

| ಪ್ರಶಾಂತ ರಿಪ್ಪನ್ಪೇಟೆ
ಜುಕ್ತಿ ಹಿರೇಮಠದ ಮೂಲ ಬಿಜಾಪುರ ಜಿಲ್ಲೆಯ ಯಳಮಲ್ಲಿ ಗ್ರಾಮ. ಶ್ರೀಮಠದ ವಿದ್ವತ್ ಪರಂಪರೆಗೆ ಬಿಜಾಪುರದ ಆದಿಲ್ ಶಾಹಿಗಳು ಶರಣಾಗಿದ್ದರು. ತಮಗೆ ಬಂದೊದಗಿದ್ದ ಸಮಸ್ಯೆಗೆ ಯಳಮಲ್ಲಿ ಹಿರೇಮಠದ ಪೂಜ್ಯರಿಂದ ಸಲಹೆ ಮತ್ತು ಮಾರ್ಗದರ್ಶನ ಪಡೆದು ಆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಾರೆ. ಅದಕ್ಕೆ ಪ್ರತಿಯಾಗಿ ಯಳಮಲ್ಲಿ ಹಿರೇಮಠಕ್ಕೆ ಯುಕ್ತಿ ಹಿರೇಮಠ ಎಂಬ ಬಿರುದನ್ನು ನೀಡಿದ್ದು ಮಠದ ದಾಖಲೆಯಲ್ಲಿದೆ.
ಯುಕ್ತಿ ಎಂದರೆ ಬುದ್ಧಿ, ಜ್ಞಾನ ಎಂದರ್ಥ. ಯುಕ್ತಿ ಹಿರೇಮಠ ಎಂಬ ಹೆಸರು ಮುಂದೆ ಜನಗಳ ಬಾಯಲ್ಲಿ ಜುಕ್ತಿ ಹಿರೇಮಠ ಎಂದಾಗಿದೆ. ಕಾರಣಾಂತರದಿಂದ ಯಳಮಲ್ಲಿಯಿಂದ ಮಸೂತಿಗೆ, ಮಸೂತಿಯಿಂದ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಸೂಡಿಗೆ ಮಠ ಸ್ಥಳಾಂತರಗೊಂಡಿದೆ. ಸನಾತನ ಪಂಚಪೀಠಗಳಲ್ಲೊಂದಾದ ಕಾಶೀ ಜ್ಞಾನಸಿಂಹಾಸನ ಪೀಠದ ಶಾಖಾ ಮಠವಾಗಿರುವ ಜುಕ್ತಿ ಹಿರೇಮಠದ ಲಭ್ಯ ದಾಖಲೆಗಳ ಪ್ರಕಾರ ಕ್ರಿ.ಶ. 1126ರಿಂದ ಇಲ್ಲಿಯವರೆಗೆ 14 ಮಠಾಧೀಶರು ಆಗಿ ಹೋಗಿದ್ದಾರೆ. ಜುಕ್ತಿ ಹಿರೇಮಠದ ಬಹುತೇಕ ಎಲ್ಲ ಶ್ರೀಗಳು ಕಾಶಿಯಲ್ಲಿ ಅಧ್ಯಯನ ಮಾಡಿದ ಮಹಾ ಪಂಡಿತರು. ಲಿಂಗೈಕ್ಯ ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ಪ್ರವಚನದಲ್ಲಿ ನಾಡಿನಲ್ಲೇ ಅತ್ಯಂತ ಪ್ರಸಿದ್ಧರಾಗಿದ್ದರು. ಲಿಂಗೈಕ್ಯ ಉಮಾಪತಿ ಶಿವಾಚಾರ್ಯ ಸ್ವಾಮಿಗಳು ಸಂಸ್ಕೃತ ವಿದ್ವಾಂಸರಾಗಿದ್ದು, ಜುಕ್ತಿ ಹಿರೇಮಠದ ವಿದ್ವತ್ ಪರಂಪರೆಗೆ ಹೆಚ್ಚಿನ ಘನತೆ ತಂದು ಕೊಟ್ಟಿದ್ದಾರೆ.
ಹಿರಿಯ ಶ್ರೀಗಳ ಪುಣ್ಯಾರಾಧನೆ: ಶ್ರೀ ಉಮಾಪತಿ ಶಿವಾಚಾರ್ಯ ಸ್ವಾಮಿಗಳು ಕಾಶಿಯಲ್ಲಿ ಸಂಸ್ಕೃತ, ತರ್ಕ, ವ್ಯಾಕರಣ, ಶಾಸ್ತ್ರಗಳ ಅಧ್ಯಯನ ಮಾಡಿ ಆಚಾರ್ಯ ಪದವಿಯನ್ನು ಪಡೆದಿದ್ದರು. ಮಠದಲ್ಲಿ ಉಚಿತ ಸಂಸ್ಕೃತ ಪಾಠಶಾಲೆ, ಗದಗದಲ್ಲಿ ಜುಕ್ತಿ ಶಾಖಾಮಠವನ್ನು ಸ್ಥಾಪಿಸಿದ್ದ ಶ್ರೀಗಳು 1947ರಲ್ಲಿ ಲಿಂಗೈಕ್ಯರಾಗಿದ್ದು, ಪ್ರತಿವರ್ಷ ಆಶ್ವೀಜ ಶುದ್ಧ ಷಷ್ಠಿಯಂದು ಪುಣ್ಯಾರಾಧನೆ ಮತ್ತು ಜಾತ್ರೆಯನ್ನು ನಡೆಸಲಾಗುತ್ತದೆ. ಶ್ರೀಗಳ ಪುಣ್ಯರಾಧನೆಯ 75ನೇ ವರ್ಷದ ಅಮೃತ ಮಹೋತ್ಸವ ಈಗಾಗಲೇ ಆರಂಭವಾಗಿದ್ದು, ಅ. 8ರಂದು ಶ್ರೀ ರಂಭಾಪುರಿ ಮತ್ತು ಶ್ರೀ ಕೇದಾರ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಧರ್ಮ ಸಮಾರಂಭ ನಡೆಯಲಿದೆ. ಅದೇ ದಿನ ಪ್ರಸ್ತುತ ಶ್ರೀ ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮಿಗಳ ಜನ್ಮ ಸುವರ್ಣ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದ್ದು, ನಾಡಿನ ವಿವಿಧ ಮಠಾಧೀಶರು, ರಾಜಕೀಯ ಗಣ್ಯರು, ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಬಾಲಸನ್ಯಾಸಿಯ ಜ್ಞಾನ ಸಂಪಾದನೆ: ಸೂಡಿಯ ಜುಕ್ತಿ ಹಿರೇಮಠದ ಪರಂಪರೆಗೆ ಕೀರ್ತಿ ಕಲಶವನ್ನಿಟ್ಟಿದ್ದು ಪ್ರಸ್ತುತ ಪಟ್ಟಾಧ್ಯಕ್ಷರಾದ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮಿಗಳು. ತಮ್ಮ 9ನೇ ವಯಸ್ಸಿನಲ್ಲಿಯೇ ಮಠದ ಅಧಿಕಾರವನ್ನು ವಹಿಸಿಕೊಂಡ ಶ್ರೀಗಳು ಬಾಲ್ಯದಿಂದಲೇ ಜ್ಞಾನ ಸಂಪಾದನೆಯಲ್ಲಿ ತೊಡಗಿಸಿಕೊಂಡಿದ್ದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕದೊಂದಿಗೆ ತತ್ವಶಾಸ್ತ್ರದಲ್ಲಿ ಎಂ.ಎ.ಪದವಿಯನ್ನು ಪ್ರಥಮ ರ್ಯಾಂಕ್ನೊಂದಿಗೆ ಪಡೆದ ಪೂಜ್ಯರು ‘ವೀರಶೈವ ಆಧ್ಯಾತ್ಮ- ಒಂದು ತಾತ್ವಿಕ ಅಧ್ಯಯನ’ ಎಂಬ ವಿಷಯದಲ್ಲಿ ಪಿಎಚ್ಡಿ ಮಹಾ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಶಿವಾಚಾರ್ಯರ ಸಮೂಹದಲ್ಲೇ ಅಪರೂಪವೆಂಬಂತೆ ಎಲ್ಲ ಅರ್ಹ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಕರ್ನಾಟಕ ವಿವಿ ಪ್ರಾಧ್ಯಾಪಕರಾಗಿ ನೇಮಕಗೊಂಡ ಶ್ರೀಗಳು ಸದ್ಯ ವಿವಿಯ ತತ್ವಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದೇಶ-ವಿದೇಶದ ಹತ್ತು ಹಲವು ವಿಶ್ವವಿದ್ಯಾಲಯಗಳ ಹಲವಾರು ಕಾರ್ಯಾಗಾರಗಳಲ್ಲಿ ಪಾಲ್ಗೊಂಡು ವಿಷಯ ಮಂಡಿಸಿದ್ದಾರೆ. ಅನೇಕ ಕೃತಿಗಳನ್ನು ಹೊರತಂದಿದ್ದಾರೆ. ‘ಶ್ರೀ ರಂಭಾಪುರಿ ಬೆಳಗು’ ಮಾಸಪತ್ರಿಕೆಯ ಸಂಪಾದಕರಾಗಿ, ಶ್ರೀಮದ್ವೀರಶೈವ ಸದ್ಭೋದನ ಸಂಸ್ಥೆಯ ಅಧ್ಯಕ್ಷರಾಗಿ ಅನೇಕ ಸಾಹಿತ್ಯ ಮತ್ತು ಸಂಶೋಧನಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. 1970ರಲ್ಲಿ ಜನಿಸಿರುವ ಪೂಜ್ಯರು 50 ವರ್ಷಗಳನ್ನು ಪೂರೈಸಿದ್ದು, ಪೂಜ್ಯರ ಜನ್ಮಸುವರ್ಣ ಮಹೋತ್ಸವದ ಅಂಗವಾಗಿ ಅ. 7 ಮತ್ತು 8ರಂದು ವಿವಿಧ ಸಾಮಾಜಿಕ, ಸಾಹಿತ್ಯಿಕ, ಮತ್ತು ಧಾರ್ವಿುಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.