ಸನಾತನ ಧರ್ಮದ ವಿಚಾರಧಾರೆಗೆ ಜಗತ್ತಿನಲ್ಲಿ ಮನ್ನಣೆ

3-6862c9fec4ff0
Published on
ಪ್ರಾಚೀನ ಕಾಲದಲ್ಲಿ ಜಗತ್ತಿನ ಮೊದಲ ಜಿಜ್ಞಾಸು ತನ್ನನ್ನು ತಾನೇ ಕೇಳಿಕೊಂಡ ಪ್ರಶ್ನೆಗಳೆಂದರೆ, ‘ನಾನು ಯಾರು? ಈ ವಿಶ್ವದೊಡನೆ ನನ್ನ ಸಂಬಂಧ ಏನು?’ ಆತನು ಈ ಪ್ರಶ್ನೆಗಳಿಗೆ ಉತ್ತರಗಳನ್ನು ತನ್ನ ಅಂತರಂಗದಲ್ಲಿಯೇ ಕಂಡುಕೊಂಡದ್ದು ಅತ್ಯಾಶ್ಚರ್ಯಕರ ವಿದ್ಯಮಾನವೇ ಹೌದು.

ಈ ತತ್ವಜ್ಞಾನವು ಭಾರತೀಯ ವೈದಿಕ ವಾšಯದ ಒಂದು ಭಾಗವಾಗಿದ್ದು ಅದ್ವೈತವೆಂದು ಕರೆಯಲ್ಪಡುತ್ತದೆ. ‘ಏಕಂ ಏವ ಅದ್ವಿತೀಯಂ- ಬ್ರಹ್ಮ ಇರುವುದು ಬ್ರಹ್ಮವೊಂದೇ, ಅದನ್ನು ಬಿಟ್ಟು ಎರಡನೆಯದು ಇಲ್ಲವೇ ಇಲ್ಲ,’ ಇದು ಅದ್ವೈತ ಸಿದ್ಧಾಂತದ ಸಾರ ಸರ್ವಸ್ವ. ಇಂದಿನ ವಿಜ್ಞಾನಿಗಳು ಆಧುನಿಕ ಕಾಲದಲ್ಲಿ ಕಬ್ಬಿಣದ ಕಡಲೆಯಾಗಿರುವ ಪ್ರಜ್ಞೆಯ ರಹಸ್ಯವನ್ನು (The hard problem of consciousness) ಅರಿಯಲು ಹರಸಾಹಸ ಮಾಡುತ್ತಿದ್ದಾರೆ.

ಇಂದು ನಮ್ಮ ಜಗತ್ತು ವಿಜ್ಞಾನ ಮತ್ತು ಆಧ್ಯಾತ್ಮಿಕತೆಗಳ ಸಂಗಮ ಬಿಂದುವಿನಲ್ಲಿ ನಿಂತಿದೆ. ಇದಕ್ಕೆ ಸ್ಪೂರ್ತಿಯನ್ನು ನೀಡಿರುವುದು ಭಾರತೀಯ ಉಪನಿಷತ್ತಿನ ಸಿದ್ಧಾಂತ ‘ಪ್ರಜ್ಞಾನಂ ಬ್ರಹ್ಮ- ಅತ್ಯುನ್ನತ ಪ್ರಜ್ಞೆಯೇ ಬ್ರಹ್ಮ ಅಥವಾ ದಿವ್ಯತೆ’ (ಐತರೇಯ ಉಪನಿಷತ್ತು). ಸನಾತನ ಧರ್ಮದಲ್ಲಿ ದಿವ್ಯತೆ ಅಥವಾ ಭಗವಂತನ ನಿರಾಕಾರ ತತ್ವವನ್ನು ‘ಬ್ರಹ್ಮ’ವೆಂದು ಕರೆಯುತ್ತಾರೆ. ಇದು ಸಂಸ್ಕೃತ ಮೂಲ ಧಾತುವಾದ ‘ಬೃಹತ್’ ಎಂಬುದರಿಂದ ಉದ್ಭವವಾಗಿದೆ. ಪ್ರಜ್ಞಾನ ಅಥವಾ ಅತ್ಯುನ್ನತ ಪ್ರಜ್ಞೆಯೇ ‘ಬ್ರಹ್ಮ/ಭಗವಂತ/ದಿವ್ಯತೆ’ ಎಂದು ಉಪನಿಷತ್ತು ಘೊಷಿಸಿದೆ. ನಾವು ಪ್ರಜ್ಞೆ ಅಥವಾ ಅರಿವಿನ ಮೂರು ಸ್ತರಗಳಲ್ಲಿ ಅಸ್ತಿತ್ವವನ್ನು ಹೊಂದಿದ್ದೇವೆ.

ಮೊದಲನೆಯದು, ನಮ್ಮ ಭೌತಿಕ ದೇಹದ ಮತ್ತು ಇಂದ್ರಿಯಗಳ ಅರಿವು (Conscious). ಎರಡನೆಯದು, ವಿವೇಚನಾತ್ಮಕ ಮನಸ್ಸು ಮತ್ತು ಬುದ್ಧಿಗಳ ಅರಿವು (Conscience). ಮೂರನೆಯದು, ರೂಪ ನಾಮಗಳಿಲ್ಲದೆ ವಿದ್ಯುಚ್ಛಕ್ತಿಯಂತೆ ನಮ್ಮ ದೇಹ ಮತ್ತು ಮನಸ್ಸುಗಳ ಮೂಲಕ ಓತಪೋ›ತವಾಗಿ ಹರಿಯುವ, ಎಲ್ಲ ಅಸ್ತಿತ್ವವನ್ನೂ ಅರಿಯುವ ಅತ್ಯುನ್ನತ ಪ್ರಜ್ಞೆ (Consciousness). ಈ ಪ್ರಜ್ಞೆಯು ನಮ್ಮ ವ್ಯಕ್ತಿತ್ವದ ತಂತ್ರಾಂಶವಾದ (Software) ಮನಸ್ಸು ಮತ್ತು ಯಂತ್ರಾಂಶವಾದ (Hardware) ದೇಹಗಳಿಗೆ ಅರಿವು ಅಥವಾ ಚೈತನ್ಯಗಳನ್ನು ನೀಡುತ್ತದೆ.

ಆಲ್ಬರ್ಟ್ ಐನ್​ಸ್ಟೈನ್​ನ ಕೊಡುಗೆಯಾದ ಏಕೀಕೃತ ಕ್ಷೇತ್ರ ಸಿದ್ಧಾಂತವು (The Unified Field Theory) ನಮ್ಮ ವಿಶ್ವದಲ್ಲಿ ಇರುವ ಅತ್ಯಂತ ಚಿಕ್ಕ ಪರಮಾಣುವಿನಿಂದ ಹಿಡಿದು ಅತ್ಯಂತ ದೊಡ್ಡ ನಕ್ಷತ್ರಪುಂಜದವರೆಗೆ ಇಡೀ ವಿಶ್ವವನ್ನು ಒಟ್ಟಿಗೇ ಹಿಡಿದಿಟ್ಟುಕೊಂಡಿರುವ ಶಕ್ತಿಗಳ ಬಗ್ಗೆ ತಿಳಿಸಿಕೊಡುತ್ತದೆ. ಅದರ ನಂತರ ಮ್ಯಾಕ್ಸ್ ಪ್ಲಾಂಕ್ ವಿಜ್ಞಾನ ಜಗತ್ತಿಗೆ ನೀಡಿದ ಕ್ವಾಂಟಮ್ ಕ್ಷೇತ್ರ ಸಿದ್ಧಾಂತವು ವಿಶ್ವದಲ್ಲಿರುವ ಎಲ್ಲ ಮೂಲಭೂತ ಘಟಕಗಳ ಒಂದಕ್ಕೊಂದು ಪರಸ್ಪರ ಹೆಣೆಯಲ್ಪಟ್ಟಿವೆಯೆಂದು ತಿಳಿಸಿಕೊಡುವುದು ಮಾತ್ರವಲ್ಲದೆ ಎಲ್ಲ ಮೂಲಭೂತ ಘಟಕಗಳ ವರ್ತನೆ ಒಂದಕ್ಕೊಂದು ಪರಸ್ಪರ ಸಂಬಂಧಿಸಿದೆಯೆಂದು ಸಾರುತ್ತದೆ.

ಭೌತಶಾಸ್ತ್ರದಲ್ಲಿ 2022ರಲ್ಲಿ ನೊಬೆಲ್ ಬಹುಮಾನವನ್ನು ಪಡೆದ ಮೂವರು ವಿಜ್ಞಾನಿಗಳು ವಿಶ್ವ ನಿರ್ವಣದ ಮೂಲಭೂತ ಘಟಕಗಳಾದ ಫೋಟಾನ್​ಗಳ ಬಗ್ಗೆ ಅದ್ಭುತ ಅನ್ವೇಷಣೆ ಮಾಡಿದ್ದಾರೆ. ಯಾವಾಗಲೂ ಎರಡು ಫೋಟಾನ್​ಗಳು ಜೊತೆಯಲ್ಲಿಯೇ ಹೆಣೆಯಲ್ಪಟ್ಟಿದ್ದು (Entangled photons) ಅವು ಪರಸ್ಪರ ವಿರುದ್ಧ ದಿಕ್ಕುಗಳಲ್ಲಿ ತಿರುಗುತ್ತಿರುತ್ತವೆ. ಈ ಎರಡು ಫೋಟಾನ್​ಗಳನ್ನು ನಾವು ಬಿಡಿಸಿ ವಿಶ್ವದ ಎರಡು ಮೂಲೆಗಳಿಗೆ ಕಳುಹಿಸಿದರೂ, ಅವು ಪರಸ್ಪರ ವಿರುದ್ಧ ದಿಕ್ಕುಗಳಲ್ಲಿಯೇ ತಿರುಗುತ್ತಿರುತ್ತವೆ. ಆ ಪೈಕಿ ಒಂದರ ದಿಕ್ಕನ್ನು ನಾವು ಕಂಡುಹಿಡಿದರೆ ಇನ್ನೊಂದರ ದಿಕ್ಕನ್ನು ಸುಲಭವಾಗಿ ತಿಳಿಯಬಹುದು. ಈ ವಿದ್ಯಮಾನದಿಂದ ಉಗಮವಾಗುವ ಒಂದು ಸತ್ಯವೆಂದರೆ, ಅವೆರಡೂ ಎಷ್ಟೇ ದೂರದಲ್ಲಿದ್ದರೂ ಅವುಗಳ ಮಧ್ಯೆ ಸಂವಹನವು ಇದ್ದೇ ಇರುತ್ತದೆ. ಈ ಸಂವಹನ ಕ್ರಿಯೆಗೆ ಮಾಧ್ಯಮ ಯಾವುದು? ಅದನ್ನೇ ಕ್ವಾಂಟಮ್ ಕ್ಷೇತ್ರವೆಂದು ಹೇಳಲಾಗಿದೆ. ಎಲ್ಲ ಮೂಲಭೂತ ಘಟಕಗಳ ಮಧ್ಯೆ ಸಂಬಂಧಗಳನ್ನು ಕಲ್ಪಿಸುವ ಕ್ವಾಂಟಮ್ ಕ್ಷೇತ್ರದಲ್ಲಿ ದೇಶ-ಕಾಲಗಳನ್ನೂ ಮೀರಿರುವ ತಿಳಿವಳಿಕೆ/ಅರಿವು ಓತಪೋ›ತವಾಗಿ ವಿಶ್ವವನ್ನೆಲ್ಲ ವ್ಯಾಪಿಸಿದೆ.

ಈಗ ನಾವು ನಮ್ಮ ಉಪನಿಷತ್ತುಗಳಿಗೆ ಹಿಂತಿರುಗೋಣ. ಕೇನೋಪನಿಷತ್ತಿನ ಮೊದಲನೆಯ ಶ್ಲೋಕದಲ್ಲಿ ಒಂದು ಗಹನವಾದ ಪ್ರಶ್ನೆಯಿದೆ. ಅದು ನಮ್ಮ ಇಂದ್ರಿಯಗಳ ಕ್ರಿಯಾವೈಖರಿಯ ಬಗ್ಗೆ. ನಮ್ಮ ಇಂದ್ರಿಯಗಳು ಅವುಗಳಿಗೆ ಸಂಬಂಧಪಟ್ಟ ಇಂದ್ರಿಯ ವಸ್ತುಗಳನ್ನು ಹೇಗೆ ಗ್ರಹಿಸುತ್ತವೆ? ಒಬ್ಬ ಜೀವಶಾಸ್ತ್ರ ವಿಜ್ಞಾನಿ ಈ ಪ್ರಶ್ನೆಗೆ ಉತ್ತರವಾಗಿ, ‘ಇದೊಂದು ಜೀವಶಾಸ್ತ್ರದ ಸಹಜ ಪ್ರಕ್ರಿಯೆಯೆಂದು ಹೇಳಬಹುದು’. ಆದರೆ ಉಪನಿಷತ್ತಿನ ಋಷಿಗಳು, ನಾವು ನಮ್ಮ ಇಂದ್ರಿಯಗಳ ಮೂಲಕ ಪಡೆಯುವ ಅನುಭವಗಳ ಹಿಂದೆ ಇರುವುದು ನಮ್ಮ ಮಿದುಳು ಮತ್ತು ಇಂದ್ರಿಯಗಳು ಮಾತ್ರವಲ್ಲ. ಈ ಪ್ರಕ್ರಿಯೆ ಅದಕ್ಕಿಂತ ಹೆಚ್ಚು ಗಹನ ಮತ್ತು ಸೂಕ್ಷ್ಮ ವಾಗಿದೆಯೆಂದು ಹೇಳುತ್ತಾರೆ.

ಕೇನೇಷಿತಂ ಪತತಿ ಪ್ರೇಷಿತಂ ಮನಃ ಕೇನ ಪ್ರಾಣಃ ಪ್ರಥಮಃ ಪ್ರೖೆತಿ ಯುಕ್ತಃ |

ಕೇನೇಷಿತಾಂ ವಾಚಮಿಮಾಂ ವದಂತಿ ಚಕ್ಷುಃ ಶ್ರೋತ್ರಂ ಕ ವು ದೇವೋ ಯುನಕ್ತಿಃ ||

(ಕೇನೋಪನಿಷತ್- 1)

‘ಯಾರಿಂದ/ಯಾವುದರಿಂದ ಪ್ರೇರೇಪಿತವಾಗಿ ಮನಸ್ಸು, ಇಂದ್ರಿಯಗಳ ಮೂಲಕ ಸಂಬಂಧಪಟ್ಟ ಇಂದ್ರಿಯವಸ್ತುಗಳೆಡೆಗೆ ಹೋಗುತ್ತದೆ? ಯಾರ ಆಜ್ಞೆಗೆ ಅನುಗುಣವಾಗಿ ಪ್ರಥಮದಲ್ಲಿ ಪ್ರಾಣಶಕ್ತಿಯು ತನ್ನ ಕಾರ್ಯವನ್ನು ನಿರ್ವಹಿಸುತ್ತದೆ? ಯಾರಿಂದ ಪ್ರೇರೇಪಿತವಾಗಿ ಮಾನವರು ಮಾತನಾಡುತ್ತಾರೆ? ನಮ್ಮ ಕಣ್ಣುಗಳು ಹಾಗೂ ಕಿವಿಗಳನ್ನು ಯಾವ ದೇವತೆಗಳು ನಿರ್ದೇಶಿಸುತ್ತಾರೆ?’

ಈ ಪ್ರಶ್ನೆಗಳಿಗೆ ಉತ್ತರವನ್ನು ಕೊಡುತ್ತ, ಈ ಉಪನಿಷತ್ತಿನ ಎರಡನೆಯ ಶ್ಲೋಕವು:

ಶ್ರೋತ್ರಸ್ಯ ಶ್ರೋತ್ರಂ ಮನಸೋ ಮನೋ ಯದ್ವಾಚೋ ಹ ವಾಚಂ

ಸ ಉ ಪ್ರಾಣಸ್ಯ ಪ್ರಾಣಶ್ಚಕ್ಷುಷ್ಚಚಕ್ಷುಃ |

ಅತಿಮುಚ್ಯ ಧೀರಾಃ ಪ್ರೇತ್ಯಾಸ್ಮಾಲ್ಲೋಕಾದಮೃತಾ ಭವಂತಿ ||

‘ಅದು (ಮೇಲಿನ ಪ್ರಶ್ನೆಗಳಿಗೆ ಉತ್ತರವಾಗಿರುವುದು) ಕಿವಿಗೆ ಕಿವಿಯಾಗಿದೆ, ಮನಸ್ಸಿನ ಮನಸ್ಸಾಗಿದೆ, ನಾಲಿಗೆಯ ನಾಲಿಗೆಯಾಗಿದೆ, ಪ್ರಾಣಕ್ಕೆ ಪ್ರಾಣವಾಗಿದೆ ಹಾಗೂ ಕಣ್ಣಿನ ಕಣ್ಣಾಗಿದೆ. ಈ ಮಿಥ್ಯಾ ಪ್ರಪಂಚವನ್ನು ಅತಿಕ್ರಮಿಸಿದ ಧೀರರು (ಜ್ಞಾನಿಗಳು) ಅಮೃತತ್ವವನ್ನು ಪಡೆಯುತ್ತಾರೆ’.

ಈ ಉಪನಿಷತ್ತು ಇನ್ನೂ ಮುಂದೆ ಹೋಗಿ ನಮ್ಮ ಅರಿವಿನ ಮಾಧ್ಯಮವಾದ ಮನಸ್ಸಿನ ಹಿನ್ನಲೆಯಲ್ಲಿರುವ ಮೂಲಪ್ರಜ್ಞೆ, ಹಾಗೂ ಅದರೊಡನೆ ಮನಸ್ಸಿನ ಸಂಬಂಧದ ಕುರಿತಾಗಿ ತಿಳಿಸಿಕೊಡುತ್ತದೆ:

ಯನ್ಮನಸಾ ನ ಮನುತೇ ಯೇನಾಹುರ್ಮನೋ ಮತಮ್ |

ತದೇವ ಬ್ರಹ್ಮಾ ತ್ವಂ ವಿದ್ಧಿ ನೇದಂ ಯದಿದಮುಪಾಸತೇ ||

(ಕಠೋಪನಿಷತ್-5)

‘ಯಾವುದನ್ನು ಮನಸ್ಸು ಗ್ರಹಿಸಲು ಸಾಧ್ಯವಿಲ್ಲ, ಆದರೆ ಯಾವುದರಿಂದಾಗಿ ಮನಸ್ಸು ತನ್ನ ಗ್ರಹಣ ಶಕ್ತಿಯನ್ನು ಪಡೆಯುತ್ತದೆ, ಅದುವೇ ಬ್ರಹ್ಮ/ದಿವ್ಯತೆ/ಭಗವಂತ ಎಂದು ನೀನು ತಿಳಿದುಕೋ; ಲೋಕದಲ್ಲಿ ಸಾಮಾನ್ಯವಾಗಿ ಜನರು ಬ್ರಹ್ಮವೆಂದು ಭಾವಿಸಿ ಪೂಜಿಸುವ ವಸ್ತು ಅದಲ್ಲ’.

ಹೀಗೆ ನಾವು ನಮ್ಮ ಇಂದ್ರಿಯಗಳ ಮೂಲಕ ಭೌತಿಕ ಪ್ರಪಂಚದ ವಿವಿಧ ವಸ್ತು-ವಿಷಯಗಳನ್ನು ಗ್ರಹಿಸುವುದರ ಹಿನ್ನಲೆಯಲ್ಲಿರುವುದು ಇಂದ್ರಿಯಗಳು ಮತ್ತು ಮಿದುಳು ಮಾತ್ರವಲ್ಲ. ಅದಕ್ಕಿಂತಲೂ ಮೂಲಭೂತ ಹಾಗೂ ಸೂಕ್ಷ ್ಮಮ ಚೈತನ್ಯ ಅಥವಾ ಪ್ರಜ್ಞೆಯು ಈ ಎಲ್ಲ ಪ್ರಕ್ರಿಯೆಗಳ ಹಿಂದೆ ಇದೆಯೆಂಬುದು ನಮ್ಮ ಉಪನಿಷತ್ತಿನ ಋಷಿಗಳು ದರ್ಶಿಸಿದ ಸತ್ಯ. ಭೌತಿಕ ದೇಶ-ಕಾಲಗಳನ್ನು ಮೀರಿದ ಪ್ರಜ್ಞಾ ಕ್ಷೇತ್ರದ ಬಗ್ಗೆ ಉಪನಿಷತ್ತುಗಳು ತಿಳಿಸುತ್ತವೆ. ಇದನ್ನೇ ವಿದ್ಯಾರಣ್ಯ ಮುನಿಯು ತನ್ನ ಕೃತಿ, ‘ ದೃಗ್ದೃಶ್ಯವಿವೇಕ’ದಲ್ಲಿ ಸರಳವಾಗಿ ವಿವರಿಸುತ್ತಾರೆ. ದೃಕ್ ಎಂದರೆ ದರ್ಶಿಸುವವನು. ದೃಶ್ಯವೆಂದರೆ ದರ್ಶಿಸಲ್ಪಟ್ಟ ವಸ್ತು/ವಿಷಯ.

ರೂಪಂ ದೃಶ್ಯಂ ಲೋಚನಂ ದೃಕ್ ತದೃಶ್ಯಂ ದೃಕ್ತು ಮಾನಸಮ್ |

ದೃಶ್ಯಾ ಧೀವೃತ್ತಯಃ ಸಾಕ್ಷೀ ದೃಗೇವ ನ ತು ದೃಶ್ಯತೇ ||

( ದೃಗ್ದೃಶ್ಯವಿವೇಕ-1)

‘ಒಂದು ರೂಪವನ್ನು ನೋಡಿದಾಗ ಅದರ ದರ್ಶಕ ಕಣ್ಣು. ಆದರೆ ಹಿನ್ನೆಲೆಯಲ್ಲಿ, ಮನಸ್ಸು ದರ್ಶಕನಾಗಿ ಕಣ್ಣನ್ನು ದೃಶ್ಯವನ್ನಾಗಿ ನೋಡುತ್ತದೆ. ಇನ್ನೂ ಹಿನ್ನೆಲೆಗೆ ಹೋದಾಗ ಮನಸ್ಸಿನ ಪ್ರಕ್ರಿಯೆಗಳು ದೃಶ್ಯವಾಗುತ್ತವೆ ಹಾಗೂ ಅದನ್ನು ದರ್ಶಿಸುವವನು/ದರ್ಶಕನು ಸಾಕ್ಷಿಯಾಗುತ್ತಾನೆ. ಆದರೆ ಈ ಸಾಕ್ಷಿಯನ್ನು ದರ್ಶಿಸುವವರು ಯಾರೂ ಇಲ್ಲ’.

ರೂಪಂ ದೃಶ್ಯಂ ಲೋಚನಂ ದೃಕ್- ರೂಪವು ‘ದೃಶ್ಯ’ವಾದರೆ, ಅದನ್ನು ದರ್ಶಿಸುವುದು ಕಣ್ಣು.

ತದೃಶ್ಯಂ ದೃಕ್ತು ಮಾನಸಮ್ ಕಣ್ಣು ದೃಶ್ಯವಾದಾಗ ಅದನ್ನು ದರ್ಶಿಸುವುದು ಮನಸ್ಸು.

ದೃಶ್ಯಾ ಧೀವೃತ್ತಯಃ ಸಾಕ್ಷೀ- ಮನಸ್ಸಿನ ಆಲೋಚನೆ ಇತ್ಯಾದಿಗಳು ದೃಶ್ಯವಾದಾಗ ಅದನ್ನು ದರ್ಶಿಸುವವನು ಸಾಕ್ಷಿ (ಈ ಸಾಕ್ಷಿಯೇ ಮೂಲ ಚೈತನ್ಯ- ಬ್ರಹ್ಮ).

ದೃಗೇವ ನ ತು ದೃಶ್ಯತೇ- ಸಾಕ್ಷಿಯು ಎಲ್ಲವನ್ನೂ ದರ್ಶಿಸುತ್ತಾನೆ, ಆದರೆ ಅದು ಯಾವುದರಿಂದಲೂ ದರ್ಶಿಸಲ್ಪಡುವುದಿಲ್ಲ.

ಹೀಗೆ ಪ್ರಾಚೀನ ಭಾರತೀಯ ವೇದಜ್ಞಾನವು ಕರಾರುವಕ್ಕಾಗಿ ಪ್ರಜ್ಞೆ/ಅರಿವಿನ ವಿಜ್ಞಾನವನ್ನು ನಮ್ಮ ಮುಂದಿಡುತ್ತದೆ. ಇದರ ಆಧಾರದಲ್ಲಿ ದರ್ಶಿಸಲ್ಪಡುವ ವಿಶ್ವ, ಅದರ ದರ್ಶಕ ಹಾಗೂ ದರ್ಶನ ಪ್ರಕ್ರಿಯೆ ಬಗ್ಗೆ ತಿಳಿದುಕೊಳ್ಳಬಹುದು. ಈ ಮೂರೂ ಬೇರೆಬೇರೆಯಲ್ಲ; ಸತ್ಯವಾದ ಮೂಲಪ್ರಜ್ಞಾಸ್ತರದಿಂದ ನೋಡಿದಾಗ ಈ ಮೂರೂ ಒಂದೇ ಆಗುತ್ತವೆ.

ಅತ್ಯುನ್ನತ ಜ್ಞಾನವಾದ ಸಮಸ್ತ ಅಸ್ತಿತ್ವದ ಏಕತ್ವವನ್ನು ಸಾರುವ ಅದ್ವೆ ೖತ ಸಿದ್ಧಾಂತವನ್ನು ಪ್ರತಿಪಾದಿಸುವ ಗ್ರಂಥಗಳ ಪೈಕಿ ಅಷ್ಟಾವಕ್ರ ಗೀತೆ ಪ್ರಮುಖವಾದುದು. ಈ ಗ್ರಂಥದಲ್ಲಿ ವಿವರಿಸಿರುವಂತೆ ದರ್ಶಿಸಲ್ಪಡುವ ವಸ್ತು, ದರ್ಶಕ ಮತ್ತು ದರ್ಶನ ಪ್ರಕ್ರಿಯೆಗಳು ಅಥವಾ ಜ್ಞೇಯ, ಜ್ಞಾತ ಹಾಗೂ ಜ್ಞಾನಗಳು ಬೇರೆಬೇರೆಯಲ್ಲ. ಹೇಗೆ ಸಮುದ್ರ, ಸಮುದ್ರದ ನೀರು ಮತ್ತು ಅಲೆಗಳು ಬೇರೆಬೇರೆಯಲ್ಲವೋ ಅದೇ ರೀತಿಯಲ್ಲಿ ಈ ಮೂರೂ ಒಂದೇ. ಸತ್ಯವಾಗಿ ಅಸ್ತಿತ್ವದಲ್ಲಿರುವುದೆಲ್ಲ ಒಂದೇ ಒಂದು, ಅದು ಪ್ರಜ್ಞೆ ಅಥವಾ ಅರಿವು. ಅದನ್ನೇ ‘ಆತ್ಮ’ ಅಥವಾ ‘ಬ್ರಹ್ಮ’ವೆಂದು ಕರೆಯುತ್ತಾರೆ.

ಯಥಾ ನ ತೋಯತೋ ಭಿನ್ನಾಸ್ತರಂಗಾಃ ಫೇನಬುದ್ಭುದಾಃ |

ಆತ್ಮನೋ ನ ತಥಾ ಭಿನ್ನಂ ವಿಶ್ವಮಾತ್ಮವಿನಿರ್ಗತಮ್ ||

(ಅಷ್ಟಾವಕ್ರಗೀತೆ- 4)

‘ಯಾವ ರೀತಿಯಲ್ಲಿ ಅಲೆಗಳು, ನೊರೆ ಮತ್ತು ನೀರಿನ ಗುಳ್ಳೆಗಳು ನೀರಿನಿಂದ ಪ್ರತ್ಯೇಕವಾಗಿಲ್ಲವೋ ಅದೇ ರೀತಿಯಲ್ಲಿ ಆತ್ಮನಿಂದ ಉಗಮವಾಗಿರುವ ಸಮಸ್ತವೂ ಆತ್ಮವೇ ಆಗಿದೆ’.

ಜ್ಞಾನಂ ಜ್ಞೇಯಂ ತಥಾ ಜ್ಞಾತಾ ತ್ರಿತಯಂ ನಾಸ್ತಿ ವಾಸ್ತವಮ್ |

ಅಜ್ಞಾನದ್ಭಾತಿ ಯತ್ರೇದಂ ಸೋಹಮಸ್ಮಿ ನಿರಂಜನಃ ||

(ಅಷ್ಟಾವಕ್ರಗೀತೆ- 15)

‘ಜ್ಞಾನ, ಜ್ಞೇಯ ಮತ್ತು ಜ್ಞಾತ- ಸತ್ಯವಾಗಿ ಈ ಮೂರೂ ಇಲ್ಲವೇ ಇಲ್ಲ. ಈ ಮೂರೂ (ಮನಸ್ಸಿನಿಂದ ಉದ್ಭವವಾಗುವ) ಅಜ್ಞಾನದಿಂದಾಗಿ, ಇರುವಂತೆ ಭಾಸವಾಗುವುದು ನಾನು ಎಂಬ ನಿರಂಜನ ಪ್ರಜ್ಞೆಯಲ್ಲಿಯೇ’.

ಅಷ್ಟಾವಕ್ರ ಋಷಿಯು ಮೇಲೆ ಹೇಳಿರುವ ಆತ್ಮವು ಮತ್ತು ಬ್ರಹ್ಮವು ಒಂದೇ ಆಗಿದೆ. ಆತ್ಮ ಅಥವಾ ಬ್ರಹ್ಮವೆಂಬುದು ಒಂದು ಅನಂತಪ್ರಜ್ಞಾಸಾಗರ. ಆಧುನಿಕ ವಿಜ್ಞಾನದ ಕ್ವಾಂಟಮ್ ಕ್ಷೇತ್ರದಲ್ಲಿ ಎಲ್ಲ ಕಣಗಳೂ ಇರುವಂತೆ, ಸಮಸ್ತ ಅಸ್ತಿತ್ವವು ಈ ಪ್ರಜ್ಞಾಸಾಗರದಲ್ಲಿಯೇ ಇದೆ. ಈಗಿನ ಕಂಪ್ಯೂಟರ್ ಪ್ರಪಂಚದಲ್ಲಿ ಕ್ವಾಂಟಮ್ ಕ್ಷೇತ್ರವನ್ನು ಮಾಧ್ಯಮವನ್ನಾಗಿ ಉಪಯೋಗಿಸಿಕೊಂಡು ಲೆಕ್ಕಾಚಾರವನ್ನು ಮಾಡುವ (Quantum computing) ಗಣಕಯಂತ್ರಗಳನ್ನು ನಿರ್ವಿುಸಲು ಸಂಶೋಧನೆಗಳು ನಡೆಯುತ್ತಿವೆ. ಇಂತಹ ಸಂಶೋಧನೆಗಳ ಮೂಲಕ ಇದನ್ನು ಸಾಧಿಸಿದಾಗ, ನಮ್ಮ ಸಂಪರ್ಕ ವಿಧಾನಗಳಲ್ಲಿ ಕ್ರಾಂತಿಯೇ ಆಗುತ್ತದೆ. ಈಗಿನ ಗಣಕಯಂತ್ರಗಳು ಕಾರ್ಯವೆಸಗುವ ವೇಗಕ್ಕಿಂತ ಎಷ್ಟೋ ದಶಲಕ್ಷ ಪಾಲು ವೇಗದಲ್ಲಿ ಕ್ವಾಂಟಮ್ ಕ್ಷೇತ್ರವನ್ನು ಉಪಯೋಗಿಸಿಕೊಂಡು ಕಾರ್ಯಮಾಡುವ ಗಣಕಯಂತ್ರಗಳು ಲೆಕ್ಕಾಚಾರಗಳನ್ನು ಮಾಡುತ್ತವೆ.

ಆಗ ನಾವು ಭೌತಿಕ ಪ್ರಪಂಚದ ದೇಶ-ಕಾಲಗಳ ಎಲ್ಲ ಇತಿಮಿತಿಗಳನ್ನು ಮೀರಲು ಸಾಧ್ಯವಾಗುತ್ತದೆ. ಇದನ್ನೇ ನಮ್ಮ ಋಷಿ-ಯೋಗಿಗಳು ಸಾಧಿಸಿದ್ದರು. ಆದ್ದರಿಂದಲೇ ಅವರು ಯಾವುದೇ ಪ್ರತ್ಯಕ್ಷ ಮಾಧ್ಯಮವಿಲ್ಲದೇ ಒಬ್ಬರನ್ನೊಬ್ಬರು ಸಂರ್ಪಸುತ್ತಿದ್ದರು. ಅವರು ತಮ್ಮ ಮನಸ್ಸುಗಳನ್ನು ಅತ್ಯುನ್ನತ ಪ್ರಜ್ಞಾಸ್ತರಕ್ಕೆ ಕೊಂಡುಹೋಗಿ ಇಂತಹ ಸಂಪರ್ಕವನ್ನು ಸಾಧಿಸಿದ್ದರು. ಈ ಸಂಪರ್ಕಕ್ಕೆ ಭೌತಿಕ ಪ್ರಪಂಚದ ಯಾವ ಇತಿಮಿತಿಗಳೂ ಅಡ್ಡಿಯಾಗುವುದಿಲ್ಲ. ಇಂತಹ ಸಂಪರ್ಕಕ್ಕೆ ಯಾವ ಸಮಯವೂ ಬೇಕಾಗಿರುವುದಿಲ್ಲ. ಅಂತಹ ಪ್ರಜ್ಞಾಸ್ತರದಲ್ಲಿ ಅವರು ಅಸ್ತಿತ್ವದಲ್ಲಿರುವ ಸಕಲ ಜ್ಞಾನವನ್ನೂ ಅರಿಯಬಲ್ಲವರಾಗಿದ್ದರು.

ನಮ್ಮ ವೇದ ಹಾಗೂ ಇತರ ಶಾಸ್ತ್ರಗಳಲ್ಲಿ ಇಂತಹ ಯೋಗಿಗಳ ಅತಿ ಮಾನುಷ ಸಾಮರ್ಥ್ಯಗಳ ಬಗ್ಗೆ ಹಲವು ಉಲ್ಲೆಖಗಳಿವೆ. ಈ ಕುರಿತಾಗಿ ಇಂದಿನ ವಿಜ್ಞಾನವು ಇದೀಗ ಅನ್ವೇಷಿಸಲು ಪ್ರಾರಂಭಿಸಿವೆ. ವಿಜ್ಞಾನಿಗಳಿಗೆ ಇಂತಹ ಅತಿಮಾನುಷ ಶಕ್ತಿಗಳು (Superhuman powers) ಭೌತಿಕ ಪ್ರಪಂಚದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಉದ್ದೇಶದ ದೃಷ್ಟಿಯಿಂದ ಆಕರ್ಷಣೀಯವಾಗಿ ಕಾಣಬಹುದು. ಆದರೆ ನಮ್ಮ ವೇದಶಾಸ್ತ್ರಗಳು ನಮ್ಮನ್ನು ಅದಕ್ಕಿಂತ ಅತೀತವಾದ ಸಮಸ್ತ ಅಸ್ತಿತ್ವದ ಏಕತ್ವದ ಅನುಭವವನ್ನು ಪಡೆದು ಜೀವನ ಸಾಫಲ್ಯವನ್ನು ಕಂಡುಕೊಳ್ಳಲು ಪ್ರೋತ್ಸಾಹಿಸುತ್ತವೆ. ವಿಶ್ವದ ಹಿನ್ನೆಲೆಯಲ್ಲಿರುವ ಅನಂತಜ್ಞಾನಸಾಗರವೇ ‘ನಾನು’ ಎಂಬ ಅನುಭವವೇ, ಜೀವನ ಸಾಫಲ್ಯತೆಯ ಪರಾಕಾಷ್ಠೆ. ಇಂತಹ ಸಾಫಲ್ಯತೆಯನ್ನು ಪಡೆದಾಗ ‘ನಾವು ಮತ್ತು ಅವರು’ ಎಂಬ ಬೇಧಭಾವನೆಗಳು ತೊಲಗಿಹೋಗುತ್ತವೆ. ಇಂದು ಮಾನವ ಜನಾಂಗವನ್ನು ವಿಭಜಿಸುತ್ತಿರುವ ಎಲ್ಲ ರೀತಿಯ ಅಡ್ಡಗೊಡೆಗಳು ಬಿದ್ದುಹೋಗುತ್ತವೆ.

ಯಾವುದೇ ವಿಚಾರಧಾರೆಯ ಕಾಲವು ಸನ್ನಿಹಿತವಾದಾಗ ಅದಕ್ಕಿಂತ ಶಕ್ತಿಯುತವಾದದ್ದು, ವಿಶ್ವದಲ್ಲಿ ಏನೂ ಇರುವುದಿಲ್ಲವೆಂದು ಮೇಧಾವಿಗಳು ಹೇಳುತ್ತಾರೆ. ಇಂದು, ನಿಸ್ಸಂದೇಹವಾಗಿ ಸನಾತನ ಧರ್ಮವು ಸಾರುವ ‘ಸರ್ವರ ಏಕತ್ವ’ದ ವಿಚಾರಧಾರೆಯ ಕಾಲವು ಇದೀಗ ಸನ್ನಿಹಿತವಾಗಿದೆ!

(ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net