

ಷೋಡಶ ಸಂಸ್ಕಾರಗಳ ಪೈಕಿ ಏಳನ್ನು ಕಳೆದ ಅಂಕಣದಲ್ಲಿ ತಿಳಿದುಕೊಂಡಿದ್ದೇವೆ. ಎಂಟನೆಯದು ಕರ್ಣವೇಧ. ಮಗುವಿನ ಕಿವಿಗಳಿಗೆ ಆಭರಣಗಳನ್ನು ಧರಿಸಲು ಅಗತ್ಯವಾದ ರಂಧ್ರಗಳನ್ನು ಮಾಡುವುದು (ಕಿವಿ ಚುಚ್ಚುವುದು). ಈ ಸಂಸ್ಕಾರವನ್ನು ಏಳು ಅಥವಾ ಎಂಟನೇ ತಿಂಗಳಿನಲ್ಲಿ ಅಥವಾ ಮಗುವಿನ ಜನನದ ಒಂದು ವರ್ಷದ ಕೊನೆಯಲ್ಲಿ ಮಾಡುತ್ತಾರೆ. ಈ ಸಂಸ್ಕಾರಕ್ಕೆ ಎರಡು ಕಾರಣಗಳಿವೆ. ಮೊದಲನೆಯದು- ಮಗುವು ತನ್ನ ಪರಂಪರೆಗೆ ಅನುಸಾರವಾಗಿ ಕರ್ಣಾಭರಣ ಧರಿಸುವುದರಿಂದ ಆ ಮಗು ಯಾವ ಕುಟುಂಬ ಅಥವಾ ಯಾವ ಸಮುದಾಯಕ್ಕೆ ಸೇರಿದೆ ಎಂಬುದನ್ನು ಗುರುತಿಸಬಹುದು. ಎರಡನೆಯದು- ಈ ಸಂಸ್ಕಾರದ ಸಂದರ್ಭದಲ್ಲಿ ಮಗುವು ಕೆಟ್ಟ ವಿಷಯ, ಪೊಳ್ಳುಹರಟೆ, ಋಣಾತ್ಮಕ ಹಾಗೂ ಅಸತ್ಯವಾದ ವಿಚಾರಗಳನ್ನು ಕಿವಿಯಲ್ಲಿ ಕೇಳದೆ, ಒಳ್ಳೆಯ, ಸತ್ಯವಾದ, ಧನಾತ್ಮಕ ವಿಚಾರಗಳನ್ನು ಮಾತ್ರ ಕೇಳುವಂತೆ ಅನುಗ್ರಹಿಸಬೇಕೆಂದು ಭಗವಂತನಲ್ಲಿ ಪ್ರಾರ್ಥನೆ ಮಾಡಲಾಗುತ್ತದೆ. ಮಗುವು ಈ ವಯಸ್ಸಿನಲ್ಲಿ ತನ್ನ ಸುತ್ತಮುತ್ತ ತಂದೆ-ತಾಯಿ ಅಥವಾ ಇತರರು ಉಚ್ಚರಿಸುವ ಶಬ್ದಗಳನ್ನು ಕೇಳಿ ಭಾಷೆಯನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸುತ್ತದೆ. ಪ್ರಾಚೀನ ಕಾಲದಲ್ಲಿ ಕೇವಲ ಬಾಯಿಮಾತಿನ (ಶ್ರುತಿಯ) ಮೂಲಕ ವಿದ್ಯಾಭ್ಯಾಸ ನೀಡಲಾಗುತ್ತಿತ್ತು. ಆದ್ದರಿಂದ ವಿದ್ಯೆ ಕಲಿಯಲು ಕಿವಿಗಳು ಪ್ರಧಾನ ಪಾತ್ರ ವಹಿಸುತ್ತಿದ್ದವು. ಈಗಲೂ ನಾವು ಕೇಳುವ ಶಬ್ದಗಳು ಮನಸ್ಸಿನ ಮೇಲೆ ಪ್ರಭಾವ ಬೀರಿ, ಯೋಚನೆಗಳಾಗಿ ಪರಿವರ್ತನೆಗೊಂಡು, ಕಾರ್ಯರೂಪಕ್ಕೆ ಬರುತ್ತವೆ. ಉಪನಿಷತ್ತುಗಳು ಹೇಳುವಂತೆ ‘ಭದ್ರಂ ಕರ್ಣೆಭಿಃ ಶ್ರುಣುಯಾಮ ದೇವಾಃ’, ಎಂದರೆ ‘ದೇವತೆಗಳೇ, ನಾವು ಕಲ್ಯಾಣಕರ ಶಬ್ದಗಳನ್ನು ಮಾತ್ರ ನಮ್ಮ ಕಿವಿಗಳ ಮೂಲಕ ಕೇಳುವಂತೆ ಅನುಗ್ರಹಿಸಿರಿ!’
ನಂತರದ ಸಂಸ್ಕಾರವೆಂದರೆ ಚೂಡಾಕರ್ಮ. ಅಂದರೆ ಮಗುವಿನ ಕೇಶಮುಂಡನ. ಮಗುವಿನ ತಲೆಯ ಮೇಲಿನ ಕೇಶವನ್ನು ಪ್ರಥಮ ಬಾರಿಗೆ ಕತ್ತರಿಸಿ ತೆಗೆಯುವುದು. ತಲೆಯನ್ನು ಸಂಪೂರ್ಣವಾಗಿ ಬೋಳಿಸಿ ಬ್ರಹ್ಮರಂಧ್ರದ ಮೇಲಿನ ಶಿಖೆಯನ್ನು ಮಾತ್ರ ಉಳಿಸುವುದು. (ಆತ್ಮಜ್ಞಾನಿಯು ದೇಹತ್ಯಾಗ ಮಾಡುವ ಸಮಯದಲ್ಲಿ ಆತನ ಆತ್ಮವು ಬ್ರಹ್ಮರಂಧ್ರದ ಮೂಲಕ ನಿಷ್ಕ ›ಮಿಸುವುದೆಂದು ಶಾಸ್ತ್ರಗಳು ಹೇಳುತ್ತವೆ.) ಚೂಡಾಕರ್ಮ ಸಮಯದಲ್ಲಿ ಮಗುವಿನ ಮಸ್ತಿಷ್ಕ ಅಥವಾ ಮಿದುಳಿನ ವರ್ಧನೆಗಾಗಿ ಪರಮಾತ್ಮನಲ್ಲಿ ಪ್ರಾರ್ಥಿಸುತ್ತಾರೆ.
ಮಗುವು ಶೈಶವಾವಸ್ಥೆಯಿಂದ ಬಾಲ್ಯವನ್ನು ಪ್ರವೇಶಿಸಿದಾಗ ನಂತರದ ಸಂಸ್ಕಾರಗಳನ್ನು ನೀಡಲಾಗುತ್ತದೆ. ಈ ಸಂಸ್ಕಾರಗಳ ಉದ್ದೇಶವು ಬಾಲಕನನ್ನು ವಿದ್ಯಾರ್ಜನೆಯಲ್ಲಿ ತೊಡಗಿಸುವುದು. ಈ ಸಂಸ್ಕಾರಗಳು ಉಪನಯನದಿಂದ ಪ್ರಾರಂಭವಾಗುತ್ತವೆ. ಉಪನಯನವೆಂದರೆ ಸಮೀಪಕ್ಕೆ ಒಯ್ಯುವುದು, ಎಂದರೆ ವಿದ್ಯಾರ್ಜನೆಗಾಗಿ ಗುರುವಿನ ಸಮೀಪಕ್ಕೆ ಸೇರಿಸುವುದು. ಗುರುವು ಬಾಲಕನನ್ನು ಶಾಸ್ತ್ರಾಧ್ಯಯನದೆಡೆಗೆ ಕೊಂಡೊಯ್ದರೆ, ಶಾಸ್ತ್ರಾಧ್ಯಯನವು ಅವನನ್ನು ದಿವ್ಯತ್ವದೆಡೆಗೆ ಕೊಂಡೊಯ್ಯುತ್ತದೆ.
ಸಾಮಾನ್ಯವಾಗಿ ಬಾಲಕನ ಎಂಟನೆಯ ವರ್ಷದಲ್ಲಿ ಆಚರಿಸುವ ಉಪನಯನ ಸಂಸ್ಕಾರಕ್ಕಿಂತ ಮೊದಲು, ಅವನಿಗೆ ವಿದ್ಯಾರಂಭ ಅಥವಾ ಅಕ್ಷರಾಭ್ಯಾಸ ಸಂಸ್ಕಾರವನ್ನು ಕೆಲವು ಕುಟುಂಬಗಳಲ್ಲಿ ಮಾಡಲಾಗುತ್ತದೆ. ಉಪನಯನದ ಸಮಯದಲ್ಲಿ ಬಾಲಕನಿಗೆ ಯಜ್ಞೋಪವೀತ ಧಾರಣೆ ಮಾಡಲಾಗುತ್ತದೆ. ಆ ಸಮಯದಲ್ಲಿ ತಂದೆಯು ಮಗನ ಕಿವಿಯಲ್ಲಿ ವೇದಮಂತ್ರಗಳ ಮಾತೆಯಾದ ಗಾಯತ್ರೀ ಮಂತ್ರವನ್ನು ಉಚ್ಚರಿಸುವನು. ತದನಂತರ ಬಾಲಕನು ಬ್ರಹ್ಮಚಾರಿಯಾಗಿ ವಿದ್ಯಾಭ್ಯಾಸಕ್ಕಾಗಿ ಗುರುವಿನ ಆಶ್ರಮಕ್ಕೆ ತೆರಳಿ ವಿಧ್ಯುಕ್ತವಾಗಿ ವಿದ್ಯಾರ್ಥಿಯೆನಿಸಿಕೊಳ್ಳುವನು.
ಈ ಸಂಸ್ಕಾರವನ್ನು ಪ್ರಾಚೀನ ಕಾಲದಲ್ಲಿ ಹೆಣ್ಣುಮಕ್ಕಳಿಗೆ ಕೂಡ ಮಾಡಲಾಗುತ್ತಿತ್ತು. ಈ ಸಂಸ್ಕಾರ ಹೊಂದಿದ ಹೆಣ್ಣುಮಕ್ಕಳನ್ನು ‘ಬ್ರಹ್ಮವಾದಿನಿ’ಗಳೆಂದು ಕರೆಯುತ್ತಿದ್ದರು. ಕೆಲವು ಶಾಸ್ತ್ರಗಳ ಪ್ರಕಾರ ಗುರುವಿನ ಸಾನ್ನಿಧ್ಯದಲ್ಲಿ ಎಲ್ಲ ಜಾತಿಗಳಿಗೆ ಸೇರಿದ ಜನರಿಗೂ ಈ ಸಂಸ್ಕಾರ ಪಡೆಯಲು ಅವಕಾಶವಿರುತ್ತಿತ್ತು. ಆದರೆ ಕಾಲ ಕಳೆದಂತೆ, ಬ್ರಾಹ್ಮಣ, ಕ್ಷತ್ರಿಯ ಹಾಗೂ ವೈಶ್ಯರ ಮಕ್ಕಳಿಗೆ ಮಾತ್ರ ಈ ಸಂಸ್ಕಾರವನ್ನು ನೀಡಲಾಗುತ್ತಿದೆ. ಈ ಸಂಸ್ಕಾರದ ನಂತರ ಮಕ್ಕಳು ಗುರುಕುಲಕ್ಕೆ ತೆರಳಿ ಗುರುವಿನ ಆಶ್ರಯದಲ್ಲಿ ಪರಾ ಹಾಗೂ ಅಪರಾ ವಿದ್ಯೆಗಳನ್ನು ಕಲಿಯುತ್ತಿದ್ದರು.
ಗುರುಕುಲ ಪ್ರವೇಶದ ನಂತರ ಗುರುವು ಬಾಲಕನಿಗೆ ವೇದಪಠಣದ ಮೂಲಕ ವೇದಾರಂಭ ಸಂಸ್ಕಾರವನ್ನು ನೀಡುತ್ತಿದ್ದನು. ವೇದಗಳು ಸನಾತನ ಧರ್ಮದ ಸಂಪ್ರದಾಯಗಳ ಬುನಾದಿಯಾಗಿದ್ದು, ಉಪನಿಷತ್ತುಗಳು ವೇದಗಳ ಪರಮೋಚ್ಚ ಜ್ಞಾನನಿಧಿಗಳಾಗಿವೆ. ವೇದಾರಂಭ ಸಂಸ್ಕಾರದ ಮೊದಲ ಭಾಗವೆಂದರೆ, ವಿದ್ಯಾರ್ಥಿ ವೇದಗಳನ್ನು ಶ್ರದ್ಧೆ ಹಾಗೂ ಭಕ್ತಿಯಿಂದ ಕಲಿತು ಪಂಚಋಣಗಳನ್ನು ತೀರಿಸುವೆನೆಂಬ ಪ್ರತಿಜ್ಞೆ ಸ್ವೀಕರಿಸುವುದು. ಪಂಚಋಣಗಳೆಂದರೆ:
1. ಪಿತೃಋಣ- ವಂಶಾವಳಿಯಲ್ಲಿ ಮುಂದುವರಿಯುವಂತೆ ಅನುವು ಮಾಡಿಕೊಟ್ಟ ಪಿತೃಗಳಿಗೆ ಸಲ್ಲಿಸಬೇಕಾದ ಋಣ.
2. ದೇವಋಣ- ದೇವರ ಅನುಗ್ರಹದಿಂದ ವಿದ್ಯೆಯನ್ನು ಕಲಿಯಲು ಸಾಧ್ಯ. ಆದ್ದರಿಂದ ಭಕ್ತಿ-ಶರಣಾಗತಿಗಳ ಮೂಲಕ ದೇವಋಣವನ್ನು ತೀರಿಸಬೇಕು.
3. ಋಷಿಋಣ- ಶಾಸ್ತ್ರಗಳನ್ನು ಕಲಿತು ಇತರರಿಗೆ ಕಲಿಸುವ ಮೂಲಕ ವೇದಜ್ಞಾನವನ್ನು ಪ್ರಸಾದಿಸಿದ ಋಷಿಗಳಿಗೆ ಸಲ್ಲಿಸಬೇಕಾದ ಋಣ.
4. ಮನುಷ್ಯಋಣ- ಹಲವು ಮಾನವರಿಂದ ಪಡೆದ ಸಹಾಯಕ್ಕೆ ಪ್ರತಿಯಾಗಿ ಸಲ್ಲಿಸಬೇಕಾದ ಋಣ. ಮನೆಗೆ ಬಂದ ಅತಿಥಿ-ಅಭ್ಯಾಗತರನ್ನು ಪ್ರೀತಿಯಿಂದ ಬರಮಾಡಿಕೊಂಡು ಸೇವೆ ಸಲ್ಲಿಸುವುದರಿಂದ ಈ ಋಣವು ಸಂದಾಯವಾಗುತ್ತದೆ.
5. ಪ್ರಕೃತಿಋಣ- ಜೀವನಕ್ಕೆ ಆಧಾರವಾದ ಪ್ರಕೃತಿಮಾತೆಯ ಋಣವನ್ನು ಪ್ರಕೃತಿ ಪೋಷಣೆ ಹಾಗೂ ಪ್ರಕೃತಿಯ ಭಾಗವಾದ ಪಶು-ಪ್ರಾಣಿ ಹಾಗೂ ಕ್ರಿಮಿ-ಕೀಟಗಳಿಗೆ ಸಹಾಯ ಮಾಡುವುದರಿಂದ ಸಲ್ಲಿಸಬಹುದು.
ಈ ಸಮಯದಲ್ಲಿ ಬಾಲಕನನ್ನು ದ್ವಿಜನೆಂದು ಕರೆಯುವರು. ದ್ವಿಜ ಎಂದರೆ ಎರಡನೇ ಬಾರಿ ಜನಿಸಿದವನೆಂದು ಅರ್ಥ. ಅಂದರೆ ತಾಯಿಯ ಗರ್ಭದಿಂದ ಹುಟ್ಟಿದಾಗ ಪ್ರಥಮ ಜನನ. ಆದರೆ ಜ್ಞಾನಪ್ರಾಪ್ತಿಯಿಂದ ಮಾತ್ರವೇ ನಿಜವಾದ ಮಾನವತ್ವವು ಲಭ್ಯವಾಗುತ್ತದೆ. ಈ ಜ್ಞಾನವು ಗುರುವಿನ ಬೋಧನೆಯಿಂದ ಪ್ರಾಪ್ತವಾಗುತ್ತದೆ. ಹೀಗೆ, ಉಪನಯನ ಹಾಗೂ ವೇದಾರಂಭ ಸಂಸ್ಕಾರಗಳಿಂದ ಅವನ ದ್ವಿತೀಯ ಜನನವಾಗುತ್ತದೆ. ಆದ್ದರಿಂದ ಅವನು ದ್ವಿಜನಾಗುತ್ತಾನೆ.
ಬಾಲಕನು ಎಂಟರಿಂದ ಹನ್ನೆರಡು ವರ್ಷಗಳವರೆಗೆ ವಿದ್ಯಾಭ್ಯಾಸವನ್ನು ಮುಗಿಸಿದ ನಂತರ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಕೊನೆಯ ಸಂಸ್ಕಾರವನ್ನು ಆಚರಿಸಲಾಗುತ್ತದೆ. ಅದುವೇ ಸಮಾವರ್ತನ ಸಂಸ್ಕಾರ. ಈ ಸಂಸ್ಕಾರದೊಂದಿಗೆ ಶಿಷ್ಯನ ವಿದ್ಯಾಭ್ಯಾಸ ಪೂರ್ಣಗೊಳ್ಳುವುದು. ಈ ಸಮಯದಲ್ಲಿ ಶಿಷ್ಯನು ಗುರುವಿಗೆ ಗುರುದಕ್ಷಿಣೆ ಸಲ್ಲಿಸಬೇಕಾಗಿರುತ್ತದೆ. ಆಗ ಪುತ್ರನನ್ನು ಮನೆಗೆ ಕರೆದುಕೊಂಡು ಹೋಗಲು ಅವನ ಪಾಲಕರು ಗುರುಕುಲಕ್ಕೆ ಬಂದು ಶಕ್ಱಾನುಸಾರವಾಗಿ ಗುರುವಿಗೆ ಕಾಣಿಕೆ ಸಮರ್ಪಿಸುತ್ತಿದ್ದರು. ಗುರುಕುಲದಲ್ಲಿ ವಿದ್ಯಾಭ್ಯಾಸ ಉಚಿತವಾಗಿದ್ದು, ಗುರುದಕ್ಷಿಣೆ ಕೃತಜ್ಞತೆಯ ಒಂದು ಪ್ರತೀಕವಾಗಿತ್ತು. ಬಾಲಕನಾಗಿ ಗುರುಕುಲಕ್ಕೆ ಬಂದ ಶಿಷ್ಯನು ಯುವಕನಾಗಿ ಅಲ್ಲಿಂದ ಹೊರಬರುತ್ತಿದ್ದ. ತದನಂತರ ಗೃಹಸ್ಥಾಶ್ರಮ ಪ್ರವೇಶ.
ಗೃಹಸ್ಥಾಶ್ರಮದಲ್ಲಿ ಅವನು ಮನೆಯ ಒಡೆಯನಾಗಿ ಕರ್ತವ್ಯಗಳನ್ನು ನಿರ್ವಹಿಸಬೇಕಾಗಿರುತ್ತದೆ. ಈ ಹಂತದ ಮೊದಲನೆಯ ಸಂಸ್ಕಾರ, ವಿವಾಹ. ವಿವಾಹವೆಂಬುದು ಯುವಕ ಹಾಗೂ ಯುವತಿಯರ ಪವಿತ್ರ ಸಮ್ಮಿಲನವಾಗಿದ್ದು, ಪತಿ-ಪತ್ನಿಯರಾಗಿ ಸಾಮಾಜಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಬೆಳೆಯಲು ಪರಸ್ಪರ ಸಹಾಯವಾಗಬೇಕು. ಅಂದಿನ ಕಾಲದಲ್ಲಿ ವಿವಾಹ ಮಾಡುವಾಗ, ಯುವಕನ ವಯಸ್ಸು ಸಾಮಾನ್ಯವಾಗಿ ಇಪ್ಪತೆôದು ವರ್ಷಗಳಾಗಿದ್ದರೆ, ಯುವತಿಯ ವಯಸ್ಸು ಹದಿನಾರು ವರ್ಷಗಳಾಗಿರುತ್ತಿತ್ತು. ಕೆಲವು ಸಮುದಾಯಗಳಲ್ಲಿ ವಿವಾಹ ಸಂಸ್ಕಾರಕ್ಕಿಂತ ಮೊದಲು ಒಂದು ಉಪಸಂಸ್ಕಾರವನ್ನು ನೀಡುತ್ತಾರೆ. ಯುವಕರಿಗೆ ಅವರ ಮುಖದ ಮೇಲಿನ ಕೂದಲು (ಗಡ್ಡ-ಮೀಸೆ) ಗಳನ್ನು ಮೊದಲನೆಯ ಬಾರಿಗೆ ತೆಗೆಯುವ ಕೇಶಾಂತ; ಯುವತಿಯರಿಗೆ ಮೊದಲನೆಯ ಬಾರಿಗೆ ಋತುಮತಿಯರಾದಾಗ ನೀಡುವ ಋತುಶುದ್ಧಿ. ಈ ಸಂಸ್ಕಾರವನ್ನು ನೀಡುವಾಗ ಉತ್ತಮ ಗೃಹಸ್ಥ ಜೀವನಕ್ಕೆ ಆಧಾರವಾದ ಆರೋಗ್ಯಕರ-ಸದೃಢ ದೇಹಗಳನ್ನು ಕರುಣಿಸುವಂತೆ ಭಗವಂತನಲ್ಲಿ ಪ್ರಾರ್ಥಿಸುತ್ತಾರೆ.
ವಿವಾಹ ಸಂಸ್ಕಾರದ ಮೂಲಕ ಗೃಹಸ್ಥಾಶ್ರಮವನ್ನು ಪ್ರವೇಶಿಸಿದ ಯುವಕ-ಯುವತಿಯರು ಗೃಹಸ್ಥ ಜೀವನದ ಕರ್ತವ್ಯಗಳನ್ನು ವಿವಾಹದ ಸಂದರ್ಭದಲ್ಲಿಯೇ ತಿಳಿದುಕೊಳ್ಳುತ್ತಾರೆ. ಧರ್ಮ, ಅರ್ಥ, ಕಾಮ ಹಾಗೂ ಮೋಕ್ಷಗಳ ಸಾಧನೆಯಲ್ಲಿ ತಾವು ಪರಸ್ಪರ ಸಹಾಯ ಮಾಡುವೆವೆಂಬ ಪ್ರತಿಜ್ಞೆ ಸ್ವೀಕರಿಸುತ್ತಾರೆ. ವಧುವಿನ ತಂದೆ ವಿವಾಹ ಸಂದರ್ಭದಲ್ಲಿ ವರನಿಂದ ಒಂದು ವಚನವನ್ನು ಕೇಳುತ್ತಾನೆ. ಪಿತೃಗಳೆಡೆಗೆ, ಭಗವಂತನೆಡೆಗೆ ಹಾಗೂ ಸಮಾಜದೆಡೆಗೆ ಕರ್ತವ್ಯವನ್ನು ನಿರ್ವಹಿಸಿ ಅಂತಿಮವಾಗಿ ಮೋಕ್ಷಪ್ರಾಪ್ತಿಯ ಪಥದಲ್ಲಿ ತನ್ನ ಪುತ್ರಿಯನ್ನು ಸಹಧರ್ವಿುಣಿಯನ್ನಾಗಿ ನಡೆಸಿಕೊಳ್ಳುತ್ತೇನೆಂಬುದೇ ವರನು ನೀಡಬೇಕಾದ ವಚನ. ಗೃಹಸ್ಥಾಶ್ರಮದ ಇತರ ಕರ್ತವ್ಯಗಳಾದ ಅಗ್ನಿಹೋತ್ರ ಇತ್ಯಾದಿಗಳನ್ನು ಪತ್ನಿಯೊಂದಿಗೆ ಕೂಡಿ ನೆರವೇರಿಸುತ್ತೇನೆಂದು ವರನು ಪ್ರತಿಜ್ಞೆ ಸ್ವೀಕರಿಸುತ್ತಾನೆ.
ವಿವಾಹವಾಗಿ ಇಪ್ಪತೆôದು ವರ್ಷಗಳ ನಂತರ ಪತಿ-ಪತ್ನಿಯರಿಬ್ಬರೂ ಗೃಹಸ್ಥ ಜೀವನದಿಂದ ವಾನಪ್ರಸ್ಥಾಶ್ರಮವನ್ನು ಪ್ರವೇಶಿಸಬೇಕು. ಸಾಮಾನ್ಯವಾಗಿ ಪತಿಯ ಐವತ್ತನೆಯ ವಯಸ್ಸಿನಲ್ಲಿ ವಾನಪ್ರಸ್ಥಾಶ್ರಮ ಪ್ರವೇಶ ಸಂಸ್ಕಾರವನ್ನು ಆಚರಿಸಲಾಗುತ್ತದೆ. ಇದನ್ನು ಕೆಲವರು ಷಷ್ಠಿಪೂರ್ತಿಯ ಅರವತ್ತನೆಯ ವಯಸ್ಸಿನಲ್ಲಿ ಮಾಡುತ್ತಾರೆ. ವಾನಪ್ರಸ್ಥಾಶ್ರಮದ ಪ್ರಧಾನ ಭಾಗವೆಂದರೆ ಪತಿ-ಪತ್ನಿಯರು ತಮ್ಮ ಕುಟುಂಬ ಹಾಗೂ ಮಕ್ಕಳ ವ್ಯಾಮೋಹವನ್ನು ತ್ಯಜಿಸಿ ಇಡೀ ಸಮಾಜವನ್ನು ಕುಟುಂಬವೆಂದು ಭಾವಿಸಿ ಸಮಾಜ ಕ್ಷೇಮಕ್ಕಾಗಿ ಸೇವೆಯನ್ನು ಸಲ್ಲಿಸುವುದು. ಈ ಅವಧಿಯಲ್ಲಿ ಅವರು ಆಧ್ಯಾತ್ಮಿಕ ಪ್ರಗತಿಗೆ ಅಡ್ಡಿಯನ್ನುಂಟುಮಾಡುವ ಇಂದ್ರಿಯ ಭೋಗಗಳನ್ನು ತ್ಯಜಿಸಿ ಸರಳ ಜೀವನವನ್ನು ನಡೆಸಬೇಕಾಗುತ್ತದೆ.
ಮುಂದಿನ ಸಂಸ್ಕಾರವೆಂದರೆ, ಪತಿಯ ಎಪ್ಪತೆôದನೆಯ ವಯಸ್ಸಿನಲ್ಲಿ ಪತಿ-ಪತ್ನಿಯರಿಬ್ಬರೂ ಸಂನ್ಯಾಸಾಶ್ರಮವನ್ನು ಸ್ವೀಕರಿಸುವುದು. ಸಂನ್ಯಾಸಾಶ್ರಮವೆಂದರೆ, ಮೋಕ್ಷಪ್ರಾಪ್ತಿಗಾಗಿ ಸಿದ್ಧತೆ ಮಾಡಿಕೊಳ್ಳುವ ಸಮಯ. ಇಬ್ಬರೂ ತಮ್ಮನ್ನು ಜನನ-ಮರಣಗಳ ಚಕ್ರಕ್ಕೆ ಕಟ್ಟಿಹಾಕುವ ಎಲ್ಲ ಬಂಧಗಳನ್ನು ಸಂಪೂರ್ಣವಾಗಿ ತ್ಯಜಿಸಿ ಸಂನ್ಯಾಸ ಜೀವನವನ್ನು ನಡೆಸುತ್ತ, ದೈವಚಿಂತನೆ-ಧ್ಯಾನಗಳಲ್ಲಿ ತೊಡಗಬೇಕು. ತನ್ಮೂಲಕ ಮಾನವ ಜೀವನದ ಪರಮಗುರಿಯಾದ ದಿವ್ಯಪದವನ್ನು ಇಬ್ಬರೂ ಪಡೆಯಬೇಕು.
ಷೋಡಶ ಸಂಸ್ಕಾರಗಳ ಪೈಕಿ ಕೊನೆಯದು, ವ್ಯಕ್ತಿಯ ಮರಣದ ನಂತರ ಆಚರಿಸಲಾಗುವ ಅಂತ್ಯೇಷ್ಟಿ. ಈ ಸಂಸ್ಕಾರವನ್ನು ವಿವಿಧ ಸಮುದಾಯಗಳಲ್ಲಿ ವಿವಿಧ ರೀತಿಗಳಲ್ಲಿ ಮಾಡುತ್ತಾರೆ. ಸಾಮಾನ್ಯವಾಗಿ, ದೇಹವನ್ನು ಅಗ್ನಿಗೆ
ಸಮರ್ಪಿಸಿ ಅದರ ಬೂದಿಯನ್ನು ಪವಿತ್ರ ತೀರ್ಥಕ್ಕೆ ಕೊಂಡುಹೋಗಿ ವಿಸರ್ಜಿಸುತ್ತಾರೆ (ಅಸ್ಥಿಸಂಚಯ ಹಾಗೂ ಅಸ್ಥಿವಿಸರ್ಜನೆ). ಮರಣದ ನಂತರ ಹತ್ತನೆಯ ಮತ್ತು ಹದಿಮೂರನೆಯ ದಿನಗಳಂದು ಅಂತ್ಯೇಷ್ಟಿಯ ಹಲವು ಕ್ರಿಯೆಗಳನ್ನು ಆಚರಿಸುತ್ತಾರೆ. ಪಿಂಡದಾನ ಹಾಗೂ ಬ್ರಾಹ್ಮಣಭೋಜನಗಳು ಆ ದಿನಗಳ ಪ್ರಧಾನ ಕ್ರಿಯೆಗಳಾಗಿರುತ್ತವೆ. ಅಂತ್ಯೇಷ್ಟಿಯಾದ ಮೇಲೆ ಜೀವಾತ್ಮನು ಪರಮಾತ್ಮನಲ್ಲಿ ಐಕ್ಯವಾಗಿ ಜನನ-ಮರಣ ಚಕ್ರದಿಂದ ಪಾರಾಗುತ್ತಾನೆಂದು ಜನರು ನಂಬುತ್ತಾರೆ.
ಹೀಗೆ ಷೋಡಶ ಸಂಸ್ಕಾರಗಳು ಮಾನವನನ್ನು ಮಾತೃಗರ್ಭದಿಂದ ಮೋಕ್ಷಪ್ರಾಪ್ತಿಯವರೆಗೆ ಕೊಂಡೊಯ್ಯುತ್ತವೆ. ಈ ಸಂಸ್ಕಾರಗಳನ್ನು ಕೇವಲ ಯಾಂತ್ರಿಕವಾಗಿ ಆಚರಿಸದೆ, ಅವುಗಳ ಉದ್ದೇಶವನ್ನು ಅರ್ಥಮಾಡಿಕೊಂಡು ಆಚರಿಸಬೇಕು. ಭಾರತೀಯ ಸಂಸ್ಕೃತಿಯಲ್ಲಿ ಭಗವಂತನು ಮಾನವ ಜೀವನದ ಕೇಂದ್ರಬಿಂದು ಹಾಗೂ ಭಗವತ್-ಪ್ರಾಪ್ತಿ ಮಾನವ ಜೀವನದ ಪರಮಗುರಿ. ಷೋಡಶ ಸಂಸ್ಕಾರಗಳ ಮುಖ್ಯ ಉದ್ದೇಶವು ಮಾನವನನ್ನು ದೈವ ಸಾಕ್ಷಾತ್ಕಾರದೆಡೆಗೆ ಕೊಂಡೊಯ್ಯುವುದೇ ಆಗಿರುತ್ತದೆ.
(ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)