

| ವಾದಿರಾಜ ಪ್ರಸನ್ನ
ಇದು ಶ್ರೀಮದ್ಭಾಗವತದಲ್ಲಿ ಉಲ್ಲೇಖವಾಗಿರುವ ಒಂದು ಘಟನೆ. ಶೂರಸೇನ ರಾಜ್ಯವನ್ನು ಚಿತ್ರಕೇತುವೆಂಬ ಚಕ್ರವರ್ತಿ ಆಳುತ್ತಿದ್ದ. ರಾಜ್ಯದಲ್ಲಿ ಸಂಪತ್ಸಮೃದ್ಧಿಯಿದ್ದು, ಪ್ರಜೆಗಳೆಲ್ಲರೂ ಸುಖದಿಂದ ಇದ್ದರು. ಚಕ್ರವರ್ತಿಗೆ ಅನೇಕ ಪತ್ನಿಯರಿದ್ದರೂ ಸಂತಾನಭಾಗ್ಯವಿರಲಿಲ್ಲ. ಆ ಕೊರತೆ ಆತನನ್ನು ಸದಾ ಕಾಡುತ್ತಿತ್ತು.
ಒಮ್ಮೆ ಮಹರ್ಷಿ ಆಂಗೀರಸರು ಶೂರಸೇನರಾಜ್ಯಕ್ಕೆ ಬಂದರು. ಚಿತ್ರಕೇತು ಮಹಾರಾಜನು ಸಕಲಮರ್ಯಾದೆಗಳಿಂದ ಅವರನ್ನು ಸ್ವಾಗತಿಸಿ, ಸತ್ಕರಿಸಿದ. ‘‘ಸಕಲೈಶ್ವರ್ಯ- ಸುಖಭೋಗಗಳಿದ್ದರೂ ಸಂತಾನವಿಲ್ಲದೆ ನನಗೆ ನೆಮ್ಮದಿಯಿಲ್ಲ. ಸಂತಾನಪ್ರಾಪ್ತಿಗೆ ದಾರಿ ತೋರಿಸಬೇಕು’’ ಎಂದು ಬೇಡಿಕೊಂಡ. ಆಂಗೀರಸರು ಪುತ್ರಕಾಮೇಷ್ಟಿಯಾಗವನ್ನು ತಾವೇ ಆತನಿಂದ ಮಾಡಿಸಿ ಹಿರಿಯ ರಾಣಿಯಾದ ಕೃತದ್ಯುತಿಗೆ ಯಜ್ಞಶೇಷವನ್ನು ಕೊಟ್ಟರು. ‘‘ಪುತ್ರಸಂತಾನದಿಂದ ನಿನಗೆ ಸಂತೋಷ-ದುಃಖಗಳೆರಡೂ ಆಗುವ ಸಂಭವವಿದೆ’’ ಎಂದು ತಿಳಿಸಿ ಋಷಿಗಳು ಹೊರಟುಬಂದರು. ರಾಣಿ ಸಕಾಲದಲ್ಲಿ ಸುಂದರ ಗಂಡುಮಗುವನ್ನು ಹೆತ್ತಳು. ಮಹಾರಾಜ ಚಿತ್ರಕೇತು ಬಹಳ ಸಂತೋಷದಿಂದ ಚಿನ್ನ ಬೆಳ್ಳಿ- ವಸ್ತು- ವಾಹನಗಳನ್ನು ದಾನ ಮಾಡಿದ.
ಆದರೆ ರಾಜನಿಗೆ ಆ ಮಗು ಮತ್ತು ಮಹಾರಾಣಿಯಲ್ಲೇ ಅನುರಾಗ ಇರುವುದನ್ನು ಕಂಡ ಇತರ ರಾಣಿಯರಿಗೆ ಮತ್ಸರ ಉಂಟಾಯಿತು. ವಿಷ ಬೆರೆಸಿದ ಹಾಲನ್ನು ರಾಜಕುಮಾರನಿಗೆ ಕುಡಿಸಿ ಆತನ ಜೀವ ತೆಗೆದರು. ಚಿತ್ರಕೇತುವಿನ ದುಃಖ ಮುಗಿಲು ಮುಟ್ಟಿತು. ವಿಧಿಯನ್ನು ಶಪಿಸತೊಡಗಿದ. ಆಗ ಅಲ್ಲಿಗೆ ಆಂಗೀರಸರು ನಾರದರೊಂದಿಗೆ ಬಂದರು. ಮಹಾರಾಜ ಮಗುವನ್ನು ಬದುಕಿಸಲು ಬೇಡಿದ. ಅಂಗೀರಸರು ಪುತ್ರನಿಂದ ದುಃಖವೊದಗುವ ಸಂಭವವಿದೆಯೆಂದು ಹಿಂದೆಯೇ ತಿಳಿಸಿದುದನ್ನು ನೆನಪಿಸಿದರು. ರಾಜನು ನಾರದರ ಪಾದಗಳನ್ನು ಹಿಡಿದು ಮಗನನ್ನು ಉಳಿಸಿರೆಂದು ಬೇಡಿಕೊಂಡ. ನಾರದರು ‘‘ನಿನಗೇನೋ ಮಗು ಬೇಕು, ನಾನೂ ಮಗುವನ್ನು ಜೀವಿತಗೊಳಿಸಬಲ್ಲೆ. ಆದರೆ ಆ ಜೀವವು ಮರಳಿಬರಲು ಇಚ್ಛಿಸಬೇಕಲ್ಲವೇ? ಕಾಲಕ್ಕೊಳಪಟ್ಟ ದೇಹವು ಎಂದಿಗೂ ಶಾಶ್ವತವಲ್ಲ! ಆದ್ದರಿಂದ ವ್ಯರ್ಥವಾಗಿ ದುಃಖಿಸಬೇಡ’’ ಎಂದರು. ಚಿತ್ರಕೇತುವು ಪಟ್ಟು ಹಿಡಿದುದರಿಂದ ನಾರದರು ಮಗುವನ್ನು ಬದುಕಿಸಿದರು. ನಿದ್ರೆಯಿಂದ ಎದ್ದಂತೆ ಬಂದ ರಾಜಕುಮಾರ ‘‘ನನಗೇಕೆ ಮರುಜೀವ ಕೊಟ್ಟಿರಿ?’’ ಎಂದು ಪ್ರಶ್ನಿಸಿದ. ಅದಕ್ಕೆ ನಾರದರು ‘‘ನಿನಗೆ ಆಯುಷ್ಯ ಮುಗಿದಿಲ್ಲ. ಅಪಮೃತ್ಯುವಾಗಿದೆ’’ ಎಂದರು. ಕುಮಾರನು ‘‘ನಾರದಮಹರ್ಷಿಗಳೇ, ನಿಮಗೆ ತಿಳಿಯದ್ದೇನಿದೆ? ತಾಯಿ- ತಂದೆ- ಬಂಧುಗಳೆಲ್ಲಾ ಶರೀರಕ್ಕೆ ಅಂಟಿಕೊಂಡಿರುವವರೆಗೆ ಮಾತ್ರ. ಭಗವಂತನ ನಾಮಸ್ಮರಣೆಯೊಂದೇ ಶಾಶ್ವತ ಸುಖ ನೀಡುವುದು’’ ಎಂದು ಹೇಳಿ ದೇಹತ್ಯಾಗ ಮಾಡಿದ.
ಇದನ್ನು ಕಂಡ ಮಹಾರಾಜ ಮನಃಪರಿವರ್ತನೆಗೊಂಡು ಮೋಕ್ಷಕ್ಕಾಗಿ ಹಂಬಲಿಸತೊಡಗಿದ; ನಾರದರಿಂದ ಮಹಾವಿಷ್ಣುವಿನ ಸ್ತುತಿರೂಪ ಮಂತ್ರೋಪದೇಶವನ್ನು ಪಡೆದ. ಏಳು ದಿನಗಳ ಕಾಲ ಹಗಲೂರಾತ್ರಿ ಆಹಾರವಿಲ್ಲದೇ ಕೇವಲ ನೀರನ್ನು ಮಾತ್ರ ಸೇವಿಸಿ ಕಠಿಣವಾದ ತಪಸ್ಸನ್ನು ಮಾಡಿದ. ಅವನ ಪಾಪಗಳೆಲ್ಲವೂ ಪರಿಹಾರವಾಗಿ ಮೋಕ್ಷವನ್ನು ಪಡೆದ ಎಂದು ಶ್ರೀಮದ್ಭಾಗವತ ವರ್ಣಿಸುತ್ತದೆ.
ಈ ಘಟನೆ ಇಂದಿಗೂ ನಮ್ಮ ಜೀವನಕ್ಕೊಂದು ಪಾಠವಾಗಿದೆ. ಪುರುಷಪ್ರಯತ್ನವನ್ನು ಮಾಡುವಾಗ ಲೌಕಿಕಸುಖಕ್ಕೆ ಮಾತ್ರ ಅಂಟಿಕೊಳ್ಳದೇ ವಿವೇಕದಿಂದ ವರ್ತಿಸಬೇಕು; ಆತ್ಮಸುಖದ ಕಡೆಗೂ ಲಕ್ಶ್ಯವಿರಬೇಕು ಎಂಬುದು ಇದರ ತಾತ್ಪರ್ಯ. ಆಹಾರಕ್ಕಾಗಿ ಬೆಸ್ತನ ತೆಕ್ಕೆಯಲ್ಲಿ ಸಿಕ್ಕಿ ಸಾಯುವ ಮೀನಿನಂತೆ ಮಾಯೆಗೆ ಸಿಲುಕಿ, ಇಂದ್ರಿಯ ಸುಖವನ್ನು ಮಾತ್ರ ಅನುಭವಿಸಿದರೆ ಮೃತ್ಯುವಿನ ತೆಕ್ಕೆಗೆ ಬಿದ್ದು ಜನನ ಮರಣಗಳ ಚಕ್ರದಲ್ಲೇ ಸುತ್ತಬೇಕಾಗುತ್ತದೆ. ಜ್ಞಾನಿಗಳ ಉಪದೇಶದಂತೆ ಕೈಗೊಳ್ಳುವ ತಪಸ್ಯೆಯು ಪಾಪಗಳನ್ನು ಕಳೆದು ನಮ್ಮ ಉದ್ಧಾರಕ್ಕೆ ಕಾರಣವಾಗುತ್ತದೆ.
ಲೌಕಿಕಸುಖಗಳಿಂದ ದೂರವಾಗಬೇಕೆಂಬುದು ಭಾರತೀಯ ಮಹರ್ಷಿಗಳ ಅಭಿಪ್ರಾಯವಲ್ಲ. ಯೋಗ- ಭೋಗಗಳೆರಡಕ್ಕೂ ಆಯತನ (ಮನೆ) ಆಗಿರುವ ಈ ಶರೀರದಲ್ಲಿ ಯೋಗಕ್ಕೆ ತೊಡಕಾಗದೆ, ಅದಕ್ಕೆ ಪೋಷಕವಾಗುವ ರೀತಿಯಲ್ಲಿ ಭೋಗವನ್ನು ಅನುಭವಿಸಲು ಎಲ್ಲರಿಗೂ ಹಕ್ಕುಂಟು.
ಚಿತ್ರಕೇತುವಿನಂತೆಯೇ, ಧ್ರುವ- ಪ್ರಹ್ಲಾದನಂತಹ ಭಾಗವತೋತ್ತಮರೂ ನಾರದರಿಂದಲೇ ಉಪದೇಶವನ್ನು ಪಡೆದರು. ಯಾರು ಈ ನಾರದರು? ‘‘ನಾರಂ ಆತ್ಮವಿಷಯಕಂ ಜ್ಞಾನಂ ದದಾತಿ ಇತಿ ನಾರದಃ’’ ಅಂದರೆ (ಆತ್ಮ) ಪರಮಾತ್ಮನ ವಿಷಯದ ಜ್ಞಾನವನ್ನು ಕೊಡುವಂತಹವನೇ ನಾರದ.
ಜ್ಞಾನಿಗಳು ಜ್ಞಾನದೀಪವನ್ನು ನಾನಾ ವಿಧವಾಗಿ ಬೆಳಗಿಸಿಕೊಂಡು ಬಂದಿರುತ್ತಾರೆ. ಅದನ್ನು ಉಜ್ವಲವಾಗಿರಿಸಲು ಅನೇಕ ಸಾಧನಗಳುಂಟು. ಅವುಗಳಲ್ಲಿ ಜ್ಞಾನಿಗಳ ಸಂಗ-ಸೇವೆಗಳು ಅತ್ಯಂತ ಸುಲಭವಾದ ಹಾಗೂ ಹೆಚ್ಚು ಪರಿಣಾಮಕಾರಿಯಾದ ಉಪಾಯ. ಸತ್ಸಂಗದ ಮೂಲಕ ಉದ್ಧಾರವಾದ ಅನೇಕರ ಕಥೆಗಳನ್ನು ಪುರಾಣ- ಇತಿಹಾಸದಲ್ಲಿ ಕಾಣಬಹುದಾಗಿದೆ. ಗುರುಭಕ್ತಿ- ಗುರುಸೇವೆ ನಮ್ಮ ಸಂಸ್ಕೃತಿಯೊಡನೆ ಹೆಣೆದುಕೊಂಡಿರುವ ಜ್ಞಾನಸಂಪ್ರದಾಯದ ಮುಖ್ಯರೂಪಗಳಾಗಿವೆ ಎಂಬ ಶ್ರೀರಂಗಮಹಾಗುರುಗಳ ಅಭಿಪ್ರಾಯ ಇಲ್ಲಿ ಸ್ಮರಣೀಯವಾಗಿದೆ.
(ಲೇಖಕರು ಸಂಸ್ಕೃತಿ ಚಿಂತಕರು, ಅಷ್ಟಾಂಗಯೋಗ ವಿಜ್ಞಾನಮಂದಿರಂ)