

| ಸಚಿನ್ ಕೆ. ದೇಸಾಯಿ ವಿಜಯಪುರ
ದಕ್ಷಿಣ ಭಾರತದ ಸುಪ್ರಸಿದ್ಧ ಯಾತ್ರಾ ಸ್ಥಳ, ಕೋಟ್ಯಂತರ ಭಕ್ತರ ಶ್ರದ್ಧಾ ಕೇಂದ್ರವಾದ ಮಹಾರಾಷ್ಟ್ರದ ಪಂಢರಪುರದತ್ತ ಭಕ್ತಸಾಗರ ಹರಿದು ಬರುತ್ತಿದೆ. ಆಷಾಢ ಶುದ್ಧ ಏಕಾದಶಿಯಂದು (ಈ ಬಾರಿ ಜುಲೈ 10) ಅಲ್ಲಿ ನಡೆಯುವ ಭವ್ಯ ಉತ್ಸವದಲ್ಲಿ 16 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುತ್ತಾರೆ. ವಿಠ್ಠಲನ ದರ್ಶನ ಪಡೆಯುವ ತವಕದಲ್ಲಿ ಅಂದಾಜು 12 ಲಕ್ಷ ಜನ ತಾಳ, ತಂಬೂರಿ, ನಾಮ ಸಂಕೀರ್ತನೆಯೊಂದಿಗೆ ಪಾದಯಾತ್ರೆ ಆರಂಭಿಸಿದ್ದಾರೆ. ಎಲ್ಲ ಯಾತ್ರಿಕರ ತಂಡಗಳು ಸೊಲ್ಲಾಪುರ ಜಿಲ್ಲೆ ಪ್ರವೇಶಿಸಿದ್ದು, ಜುಲೈ 9ರಂದು ಕ್ಷೇತ್ರವನ್ನು ತಲುಪಲಿವೆ. ಕರೊನಾ ಕಾರಣದಿಂದ ಒಂದೆರಡು ವರ್ಷ ಸ್ಥಬ್ದವಾಗಿದ್ದ ದೇಶದ ಅತಿದೊಡ್ಡ ಭಕ್ತಿಯಾತ್ರೆಗೆ ಎಲ್ಲೆಡೆ ಭವ್ಯ ಸ್ವಾಗತ ದೊರೆಯುತ್ತಿದೆ.
ಆಷಾಢ ಮಾಸ ಆರಂಭವಾಗುತ್ತಿದ್ದಂತೆ ಪಂಢರಪುರಕ್ಕೆ ಪ್ರತಿ ದಿನ ಒಂದು ಲಕ್ಷಕ್ಕೂ ಹೆಚ್ಚು ಜನ ಆಗಮಿಸುತ್ತಾರೆ. ಎಲ್ಲ ಭಕ್ತರಿಗೂ ದರ್ಶನ ಸಿಗಲಿ ಎಂದು ವಿಠ್ಠಲ ಹಾಗೂ ರುಕ್ಮಿಣಿಗೆ ರಾಜೋಪಚಾರ ಸೇವೆಗಳನ್ನು ನಿಲ್ಲಿಸಲಾಗುತ್ತದೆ. ಗರ್ಭಗೃಹ ಪಕ್ಕದ ಶೇಷ ಘರ್ದಲ್ಲಿ ದೇವರಿಗಾಗಿ ಮೀಸಲಿಟ್ಟ ಹಾಸಿಗೆಯನ್ನು ತೆಗೆದು ವಿಠ್ಠಲ ಹಾಗೂ ರುಕ್ಮಿಣಿ ಹಿಂದೆ ದಿಂಬು ಇಡಲಾಗುತ್ತದೆ. ಉತ್ಸವ ಮುಗಿಯುವವರೆಗೆ ದೇವರು ಮಲಗುವಂತಿಲ್ಲ. ಪೂಜೆ ಸಮಯ ಹೊರತುಪಡಿಸಿ 24 ಗಂಟೆಯೂ ಭಕ್ತರಿಗೆ ದರ್ಶನ ನೀಡಬೇಕು ಎಂಬ ಸಂಪ್ರದಾಯ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ.
ಸಂತರ ಪಾದುಕೆಗಳನ್ನು ಪಲ್ಲಕ್ಕಿಯಲ್ಲಿ ಹೊತ್ತು ಪಂಢರಪುರ ಪಾದಯಾತ್ರೆ ಕೈಗೊಳ್ಳುವ ಸಂಪ್ರದಾಯವನ್ನು ವಾರಕರಿ ಎನ್ನುತ್ತಾರೆ. 1685ರಲ್ಲಿ ಈ ಯಾತ್ರೆಗೆ ಮೊದಲು ಚಾಲನೆ ನೀಡಿದವರು ತುಕಾರಾಮ ಮಹಾರಾಜರ ಮಗ ನಾರಾಯಣ ಮಹಾರಾಜರು. 1820ರಲ್ಲಿ ಈ ಯಾತ್ರೆಯನ್ನು ಇನ್ನಷ್ಟು ಭವ್ಯಗೊಳಿಸಿದವರು ಹೈಬತ್ಬಾಬಾ. ಸದ್ಯ ಅಳಂದದ ಜ್ಞಾನೇಶ್ವರ ಮಹಾರಾಜರ ಪಲ್ಲಕ್ಕಿ, ದೇಹುವಿನ ತುಕಾರಾಮ, ಪೈಠಣದ ಏಕನಾಥ, ತ್ರಯಂಬಕೇಶ್ವರದ ನಿವೃತ್ತಿನಾಥ, ಮುಕ್ತಿನಗರದ ಮುಕ್ತಾಬಾಯಿ, ಶೇಂಗಾವದ ಗಜಾನನ ಮಹಾರಾಜರು, ಸಾಸವಾಡದ ಸೋಪಾನ ಮಹಾರಾಜರ ಪಲ್ಲಕ್ಕಿ ಸೇರಿ ನೂರಾರು ಪಲ್ಲಕ್ಕಿಗಳು ಆಗಮಿಸುತ್ತಿವೆ.
ವಾರಕರಿ ಭಕ್ತರ ಸ್ವಾಗತಕ್ಕಾಗಿ ಪಂಢರಪುರ ಬಳಿ 6 ಲೇನ್ಗಳ ರಸ್ತೆ ನಿರ್ವಿುಸಲಾಗಿದ್ದು, ಭಕ್ತರ ವಸತಿಗಾಗಿ ಪಂಢರಪುರದ ಚಂದ್ರಭಾಗಾ (ಭೀಮಾ) ನದಿ ದಡದ ಪಾಸಷ್ಟಿ (65 ಎಕರೆ ಪ್ರದೇಶ) ಯಲ್ಲಿ ಪಾದಯಾತ್ರಿಕರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. 400ಕ್ಕೂ ಹೆಚ್ಚು ಟೆಂಟ್ಗಳನ್ನು ನಿರ್ವಿುಸಬಹುದಾದ ಈ ಸ್ಥಳದಲ್ಲಿ ಅಂದಾಜು 3 ಲಕ್ಷ ಜನ ಇರುತ್ತಾರೆ. ವಿಠ್ಠಲನ ಚರಣ ಸ್ಪರ್ಶಿಸಿ ದರ್ಶನ ಪಡೆಯುವ ಭಕ್ತರಿಗಾಗಿ ದೇವಸ್ಥಾನ ಸಮಿತಿಯಿಂದ ಅಂದಾಜು 5 ಕಿ.ಮೀ.ಉದ್ದದ ಸರದಿ ನಿರ್ವಿುಸಲಾಗಿದೆ. ಈ ಸರದಿಯಲ್ಲಿ ಮ್ಯಾಟ್ ಹಾಸಲಾಗಿದ್ದು, ಮಳೆಯಿಂದಲೂ ರಕ್ಷಣೆ ಪಡೆಯಬಹುದಾಗಿದೆ. ಸರದಿ ಕೊನೆಯಲ್ಲಿ ಅಂದರೆ ಗೋಪಾಲಪುರದಲ್ಲಿ 6 ಬೃಹತ್ ಟೆಂಟ್ಗಳನ್ನು ನಿರ್ವಿುಸಲಾಗಿದೆ. ಒಂದೊಂದು ಟೆಂಟ್ನಲ್ಲಿ 2 ಸಾವಿರಕ್ಕೂ ಹೆಚ್ಚು ಜನ ವಿಶ್ರಾಂತಿ ಪಡೆಯಬಹುದು. ಇವರಿಗೆಲ್ಲ ಉಚಿತ ಕುಡಿವ ನೀರು, ಬೆಳಕು, ಕೆಲವೆಡೆ 24 ಗಂಟೆ ಉಚಿತ ಪ್ರಸಾದ, ಉಪಾಹಾರ, ಏಕಾದಶಿ ದಿನ ಹಣ್ಣು ಹಂಪಲು ಒದಗಿಸಲಾಗುತ್ತಿದೆ. ಉತ್ಸವದಲ್ಲಿ 12 ವೈದ್ಯಕೀಯ ತಂಡಗಳು 5 ಪ್ರಮುಖ ಸ್ಥಳಗಳಲ್ಲಿ ಚಿಕಿತ್ಸೆ ನೀಡಲಿದ್ದು, ಕರೊನಾ ಕೇರ್ ಸೆಂಟರ್ ಕೂಡ ಆರಂಭಿಸಲಾಗಿದೆ.
ಭಕ್ತರಿಗಾಗಿ ಸಾವಿರಕ್ಕೂ ಹೆಚ್ಚು ಶೌಚಗೃಹಗಳನ್ನು ನಿರ್ವಿುಸಲಾಗಿದ್ದು, ಇದರ ಜತೆಗೆ ಮೂರು ದಿನ ಸಂಚಾರಿ ಶೌಚಗೃಹ ಹಾಗೂ ನದಿ ದಡದಲ್ಲಿ ಬಟ್ಟೆ ಬದಲಿಸಲು ಕೂಡ ವ್ಯವಸ್ಥೆ ಕಲ್ಪಿಸಲಾಗಿದೆ. ಭದ್ರತೆಗಾಗಿ 5 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಹಾಗೂ ಎಲ್ಲೆಡೆ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಇದಲ್ಲದೆ ಕರ್ನಾಟಕ, ಆಂಧ್ರ, ಮಧ್ಯಪ್ರದೇಶ, ಕೇರಳ ಮತ್ತಿತರ ರಾಜ್ಯಗಳಿಂದ ವಾಹನಗಳ ಮೂಲಕವೂ ಪಂಢರಪುರ ಉತ್ಸವಕ್ಕೆ ಲಕ್ಷಾಂತರ ಜನ ಆಗಮಿಸುತ್ತಾರೆ. ಇದಕ್ಕಾಗಿ 4200 ಸಾರಿಗೆ ಬಸ್ ಹಾಗೂ 32 ರೈಲುಗಳು ಹೊರಡಲಿವೆ. ಪಂಢರಪುರ ಹೊರವಲಯದಲ್ಲಿ 4 ನಿಲ್ದಾಣಗಳು ಮತ್ತು 15 ಕಡೆ ವಾಹನಗಳ ರ್ಪಾಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
ಪೂಜೆ ಸಲ್ಲಿಸುವ ಸಿಎಂ: ಆಷಾಢ ಶುದ್ಧ ಏಕಾದಶಿ ದಿನ ನಸುಕಿನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದಂಪತಿ ಪೂಜೆ ಸಲ್ಲಿಸುವ ಸಂಪ್ರದಾಯ 1996ರಿಂದ ನಡೆದುಕೊಂಡು ಬಂದಿದೆ. ಈ ಬಾರಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಪೂಜೆ ಸಲ್ಲಿಸಲಿದ್ದು, ಇವರ ಜತೆ ಇಬ್ಬರು ವಾರಕರಿ ದಂಪತಿ ಪೂಜೆಯಲ್ಲಿ ಭಾಗವಹಿಸುತ್ತಾರೆ. ಈ ವಾರಕರಿ ದಂಪತಿಯನ್ನು ದೇವಸ್ಥಾನ ವತಿಯಿಂದ ವಿಶೇಷವಾಗಿ ಸನ್ಮಾನಿಸಲಾಗುತ್ತದೆ. ಉಳಿದಂತೆ ದೇವಸ್ಥಾನದ ಬಳಿ ಬೆಳಗ್ಗೆ ನಗರ ಪ್ರದಕ್ಷಿಣೆ, ಭಜನೆ, ಕೀರ್ತನೆ, ಸಂಜೆ ರಥೋತ್ಸವ ನಡೆಯುತ್ತದೆ.
ಶಿಖರ ದರ್ಶನ: ಆಷಾಢ ಶುದ್ಧ ಏಕಾದಶಿಯನ್ನು ಶಯನಿ ಏಕಾದಶಿ ಎನ್ನಲಾಗುತ್ತದೆ. ಈ ದಿನ ದೇವರ ಯೋಗ ನಿದ್ರೆ ಆರಂಭವಾಗುತ್ತದೆ. ಕಾರ್ತಿಕ ಶುದ್ಧ ಏಕಾದಶಿ (ಪ್ರಬೋಧಿನಿ ಏಕಾದಶಿ) ದೇವರ ಯೋಗನಿದ್ರೆಯ ಕೊನೆಯ ದಿನ ಎಂಬುದು ಸಂಪ್ರದಾಯ. ಈ ಎರಡೂ ದಿನಗಳಲ್ಲಿ ದರ್ಶನ ಪಡೆದರೆ ವಿಶೇಷ ಫಲ ಎಂಬುದು ಭಕ್ತರ ನಂಬಿಕೆ. ಅದಕ್ಕಾಗಿ ಪಂಢರಪುರಕ್ಕೆ ಆಷಾಢದಲ್ಲಿ 16 ಲಕ್ಷಕ್ಕೂ ಹೆಚ್ಚು ಜನ ಆಗಮಿಸುತ್ತಾರೆ. ಒಂದೇ ದಿನ ಇಷ್ಟು ಜನ ಸೇರುವ ಅಪರೂಪದ ಕ್ಷೇತ್ರ ಎಂದು ಇಂಗ್ಲೆಂಡ್ನ ವರ್ಲ್ಡ್ ಬುಕ್ ರೆಕಾರ್ಡ್ಸ್ ಸಂಸ್ಥೆ ಶ್ರೀ ವಿಠ್ಠಲ ರುಕ್ಮಿಣಿ ಮಂದಿರ ಸಮಿತಿಗೆ 2017ರಲ್ಲಿ ವಿಶೇಷ ಗೌರವ ನೀಡಿದೆ. 24 ಗಂಟೆ ದರ್ಶನದ ವ್ಯವಸ್ಥೆ ಕಲ್ಪಿಸಿದರೂ ಪ್ರತಿ ದಿನ ಅಂದಾಜು 1 ಲಕ್ಷ ಜನ ದರ್ಶನ ಪಡೆಯಬಹುದಾಗಿದ್ದು, ಉಳಿದ ಭಕ್ತರು ದೇವಸ್ಥಾನದ ಶಿಖರ ದರ್ಶನದಲ್ಲೇ ದೈವವನ್ನು ಕಾಣುತ್ತಾರೆ.
ಅರಿವು ಮೂಡಿಸುವ ಐಟಿ ದಿಂಡಿ: ಅಳಂದದಿಂದ ಪಂಢರಪುರಕ್ಕೆ ಹೊರಡುವ 2 ಲಕ್ಷಕ್ಕೂ ಹೆಚ್ಚು ಜನರ ಬೃಹತ್ ವಾರಕರಿ ತಂಡದೊಂದಿಗೆ 2006ರಿಂದ ಪುಣೆ ನಗರದ ಸಾಫ್ಟ್ವೇರ್ ಎಂಜಿನಿಯರ್ಸ್ ಕೂಡ ಹೆಜ್ಜೆ ಹಾಕುತ್ತಿದ್ದಾರೆ. ಇವರು ‘ಐಟಿ ದಿಂಡಿ’ ಎಂಬ ಹೆಸರಿನ ತಂಡದೊಂದಿಗೆ ಆಳಂದದಿಂದ ಪುಣೆ ಹಾಗೂ ಪುಣೆದಿಂದ ಸಾಸವಾಡವರೆಗೆ ಕೇವಲ ಮೊದಲ 2ದಿನ ಯಾತ್ರೆಯಲ್ಲಿ ಭಾಗವಹಿಸುತ್ತಾರೆ. ಈ ತಂಡದಲ್ಲಿ ಪಾಲ್ಗೊಳ್ಳಲು ನೋಂದಣಿ ಕಡ್ಡಾಯ. ಡಿಡಿಡಿ.ಡಿಚಚ್ಟಜಿ.ಟ್ಟಜ ವೆಬ್ಸೈಟ್ ಮೂಲಕ ಆನ್ಲೈನ್ ನೋಂದಣಿ ಕೂಡ ಮಾಡಿಸಬಹುದು. 6 ಜನರಿಂದ ಆರಂಭವಾದ ಈ ತಂಡದಲ್ಲಿ ಇಂದು ಚಾರ್ಟರ್ಡ್ ಅಕೌಂಟಂಟ್ಸ್ಗಳು, ಕೆಲವು ಕಂಪನಿ ಮಾಲೀಕರು ಸೇರಿ ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುತ್ತಿದ್ದಾರೆ. ದಿಂಡಿಯಲ್ಲಿ ಭಾಗವಹಿಸುವವರಿಗೆ ವೀಕೆಂಡ್ಗಳಲ್ಲಿ ವಾರಕರಿ ಸ್ಕಿಲ್ ವರ್ಕ್ಶಾಪ್ ಕೂಡ ನಡೆಸಲಾಗುತ್ತದೆ. ಪಾದಯಾತ್ರೆಯಲ್ಲಿ ಭಕ್ತಿಗೀತೆಗಳನ್ನು ಹಾಡುವುದು, ನರ್ತನ ಮಾಡುವುದರ ಬಗ್ಗೆ ಇಲ್ಲಿ ಮಾರ್ಗದರ್ಶನ ನೀಡಲಾಗುತ್ತದೆ. ಹಸಿರು ಬೆಳೆಸಿ, ಪ್ಲಾಸ್ಟಿಕ್ ಬಳಕೆ ನಿಷೇಧಿಸಿ, ಸ್ವಚ್ಛತೆ ಕಾಪಾಡಿ ಸೈನಿಕರನ್ನು ಗೌರವಿಸಿ, ರೈತರ ಆತ್ಮಹತ್ಯೆ ತಡೆಯಲು ಕೈಜೋಡಿಸಿ ಎಂದು ಪ್ರತಿ ವರ್ಷ ಒಂದೊಂದು ಥೀಮ್ೊಂದಿಗೆ ಐಟಿ ದಿಂಡಿ ಸದಸ್ಯರು ಯಾತ್ರಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದು, ಈ ವರ್ಷ ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ‘ಅಮೃತಾ ಚ ವರ್ಷ, ವಿಠಾಯಿ ಚ ಹರ್ಷ’ ಎಂಬ ಪರಿಕಲ್ಪನೆಯಲ್ಲಿ ಭಾಗವಹಿಸಿ ಗಮನ ಸೆಳೆಯುತ್ತಿದ್ದಾರೆ.