

ಕೋವಿಡ್ ಸಾಂಕ್ರಾಮಿಕದಿಂದ ಉಂಟಾದ ದುಷ್ಪರಿಣಾಮಗಳ ಪೈಕಿ ಮಾನಸಿಕ ಅಸ್ವಸ್ಥತೆಯು ಜಗತ್ತಿನಲ್ಲಿ ಒಂದು ಬಹು ಮುಖ್ಯ ಸಮಸ್ಯೆಯಾಗಿ ಹೊರಹೊಮ್ಮಿದೆ. ಇತ್ತೀಚೆಗಿನವರೆಗೆ ಮಾನಸಿಕ ಅಸ್ವಸ್ಥತೆಯನ್ನು ಸಾಮಾಜಿಕ ಕಳಂಕವಾಗಿ ಜನರು ಪರಿಗಣಿಸುತ್ತಿದ್ದುದರಿಂದ, ಬಹುಮಂದಿ ಮಾನಸಿಕ ರೋಗಿಗಳು ಸಮಸ್ಯೆಯನ್ನು ಹೊರಗೆ ಹೇಳಿಕೊಳ್ಳಲು ಭಯಪಡುತ್ತಿದ್ದರು. ಹೀಗೆ ಮುಚ್ಚಿಟ್ಟುಕೊಂಡುದರಿಂದಾಗಿ, ಅದು ಮತ್ತಷ್ಟು ಉಲ್ಬಣವಾಗಿ, ದಾರುಣ ದುಃಖಕ್ಕೆ ಗುರಿಯಾದವರು ಮನೋವ್ಯಥೆಯಿಂದ ತಪ್ಪಿಸಿಕೊಳ್ಳಲು ಆತ್ಮಹತ್ಯೆಗೆ ಶರಣಾಗುತ್ತಿದ್ದರು. ಇಂತಹ ಪರಿಸ್ಥಿತಿ ಸುಧಾರಿಸಲು ವಿಶ್ವಸಂಸ್ಥೆಯು ಆರಿಸಿಕೊಂಡಿರುವ ಹದಿನೇಳು ಸುಸ್ಥಿರ ಅಭಿವೃದ್ಧಿ ಗುರಿಗಳ (sustainable development goals) ಪೈಕಿ ಮೂರನೆಯದರಲ್ಲಿ ಮಾನಸಿಕ ಅಸ್ವಸ್ಥತೆಯ ಪರಿಹಾರದ ಕುರಿತು ಪ್ರಸ್ತಾಪ ಮಾಡಲಾಗಿದೆ.
ಭಾರತದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ರಾಷ್ಟಿ›ೕಯ ಸ್ವಾಸ್ಥ್ಯ ಕಾರ್ಯಕ್ರಮದ ಸಂಶೋಧನೆಯ ಪ್ರಕಾರ, ನಮ್ಮ ದೇಶದಲ್ಲಿ ಆರರಿಂದ ಏಳು ಕೋಟಿ ಜನರು ಸಾಮಾನ್ಯ ಅಥವಾ ತೀವ್ರ ಮಾನಸಿಕ ಅಸ್ವಸ್ಥತೆಗಳಿಂದ ಬಳಲುತ್ತಿದ್ದಾರೆ. ಜಗತ್ತಿನಲ್ಲಿ ಹೆಚ್ಚು ವಾರ್ಷಿಕ ಆತ್ಮಹತ್ಯೆಗಳ ಸಂಖ್ಯೆಯಿರುವ ದೇಶಗಳ ಪೈಕಿ, ಭಾರತವೂ ಒಂದಾಗಿದೆ. ಒಂದು ಲಕ್ಷ ಜನರಲ್ಲಿ ಒಂದು ವರ್ಷದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆಯನ್ನು ಮಾನಸಿಕ ಅಸ್ವಸ್ಥತೆ ಅಳೆಯಲು ಮುಖ್ಯ ಸೂಚಕವನ್ನಾಗಿ ಪರಿಗಣಿಸುತ್ತಾರೆ. ಭಾರತದಲ್ಲಿ ಈ ಸಂಖ್ಯೆಯು 2019 ರಲ್ಲಿ 10.9 ರಷ್ಟಿದ್ದದ್ದು, 2020 ರಲ್ಲಿ 11.3 ಹಾಗೂ 2021 ರಲ್ಲಿ 12 ರಷ್ಟಾಗಿದೆ! ಆದ್ದರಿಂದ, ಮಾನಸಿಕ ರೋಗಗಳ ಸಮಸ್ಯೆಯನ್ನು ಕಡೆಗಣಿಸುವಂತಿಲ್ಲ.
ಜಾಗತಿಕ ಆರೋಗ್ಯ ಸಂಸ್ಥೆಯ ಲಕ್ಷಣ ನಿರೂಪಣೆಯಂತೆ, ಸಂಪೂರ್ಣ ಮಾನಸಿಕ ಸ್ವಾಸ್ಥ್ಯವೆಂದರೆ ವ್ಯಕ್ತಿಯಲ್ಲಿ ಈ ಮೂರು ಲಕ್ಷಣಗಳಿರಬೇಕು:
1. ವ್ಯಕ್ತಿತ್ವದಲ್ಲಿ ಅಂತರಂಗದಲ್ಲಿನ ಎಲ್ಲಾ ಶಕ್ತಿ-ಸಾಮರ್ಥ್ಯಗಳ (potential) ಅಭಿವ್ಯಕ್ತಿ. 2. ಜೀವನದಲ್ಲಿ ಎದುರಾಗುವ ಸಾಮಾನ್ಯ ಮಾನಸಿಕ ಒತ್ತಡಗಳನ್ನು ಸುಲಭವಾಗಿ ಸಹಿಸಿಕೊಂಡು ತನ್ನ ಕರ್ತವ್ಯಗಳನ್ನು ನಿರ್ವಹಿಸುವುದು. 3. ತನ್ನ ದುಡಿಮೆಯಿಂದ ಸಮಾಜ ಕಲ್ಯಾಣಕ್ಕೆ ಅರ್ಥಪೂರ್ಣ ಕಾಣಿಕೆಯನ್ನು ನೀಡುವುದು.
ಈಗ ನಾವು ಮನಸ್ಸಿನ ಬಗ್ಗೆ ಸನಾತನ ಧರ್ಮದ ಪರಿಕಲ್ಪನೆಯನ್ನು ತಿಳಿದುಕೊಂಡು ತನ್ಮೂಲಕ ಹೇಗೆ ಮಾನಸಿಕ ಸ್ವಾಸ್ಥ್ಯ ಸಾಧಿಸಬಹುದೆಂಬುದನ್ನು ಅರಿಯೋಣ. ಮನಸ್ಸು, ಬುದ್ಧಿ, ಚಿತ್ತ ಹಾಗೂ ಅಹಂಕಾರಗಳನ್ನು ಮನಸ್ಸಿನ ನಾಲ್ಕು ಅಂಗಗಳೆಂದು ಪರಿಗಣಿಸಲಾಗುತ್ತದೆ. ಇದೊಂದು ಕಾರ್ಯಾರ್ಥ ವಿಂಗಡಣೆಯಷ್ಟೆ. ಮೊದಲನೆಯ ಅಂಗವಾದ ಮನಸ್ಸೆಂದರೆ ಎಲ್ಲಾ ಯೋಚನೆ ಹಾಗೂ ಭಾವನೆಗಳ ಸಂಗ್ರಹ; ಬುದ್ಧಿಯು ವಿವೇಚಿಸಿ ನಿರ್ಣಯವನ್ನು ಕೈಗೊಳ್ಳುವ ಕಾರ್ಯವನ್ನು ನಿರ್ವಹಿಸುತ್ತದೆ; ಚಿತ್ತವೆಂದರೆ ನೆನಪುಗಳ ಉಗ್ರಾಣ; ಅಹಂಕಾರವು ಒಬ್ಬ ವ್ಯಕ್ತಿಯನ್ನು ಒಂದು ವ್ಯಕ್ತಿತ್ವದೊಡನೆ ತಾನು ಎಂದು ಗುರುತಿಸಿಕೊಳ್ಳುವಂತೆ ಮಾಡುತ್ತದೆ ಅಥವಾ ಸ್ವವ್ಯಕ್ತಿತ್ವದ ಗುರುತಿಸುವಿಕೆಯೇ (identity) ಅಹಂಕಾರ (ಇಲ್ಲಿ ಅಹಂಕಾರವೆಂದರೆ ಗರ್ವ ಅಥವಾ ದರ್ಪವಲ್ಲ).
ಮಾನಸಿಕ ಅಸ್ವಸ್ಥತೆಯ ಒಂದು ನಿದರ್ಶನ ತೆಗೆದುಕೊಳ್ಳೋಣ. ಒಬ್ಬ ವ್ಯಕ್ತಿ ಪದೇಪದೆ ಕೆಲವು ಸನ್ನಿವೇಶಗಳಲ್ಲಿ ತೀವ್ರ ಆತಂಕ (Anxiety) ಕ್ಕೊಳಗಾಗುತ್ತಿರುತ್ತಾನೆ. ಅಂತಹ ಸನ್ನಿವೇಶಗಳಲ್ಲಿ, ಅವನಿಗೆ ಹಿಂದಿನ ಯಾವುದೇ ಸಕಾರಾತ್ಮಕ ಅನುಭವಗಳಿಲ್ಲದೆ ಇರುವುದರಿಂದ, ಮನಸ್ಸು ಬುದ್ಧಿಯನ್ನು ಉಪಯೋಗಿಸಲು ಅಥವಾ ಚಿತ್ತದೊಡನೆ ಸಮಾಲೋಚಿಸಲು ಶಕ್ತವಾಗದೆ, ಏನು ಮಾಡಬೇಕೆಂದು ತಿಳಿಯದಿರುವುದು ಆತಂಕಕ್ಕೆ ಕಾರಣವಾಗುತ್ತದೆ. ಅಥವಾ ಅಂತಹ ಸನ್ನಿವೇಶಗಳಲ್ಲಿ ಕೇವಲ ನಕಾರಾತ್ಮಕ ಅನುಭವಗಳನ್ನೇ ಹೊಂದಿರುವ ವ್ಯಕ್ತಿಯು ಕೆಟ್ಟ ನೆನಪುಗಳು ಹಾಗೂ ತಾನು ಪದೇಪದೆ ತೆಗೆದುಕೊಂಡ ತಪ್ಪು ನಿರ್ಣಯಗಳ ಕೀಳರಿಮೆಯಿಂದ ಆತ್ಮಗೌರವದಲ್ಲಿ (self-esteem) ಲೋಪವುಂಟಾಗಿ, ತೀವ್ರ ಖಿನ್ನತೆಗೆ ಗುರಿಯಾಗುತ್ತಾನೆ. ಕೆಲವೊಮ್ಮೆ ಇಂತಹ ಖಿನ್ನತೆ ಆತ್ಮಹತ್ಯೆಗೂ ಕಾರಣವಾಗಬಹುದು. ಕೀಳರಿಮೆಯ ಅಹಂಕಾರದಿಂದಾಗಿ, ತಾನು ಅಯೋಗ್ಯನೆಂಬ ಭಾವನೆಯಿಂದ ಜೀವನ ಅಸಹನೀಯವಾಗುತ್ತದೆ. ಪುನಃ ಪುನಃ ಇಂತಹ ನಕಾರಾತ್ಮಕ ಅನುಭವಗಳಾಗುತ್ತಿದ್ದರೆ, ಅವನ ಅಹಂಕಾರವು ಹೆಚ್ಚೆಚ್ಚು ಕೀಳರಿಮೆ ಬೆಳೆಸಿಕೊಂಡು, ಅಂತಹ ಸನ್ನಿವೇಶಗಳಿಂದ ತಪ್ಪಿಸಿಕೊಳ್ಳಲು ಆತ್ಮಹತ್ಯೆಯ ದಾರಿ ಹಿಡಿಯುತ್ತಾನೆ. ಆದರೆ, ಸನಾತನ ಧರ್ಮವು ಸಾರಿರುವಂತೆ, ಯಾವ ವ್ಯಕ್ತಿಯೂ ಕೇವಲ ಆತ್ಮಹತ್ಯೆ ಮಾಡಿಕೊಳ್ಳುವುದರಿಂದ ಕರ್ಮ-ಕರ್ಮಫಲ ಸಿದ್ಧಾಂತದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇನ್ನೊಂದು ಜನ್ಮದಲ್ಲಾದರೂ ಕರ್ಮವು ಬೆನ್ನಟ್ಟಿ ಬಂದೇ ಬರುತ್ತದೆ. ಆದ್ದರಿಂದ ಅದನ್ನು ಈ ಜನ್ಮದಲ್ಲಿಯೇ ಧೈರ್ಯದಿಂದ ಎದುರಿಸುವುದೇ ನಿಜವಾದ ಪರಿಹಾರ.
ಆಧುನಿಕ ಮನೋಚಿಕಿತ್ಸೆಯ ಮೂಲಪುರುಷರಲ್ಲಿ ಒಬ್ಬನಾದ ಸ್ವಿಜರ್ಲೆಂಡಿನ ಮನೋವಿಜ್ಞಾನಿ ಕಾರ್ಲ್ ಯುಂಗ್ ಹೇಳಿರುವಂತೆ, ‘ಮನೋಚಿಕಿತ್ಸೆಯಲ್ಲಿ ನನ್ನ ನಲವತ್ತಕ್ಕಿಂತಲೂ ಹೆಚ್ಚು ವರ್ಷಗಳ ಅನುಭವದಲ್ಲಿ, ದೈವವಿಶ್ವಾಸವಿರುವ ಒಬ್ಬ ವ್ಯಕ್ತಿಯೂ ಇಲ್ಲಿಯವರೆಗೆ ನನ್ನ ಬಳಿಗೆ ರೋಗಿಯಾಗಿ ಬಂದಿಲ್ಲ!’ ಆಧ್ಯಾತ್ಮಿಕ ದೃಷ್ಟಿಕೋನವು ಜೀವನಕ್ಕೆ ಅರ್ಥಪೂರ್ಣ ಭದ್ರತೆಯನ್ನು ನೀಡುತ್ತದೆ.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಗಳಿಸು ಅಥವಾ ನಶಿಸು (perform or perish) ಎಂಬುದೇ ಜೀವನ ಸೂತ್ರವಾಗಿದೆ. ಶಾಲಾ ಪ್ರವೇಶಕ್ಕಾಗಿ ಸ್ಪರ್ಧೆ, ಅಂಕ ಗಳಿಕೆಯ ಸ್ಪರ್ಧೆ, ಶಿಕ್ಷಣದ ನಂತರ ಉದ್ಯೋಗಕ್ಕಾಗಿ ಸ್ಪರ್ಧೆ... ಹೀಗೆ ಅರ್ಥಹೀನ ಸ್ಪರ್ಧೆಗಳ ಒತ್ತಡಕ್ಕೆ ಸಿಕ್ಕಿ 24 ವರ್ಷಗಳ ವಯಸ್ಸು ಮುಟ್ಟುವ ಮೊದಲೇ ಮನೋರೋಗಿಗಳಾಗುತ್ತಿರುವವರ ಸಂಖ್ಯೆ ಬೆಳೆಯುತ್ತಿದೆ. ಭೌತಿಕ ವಿಲಾಸವಾದದ ಕಪಿಮುಷ್ಟಿಗೆ ಸಿಲುಕಿ ಯಶಸ್ಸನ್ನು ಕೇವಲ ಆರ್ಥಿಕ ಸಂಪಾದನೆಯಿಂದ ಅಳೆಯುವ ಪ್ರವೃತ್ತಿ ಇಂದು ಮಕ್ಕಳ ಪಾಲಿಗೆ ದಾರುಣ ದುರಂತವಾಗಿ ಪರಿಣಮಿಸಿದೆ. ಅಧಿಕ ಧನಸಂಪಾದನೆ ಮಾಡದ ವ್ಯಕ್ತಿಯ ಜೀವನವು ನಷ್ಟವಾದಂತೆಯೇ ಎಂಬ ಮನೋಜಾಡ್ಯ ಆವರಿಸಿದೆ. ಒಂದು ಮಗುವಿನ ಅಂತರಂಗದಲ್ಲಿ ಪ್ರತಿಭಾವಂತ ಕವಿಯೋ, ನಾಟಕಕಾರನೋ, ಸಾಹಿತಿಯೋ, ಸಂಗೀತಗಾರನೋ ಅಥವಾ ವಾಗ್ಮಿಯೋ ಹುದುಗಿದ್ದರೆ, ಅವನ ಪಾಡೇನಾಗಬೇಕು? ತಂದೆ-ತಾಯಿಗಳು ಧನಸಂಪಾದನೆಯ ದೃಷ್ಟಿಯಿಂದ ಡಾಕ್ಟರ್ ಅಥವಾ ಇಂಜಿನಿಯರ್ ಮಾಡಲು ಒತ್ತಡ ಹಾಕಿದರೆ ಅವನ ಜೀವನ ದುರಂತವಾಗುವುದಿಲ್ಲವೇ! ಅದರ ಜೊತೆಗೆ ಸಮಾಜಕ್ಕೆ ಒಬ್ಬ ಶ್ರೇಷ್ಠ ದರ್ಜೆಯ ಸಾಹಿತಿಯೋ ಅಥವಾ ಸಂಗೀತಗಾರನೋ ನಷ್ಟವಾಗಿ, ಒಬ್ಬ ಸಾಮಾನ್ಯ ದರ್ಜೆಯ ವೈದ್ಯನೋ ಅಥವಾ ಇಂಜಿನಿಯರೋ ಲಭ್ಯವಾಗುತ್ತಾನಷ್ಟೆ!
ಆದರೆ, ಸನಾತನ ಧರ್ಮವು ಅರುಹುವಂತೆ, ಇಂದು ಎದುರಿಗೆ ಕಾಣುವ ಮಾನವರು ಹಿಂದಿನ ಹಲವು ಜನ್ಮಗಳಿಂದ ಗಳಿಸಿದ ಮನಸ್ಸಿನ ವಿಭಿನ್ನ ಸಂಸ್ಕಾರ ಹಾಗೂ ವಾಸನೆಗಳೊಂದಿಗೆ ಜನಿಸಿದ್ದು, ಪ್ರತಿಯೊಬ್ಬರೂ ಅಂತರಂಗ ಸ್ವಭಾವಕ್ಕನುಗುಣವಾಗಿ ವೃತ್ತಿಗಳನ್ನು ಆರಿಸಿಕೊಂಡಾಗ ಮಾತ್ರ ಅವರು ಜೀವನದಲ್ಲಿ ಸುಖ-ಶಾಂತಿಗಳನ್ನು ಅನುಭವಿಸಬಹುದು.
ದುರದೃಷ್ಟವಶಾತ್ ಆಧುನಿಕ ವಿಜ್ಞಾನವು ಕರ್ಮ ಹಾಗೂ ಪುನರ್ಜನ್ಮ ಸಿದ್ಧಾಂತಗಳನ್ನು ಅಂಗೀಕರಿಸುವುದಿಲ್ಲ; ಮನಸ್ಸು ದೇಹದ ಅಂತ್ಯವಾದ ಮೇಲೂ ಉಳಿದು ಮುಂದಿನ ಜನ್ಮದಲ್ಲಿ ಮತ್ತೊಂದು ದೇಹದೊಂದಿಗೆ ಪುನಃ ಬರುತ್ತದೆಯೆಂಬುದನ್ನೂ ನಂಬುವುದಿಲ್ಲ. ಆದರೆ, ಜಗತ್ತಿನಲ್ಲಿ ಮಕ್ಕಳು ವಿವಿಧ ಭಿನ್ನ ಭಿನ್ನ ಅಂತರಂಗ ಪ್ರವೃತ್ತಿ-ಪ್ರತಿಭೆಗಳೊಂದಿಗೆ ಜನಿಸುತ್ತಾರೆಂಬ ವಾಸ್ತವವನ್ನು ಯಾರೂ ತಿರಸ್ಕರಿಸುವಂತಿಲ್ಲವಷ್ಟೆ. ಅಲ್ಲದೆ, ಕೆಲವು ಮಕ್ಕಳು ಅಸಾಧಾರಣ ಪ್ರತಿಭೆಯನ್ನು ಚಿಕ್ಕ ವಯಸ್ಸಿನಲ್ಲಿಯೇ ಪ್ರದರ್ಶಿಸಿ ಅದ್ಭುತ ಶಿಶು (child prodigy) ಗಳೆಂದು ಕರೆಯಲ್ಪಡುತ್ತಾರೆ. ಇಂದಿಗೂ ಭಾರತ ಹಾಗೂ ಏಷ್ಯಾ ಖಂಡದ ಕೆಲವು ದೇಶಗಳಲ್ಲಿ ಶಿಶುಗಳ ಅಂತರಂಗಗಳಲ್ಲಿ ಹುದುಗಿರುವ ಸಹಜ ಪ್ರವೃತ್ತಿ-ಆಸಕ್ತಿಗಳನ್ನು ಕಂಡುಕೊಳ್ಳಲು, ಹಿಂದಿನಿಂದಲೂ ಬಂದಿರುವ ಒಂದು ಕ್ರಿಯೆಯನ್ನು ಆಚರಿಸುತ್ತಾರೆ. ಒಂದು ವರ್ಷ ಅಥವಾ ಅದರ ಆಸುಪಾಸಿನ ವಯಸ್ಸಿನಲ್ಲಿ ತೆವಳಲು ಕಲಿತಿರುವ ಮಗುವಿನ ಎದುರಿನಲ್ಲಿ ಪುಸ್ತಕ, ಲೇಖನಿ, ಹಣ, ವಾಹನಗಳ ಅಥವಾ ಯಂತ್ರಗಳ ಬೊಂಬೆಗಳು, ಇತ್ಯಾದಿ ವಸ್ತುಗಳನ್ನು ಇರಿಸುತ್ತಾರೆ. ಮಗುವು ಸಹಜವಾಗಿ ಯಾವ ವಸ್ತುವಿನಿಂದ ಆಕರ್ಷಿಸಲ್ಪಡುತ್ತದೆಯೆಂಬುದರ ಆಧಾರದಲ್ಲಿ ಅದರ ಮನೋಪ್ರವೃತ್ತಿಯನ್ನು ಗ್ರಹಿಸುತ್ತಾರೆ. ಆ ಚಿಕ್ಕ ವಯಸ್ಸಿನಲ್ಲಿ ಮಗುವು ಯಾವುದೇ ಸಾಮಾಜಿಕ ರೀತಿ-ನೀತಿ ಅಥವಾ ನಿರೀಕ್ಷೆಗಳಿಂದ ಪ್ರಭಾವಿತವಾಗದಿರುವುದರಿಂದ ಈ ಕ್ರಿಯೆಯು ಮಗುವಿನ ಸಹಜ ಸ್ವಭಾವವನ್ನರಿಯಲು ಸಹಾಯ ಮಾಡುತ್ತದೆ. ಮೇಲುನೋಟಕ್ಕೆ ಇದು ಮುಗ್ಧ, ಬಾಲಿಶ ಆಚರಣೆಯೆಂದು ತೋರಿದರೂ, ಅದರ ತರ್ಕವನ್ನು ಅಲ್ಲಗಳೆಯುವಂತಿಲ್ಲ. ತಂದೆ-ತಾಯಿಗಳು ಮಕ್ಕಳನ್ನು ಅರ್ಥಮಾಡಿಕೊಳ್ಳುವ ಪ್ರಯತ್ನವನ್ನಾದರೂ ಮಾಡಬೇಕೆಂಬ ಒಂದು ಮುಖ್ಯ ಪಾಠವನ್ನಾದರೂ ಇದು ನೆನಪಿಸುತ್ತದೆಯಲ್ಲವೇ!
ಜಗತ್ತಿನಾದ್ಯಂತ ಇಂದು ಯುವಜನರಲ್ಲಿ ಮಾನಸಿಕ ಅಸ್ವಸ್ಥತೆ ಹೆಚ್ಚುತ್ತಿರುವುದಕ್ಕೆ ಮುಖ್ಯ ಕಾರಣವೆಂದರೆ, ಪ್ರತಿಯೊಂದು ಕಾರ್ಯವನ್ನೂ ಕೇವಲ ಧನಸಂಪಾದನೆಯ ದೃಷ್ಟಿಯಿಂದಲೇ ಮಾಡಲು ಹೆಣಗುವುದು. ಹಿಂದಿನ ತಲೆಮಾರುಗಳ ಜನರಲ್ಲಿ ಇಂತಹ ಮನೋಭಾವನೆ ತಲೆದೋರಲು ಹಲವು ಒಪ್ಪಬಹುದಾದ ಕಾರಣಗಳಿದ್ದವು. ಅದು ಎಲ್ಲೆಲ್ಲೂ ಬಹುಮಟ್ಟಿಗೆ ವಸಾಹತುಶಾಹಿ ಕಾಲವಾಗಿದ್ದುದಲ್ಲದೆ, ಎರಡು ಜಾಗತಿಕ ಮಹಾ ಯುದ್ಧಗಳು ಮತ್ತು ಭೀಕರ ವಿಪತ್ತುಗಳಿಗೆ ಅವರು ತುತ್ತಾಗಿದ್ದುದರಿಂದ, ಅವರ ಜೀವನಗಳನ್ನು ಕೇವಲ ಬದುಕುಳಿಯುವ ಪ್ರವೃತ್ತಿಯು (survival instict) ಆಳುತ್ತಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದ್ದು, ಇಂದಿನ ಯುವಜನತೆಯು ಕೇವಲ ಬದುಕುಳಿಯಲು ಹೆಣಗಬೇಕಾದ ಅಗತ್ಯವಿಲ್ಲ.
ಅಮೆರಿಕಾದ ಪ್ರಸಿದ್ಧ ಮನೋವಿಜ್ಞಾನಿ ಅಬ್ರಹಾಂ ಮ್ಯಾಸ್ಲೋ ಅರುಹಿರುವಂತೆ ಜೀವನದಲ್ಲಿ ಭೌತಿಕ ಸುಖವನ್ನು ಮೀರಿದ ಉನ್ನತ ಗುರಿ ಮತ್ತು ಆನಂದಕ್ಕಾಗಿ ಪ್ರಯತ್ನಿಸಬೇಕು. ಅವನ ಪ್ರಕಾರ, ಸ್ವಯಂ ಸಾಕ್ಷಾತ್ಕಾರವೇ (self-actualisation) ಮಾನವ ಜೀವನದ ಅತ್ಯುನ್ನತ ಗುರಿಯಾಗಿದೆ. ಇದುವೇ ಸನಾತನ ಧರ್ಮದ ಭಾಷೆಯಲ್ಲಿ ಆತ್ಮಸಾಕ್ಷಾತ್ಕಾರದ ಗುರಿಯಾಗಿದೆ. ಆದ್ದರಿಂದ ಇಂದಿನ ತಂದೆ-ತಾಯಿಗಳು ಮಕ್ಕಳಿಗೆ, ಶಿಕ್ಷಣ ಮತ್ತು ವೃತ್ತಿಗಳ ಆಯ್ಕೆಯ ವಿಷಯದಲ್ಲಿ, ಅವರೇ ಸ್ವತಂತ್ರವಾಗಿ ಯೋಚಿಸಿ ಅದರ ಆಧಾರದಲ್ಲಿಯೇ ಬಿಚ್ಚು ಮನಸ್ಸಿನಿಂದ ಮಾತನಾಡುವ ಮತ್ತು ಕಾರ್ಯವೆಸಗುವ ಸ್ವಾತಂತ್ರ್ಯವನ್ನು (freedom of expression and choice of action) ನೀಡಬೇಕಾಗಿದೆ. ಇಲ್ಲದಿದ್ದರೆ ಯುವ ಜನತೆಯು ದಾರಿತಪ್ಪಿ, ಕೋಪದಿಂದ ಸಿಡಿದೇಳುವ ಪ್ರವೃತ್ತಿಯನ್ನೋ ಅಥವಾ ಮಾನಸಿಕ ಖಿನ್ನತೆಗೊಳಗಾಗಿ ಆತ್ಮಹತ್ಯೆಯ ಪಥವನ್ನೋ ಹಿಡಿಯಬಹುದು. ಇದು ಮಾನವ ಸಮಾಜಕ್ಕೆ ಬಹು ಮಾರಕ ಬೆಳವಣಿಗೆಯೇ ಸರಿ!
ಜೀವನದಲ್ಲಿ ಆಧ್ಯಾತ್ಮಿಕ ದೃಷ್ಟಿಕೋನವು ಮಾನಸಿಕ ಅಸ್ವಾಸ್ಥ್ಯಗಳಿಂದ ದೂರವಿಡುತ್ತದೆ. ಇದುವೇ ಸನಾತನ ಧರ್ಮ ತೋರುವ ಮನೋಸ್ವಾಸ್ಥ್ಯದ ದಾರಿ. ಸ್ವಸ್ಥ ಮನಸ್ಸುಗಳೇ ಸ್ವಸ್ಥ ಸಮಾಜಕ್ಕೆ ಆಧಾರ!
(ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)