ಯೋಗಿವರೇಣ್ಯ ಶ್ರೀ ಸತ್ಯವರತೀರ್ಥರು

Samskruthi 2
Published on
ಸನಾತನ ಧರ್ಮದ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತ ಸಮಾಜದ ಏಳಿಗೆಗೆ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡಿದ ಶ್ರೀ ಸತ್ಯವರ ತೀರ್ಥರ ಆರಾಧನೆ, ವೃಂದಾವನ ಪ್ರವೇಶಿಸಿದ ಆಂಧ್ರಪ್ರದೇಶದ ಸಂತೇಬಿದನೂರಿನಲ್ಲಿ ಆ. 4ರಂದು ನಡೆಯಲಿದೆ.

| ಮನೋಹರ ಜೋಶಿ

ಸನಾತನ ವೈದಿಕ ಪರಂಪರೆಯು ಕ್ಷೀಣಿಸುತ್ತಿದ್ದ ಸಂದರ್ಭಗಳಲ್ಲೆಲ್ಲ ಧರ್ಮ ಜಾಗೃತಿಯನ್ನು ಮಾಡಿ ಧರ್ಮ ಪುನರುತ್ಥಾನಗೊಳಿಸಲು ಕಾಲ ಕಾಲಕ್ಕೆ ಮಹಾಮಹಿಮರು ಭುವಿಯಲ್ಲಿ ಆವಿರ್ಭವಿಸಿದ್ದಾರೆ. ಧರ್ಮದ ಅಡಿಪಾಯವನ್ನು ಗಟ್ಟಿಗೊಳಿಸುತ್ತ, ತಮ್ಮ ಜೀವನವನ್ನೇ ಆ ಕಾರ್ಯಕ್ಕೆ ಮುಡಿಪಾಗಿಟ್ಟು ಸದಾ ಸಮಾಜದ ಹಿತವನ್ನು ಬಯಸಿ ಕಾರ್ಯ ಮಾಡಿದ್ದಾರೆ. ಅಂತಹ ಪೂಜ್ಯರಲ್ಲಿ ಉತ್ತರಾದಿಮಠ ಪರಂಪರೆಯಲ್ಲಿ ಬಂದ ಶ್ರೀ ಸತ್ಯವರ ತೀರ್ಥರು ಕೂಡ ಒಬ್ಬರು. ಜ್ಞಾನವರೇಣ್ಯರು, ಟಿಪ್ಪಣಿಕಾರರು, ಗ್ರಂಥಕರ್ತರು ಆಗಿದ್ದ ಅವರು ಸಮಾಜದ ಓರೆಕೋರೆಗಳನ್ನು ತಮ್ಮ ನಡೆನುಡಿ ಬೋಧನೆಗಳಿಂದ ತಿದ್ದಿದವರು. ವೈಷ್ಣವ ಸಿದ್ಧಾಂತವನ್ನು, ಶ್ರೀ ಮಧ್ವ ಗುರುಗಳು ಚಾಲನೆ ನೀಡಿದ ಹರಿದಾಸ ಸಾಹಿತ್ಯವನ್ನು ಬೆಳೆಸಿದವರು. ಶ್ರೀ ಜಗನ್ನಾಥ ದಾಸರೇ ಮೊದಲಾದ ದಾಸವರೇಣ್ಯರಿಗೆ ಪ್ರೇರೇಪಕರಾಗಿದ್ದವರು.

ಮಹಾ ತಪಸ್ವಿಗಳಾಗಿದ್ದ ಶ್ರೀ ಸತ್ಯವರ ತೀರ್ಥರು ಪೀಠದಲ್ಲಿ ಕೇವಲ 3 ವರುಷಗಳವರೆಗೆ ವಿರಾಜಮಾನರಾಗಿದ್ದರೂ ಸಹ ಸಮಾಜಕ್ಕೆ ಅವರು ನೀಡಿದ ಸೇವೆ-ಮಾರ್ಗದರ್ಶನ ಅಪಾರ. ಸವಣೂರಿನ ಶ್ರೀ ಸತ್ಯಬೋಧ ತೀರ್ಥರ ಸನ್ನಿಧಿಯಲ್ಲಿ 24 ಲಕ್ಷ ಪ್ರಣವ ಮಂತ್ರ ಉಪಾಸನೆ ಮಾಡಿ ಸಮಾಜದ ಸ್ವಾಸ್ಥ್ಯ ಕಾಪಾಡಿದ ಇವರ ಸಾಧನೆ ಅಮೋಘ. ಟೀಕಾಚಾರ್ಯರೆಂದೇ ಪ್ರಸಿದ್ಧರಾದ, ಮಲಖೇಡದಲ್ಲಿ ನೆಲೆಸಿರುವ ಶ್ರೀ ಜಯತೀರ್ಥ ಮುನಿಗಳ ಮೇರು ಕೃತಿ ಶ್ರೀ ನ್ಯಾಯಸುಧಾ ಗ್ರಂಥದ ಎರಡು ಅಧ್ಯಾಯಗಳಿಗೆ ಹಾಗೂ ಮಹಾಭಾರತದ ತಾತ್ಪರ್ಯಕ್ಕೆ ಅದ್ಭುತವಾದ ಟಿಪ್ಪಣಿಗಳನ್ನು ರಚಿಸಿದ ಮಹಾನುಭಾವರು. ಅವರ ತಪಶ್ಶಕ್ತಿಯನ್ನು ಕಂಡು ದಿವಾನ್ ಪೂರ್ಣಯ್ಯನವರು ಶ್ರೀಮಠಕ್ಕೆ ವಿಶೇಷ ಸೇವೆ ಸಲ್ಲಿಸಿದ್ದು ಇಲ್ಲಿ ಸ್ಮರಣೀಯ.

ಕೋಟಿ ತುಳಸಿದಳ ಅರ್ಚನೆ: ಹಿಂದೆ, ಅನ್ಯ ಧರ್ವಿುಯರ ಆಕ್ರಮಣದ ಕಠಿಣ ಕಾಲದಲ್ಲಿ ಶ್ರೀಮಠದ ಸಂಪತ್ತನ್ನು ಸಂರಕ್ಷಿಸುವ ಕಾರ್ಯ ಅತ್ಯಂತ ಕ್ಲಿಷ್ಟ ಮತ್ತು ಅನಿವಾರ್ಯವಾಗಿತ್ತು. ಅಂತಹ ಕಾಲದಲ್ಲೂ ಪಟ್ಟದ ದೇವರಿಗೆ ಸಂಸ್ಥಾನ ಪ್ರತಿಮೆಗಳಿಗೆ ನಿತ್ಯವೂ ಕೋಟಿ ತುಳಸಿ ಅರ್ಚನೆ ಮಾಡಿ ಆರಾಧಿಸುತ್ತಿದ್ದರು. ತುಳಸಿ ಅರ್ಚನೆಯ ಮಂಗಳದ ದಿನ ಲಕ್ಷ ಜನರಿಗೆ ಭೋಜನ ಮಾಡಿಸಿ, ಹರಿಗೆ ಅರ್ಪಿಸಿದ್ದು ವಿಶೇಷ ಘಟನೆ. ಉತ್ತರಾದಿಮಠದ ಪ್ರಸ್ತುತ ಪೀಠಾಧಿಪತಿಗಳಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು ತಮ್ಮ 27ನೇ ಚಾತುರ್ವಸ್ಯ ವೃತವನ್ನು ಶ್ರೀ ಸತ್ಯವರತೀರ್ಥರ ಮೂಲ ವೃಂದಾವನ ಸನ್ನಿಧಾನದಲ್ಲಿ ನೆರವೇರಿಸುತ್ತಿದ್ದು ನಿತ್ಯ ಶ್ರೀರಾಮದೇವರಿಗೆ ಲಕ್ಷ ತುಳಸಿ ಅರ್ಚನೆ ಮಾಡುತ್ತಿರುವುದು, ಶ್ರೀ ಸತ್ಯವರತೀರ್ಥರು ನೆರವೇರಿಸಿದ ಕೋಟಿ ತುಳಸಿ ಅರ್ಚನೆಯ ಇತಿಹಾಸ ಮರು ಸೃಷ್ಟಿಸಿದ್ದು ಭಕ್ತರ ಯೋಗಾಯೋಗವೇ ಸರಿ.

ವೃಂದಾವನ ಪ್ರವೇಶ: ಪಿಂಗಳ ನಾಮ ಸಂವತ್ಸರದಲ್ಲಿ ನ್ಯಾಮಗೊಂಡಲು ಕ್ಷೇತ್ರದಲ್ಲಿ ವೈಭವದ ಚಾತುರ್ವಸ್ಯ ವ್ರತವನ್ನು ಆಚರಿಸುತ್ತ ಮುಂದೆ ನವರತ್ನ ಮನೆತನದ ಪಂಡಿತೋತ್ತಮರಿಗೆ ಆಶ್ರಮ ಕೊಡಮಾಡಿ ಶ್ರೀ ಸತ್ಯಧರ್ಮ ತೀರ್ಥರೆಂದು ನಾಮಕರಣ ಮಾಡಿ ಸಂಸ್ಥಾನವನ್ನು ಒಪ್ಪಿಸಿದರು. ಶ್ರೀ ಸತ್ಯವರತೀರ್ಥರು ಶ್ರಾವಣ ಮಾಸದ ಶುಕ್ಲ ಪಕ್ಷದ ಸಪ್ತಮಿಯಂದು ವೃಂದಾವನ ಪ್ರವೇಶಿಸಿದರು. ಜನಮೇಜಯ ಚಕ್ರವರ್ತಿಯಿಂದ ಪ್ರತಿಷ್ಠಾಪಿತವಾದ ಆಂಜನೇಯ ದೇವರ ಸನ್ನಿಧಾನದಿಂದ ಕೂಡಿದ ಆಂಧ್ರಪ್ರದೇಶ ಅನಂತಪುರ ಜಿಲ್ಲೆಯ ಪವಿತ್ರ ಉತ್ತರ ಪಿನಾಕಿನಿ ನದಿ ತೀರದಿಂದ ಸುತ್ತುವರೆದ ಸಂತೆಬಿದನೂರು ಕ್ಷೇತ್ರವು ಇವರ ಮೂಲವೃಂದಾವನ ಸನ್ನಿಧಾನದಿಂದ ಕೂಡಿದ್ದು ಲಕ್ಷಾಂತರ ಭಕ್ತರಿಗೆ ಪುಣ್ಯ ಕ್ಷೇತ್ರವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net