಲಿ. ಆ ಪ್ರದೇಶವು ಆಧುನಿಕ ತಂತ್ರಜ್ಞಾನ ಹಾಗೂ ತನ್ಮೂಲಕ ಆರ್ಥಿಕಾಭಿವೃದ್ಧಿ ಸಾಧನೆಗೆ ತವರುಮನೆಯಾಗಿದೆ ಎಂಬುದು ಜನಜನಿತವಾದ ವಿಷಯ. ಅಲ್ಲಿ ನಾವು ಒಂದು ವಾರ ಉಳಿದುಕೊಂಡಿದ್ದೆವು. ನಮ್ಮ ಅತಿಥೇಯರು ನಾಲ್ಕು ವೈವಿಧ್ಯಮಯ ಕುಟುಂಬಗಳು. ಒಬ್ಬರು ಇರಾನಿಯನ್ನರು, ಎರಡನೆಯವರು ಪಂಜಾಬ್ನವರು, ಮೂರನೆಯವರು ಗುಜರಾತಿಯರು ಮತ್ತು ನಾಲ್ಕನೆಯವರು ಕನ್ನಡಿಗರು.
ಆ ಎಲ್ಲ ಗೃಹಗಳಲ್ಲಿ ಅವರು ತಮ್ಮ ಆರಾಧ್ಯ ದೇವರ ಪೂಜೆಗಾಗಿ ಸಣ್ಣ ಮಂಟಪಗಳಿಂದ ತೃಪ್ತರಾಗಿರಲಿಲ್ಲ. ಈ ನಾಲ್ಕೂ ಮನೆಗೆಳಲ್ಲಿಯೂ ಪ್ರಾರ್ಥನೆ-ಪೂಜೆಗಳಿಗಾಗಿ ವಿಶಾಲವಾದ ಕೋಣೆಗಳನ್ನು ಮುಡಿಪಾಗಿಟ್ಟಿದ್ದರು. ಪಂಜಾಬಿ ಕುಟುಂಬವು ಸಿಖ್ ಧರ್ಮ ಗ್ರಂಥವಾದ ‘ಗ್ರಂಥ್ ಸಾಹಿಬ್’ನ ವಚನಗಳನ್ನು ಪಠಿಸಿದರೆ, ಗುಜರಾತೀಯರು ಭಾಗವತ ಗ್ರಂಥದ ಶ್ರೀಕೃಷ್ಣ ಸ್ತುತಿಗಳನ್ನು ಹಾಡಿದರು. ಇಸ್ಲಾಂ ಧರ್ಮಕ್ಕೆ ಸೇರಿದ ಇರಾನಿಯನ್ ಕುಟುಂಬದವರು ಸನಾತನ ಧರ್ಮದ ಅದೈತ್ವ ಸಿದ್ಧಾಂತವನ್ನು ನಂಬಿ ತಮ್ಮ ಧರ್ಮ ಗ್ರಂಥ ಕುರಾನ್ನ ಬೋಧನೆಗಳನ್ನು ಪಠಿಸಿದರು. ಕನ್ನಡಿಗರಾದರೋ ಅತಿ ಶ್ರದ್ಧಾವಂತ ಹಿಂದೂ ಸಂಪ್ರದಾಯದವರು. ಈ ನಾಲ್ಕೂ ಕುಟುಂಬದವರ ವೈವಿಧ್ಯತೆ ನಡುವೆ ಎದ್ದು ಕಾಣುತ್ತಿದ್ದ ಏಕತ್ವವು ನನ್ನ ಹೃದಯಕ್ಕೆ ಮುದವನ್ನು ನೀಡಿತು. ಇದಕ್ಕೆ ಕಾರಣವೆಂದರೆ ಅವರು ವಿವಿಧ ಧರ್ಮಗಳಿಗೆ ಸೇರಿ ಅವುಗಳನ್ನು ಆಚರಿಸುತ್ತಿದ್ದರೂ, ಸನಾತನ ಧರ್ಮವನ್ನು ನಂಬಿದ್ದರು. ಜಗತ್ತಿನ ಎಲ್ಲ ಧರ್ಮ ಮತ್ತು ತತ್ವಜ್ಞಾನಗಳಿಗೆ ಸನಾತನ ಧರ್ಮವು ಮಾತೃ ಸಮಾನವಲ್ಲವೇ? ಇದರಿಂದ ಅವರೆಲ್ಲರೂ ಸರ್ವ ಧರ್ಮಗಳ ಸಾರವಾದ ದೈವಪ್ರೇಮ ಹಾಗೂ ಜೀವಕಾರುಣ್ಯಗಳನ್ನು ತಮ್ಮ ಜೀವನಗಳಲ್ಲಿ ಅನುಷ್ಠಾನಕ್ಕೆ ತಂದಿದ್ದರು.
ದಕ್ಷಿಣ ಪೆಸಿಫಿಕ್ ಪ್ರದೇಶದ ಸುಂದರ ದ್ವೀಪರಾಷ್ಟ್ರವಾದ ಫಿಜಿ ದೇಶವು ನಮ್ಮ ಮುಂದಿನ ಗಮ್ಯ ಸ್ಥಾನ. ಈ ರಾಷ್ಟ್ರದಲ್ಲಿ ಮುನ್ನೂರು ಚಿಕ್ಕ ಮತ್ತು ದೊಡ್ಡ ದ್ವೀಪಗಳಿವೆ. ಈ ಪ್ರದೇಶದಲ್ಲಿ ಇಂತಹ ಹದಿನಾರು ದ್ವೀಪ ರಾಷ್ಟ್ರಗಳಿವೆ. ಫಿಜಿ ದೇಶದ ರಾಜಧಾನಿಯಾದ ಸುವಾ ನಗರದಲ್ಲಿ ಈ ಎಲ್ಲ ದ್ವೀಪ ರಾಷ್ಟ್ರಗಳ ಮಕ್ಕಳಿಗಾಗಿ ಮೂರು ವರ್ಷಗಳ ಹಿಂದೆ ನಾವು ಒಂದು ಹೃದಯ ಚಿಕಿತ್ಸಾ ಆಸ್ಪತ್ರೆಯನ್ನು ಪ್ರಾರಂಭಿಸಿದ್ದೆವು. ಈ ಆಸ್ಪತ್ರೆಯು ಹೃದಯದ ಶಸ್ತ್ರಚಿಕಿತ್ಸೆಗಳೂ ಸೇರಿದಂತೆ ಎಲ್ಲ ಸೇವೆಗಳನ್ನು ಸಂಪೂರ್ಣ ಉಚಿತವಾಗಿ ಅಲ್ಲಿಯ ಮಕ್ಕಳಿಗೆ ನೀಡುತ್ತಿದೆ. ‘ಭಾರತೀಯರಾದ ನೀವು ಇಷ್ಟು ದೂರದ ದೇಶದಲ್ಲಿ ಏಕೆ ಇಂತಹ ಸೇವಾ ಕಾರ್ಯಗಳನ್ನು ಕೈಗೊಂಡಿದ್ದೀರಿ?’ ಎಂದು ಒಬ್ಬರು ನನ್ನನ್ನು ಪ್ರಶ್ನಿಸಿದ್ದರು. ಅದಕ್ಕೆ ನನ್ನ ಉತ್ತರ ಬಹಳ ಸರಳ: ‘ನಮಗೆ ಹತ್ತಿರ-ದೂರ ಎಂಬುದಿಲ್ಲ. ಎಲ್ಲರೂ ನಮ್ಮವರೇ ಅಲ್ಲವೇ!’ ಫಿಜಿ ದೇಶದಲ್ಲಿ ಮೂರನೆಯ ಒಂದು ಭಾಗ ಭಾರತೀಯ ವಲಸಿಗರಿದ್ದಾರೆ.
ಭಾರತೀಯ ಸಂಸ್ಕೃತಿಯನ್ನು ಅಲ್ಲಿ ಪ್ರಸರಿಸಲು ಅವರು ಹಲವು ದೇವಸ್ಥಾನಗಳನ್ನು ಮತ್ತು ಸಾಂಸ್ಕೃತಿಕ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ. ಆದರೆ ಯಾರೂ ಅಲ್ಲಿಯ ಮಕ್ಕಳಿಗಾಗಿ ಇಂತಹ ಆಸ್ಪತ್ರೆಯನ್ನು ಸ್ಥಾಪಿಸುವ ಯೋಚನೆ ಮಾಡಿರಲಿಲ್ಲ. ಆ ಎಲ್ಲ ದ್ವೀಪ ರಾಷ್ಟ್ರಗಳಲ್ಲಿ ಮಕ್ಕಳ ಹೃದಯ ಶಸ್ತ್ರಚಿಕಿತ್ಸೆಗಾಗಿ ಒಂದೇ ಒಂದು ಆಸ್ಪತ್ರೆಯೂ ಇಲ್ಲ. ಆದ್ದರಿಂದಲೇ ನಾವು ಇಂತಹ ಚಿಕಿತ್ಸೆಯನ್ನು ಉಚಿತವಾಗಿ ಅಲ್ಲಿ ಮಕ್ಕಳಿಗಾಗಿ ನೀಡುವ ಉದ್ದೇಶದಿಂದ ಈ ಆಸ್ಪತ್ರೆಯನ್ನು ಅಲ್ಲಿ ಸ್ಥಾಪಿಸಿದ್ದೇವೆ. ಸನಾತನ ಧರ್ಮದ ಸಂದೇಶವನ್ನು ಅಲ್ಲಿಯ ಜನರಿಗೆ ತಲುಪಿಸಲು ಇದಕ್ಕಿಂತ ಉತ್ತಮವಾದ ಸಾಧನವು ಬೇರೆ ಯಾವುದಿದೆ? ಅಲ್ಲಿ ಹಲವಾರು ಸಭೆ-ಸಮಾರಂಭಗಳು ನಡೆದವು. ಅಲ್ಲಿಯ ಪ್ರಭುತ್ವದ ಹಲವು ಪ್ರತಿನಿಧಿಗಳನ್ನು ನಾವು ಭೇಟಿ ಮಾಡಿದೆವು. ಅದರಲ್ಲಿ ಆ ದೇಶದ ಅಧ್ಯಕ್ಷರು ಹಾಗೂ ಉಪಪ್ರಧಾನಿಯವರೂ ಸೇರಿದ್ದರು. ನಾವು ಅಲ್ಲಿ ಮಾಡುತ್ತಿದ್ದ ನಿಸ್ವಾರ್ಥ ಸೇವೆಯು ಅವರೆಲ್ಲರ ಹೃದಯವನ್ನು ಸ್ಪರ್ಶಿಸಿ ಅವರಲ್ಲಿ ಮೆಚ್ಚುಗೆಯನ್ನು ಮೂಡಿಸಿತ್ತು.
ಈ ಸಂದರ್ಭದಲ್ಲಿ ಜಗತ್ತು ವ್ಯಾಟಿಕನ್ ಕೇಂದ್ರದಲ್ಲಿ ರೋಮನ್ ಕ್ಯಾಥೋಲಿಕ್ ಕ್ರೖೆಸ್ತರ ಅತ್ಯುಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ರನ್ನು ಕಳೆದುಕೊಂಡಿತು. ಸಮಾನತೆ ಮತ್ತು ಸಾಮಾಜಿಕ ನ್ಯಾಯಗಳಿಂದ ಕೂಡಿದ ಜಗತ್ತಿನ ಆದರ್ಶ ಅವರ ಉಪದೇಶದ ಸಾರವಾಗಿತ್ತು. ಇಂತಹ ಉದಾತ್ತ ಆಧ್ಯಾತ್ಮಿಕ ನಾಯಕನಿಗೆ ನಾವು ನಮ್ಮ ಶ್ರದ್ಧಾಂಜಲಿಯನ್ನು ಸಮರ್ಪಿಸುತ್ತಿದ್ದ ಸಂದರ್ಭದಲ್ಲಿ, ನಮ್ಮ ಮಿತ್ರರೊಬ್ಬರು ಪೋಪ್ ಫ್ರಾನ್ಸಿಸ್ರವರಿಗೆ ಪ್ರಿಯವಾಗಿದ್ದ ಒಂದು ಸಂದೇಶವನ್ನು ನನಗೆ ಕಳುಹಿಸಿದ್ದರು. ಆ ಸಂದೇಶದ ಸಾರ: ‘ನದಿಗಳು ತಮ್ಮ ಜಲವನ್ನು ತಾವೇ ಕುಡಿಯುವುದಿಲ್ಲ; ವೃಕ್ಷಗಳು ತಮ್ಮ ಫಲಗಳನ್ನು ತಾವೇ ತಿನ್ನುವುದಿಲ್ಲ. ನಮ್ಮ ಜಗತ್ತಿಗೆ ಪ್ರಕಾಶವನ್ನು ನೀಡುವ ಸೂರ್ಯನು ನಮ್ಮಿಂದ ಯಾವುದೇ ಪ್ರತಿಫಲವನ್ನು ಅಪೇಕ್ಷಿಸುವುದಿಲ್ಲ ಮತ್ತು ಪುಷ್ಪಗಳು ತಮ್ಮ ಸುಗಂಧವನ್ನು ಪಸರಿಸುವುದು ತಮಗಾಗಿ ಅಲ್ಲವೇ ಅಲ್ಲ.
ಇತರಿಗಾಗಿ ಬದುಕುವುದು ನಿಸರ್ಗದ ಒಂದು ಮೂಲ ಸೂತ್ರ. ನಾವು ಈ ಜಗತ್ತಿನಲ್ಲಿ ಹುಟ್ಟಿರುವುದು ಒಬ್ಬರಿಗೊಬ್ಬರು ಪರಸ್ಪರ ಸಹಾಯ ಮಾಡಲು. ಎಷ್ಟೋ ಅಡೆತಡೆಗಳಿಂದ ಕೂಡಿದ ಈ ಸಂಕೀರ್ಣಮಯ ಜೀವನವು ನಾವು ಸುಖವಾಗಿದ್ದಾಗ ಬಹು ಸುಂದರವಾಗಿ ಕಾಣುತ್ತದೆ. ಅದಕ್ಕಿಂತಲೂ ಸುಂದರವಾದುದೆಂದರೆ ನಾವು ಇತರರನ್ನು ಸಂತೋಷ ಪಡಿಸಿ, ಅವರ ಸುಖವನ್ನು ನೋಡಿದಾಗ!’
ಈ ಸಂದೇಶವನ್ನು ಓದಿದ ಕೂಡಲೇ ನನ್ನ ಸ್ಮರಣೆಗೆ ಬಂದದ್ದು ಒಂದು ಭಾರತೀಯ ಸುಭಾಷಿತ:ಪಿಬಂತಿ ನದ್ಯಃ ಸ್ವಯಮೇವ ನಂಭಃ ಸ್ವಯಂ ನ ಖಾದಂತಿ ಫಲಾನಿ ವೃಕ್ಷಃ |ನಾದಂತಿ ಸಸ್ಯಂ ಖಲು ವಾರಿವಾಹಾಃ ಪರೋಪಕಾರಾಯ ಸತಾಂ ವಿಭೂತಯಃ ||
‘ನದಿಗಳು ತಮ್ಮ ನೀರನ್ನು ತಾವೇ ಕುಡಿಯುವುದಿಲ್ಲ ಹಾಗೂ ವೃಕ್ಷಗಳು ತಮ್ಮ ಫಲಗಳನ್ನು ತಾವೇ ಭಕ್ಷಿಸುವುದಿಲ್ಲ. ಭೂಮಿಯ ಮೇಲೆ ಧಾನ್ಯಗಳನ್ನು ಬೆಳೆಸಲು ನೆರವಾಗುವ ಜಲಪೂರ್ಣ ಮೇಘಗಳು ಆ ಧಾನ್ಯಗಳನ್ನು ಸೇವಿಸುವುದಿಲ್ಲ. ಅಂತೆಯೇ ಸತ್ಪುರುಷರ ಜೀವನದ ಉದ್ದೇಶವು ಮಾನವೀಯತೆಗೆ ನಿಸ್ವಾರ್ಥ ಸೇವೆಯನ್ನು ಸಲ್ಲಿಸುವುದು’. ಪೋಪ್ ಫ್ರಾನ್ಸಿಸ್ರಿಗೆ ಪ್ರಿಯವಾದ ಸಂದೇಶವನ್ನು ನನಗೆ ಕಳುಹಿದ ಮಿತ್ರನಿಗೆ ಅದು ಎಲ್ಲಿಂದ ಸಿಕ್ಕಿತೋ ಗೊತ್ತಿಲ್ಲ. ಸನಾತನ ಧರ್ಮದ ಆಚರಣೆಗೆ ನಿಸ್ವಾರ್ಥತೆಯೇ ಬುನಾದಿ. ನಮ್ಮ ಪ್ರವಾಸವು ಇನ್ನೂ ಮುಗಿದಿಲ್ಲ. ಇಲ್ಲಿಂದ ನಾವು ಮುಂದೆ ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ, ಇಂಡೋನೇಷ್ಯಾ, ಮಲೇಷ್ಯಾ ಹಾಗೂ ಸಿಂಗಾಪುರಗೆ ಹೋಗಲಿದ್ದೇವೆ. ಈ ಕುರಿತಾಗಿ ಮುಂದಿನ ಲೇಖನದಲ್ಲಿ ಬರೆಯುತ್ತೇನೆ.